ಜು.9ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ

Upayuktha
0


ಮಂಗಳೂರು: "ಜುಲೈ 9ನೇ ತಾರೀಕು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) USA ಇದರ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾ ಸರಕಾರದ ಮಾನ್ಯತೆ ಪಡೆದ ಕಾರಣ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯುಎಸ್ಎ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್, ಮುಂತಾದ ಪ್ರಮುಖರು ನಮ್ಮ ಯಕ್ಷಗಾನ ತಂಡದ ಕಾರ್ಯಕ್ರಮಗಳನ್ನು ಅಮೇರಿಕಾದ 20 ರಾಜ್ಯಗಳ ಮುಖ್ಯ  ನಗರಗಳಲ್ಲಿ ನಿಶ್ಚಯಿಸಿರುತ್ತಾರೆ" ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


"ತಂಡದಲ್ಲಿ ಹಿಮ್ಮೇಳದ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಪ್ರೊ.ಎಂಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಹೀಗೆ ಒಂಬತ್ತು ಮಂದಿಯ ತಂಡ ಸುಮಾರು 75 ದಿವಸಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ನಾವು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ" ಎಂದರು.


"ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಬಲು ವಿಜೃಂಭಣೆಯ ಅಕ್ಕ ಸಮ್ಮೇಳನದಲ್ಲಿಯೂ ನಮ್ಮ ಯಕ್ಷಧ್ರುವ ಪಟ್ಲ  ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎನ್ನುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಮುಂತಾದ ಕಡೆ ಪ್ರದರ್ಶನಗೊಂಡು ನಮ್ಮ ಭಾರತೀಯರನ್ನು ರಂಜಿಸಲಿದ್ದೇವೆ" ಎಂದು ಹೇಳಿದರು.


ಪ್ರೊ. ಎಂ.ಎಲ್. ಸಾಮಗ ಮಾತನಾಡಿ, "ಕಳೆದ 2023ರ ಜೂನ್ ಜುಲೈ ತಿಂಗಳಲ್ಲಿ ನಮ್ಮ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಇವರ ನೇತೃತ್ವದಲ್ಲಿ ನಮ್ಮ ತಂಡವು ಯುರೋಪ್ ಖಂಡದ ಲಂಡನ್, ಸ್ಕಾಟ್ಲ್ಯಾಂಡ್, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್,  ಪ್ಯಾರಿಸ್ ಮುಂತಾದ ಕಡೆ ಕಾರ್ಯಕ್ರಮಗಳನ್ನು ನೀಡಿ ವಿದೇಶಿಗರಿಗೂ, ಭಾರತೀಯರಿಗೂ, ಕೆಲವು ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೂ ಯಕ್ಷಗಾನದ ಕಲೆಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಅಲ್ಲಿನ ಲೀಡ್ಸ್ ಹಾಗೂ ಡರ್ ಹಮ್ ಯುನಿವರ್ಸಿಟಿಗಳಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಯೋಗ ಮತ್ತೆ ಕ್ರೀಡೆಗಳಲ್ಲೂ ಕಲೆ ಯಾವ ರೀತಿ ನಂಟು ಹೊಂದಿದೆ ಎಂಬುದನ್ನು ತೋರ್ಪಡಿಸಿ ಅಲ್ಲಿಯ ಯುನಿವರ್ಸಿಟಿಗಳ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿ ಬೇರೆ ಬೇರೆ ದೇಶದಿಂದ ಬಂದಂತಹ ಆ ವಿದ್ಯಾರ್ಥಿಗಳಿಂದಲೂ ನಮ್ಮ ಕಲೆಯ   ಪ್ರದರ್ಶನವನ್ನು ಏರ್ಪಡಿಸಿತ್ತು" ಎಂದರು.


ಪತ್ರಿಕಾಗೋಷ್ಠಿಯಲ್ಲಿ, ಪ್ರೊ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top