ವೈಷ್ಣವ (ಮಾಧ್ವ) ಅನುಯಾಯಿಗಳಿಗೆ ಪ್ರತಿ ವರ್ಷ ಆಷಾಢ ಶುದ್ಧ ಏಕಾದಶಿಯಂದು (ಪ್ರಥಮೇಕಾದಶಿ) ನಡೆಯುವ ತಪ್ತ ಮುದ್ರಾಧಾರಣೆ ಪರಮ ಪುಣ್ಯಕರ ದಿನ.ನಿರ್ಮಲ ತತ್ವಜ್ಞಾನ ಪ್ರಾಪ್ತಿಯ ಅಪೂರ್ವ ಸಾಧನ ಈ ತಪ್ತ (ಸುದರ್ಶನ) ಧಾರಣೆ ಎಂಬ ಭಾವನೆಗೆ ಆಧ್ಯಾತ್ಮಿಕ ಮಾತ್ರವಲ್ಲ ವೈಜ್ಞಾನಿಕ ಭಾವನೆಯೂ ಸೇರಿಕೊಂಡಿರುವುದರಿಂದ ಇದು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
ಆಷಾಢ ಏಕಾದಶಿ ಏನು ವಿಶೇಷ?
ಎಲ್ಲ ಮಠ-ಮಂದಿರಗಳಲ್ಲಿ ಆಷಾಢಮಾಸದ ಮೊದಲ ಏಕಾದಶೀ ದಿನದಂದು ತಪ್ತಮುದ್ರಾ ಧಾರಣೆ ಮಾಡಿಸಿಕೊಳ್ಳುತ್ತಾರೆ. ಎಲ್ಲರೂ ಆ ದಿನವೇ ಮುದ್ರಾಧಾರಣೆ ಮಾಡಿಸಿಕೊಳ್ಳುಲು ಏನು ವಿಶೇಷ? ನಿಜವಾಗಿ ನೋಡಿದರೆ ಆಷಾಢ ಏಕಾದಶೀ ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿಲ್ಲ. ವಾಸಿಷ್ಠ ಸ್ಮೃತಿ ಹೇಳುವಂತೆ, ಜಾತಕರ್ಮ-ಚೌಲ-ಉಪನಯನ ಮೊದಲಾದ ಸಂಸ್ಕಾರಗಳನ್ನು ನಡೆಸುವ ಸಂದರ್ಭಗಳಲ್ಲಿ ಮತ್ತು ಮಂತ್ರಾಧ್ಯಯನ ಸಮಯದಲ್ಲಿ ಮತ್ತು ಸ್ತ್ರೀಯರಿಗೆ ವಿವಾಹ ಸಂಸ್ಕಾರ ಸಮಯದಲ್ಲಿ ತಪ್ತಮುದ್ರಾ ಧಾರಣೆ ಮಾಡಿಸಿಕೊಳ್ಳಬೇಕಾದದ್ದು ಅವಶ್ಯಕ. ಜೊತೆಗೆ ತಮ್ಮ ತಮ್ಮ ಗುರುಗಳ ದರ್ಶನ-ಸಮಾಗಮ ಆದಾಗ ಗುರುಗಳಿಂದ ತಪ್ತಮುದ್ರಾಧಾರಣೆ ಮಾಡಿಕೊಳ್ಳಬೇಕು. ಆದರೂ ಆಷಾಢಮಾಸದ ಮೊದಲ ಏಕಾದಶಿಯಂದು ಎಲ್ಲರೂ ಮುದ್ರಾಧಾರಣೆ ಮಾಡಿಕೊಳ್ಳಲು ಒಂದು ವಿಶೇಷ ಕಾರಣವೆಂದರೆ:- ಆಷಾಢ ಮೊದಲ ಏಕಾದಶೀಯು ಒಳ್ಳೆಯ ಸತ್ಯಕರ್ಮಗಳನ್ನು ಮಾಡುತ್ತಾ ಹೊಸ ಸಂವತ್ಸರವನ್ನು ಆರಂಭಿಸುವಂತೆ, ಶಾಕವ್ರತ-ದಧಿವ್ರತ-ಪಯೋವ್ರತ-ದ್ವಿದಲವ್ರತಗಳನ್ನು ಆಚರಿಸಲು ಹೊರಟ ಸಂದರ್ಭದಲ್ಲಿ ಮೊದಲಿಗೆ ಮೈ-ಮನಗಳನ್ನು ಶುದ್ಧ ಮಾಡಿಕೊಂಡು ವ್ರತವನ್ನು ಆಚರಿಸಬೇಕಾದ್ದರಿಂದ, ಗುರುಗಳಿಂದ ತಪ್ತಮುದ್ರಾಧಾರಣೆ ಪಡೆದು, ದೇಹವನ್ನು ಮನಸ್ಸನ್ನು ಶುದ್ಧಮಾಡಿಕೊಂಡು, ಶುದ್ಧವಾದ ದೇಹ-ಇಂದ್ರಿಯಗಳಿಂದ ವ್ರತವನ್ನು ಆಚರಿಸುವುದು ಶಾಸ್ತ್ರೀಯ ವಿಧಿ.
