ಜಗನ್ನಾಥಸ್ವಾಮಿ- ನಯನ ಪಥಗಾಮಿ

Upayuktha
0

 ಜುಲೈ 7 ಪುರಿ ಜಗನ್ನಾಥ ರಥಯಾತ್ರೆ 



ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯಾದಿಂದ ಆಷಾಢ ಶುಕ್ಲ ದಶಮಿಯವರೆಗೆ ರಥೋತ್ಸವ ನಡೆಯುತ್ತದೆ. ಈ ವರ್ಷದ ರಥೋತ್ಸವ ಜುಲೈ 6 ಕ್ಕೆ ಆರಂಭಗೊಳ್ಳಲಿದೆ. ಮುಂದೆ ಬಲಭದ್ರ (ತಲಧ್ವಜ ರಥ) ಹಿಂದೆ ಜಗನ್ನಾಥ (ನಂದಿಘೋಶ ರಥ) ರಕ್ಷಣೆಯಲ್ಲಿ ಮಧ್ಯದಲ್ಲಿ ಸುಭದ್ರಾ (ದರ್ಪದಲನ ರಥ) ರಥಯಾತ್ರೆ ಸಾಗುತ್ತದೆ. ರಥಯಾತ್ರೆಯ ಮರುದಿನ ಜಗನ್ನಾಥ ಗುಂಡಿಚಾ ಮಂದಿರ ತಲುಪುತ್ತಾನೆ. ಮುಂದಿನ ಒಂಭತ್ತು ದಿನಗಳ ಕಾಲ ಈ ಮಂದಿರದಲ್ಲಿ ನಡೆಯುವ ಜಗನ್ನಾಥ ದರ್ಶನವನ್ನು ‘ಆಡಪ್ ದರ್ಶನ್’ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷವೂ ಹೊಸ ರಥಗಳನ್ನು ನಿರ್ಮಿಸುವುದು ಇಲ್ಲಿನ ರಥೋತ್ಸವದ ವಿಶೇಷ.


ಪುರಿ ಈ ಪರಿ 

ಜಗನ್ನಾಥ ಜಗದ ಒಡೆಯ. ಆತನನ್ನು ಕಾಣಲು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಲಕ್ಷಾಂತರ ಭಕ್ತಾದಿಗಳು ಪುರಿಗೆ ಆಗಮಿಸುತ್ತಾರೆ, ಜಗನ್ನಾಥನ ದರ್ಶನದಲ್ಲಿ ಧನ್ಯತೆ ಕಾಣುತ್ತಾರೆ. ಆದರೆ ರಥೋತ್ಸವದ ಸಂದರ್ಭದಲ್ಲಿ ಜನಸಾರವೇ ಏರ್ಪಡುತ್ತದೆ ಏಕೆ? ಎಂಬ ಪ್ರಶ್ನೆ ಜನರಿಗೆ ಕಡುವುದುಂಟು. ವರ್ಷದ ಎಲ್ಲ ದಿನಗಳಲ್ಲಿ ಭಕ್ತರು ಜಗನ್ನಾಥನನ್ನು ಕಾಣಲು ಮಂದಿರಕ್ಕೆ ಬಂದರೆ ರಥೋತ್ಸವದ ಸಂದರ್ಭದಲ್ಲಿ ಆ ಕಾನ್ಹಾ ತನ್ನ ಭಕ್ತರೆಡೆಗೆ ಬರುತ್ತಾನೆ, ಜನರ ಬಳಿ ಬರುತ್ತಾನೆ 'ಸಬ್ ಮನಿಸಾ ಮೋರ ಪರಜಾ' (ಎಲ್ಲ ಮನುಷ್ಯರು ನನ್ನ ಪ್ರಜೆಗಳು) ಎಂದು ಹೇಳಿ ಅವರ ಹೃದಯಸಿಂಹಾಸನದಲ್ಲಿ ವಿರಾಜಮಾನನಾಗುತ್ತಾನೆ. 


