ವ್ಯಾಸಪೀಠ -6: ಶ್ರೀವಿದ್ಯಾಸಾಗರ ಮಾಧವತೀರ್ಥರ ತಿಳಿ ಗೀತೆಗಳು 'ಅಮೃತದರ್ಶನ'

Upayuktha
0


ಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಕೋಲಾರ ಜಿಲ್ಲೆ ಮುಳಬಾಗಿಲು ಸಮೀಪದ ತಂಬಿಹಳ್ಳಿಯ  ಶ್ರೀಮನ್ ಮಾಧವ ತೀರ್ಥರ ಮಠದ ಪ್ರಸ್ತುತ ಮಠಾಧೀಶರಾದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರಿಂದ ರಚಿತವಾದ ಅಂತರಂಗ ತಿಳಿ ಗೀತೆಗಳು ಕೃತಿ ಸ್ಪೂರ್ತಿದಾಯಕವಾಗಿದೆ.


ಶ್ರೀಗಳು ಪೂರ್ವಾಶ್ರಮದಲ್ಲಿ ಪ್ರಸಿದ್ಧ ಸಂಶೋಧಕರು, ವಿದ್ವತ್ ಕವಿಗಳು, ಆಂಧ್ರಪ್ರದೇಶದ ಕರ್ನೂಲಿನ ಸರ್ಕಾರಿ ಪದವಿ ಕಲಾ ಶಾಲೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.


ತೆಲುಗಿನ ತೇಟಗೀತಿ ಛಂದಸನ್ನು ಕನ್ನಡ ಭಾಷೆಗೆ ಅಳವಡಿಸಿ ನಿತ್ಯವೂ ಅವರ ಹೃದಯಾನ್ತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರರೂಪವನ್ನು ಕೊಟ್ಟು ಇದುವರೆಗೂ ಬರೆದ ಕವನಗಳು 2,000ಕ್ಕೂ ಮೇಲ್ಪಟ್ಟಿವೆ.


ಅತ್ಯಂತ ಸಾತ್ವಿಕರು, ಆಚಾರವಂತರು, ಶಿಷ್ಯ ವಾತ್ಸಲ್ಯರು ಆದ ಶ್ರೀಗಳಿಗೆ ಎಲ್ಲ ಸ್ಥಾನಮಾನಗಳು ಬಯಸದೇ ಬಂದ ಭಾಗ್ಯವಾಗಿದೆ.ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಮಾಧವತೀರ್ಥ ಮಠದ ಪೀಠಾಧಿಪತ್ಯ ವಹಿಸುವ ಸುಯೋಗ ಒದಗಿಬಂದದ್ದು ಯೋಗಾಯೋಗವೇ ಸರಿ.

ಸೋಸಲೇ ವ್ಯಾಸರಾಜ ಮಠದ ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಆಪ್ತ ಶಿಷ್ಯರಾಗಿ ಶ್ರೀ ವಿದ್ಯಾ ಪ್ರಸನ್ನತೀರ್ಥರ ನಂತರ 40 ವರ್ಷಗಳಾದ ಮೇಲೆ ಹರಿದಾಸ ಸಾಹಿತ್ಯ ಚಂದನದ ಧೃಮ ಬರಡಾಗಿಲ್ಲವೆಂದು ತೋರುತ್ತಾ ನೂತನ ಪ್ರಕ್ರಿಯೆಯಲ್ಲಿ ಶ್ರೀಗಳ ಅಂತರಂಗ ತಿಳಿಗೀತೆಗಳ ರೂಪದಲ್ಲಿ ಚಿಗುರಿತು. ಅವರ ಕವನ ಕೃಷಿಯಲ್ಲಿ ಸ್ಪರ್ಶಿಸದ ವಿಷಯಗಳೇ ಇಲ್ಲ.