ದೇವರ ಮಂತ್ರ ಜಪಿಸುವವನು ಮೊದಲು ದೇವರ ಚಿಹ್ನೆಯನ್ನು ದೇಹದಲ್ಲಿ ಧರಿಸಿಕೊಳ್ಳಬೇಕು (ಮದಂಕಾಕಿತಃ ಮನ್ಮಂತ್ರ ಜಪ). ಇದು ಭಗವಂತನ ಆದೇಶ, ಇದನ್ನು ಭಕ್ತರು ಅನುಸರಿಬೇಕು. ದೇವರ ಭಕ್ತನಾದವನು ದೇವರ ಪವಿತ್ರವಾದ ಆಯುಧಗಳನ್ನು ದೇಹದ ಮೇಲೆ ಧರಿಸಿಕೊಳ್ಳುವುದರಿಂದ ದೇಹ ಪವಿತ್ರವಾಗುತ್ತದೆ ಎನ್ನುವ ಅನುಸಂಧಾನ ನಮ್ಮ ಹಿರಿಯರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗ್ಗಿನ ಸ್ನಾನದ ನಂತರ ನಿತ್ಯ ವಿಧಿಗಳನ್ನು ಪ್ರಾರಂಭಿಸುವ ಮೊದಲು ಗೋಪಿ ಚಂದನ ಮತ್ತು ಮುದ್ರಾಧಾರಣೆ ಸಂಪ್ರದಾಯವಾಗಿ ಬೆಳೆದು ಬಂದಿದೆ. ವೈಷ್ಣವತ್ವದ ಸೂಚಕ ಆಚರಣೆ ಇದಾಗಿದೆ.
ಸೋದೆ ಶ್ರೀವಾದಿರಾಜರು ರಚಿತ ತಪ್ತ ಸುದರ್ಶನ ಶಂಖ ಧಾರಣವನು ಭುಜ ಯುಗದೊಳು ಮಾಡಿ.. ಎನ್ನುವ ಸಂದೇಶ ನಾರಾಯಣ ನೆನೆ ಮನವೆ ನಾರಾಯಣ ನೆನೆ ಹಾಡಲ್ಲಿದೆ.
ಚಕ್ರ ಅಜ್ಞಾನ ನಿವಾರಕ, ಶಂಖ ಜ್ಞಾನ ಪ್ರದ. ಆಧುನಿಕ ಯುಗದಲ್ಲಿ ವಿಪರೀತ ಅರಿವು ನಾಶವಾಗಿ ಸಮೀಚೀನ (ಉತ್ತಮ) ಅರಿವು ಬರಲು ಮುದ್ರಾಧಾರಣೆ ಅತ್ಯಾವಶ್ಯಕ. ವೈಷ್ಣವ ಸಂಪ್ರದಾಯದಲ್ಲಿ ನಡೆದು ಬಂದ ತಪ್ತ ಮುದ್ರಾಧಾರಣೆಗೆ ಜಾತಿಯ ಚೌಕಟ್ಟಿಲ್ಲ. ಶರೀರವೇ ದೇವಸ್ಥಾನವಾದರೆ ದೇವರ ಮನೆಯ ಶುದ್ಧಿಗೆ ಮುದ್ರಾಧಾರಣೆ, ದೇವರ ಆಯುಧಗಳ ಚಿಹ್ನೆ ಹೊಂದುವುದರ ಹಿಂದೆ ಈ ಶರೀರ ಭಗವಂತ ಕೊಟ್ಟದ್ದು ಎನ್ನುವ ಭಗವತ್ ಪ್ರಜ್ಞೆಯಿದೆ, ಅಹಂ ಮಮತಾದಿಗಳು ನಾಶವಾಗುತ್ತವೆ. ಹೀಗೆ ನಮ್ಮ ಒಳ ಹೊರಗಿನ ಶುದ್ದೀಕರಣವಾಗುತ್ತದೆ. ತಪ್ತ ಮುದ್ರಾಧಾರಣೆ ಮಾಡದೇ ಇದ್ದರೆ ಅಪವಿತ್ರ ದೇಹದಿಂದ ಮಾಡಿದ ಯಾವುದೇ ಕಾರ್ಯವಿಧಿಗಳು ಸಿದ್ಧಿಸದು. ಆಚರಣೆ/ವ್ರತ ಪರಿಪಕ್ವತೆ ಮುದ್ರಾಧಾರಣೆ ಅತ್ಯಗತ್ಯ.