ಶಾಸ್ತ್ರಗಳೂ ಕೂಡ ಇಲ್ಲಿನ ರಥಯಾತ್ರೆಯ ವರ್ಣನೆಯನ್ನು ಮಾಡಿದ್ದು, ಮಹತ್ವವನ್ನೂ ವಿವರಿಸಿವೆ. ರಥಯಾತ್ರೆಯಲ್ಲಿ ಯಾರು ಜಗನ್ನಾಥನ ನಾಮಸ್ಮರಣೆ ಮಾಡುತ್ತಾ ಗುಂಡಿಚಾ ನಗರದವರೆಗೆ ಸಾಗುತ್ತಾರೋ ಅವರು ಮೋಕ್ಷ ಪಡೆಯುತ್ತಾರೆ ಎಂದು ಸ್ಕಾಂದಪುರಾಣದಲ್ಲಿ ಹೇಳಲಾಗಿದೆ. ಗುಂಡಿಚಾ ಮಂಟಪದಲ್ಲಿ ವಿರಾಜಮಾನರಾಗುವ ಜಗನ್ನಾಥ, ಬಲಭದ್ರ, ಸುಭದ್ರಾ ಮೂರ್ತಿಗಳ ದರ್ಶನ ಮಾತ್ರದಿಂದಲೂ ಮೋಕ್ಷ ಪಾಪ್ತವಾಗುತ್ತದೆ ಎನ್ನಲಾಗಿದೆ. ಪಾಂಡವರು ತಮ್ಮ ಅಜ್ಞಾತವಾಸದ ವೇಳೆ ಜಗನ್ನಾಥನನ್ನು ಪೂಜಿಸಲು ಪುರಿಗೆ ಬಂದಿದ್ದರು ಎಂಬ ಉಲ್ಲೇಖವೂ ಇದೆ. ಇದೇ ನೆನಪಿಗಾಗಿ ಕ್ಷೇತ್ರದಲ್ಲಿ ಪಾಂಡವರ ಮಂದಿರವನ್ನೂ ನಿರ್ಮಿಸಲಾಗಿದೆ.


ಬೇವಿನ ಮರದ ಮೂರ್ತಿ 

ಸಾಮಾನ್ಯವಾಗಿ ದೇವರ ವಿಗ್ರಹ ಕಲ್ಲಿನದ್ದಾಗಿರುತ್ತದೆ. ಅದಲ್ಲದೇ ಹೋದರೆ ಲೋಹದಿಂದ ವಿಗ್ರಹ ಮಾಡುವುದುಂಟು. ದೇವರ ಮೂರ್ತಿಯನ್ನು ಮರದಿಂದ ಮಾಡುವುದು ತೀರ ಅಪರೂಪ. ಜಗನ್ನಾಥನ ಮೂರ್ತಿಯನ್ನು ಬೇವಿನ ಮರದಿಂದ ಮಾಡುತ್ತಾರೆ. ಪ್ರತಿ ಏಳು ವರುಷಗಳಿಗೊಮ್ಮೆ ಆ ಮೂರ್ತಿಯನ್ನು ಬದಲಾಯಿಸುತ್ತಾರೆ. ಪ್ರತಿವರ್ಷ ಒಂದು ತಿಂಗಳ ಕಾಲ ದೇವಸ್ಥಾನಕ್ಕೆ ಯಾರಿಗೂ ಪ್ರವೇಶವಿಲ್ಲ. ಜಾತ್ರೆಯ ಅನಂತರ ಜಗನ್ನಾಥನಿಗೆ ಅಜೀರ್ಣವಾಗಿದೆ ಎಂದು ಹೇಳಿ ದೇವಾಲಯವನ್ನು ಮುಚ್ಚಿಬಿಡುತ್ತಾರೆ. ಆ ಅವಧಿಯಲ್ಲಿ ಅರ್ಚಕರು ಮಾತ್ರ ಒಳಗಿದ್ದುಕೊಂಡು ಮೂರ್ತಿಯ ಆರೈಕೆ ಮಾಡುತ್ತಾರೆ.


ಏಳು ವರುಷಗಳ ಅನಂತರ ಮೂರ್ತಿಯನ್ನು ಬದಲಾಯಿಸಲಾಗುತ್ತದೆ. ಅದಕ್ಕೋಸ್ಕರವೇ ಏಳು ಗುಂಪುಗಳಲ್ಲಿ ಅರ್ಚಕರ ಗುಂಪು ಮೂರ್ತಿಗೆ ತಕ್ಕ ಮರದ ಹುಡುಕಾಟದಲ್ಲಿ ತೊಡಗುತ್ತದೆ. ಮೂರ್ತಿಗೆ ತಕ್ಕ ಮರ ಸಿಗುವ ತನಕ ಹುಡುಕಾಟ ಮುಂದುವರಿಯುತ್ತದೆ. ಆ ಮರದಲ್ಲಿ ಶಂಖ ಚಕ್ರ ಗದಾ ಪದ್ಮಗಳ ಗುರುತಿರಬೇಕೆಂದೂ ಆ ಮರವನ್ನು ಸರ್ಪ ಕಾವಲು ಕಾಯುತ್ತಿರಬೇಕೆಂದೂ ನೂರೆಂಟು ಕಟ್ಟುಪಾಡುಗಳಿವೆ.


