ಅಧ್ಯಾತ್ಮ ರಾಮಾಯಣ-32: ಶ್ರೀರಾಮಪಟ್ಟಾಭಿಷೇಕ- ರಾಮರಾಜ್ಯಕ್ಕೆ ಶುಭಮುಹೂರ್ತ, ರಾಮಕಥೆಗೆ ಶುಭಮಂಗಳ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 



ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಶ್ರೀರಾಮಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳು ವಾನರ ಪ್ರಮುಖರೂ ಸೇರಿದಂತೆ ಭರತನ ನೇತೃತ್ವದಲ್ಲಿ, ಶತ್ರುಘ್ನನ ಕಾರ್ಯದರ್ಶಿತ್ವದಲ್ಲಿ ನಡೆದವು. ವಸಿಷ್ಠರ ಮಾರ್ಗದರ್ಶನವು ಸದಾ ಸಿಗುತ್ತಿತ್ತು. ಅವರೇ ಶ್ರೀರಾಮಚಂದ್ರನನ್ನು ಸೀತೆಯೊಂದಿಗೆ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಅವರೊಂದಿಗೆ ವಾಮದೇವ, ಜಾಬಾಲಿ, ಗೌತಮ, ವಾಲ್ಮೀಕಿ ಮೊದಲಾದ ಮಹರ್ಷಿಗಳು ಸೇರಿ ಸಂತೋಷದಿಂದ ತುಳಸಿ ಮತ್ತು ದರ್ಭೆಯ ಸಹಿತ ಪುಣ್ಯಕರವಾದ ಸುಗಂಧಯುಕ್ತ ಜಲ-ತೀರ್ಥಗಳಿಂದ ಅಭಿಷೇಕ ಮಾಡಿದರು. ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ದೇವತೆಗಳು, ಋಷಿ- ಮುನಿಗಳು, ಲೋಕಪಾಲರು, ವಿಪ್ರಶ್ರೇಷ್ಠರು ಪೌರಪ್ರಮುಖರು, ಜನಪದರು ಸೇರಿದಂತೆ ಎಲ್ಲರೂ ಬಂದಿದ್ದರು, ಕಣ್ದಣಿಯೆ ಕಂಡಿದ್ದರು, ಹೊಟ್ಟೆತುಂಬ ಉಂಡಿದ್ದರು, ಮನದಣಿಯೆ ನಲಿದಿದ್ದರು. ವೈಕುಂಠಪತಿಗೆ ಭೂಲೋಕದಲ್ಲಿ ನಡೆದ ರಾಜ್ಯಪಟ್ಟಾಭಿಷೇಕವು ಹಿಂದೆಂದೂ ನಡೆದಿರದ- ಕೇಳಿರದ -ನೋಡಿರದ-ಮಾಡಿರದ ಮತ್ತು ಮುಂದೆಂದೂ ನಡೆಯಲಿರದ- ಕೇಳಲಿರದ- ನೋಡಲಿರದ- ಮಾಡಲಿರದ ರೀತಿಯಲ್ಲಿ ನಡೆಯಿತು! ಉಮಾ- ಮಹೇಶ್ವರರೇ ಬಂದು ಭಕ್ತಿಭಾವದಿಂದ ಕೂಡಿ ಸಮಸ್ತ ದೇವಗಣಗಳಿಂದ ಒಡಗೂಡಿ ಸ್ತುತಿಸಿದರು! ಇದಕ್ಕಿಂತ ಮಿಗಿಲಾದುದೇನು? 



ಶ್ರೀರಾಮನು ಪಟ್ಟಾಭಿಷಿಕ್ತನಾದಾಗ ಭೂಮಿಯು ಧನ-ಧಾನ್ಯ, ಸಸ್ಯಗಳಿಂದ ಸಮೃದ್ಧವಾಯಿತು. ಎಲ್ಲೆಡೆ ಸುಜಲ- ಸುಫಲ! ಈ ಸಂದರ್ಭದಲ್ಲಿ ಶ್ರೀರಾಮನು ಎಲ್ಲರಿಗೂ ಉಡುಗೊರೆಗಳನ್ನು ನೀಡಿದನು. ಸೀತೆಗೂ ಹಾರವೊಂದನ್ನು ಪ್ರೀತಿಯಿಂದ ನೀಡಿದನು. ಸೀತೆಗೆ ಅದನ್ನೇನು ಮಾಡುವುದು? ಯಾರಿಗೆ ಕೊಡುವುದು? ಎಂದು ತಿಳಿಯದೆ ರಾಮನತ್ತ ದೃಷ್ಟಿ ಹರಿಸಿದಾಗ ರಾಮನು "ಎಲೈ ಜನಕನಂದಿನಿ! ನೀನು ಯಾರ ವಿಷಯದಲ್ಲಿ ಪ್ರಸನ್ನಳಾಗಿರುವೆಯೋ ಅವನಿಗೆ ಈ ಹಾರವನ್ನು ಕೊಡು" ಎಂದನು. ಸೀತಾದೇವಿಯು ಆ ಹಾರವನ್ನು ಹನುಮನಿಗಿತ್ತಳು. ಹನುಮನು ಗೌರವದಿಂದ ಅದನ್ನು ಸ್ವೀಕರಿಸಿದನು. ಶ್ರೀರಾಮನು ಹನುಮನಿಗೆ; ಅವನು ರಾಮನಲ್ಲಿ ಕೇಳಿದ "ನಿನ್ನ ನಾಮವು ಭೂಮಂಡಲದಲ್ಲಿ ಇರುವ ತನಕ ನನ್ನ ಶರೀರವು ಇರಲಿ"- ಎನ್ನುವ ವರವನ್ನು ಚಿರಂಜೀವಿಯಾಗಿರು ಎಂದು ಹರಸುವ ಮೂಲಕ ರಾಮನು ಕೊಟ್ಟನು. ಸೀತೆಯು ಹನುಮನಿಗೆ-" ನೀನು ಎಲ್ಲೇ ಇದ್ದರೂ ಅಲ್ಲಿ ಸಕಲಸುಖ- ಭೋಗಗಳು ನಿನ್ನೊಡನೆ ಇರಲಿ" ಎಂದು ಹರಸಿದಳು. ಇಬ್ಬರಿಗೂ ನಮಸ್ಕರಿಸಿದ ಹನುಮನು ಅವರನ್ನು ಬೀಳ್ಕೊಟ್ಟು ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳಿದನು.