ತಪ್ತಮುದ್ರಾಧಾರಣೆ ಹಿಂದೆ ಹಿರಿಯರ ವೈಜ್ಞಾನಿಕ ಚಿಂತನೆಯಿದೆ. ಮಳೆಗಾಲದಲ್ಲಿ ರೋಗ ರುಜಿನಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ತಪ್ತ ಮುದ್ರಾಧಾರಣೆಯನ್ನು ಧಾರ್ಮಿಕ ನೆಲೆಯಲ್ಲಿ ಮಾಡಲಾಗುತ್ತಿದೆ.
ಆಯುರ್ವೇದದಲ್ಲಿ ಅಗ್ನಿ ಕರ್ಮ ಚಿಕಿತ್ಸಾಪ್ರಕಾರವಿದೆ. ಶರೀರದ ಕೆಲ ಭಾಗಗಳಿಗೆ ಬೆಳ್ಳಿ, ತಾಮ್ರ ಇತ್ಯಾದಿ ಲೋಹಗಳನ್ನು ಹದವಾಗಿ ಬಿಸಿ ಮಾಡಿ ಇಡುವುದರಿಂದ ರೋಗ ನಿವಾರಣೆಯಾಗುತ್ತದೆ. ಆಷಾಢ ಮಾಸದಲ್ಲಿ ರೋಗ ಹೆಚ್ಚು, ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ತಪ್ತ ಮುದ್ರಾಧಾರಣೆ ಪೂರಕ.
ಪ್ರಪಂಚವನ್ನು ಪ್ರಯಾಸವಿಲ್ಲದೆ ಪಾಲಿಸುತ್ತ, ಪಾಲ್ಗಡಲಲ್ಲಿ ಪವಡಿಸಿದವನೇ ಪರಮಾತ್ಮನು. ಕಾಣುವ, ಕಾಣದ ಜಗವೆಲ್ಲ ಈತನ ಅಧೀನವೇ. ಈತನೇ ಪೃಥ್ವ್ಯಾದಿ ಸಕಲ ಭೂತಾಭೂತಗಳ ಚಾಲಕ, ಪ್ರೇರಕ, ಪರಿಪಾಲಕ. ಎಲ್ಲರ ಒಡಲೊಳಗೆ ತಾನೇ ಪ್ರಧಾನನಾಗಿರುವುದರಿಂದ ಈತ ವಿಷ್ಣು.
ಅಂತರಂಗದಲ್ಲಿ ಶ್ರೀರಂಗನ ಅನಂಗಸುಖಾನುಭವನ್ನು ಹೊಂದುತ್ತ, ಅವನ ಜ್ಞಾನಾಂಗದಾನಂದವನ್ನು ಇಚ್ಛಿಸುತ್ತ ಹೊಂದುವ ಜ್ಞಾನದೀಕ್ಷೆಯೇ ಅಂತರ್ದೀಕ್ಷೆ. ಅಂತರಂಗದಲ್ಲಿ ಶ್ರೀಹರಿಯನ್ನು ಕಾಣಲು ದೇಹದ ಹೊರಗೆ ಹೊರುವ ದೀಕ್ಷೆಯೇ ಬಾಹ್ಯದೀಕ್ಷೆ. ಜ್ಞಾನಿ- ಅಜ್ಞಾನಿಗಳೀರ್ವರಿಗೂ ಈ ದೀಕ್ಷೆ ಅನಿವಾರ್ಯ. ಈ ದೀಕ್ಷೆಯಲ್ಲಿ ಮತ್ತೆರೆಡು ಉಪಬೇಧಗಳಿವೆ. ಒಂದು ಊರ್ಧ್ವಪುಂಡ್ರ ಧಾರಣೆ; ಮತ್ತೊಂದು ತಪ್ತಮುದ್ರಾ ಧಾರಣೆ. ವಿಷ್ಣುಭಕ್ತಿಯ ಪರಿಪಕ್ವ ಅವಸ್ಥೆಗೆ ಸಲ್ಲುವ ಒಂದು ಬಿರುದು.