ಹೊಸ ಮೂರ್ತಿ ಸಿದ್ಧವಾಗುತ್ತಿದ್ದಂತೆ ಹಳೇ ಮೂರ್ತಿಯನ್ನು ಸಂಸ್ಕಾರ ಮಾಡಲಾಗುತ್ತದೆ. ಅದಕ್ಕೆಂದೇ ಪ್ರತ್ಯೇಕ ಸ್ಮಶಾನವಿದೆ. ಅಲ್ಲಿ ಹಳೇ ಮೂರ್ತಿಯನ್ನು ಹೂಳುತ್ತಾರೆ. ಹೊಸ ಮೂರ್ತಿಯ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.


ವಿಶ್ವಕರ್ಮ ನಿರ್ಮಾಣ 

ಜಗನ್ನಾಥ, ಬಲಭದ್ರ, ಸುಭದ್ರ ಮೂರ್ತಿಗಳು ತಯಾರಾದ ಘಟನೆಯೂ ರೋಚಕವಾಗಿದೆ. ಪವಿತ್ರ ದಾರು ದೊರೆತ ಬಳಿಕವೂ ಯಾವ ಕಲಾವಿದನೂ ವಿಷ್ಣು (ಜಗನ್ನಾಥ) ಮೂರ್ತಿ ತಯಾರಿಕೆಗೆ ಮುಂದೆ ಬರುವುದಿಲ್ಲ. ಆಗ ಸಾಕ್ಷಾತ್ ವಿಶ್ವಕರ್ಮನೇ ವೃದ್ಧನ ವೇಷದಲ್ಲಿ ಬಂದು ತನ್ನ ಷರತ್ತನ್ನು ಒಪ್ಪಿದರೆ ಮಾತ್ರ ಮೂರ್ತಿ ತಯಾರಿಸಿ ಕೊಡುವುದಾಗಿ ಹೇಳುತ್ತಾನೆ. 'ಮೂರು ತಿಂಗಳಲ್ಲಿ ಮೂರ್ತಿ ತಯಾರಿಸಿ ಕೊಡುತ್ತೇನೆ. ಆದರೆ ನಾನು ಮೂರ್ತಿ ತಯಾರಿಸುವ ಮನೆಗೆ ಮೂರ್ತಿ ತಯಾರಾಗುವವರೆಗೂ ಯಾರು ಪ್ರವೇಶಿಸಬಾರದು' ಎಂಬ ಷರತ್ತು ಹಾಕುತ್ತಾನೆ. ಇದಕ್ಕೆ ರಾಜನು ಸಮ್ಮತಿಸಿ ರಾಣಿ ಗುಂಡಿಚಾ ಮಹಲಿನ ಬಳಿಯ ಜಾಗವೊಂದನ್ನು ನೀಡುತ್ತಾನೆ. ಮೂರ್ತಿ ತಯಾರಿಕೆ ಆರಂಭವಾಗುತ್ತದೆ. ಆದರೆ ಕೆಲದಿನಗಳ ನಂತರ ಇದ್ದಕ್ಕಿದ್ದ ಹಾಗೆ ಶಬ್ದ ನಿಂತುಹೋದಾಗ ರಾಣು ಗುಂಡಿಚಾಗೆ ಅನುಮಾನ ಶುರುವಾಗುತ್ತದೆ. ಆ ವೃದ್ಧ ಜೀವಂತವಾಗಿಯಾದರೂ ಇದ್ದಾನೋ ಇಲ್ಲವೋ ಎಂಬ ಅನುಮಾನ ಪರಿಹರಿಸಿಕೊಳ್ಳಲು ಹೋದಾಗ ಮೂರ್ತಿ ತಯಾರಿಕೆ ಜಾಗದಲ್ಲಿ ಆ ವೃದ್ಧ ಇರುವುದಿಲ್ಲ. ಆದರೆ ಅರೆಬರೆಯಾಗಿ ತಯಾರುಗೊಂಡ ಜಗನ್ನಾಥ, ಬಲಭದ್ರ, ಸುಭದ್ರಾ ಮೂರ್ತಿಗಳು ಅಲ್ಲಿರುತ್ತವೆ. ರಾಜ-ರಾಣಿಗೆ ಮುಂದೇನು ಎಂಬ ಚಿಂತೆ ಆವರಿಸಿಕೊಂಡಾಗಲೇ ಆಕಾಶವಾಣಿಯಾಗಿ "ವ್ಯರ್ಥವಾಗಿ ದುಃಖಿಸಬೇಡಿ. ನಾವು ಇದೇ ರೂಪದಲ್ಲಿ ಇರಲು ಬಯಸುತ್ತೇವೆ. ಪೂಜೆಪುನಸ್ಕಾರಗಳ ಮೂಲಕ ಪ್ರತಿಷ್ಠಾಪನೆಗೊಳಿಸಿ" ಎಂಬ ಆದೇಶವಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಇಂದಿಗೂ ಪುರಿ ಕ್ಷೇತ್ರದಲ್ಲಿ ಅರ್ಧಾಕೃತಿಯ ಮೂರ್ತಿಗಳೇ ಪೂಜಿಸಲ್ಪಡುತ್ತಿವೆ. 


