ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಸುಂದರಕಾಂಡ
"ಕೃತಾರ್ಥೋಹಂ ಕೃತಾರ್ಥೋಹಂ ಪುನಃ ಪಶ್ಯಾಮಿ ರಾಘವಮ್।
ಪ್ರಾಣಪ್ರಯಾಣಸಮಯೇ ಯಸ್ಯ ನಾಮ ಸಕೃತ್ ಸ್ಮರನ್ ॥
ಪ್ರಾಣ-ಪ್ರಯಾಣಗಳ ಸಮಯದಲ್ಲಿ ಯಾರ ನಾಮವನ್ನು ಸ್ಮರಿಸಿದಾಗ ನಾವು ಪರಂಧಾಮವನ್ನು ಸೇರುವೆವೋ ಅಂತಹ ರಾಮನನ್ನು ನಾನೀಗ ಹೋಗುತ್ತಿರುವ ರಾಮಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಕಾಣುವೆನು" ಎಂದು ಉದ್ಘೋಷಿಸಿ ಹನುಮನು ರಾಮಬಾಣದಂತೆ ವೇಗವಾಗಿ ಆಗಸಕ್ಕೆ ಹಾರಿದನು!
ಆಕಾಶದಲ್ಲಿ ಅತ್ಯಂತ ವೇಗದಿಂದ ಹಾರುತ್ತಾ ಹೋಗುತ್ತಿರುವಾಗ ಹನುಮನ ಬಲವನ್ನು ಪರೀಕ್ಷಿಸಲು ದೇವತೆಗಳಿಂದ ಪ್ರಚೋದಿತಳಾದ ಸುರಸೆಯು ದಾರಿಗೆ ಅಡ್ಡವಾಗಿ ನಿಂತು ಅಡ್ಡಿಯಾದಳು. "ಹಸಿದಿರುವ ನನ್ನ ಬಾಯಿಯೊಳಗೆ ಪ್ರವೇಶಿಸಿ ನನ್ನ ಹಸಿವನ್ನು ನೀಗಿಸು"- ಎಂದು ಸುರಸೆಯು ಹನುಮನಲ್ಲಿ ಹೇಳಿದಳು. ಆಗ ಹನುಮನು "ರಾಮಕಾರ್ಯಕ್ಕಾಗಿ ಹೋಗುತ್ತಿದ್ದೇನೆ, ಅಡ್ಡಿಪಡಿಸದಿರು" ಎಂದನು.
ಸುರಸೆಯು ಒಪ್ಪದಿದ್ದಾಗ ಹನುಮನು ತನ್ನ ದೇಹವನ್ನು ಐದು ಯೋಜನಗಳಷ್ಟು ಹಿಗ್ಗಿಸಿದನು. ಕಾಮರೂಪಿ ಸುರಸೆಯು ತನ್ನ ಬಾಯಿಯನ್ನು ಹತ್ತು ಯೋಜನಗಳಷ್ಟು ಹಿಗ್ಗಿಸಿದಳು. ಹೀಗೆ ಇಪ್ಪತ್ತು- ಮೂವತ್ತು, ನಲುವತ್ತು- ಅರುವತ್ತು ಯೋಜನಗಳಂತೆ ಹನುಮ- ಸುರಸೆಯರು ತಮ್ಮ ದೇಹ- ಬಾಯಿಗಳನ್ನು ವಿಸ್ತರಿಸುತ್ತಾ ಹೋದರು. ಬುದ್ಧಿವಂತ, ಜಾಣ ಹನುಮನು ಒಮ್ಮೆಲೇ ಹೆಬ್ಬೆರಳಿನ ಗಾತ್ರಕ್ಕೆ ತನ್ನ ದೇಹವನ್ನು ಕುಗ್ಗಿಸಿ ಸುರಸೆಯು ಕಣ್ಣೆವೆಯಿಕ್ಕುವುದರೊಳಗೆ ಅವಳ ಬಾಯಿಯೊಳಗೆ ಹೋಗಿ ಹೊರಬಂದನು. ಸುರಸೆಯು ಹನುಮನ ಜಾಣ್ಮೆಯನ್ನು ಮೆಚ್ಚಿ, ಶುಭವನ್ನು ಕೋರಿ, ರಾಮಕಾರ್ಯದ ಯಶಸ್ಸಿಗಾಗಿ ಅವನನ್ನು ಬೀಳ್ಕೊಟ್ಟಳು.
