ಹಿಂದೂ ದೇಶವಾದ ಭಾರತದಲ್ಲಿ ಹಬ್ಬಗಳ ಆಚರಣೆಗೆ ಕೊರತೆಯಿಲ್ಲ. ಒಂದು ಮಾತಿದೆ ಕಾರಹುಣ್ಣಿಮೆ ಎಲ್ಲ ಹಬ್ಬಗಳನ್ನು ಕರೆದುಕೊಂಡು ಬರುತ್ತೆ ಅಂತ. ಕಾರಹುಣ್ಣಿಮೆ ನಂತರ ಹಬ್ಬಗಳ ಮಹಪೂರವೇ ಹರಿದು ಬರುತ್ತೆ.
ಮೊದಲು ಬರುವುದು ದೇವ ಶಯನಿ ಏಕಾದಶಿ, ದಕ್ಷಿಣಾಯಣ ಪರ್ವ ಕಾಲದಲ್ಲಿ ದೇವರು ಯೋಗ ನಿದ್ರೆಗೆ ಹೋಗುತ್ತಾನೆ ಎಂಬ ಕಾರಣಕ್ಕೆ ಈ ಹೆಸರು ಬಂದಿದೆ.
ಪಾಂಢರಾಪುರದಲ್ಲಿರುವ ಶ್ರೀ ಪಾಂಡುರಂಗನನ್ನು ಪೂಜಿಸುವ ವಿಶಿಷ್ಟ ಕ್ರಮ ಈ ಕಾಲದಲ್ಲಿ ನಡೆಯುತ್ತದೆ. ಇಟ್ಟಿಗೆ ಮೇಲೆ ಎರಡೂ ಕೈಗಳನ್ನು ಇಟ್ಟು ವಿಠಲ ಭಕುತ ನಿಲ್ಲಪ್ಪ ಎಂದು ಹೇಳಿದ ಕಾರಣ ಅವನ ದಾರಿ ಕಾಯುತ್ತ ನಿಲ್ಲುತ್ತಾನೆ.
ಇದರ ಹಿಂದೆ ಒಂದು ರೋಚಕ ಕಥೆ ಇದೆ. ಬಹಳ ಹಿಂದೆ ಪುಂಡಲೀಕ ಎಂಬ ಭಗವಂತನ ಭಕ್ತ, ಕಾಶಿ ಯಾತ್ರೆ ಹೋಗುವ ವಿಚಾರ ಮಾಡುತ್ತಾನೆ.
ಕುಕ್ಕುಟ ಎಂಬ ಋಷಿಗೆ ಕಾಶಿಗೆ ಹೋಗುವ ಮಾರ್ಗ ತಿಳಿಸಲು ಕೇಳುತ್ತಾನೆ. ಆದರೆ ಆ ಋಷಿಗೆ ಮಾರ್ಗ ಗೊತ್ತಿಲ್ಲದ ಕಾರಣ ನನಗೆ ತಿಳಿಯದು ಎಂದು ಹೇಳುತ್ತಾರೆ ಅದನ್ನು ಕೇಳಿದ ಪುಂಡಲೀಕನಿಗೆ ಬಹಳ ಆಶ್ಚರ್ಯವಾಗಿ ನಿಮ್ಮಂಥ ಋಷಿಗಳಿಗೆ ಕಾಶಿಗೆ ಹೋಗುವ ಮಾರ್ಗವೂ ತಿಳಿಯದು ಎಂದರೆ ಎಂಥ ಋಷಿಗಳು ನೀವು ಎಂದು ಅಪಹಾಸ್ಯ ಮಾಡುತ್ತಾನೆ.
ಕುಕ್ಕುಟ ಋಷಿಗಳ ಆಶ್ರಮದಲ್ಲಿ ರಾತ್ರಿ ತಂಗಿದ್ದಾಗ, ನಸುಕಿನಲ್ಲಿ ಕೆಲವು ಮಹಿಳೆಯರ ಧ್ವನಿ ಕೇಳಿ ಎಚ್ಚರವಾಗುತ್ತದೆ. ಹೊರ ಬಂದು ನೋಡಲು ದೇವ ಕನ್ನಿಕೆಯರಂತಿದ್ದ ಮಹಿಳೆಯರು ಕಸ ಗುಡಿಸಿ ಅಂಗಳ ಸ್ವಚ್ಛ ಗೊಳಿಸುತ್ತಿರುವುದು ಕಂಡು ಆಶ್ಚರ್ಯ ಪಡುತ್ತಾನೆ. ಅವರಲ್ಲಿದ್ದಲ್ಲಿ ಹೋಗಿ ಕೇಳಿದಾಗ, ನಾವು ಮೂವರು ಪವಿತ್ರ ನದಿ ಕನ್ನಿಕೆಯರು, ಗಂಗಾ, ಯಮುನಾ, ಸರಸ್ವತಿ ಅಂತ ನಮ್ಮನ್ನು ಕರೆಯುತ್ತಾರೆ ಎನ್ನಲು, ಪುಂಡಲೀಕನಿಗೆ ಆಶ್ಚರ್ಯವಾಗುತ್ತದೆ.
