ನಿನ್ನೆಯಿಂದ ಕೃಷಿ ಸಂಬಂಧಿಸಿದ ಎಲ್ಲಾ ವಾಟ್ಸಾಪ್ ಗುಂಪಿನಲ್ಲೂ ಅಡಿಕೆ ಮಾರಾಟ ಸಹಕಾರಿ ಸಂಘ ಮ್ಯಾಮ್ಕೋಸ್ ನ ಅಡಿಕೆ ಬೆಳೆಗಾರರಿಗೆ ಅಡಿಕೆ ಗುಣಮಟ್ಟ ಕಾಪಾಡಿಕೊಳ್ಳಲು ಮನವಿ ಪತ್ರದ ಸದ್ದು ಆಗುತ್ತಿದೆ. ಅದು ಮ್ಯಾಮ್ಕೋಸ್ ನದ್ದೋ ಅಥವಾ ಯಾರದ್ದೋ ಸೃಷ್ಟಿಯೋ ಗೊತ್ತಿಲ್ಲ... ಆದರೆ ಗುಟ್ಕಾ ಕಂಪನಿಯವನಿಗೆ ಗುಣಮಟ್ಟದ ಅಡಿಕೆ ಬೇಕಾ...?
ಸಾಮಾನ್ಯವಾಗಿ ಮಲೆನಾಡಿನ ಭಾಗದ ಅಡಿಕೆ ಬೆಳೆಗಾರರು ಗುಣಮಟ್ಟದ ಬಗ್ಗೆ ಯಾವತ್ತೂ ಗಮನ ಕೊಡುತ್ತಾರೆ. ತೂಕ ಕಡಿಮೆಯಾದರೂ ಪರವಾಗಿಲ್ಲ, ಕೆಂಪಡಿಕೆ ಮಾಡುವಾಗ ಹೆಚ್ಚು ಹೊತ್ತು ಬೇಯಿಸಿ ಚೆನ್ನಾಗಿ ಒಣಗಿಸಿಯೇ ಮಾರುಕಟ್ಟೆಗೆ ತರುತ್ತಿದ್ದಾರೆ. ಯಾವುದೇ ಸ್ವಾತಂತ್ರ್ಯ ಅಡಿಕೆ ಬೆಳೆಗಾರ (ಚೇಣಿ ಅಡಿಕೆ ಮಾಡುವವ ಅಲ್ಲ) ಗುಣಮಟ್ಟದ ವಿಚಾರದಲ್ಲಿ ಎಂದೂ ರಾಜಿ ಯಾಗೋಲ್ಲ.
ಸಿಕ್ಕ ಕೃತಕ ಬಣ್ಣ ಹಾಕಿ ಬೇಯಿಸಿ ರಸ್ತೆಯ ಮೇಲೆ ಹೆಂಗಾತ ಹಂಗೆ ಅಡಿಕೆ ಬೇಸಿ ಅಡಿಕೆ ಮಾರುಕಟ್ಟೆಗೆ ತರೋ ಸಂಪ್ರದಾಯ ಮಲೆನಾಡಿನಲ್ಲಿ ಇಲ್ಲ...!! ಹಾಗಾದರೆ ಗುಣಮಟ್ಟವಿಲ್ಲದ ಅಡಿಕೆ ಮಲೆನಾಡಿಗರು ತಯಾರಿಸುತ್ತಾರ...? ಎಷ್ಟು ಜನ ಗೊರಬಲು ಪಾಲಿಷರ್ ನಲ್ಲಿ ಹಾಕಿದ ಅಡಿಕೆಯನ್ನು ರಾಶಿ ಅಡಿಕೆ ಮಾದರಿಗೆ ಬೆರಸಿ ಮಾರಾಟ ಮಾಡುತ್ತಾರೆ...?
