ಸಂತ ಶಿಶುನಾಳ ಶರೀಫ (1819). ಅವರು ಹುಟ್ಟಿದ್ದು. ಇಹಲೋಕವನ್ನು ತ್ಯಜಿಸಿದ್ದು ಜುಲೈ 3 ರಂದು. ನಿತ್ಯ ಜಂಜಾಟಗಳ ನಡುವೆ ನಿಂತು, ಪರದ ಹಂಗು ತೊರೆದು ಸಾಮರಸ್ಯದ ದಾರಿ ತೋರಿದ ಮಹಿಮಾ ಪುರುಷ ಅವರು. ಶರೀಫ, ಶರೀಫಜ್ಜ, ಶಿವಯೋಗಿ ಶರೀಫರು, ಸಂತ ಶಿಶುನಾಳ ಶರೀಫ- ಹೀಗೆಲ್ಲ ಹಲವು ಹೆಸರುಗಳು. ಕೆಲವರಿಗೆ ತತ್ವಪದಕಾರನಾಗಿ, ಹಲವರಿಗೆ ದೈವವಾಗಿ ಕಂಡ ಗುರು ಗೋವಿಂದಭಟ್ಟರ ಶಿಷ್ಯ ಶರೀಫರು ಅಪ್ರತಿಮ ತತ್ವಜ್ಞಾನಿ.
ಜಾತಿಮತಗಳ ಎಲ್ಲೆ ಮೀರಿ ಆಧ್ಯಾತ್ಮದ ಅನುಭಾವವನ್ನು ತನ್ನ ತತ್ವಪದಗಳ ಮೂಲಕ ಮನುಕುಲಕ್ಕೆ ಅರುಹುತ್ತ ನಡೆದ ಶಿಶುನಾಳ ಶಾರೀಫ ಈ ನಾಡುಕಂಡ ಮಹಾಸಂತ. ಕನಕ-ಪುರಂದರ, ಸರ್ವಜ್ಞರಂತಹ ಮಹಾತ್ಮರು ಅವತರಿಸಿದ ಈ ಪುಣ್ಯಭೂಮಿಯಲ್ಲಿ ಆಧ್ಯಾತ್ಮ ಚಿಂತನೆಯ ಬಹು ದೊಡ್ಡ ಪರಂಪರೆಯನ್ನು ಮುಂದುವರೆಸಿದವರು. ಕಳಸದ ಗುರು ಗೋವಿಂದ ಭಟ್ಟ, ನವಲಗುಂದದ ನಾಗಲಿಂಗ, ಗರಗದ ಮಡಿವಾಳಿ, ಗದುಗಿನ ಶಿವಾನಂದ, ಶಿರಹಟ್ಟಿಯ ಫಕ್ಕೀರ, ಹುಬ್ಬಳ್ಳಿಯ ಸಿದ್ಧಾರೂಢ ಇಂತಹ ಮಹಾನುಭಾವರ ಪರಂಪರೆಯ ಶರೀಫಜ್ಜನಿಗೆ ಯಾವುದೇ ಮನೆ-ಮಠ, ನೆಲೆ-ಆಶ್ರಯವಾಗಲಿ ಇರಲಿಲ್ಲ. ಅವನು ನಿಂತ ನೆಲವೇ ಮಠ, ಕುಳಿತ ಜಗವೇ ಪೀಠ, ಹೊರಟದಾರಿಯೇ ಬದುಕಾಗಿತ್ತು. ತನ್ನೆಲ್ಲ ಸಮಕಾಲೀನ ಅನುಭಾವಿಗಳು ಸಾಧಿಸಿದ ಕಾವ್ಯಸಿದ್ಧಿಯನ್ನು ಸಾಧಿಸಿ ಇಂದಿಗೂ ಜನಮನದಲ್ಲಿ ಅಜರಾಮರಾಗಿದ್ದಾನೆ. ಮಹಮದೀಯನಾಗಿ ಹುಟ್ಟಿ ಗುರುಗೋವಿಂದಭಟ್ಟರಿಂದ ದೀಕ್ಷೆಯನ್ನು ಪಡೆದು, ಅದ್ವೈತ ತತ್ವದ ಮೂಲಕ ದೇವರು ದೇಹದೊಳಗೆ ಇದ್ದಾನೆ, ಎಂಬ ವಾಸ್ತವ ಸತ್ಯವನ್ನು ಮನಗಾಣಿಸುತ್ತಾರೆ. ಬಸವಾದಿ ಪ್ರಥಮರು ಸಾಧಿಸಿ, ಸಿದ್ಧಿಸಿ ತೋರಿಸಿದ ಜಂಗಮತ್ವವನ್ನು ನಿರಾಕಾರತತ್ವವನ್ನು ಶರೀಫ ಶಿವಯೋಗಿ ಮತ್ತಷ್ಟು ಬಲಗೊಳಿಸಿದವರು.