ಹನುಮನು ಪ್ರಯಾಣದಿಂದ ಬಳಲಿರುವನೆಂದು ಬಗೆದ ಸಮುದ್ರರಾಜನು ಮೈನಾಕಪರ್ವತಕ್ಕೆ ಸಾಗರದ ತಳದಿಂದ ಎದ್ದು ನಿಂತು ಹನುಮನಿಗೆ ವಿಶ್ರಾಂತಿಯ ತಾಣವನ್ನು ಒದಗಿಸಲು ಹೇಳಿದ. ಮೈನಾಕವು ಸಮುದ್ರರಾಜನ ಆಜ್ಞೆಯನ್ನು ಪಾಲಿಸಿ, ಹನುಮನಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳಲು ವಿನಂತಿಸಿತು. ಆಗ ಹನುಮನು ರಾಮಕಾರ್ಯವನ್ನು ಪೂರೈಸುವ ತನಕ ನನಗೆ ಆಹಾರ- ವಿಶ್ರಾಂತಿಗಳು ಬೇಡವೆನ್ನುತ್ತಾ ಮೈನಾಕವನ್ನು ಸ್ಪರ್ಶಿಸಿ, ಮನ್ನಿಸಿ ಮುನ್ನುಗ್ಗಿದನು.ಸ್ವಲ್ಪ ದೂರ ಮುಂದಕ್ಕೆ ಹೋಗುವಾಗ ಸಮುದ್ರದಲ್ಲಿದ್ದ ಛಾಯಾಭಕ್ಷಕಿಯಾದ (ಪ್ರಾಣಿಗಳ ನೆರಳನ್ನೆಳೆಯುವ ಮೂಲಕ ಪ್ರಾಣಿಗಳನ್ನು ಸೆಳೆದು ತಿನ್ನುವ ರಾಕ್ಷಸಿ) ಸಿಂಹಿಕೆಯು ಹನುಮನನ್ನು ಸೆಳೆಯಲಾರಂಭಿಸಿದಳು. ಕೂಡಲೇ ಹನುಮನು ನೀರಿಗೆ ಧುಮುಕಿ ತನ್ನ ಕಾಲುಗಳಿಂದ ಆಕೆಯನ್ನು ಒದೆದು ಕೊಂದು, ಮೇಲಕ್ಕೆ ಚಿಮ್ಮಿ, ಮುಂದಕ್ಕೆ ಹಾರಿದನು- ಸಾಗಿದನು. ಹೀಗೆ ಸಾಗರದ ಮೇಲಿನಿಂದ ಆಗಸದಲ್ಲಿ ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಾ ದಕ್ಷಿಣ ತೀರವನ್ನು ತಲುಪಿದನು.