ಸಂಪ್ರದಾಯ ಪ್ರವರ್ತಕರಾದ ಕಂಬಾಲೂರು ರಾಮಚಂದ್ರ ತೀರ್ಥರ ವಂಶಿಕರಾದ ಶ್ರೀಗಳು ಪೂರ್ವಾಶ್ರಮದಲ್ಲಿ ಕಟ್ಟುನಿಟ್ಟಾಗಿ ಸ್ವಯಂಪಾಕ ನಿಯಮವನ್ನು ನಡೆಸಿಕೊಂಡು ಬಂದವರು. ನಿತ್ಯ ನೈವೇದ್ಯಕ್ಕೆ ಎಲ್ಲ ಪದಾರ್ಥಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. 37 ವರ್ಷ ಸರ್ಕಾರಿ ನೌಕರಿ ಮಾಡಿದರು ಈ ದೀಕ್ಷೆಯನ್ನು ಮಾತ್ರ ಬಿಟ್ಟಿರಲಿಲ್ಲ. ಆಶ್ರಮದ ನಂತರ ಅನಿವಾರ್ಯವಾಗಿ ಪಾಚಕರ ಅಡುಗೆ, ಸ್ವೀಕರಿಸಬೇಕಾದ ಪ್ರಸಂಗ. ಅದನ್ನು ಶ್ರೀಗಳು 'ಸ್ವಪಚ ಪಾಚಕರ ಅಡಿಗೆ ಬಿಡಿಸು'ಎಂಬ ಕವನದಲ್ಲಿ ಭಗವಂತನಿಗೆ ಬಿನ್ನಹ ಮಾಡಿಕೊಂಡಿದ್ದಾರೆ.


ಶ್ರೀಗಳು ಭಗವಂತನ ಸ್ತೋತ್ರಗಳು,ಪ್ರಮೇಯ ಭಾಗಗಳ ಕುರಿತು ಮನಮುಟ್ಟುವಂತೆ ಅತ್ಯಂತ ಹೃದಯಂಗಮಯವಾಗಿ ಕವನ ರಚನೆ ಮಾಡಿದ್ದಾರೆ. ಅದೊಂದು ಸಾಹಿತ್ಯದುಕ್ತಿ ಪೂಜೆ ಎಂದು ತಿಳಿಸುತ್ತಾರೆ.


ಕಂಬಾಲೂರು ವೆಂಕಟೇಶಾಚಾರ್ಯರಾಗಿ ಕರ್ನೂಲ್ ನಲ್ಲಿ 1997 ನೇ ಇಸ್ವಿಯಲ್ಲಿ  ನಡೆದ 19ನೇ ಅಖಿಲ ಭಾರತ ತತ್ವಜ್ಞಾನ ಸಮ್ಮೇಳನದಲ್ಲಿ ಪೀಠಾಧಿಪತಿಗಳು, ಪಂಡಿತರು, ಲೌಕಿಕ ಜನರು ಆಲೋಚನೆ ಮಾಡುವಂತಹ ಮಹತ್ವದ ಅಧ್ಯಕ್ಷ ಉಪನ್ಯಾಸವನ್ನು ಮಾಡಿ ಮಾದರಿ ಎನಿಸಿದ್ದಾರೆ.


ಶ್ರೀಗಳ ಪೂರ್ವಾಶ್ರಮದಲ್ಲಿ ಸ್ಥಾಪಿಸಲ್ಪಟ್ಟ ವ್ಯಾಸ ಪೀಠ ಪ್ರತಿಷ್ಠಾನ, ವ್ಯಾಸ -ಮಧ್ವ ಸಿದ್ದಾಂತವನ್ನು ಪ್ರಚಾರ ಮಾಡುವ ಮಹತ್ ಕಾರ್ಯದಲ್ಲಿ ಕಳೆದೆರಡು ದಶಕದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ.


ರಾಮಗಾನ, ಬಾಲಕೃಷ್ಣ ಲೀಲಾ ಚತು ಷಷ್ಠಿ ಪದ್ಯಮಾಲ, ಬ್ರಹತಿ ಸಹಸ್ರ ನಾಮಾನುಸಾರೀ ಕೇಶವನಾಮ, ಪಂಚಾಶತ್ ಪವಮಾನಸ್ತವನ, ಸಮಾಸ ವ್ಯಾಸರಾಜೀಯ ಎಂಬ ಐದು ಕವನಗಳನ್ನು ಸಂಗ್ರಹಿಸಿ 'ಐದು ತುಳಸಿ ದಳಗಳು' ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.