ಶಿಶುನಾಳ ಶರೀಫ ಎಂದೇ ಖ್ಯಾತನಾದ ಸೂಫಿಸಂತ, ಅಶುಕವಿ, ತತ್ವಪದಕಾರ, ಅನುಭಾವಿ ಮಹಮ್ಮದ ಶರೀಫ ಇಮಾಮ ಸಾಹೇಬ ದೇವಕಾರ ಹುಟ್ಟಿದ್ದು 200 ವರ್ಷಗಳ ಹಿಂದೆ ಅಂದರೆ 1819ರ ಜುಲೈ 3ರಂದು. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶಿಶುವಿನಹಾಳದಲ್ಲಿ ಸರ್ವಶಕ್ತನಾದ ಅಲ್ಹಾ ಹಾಗೂ ಹುಲಗೂರಿನ ಹಜರೇಶಾ ಖಾದರಲಿಂಗನ ನಿಷ್ಠೆಯ ಭಕ್ತರಾದ ಹಜರತ್ ಇಮಾಮ ಸಾಬ ಮತ್ತು ಹಜ್ಜುಮಾ ಎಂಬ ರೈತ ದಂಪತಿಗಳ ಏಕೈಕ ಪುತ್ರನಾಗಿ ಶರೀಫ ಜನಿಸಿದರು. ಸಹಜವಾಗಿ ಮನೆಯ ಧಾರ್ಮಿಕ ವಾತಾವರಣ ಅವರ ಮೇಲೆ ಪ್ರಭಾವ ಬೀರತು. ಆರಂಭಿಕ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಹಳಗನ್ನಡ, ವ್ಯಾಕರಣ, ಛಂದಸ್ಸು, ಅಲಂಕಾರ, ಗಣಿತ, ವಿಜ್ಞಾನ, ಸಮಾಜ ವಿಷಯಗಳನ್ನು ಹಾಗೂ ಉರ್ದು ಮತ್ತು ಮೋಡಿ ಲಿಪಿಯನ್ನು ಕಲಿಯುವ ಮೂಲಕ ಹುಟ್ಟೂರಿನಲ್ಲಿ ಪೂರೈಸಿದರು. ತಮ್ಮ ಹದಿನಾರನೆ ವಯಸ್ಸಿನಲ್ಲಿ ಕಳಸದ ಗೋವಿಂದ ಭಟ್ಟರಲ್ಲಿ ಸಂಸ್ಕೃತ, ವೇದ, ಆಗಮ, ಜ್ಯೋತಿಷ್ಯವನ್ನು ಅಧ್ಯಯನ ಮಾಡಿದರು. ಅವರು ಹುಟ್ಟಿದ ಪ್ರದೇಶ ಮುಸ್ಲಿಂ ಆಡಳಿತಕ್ಕೆ ಒಳಪಟ್ಟಿದ್ದರಿಂದ ಆಡಳಿತ ಭಾಷೆ ಉರ್ದು ಆಗಿತ್ತು. ಆನ ಬಳಕೆಯಲ್ಲಿ ಕನ್ನಡ, ಮೋಡಿಲಿಪಿ ಜಾರಿಯಲ್ಲಿತ್ತು. ಸಹಜವಾಗಿ ಈ ಎರಡು ವಿಭಿನ್ನ ಸಂಸ್ಕೃತಿಗಳನ್ನು ಕಂಡುಂಡು ಬೆಳೆದ ಶರೀಫಸಾಹೇಬ ಎರಡು ಧರ್ಮಗಳ ಹರುವನ್ನು, ನೆಲೆಯನ್ನು ಅರಗಿಸಿಕೊಂಡು ಪರಮ ಸತ್ಯವನ್ನು ನಾಡಿಗೆ ಅರುಹಿದವರು.
ಭಕ್ತಿಚಳುವಳಿಗೆ ಅನುಭಾವದ ಕಟ್ಟನ್ನು ಕಟ್ಟಿದಾತ
ಮುಲ್ಕಿ ಶಿಕ್ಷಣ ಮುಗಿಸಿದ್ದ ಶರೀಫ ಶಾಲಾ ಮಾಸ್ತರಾಗಿ ವೃತ್ತಿ ಆರಂಭಿಸಿದರು. ಕುಂದಗೋಳದ ಫಾತಿಮಾ ಅವಳೊಂದಿಗೆ ಅವರ ಮದುವೆಯಾಯಿತು. ಆದರೆ ಚೊಚ್ಚಲ ಹೆರಿಗೆಯಲ್ಲಿ ಅವರ ಹೆಂಡತಿ ಮತ್ತು ಹೆಣ್ಣುಮಗು ತೀರಿಕೊಳ್ಳುತ್ತದೆ. ಸಾಂಸಾರಿಕ ಸುಖದಿಂದ ವಿಮುಖರಾದ ಶರೀಫ ದಿಕ್ಕೆಟ್ಟು ಹೋಗುತ್ತಾರೆ. ತಂದೆ, ತಾಯಿ, ಹೆಂಡತಿಯನ್ನು ಕಳೆದುಕೊಂಡು ‘ಹಾಕಿದ ಜನಿವಾರದ ಸದ್ಗುರುನಾಥ ಹಾಕಿದ ಜನಿವಾರವ; ಹಾಕಿದ ಜನಿವಾರ ನೂಕಿದ ಭವಭಾರ’ ಎನ್ನುತ್ತ ಗುರುಗೋವಿಂದನ ಸನ್ನಿಧಿಗೆ ಬಂದು ನಿಲ್ಲುತ್ತಾರೆ. ಎರಡು ಅನುಭಾವದ ನದಿಗಳು ಸಂಗಮವಾಗಿ ಹರಿಯತೊಡಗುತ್ತವೆ. ನಿಂತ ನೆಲವನ್ನು ಹೋದ ಹಾದಿಯನ್ನು ಹಸನುಗೊಳಿಸುತ್ತ, ಭಕ್ತಿಭಾವದ ಬೆಳೆಯನ್ನು ಬೆಳೆಯುತ್ತ ನಾಡನ್ನು ಆಧ್ಯಾತ್ಮಿಕವಾಗಿ ಸಮೃದ್ಧಗೊಳಿಸುತ್ತಾರೆ.