ಗುಹೆಯಲ್ಲಿ ನಡೆಯುತ್ತಿತ್ತು ಪೂಜೆ !

ಜಗನ್ನಾಥನು ಪುರಿ ಕ್ಷೇತ್ರದಲ್ಲಿ ಹಿಂದೆ ಪೂಜಿಸಲ್ಪಡುತ್ತಿದ್ದದ್ದು ನೀಲಮಾಧವನ ರೂಪದಲ್ಲಿ! ನೀಲಮಾಧವ ಸಬರ್ ಬುಡಕಟ್ಟು ಜನರ ಅಧಿದೇವತೆ, ಸಬರ್ ಪಂಗಡಕ್ಕೆ ಸೇರಿದ ಜನರು ನೀಲಮಾಧವನನ್ನು ತುಂಬಾ ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಈ ಪಂಗಡದ ನಾಯಕ ದೈತಾಪತಿ ವಿಶ್ವಬಸು ಎಂಬಾತನು ನೀಲಮಾಧವನ ಮೂರ್ತಿಯನ್ನು ಗುಹೆಯೊಂದರಲ್ಲಿ ಪೂಜಿಸುತ್ತಿದ್ದನು ಎಂಬ ಉಲ್ಲೇಖ ಮಹಾಭಾರತದ ವನಪರ್ವದಲ್ಲಿ ಸಿಗುತ್ತದೆ. ಆಗ ಉತ್ಕಲದೇಶವನ್ನು ಆಳುತ್ತಿದ್ದ ರಾಜಾ ಇಂದ್ರದ್ಯುಮ್ನನ ಸ್ವಪ್ನದಲ್ಲಿ ಬಂದ ನೀಲಮಾಧವ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸುವಂತೆ ಹೇಳುತ್ತಾನೆ. ಆದರೆ ಮೂರ್ತಿಯನ್ನು ಶೋಧ ಮಾಡುವುದು ಹೇಗೆ ಎಂಬ ಚಿಂತೆ ರಾಜನಿಗೆ ಕಾಡತೊಡಗಿತು. ಕಡೆಗೂ, ನೀಲಮಾಧವ ಮೂರ್ತಿ ಗುಹೆಯಲ್ಲಿ ಇರುವ ಸಂಗತಿ ತಿಳಿಯಿತು. ಆದರೆ ಅಲ್ಲಿಯವರೆಗೆ ತಲುಪುವುದು ಹಾಗೂ ಮೂರ್ತಿಯನ್ನು ತರುವುದು ತೀರಾ ಕಷ್ಟದ ಸಂಗತಿಯಾಗಿತ್ತು. ಕಾರಣ, ಸಬರ್ ವನವಾಸಿಗಳು ಯಾರನ್ನೂ ಆ ಮೂರ್ತಿ ಬಳಿ ತರಲು ಬಿಡುತ್ತಿರಲಿಲ್ಲ. ರಾಜಾ ಇಂದ್ರದ್ಯುಮ್ನನ ಸೇನಾನಾಯಕ ತಂತ್ರ ರೂಪಿಸಿ ವಿಶ್ವಬಸುವಿನ ಮಗಳನ್ನು ಮದುವೆಯಾಗುತ್ತಾನೆ. ಮದುವೆಯಾದ ಬಳಿಕ ನೀಲಮಾಧವ ದರ್ಶನಕ್ಕೆಂದು ಆ ಗುಹೆಗೆ ಹೋದಾಗ ಮೂರ್ತಿಯು ಇರುವಿಕೆ ಗೊತ್ತಾಗುತ್ತದೆ. ಕಡೆಗೊಂದು ದಿನ ರಾಜನ ಸೂಚನೆಯಂತೆ ಸೇನಾನಾಯಕ ನೀಲಮಾಧವನ ಮೂರ್ತಿಯನ್ನು ಅಲ್ಲಿಂದ ತೆಗೆದುಕೊಂಡು ಬರುತ್ತಾನೆ. ಗುಹೆಯಲ್ಲಿ ನೀಲಮಾಧವನ ಮೂರ್ತಿ ಇಲ್ಲದನ್ನು ಕಂಡು ವಿಶ್ವಬಸು ತೀರಾ ದುಃಖಿತ ಹಾಗೂ ಆತಂಕಿನಾಗುತ್ತಾನೆ. ಅವನ ದುಃಖ, ವ್ಯಥೆಯನ್ನು ಕಂಡು ಸಾಕ್ಷಾತ್ ನೀಲಮಾಧವನೂ ದುಃಖಿತನಾದಂತೆ. ಪುನಾ ರಾಜನ ಸ್ವಪ್ನದಲ್ಲಿ ಕಾಣಿಸಿಕೊಂಡ ನೀಲಮಾಧವ ಆ ಮೂರ್ತಿಯನ್ನು ಮುಂಚಿನ ಸ್ಥಳದಲ್ಲಿ ಇರಿಸುವಂತೆ ಹಾಗೂ ತನ್ನ ಮೂರ್ತಿಯನ್ನು ಪವಿತ್ರದಾರು (ಕಟ್ಟಿಗೆ)ವಿನಿಂದ ನಿರ್ಮಿಸಿ ಪ್ರತಿಷ್ಠಾಪಿಸುವಂತೆ ಸೂಚಿಸಿದ.