ಅಡಿಕೆ ಬೆಲೆ ಯಾಕೆ ಕುಸಿಯುತ್ತಿದೆ...? ಅಡಿಕೆ ಬೆಲೆ ಕುಸಿತಕ್ಕೆ ಬೆರಕೆ ಅಡಿಕೆ ಕಾರಣವೇ...?
ನನ್ನ ಭಯ ಏನೆಂದರೆ ವಿದೇಶದಿಂದ ಆದಿಕೃತ ಅನಧಿಕೃತ ಅಡಿಕೆ ಆಮದಾಗುತ್ತಾ ಹೋದರೆ, ಹಿಂಗೆ ಅಡಿಕೆ ತೋಟ ಮಿತಿಯಿಲ್ಲದೆ ವಿಸ್ತರಣೆ ಆಗುತ್ತಾ ಹೋದರೆ.... ನಾಕು ನಾಕು ಸತಿ ಔಷಧ ಸಿಂಪಡಣೆ ಮಾಡಿ ಕಮ್ಮಿರೇಟಿಗೆ ಅಡಿಕೆ ಮಾರಾಟ ಮಾಡಿ ವರ್ಕೌಟ್ ಆಗದಂತಾದಾರೆ ಸ್ವಾಭಾವಿಕವಾಗಿ ಅಡಿಕೆ ಯಿಂದ ಎರೆ ಗೊಬ್ಬರ ತಯಾರಿಸೋದೇ ಲಾಭದಾಯಕ ಆಗಬಹುದು.
ಮೊನ್ನೆ ಒಬ್ಬ ಅಡಿಕೆ ಬೆಳೆಗಾರರ ಬಳಿ "ಹಿಂಗೆ ಅಡಿಕೆ ಬೆಳೆ ವಿಸ್ತರಣೆ ಆಗುತ್ತಾ ಹೋದರೆ ಅಡಿಕೆ ಬೆಳೆ ಒಂದಿನ ಟೊಮ್ಯಾಟೊ ಬೆಲೆ ಒಂದೂವರೆ ರೂಪಾಯಿ ಗೆ ಕೆಜಿ ಬಂದಂತೆ ಅಡಿಕೆ ಬೆಲೆಯೂ ಕೆಜಿಗೆ ಹತ್ತು ಇಪ್ಪತ್ತು ರೂಪಾಯಿಗೆ ಬರುತ್ತದೆ" ಎಂದಾಗ ಅವರು "ಈ ಮಾತನ್ನ ನಾನು ಕಳೆದ ಹತ್ತು ವರ್ಷಗಳಿಂದ ಕೇಳುತ್ತಿದ್ದೇನೆ. ಇನ್ನೂ ಅಡಿಕೆ ಬೆಲೆ ಆ ಮಟ್ಟಿಗೆ ಕುಸಿದಿಲ್ಲ... ಮುಂದೆ ಕುಸಿಯೋದೂ ಇಲ್ಲ...!! "ಅಂತ ವಿಶ್ಲೇಷಣೆ ಮಾಡಿದರು.
ಹೌದಾ...?
ಅಡಿಕೆ ರೇಟು ಅಡಿಕೆ ಬೆಳೆ ಎಷ್ಟೇ ವಿಸ್ತರಣೆ ಆದರೂ ಇರುತ್ತದೆ ಎಂದಾದರೆ ಅಡಿಕೆ ಏನು ಅಮೃತನಾ...? ದಿನ ದಿನಕ್ಕೂ ನೇರ ಅಡಿಕೆ ತಿನ್ನುವವರು ಕಮ್ಮಿಯೇ ಆಗುತ್ತಿದ್ದಾರೆ...!, ಸ್ಟಾಂಡರ್ಡ್ ಜನಗಳು ಹಲ್ಲು ಬಾಯಿ ಹಾಳಾಗುತ್ತದೆ ಅಂತ ಅಡಿಕೆ ತಿನ್ನೋಲ್ಲ...!!