ಗಂಗಾ ದೇವಿ ಹೇಳುತ್ತಾಳೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆಯುವಷ್ಟು ಸಮಯ ಕುಕ್ಕುಟ ಋಷಿಗಳಿಗೆ ಇಲ್ಲ. ಅವರು ತಮ್ಮ ಜೀವನವೆಲ್ಲ ತನ್ನ ತಂದೆತಾಯಿಗಳ ಸೇವೆಗೆ ಮೀಸಲಿಟ್ಟು, ಈಗಾಗಲೇ ಸಾಕಷ್ಟು ಪುಣ್ಯ ಗಳಿಸಿದ್ದಾರೆ. ಅದರಿಂದ ಅವರಿಗೆ ಮುಕ್ತಿಯೇ ಸಿಗಬಹುದು ಎನ್ನಲು, ಪುಂಡಲೀಕ ಅವರಿಗೆ ಬಾಗಿ ನಮಸ್ಕಾರ ಮಾಡಿ ನನ್ನ ಕಣ್ಣು ತೆರಿಸಿದಿರಿ ಎಂದು ಹೇಳಿ, ಕುಕ್ಕುಟ ಋಷಿಗಳಿಗೂ ಕ್ಷಮೆ ಕೇಳಿ ತಿರುಗಿ ಊರಿಗೆ ಹೋಗುತ್ತಾನೆ.
ಒಬ್ಬನೇ ಕಾಶಿ ಯಾತ್ರೆ ಮಾಡಬೇಕು ಎಂದವನು, ತನ್ನ ಹೆತ್ತವರೊಂದಿಗೆ ಕಾಶಿ ಯಾತ್ರೆ ಮಾಡಿ, ತನ್ನ ಹೆತ್ತವರ ಸೇವೆ ನಿರಂತರವಾಗಿ ಮಾಡುತ್ತಾನೆ. ತಂದೆ ತಾಯಿಗಳ ಸೇವೆಯನ್ನು ಪುಂಡಲೀಕ ಅವಿರತವಾಗಿ ಮಾಡುವುದನ್ನು ನೋಡಿ ಪ್ರೀತನಾದ ಶ್ರೀ ಕೃಷ್ಣನೇ ಗೋಪಾಲನಾಗಿ ಇವನ ಮನೆಗೆ ಬರುತ್ತಾನೆ.
ತನ್ನ ತಂದೆ ತಾಯಿಯರ ಸೇವೆಯಲ್ಲಿ ನಿರತನಾಗಿದ್ದ ಪುಂಡಲೀಕ, ಈಗ ತಂದೆ ತಾಯಿಯ ಸೇವೆಯಲ್ಲಿ ನಿರತನಾಗಿರುವೆ, ಗೋಪಾಲ ನಿನ್ನನ್ನು ಆಮೇಲೆ ಭೇಟಿ ಮಾಡುವೆ ಎಂದು ಹೇಳುತ್ತಾನೆ. ಗೋಪಾಲನು ನೀನು ಬರುವವರೆಗೂ ಕಾಯುತ್ತೇನೆ, ಎಲ್ಲಿ ಕಾಯಲಿ ಎಂದಾಗ, ತನ್ನ ಬಳಿಯಿದ್ದ ಇಟ್ಟಿಗೆ ಅವನೆಡೆ ಸರಿಸಿ, ಇದರ ಮೇಲೆ ನಿಂತಿರು, ಈಗ ಬರುತ್ತೇನೆ ಎನ್ನುತ್ತಾನೆ. ಸಂತೋಷದಿಂದ ಹೆತ್ತವರ ಸೇವೆ ಮಾಡುವ ಪುಂಡಲೀಕನನ್ನು ನೋಡಿದ ಕೃಷ್ಣ ಬಹಳ ಸಂತೋಷಭರಿತನಾಗುತ್ತಾನೆ.