ಅದೊಂದು ದಿನ ನೀಲಾಂಚಲ ಸಾಗರದಲ್ಲಿ ಬೃಹತ್ ದಾರುವೊಂದು ತೇಲಿಬರುತ್ತದೆ. ಆದರೆ ಎಷ್ಟೇ ಜನ ಪ್ರಯತ್ನಪಟ್ಟರೂ ಆ ಕಟ್ಟಿಗೆಯನ್ನು ಎತ್ತಲಾಗುವುದಿಲ್ಲ. ಆಗ ರಾಜನು ಸಬರ್ ಜನಾಂಗದ ನಾಯಕ ದೈತಾಪತಿ ವಿಶ್ವಬಸುವನ್ನು ಆ ಸ್ಥಳಕ್ಕೆ ಕರೆಸುತ್ತಾನೆ. ವಿಶ್ವಬಸು ಪ್ರಯತ್ನದಿಂದ ಮೂರ್ತಿ ತಯಾರಿಕೆಗೆ ಪವಿತ್ರ ದಾರು ಲಭ್ಯವಾಗುತ್ತದೆ.


ಕರೆದರೆ ಬರುವ ಕೃಷ್ಣ 

ಪುರಿಯ ಜಗನ್ನಾಥನಂತೂ ಭಕ್ತರದಾಸ. ಆತ ಭಕ್ತರು ಕರೆದಲ್ಲಿಗೆ ಬರುತ್ತಾನೆ. ಪ್ರತಿ ಆಷಾಢ ಶುದ್ಧ ಬಿದಿಗೆಯಿಂದ ಆರಂಭವಾಗುವ ಪುರಿ ಜಗನ್ನಾಥ ರಥಯಾತ್ರೆ ಕೃಷ್ಣ ಭಕ್ತರು ಇದ್ದಲ್ಲಿಗೇ ಬರುವ ಒಂದು ವಿಸ್ಮಯಕಾರಿ ಘಟನೆ.

ಪುರಿ ಜಗನ್ನಾಥನ ಜಾತ್ರೆ ಸಂದರ್ಭದಲ್ಲಿ 9 ದಿನ ಜಗನ್ನಾಥ (ಕೃಷ್ಣ) ಪರಿಶಿಷ್ಟ ಜನಾಂಗಕ್ಕೆ ಸೇರಿದ ಪಾಂಡಾಗಳ ಕೈಯಲ್ಲಿಯೇ ಇರುತ್ತಾನೆ. ವರ್ಷದ ಉಳಿದ ದಿನಗಳಲ್ಲಿ ಈ ಪಾಂಡಾಗಳು (ಆದಿವಾಸಿಗಳು) ಜಗನ್ನಾಥನನ್ನು ಮುಟ್ಟುವಂತಿಲ್ಲ. ಆದರೆ ರಥೋತ್ಸವದ ಸಂದರ್ಭದಲ್ಲಿ ಎಲ್ಲ ಕೈಂಕರ್ಯಗಳನ್ನೂ ಇವರೇ ಮಾಡುತ್ತಾರೆ. ಪುರಿ ಜಗನ್ನಾಥನ ಇನ್ನೊಂದು ವಿಶೇಷ ಎಂದರೆ ಇತರ ಕ್ಷೇತ್ರಗಳಳ್ಲಿ ರಥೋತ್ಸವಕ್ಕೆ ಉತ್ಸವ ಮೂರ್ತಿ ಎಂದು ಬೇರೆಯದೇ ಮೂರ್ತಿ ಇರುತ್ತದೆ. ಅದನ್ನು ರಥದ ಮೇಲೆ ಇಟ್ಟು ರಥವನ್ನು ಎಳೆಯಲಾಗುತ್ತದೆ. ಆದರೆ ಪುರಿಯಲ್ಲಿ ಹಾಗಲ್ಲ ಮೂಲ ಮೂರ್ತಿಯನ್ನೇ ರಥದ ಮೇಲೆ ಇಡಲಾಗುತ್ತದೆ. ರಥೋತ್ಸವ ನಡೆಯುವ ಅಷ್ಟೂ ದಿನ ಜಗನ್ನಾಥ ದೇವಾಲಯದಲ್ಲಿ ಮೂಲ ಮೂರ್ತಿ ಇರುವುದಿಲ್ಲ. ಗರ್ಭ ಗುಡಿಗೆ ಆಗ ಪರದೆ ಇರುವುದಿಲ್ಲ. ಗರ್ಭ ಗುಡಿಗೆ ಪರದೆ ಹಾಕಲಾಗುತ್ತದೆ.