ನಾನು ಗಮನಿಸಿದಂತೆ ಈ ಹತ್ತು ಹದಿನೈದು ವರ್ಷಗಳ ಹಿಂದೆ ಎಲ್ಲಾ ಮಲೆನಾಡಿಗರ ಮನೆಯ ಟಿಪಾಯಿ ಮೇಲೂ ಒಂದು ಜೀವಂತ ಎಲೆ ಅಡಿಕೆ ತಟ್ಟೆ ಇರುತ್ತಿತ್ತು (ಜೀವಂತ ಎಂದರೆ ವೀಳ್ಯದೆಲೆ ಸಹಿತ). ಈಗ ಯಾರ ಮನೆಯಲ್ಲೂ ಎಲೆ ಅಡಿಕೆ ತಟ್ಟೆ ಇರೋಲ್ಲ. ಎಲೆ ಅಡಿಕೆ ನೇರವಾಗಿ ಹಾಕೋರು ಕಮ್ಮಿ. ಗುಟ್ಕಾ ಎಲ್ಲರೂ ಹಾಕೋಲ್ಲ...!! ಸಾಂಪ್ರದಾಯಿಕ ಅಡಿಕೆ ಯಲ್ಲಿ ಮಲೆನಾಡಿನ ಬೆಟ್ಟೆ ಅಡಿಕೆ ಪ್ರಮುಖವಾಗಿತ್ತು. ಈಗ ಅದನ್ನು ಕೇಳೋರು ಇಲ್ಲ..!!
ಗುಟ್ಕಾ ಅಮಲುಕಾರಕ ದ ಕಾರಣ ಅದು ಚಾಲ್ತಿಯಲ್ಲಿದೆ...!! ಗುಟ್ಕಾದವರಿಗೆ ದೇವ್ರಾಣೆ ಗುಣಮಟ್ಟದ ಅಡಿಕೆ ಬೇಡವೇ ಬೇಡ. ಆದರೆ ನಿನ್ನೆ ಯಾವುದೋ ಒಂದು ಸಭೆಯ ಭಾಷಣದಲ್ಲಿ ಒಬ್ಬರು ಗುಟ್ಕಾ ಕಂಪನಿಗಳು ಚೆನ್ನಗಿರಿ, ದಾವಣಗೆರೆ, ಚಿತ್ರದುರ್ಗ ಭಾಗದ ಸಾವಿರಾರು ಟನ್ ಅಡಿಕೆ ಯನ್ನು ರಿಜಿಕ್ಟ್ ಮಾಡಿದೆ ಎಂಬ ಮಾಹಿತಿಯನ್ನು ನೀಡಿದರು. ತುಮಕೂರು ಭಾಗದ ಅಡಿಕೆ ಉತ್ತಮ ಬೇಡಿಕೆ ಹೊಂದಿದೆ ಎಂದೂ ಅವರು ಈ ಸಂಧರ್ಭದಲ್ಲಿ ಹೇಳಿದರು.
ಆದರೆ ಗುಟ್ಕಾ ದವನಿಗೆ ಬೇಕಾಗೋದು ಬಣ್ಣ ರುಚಿ ಯಾವುದೂ ಅಲ್ಲ... ಅಡಿಕೆಯ ಬಾಳಿಕೆ ಮತ್ತು ಗಟ್ಟಿ ತನ. ಅಕಸ್ಮಾತ್ತಾಗಿ ನೆಲಗಡಲೆ ನುಚ್ಚಿಗೆ ಈ durability ಇದ್ದಿದ್ದರೆ ನೆಲಗಡಲೆ ನುಚ್ಚಿನಲ್ಲೇ ಗುಟ್ಕಾ ತಯಾರಿಸಿ ಮಾರಾಟ ಮಾಡುತ್ತಿದ್ದರು.