ತ್ರಿಕೂಟ ಪರ್ವತದಲ್ಲಿರುವ ಭೂಲೋಕದ ನಾಕದಂತಿರುವ ಲಂಕೆಯನ್ನು ನೋಡಿದ. ಅದರೊಳಗೆ ಪ್ರವೇಶಿಸುವ ಬಗೆಯ ಬಗ್ಗೆ ಚಿಂತಿಸಿದ. ಕತ್ತಲಾಗುತ್ತಿದ್ದಂತೆಯೇ ಸೂಕ್ಷ್ಮರೂಪದಿಂದ ಹನುಮನು ಲಂಕೆಯ ಮಹಾದ್ವಾರದತ್ತ ಬಂದನು. ಅಲ್ಲಿ ಲಂಕಾಧಿದೇವತೆಯು ನಿಂತಿದ್ದಳು. ಕಪಿವೇಷದ ಹನುಮನನ್ನು ಗದರಿಸಿ ಕಾಲಿನಿಂದ ಒದ್ದುಬಿಟ್ಟಳು. ಹನುಮನು ಸ್ತ್ರೀಯೆಂಬ ಕನಿಕರದೊಂದಿಗೆ ತನ್ನ ಎಡಗೈಮುಷ್ಟಿಯಿಂದ ಲಘುವಾಗಿ ಗುದ್ದಿದನು. ಅಷ್ಟಕ್ಕೇ ಅವಳು ನೆತ್ತರನ್ನು ಕಾರುತ್ತಾ ನೆಲಕ್ಕೆ ಬಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತು ಹನುಮನಲ್ಲಿ-" ಎಲೈ ಕಪಿಯೇ,ಈ ಹಿಂದೆ ಬ್ರಹ್ಮದೇವನು ನನ್ನಲ್ಲಿ ರಾಮಕಾರ್ಯಕ್ಕಾಗಿ ಬರುವ ವಾನರನಿಂದ ನೀನು ಯಾವಾಗ ಸೋಲಲ್ಪಡುತ್ತೀಯೋ ಆಗಲೇ ರಾವಣನ ನಾಶವಾಗುವುದು ಎಂದು ಹೇಳಿದ್ದನು. ನೀನು ಪಾಪರಹಿತನು. ನನ್ನನ್ನು ಗೆಲ್ಲುವ ಮೂಲಕ ಲಂಕೆಯನ್ನೇ ಗೆದ್ದಿರುವೆ. ಲಂಕೆಯನ್ನು ಪ್ರವೇಶಿಸು. ರಾವಣನ ಅಂತಃಪುರದ ನಡುವೆ ಇರುವ ಕ್ರೀಡಾವನದಲ್ಲಿ ಸುಂದರವಾದ ಅಶೋಕಾವಾಟಿಕೆಯಿದೆ. ಅದರಲ್ಲಿರುವ ಶಿಂಶಪಾ ವೃಕ್ಷದಡಿಯಲ್ಲಿ ರಾಮಸತಿ ಸೀತೆಯು ಇದ್ದಾಳೆ. ಅವಳ ಕಾವಲಿಗೆ ಭಯಂಕರರಾದ ರಾಕ್ಷಸಿಯರು ಇದ್ದಾರೆ. ಆಕೆಯನ್ನು ಕಂಡು ಕೂಡಲೇ ಹೊರಟು ನೀನು ರಾಮನಿಗೆ ತಿಳಿಸು.ರಾಮನ ಬಂಟನನ್ನು ಕಂಡು ನಾನು ಧನ್ಯಳಾದೆ.ನನ್ನ ಹೃದಯದಲ್ಲಿ ಶ್ರೀರಾಮನು ಸದಾ ನೆಲೆಸಿರಲಿ " ಎಂದು ಲಂಕಾಧಿದೇವತೆಯು ಹೇಳಿ ಹನುಮನಿಗೆ ಶುಭಕೋರಿ ಒಳಗೆ ಬಿಟ್ಟಳು! ರಾವಣನ ಅವನತಿಯು ಆರಂಭವಾಯಿತು.
ಲಂಕೆಯನ್ನು ಹೊಕ್ಕ ಹನುಮನು ಸೂಕ್ಷ್ಮರೂಪವನ್ನು ಧರಿಸಿ ನಗರದೆಲ್ಲೆಡೆ ಸಂಚರಿಸಿ ರಾಜಭವನವನ್ನು ಹೊಕ್ಕನು. ಅಲ್ಲಿ ಸೀತೆಯು ಕಾಣದಿರಲು, ಲಂಕಾಧಿದೇವತೆಯ ಮಾತು ನೆನಪಿಗೆ ಬಂದು ಅಶೋಕೆಗೆ ಹೋದನು. ಅದರಲ್ಲಿರುವ ಶಿಂಶಪಾ ವೃಕ್ಷದಡಿಯಲ್ಲಿ ಭೂಲೋಕದ ದೇವತೆಯಂತಿರುವ ಸೀತೆಯನ್ನು ರಕ್ಕಸಿಯರ ಮಧ್ಯೆ ಕಂಡನು. ಆಕೆಯ ತಲೆಗೂದಲು ಜಡೆಗಟ್ಟಿತ್ತು. ಮಲಿನ ಬಟ್ಟೆಯನ್ನುಟ್ಟು ದೀನಳಾಗಿ ರಾಮ ರಾಮಾ ಎನ್ನುತ್ತ ರೋದಿಸುತ್ತಿದ್ದಳು. ಆಕೆಯಿದ್ದ ಮರವನ್ನೇರಿದ ಹನುಮನು ರೆಂಬೆಗಳೆಡೆಯಿಂದ ಸೀತೆಯನ್ನು ಕಂಡು ಧನ್ಯನಾದನು.