ಪುರಿ ದೇವಾಲಯದಲ್ಲಿ ಹಿಂದೂಗಳಲ್ಲದೆ ಬೇರೆ ಧರ್ಮದವರಿಗೆ ಪ್ರವೇಶವೇ ಇಲ್ಲ. ಆದರೆ ಭಕ್ತರಿಗೆ ದರ್ಶನ ನೀಡುವುದಕ್ಕಾಗಿಯೇ ವರ್ಷದಲ್ಲಿ ಒಮ್ಮೆ ಜಗನ್ನಾಥನ್ನೇ ರಥದ ಮೇಲೆ ಕುಳಿತುಕೊಂಡು ದರ್ಶನ ನೀಡುತ್ತಾನೆ ಎಂದೇ ಭಕ್ತರು ನಂಬುತ್ತಾರೆ. ರಥದಲ್ಲಿರುವ ಜಗನ್ನಾಥನ ದರ್ಶನ ಪಡೆದರೆ ಪುನರ್ ಜನ್ಮ ಇಲ್ಲ ಎಂಬ ನಂಬಿಕೆಯೂ ಇದೆ. ಇತ್ತೀಚಿನ ವರ್ಷದವರೆಗೂ ರಥದ ಮೇಲೆ ಇರುವ ಜಗನ್ನಾಥ ಮೂರ್ತಿಯನ್ನೂ ಅಪ್ಪುವ ಭಾಗ್ಯ ಭಕ್ತರಿಗೆ ಇತ್ತು. ಈಗ ಅದನ್ನು ನಿಲ್ಲಿಸಲಾಗಿದೆ.


ಪಂಡಾಗಳಿಗೆ ಮಾತ್ರ ಜಗನ್ನಾಥ ದರ್ಶನ ನೀಡುವುದಲ್ಲ. ಜಗನ್ನಾಥನ ರಥಯಾತ್ರೆಯಲ್ಲಿ ಎಲ್ಲ ಧರ್ಮದವರೂ ಭಾಗಿಯಾಗುತ್ತಾರೆ. ಜಗನ್ನಾಥನಿಗೆ ಮುಸ್ಲಿಂ ಭಕ್ತರು ಬೇಕಾದಷ್ಟು ಮಂದಿ ಇದ್ದಾರೆ. ಉಡುಪಿಯಲ್ಲಿ ಕನಕದಾಸನಿಗೆ ದರ್ಶನ ನೀಡಿದ ಕತೆ ಇರುವಂತೆಯೇ ಪುರಿಯಲ್ಲಿಯೂ ಹರಿದಾಸ ಠಾಕೂರ್ ಅವರ ಕತೆ ಇದೆ.


ಒಬ್ಬ ಮುಸ್ಲಿಂ ಯುವಕನಿಗೆ ಜಗನ್ನಾಥನ ಮೇಲೆ ಬಹಳ ಭಕ್ತಿ. ಆತ ದಿನಕ್ಕೆ 3 ಲಕ್ಷ ಬಾರಿ ಜಗನ್ನಾಥನ ಜಪ ಮಾಡುತ್ತಿದ್ದನಂತೆ. ಕೃಷ್ಣನ ಜಪ ಮಾಡುತ್ತಾ ತನ್ನ ಜನಾಂಗದ ಜನರಿಗೂ ಜಪ ಮಾಡುವಂತೆ ಪ್ರೇರೇಪಿಸುತ್ತಿದ್ದನಂತೆ. ಇದನ್ನು ನೋಡಿ ಮುಸ್ಲಿಮರಿಗೆ 'ಈತ ನಮ್ಮ ಧರ್ಮದವರನ್ನು ಹಿಂದೂಗಳನ್ನಾಗಿ ಮತಾಂತರ ಮಾಡುತ್ತಿದ್ದಾನೆ' ಎಂಬ ಭಾವನೆ ಬಂದು ಪಂಚಾಯ್ತಿ ಸೇರಿ ಆತನಿಗೆ ಮಾರುಕಟ್ಟೆ ಬಳಿ 21 ಬಾರಿ ಛಡಿ ಏಟಿನ ಶಿಕ್ಷೆ ನೀಡಿದರಂತೆ. 21 ಬಾರಿ ಛಡಿ ಏಟು ನೀಡಿದಾಗ ಆ ಯುವಕ 'ಹೇ ಜಗನ್ನಾಥನೇ ನನಗೆ ಛಡಿ ಏಟು ನೀಡಿ ಇವರೆಲ್ಲಾ ಸುಸ್ತಾಗಿದ್ದಾರೆ. ಆದರೆ ನಾನು ಸಾಯುವವರೆಗೂ ನನಗೆ ಹೊಡೆಯುವುದು ಅವರಿಗೆ ಅನಿವಾರ್ಯ. ಅದಕ್ಕೆ ನನ್ನ ಜೀವ ತೆಗೆದುಕೊ' ಎಂದು ಬೇಡಿಕೊಂಡು ಮೂರ್ಛೆ ಹೋದನಂತೆ. ಅವನು ಸತ್ತಿದ್ದಾನೆ ಎಂದು ನಂಬಿದ ಜನರು ಆತನನ್ನು ನೀರಿಗೆ ಬಿಸಾಡಿದರಂತೆ. ಆದರೆ ಆ ಯುವಕ ಸತ್ತಿರಲಿಲ್ಲ. ಮತ್ತೆ ಬಂದು ಜಗನ್ನಾಥನ ಜಪವನ್ನು ಮುಂದುವರಿಸಿದನಂತೆ.