ಚಿಕ್ಕಂದಿನಲ್ಲಿಯೇ ಜಾತ್ರೆ, ಉತ್ಸವ, ನಾಟಕಗಳನ್ನು ನೋಡುತ್ತ ಬೆಳೆದ ಶರೀಫನಿಗೆ ಸಾಧು ಸತ್ಪುರುಷರ ಬಗ್ಗೆ ಭಕ್ತಿ ಮತ್ತು ಗೌರವದ ಭಾವನೆ ಬೆಳೆದಿತ್ತು. ಪಠಣ, ಕೀರ್ತನೆಗಳಲ್ಲಿ ಆಸಕ್ತಿ ಬೆಳೆದಿತ್ತು.ರಾಮಾಯಣ, ಮಹಾಭಾರತ, ಅಲ್ಲಮ ಪ್ರಭುವಿನ ಮಾಯಾ ಕೋಲಾಹಲ ಮುಂತಾದ ಬಯಲಾಟಗಳಲ್ಲಿ ಪಾತ್ರವಹಿಸುತ್ತಿದ್ದರು. ಸರ್ವಜ್ಞ, ಸರ್ಪಭೂಷಣ ಶಿವಯೋಗಿಗಳ ಕಾವ್ಯ ಗಾಯನಗಳಲ್ಲಿ ಭಾಗವಹಿಸುತ್ತಿದ್ದರು. ತನ್ನ ಕೊನೆಯ ಜೀವಿತದವರೆಗೂ ಪೌರಾಣಿಕ ನಾಟಕಗಳನ್ನು ಆಡಿಸುವ, ನಿರ್ದೇಶಿಸುವ ಅವುಗಳಿಗೆ ಸಂಭಾಷಣೆ, ಗೀತೆಗಳನ್ನು ಹೇಳಿಕೊಡುವ ಕಾಯಕ ಮಾಡಿದವರು. ವೇದ, ಶಾಸ್ತç, ಆಗಮ, ಖುರಾನ್, ವಚನ, ಪುರಾಣಗಳನ್ನು ಓದಿಕೊಂಡಿದ್ದ ಅವರು ಎಲ್ಲವುಗಳ ಸಾರವನ್ನು ಹೀರಿ ಭಾವೈಕ್ಯದ ಸಂಗಮವನ್ನು ಸಾಧಿಸಿದ್ದರು.ಹೀಗೆ ಲೌಕಿಕದಲ್ಲಿ ನಡೆಯುತ್ತಿದ್ದ ಆಧ್ಯಾತ್ಮದ ಅನುಭುತಿಯನ್ನು ಭಕ್ತಿರಸವಾಗಿಸಿಕೊಂಡ ಶರೀಫ ಭಕ್ತಿಚಳುವಳಿಗೆ ಅನುಭಾವದ ಕಟ್ಟನ್ನು ಕಟ್ಟಿದಾತ.
ತ್ರಿಕಾಲಜ್ಞಾನಿಯಾಗಿದ್ದ ಶರೀಫಜ್ಜ ಭವಿಷ್ಯವನ್ನು ನುಡಿಯುವುದರಲ್ಲಿ ನಿಖರವಾಗಿದ್ದರು. ಒಂದು ಘಟನೆ ಘಟಿಸುವ ಮುಂಚೆ ಅದನ್ನು ಭವಿಷ್ಯ, ಜ್ಯೋತಿಷ್ಯ ಅಥವಾ ಪವಾಡ ಎಂದ Äಕರೆಯುತ್ತಿದ್ದರು. ಗುರು-ಶಿಷ್ಯರು ಊರೂರು ತಿರುಗುತ್ತ ಉಪವಾಸ ವನವಾಸ ಮಾಡುತ್ತ ಪಾಳು ಗುಡಿ ದೇವಸ್ಥಾನಗಳಲ್ಲಿ ರಾತ್ರಿ ಮಲಗುತ್ತ ಬದುಕು ಕಳೆದರು. ಶರೀಫ ಸಾಹೇಬ ಒಂದೆಡೆ ನೆಲೆಗೊಂಡು ತತ್ವವನ್ನೋದಿದ ಅನುಭಾವಿಯಲ್ಲ; ಅಲೆದು ಜೀವನಾನುಭವವನ್ನು ಉಂಡು ಹಂಚಿದ ತತ್ವಜ್ಞಾನಿ. ಭಾವಜೀವಿ ಮತ್ತು ರಸೃಷಿಯಾಗಿದ್ದ ಅವರು, ಜನರ ಆಡುಭಾಷೆಯ ಪದಗಳನ್ನೇ ತನ್ನ ಕಾವ್ಯದ ನೆಲೆಯಾಗಿಸಿಕೊಂಡು ಬಾಹ್ಯದಲ್ಲಿ ಪ್ರಾಪಂಚಿಕ ಅರ್ಥವನ್ನು ಅಂತರAಗದಲ್ಲಿ ಪಾರಮಾರ್ಥದ ಹೂರಣವನ್ನು ತುಂಬಿದಾತ. ‘ಬಿಡತೇನಿ ದೇಹ ಬಿಡತೇನಿ’ ಎನ್ನುತ್ತ ತಾವು ಹುಟ್ಟಿದ ದಿನವೇ ಅಂದರೆ 1889ರ ಜುಲೈ 3ರಂದು ಕೈವಲ್ಯ ಪದವಿಯನ್ನು ಪಡೆದರು. ಅವರ ಅಂತ್ಯ ಸಂಸ್ಕಾರವನ್ನು ಉಭಯ ಧರ್ಮೀಯರು ಜೊತೆಗೂಡಿ ಮಾಡಿದರು. ಇಂದಿಗೂ ಅವರ ಗದ್ದುಗೆ ಭಾವೈಕ್ಯತೆಯ ಪ್ರತೀಕವಾಗಿದೆ.