ಮುಂದುವರಿಯುವುದು....
- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ
ಅಧ್ಯಾತ್ಮ ರಾಮಾಯಣ-21: ಜಾನಕಿಗೆ ರಾವಣನ ಬೆದರಿಕೆ; ಹನುಮಂತನಿಂದ ರಾಮಕಥೆ ಗಾಯನ
ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
ಸೀತೆಗೆ ಹೇಗೆ ರಾಮನು ಬಂದು ತನ್ನನ್ನು ಈ ರಾವಣನ ಬಂಧನದಿಂದ ಆದಷ್ಟು ಬೇಗನೆ ಬಿಡುಗಡೆಗೊಳಿಸಲಿ ಎನ್ನುವ ತೀವ್ರವಾದ ಬಯಕೆಯಿತ್ತೋ; ರಾವಣನಿಗೂ ರಾಮಾಗಮನದ ತೀವ್ರವಾದ ಬಯಕೆಯಿತ್ತು. ಸೀತೆಗೂ ಬಿಡುಗಡೆಯ ಬಯಕೆ ರಾವಣನಿಗೂ ಬಿಡುಗಡೆಯ ಬಯಕೆ! ಸೀತೆಗೆ ರಾವಣನಿಂದ ರಾಮನತ್ತವಾದರೆ, ರಾವಣನಿಗೆ ಭೂಲೋಕದಿಂದ ವೈಕುಂಠದತ್ತ-ವೈಕುಂಠಪತಿಯತ್ತ! ಇಬ್ಬರಿಗೂ ರಾಮ ಬೇಕು, ಬೇಗ ಬೇಕು!
ರಾಮನ ಆಗಮನದ ಕುರಿತು, ಕಾಮರೂಪಿಯಾದ ವಾನರನ ಬರುವಿಕೆಯ ಕುರಿತ ಕನಸೂ ಹಿಂದಿನ ಇರುಳು ರಾವಣನಿಗೆ ಬಿದ್ದಿತ್ತು. ಆ ನೆನಪಿನಲ್ಲಿ ಆದಷ್ಟು ಬೇಗನೆ ಸೀತೆಯನ್ನು ಕಂಡು, ಆಕೆಯನ್ನು ಬೆದರಿಸಬೇಕು- ಹೆದರಿಸಬೇಕು. ಅವಳು ಅದನ್ನು ತನ್ನ ಬಳಿಗೆ ಬಂದ ಕಪಿಗೆ ಹೇಳಬೇಕು. ಕಪಿಯು ಅದನ್ನು ಶೀಘ್ರಾತಿಶೀಘ್ರವಾಗಿ ರಾಮನಿಗೆ ಹೇಳಬೇಕು. ರಾಮನು ಇಲ್ಲಿಗೆ ಬರಬೇಕು... ಈ ಯೋಚನೆಯೊಂದಿಗೆ ಸೀತೆಯ ಬಳಿಗೆ ಮಂಡೋದರಿಯೊಂದಿಗೆ ಧಾವಿಸಿದನು. ತನ್ನನ್ನು ವರಿಸಿದರೆ ಸೀತೆಗೆ ಆಗುವ ಲಾಭವನ್ನು ತೋರಿಸಿದನು.ಒಲಿಯುವಂತೆ ಒತ್ತಾಯಿಸಿದನು. ರಾಮನೊಂದಿಗೆ ಹೋಗುವ ಇಚ್ಛೆಯಿದ್ದರೆ,ಅದುವೇ ಅವಳ ಅಂತಿಮ ನಿರ್ಣಯವಾಗಿದ್ದರೆ, ಅವಳ ಹಾಗೂ ರಾಮನ ಪ್ರಾಣಗಳನ್ನು ತಾನು ಹೀರುವುದಾಗಿ ಹೇಳುತ್ತಾ ಇನ್ನಿಲ್ಲದಂತೆ ಬೆದರಿಸಿ- ಹೆದರಿಸಿದನು. ಅದಕ್ಕೆ ಪ್ರತಿಯಾಗಿ ಸೀತೆಯು-" ನನ್ನ ತಂಟೆಗೆ ನೀನು ಬಂದರೆ ನಿನ್ನ ಹಾಗೂ ನಿನ್ನವರೆಲ್ಲರನ್ನೂ ರಾಮನು ಕೊಲ್ಲಲಿರುವನು"-ಎಂದು ರಾವಣನಿಗೆ ಕಠೋರವಾಗಿ ಹೇಳಿದಳು.