ಜ್ಞಾನಸಾಗರ ಮಾಧವಾಂಕಿತದಲ್ಲಿ ಮಾಧವತೀರ್ಥ ಮಠದ ಉಪಾಸ್ಯ ಮೂರ್ತಿ ಶ್ರೀ ವೀರ ರಾಮದೇವರ ದಿವ್ಯ ಮಂದಹಾಸ ದರ್ಶನದ ಅನುಭೂತಿಯನ್ನು ಅಕ್ಷರರೂಪವಾಗಿ 'ಎಷ್ಟು ಚೆಲುವನೋ ರಾಮ ನೀನೆಷ್ಟು ಚೆಲುವ' ಎಂಬ ಸುಂದರ ತಿಳಿಗೀತೆ ಹೊರಹೊಮ್ಮಿದೆ.


ನಾಲ್ಕು ವೇದಗಳಿಗೆ ಭಾಷ್ಯಕಾರರಾದ ಶ್ರೀಮನ್ ಮಾಧವ ತೀರ್ಥ ಪೀಠಕ್ಕೆ ಇವರು ನಿಯುಕ್ತಿಗೊಂಡಿದ್ದು ಶ್ರೀ ವ್ಯಾಸರಾಜರ ಬಗ್ಗೆ ಇವರಿಗಿರುವ ಭಕ್ತಿ ಪ್ರಪತ್ತಿಗಳ ಪ್ರತೀಕವಾಗಿದೆ.


ಶ್ರೀಗಳವರಿಗೆ ಮಹಾಭಾರತವೆಂದರೆ ಅಚ್ಚುಮೆಚ್ಚಿನ ವಿಷಯ. ಮಹಾಭಾರತದ ಸಂಶೋಧಕರಾಗಿ, ಸಂಸ್ಕೃತ- ತಮಿಳು -ಕನ್ನಡ- ಆಂಧ್ರ ಭಾಷೆಗಳಲ್ಲಿ ಮಹಾಭಾರತ ಗ್ರಂಥಗಳನ್ನು ಅಧ್ಯಯನ ಮಾಡಿ ಪ್ರೌಢ ಪ್ರಬಂಧ  ಸಲ್ಲಿಸಿ ಪಿ ಎಚ್ ಡಿ ಡಾಕ್ಟರೇಟ್  ಗಳಿಸಿರುತ್ತಾರೆ.


ಮಹಾಭಾರತದ ಅಧ್ಯಯನದ ಉದಾತ್ತ ಛಾಯೆ ಇವರ ತಿಳಿ ಗೀತೆಗಳಲ್ಲಿ ವಿಫುಲವಾಗಿ ಕಾಣಬಹುದು. ತಾಳುವಿಕೆಗಿಂತ ತಪವಿಲ್ಲ ಎಂಬ ಮಾತು ಶ್ರೀಗಳಲ್ಲಿ ಸಾರ್ಥಕವಾಗಿದೆ. ನಿರ್ಣಯಾನುಸಾರಿ ಸಂಗ್ರಹ ರಾಮಾಯಣವನ್ನು'ರಾಮ ರಾಮನಮೋಸ್ತುತೇ ಪ್ರೇಮಧಾಮ /ವೀರ ರಾಮನಮೋಸ್ತುತೆ ವಿಶ್ವಧಾಮ' ಎಂಬ ಪಲ್ಲವಿಯಿಂದ ಸುಂದರವಾದ 32 ತಿಳಿ ಗೀತೆಗಳ ರಚನೆಯ ಜೊತೆಗೆ 'ಸಮಾಸ ವ್ಯಾಸರಾಜೀಯ'ವೆಂಬ 45 ಪದ್ಯಗಳಲ್ಲಿ ವ್ಯಾಸರಾಜರ ಇತಿಹಾಸವನ್ನು ಅಪೂರ್ವವಾಗಿ ರಚನೆ ಮಾಡಿದ್ದಾರೆ.


