ಯಾವುದೇ ಪ್ರಾಣಿ ಕಚ್ಚಿದರೆ ರೇಬೀಸ್ ಚುಚ್ಚುಮದ್ದು ಪಡೆಯಿರಿ: ಡಾ. ವೈ. ರಮೇಶ್ ಬಾಬು

Upayuktha
0




ಬಳ್ಳಾರಿ: ನಾಯಿ ಕಡಿತ ಸೇರಿದಂತೆ ಯಾವುದೇ ಪ್ರಾಣಿ ಕಡಿತ ಉಂಟಾದಲ್ಲಿ ಕೂಡಲೇ ಸ್ವಚ್ಛ ನೀರಿನಲ್ಲಿ ಸಾಬೂನಿನಿಂದ ತೊಳೆದು ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರೇಬೀಸ್ ಚುಚ್ಚುಮದ್ದು ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಝೂನೋಟಿಕ್ ಖಾಯಿಲೆಯಾಗಿದ್ದ ರೇಬೀಸ್ ರೋಗಕ್ಕೆ 1885 ರ ಜು.06 ರಂದು ಲೂಯಿ ಪಾಸ್ಟರ್ ಮೊದಲ ಲಸಿಕೆಯನ್ನು ಯಶಸ್ವಿಯಾಗಿ ಕಂಡುಹಿಡಿದ ದಿನದ ಸ್ಮರಣಾರ್ಥವಾಗಿ “ವಿಶ್ವ ಪ್ರಾಣಿಜನ್ಯ ರೋಗಗಳ ದಿನ”ವನ್ನು ಆಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.


ಸಾಕಿದ ಅಥವಾ ಬೀದಿ ನಾಯಿಗಳು ಮತ್ಯಾವುದೇ ಪ್ರಾಣಿ ಕಡಿತ ಉಂಟಾದ ಸಂದರ್ಭದಲ್ಲಿ ಸೋಪಿನ ಮೂಲಕ ನೀರಿನಿಂದ ಗಾಯ ಅಥವಾ ಪರಿಚಿದ ಸ್ಥಳವನ್ನು ಸುಮಾರು 15 ನಿಮಿಷಗಳ ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯುವ ಮೂಲಕ ಸಂಭಾವ್ಯ ರೇಬಿಸ್ ಖಾಯಿಲೆಯನ್ನು ಬಾರದಂತೆ ತಡೆಯಬಹುದಾಗಿದೆ ಎಂದರು. ಆರೋಗ್ಯ ಇಲಾಖೆ, ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ನಗರಾಭಿವೃದ್ದಿ ಕೋಶ ಮತ್ತು ಇತರೇ ಇಲಾಖೆಗಳ ಸಹಭಾಗಿತ್ವದೊಂದಿಗೆ ಪ್ರಾಣಿಗಳ ಕಡಿತದಿಂದ ಹರಡುವ ವೈರಸ್ ಮೂಲಕ ಮನುಷ್ಯನ ದೇಹಕ್ಕೆ ರೋಗ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.


ನಾಯಿ ಕಡಿತ ಲಸಿಕೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ನಾಯಿ, ಬೆಕ್ಕು, ಹಂದಿ, ಹಸು ಮುಂತಾದ ಪ್ರಾಣಿಗಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಾಣಿ ಜನ್ಯ ರೋಗಗಳಾದ ರೇಬೀಸ್, ಆಂಥ್ರಾಕ್ಸ್, ಲೆಪ್ಟಾಸ್ಪಿರಾಸಿಸ್, ಜಪನೀಸ್  ಎನ್‍ಸೆಫಲೀಟೀಸ್, ನಿಫಾ, ಹೆಚ್1ಎನ್1, ಬ್ರೂಸೆಲೋಸಿಸ್, ಇನ್‍ಫ್ಲೂಯೆಂಜಾ ಇನ್ನೂ ಮುಂತಾದ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಬಹುದು ಎಂದು ಡಿಹೆಚ್‍ಓ ಡಾ.ವೈ ರಮೇಶ್‍ಬಾಬು ಅವರು ತಿಳಿಸಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ, ಸಾಕಿದ ಅಥವಾ ಬೀದಿ ನಾಯಿಗಳು ಮತ್ತು ಯಾವುದೇ ಪ್ರಾಣಿ ಕಡಿತ ಉಂಟಾದ ಸಂದರ್ಭದಲ್ಲಿ ತಪ್ಪದೇ ರೇಬೀಸ್ ಚುಚ್ಚುಮದ್ದನ್ನು 5 ಡೋಸ್ ಪಡೆಯಬೇಕು. 


ಡೋಸ್  ವಿವರ: 1ನೇ ಡೋಸ್ ಮೊದಲ ದಿವಸ, 2ನೇ ಡೋಸ್ ಮೂರನೇ ದಿವಸ, 3ನೇ ಡೋಸ್ 7ನೇ ದಿವಸ, 4ನೇ ಡೋಸ್ 14ನೇ ದಿವಸ, 5ನೇ ಡೋಸ್ 28ನೇ ದಿವಸ ಪಡೆಯಬೇಕು ಎಂದು ಅವರು ಹೇಳಿದರು. ಸಾಕಷ್ಟು ಸಾರ್ವಜನಿಕರು ಸಾಕು ಪ್ರಾಣಿಗಳಿಗೆ ರೇಬೀಸ್ ಚುಚ್ಚುಮದ್ದನ್ನು ಹಾಕಿಸದೇ ಇರುವುದು ಕಂಡುಬರುತ್ತಿದ್ದು, ರೇಬೀಸ್ ಚುಚ್ಚು ಮದ್ದನ್ನು ತಪ್ಪದೇ ಹಾಕಿಸಬೇಕು ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ವಿನೋದ್ ಕುಮಾರ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಇಲಾಖಾ ಮುಖ್ಯಸ್ಥರು, ವಿಮ್ಸ್‍ನ ಕಮ್ಯುನಿಟಿ ಮೆಡಿಸಿನ್, ಜನೆರಲ್ ಸರ್ಜನ್ ಮತ್ತು ಎನ್.ಆರ್.ಸಿ.ಪಿ ನೋಡೆಲ್  ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top