ಎಪ್ಪತ್ತು ವರ್ಷಗಳ ಕಾಲ ಈ ಭಾಗದಲ್ಲಿ ನಡೆದಾಡಿ, ಜನರಿಗೆ ಬದುಕುವ ಚೈತನ್ಯದ ಸಂದೇಶ ಕೊಟ್ಟ ಸಂತರು. ಈಗಿನ ಶಿಶುನಾಳ ಸುಮಾರು ಮೂರು ಸಾವಿರ ಜನಸಂಖ್ಯೆ ಮೀರದ ಹಳ್ಳಿ. ಅಲ್ಲಲ್ಲಿ ಕಾಂಕ್ರಿಟ್ ಕಟ್ಟಡಗಳು ಕಂಡರೂ, ಶರೀಫರ ಕಾಲವನ್ನು ನೆನೆಪಿಸುವಂತಿದೆ. ಆಕಸ್ಮಿಕವಾಗಿ ರಾಷ್ಟಿçÃಯ ಹೆದ್ದಾರಿಯ ಅಥವಾ ನೇರ ಸಂಪರ್ಕ ವ್ಯವಸ್ಥೆಗಳಿದಿದ್ದರೆ ಶಿಶುನಾಳ ಒಂದು ದೊಡ್ಡ ಯಾತ್ರಾ ಸ್ಥಳವಾಗಬಹುದಿತ್ತು. ಆದೇನೇ ಇದ್ದರು. ಶಿಶುನಾಳ ಹೆಸರೇ ನಾಡಿಗೆ ಒಂದು ದೈವ. ಕವಿ, ತತ್ವಜ್ಞಾನಿ, ತತ್ವಪದಕಾರ, ನೀತಿ ಬೋಧಕ, ಸಮಾಜ ಸುಧಾರಕ ಶರೀಫರು ಜನತೆಯ ಕವಿ ಸಂತ. ಈ ಸೆಳೆತಗಳೇ ಭಕ್ತ ಗಣವನ್ನು ಇಲ್ಲಿಗೆ ಕರೆತರುತ್ತದೆ. ಭಾವೈಕ್ಯದ ಹರಿಕಾರನ ಸಮಾಧಿಗೆ ಇಂದಿಗೂ ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ ಆಗಬೇಕಾದ ಅಭಿವೃದ್ಧಿಯಾಗಿಲ್ಲ. ಕನ್ನಡ ಅನುಭಾವ ಸಾಹಿತ್ಯಕ್ಕೆ ಅನನ್ಯವಾದ ಕೊಡುಗೆ ನೀಡಿದ ಶರೀಫನ ತಾಣ ಇತರ ಪ್ರವಾಸಿ ತಾಣಗಳಂತೆ ಅಭಿವೃದ್ಧಿಯಾಗಬೇಕು.
ಸಮನ್ವಯದ ಸಾಕಾರಮೂರ್ತಿ
ಹಿಂದೂ-ಮುಸ್ಲಿಂ ಸಾಮರಸ್ಯದ ಬದುಕು ಆಗಾಗ ಕದಡಿ ವೈಷಮ್ಯಗಳು ಬೆಳೆಯುತ್ತಿರುವ ಈ ಕಾಲದಲ್ಲಿ, ಬ್ರಾಹ್ಮಣ ಗುರು ಗೋವಿಂದ ಭಟ್ಟರು ಮತ್ತು ಮುಸ್ಲಿಂ ಶಿಷ್ಯ ಶರೀಫರು ಸಮಾಜ ಸಾಮರಸ್ಯಕ್ಕೆ ಒಂದು ಮಾದರಿಯ ಜೋಡಿ. ಗೋವಿಂದ ಭಟ್ಟರು ಕುಂದಗೋಳ (ಈಗ ಧಾರವಾಡ ಜಿಲ್ಲೆಯಲ್ಲಿದೆ) ತಾಲ್ಲೂಕಿನ ಕಳಸ ಗ್ರಾಮದವರು. ಶರೀಫರ ತಂದೆ ಇಮಾಮ್ ಸಾಹೇಬರಿಗೆ ಭಟ್ಟರ ಮೇಲೆ ಅಪಾರ ಗೌರವ, ಅವರ ವಿದ್ವತ್ತು, ಜ್ಞಾನ ಸಂಪನ್ನತೆಗೆ ಅರ್ಪಿಸಿಕೊಂಡವರು. ಒಮ್ಮೆ ಗುಡಗೇರಿ ಗ್ರಾಮಕ್ಕೆ ಗೋವಿಂದ ಭಟ್ಟರು ಬಂದಾಗ ಶರೀಫರನ್ನು ಶಿಷ್ಯನ್ನಾಗಿಸಲು ಕೇಳಿಕೊಂಡಿದ್ದರು. ಹೀಗೆ ಹುಟ್ಟಿಕೊಂಡ ಅಪರೂಪದ ಗುರು ಶಿಷ್ಯತ್ವವು ಈಗಲೂ ದಂತ ಕತೆಯಾಗಿದೆ.
ಅನುಭಾವಿ ಕವಿಗಳಾದ ಶರೀಫರು ತಾವು ಕಂಡ ಬೆಳಕನ್ನು ಇತರರೂ ಕಂಡು ಪುನೀತರಾಗಬೇಕೆಂಬ ಸದುದ್ದೇಶದಿಂದ ಹಲವಾರು ಪದ್ಯಗಳನ್ನು ರಚಿಸಿದರು. ಈ ಪದ್ಯಗಳಾದರೋ ಕಾವ್ಯಸೃಷ್ಟಿಗೆಂದು ರಚಿಸಿದ ಕಾವ್ಯಗಳಾಗಿರದೆ, ಧರ್ಮ ಮಾರ್ಗದಿಂದ ಬಾಳಿ ಜೀವನ್ಮುಕ್ತರಾಗಬೇಕೆಂಬ ಘನ ಉದ್ದೇಶದಿಂದ ರಚಿಸಿದ ಕಾವ್ಯಗಳಾಗಿವೆ.
ಅಪ್ಪಗಳಾ ನನಗಾ ವಾಂತಿ ಬರೋಂಗ ಅಗ್ತಿದೆ. ಆದ್ರ ನಾ ಮಾಡೋ ವಾಂತಿ ಎಲ್ಲೂ ಚೆಲ್ಲಬಾರದು. ಅಂತಾ ಜಾಗ ನೋಡ್ರಪ.. ಗೋವಿಂದಭಟ್ಟರು ಹಾಸಿಗೆಯ ಮೇಲೆ ಕುಳಿತು ಮೆಲ್ಲಗೆ ಹೇಳುತ್ತಾರೆ. ಗೋವಿಂದಭಟ್ಟರ ಸುತ್ತ ನೆರೆದ ಶಿಷ್ಯರೆಲ್ಲಾ ಅವಾಕ್ಕಾಗುತ್ತಾರೆ. ಯಾರು ತುಳೀದ ಇರೋ ಜಾಗ. ಯಾವುದು ಅಂತ ತಲೆ ಕೆಡೆಸಿಕೊಳ್ತಾರೆ. ಅಷ್ಟು ಹೊತ್ತಿಗೆ ತನ್ನ ಗುರುಗಳು ಅಸ್ವಸ್ಥರಾಗಿರೋ ವಿಚಾರ ತಿಳಿದ ಶರೀಫರು ಅಲ್ಲಿಗೆ ಓಡೋಡಿ ಬರುತ್ತಾರೆ. ಶಿಷ್ಯರ ನಡುವೆ ಜಾಗ ಮಾಡ್ಕೊಂಡು ಗುರುಗಳ ತಲದಿಂಬಿನ ಬಳಿ ರ‍್ತಾರೆ. ‘ಗುರುಗಳೇ’ ಎಂದು ಬಿಕ್ಕುತ್ತಾರೆ.