ಈಗ ವಿದೇಶದಿಂದ ಆಮದು ಆಗುವ ಕಾಡು ಅಡಿಕೆಯಲ್ಲಿ ಎಂಥ ಮಣ್ಣಂಗಟ್ಟಿ ಗುಣಮಟ್ಟ ಇರುತ್ತದೆ...? ಗುಟ್ಕಾ ತಯಾರಿಸೋರಿಗೆ ಅವರ ಉಪ ಉತ್ಪನ್ನ ಅಮಲುಕಾರಕ ಉತ್ಪನ್ನ ಅಡಿಕೆ ಪುಡಿಯೊಂದಿಗೆ ಚೆನ್ನಾಗಿ ಬೆರೆಯಬೇಕು ಮತ್ತು ಅಡಿಕೆ ಪುಡಿ ಬಹಳ ದಿನಗಳ ವರೆಗೂ ಹಾಳಾಗಬಾರದು ಅಷ್ಟೇ.. !!!
ಗುಟ್ಕಾವನ್ನು ಒಂದಷ್ಟು ಜನ ಬಡ ಕಾರ್ಮಿಕ ವರ್ಗಗಳು, ಲಾರಿ ಬಸ್ ಇತರ ವಾಹನದ ಚಾಲಕರು, ಸ್ವಲ್ಪ ಪ್ರಮಾಣದ ಯುವ ಜನರು (ಅದರಲ್ಲೂ ಸಾಮಾನ್ಯ ವರ್ಗದ) ಗುಟ್ಕಾ ಹಾಕುತ್ತಾರೆ. ಆದರೆ ಅಮಲಿಗೆ ಈಗ ಸಾವಿರ ಮಾರ್ಗವಿದೆ. ದಿನ ದಿನಕ್ಕೂ ಗುಟ್ಕಾ ಬಳಸುವವರ ಸಂಖ್ಯೆ ಕಡಿಮೆ ಇದೆ. ಜಾಹೀರಾತಿನಲ್ಲಿ ಶಾರುಖ್ ಖಾನ್ ಅಜಯ್ ದೇವಗನ್ ಗುಟ್ಕಾ ಹಾಕುತ್ತಾರೆ...! ಆದರೆ ಅಂತಹ ಸೆಲೆಬ್ರಿಟಿಗಳು ನಾಕು ರೂಪಾಯಿ ಗುಟ್ಕಾ ತಿಂತಾರ..? ಇದೆಲ್ಲಾ ಎಷ್ಟು ದಿನ ನಡೀತದೆ...?
ಅಡಿಕೆ ಮಾರಾಟ ಸಂಘಗಳು ಅಡಿಕೆ ಯ ಪರ್ಯಾಯ ಬಳಕೆಯ ಬಗ್ಗೆ ಗಮನ ಕೊಡಬೇಕು. ಸಾಂಪ್ರದಾಯಿಕ ಬೆಳೆಗಾರರ ಅಡಿಕೆಯ ಸಂಸ್ಕರಿತ ಅಡಿಕೆಯ ಉಪ ಉತ್ಪನ್ನ ತಯಾರಿಸಿ ಮಾರಾಟ ಮಾಡಲು ಯತ್ನಿಸಬೇಕು.
ಅಡಿಕೆ ಯಾವತ್ತು ಗುಟ್ಕಾ ನೆಂಟಸ್ಥನದಿಂದ ಹೊರಬರುತ್ತದೋ ಆಗ ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಉಳಿತಾನೆ. ಅಡಿಕೆ ಬೆಲೆ ಒಂದೇ ಬಾರಿಗೆ ಖಂಡಿತವಾಗಿಯೂ ಕುಸಿದು ಅಡಿಕೆಯಿಂದ ಸಾವಯವ ಗೊಬ್ಬರ ತಯಾರಿಸುವ ಪರಿಸ್ಥಿತಿ ಗೆ ಇನ್ನೊಂದು ಐದು ವರ್ಷಗಳಲ್ಲಿ ಖಂಡಿತವಾಗಿಯೂ ಬರುತ್ತದೆ... ಅಡಿಕೆ ಯೊಂದರ ಉತ್ಪತ್ತಿ ನಂಬಿರುವ ಪ್ರತಿ ಅಡಿಕೆ ಬೆಳೆಗಾರರೂ ಅಡಿಕೆಯಿಂದ ಒಂದು ಹೆಜ್ಜೆ ಹೊರಗಿಟ್ಟುಕೊಳ್ಳುವುದು ಜಾಣತನ. ಅಡಿಕೆ ಬೇಡಿಕೆ ಕುಸಿದರೆ ಯಾವ ಮಾಮ್ಕೋಸೂ ಯಾವುದೇ ಕ್ಯಾಮ್ಕೋಸು ಎಲೆಕೋಸೂ ಏನೂ ಮಾಡಲು ಸಾಧ್ಯವಿಲ್ಲ...!!
