ಸೌರ ಪಂಪ್‌ಸೆಟ್‌ಗಾಗಿ ಜೆಸ್ಕಾಂನಲ್ಲಿ 3.9 ಸಾವಿರ ರೈತರ ನೋಂದಣಿ

Upayuktha
0

ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರದಿಂದ ಶೇ.5 ರಷ್ಟು ಸಬ್ಸಿಡಿ

-ರವಿಂದ್ರ ಕರಿಲಿಂಗಣ್ಣವರ


ಕಲಬುರ್ಗಿ:
ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್‌ ಬಿ ಯೋಜನೆಗೆ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ವ್ಯಾಪ್ತಿಯ 3958 ರೈತರು ನೋಂದಣಿ ಮಾಡಿದ್ದಾರೆ. ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್ ಅಳವಡಿಸಲು ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ.30ರಿಂದ 50ಕ್ಕೆ ಏರಿಸಿದೆ.


ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈವರೆಗೆ ರಾಜ್ಯದ 24 ಸಾವಿರ ರೈತರು ಸೌರಪಂಪ್ ಸೆಟ್ ಪಡೆಯಲು 'ಸೌರಮಿತ್ರ' ವೆಬ್‌ಸೈಟ್/ಯಾಪ್‌ನಲ್ಲಿ ನೋಂದಣಿ ಮಾಡಿದ್ದಾರೆ. ಜೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯಿಂದ 1495 ಅರ್ಜಿಗಳು ಬಂದಿದ್ದು, 293 ಫಲಾನುಭವಿಗಳು ಐಪಿ ಸೆಟ್‌ಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಅರ್ಜಿಗಳು ಮತ್ತು ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ 203 ಅರ್ಜಿಗಳ ಪೈಕಿ 5 ಫಲಾನುಭವಿಗಳು, ಬೀದರ್‌ನಲ್ಲಿ 416 ನೋಂದಾಯಿತರಲ್ಲಿ 30, ಕೊಪ್ಪಳ 438 ನೋಂದಣಿಯಲ್ಲಿ 4 ಐಪಿ ಸೆಟ್‌ಗಳು ರಾಯಚೂರು ಜಿಲ್ಲೆಯಲ್ಲಿ 768 ಅರ್ಜಿಗಳಲ್ಲಿ 67 ಫಲಾನುಭವಿಗಳು ಯಾದಗಿರಿ 423 ನೋಂದಣಿ ಪೈಕಿ 94 ಹಾಗೂ ವಿಜಯನಗರ 215 ಅರ್ಜಿಗಳಲ್ಲಿ 86 ಫಲಾನುಭವಿಗಳು ಐಪಿ ಸೆಟ್‌ಗಳನ್ನು ಹೊಂದಿದ್ದಾರೆ.


ಕುಸುಮ್ ಬಿ:ಕುಸುಮ್ ಬಿ ಯೋಜನೆಯಡಿ, ರೈತರು ತಮ್ಮ ಜಮೀನಿನಲ್ಲಿ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಮೂಲಕ ಸಾಂಪ್ರದಾಯಕ ವಿದ್ಯುತ್ ಮೇಲೆ ಅವಲಂಬನೆ ಕಡಿಮೆ ಮಾಡಲಿದೆ ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್  ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಸೌರ ಪಂಪ್‌ಸೆಟ್ ಬಳಕೆಯಿಂದ 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್  ಪೂರೈಕೆಯಾಗಲಿದೆ. ಇದರಿಂದ ರಾತ್ರಿ ವೇಳೆ ರೈತರು ಕೃಷಿ ಚಟುವಟಿಕೆಗಳಿಗೆ ಪರದಾಡಬೇಕಿಲ್ಲ.


ನೋಂದಣಿ ಹೇಗೆ?-ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್  ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ರೈತರ ನೋಂದಣಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಕಾಲ್ ಸೆಂಟರ್ ಸಂಖ್ಯೆ 080- 22202100. ರೈತರನ್ನು ಯಾಮಾರಿಸುವ ಲಿಂಕ್‌ಗಳು ಹುಟ್ಟಿಕೊಂಡಿದ್ದು, ರೈತರು ಯಾವುದೇ ಗೊಂದಲಗಳು ಕಂಡುಬಂದಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಬಹುದೆಂದು ರವೀಂದ್ರ ಕರಲಿಂಗಣ್ಣವರ, ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ ಕಲಬುರಗಿ ಇವರು ತಿಳಿಸಿದ್ದಾರೆ.


"ಸಬ್ಸಿಡಿ ಹೆಚ್ಚಳದ ನಂತರ ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸೋಲಾರ್ ಪಂಪ್ ಸೆಟ್‌ಗಳ ಬಳಕೆ ಹಾಗೂ ಅದರಿಂದಾಗುವ ಪ್ರಯೋಜನದ ಬಗ್ಗೆ ರೈತರಲ್ಲಿ ಅರಿವು ಮೂಡಿದೆ. ನಮ್ಮ ಸರ್ಕಾರ ಸಬ್ಸಿಡಿ ಹೆಚ್ಚಿಸಿರುವುದರಿಂದ ಹೆಚ್ಚಿನ ರೈತರು ಸೋಲಾರ್ ಪಂಪ್‌ಸೆಟ್ ಕಡೆಗೆ ಒಲವು ಹೆಚ್ಚಿಸುತ್ತಿದೆ. ನಿಬಂಧನೆಗಳನ್ನು ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ನೀಡಲಾಗುತ್ತದೆ". 


"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಕುಸುಮ್ ಬಿ ಯೋಜನೆ ಅಡಿ ನೀರಾವರಿ ಪಂಪ್ ಸೆಟ್‌ಗಳನ್ನು ಅಳವಡಿಸಲು ಸಬ್ಸಿಡಿಗಳನ್ನು ನೀಡುತ್ತಿದೆ. ಎಲ್ಲ ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಿ. ರವೀಂದ್ರ ಕರಲಿಂಗಣ್ಣವರ, ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ ಕಲಬುರ್ಗಿ"

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top