ಗೋವಿಂದಭಟ್ಟರು ಹೇಳಿದ್ದನ್ನು ಇತರೆ ಶಿಷ್ಯರು ಹೇಳುತ್ತಾರೆ. ಶರೀಫರು ಹಿಂದೆ ಮುಂದೆ ನೋಡದೆ ತಮ್ಮ ಬೊಗಸೆಯನ್ನು ಗುರುಗಳ ಮುಂದೆ ಒಡ್ಡುತ್ತಾರೆ. ಗುರುಗಳು ಶರೀಫರ ಕೈಯಲ್ಲಿ ವಾಂತಿ ಮಾಡುತ್ತಾರೆ. ತಮ್ಮ ಕೈಯಲ್ಲಿದ್ದ ವಾಂತಿಯನ್ನೇ ಉಚ್ಛಿಷ್ಟ ಪ್ರಸಾದವೆಂದು ಶರೀಫರು ಕುಡಿದು ಬಿಡುತ್ತಾರೆ.
ಗೋವಿಂದಭಟ್ಟರಿಗೆ ವಾಗ್ಸಿದ್ಧಿಯಿತ್ತು, ತಮ್ಮ ದಿವ್ಯಶಕ್ತಿಯಿಂದ ಅವರಿಗೆ ತಮ್ಮ ಅಂತ್ಯಕಾಲ ಸಮೀಪಿಸಿರುವ ವಿಷಯ ತಿಳಿದಿತ್ತು. ಹಾಗೆಂದೇ ಅವರು ತಮ್ಮೊಳಗಿನ ಆಧ್ಯಾತ್ಮ ಜ್ಞಾನವನ್ನು ವಾಂತಿಯ ಮೂಲಕ ಷರೀಫರಿಗೆ ಧಾರೆ ಎರೆದಿದ್ದರು. ಗೋವಿಂದಭಟ್ಟರಂತೆ ಶರೀಫರೂ ಪವಾಡ ಪುರುಷರಾಗಲು ಇದೂ ಒಂದು ಕಾರಣ ಎಂದರೆ ತಪ್ಪಾಗದು.
ಆಧ್ಯಾತ್ಮಿಕ ಸೆಳೆತ
ಶರೀಫರ ಪಾಲಕರು ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ ಮತ್ತು ಹಜ್ಜೂಮ. ಇವರ ಮೂಲ ನಾಮ ಮೊಹಮ್ಮದ ಶಾರೀಫ. ಕೂಲೀಮಠದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಮೋಡಿ ಭಾಷೆಯನ್ನೂ ಕಲಿಯುತ್ತಾರೆ. ರೂಢಿಯ ಬಲದಿಂದ ಉರ್ದು ಸಹ ಕರಗತವಾಗುತ್ತದೆ. ಆದರೆ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ, ದೇವೀಪುರಾಣ, ಪ್ರಭುಲಿಂಗ ಲೀಲೆಯನ್ನು ಅಧ್ಯಯನ ಮಾಡಿದ್ದರು. ಮೋಜು ಮಜಲುಗಳಲ್ಲಿ ವೇಷಗಾರರ ಜೊತೆ ವೇಷ ತೊಡುತ್ತಿದ್ದರು. ಬಯಲಾಟಗಳಲ್ಲಿ ಬಣ್ಣ ಹಚ್ಚಿ ಪಾತ್ರವಹಿಸುವುದು, ಸರ್ವಜ್ಞ, ಸರ್ಪಭೂಷಣ ಶಿವಯೋಗಿಗಳ ಕಾವ್ಯ ವಾಚನ ಮಾಡುವುದು, ಮೊಹರಮ್ ಸಂದರ್ಭದಲ್ಲಿ ರಿವಾಯತ್ ಪದಗಳನ್ನು ರಚಿಸಿ ಹೆಜ್ಜೆಮೇಳ ಕುಣಿಸುವುದರಲ್ಲಿ ಅತೀವ ಆಸಕ್ತಿ ಹೊಂದಿದ್ದರು.
ಕುಂದಗೋಳದ ನಾಯಕ ಮನೆತನದ ಫಕ್ಕೀರಸಾಹೇಬ ಮತ್ತು ಫಿರಜಾನ್ ದಂಪತಿ ಪುತ್ರಿ ಫಾತೀಮಾ ಶರೀಫರ ಹೆಂಡತಿ. ಮದುವೆಯಾದ ಬಹಳ ವರ್ಷಗಳ ನಂತರ ಹೆಣ್ಣು ಮಗುವನ್ನು ಪಡೆದರೂ, ಕಾಲರಾ ಬೇನೆಗೆ ತುತ್ತಾಗಿ ಅದು ತೀರಿತು. ಬದುಕಿನ ಬಹುಮುಖ್ಯ ಘಟ್ಟದಲ್ಲಿ ದೊಡ್ಡ ದುರಂತ ಅನುಭವಿಸಿದ್ದ ಶರೀಫರು, ಮಗಳ ಸಾವಿನ ದುಃಖವನ್ನು ಮರೆಯಲೆಂದು ಆಘಾತವೆಂಬಂತೆ ಫಾತೀಮಾ ಕೂಡಾ ಅಗಲಿದರು. ಶರೀಫರ ಜೀವನದ ದಿಕ್ಕೇ ಬದಲಾಯಿತು. ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ಶರೀಫರು, ತಮ್ಮ ಜೀವನ ಪಥವನ್ನು ವೈರಾಗ್ಯದತ್ತ ಬದಲಿಸುವಾಗ ಅವರಿಗೆ ಆಸರೆಯಾದವರು ಗೋವಿಂದಭಟ್ಟರು. ದೈನಿಕಗಳ ಮೀರಿದ ಅಲೌಕಿಕ ಹಾದಿಯನ್ನು ತೋರಿಸಿ, ಜಾತಿ-ಮತ-ಪಂಥಗಳ ಕಟ್ಟಳೆಗಳನ್ನು ಮೀರಿ ಆಧ್ಯಾತ್ಮದ ಹಾದಿಯನ್ನು ಗುರು ಗೋವಿಂದ ಭಟ್ಟರ ಮೂಲಕ ಕಂಡುಕೊAಡರು. ಇದನ್ನೇ ಶರೀಫರು ‘ಹಾಕಿದ ಜನಿವಾರ/ ಸದ್ಗುರುನಾಥ ಹಾಕಿದ ಜಿನಿವಾರವಾ/ ಹಾಕಿದ ಜನಿವಾರ ನೂಕಿದ ಭವಭಾರ/ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸಲೆಂದು’ ತಮ್ಮದೊಂದು ತತ್ವ ಪದದಲ್ಲಿ ಹೇಳಿಕೊಂಡಿದ್ದಾರೆ.