ಅಡಿಕೆ ಬೆಲೆ ಅಥವಾ ಬೇಡಿಕೆ ಕುಸಿತದ ದಿನಗಳು ಸನ್ನಿಹಿತದಲ್ಲಿದೆ... ತ್ವಾಟ ಪೇಟೆ ಬಿಟ್ಟು ಹೊರ ಹೋಗದ ಅನೇಕ ಅಡಿಕೆ ಬೆಳೆಗಾರರು ಊಟದ ಮನೆಯಲ್ಲಿ ಉಂಡು ಅಡಿಕೆ ಬೆಲೆ ಯಾವತ್ತೂ ಕುಸಿಯೋಲ್ಲ ಅಂತ ಹೇಳ್ತಾ ಮೈಮರೀತಾರೆ..!! ಆದರೆ ನಮ್ಮ ಪಕ್ಕದೂರಿನ ನರ್ಸರಿಯಲ್ಲಿ ವರ್ಷ ವರ್ಷವೂ ನಾಲ್ಕು ಐದು ಲಕ್ಷ ಅಡಿಕೆ ಸಸಿ ಮಾರಾಟವಾಗುತ್ತದೆ ಎಂದು ಮರೀತಾರೆ.
ಔಷಧ ಸಿಂಪಡಣೆ ಮಾಡದ, ಮಂಗನ ಕಾಟ ಇಲ್ಲದ, ಕೂಲಿ ಕಾರ್ಮಿಕರ ಸಮಸ್ಯೆ ಕಡಿಮೆ ಇರುವ, ಉತ್ತಮ ಇಳುವರಿಯ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ನಲವತ್ತೈದು ಐವತ್ತು ಸಾವಿರ ರೂಪಾಯಿ ಅಡಿಕೆ ಬೆಲೆ ಬಂಪರ್ ಬೆಲೆ... ಈ ಬೆಲೆ ಅವರ ಭಾಗದಲ್ಲಿ ಇಪ್ಪತ್ತು ಸಾವಿರಕ್ಕೆ ಕುಸಿದರೂ ಅತ್ಯುತ್ತಮ ಬೆಲೆಯೇ...!! ಆದರೆ ಮಲೆನಾಡು ಕರಾವಳಿಯ ಅಡಿಕೆ ಗೆ ಇಪ್ಪತ್ತು ಸಾವಿರ ಬೆಲೆ ಬಂದರೆ ಮುಂದಿನ ಭವಿಷ್ಯ ಏನು...? ಅಡಿಕೆಗೆ ಗುಣಮಟ್ಟವನ್ನು ಖಂಡಿತವಾಗಿಯೂ ಗುಟ್ಕಾ ಕಂಪನಿಗಳು ನಿರೀಕ್ಷೆ ಮಾಡೋಲ್ಲ. ಅಡಿಕೆಗೆ ಗಟ್ಟಿತನವೊಂದೇ ಅಡಿಕೆಯ ಮಾನದಂಡ. ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆಗೆ ಪರ್ಯಾಯ ಹುಡುಕಿಕೊಳ್ಳಲು ಈಗಿನಿಂದಲೇ ತಯಾರಾಗಿ ಎಂದು ಕೋರುತ್ತಿದ್ದೇನೆ.
-ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