ಆಗ ಆತನ ಜನಾಂಗದವರು ಇನ್ನೊಂದು ಉಪಾಯ ಮಾಡಿದರಂತೆ. ಒಬ್ಬ ವೇಶ್ಯೆಯನ್ನು ಆತನ ಬಳಿಗೆ ಕಳಿಸಿ ಆತನ ಜಪವನ್ನು ಭಂಗ ಮಾಡುವಂತೆ ಪ್ರೇರೇಪಿಸಿದರಂತೆ. ಒಂದು ದಿನ ಸಂಜೆ ಆತನ ಬಳಿಗೆ ಬಂದ ವೇಶ್ಯೆ ತನ್ನ ಜೊತೆ ಭೋಗ ನಡೆಸುವಂತೆ ಒತ್ತಾಯಿಸಿದಾಗ 'ಆಯ್ತು, ಇಗೋ ಇನ್ನು ಒಂದೆರಡು ಜಪ ಮಣಿಗಳಿವೆ. ಅದನ್ನು ಮುಗಿಸಿ ನಿನ್ನ ಜೊತೆ ಭೋಗಕ್ಕೆ ಬರುತ್ತೇನೆ ಕುಳಿತುಕೋ' ಎಂದು ಹೇಳಿ ಅವಳ ಮುಂದೆಯೇ ಕೃಷ್ಣನ ಜಪದಲ್ಲಿ ತೊಡಗಿದನಂತೆ. ಮರುದಿನ ಬೆಳಗಾದರೂ ಆತನ ಜಪ ಮುಗಿಯಲೇ ಇಲ್ಲವಂತೆ. ಇದು ಇನ್ನೂ ಮೂರು ದಿನ ನಡೆದ ಮೇಲೆ ವೇಶ್ಯೆ ಕೃಷ್ಣ ಭಕ್ತಳಾಗಿ ಬದಲಾಗಿದ್ದಳಂತೆ. 'ನಾನು ಮೊದಲ ದಿನ ಬಂದಾಗಲೇ ಯಾಕೆ ನೀವು ನನ್ನನ್ನು ತಿರಸ್ಕರಿಸಲಿಲ್ಲ' ಎಂದು ಕೇಳಿದ್ದಕ್ಕೆ ಆ ಯುವಕ 'ಅಂದೇ ನಾನು ತಿರಸ್ಕರಿಸಿದ್ದರೆ ನೀನು ಕೃಷ್ಣ ಜಪ ಕೇಳಿಸಿಕೊಳ್ಳುವುದರಿಂದ ವಂಚಿತಳಾಗುತ್ತಿದ್ದೆ' ಎಂದು ಉತ್ತರಿಸಿದನಂತೆ.