ಸಾಮರಸ್ಯಕ್ಕೊಂದು ಸಂಕೇತ
ಗುರು-ಶಿಷ್ಯರ ಜೋಡಿ ಆ ಕಾಲದಲ್ಲಿ ಸಮಾಜದ ವಿರೋಧಕ್ಕೂ ಕಾರಣವಾಗಿತ್ತು. ಆಧ್ಯಾತ್ಮ ಭಾವದಿಂದ ಅರ್ಪಿತವಾದ ಈ ಜೋಡಿಯನ್ನು ಮುರಿಯಲು ಅಸಾಧ್ಯವಾಗಿತ್ತು. ಆಧ್ಯಾತ್ಮ ಸಿದ್ಧಿ, ಸಾಕ್ಷಾತ್ಕಾರಗಳ ದಾರಿ ಕಂಡುಕೊಂಡ ಗೋವಿಂದ - ಶರೀಫರು, ಲೋಕ ವಿರೋಧಿಗಳಾಗಿಯೂ ಕಂಡರು. ಕತ್ತಲೆ ಕಳೆದು ಬೆಳಕು ಬರುವಂತೆ ತಮ್ಮ ಸಾಧಕ ಸಿದ್ಧಿಯಿಂದಲೇ, ಸಮಾಜದ ಕತ್ತಲೆ ಕಳೆಯಲು ಬೆಳಕಾದವರು. ಅಲೌಕಿಕ ಅನುಭವಗಳ ತಾತ್ವಿಕ ದರ್ಶನಕ್ಕಿಳಿದ ಶಿಶುನಾಳ ಶರೀಫರು, ಜಾನಪದ ಪ್ರತಿನಿಧಿಯಾದ ಯೋಗಿ ಕವಿ. ಜನಸಾಮಾನ್ಯರಿಗೂ ಅರ್ಥವಾಗುವಂತೆ ಮಾನವತೆಯ ತತ್ವಬೋಧನೆ ಮಾಡಿದವರು.
ಪರಮಾತ್ಮ ರೂಪ ಪರತತ್ವವಾಗಲೀ, ಪರಮಾತ್ಮನ ಸಾಕ್ಷಾತ್ಕಾರದ ಯಾವುದೇ ಸಾಧನಗಳಾಗಲೀ ಮತ್ತು ಪರಮಾತ್ಮನ ದಿವ್ಯ ವಾಣಿರೂಪ ಸಂದೇಶವಾಗಲೀ ಇವು ಯಾವುದೇ ಒಂದು ಜನಾಂಗದ ಅಥವಾ ಯಾವುದೇ ಒಂದು ಸಂಪ್ರದಾಯದ ಸ್ವತ್ತು ಅಲ್ಲವೆಂದು ದಿಟ್ಟತನದಿಂದ ಬೋಧಿಸಿದವರು ಶಿಶುನಾಳದ ಶರೀಫ ಸಾಹೇಬರು. ಇವರು ಸರ್ವಧರ್ಮ ಸಮನ್ವಯದ ಸಾಕಾರಮೂರ್ತಿಗಳಾಗಿ ಮೂಡಿಬಂದವರು. ಏಕೆಂದರೆ ಎಲ್ಲರಿಗೂ ಸರ್ವಜ್ಞನಾದ ಪರಮಾತ್ಮನೊಬ್ಬನೇ ಮೂಲ ಜಗದ್ಗುರು ಎಂಬುದನ್ನು ತಿಳಿದಿದ್ದರು. ಈಶ್ವರನೇ ಪ್ರಾಚೀನ ಸೃಷ್ಟಿಯ ಆದಿಕಾಲದ ಋಷಿಗಳಿಗೂ ಗುರುವಾಗಿದ್ದಾನೆ. ಏಕೆಂದರೆ ಇವನು ಕಾಲಕ್ಕೆ ಅತೀತ. ಕಾಲಕ್ಕೆ ಒಳಪಟ್ಟವನಲ್ಲ. ಅಂದರೆ ಈ ಸೃಷ್ಟಿಯ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಒಳಪಟ್ಟವನಲ್ಲ. ಪುರಾತನ ಕಾಲದ ಗುರುಗಳು ಕೂಡ ಕಾಲಕ್ಕೆ ಒಳಪಟ್ಟವರೇ. ಈ ಸೃಷ್ಟಿಯ ಆದಿಯಲ್ಲಿಯೂ, ಕಳೆದುಹೋದ ಸೃಷ್ಟಿಯಲ್ಲಿಯೂ ಮುಂದೆಯೂ ಸರ್ವಜ್ಞನಾಗಿ ಇರುವವನು ಪರಮಾತ್ಮನೊಬ್ಬನೇ. ಆದ್ದರಿಂದ ಎಲ್ಲರಿಗೂ ಮೂಲ ಗುರುವು ಪರಮಾತ್ಮನೇ. ಹೀಗಿರುವಾಗ ಪರಮಾತ್ಮನು ದೇಶಕ್ಕೆ ಕಾಲಕ್ಕೆ ತಕ್ಕಂತೆ ಅನೇಕ ಋಷಿಮುನಿಗಳನ್ನು, ಪೀರಪೈಗಂಬರನ್ನು. ಶರಣ ಸಂತರನ್ನು ಸಾಧನವವನ್ನಾಗಿ ಮಾಡಿಕೊಂಡು ತನ್ನ ಸಂದೇಶ ಬೀರಿದಾಗ ಜನರು ಆ ಮೂಲ ಪರಮಾತ್ಮನನ್ನು ಮತ್ತು ಪರಮಾತ್ಮನ ಸಂದೇಶವನ್ನು ಮರೆತು ಈ ಮಹಾತ್ಮರನ್ನೇ ಮುಖ್ಯವಾಗಿಟ್ಟುಕೊಂಡಾಗ ಜಗತ್ತಿನಲ್ಲಿ ವ್ಯಕ್ತಿ ಪೂಜೆ ಪ್ರಾರಂಭವಾಗಿ ಅನೇಕ ಧರ್ಮಗಳು, ಪಂಥಗಳು, ಮತಗಳು, ಸಂಪ್ರದಾಯಗಳು ಹುಟ್ಟಿಕೊಂಡವು. ಈ ರಹಸ್ಯವನ್ನು ಗಮನಿಸಿದ ಶಿಶುನಾಳ ಶರೀಫ ಸಾಹೇಬರು, ಸಮನ್ವಯದ ಸಂದೇಶ ಸಾರಿದರು.