ಸೂರ್ಯ ದಕ್ಷಿಣಕ್ಕೆ ವಾಲುತ್ತಿರಲು ಭಗವಂತ ಶೇಷನೆಡೆಗೆ ವಾಲುತ್ತಾನೆ. ಅಂದರೆ "ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿಹ್ನೆಯಾದ ಶಂಖ ಮತ್ತು ಚಕ್ರಗಳು ನಮ್ಮ ದೇಹದಲ್ಲಿ ಅಚ್ಚೊತ್ತಿರಬೇಕು" ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತ ಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ.
"ವ್ಯಕ್ತಿಗಳಿಗಿಂತ ಸಂಸ್ಥೆ ದೊಡ್ಡದು" ಎಂದು ಆಚಾರ್ಯ ಮಧ್ವರು ಹಾಕಿಕೊಟ್ಟ ಸತ್ಪರಂಪರೆಯಿಂದ ತಪ್ತ ಮುದ್ರಾಧಾರಣೆಯಲ್ಲಿ ಮಠಗಳಿಗೆ ಪ್ರಾಧಾನ್ಯ. ತಾವೇ ತಪ್ತ ಮುದ್ರೆ ಹಾಕಿಕೊಳ್ಳುವುದು ಗುರು ಪೀಠಗಳಿಗೆ ತೋರುವ ಅನಾದರವಾಗುತ್ತದೆ. ಹೀಗಾಗಿ ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಪರಮಹಂಸ ಪೀಠಾಧೀಶರಿಂದಲೇ ತಪ್ತಮುದ್ರಾ ಧಾರಣೆಯನ್ನು ಸ್ವೀಕರಿಸಬೇಕೆಂಬ ನಿಯಮವಿದೆ.
ಕಾಯಿಕ, ವಾಚಿಕ, ಮಾನಸಿಕ ಯಾವುದೇ ತರವಾದ ಸಾಧನೆಗೆ ದೇಹ ಅತ್ಯವಶ್ಯಕ. ದೇಹದಿಂದಲೇ ಯಜ್ಞ, ದಾನ, ತಪಸ್ಸು, ದೇಹದಿಂದಲೇ ಶ್ರವಣ, ಮನನ, ಧ್ಯಾನ. ಒಟ್ಟಾರೆ ದೇಹದಿಂದಲೇ ಎಲ್ಲ. ಒಂದೆಡೆ ದೇಹ ಹೇಯ, ತುಚ್ಛ, ಮೋಹದ ಕುಳಿ, ಮಮತೆಯ ಬೇಲಿ ಎಂಬೆಲ್ಲ ನಿಂದನೆ. ನಿಂದಿತದೇಹವನ್ನು ಪವಿತ್ರ ಸಾಧನೆಗೆ ಅಣಿಗೊಳಿಸಲು ಸಂಸ್ಕಾರ ಬೇಕು. ದೇಹಸಂಸ್ಕಾರ ನಾನಾ ಬಗೆ. ಜಾತಕರ್ಮ, ಉಪನಯನಾದಿಗಳು, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುದ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.
ಆಬಾಲ ವೃದ್ಧರಾದಿಯಾಗಿ ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರೂ ತಪ್ತ ಮುದ್ರೆಗಳನ್ನು ಹಾಕಿಸಿಕೊಳ್ಳುವ ಮೊದಲು ನಮಗಿರಬೇಕಾದ ಅರ್ಹತೆಗಳೇನು ಎಂಬುದರ ಕುರಿತು ಆಲೋಚಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ.