ಪಟ್ಟಾಭಿಷೇಕ್ಕೆ ಬಂದವರೆಲ್ಲರೂ ತಮ್ಮ ತಮ್ಮ ರಾಜ್ಯಗಳಿಗೆ ಸಂತಸದಿಂದ ತೆರಳಿದರು. ಶ್ರೀರಾಮನು ಲಕ್ಷ್ಮಣನನ್ನು ಅವನು ಬಯಸದಿದ್ದರೂ ಯುವರಾಜನನ್ನಾಗಿ ಅಭಿಷಿಕ್ತಗೊಳಿಸಿದನು. ಪ್ರಜಾವತ್ಸಲನಾದ ಶ್ರೀರಾಮನ ರಾಜ್ಯಭಾರದ ಸಮಯದಲ್ಲಿ ಎಲ್ಲೆಲ್ಲೂ ಸುಖ- ಸಮೃದ್ಧಿ- ಶಾಂತಿಗಳು ನೆಲೆಸಿದ್ದವು. ಸರ್ವಲಕ್ಷಣ ಸಂಪನ್ನನೂ, ಸರ್ವಧರ್ಮಪರಾಯಣನೂ ಆದ ಶ್ರೀರಾಮನು ಹತ್ತಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದನು.


ಅಧ್ಯಾತ್ಮರಾಮಾಯಣವನ್ನು ಓದುವವರಿಗೆ- ಕೇಳುವವರಿಗೆ- ಬರೆಯುವವರಿಗೆ--

●ಸರ್ವಾರ್ಥಗಳು ನೆರವೇರುವವು 

●ಪಾಪರಹಿತರಾಗುವರು

●ಸಂತಾನಭಾಗ್ಯ ಉಂಟಾಗುವುದು

●ಸುಖ-ಶಾಂತಿ- ನೆಮ್ಮದಿಗಳು ಲಭಿಸುವುವು


ಇದನ್ನು ಕೇಳುವುದರಿಂದ ಅಥವಾ ಓದುವುದರಿಂದ ಎಲ್ಲ ದೇವತೆಗಳು,ಗ್ರಹಗಳು,ಮಹರ್ಷಿಗಳು ಪ್ರಸನ್ನರಾಗುವರು ಮತ್ತು ಪಿತೃಗಳು ತೃಪ್ತರಾಗುವರು.


ಅಧ್ಯಾತ್ಮರಾಮಾಯಣಕ್ಕೆ ಮಂಗಳ

ರಾಮಾರ್ಪಣಮಸ್ತು


===========

ಅಧ್ಯಾತ್ಮರಾಮಾಯಣದ ಮೊದಲ ಆರು ಕಾಂಡಗಳನ್ನು ಸಂಗ್ರಹಿಸಿ, ಸಂಕ್ಷೇಪಿಸಿ, ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಬರೆಯಬೇಕೆಂದಿದ್ದ ಬಯಕೆಯು ಗುರು- ರಾಮಾನುಗ್ರಹಗಳಿಂದ ಈಡೇರಿತು. ಅಕ್ಷರ ತಪ್ಪುಗಳಿದ್ದಿರಬಹುದು. ಅಕ್ಷರ ತಪ್ಪುಗಳಿದ್ದರೆ ಪದ- ವಾಕ್ಯದೋಷಗಳೂ ಇರುತ್ತವೆ. ಅವೇನಿದ್ದರೂ ಕ್ಷಮಿಸಿ. ಓದಿದ, ಓದಿ ಕೇಳಿಸಿದ ಮತ್ತು ಕೇಳಿ ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳು.


ವಿದ್ಯಾರ್ಥಿವಾಹಿನಿಯ ಸರ್ವಸದಸ್ಯರಿಗೆ ಧನ್ಯವಾದಗಳು.


ಉಂಡೆಮನೆ ವಿಶ್ವೇಶ್ವರ ಭಟ್ಟ, 

ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top