ಬೋಧ ಒಂದೇ
ಬ್ರಹ್ಮನಾದ ಒಂದೇ
ಸಾಧನ ಮಾಡುವ ಹಾದಿ ಒಂದೇ
ಆದಿಪದ ಒಂದೇ
ಶಿಶುನಾಳಧೀಶನ ಭಾಷೆ ಒಂದೇ
ಭವನಾಶ ಒಂದೇ
ಎಂದು ಹಾಡಿದರು. ಹಾಗಾಗಿ ಶರೀಫ ಸಾಹೇಬರು ಸೂಫಿ ತತ್ವದ, ಶರಣತತ್ವದ ಹಾಗೂ ಉಪನಿಷತ್ತುಗಳು ಸಾರುವ ಅದ್ವೆöÊತ ತತ್ವದ ತ್ರಿವೇಣಿ ಸಂಗಮವಾಗಿ ಬೆಳೆದು ಬಂದರು.
ನನ್ನೊಳ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ | ಅಜ್ಞಾಪ್ರಕಾರ ನಡಕೊಂಡೆ | ಗುರೂಪದೇಶ ಪಡಕೊಂಡೆ | ಈ ಭವಕೆ ಬಾರದಂತೆ ಮಾಡಿಕೊಂಡೆ | ಗುರುಗೋವಿಂದನ ಪಾದಾ ಹಿಡಕೊಂಡೆ |
ಎಂದು ಗುರುವನ್ನು ಸೇವಿಸಿದ ಶರೀಫರು, ಗುರುವಿನ ಉಪದೇಶ ದೊರೆತು ಸುಜ್ಞಾನದಿಂದ ಪ್ರಕಾಶಿಸುತ್ತಾ, ಅಜ್ಞಾನವೆಂಬ ಕತ್ತಲೆಯನ್ನು ಕಳೆಯಲು ಕಂಕಣಬದ್ಧರಾಗಿ ಸಂಚಾರಿಯಾದರು. ಮುಂದೆ ಅವರಿಗೆ ಫಾತಿಮಾ ಎನ್ನುವ ಹುಡುಗಿಯ ಜತೆ ಮದುವೆಯಾದರೂ ಆಧ್ಯಾತ್ಮ ಪಥವನ್ನು ಬಿಡಲಿಲ್ಲ.
ನನ್ನ ಹೇಣ್ತೆ ನೀ | ನನ್ನ ಹೇಣ್ತೆ | ನಿನ್ನ ಹೆಸರೇನ್ಹೇಳಲೆ ಗುಣವಂತೆ | ಮೊದಲಿಗೆ ತಾಯಾಡಿ ನನ್ನ ಹೇಣ್ತೆ | ಸದನಕ್ಕೆ ಸೊಸಿಯಾದೆ ನನ್ನ ಹೇಣ್ತೆ ಮತ್ತೆ | ಮುದದಿಂದ ಮೋಹಿಸಿ ಮದುವ್ಯಾದವನಿಗೆ | ಮಗಳೆಂದೆನಿಸಿದೆ ನನ್ನ ಹೇಣ್ತೆ ತುತ್ತು ನೀಡಿ | ಎನ್ನೆತ್ತಿ ಆಡಿಸಿದ ಹೆತ್ತವ್ವನೆನಿಸಿದಿ ನನ್ನ ಹೇಣ್ತೆ | ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ನನಗೆ | ತಕ್ಕವಳೆನಿಸಿದಿ ನನ್ನ ಹೇಣ್ತೆ ||
ಹೀಗೆ ಅವರು ತಮ್ಮೊಂದು ಕೃತಿಯಲ್ಲಿ ತಮ್ಮ ಹೆಂಡತಿಯನ್ನು ವರ್ಣಿಸಿದ್ದಾರೆ. ವಿಧಿಯಾಟಕ್ಕೆ ಮಗು, ಹೆಂಡತಿ, ತಂದೆ-ತಾಯಿ, ಕೊನೆಗೆ ಅವರಿಗೆ ಮುಕ್ತಿ ತೋರಿದ ಗುರುಗೋವಿಂದ ಭಟ್ಟರೂ ತ್ಯಾಗ ಮಾಡಿದ ನಂತರ ಅವರು ತಮ್ಮ ಮುಂದಿನ ದಿನಗಳನ್ನು ತೀರ್ಥಯಾತ್ರೆ ಮಾಡುತ್ತಾ ಸವೆಸಿದರು. ಈ ಸಂದರ್ಭದಲ್ಲಿ ಅವರು ಶಿರಹಟ್ಟಿ ಫಕೀರಸ್ವಾಮಿ, ವನಸಿಗ್ಗಲಿಯ ರಾಮಲಿಂಗ ಮೂರ್ತಿ ಸದ್ಗುರುಗಳನ್ನು ದರ್ಶಿಸಿದರು. ಮೈಲಾರ ಮಹಾದೇವ, ಸವದತ್ತಿ ಬಳಿಯ ಏಳುಕೊಳ್ಳದ ಎಲ್ಲಮ್ಮದೇವಿ, ಚೆನ್ನಬಸವಣ್ಣನ ತಾಣವಾದ ಉಳವಿಗಳನ್ನು ಸಂದರ್ಶಿಸಿದರು.