ಆಸ್ತಿಕ ಸತ್ಯವಾದಿಯಾಗಿ, ಪರಾಧಾರ, ಪರದ್ರವ್ಯ, ಪರದ್ರೋಹಗಳಿಂದ ದೂರವಿರಬೇಕು. ಭಗವಂತನ ಒಲುಮೆಗಾಗಿ ಈ ಕ್ರಿಯೆಯೆಂಬ ತಿಳುವಳಿಕೆಯೊಡನೆ ಈವರೆಗೆ ಮಾಡಿದ ಪುಣ್ಯವೆಲ್ಲ ಇದರಿಂದ ಉಳಿಯುತ್ತದೆ ಎಂಬ ಭಾವ ಬೇರೂರಿರಬೇಕು. ಹೀಗೆ ಈ ಎಲ್ಲ ಗುಣಗಳಿಂದ ಯುಕ್ತನಾದವನು ಅಥವಾ ಯುಕ್ತನಾಗಲು ಅಪೇಕ್ಷಿಸಿದವನು ತಪ್ತ ಮುದ್ರೆಯನ್ನು ಧರಿಸಿಕೊಳ್ಳಲು ಅಧಿಕಾರಿಯಾಗುತ್ತಾನೆ.
ತಪ್ತ ಮುದ್ರಾಧಾರಣೆಯ ಮಹತ್ವವು ಋಗಾದಿ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ವಿಶೇಷವಾಗಿ ವರಹಾಪುರಾಣದ ಚಾತುರ್ಮಾಸ ಮಹಾತ್ಮೆಯಲ್ಲಿ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರು ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮಧ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀ ವಾದಿರಾಜ ಮಹಾಸ್ವಾಮಿಗಳ ಚಕ್ರಸ್ತುತಿ, ಶ್ರೀ ವಿಜಯೀಂದ್ರರ ತಪ್ತ ಚಕ್ರ ಮೀಮಾಂಸ, ಶ್ರೀ ಸತ್ಯಾಭಿನವತೀರ್ಥರ ರಾಮಾಮೃತ ಮಹಾರ್ಣವ, ಶ್ರೀ ಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಲಿ ಹಾಗೂ ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.
ಸೇರಿ ಸಂತಪ್ತ ಸುದರ್ಶನ ಶಂಖವ ಧಾರಣವನು ಭುಜಯುಗದೊಳು ಮಾಡಿ ಎಂದು ಭಾವೀ ಸಮೀರ ಶ್ರೀವಾದಿರಾಜರು, ಅಂಕಿತವಿಲ್ಲದ ದೇಹ ನಿಷೇಧ ಅಂಕಿತವಿಲ್ಲದೆ ಕಾವ್ಯ ಶೋಭಿಸದು ಅಂಕಿತವಿಲ್ದೇ ಇರಬಾರದೆಂದು ಚಕ್ರಾಂಕಿತವನು ಮಾಡಿ ಎನ್ನಂಗಕೆ ಪಂಕಜನಾಭ ಶ್ರೀಪುರಂದರವಿಠಲನ ಅಂಕಿತವೆನಗಿತ್ತ ಗುರುವ್ಯಾಸ ಮುನಿರಾಯ ಎಂದು ದಾಸಶ್ರೇಷ್ಠ ಪುರಂದರದಾಸರು ಉಗಾಭೋಗವೊಂದನ್ನೇ ರಚಿಸಿದ್ದಾರೆ.
ಹಿನ್ನೆಲೆ: ಹಿಂದೊಮ್ಮೆ ಇಂದ್ರಾದಿ ದೇವತೆಗಳೆಲ್ಲ ವೃತಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಲಾಗಿ, "ಎಲೈ ದೇವತೆಗಳೇ, ನೀವೆಲ್ಲ ನನ್ನ ಶಂಖ, ಚಕ್ರಾದಿ ಲಾಂಛನಗಳನ್ನು ಧರಿಸಿ ದೈತರೊಡನೆ ಯುದ್ಧ ಮಾಡಿರಿ, ನಿಮಗೆ ವಿಜಯ ಲಭಿಸುವುದು" ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಶತ್ರು, ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ಸ-ಮುದ್ರರಷ್ಟೇ ಭವ ಸಮುದ್ರವನ್ನು ದಾಟಬಲ್ಲರು; ಅ-ಮುದ್ರರಲ್ಲ ಎಂಬುದು ತಾತ್ಪರ್ಯ.ಯಮದೇವನಿಂದ ಪವಿತ್ರ ಏಕಾದಶಿ ಭುವಿಗೆ ಬಂದಂತೆ; ಇಂದ್ರಾದಿ ದೇವೆತೆಗಳಿಂದ ತಪ್ತಮುದ್ರಾಧಾರಣೆ ಧರೆಗೆ ಬಂತು .
ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಉತ್ತಮ ಲೋಹದಿಂದ ತಯಾರಿಸಿದ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳಾದ ದುರ್ಗಾ ಮತ್ತು ಶ್ರೀದೇವಿಯರನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಬಲಭುಜದಲ್ಲಿ ಚಕ್ರವನ್ನು, ಎಡಭುಜದಲ್ಲಿ ಶಂಖವನ್ನು ಹೀಗೆಯೇ ಬಲ ಸ್ತನ ಭಾಗದಲ್ಲಿ ಚಕ್ರವನ್ನು, ಎಡ ಸ್ತನ ಭಾಗದಲ್ಲಿ ಶಂಖವನ್ನು ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಮುದ್ರಿಸಬೇಕು. ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರವನ್ನು ಸ್ತ್ರೀಯರಿಗೆ ಎಡ, ಬಲ ಕೈಗಳ ಮೇಲೆ ಮಾತ್ರ ಮುದ್ರಿಸಬೇಕು. ಭಗವಂತನ ಶಂಖಸ್ಪರ್ಶದಿಂದ ಧೃವ ಮಹಾರಾಜನು ವಾಸುದೇವನನ್ನು ಸ್ತುತಿಸಿದ. ನಾರಾಯಣನ ಚಕ್ರವೇ ಏಕಾದಶಿಯ ಹಿರಿಮೆಯನ್ನು ಜಗಕೆ ತೋರಿತು.
ಅರಿವಿಗೆ ಅನುಗುಣವಾದ ಆಚಾರ. ಅದುವೆ ಜ್ಞಾನದಿಂದ ಕೂಡಿದ ಕರ್ಮಯೋಗ. ಇದಕ್ಕೆ ಉತ್ತಮ ಉಪಾಯ ದೇಹಕ್ಕೆ ನಿಯಮಬದ್ದತೆಯ ದೀಕ್ಷೆ, ಅನುಭವ, ಅನುಭಾವ ಎಲ್ಲಕ್ಕೂ ದೇಹವೇ ಆಧಾರ. ಸಾಧನದ ದೇಹವಿದು ನೀ ದಯದಿಂ ಕೊಟ್ಟಿದ್ದು ಸಾಧಾರಣವಲ್ಲ ಎಂದಿದ್ದಾರೆ ದಾಸರು. ಬುದ್ದಿ ಮನಸ್ಸು ಗಳಿರಲು ದೇಹ ಬೇಕು, ಎಲ್ಲ ಸಾಧನೆಗೆ ಅದು ಬೇಕು ಅದನ್ನು ಪವಿತ್ರವಾಗಿಡಬೇಕು, ಅದಕ್ಕೆ ಸಂಸ್ಕಾರದ ಲೇಪ ಕೊಡಬೇಕು.
ಆಗಲೇ ಮಾಡಿದ ಹಸಿಯಾಗಿಯೇ ಉಳಿದಿರುವ ಮಡಿಕೆಯಲ್ಲಿ ನೀರು ಹಾಕಿದರೆ ಅದರಲ್ಲಿ ಒಂದು ಹನಿ ನೀರೂ ನಿಲ್ಲದೆ ಹೇಗೆ ಸೋರಿ ಹೋಗುತ್ತದೆಯೋ ಅದರಂತೆ ಈ ದೇಹವೆಂಬ ಮಣ್ಣಿನ ಮಡಿಕೆಗೆ ತಪ್ತಮುದ್ರಾಧಾರಣೆ ಎಂಬ ಕಾವು (ಸಂಸ್ಕಾರ) ಕೊಟ್ಟಾಗ ಮಾತ್ರ ಅದರಲ್ಲಿ ಪುಣ್ಯವೆಂಬ ನೀರು ನಿಲ್ಲುತ್ತದೆ. ಯಾವ ವಸ್ತು ಯಾರ ಅಧೀನವಾಗಿರುತ್ತದೆಯೋ ಅದರ ಮೇಲೆ ಅವರ ಚಿಹ್ನೆ (ಸೀಲ್) ಹಾಕುವ ನಿಯಮವಿದೆ. ಈ ದೇಹ (ನಮ್ಮದಲ್ಲ) ನಮ್ಮ ಅಧೀನವಾದದ್ದಲ್ಲ. ಭಗವಂತನ ಅಧೀನವಾದದ್ದು. ಭಗವಂತನ ಅಧೀನವಾದ ಈ ದೇಹದ ಮೇಲೆ ಭಗವಂತನ ಚಿಹ್ನೆಗಳಾದ ಶಂಖ ಚಕ್ರಗಳು ಮೂಡಬೇಕು.
