ವಸಿಷ್ಠರ ಪತ್ನಿ ಅರುಂಧತಿ. ಮದುವೆಯ ಸಮಯದಲ್ಲಿ ಅರುಂಧತಿ ನಕ್ಷತ್ರವನ್ನು ತೋರಿಸಿ ಪತಿಯು ವಸಿಷ್ಠ ಮತ್ತು ಅರುಂಧತಿಯರಂತೆ ಅನುರೂಪ ದಾಂಪತ್ಯವನ್ನು ಮಾಡೋಣ ಎಂದು ಭರವಸೆಯನ್ನು ಪತ್ನಿಗೆ ನೀಡುತ್ತಾನೆ. ಋಷಿ ಪತ್ನಿಯೊಬ್ಬಳಂತೆ ತಮ್ಮ ದಾಂಪತ್ಯವಿರಲಿ ಎಂದು ಪ್ರತಿಯೊಬ್ಬ ಪತಿಯು ಪತ್ನಿಗೆ ಹೇಳುವಷ್ಟು ಪಾತಿವ್ರತ್ಯ ಸೌಮ್ಯ ಮತ್ತು ಅನುಕರಣೀಯ ಸ್ವಭಾವ ದೇವಿ ಅರುಂಧತಿ ಯದ್ದಾಗಿತ್ತು.
ಋಗ್ವೇದದಲ್ಲಿ ಅತ್ಯುತ್ತಮ ಸ್ತ್ರೀಯರ ಉದಾರಣೆಯಲ್ಲಿ ಅರುಂಧತಿ ದೇವಿಯ ಉಲ್ಲೇಖವು ಕೂಡ ಬರುತ್ತದೆ. ವೈದಿಕ ಮದುವೆಯಲ್ಲಿ ಸಂಜೆಯ ಸಮಯದಲ್ಲಿ ಅರುಂಧತಿ ನಕ್ಷತ್ರ ದರ್ಶನವು ಬಹು ದೊಡ್ಡ ಮಹತ್ವವನ್ನು ಇಂದಿಗೂ ಪಡೆದಿದೆ. ಸ್ತ್ರೀಯರ ಗುಣ ಸ್ವಭಾವ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿದ್ದ ಅರುಂಧತಿ ದೇವಿಯು ಕರ್ದಮ ಪ್ರಜಾಪತಿ ಮತ್ತು ದೇವಹೂತಿಯರ 9 ಜನ ಹೆಣ್ಣು ಮಕ್ಕಳಲ್ಲಿ 8ನೇ ಪುತ್ರಿಯಾಗಿದ್ದಾಳೆ. ಅರುಂಧತಿ ದೇವಿಯು ಶಾಂತ, ಸೌಮ್ಯ, ಕರುಣಾಮಯಿ ಅಷ್ಟೇ ಅಲ್ಲದೇ ಜ್ಞಾನಿಯೂ ಆಗಿದ್ದಳು. ಹೀಗಾಗಿ ಸಪ್ತರ್ಷಿ ಮಂಡಲದಲ್ಲಿ ಋಷಿಗಳ ಜೊತೆಗೆ ಅರುಂಧತಿಯ ವಾಸವೂ ಇದೆ.
ಅರುಂಧತಿ ದೇವಿಯ ಪೂರ್ವ ಜನ್ಮದಲ್ಲಿ ಬ್ರಹ್ಮ ದೇವರ ಮಾನಸಪುತ್ರಿ ಸಂಧ್ಯಾದೇವಿಯಾಗಿದ್ದಳು. ಅವಳ ಜನ್ಮವು ಬ್ರಹ್ಮ ದೇವರ ಮೆದುಳಿನ ಭಾಗದಿಂದ ಆಗಿದೆ ಎಂದು ಹೇಳುತ್ತಾರೆ. ಸಂಧ್ಯಾದೇವಿಯ ಹುಟ್ಟಿನ ನಂತರ ಬ್ರಹ್ಮದೇವರ ಮನದಲ್ಲಿ ಕಾಮವಾಸನೆ ಭಾವನೆ ಉತ್ಪತ್ತಿಯಾಯಿತು, ಅದೇ ಸಮಯದಲ್ಲಿ ಸಂಧ್ಯಾದೇವಿಗೂ ಬ್ರಹ್ಮನ ಬಗೆಗೆ ಆಕರ್ಷಣೆಯುಂಟಾಯಿತು. ಆಗ ತನ್ನ ಮನದ ತಪ್ಪನ್ನು ತಿಳಿದ ಸಂಧ್ಯಾ ದೇವಿ ಲಜ್ಜಿತಳಾದಳು. ಹೀಗಾಗಿ ಅವಳು ತನ್ನ ದೇಹವನ್ನು ಪವಿತ್ರಗೊಳಿಸುವ ಸಲುವಾಗಿ ಅಗ್ನಿಗೆ ಆಹುತಿಯಗಲು ನಿರ್ಧರಿಸಿ ತಪಸ್ಸನ್ನು ಆಚರಿಸಲು ಆರಂಭಿಸಿದಳು. ಸಂಧ್ಯಾದೇವಿಯು ಮಗುವಿಗೆ ಹುಟ್ಟಿನ ತಕ್ಷಣ ಕಾಮ ವಾಸನೆಯ ಭಾವನೆಯು ಬರದೇ ಇರುವಂತೆ ನಿಯಮವನ್ನು ತರುವುದನ್ನು ಯೋಚಿಸಿ, ಮಗು ಹುಟ್ಟಿ ಬೆಳೆದು ಅವಳಿಗೆ ಪ್ರಬುದ್ಧತೆ ಬರುವವರೆಗೂ ಇಂತಹ ಭಾವನೆ ಬರದಂತೆ ವರವನ್ನು ಬೇಡುವ ಸಲುವಾಗಿ ಚಂದ್ರಭಾಗ ಎಂಬ ಪರ್ವತದಲ್ಲಿ ಭಗವಂತನನ್ನು ಕುರಿತು ತಪಸ್ಸು ಆಚರಿಸಲು ಆರಂಭಿಸಿದಳು.