ಶ್ರೀ ಚಿದಂಬರ ದೀಕ್ಷಿತರು, ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು, ಅಗಡಿಯ ಶೇಷಾಚಲ ಸದ್ಗುರುಗಳು, ಗದುಗಿನ ಶ್ರೀ ಶಿವಾನಂದರು, ಗರಗದ ಶ್ರೀ ಮಡಿವಾಳಪ್ಪನವರು, ಅವರಾಡಿ ಫಲಾಹಾರ ಸ್ವಾಮಿಗಳು, ವಿಶ್ವಕರ್ಮದ ಪ್ರಭುಸ್ವಾಮಿಗಳು ಹಾಗೂ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಮೊದಲಾದವರೆಲ್ಲಾ ಶರೀಫರ ಸಮಕಾಲೀನರು ಎನ್ನುತ್ತಾರೆ. ಶರೀಫರು ತಮ್ಮ ಕಾವ್ಯಗಳಲ್ಲಿ ಜೀವನದ ನಿತ್ಯ ಘಟನೆಗಳನ್ನೇ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ.
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ | ಗುಡಿಯ ನೋಡಿರಿದು | ಪೊಡವಿಗೆ ಒಡೆಯನು | ಅಡಗಿಕೊಂಡು ಕಡು ಬೆಡಗಿನೊಳಿರುತಿಹ |
ಎಂದು ಹಾಡಿ, ದೇವರನ್ನು ಬಾಹ್ಯದಲ್ಲರಸದೆ ತಮ್ಮ ಅಂತರಂಗದಲ್ಲಿಯೇ ಕಾಣಬೇಕೆಂದು ಬೋಧಿಸಿದರು.
ಸಂಸಾರದಿಂದ ಸದ್ಗತಿ ಹೊಂದಿ |
ಹವಣರಿತು ಮಾಯೆಯ ಜಯಿಸಿ |
ಮರಣ ಗೆಲಿದವನೇ ಶಿವಯೋಗಿ |
ಎಂದು ಒಂದೆಡೆ ಸ್ವಯಂ ಶರೀಫರೇ ಹೇಳಿರುವಂತೆ, ವಿಷಯ ಸುಖದಿಂದ ಜನರ ಲಕ್ಷಣವನ್ನು ಶಿವಯೋಗಿ ಮಾರ್ಗದೆಡೆಗೆ ತಿರುಗಿಸಲು ಶ್ರಮಿಸಿದ ಶಿಶುನಾಳ ಶರೀಫರು ಶರೀಫ ಶಿವಯೋಗಿಗಳೆಂದೇ ಜನಮಾನಸದಲ್ಲಿ ಪ್ರತಿಷ್ಠಾಪಿತರಾದರು.
ಶಿಶುನಾಳ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಒಂದು ಪುಟ್ಟ ಹಳ್ಳಿ. ರೈಲಿನ ಮೂಲಕ ಇಲ್ಲಿಗೆ ಬರುವುದಾದರೆ, ಹುಬ್ಬಳ್ಳಿ- ಬೆಂಗಳೂರು ರೈಲು ಮಾರ್ಗದಲ್ಲಿರುವ ಗುಡಗೇರಿ ನಿಲ್ದಾಣಕ್ಕೆ ಇಳಿದರೆ ಸಾಕು, ಅಲ್ಲಿಂದ ಕೇವಲ 6 ಕಿ.ಮೀ. ದೂರದಲ್ಲಿ ಶರೀಫರ ಶಿಶುನಾಳ. ಫಲವತ್ತಾದ ಎರಿಭೂಮಿ, ಒಂದೆರಡು ಮಳೆ ಬಿದ್ದರೆ ಸಾಕು ಮುತ್ತಿನಂತಹ ಜೋಳ ಬೆಳೆಯುವ ಕಪ್ಪು ನೆಲೆ. ಸಂಪೂರ್ಣ ಬಯಲು ಪ್ರದೇಶ. ಈಗಲೂ ಹೆಚ್ಚೇನು ಬದಲಾವಣೆಗಳಿಲ್ಲದ ಜೀವನ ವಿಧಾನ. ಉತ್ತರ ಕರ್ನಾಟಕದ ಜೀವನ ವಿಧಾನವೇ ತುಂಬ ಭಿನ್ನ. ರೊಟ್ಟಿ, ಹಸಿಹಿಂಡಿ, ಮುಳಗಾಯಿ ಪಲ್ಲೆ ತಿಂದ ಗಟ್ಟಿಗರು ಇಲ್ಲಿಯವರು. ನೇರ, ಒರಟು ಅನ್ನಬಹುದಾದ ಮಾತಿನ ಶೈಲಿ. ಶರೀಫರ ಸಾಹಿತ್ಯ ಇದಕ್ಕೊಂದು ನೇರ ನಿದರ್ಶನ. ಮಾತು ಮುರಿದು, ವಿಚಾರಗಳ ಹುರಿದು, ಚಿಂತನೆಗೆ ಹಚ್ಚುವ ಶರೀಫರ ಹಾಡುಗಳನ್ನು ಕೇಳದವರಿಲ್ಲ, ಹಾಡದವರಿಲ್ಲ.
- ಡಾ.ಗುರುರಾಜ ಪೋಶೆಟ್ಟಿಹಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