ಈ ದೇಹಕ್ಕೆ ಎಷ್ಟು ರೀತಿಯಿಂದ ವಿಹಿತವಾದ ಕ್ಲೇಶಗಳನ್ನು (ದಂಡನೆಯನ್ನು) ಕೊಡುತ್ತೇವೆಯೋ ಅದೂ ಒಂದು ತಪಸ್ಸು. ಹಿಂದೆ ಋಷಿ ಮುನಿಗಳು ಪಂಚಾಗ್ನಿಗಳ ಮಧ್ಯದಲ್ಲಿ ತಪಸ್ಸು ಆಚರಿಸುತ್ತಿದ್ದರೂ ನಮಗೆ ಆ ವಿಧವಾದ ತಪಸ್ಸನ್ನು ಮಾಡಲು ಆಗದಿದ್ದರೂ ಸಹ, ಈ ಸಣ್ಣದಾದ ತಾಪವನ್ನು ಸಹನೆ ಮಾಡಿದರೂ ಅದೊಂದು ತಪಸ್ಸಾಗುತ್ತದೆ. ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು 'ತಪ್ತ ಮುದ್ರಾಧಾರಣ'ದ ಹಿರಿಮೆ.
ಇವರು ವೈಷ್ಣವರು ಎಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ ! ಅನುಸಂಧಾನವಿದ್ದರೆ ಅಧಿಕಪುಣ್ಯ ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ, ಆಧ್ಯಾತ್ಮಿಕ ದೃಷ್ಠಿಕೋನವಿದ್ದಂತೆ ಸೂಕ್ಷ್ಮ್ಮವಾಗಿ ವೈಜ್ಞಾನಿಕ, ವೈದ್ಯಕೀಯ ದೃಷ್ಠಿ ವಿಸ್ಮಯಕಾರಿಯಾದದ್ದು, ಕೆಲವು ತಜ್ಞರು ಅಭಿಪ್ರಾಯಪಟ್ಟಂತೆ ಇದೊಂದು "ಶಾಕ್ ಟ್ರೀಟ್‌ಮೆಂಟ್".
ಚಾತುರ್ಮಾಸ್ಯ ವ್ರತಾರಂಭಕ್ಕೆ ಮೊದಲು ದೇಹ ಶುದ್ಧಿಗಾಗಿ ನಡೆಯುವ ತಪ್ತ ಮುದ್ರಾಧಾರಣೆಯ ಹಿಂದೆ ಬರಿಯ ಆಧ್ಯಾತ್ಮಿಕ, ಧಾರ್ಮಿಕ ಸಂಪ್ರದಾಯ ಮಾತ್ರವಲ್ಲ ವೈಜ್ಞಾನಿಕ ಕಾರಣ, ಧೋರಣೆಗಳಿವೆ. ಅಕ್ಯುಪ್ರೆಶರ್‌ನಂತೆ ಕಾರ್ಯನಿರ್ವಹಿಸುವ ತಪ್ತ ಮುದ್ರಾಧಾರಣೆ ದೇಹದ ಅಂಗಾಂಗಗಳ ಅಸಮತೋಲನ, ಉಷ್ಣತೆ ಜತೆಗೆ ಒತ್ತಡ ನಿವಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
ರೋಗಾಣುವನ್ನು ದೇಹಕ್ಕೆ ಚುಚ್ಚುಮದ್ದಿನ ಮೂಲಕ ಛೂ ಬಿಟ್ಟು ರೋಗದ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ಕೊಡುವಂತೆ ದೇಹದ ಪರಿಶುದ್ಧತೆಗಾಗಿ ಪ್ರತಿಯೊಬ್ಬರೂ ತಪ್ತಮುದ್ರಾ ಧಾರಣೆ ಮಾಡಿಸಿಕೊಳ್ಳಬೇಕು.
