ಉಜಿರೆ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2024- 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜು.8ರಂದು ನಡೆಯಿತು.
ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ (ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ಸ್ವಯಂಸೇವಕ), ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು.
ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, “ಒಳ್ಳೆಯತನ, ಮಾನವೀಯತೆ ಇದ್ದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ” ಎಂದರು.
"ನನ್ನ ಕಾಲೇಜು ದಿನಗಳು ಹಲವಾರು ನೆನಪುಗಳನ್ನು ಕೊಟ್ಟಿವೆ. ಬದುಕಿಗೆ ಹಲವು ಪಾಠಗಳನ್ನು ಕಲಿಸಿಕೊಟ್ಟಿವೆ. ಉಜಿರೆ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕ ನನ್ನನ್ನು ಬೆಳೆಸಿದೆ, ಬದುಕನ್ನು ಕಲಿಸಿದೆ" ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. “ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಈ ವಾಸ್ತವ ಜಗತ್ತಿನಲ್ಲಿ ಸಮಾಜಮುಖಿಗಳಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ” ಎಂದರು.
ಸೇವೆ ಎನ್ನುವುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು. ‘ನನಗಲ್ಲ ನಿನಗೆ’ ಎನ್ನುವ ಧ್ಯೇಯವಾಕ್ಯದಡಿ ಎನ್.ಎಸ್.ಎಸ್. ಘಟಕ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ನೂತನ ಸ್ವಯಂಸೇವಕ ನಾಯಕರಿಗೆ ಹಿರಿಯ ಸ್ವಯಂಸೇವಕರು ಅಧಿಕಾರ ಹಸ್ತಾಂತರಿಸಿದರು. ಸ್ವಯಂಸೇವಕರಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ, ನೂತನವಾಗಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಡಾ. ಮಾಧವ್ ಎಂ.ಕೆ. ನೆರವೇರಿಸಿದರು.
ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿ ಶ್ವೇತಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