ತಂದೆ ತಾಯಿಯ ಶುಶ್ರುಷೆ ಮುಗಿಸಿ ಗೋಪಾಲ ಇರುವಲ್ಲಿಗೆ ಬಂದು ನೋಡುತ್ತಾನೆ ಪುಂಡಲೀಕ, ಸಾಕ್ಷಾತ್ ಶ್ರೀಕೃಷ್ಣನೇ ಗೋಪಾಲನಾಗಿ ತನ್ನ ಮನೆಗೆ ಬಂದಿದ್ದು ಕಂಡು ಆಶ್ಚರ್ಯ ಮತ್ತು ಆನಂದಭರಿನಾನಗುತ್ತಾನೆ. ಸ್ವಾಮಿ ಕೃಷ್ಣ, ದಯವಿಟ್ಟು ಕ್ಷಮಿಸು, ನಿನ್ನನ್ನು ಕಾಯುವಂತೆ ಮಾಡಿದೆ,, ಅಪರಾಧ ಕ್ಷಮಿಸು ಎಂದಾಗ, ನೀನು ತಂದೆ ತಾಯಿಯ ಸೇವೆ ಮಾಡುವುದು ನೋಡಿ ಸಂತೃಪ್ತನಾಗಿದ್ದೇನೆ, ನಿನಗೇನು ಬೇಕು ಕೇಳು ಕೊಡಲು ಸಿದ್ಧನಾಗಿರುವೆ ಎನ್ನಲು, ದೇವಾ ಹೀಗೇ ಈ ಇಟ್ಟಿಗೆ ಮೇಲೆ ನಿಂತು ದರುಶನ ಕೊಟ್ಟು ನನ್ನನ್ನು ಅನುಗ್ರಹಿಸಿದಂತೆ, ಬರುವ ಭಕ್ತರನ್ನೂ ಅನುಗ್ರಹ ಮಾಡು. ಈ ಸುಕ್ಷೇತ್ರ ಪ್ರಸಿದ್ದವಾಗಲಿ ಎನ್ನುತ್ತಾನೆ.
ವಿಠ್ಠ ಎಂದರೆ ಇಟ್ಟಿಗೆ, ಅದಕ್ಕೆ ವಿಠ್ಠದ ಮೇಲೆ ನಿಂತವ "ವಿಠಲ" ನಾದ. ಪ್ರತಿ ವರ್ಷದ, ಆಷಾಢ ಮತ್ತು ಕಾರ್ತಿಕ ಏಕಾದಶಿಗಳಂದು, ಅನೇಕ ಲಕ್ಷ ಜನರು ಕಾಲ್ನಡಿಗೆಯಲ್ಲಿ ಕುಣಿದು ಹಾಡುತ್ತ ಪಾಡುತ್ತಾ ಪಂಢರಪುರಕ್ಕೆ ಬರುತ್ತಾರೆ, ವಿಠಲನ ದರ್ಶನ ಪಡೆದು ಪುಣ್ಯ ಗಳಿಸುತ್ತಾರೆ.
ವಿಠಲ ವಿಠಲ, ಎಂದು ಉಚ್ಚಾರಣೆ ಮಾಡುವುದರಿಂದ, ಹೃದಯದ ಬಡಿತ ಸರಿಯಾಗಿ, ಬ್ಲಾಕ್‌ಗಳು ದೂರ ಆಗುತ್ತವೆ ಎಂದು ಇತ್ತೀಚೆಗೆ ತಿಳಿದುಬಂದಿದೆ. ಅಲ್ಲದೇ ಏಕಾದಶಿ ಉಪವಾಸದಿಂದ, ನಮ್ಮ ದೇಹದಲ್ಲಿ ಶೇಖರವಾದ ನಿರುಪಯೋಗಿ ವಸ್ತುಗಳು ಹೊರಹೋಗಿ, ಮನಸ್ಸು ಮತ್ತು ದೇಹ ಶುದ್ಧವಾಗುತ್ತದೆ. ಅದಕ್ಕಾಗಿ ಈ ಏಕಾದಶಿ ಎಂಬ ಆಚರಣೆ ಮಹತ್ವ ಪಡೆದಿದೆ.
ಜೈ ಹರಿ ವಿಠಲ
- ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