ಜಾನಪದ ವೈದ್ಯ ಪದ್ಧತಿ:
ಜಾನಪದ ವೈದ್ಯಕೀಯ ಪದ್ಧತಿಯಲ್ಲಿ ಕೆಲ ಗಿಡದ ಬೇರುಗಳನ್ನು ದೇಹಕ್ಕೆ ತಾಗಿಸಿಟ್ಟರೆ ಸುಟ್ಟ ಗಾಯವಾಗುತ್ತದೆ (ಉಷ್ಣತೆ ಹೆಚ್ಚಿರುತ್ತದೆ) ಚಿತ್ರಕ ಮೂಲದಿಂದಲೂ (ಬೇರು) ಸುಟ್ಟ ಗಾಯ ಗುಣವಾಗುತ್ತದೆ, ಕಾಮಾಲೆಗಿದು ಪರಿಣಾಮಕಾರಿ ಎನ್ನುತ್ತಾರೆ ಜಾನಪದ ವೈದ್ಯಕೀಯ ತಜ್ಷರು. ಆಲೋಪತಿಯಲ್ಲಿ ಸುಟ್ಟ ಶರೀರಕ್ಕೆ ಚಿಕಿತ್ಸೆ ನೀಡಲಾಗುತ್ತದೆ, ಆದರೆ ಶರೀರ ಸುಟ್ಟ ಚಿಕಿತ್ಸಾ ಕ್ರಮ ಅನುಸರಿಸುವ ಪದ್ಧತಿಯಿಲ್ಲ. ದೊಡ್ಡ ಗಾಯವಾದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಸಣ್ಣ ಗಾಯವಿದ್ದರೆ ರೋಗ ನಿರೋಧಕ ಹೆಚ್ಚಿರುತ್ತದೆ ಎನ್ನುತ್ತಾರೆ ಉಡುಪಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಕ ತಂತ್ರಿ. ದೇಹದಲ್ಲಿ ರೋಗ ನಿರೋಧಕ ಹೆಚ್ಚಿದ್ದರೆ ಬಂದ ರೋಗ ಶಮನವಾಗಬಹುದು. ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ರೋಗ ಪ್ರಾಬಲ್ಯ ಸಾಧಿಸಬಹುದು. ಹೀಗಾಗಿ ಹಿತ ಮಿತವಾದ ತಪ್ತಮುದ್ರಾಧಾರಣೆ ಸೂಕ್ತ. ಹೈಪೋಥೀಸಿಸ್ ನೆಲೆಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆಯೇ ಹೊರತು ಈ ನಿಟ್ಟಿನಲ್ಲಿ ಯಾವುದೇ ಅಧ್ಯಯನ ನಡೆದಿಲ್ಲ.
ಚಕ್ರಮುದ್ರೆಯನ್ನು ಧರಿಸುವಾಗ ಪಠಿಸಬೇಕಾದ ಮಂತ್ರ : ಸುದರ್ಶನ ಮಹಾಜ್ವಾಲ ಕೋಟಿ ಸೂರ್ಯಸಮಪ್ರಭ | ಅಜ್ಞಾನಾಂಧಸ್ಯ ಮೇ ನಿತ್ಯಂ ವಿಷ್ಣೋ ರ್ಮಾರ್ಗಂ ಪ್ರದರ್ಶಯ ||
ಶಂಖಮುದ್ರೆಯನ್ನು ಧರಿಸುವಾಗ ಪಠಿಸಬೇಕಾದ ಮಂತ್ರ : ಪಾಂಚಜನ್ಯ ನಿಜಧ್ವಾನಧ್ವಸ್ತಪಾತಕಸಂಚಯ | ತ್ರಾಹಿ ಮಾಂ ಪಾಪಿನಂ ಘೋರಸಂಸಾರಾರ್ಣವಪಾತಿನಮ್ || (ವಿವಿಧ ಮೂಲಗಳಿಂದ)
- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು (9739369621)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