ಶ್ರೀಗಳು ಸಾಧಾರಣ ಪಾಮರ ಜನರನ್ನು ಆದರ ಮಾಡಿದಷ್ಟು ದುರಹಂಕಾರಿಗಳಾದ ಶ್ರೀಮಂತರನ್ನು, ವಿದ್ವಾಂಸರನ್ನು ಆದರಿಸುವುದಿಲ್ಲ. ಅಹಂಕಾರ ಅವರಿಗೆ ಅಲರ್ಜಿ. ಇದರ ಬಗ್ಗೆ ಬಹು ಕಟುವಾಗಿ ವಿಮರ್ಶೆ ಮಾಡಿ 'ನಾನು ನಾನೆಂಬುದು ಕೊನೆಗೆ ನರಕದುರಿ 'ಎನ್ನುತ್ತಾ 'ಹಮ್ಮು ಹುಟ್ಟಿದಾಗಲೇ ಕಿಚ್ಚು ಹಚ್ಚಿ ಅಳಿಸು 'ಎಂದು ಎಚ್ಚರಿಸುತ್ತಾರೆ.


ಸಹಸ್ರಚಂದ್ರ ದರ್ಶನ ಪೂರೈಸಿ ಸಾಧನ ಪಥದಲ್ಲಿ ಈ ನವಯುಗದ ವಿಕ್ಷುಬ್ದ ವಾತಾವರಣದಲ್ಲಿ ಚೈತನ್ಯಪೂರ್ಣವಾದ  ಧಾರ್ಮಿಕ ಜೀವನ ನಡೆಸುತ್ತಿರುವ ಸಾಧಕ ಶ್ರೇಷ್ಠರ ನುಡಿಗಳು ನಿಜಕ್ಕೂ ಕಣ್ತರೆಸುವಂತದು.


 ಸಾಧಕರ ಸುತನಾದ ತಾ ಮಧುಕರದಿ

 ಓದಿಬೋಧಕನಾದ ಪ್ರಮೋದ ತತ್ವ 

 ವಾದದನುವಾದ ವಾಗ್ಮಯವಾದಿಯಾದ  

 ಸಾಧನಾತ್ಮಕ ಜೀವನ ಸಭ್ಯನಾದ

 ಮಧ್ವ ಮಾಧವ ರಿವರನ್ನು ಮನೆಯ ಬಡಿಸಿ  

 ಭಿಕ್ಷುಕನ ಮಾಡಿ ಇವನಾಟ ವೀಕ್ಷಿಸುವರು 

 ಜ್ಞಾನ ಸಾಗರ ಮಾಧವ ಮೌನಿ ಇವನು 

 ಮಧ್ವಮಾಧವ ಪದ ಪದ್ಮ ಮಧುಪನಿವನು 


ಕೃತಿಯ ಹೆಸರು: ಜ್ಞಾನಸಾಗರ ಮಾಧವಾಂಕಿತ ಶ್ರೀ ವಿದ್ಯಾಸಾಗರ ಮಾಧವತೀರ್ಥರ ಅಮೃತ ದರ್ಶನ ಅಂತರಂಗ ತಿಳಿ ಗೀತೆಗಳು 


 ಸಂಪಾದಕ: ಕಂಬಾಲೂರು ಸಮೀರಾಚಾರ್ಯ 

 ಪ್ರಕಾಶನ: ಶ್ರೀ ಕಂಬಾಲೂರು ವ್ಯಾಸ ಪೀಠ ಪ್ರತಿಷ್ಠಾನಂ, ಮುಳಬಾಗಿಲು 

 ಪುಟಗಳು :147 

 ಪ್ರತಿಗಳಿಗೆ ಸಂಪರ್ಕಿಸಿ :96067 66824


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top