 ಆ ಮುಸ್ಲಿಂ ಯುವಕ ಎಲ್ಲೆಂದರಲ್ಲಿ ಕೃಷ್ಣನ ಜಪ ಮಾಡುತ್ತಾ ಕುಳಿತುಬಿಡುತ್ತಿದ್ದನಂತೆ. ಆತನಿಗೆ ಬಿಸಿಲು, ಮಳೆಯ ಪರಿವೇ ಇರಲಿಲ್ಲವಂತೆ. ಅದಕ್ಕೇ ಜಗನ್ನಾಥ ದೇವರು ಚೈತನ್ಯ ಮಹಾಪ್ರಭುಗಳ ಕನಸಿನಲ್ಲಿ ಬಂದು ಆತನಿಗೆ ಒಂದು ನೆರಳು ಒದಗಿಸುವಂತೆ ಸೂಚಿಸಿದನಂತೆ. ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಯುವಕ ಕೃಷ್ಣನ ಜಪ ಮಾಡುತ್ತಿದ್ದ ಜಾಗದ ಬಳಿ ಬಂದು ಬಕುಲ ಸಸಿಯನ್ನು ನೆಟ್ಟರಂತೆ. ಅದು ಬೇಗ ಬೇಗ ಬೆಳೆದು ಮರವಾಗಿ ಆತನಿಗೆ ನೆರಳು ನೀಡಲು ಆರಂಭಿಸಿತು ಎನ್ನುವುದು ಪ್ರತೀತಿ. ಈಗಲೂ ಪುರಿಯಲ್ಲಿ ಅತ್ಯಂತ ಪುರಾತನವಾದ ಬಕುಲ ವೃಕ್ಷವೊಂದು ಇದೆ. ಅಲ್ಲಿಯೇ ಚೈತನ್ಯ ಮಹಾಪ್ರಭುಗಳೂ ಲೀನವಾದರು ಎಂದೂ ಭಕ್ತರೂ ನಂಬುತ್ತಾರೆ.


ಆ ಮುಸ್ಲಿಂ ಯುವಕ ನಂತರದ ದಿನಗಳಲ್ಲಿ ಹರಿದಾಸ ಠಾಕೂರ್ ಎಂದು ಪ್ರಸಿದ್ಧರಾದರು. ಈಗಲೂ ಅವರ ಸಮಾಧಿಗೆ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ. ಹರಿದಾಸ ಠಾಕೂರ್ ಅವರಿಗೂ ಪುರಿ ಜಗನ್ನಾಥ ದೇವಾಲಯದ ಒಳಕ್ಕೆ ಪ್ರವೇಶ ಇರಲಿಲ್ಲ. ಆದರೆ ಜಗನ್ನಾಥನೇ ಪ್ರತಿ ದಿನ ಅವರ ಬಳಿಗೆ ಬಂದು ಪ್ರಸಾದ ನೀಡುತ್ತಿದ್ದ ಎಂದು ಜನರು ಕೊಂಡಾಡುತ್ತಾರೆ. ಹರಿದಾಸ ಠಾಕೂರ್ ಹೆಸರಿನಲ್ಲಿ ಆಸ್ಪತ್ರೆ, ಶಾಲೆ ಮುಂತಾದ ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾರೆ.


ಪುರಿಯ ಬಳಿಯೇ ಇರುವ ಪಿಪಿಲಿಯ ಲಾಲ್ ಬೇಗ್ ಎಂಬ ಮುಸ್ಲಿಂ ಯೋಧನ ಮಗ ಸಾಲ್ ಬೇಗ್ ಕೂಡ ಜಗನ್ನಾಥನ ಪರಮ ಭಕ್ತ. ಒಂದು ಬಾರಿ ಈತ ರಥಯಾತ್ರೆ ನೋಡಲು ಪುರಿಗೆ ಬಂದಾಗ ರಥ ಯಾತ್ರೆ ಬಹುತೇಕ ಮುಗಿದೇ ಹೊಗಿತ್ತಂತೆ. ಆತ ತುಂಬಾ ಬೇಸರದಿಂದ 'ಭಗವಂತಾ ನನಗೆ ದರ್ಶನ ನೀಡದೇ ಹೋಗುತ್ತೀಯಾ' ಎಂದು ಬೇಡಿಕೊಂಡನಂತೆ. ಆಗ ಜಗನ್ನಾಥನ ರಥ ರಸ್ತೆಯ ಮಧ್ಯೆಯಲ್ಲಿಯೇ ನಿಂತು ಬಿಟ್ಟಿತಂತೆ. ಸಾಲ್ ಬೇಗ್ ಬಂದು ದೇವರ ದರ್ಶನ ಮಾಡಿ ರಥವನ್ನು ಎಳೆದ ನಂತರವೇ ರಥ ಮುಂದಕ್ಕೆ ಹೋಯಿತಂತೆ. ಹೀಗೆ ಪುರಿಯ ಜಗನ್ನಾಥನಿಗೆ ಮುಸ್ಲಿಂ ಭಕ್ತರು ಬೇಕಾದಷ್ಟು ಮಂದಿ ಇದ್ದಾರೆ. ಸಿಖ್ ಭಕ್ತರೂ ಇದ್ದಾರೆ. ಪುರಿ ಜಗನ್ನಾಥ ಜಾತಿ ಧರ್ಮ ಮೀರಿದ ದೇವರು ಎಂದು ಭಕ್ತರು ಭಕ್ತಿಯಿಂದ ನೆನೆಯುತ್ತಾರೆ.


- ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಮೊ : 97393 69621


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top