ಈ ಸಂದರ್ಭದಲ್ಲಿ ಒಂದು ಹುಲ್ಲುಕಡ್ಡಿಯನ್ನೇ ರಾವಣನೆಂದು ಭಾವಿಸಿ ಅವನನ್ನು ಕಣ್ಣೆತ್ತಿಯೂ ನೋಡದೆ ಅವಳು ತನ್ನನ್ನು ಧಿಕ್ಕರಿಸಿದುದನ್ನೂ, ಅವಳಿತ್ತ ಬೆದರಿಕೆಯನ್ನೂ ಕಂಡು ರಾವಣನ ಪಿತ್ತ ನೆತ್ತಿಗೇರಿತು! ಸೀತೆಯನ್ನು ಕೊಲ್ಲುವ ಉದ್ದೇಶದಿಂದ ಖಡ್ಗವನ್ನು ಸೆಳೆದು ಅವಳತ್ತ ಮುನ್ನುಗ್ಗಿದನು. ಆಗ ಮಂಡೋದರಿಯು ಅವನನ್ನು ತಡೆದು- ಸ್ವಾಮಿ; ಮಾನವಳೂ, ದೀನಳೂ, ದುಃಖಿತಳೂ, ಬಳಲಿದವಳೂ, ಕ್ಷೀಣಳೂ ಆದ ಈಕೆಯನ್ನು ಬಿಟ್ಟು ಬಿಡಿರಿ. ಮನುಷ್ಯೇತರರಾದ ಅವೆಷ್ಟೋ ಮಂದಿ ಸುಂದರಿಯರು ನಿನ್ನನ್ನು ಬಯಸುತ್ತಿರುವರು" ಎಂದಳು. ರಾವಣನು ಮುಂದಿಟ್ಟ ಹಜ್ಜೆಯನ್ನು ಹಿಂದಿಟ್ಟು, ರಾಕ್ಷಸಿಯರಿಗೆ ಅವಳನ್ನು ಬೆದರಿಸಿ, ತನ್ನನ್ನು ಒಪ್ಪಿಸುವಂತೆ ಮಾಡಲು ಆದೇಶಿ, ತನ್ನ ಅಂತಃಪುರಕ್ಕೆ ಹೋದನು.
ರಾವಣನ ಆಜ್ಞೆಯನ್ನು ರಾಕ್ಷಸಿಯರು ಪಾಲಿಸತೊಡಗಿದರು. ಅವರು ಮಿತಿ ಮೀರಿ ವರ್ತಿಸತೊಡಗಿದಾಗ ತ್ರಿಜಟೆಯೆಂಬ ಜ್ಞಾನವೃದ್ಧ ರಾಕ್ಷಸಿಯು ತನಗೆ ಬಿದ್ದ ಸೀತೆಯ ಪರವಾಗಿರುವ ಮತ್ತು ರಾವಣನಿಗೆ ವಿರುದ್ಧವಾಗಿರುವ ಕನಸನ್ನು ಹೇಳಿ ಲಂಕೆಗೆ ಬಂದಿರುವ ಆಪತ್ತಿನ ಕುರಿತು ಹೇಳಿದಳು. ಹೆದರಿದ ರಾಕ್ಷಸಿಯರು ತೆಪ್ಪಗಾದರು!