ಆ ಸಮಯದಲ್ಲಿ ವಸಿಷ್ಠರು ಆ ಪರ್ವತ ಬಳಿ ಬಂದರು, ಅವರು ಸಂಧ್ಯಾದೇವಿಗೆ ತಪಸ್ಸಿನ ಕಾರಣವನ್ನು ಕೇಳಿದರು, ವಸಿಷ್ಠರು ಸಂಧ್ಯಾದೇವಿಗೆ "ಓಂ ನಮೋ ಭಗವತೇ ವಾಸುದೇವಾಯ ಮಂತ್ರ"ದ ಉಪದೇಶವನ್ನು ಮಾಡಿದರು. ಅವಳು ಚತುರ್ಯುಗ ಪರ್ಯಂತ ತಪಸ್ಸನ್ನಾಚರಿಸಿದ ನಂತರ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ವರವನ್ನು ಬೇಡಿದಾಗ 3 ವರಗಳನ್ನು ಕೇಳಿದಳು. ಮೊದಲನೆಯದಾಗಿ ಮಕ್ಕಳ ಮನದಲ್ಲಿ ಹುಟ್ಟಿದ ತಕ್ಷಣ ಕಾಮವಾಸನೆಯ ಭಾವವು ಬರಬಾರದು, ಸರಿಯಾದ ಸಮಯಕ್ಕೆ ಅಂದರೆ ಯವ್ವನದಲ್ಲಿ ಕಾಮ ಭಾವನೆಯು ಬರಬೇಕು ಎಂಬುದು ಮೊದಲನೆಯ ವರ. ಎರಡನೆಯ ವರವಾಗಿ ಅವಳು ಪ್ರಪಂಚದ ಪತಿವ್ರತಾ ಸ್ತ್ರೀಯರಲ್ಲಿ ಸರ್ವ ಶ್ರೇಷ್ಠಳಾಗಬೇಕು ಎಂದು ಮತ್ತು ಕೊನೆಯದಾಗಿ ತನಗೆ ಪತಿಯನ್ನು ಬಿಟ್ಟು ಬೇರೆಡೆ ಎಂದಿಗೂ ಆಕರ್ಷಿತಳಾಗಬಾರದು ಎಂಬ ವರಗಳನ್ನು ಕೇಳಿದಳು. ಅವಳ ಮೂರು ವರಗಳನ್ನು ನೀಡಿದ ಭಗವಂತನು ಜೀವನದ ಮೂರನೇ ಅವಸ್ಥೆಯಾದ ಯೌವ್ವನದಲ್ಲಿ ಕಾಮಭಾವನೆ ಬರಲಿ ಎಂಬ ಆಶೀರ್ವಾದವನ್ನು, ಮುಂದಿನ ಜನ್ಮದಲ್ಲಿ ವಸಿಷ್ಠರ ಪತ್ನಿಯಾಗೆಂದು, ಪತಿವ್ರತಾ ಶ್ರೇಷ್ಠಳಾಗೆಂದು ಆಶೀರ್ವಾದವನ್ನು ಮಾಡಿದನು.
ಅರುಂಧತಿ ಎಂದರೆ ಎಂದೂ ಅಳದೇ ಇರುವ ಎಂಬ ಅರ್ಥವನ್ನು ನೀಡುತ್ತದೆ. ಸಣ್ಣ ಮಗುವಿದ್ದಾಗಲೂ ಯಾವುದೇ ತಪ್ಪನ್ನು ಮಾಡದೇ ಇದ್ದ ಅರುಂಧತಿ ಎಂದಿಗೂ ಅತ್ತೇ ಇಲ್ಲ. ಅರುಂಧತಿ ದೇವಿ ತನ್ನ ಧರ್ಮವನ್ನು ಬಿಡದೇ ನಿರಂತರ ಧರ್ಮ ಪರಾಯಣಳಾದ ಕಾರಣ ತನ್ನ 7ನೆ ವಯಸ್ಸಿನಲ್ಲಿಯೇ ತನ್ನ ತಂದೆಯ ಆಶ್ರಮ ಪ್ರದೇಶವಾದ ತಪಸಾರಾಣ್ಯವನ್ನು ಪವಿತ್ರಗೊಳಿಸಿದಳು.
ಮುಂದುವರೆಯುವುದು......
ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