ಸೀತೆಗೆ ರಾಮನಿಲ್ಲದ ಬದುಕು ಬೇಡವೆಂದಾಯಿತು, ಸಾಕೆಂದಾಯಿತು! ತಲೆಗೂದಲನ್ನೇ ನೇಣನ್ನಾಗಿ ಮಾಡಿಕೊಂಡು ಸಾಯುವುದೇ ಮೇಲೆಂದು ಕೊಂಡಳು. ಇದನ್ನು ಗಮನಿಸಿದ ಸೂಕ್ಷ್ಮರೂಪದಲ್ಲಿದ್ದ ಹನುಮನು ಸೀತೆಗೆ ಮಾತ್ರ ಕೇಳಿಸುವಂತೆ ಶ್ರೀರಾಮಕಥೆಯನ್ನು ಹೇಳತೊಡಗಿದನು. ಅದರಲ್ಲಿ- "ಇಕ್ಷ್ವಾಕುವಂಶದ ದಶರಥ, ಅವನ ನಾಲ್ವರು ಮಗಂದಿರು, ಅವರಲ್ಲಿ ಹಿರಿಯವನಾದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಮಡದಿ ಸೀತೆ ಹಾಗೂ ತಮ್ಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬಂದದ್ದು, ಪಂಚವಟಿಯಲ್ಲಿದ್ದಾಗ ರಾವಣನು ರಾಮ- ಲಕ್ಷ್ಮಣರಿಲ್ಲದ ಸಮಯದಲ್ಲಿ ಸೀತೆಯನ್ನು ಅಪಹರಿಸಿದ್ದು, ರಾವಣನಿಂದ ಹೊಡೆತ ತಿಂದ ಜಟಾಯುವಿಗೆ ಮುಕ್ತಿಯನ್ನು ನೀಡಿ ಋಷ್ಯಮೂಕ ಪರ್ವತಕ್ಕೆ ಬಂದು ಸುಗ್ರೀವನ ಗೆಳೆತನ ಮಾಡಿದ್ದು, ದುಷ್ಟವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ಕಿಷ್ಕಿಂಧಾ ರಾಜ್ಯದ ಪಟ್ಟಾಭಿಷೇಕ ಮಾಡಿದ್ದು, ವಾನರರು ಸೀತೆಗಾಗಿ ಜಗತ್ತಿನ ಎಲ್ಲೆಡೆ ಹುಡುಕಾಡಿದ್ದು, ಸಂಪಾತಿಯ ಸಲಹೆಯ ಮೇರೆಗೆ ಸುಗ್ರೀವನ ಮಂತ್ರಿಯಾದ ಹನುಮಂತನೆಂಬ ನಾನು ಸಾಗರೋಲ್ಲಂಘನೆ ಮಾಡಿ ಲಂಕೆಗೆ ಬಂದು ಅಶೋಕೆಯಲ್ಲಿರುವ ಸೀತೆಯನ್ನು ಕಂಡು ಕೃತಾರ್ಥನಾದದ್ದು" ಇವಿಷ್ಟನ್ನು ಹಾಡಿ ಹೇಳಿದನು.
ಇದನ್ನು ಕೇಳಿದ ಸೀತೆಗೆ ನಿಜವೋ ಭ್ರಮೆಯೋ ಎಂದು ಗೊತ್ತಾಗಲಿಲ್ಲ. ಅಚ್ಚರಿಗೊಂಡ ಸೀತೆಯು "ರಾಮನ ಕಥೆಯನ್ನು ಹಾಡಿದವರು ನನ್ನೆದುರು ಕಾಣಿಸಿಕೊಳ್ಳಲಿ" ಎಂದಳು.
ಮುಂದುವರಿಯುವುದು....
- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