ನಿತ್ಯ ಜೀವನದಲ್ಲಿ ಯಾವುದೇ ವ್ಯಕ್ತಿಯ ನಡುವೆ ಸಂಬಂಧಗಳು ಗಟ್ಟಿಯಾಗಲಿಕ್ಕೆ, ಬೆಸೆಯಲಿಕ್ಕೆ ಮುಖ್ಯ ಅಂಶವೇ ನಂಬಿಕೆ. ನಂಬಿಕೆ ಜೀವನ ಮತ್ತು ಜೀವದ ಉಸಿರು, ಪರಸ್ಪರರಲ್ಲಿ ನಾವು ಯಾವುದೇ ವಿಷಯಗಳ ಕುರಿತು ಮಾತನಾಡುವುದಾಗಿರಬಹುದು ಅಥವಾ ಹಂಚಿಕೊಳ್ಳುವುದಾಗಿರಬಹುದು ನಂಬಿಕೆ ಇದ್ದಾಗಲೇ ಸಾಧ್ಯ. ಪ್ರತಿ ವ್ಯಕ್ತಿಯೂ ಇದನ್ನು ಉಳಿಸಿಕೊಂಡು ಬದುಕು ಸಾಗಿಸಿದರೆ ಸಾರ್ಥಕತೆ ದೊರೆಯುತ್ತದೆ.
ನಾವು ಯಾವುದೇ ಕಾರ್ಯದಲ್ಲಿ ತೊಡಗಿದಾಗ ಇನ್ನೊಬ್ಬ ವ್ಯಕ್ತಿಯ ಸಹಾಯ ಸಹಕಾರ ಅತಿಅವಶ್ಯವಾಗುತ್ತದೆ. ಇದಕ್ಕೆ ಕಾರಣ ಆಯಾ ಕ್ಷೇತ್ರದಲ್ಲಿ ಅವರಿಗಿರುವ ಅಪಾರ ಅನುಭವ ಮತ್ತು ನುರಿತವಾದ ತಿಳುವಳಿಕೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಒಂದಿಲ್ಲ ಒಂದು ರೀತಿಯಲ್ಲಿ ನಂಬಿಕೆಯ ತಳಹದಿಯ ಮೇಲೆ ಪ್ರತಿಕ್ಷಣವನ್ನು ಕಳೆಯುತ್ತಾರೆ. ಯಾವುದೇ ರೀತಿಯ ಸಂಬಂಧಗಳು ಕೂಡ ನಂಬಿಕೆಯ ಹೊರತಾಗಿಲ್ಲ. ಪ್ರೀತಿ, ವ್ಯಾಮೋಹ, ಕಾಳಜಿ, ಕರುಣೆ, ಆತ್ಮೀಯತೆ, ಅನೋನ್ಯತೆ, ಸಹಭಾಗಿತ್ವ, ಈ ರೀತಿಯ ಮಾನವೀಯ ಗುಣಗಳು ಸಂತೃಪ್ತ ಬಾಳಿಗೆ ದಿವ್ಯ ಔಷಧಿಗಳು ಇದ್ದಂತೆ ಇವುಗಳಿಂದಲೇ ಬಾಳು ಬಂಗಾರವಾಗಿ ಭರವಸೆಯ ಹಾದಿಯಲ್ಲಿ ಸಂತಸದಿಂದ ಸಾಗುತ್ತದೆ.
ಪ್ರಸ್ತುತ ದಿನಮಾನಗಳಲ್ಲಿ ಮಾನವರ ನಡುವೆ ಅಸೂಯೆಯು ಅಗಾಧವಾಗಿ ಬೇರೂರಿದೆ. ಯಾರೋ ಬೆಳೆಯುತ್ತಿದ್ದಾರೆ ಎಂದರೆ ಅವರನ್ನು ಹೇಗೆ ಹತ್ತಿಕ್ಕಬೇಕು ಎಂಬ ದುಷ್ಟ ಭಾವನೆ ಹೊಂದಿರುತ್ತಾರೆ. ಅಲ್ಲದೆ ಅವರೊಡನೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸುತ್ತ, ಏಳಿಗೆಯನು ಸಹಿಸಲಾಗದೆ ಅಡ್ಡದಾರಿಗೆ ದೂಡುತ್ತ ಖುಷಿಪಡುತ್ತಾರೆ. ಮಾತುಗಳಲ್ಲೇ ಅಟ್ಟಕ್ಕೇರಿಸುತ್ತ ಹೀಯಾಳಿಸಿ ಮಾತನಾಡಿ ಪರೋಕ್ಷವಾಗಿ ಹಿಂಸೆ ನೀಡುತ್ತಾರೆ. ಇದರಿಂದ ಇತರರಿಗೆ ಮಾಡುವ ಕೆಡಕಿಗಿಂತ ನಮಗೆ ಹಾನಿ ಎಂಬುದು ಅರಿಯಲಾರರು. ಈ ರೀತಿಯ ಮನೋಭಾವನೆ ನಮ್ಮೊಳಗಿನ ಗುಣಗಳ ನೈಜ್ಯತೆ ಅನಾವರಣಗೊಳಿಸುವುದಲ್ಲದೆ ವ್ಯಕ್ತಿತ್ವದ ಪರಿಪೂರ್ಣ ಚಿತ್ರಣವನ್ನು ಸಮಾಜಕ್ಕೆ ತೆರೆದಿಡುತ್ತ ಬೆಲೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಲೂಬಹುದು.
ಇಂದು ಎಲ್ಲೇ ನೋಡಿದರೂ ಮೋಸವು ಆವರಿಸಿದೆ. ನಾವು ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಇದರಿಂದ ಹೊರತಿಲ್ಲ. ನಂಬಿಕೆಯೇ ಬದುಕಿನ ಜೀವಾಳ ಯಾರಾದರೂ ನಮಗೆ ಏನೇ ಕೆಲಸ ನೀಡಿದರೂ ಅವರು ನಮ್ಮ ಮೇಲಿಟ್ಟ ವಿಶ್ವಾಸ, ನಂಬುಗೆಯಿಂದ ನೀಡಿರುತ್ತಾರೆ. ಹಾಗಾಗಿ ಯಾವುದೇ ಕಪಟ ವಂಚನೆಗಳಿಗೆ ಜಾಗ ನೀಡದೆ ನಿಷ್ಠೆಯಿಂದ ಮಾಡಿ ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಕೆಲಸಕ್ಕೂ ಗೌರವ ವ್ಯಕ್ತಿಗೂ ಪ್ರಶಂಸೆ, ಹೀಗಾದಾಗಲೇ ಹೆಸರು ಉಳಿಯುತ್ತದೆ ಕಾರ್ಯ ಪ್ರೇರಣೆಯಾಗುತ್ತದೆ.
ಗೋಡೆಯ ಮೇಲೆ ಮೂಡಿರುವ ಪ್ರತಿಬಿಂಬವು ನಗು ನಗುತಲೆ ಸನಿಹಕೆ ಕರೆದು ಬೂಟಿನ ಕಸಿಯನು ಕಟ್ಟಿಸುವ
ನೆಪದಲಿ ಬೆನ್ನಿಗೆ ಚೂರಿ ಹಾಕುತ್ತಿದ್ದಾನೆ. ಈ ರೀತಿಯ, ನೀಚಕರು, ಮೋಸಗಾರರು, ವಂಚಕರು ವಿಶ್ವಾಸಕ್ಕೆ ದ್ರೋಹ ಬಗೆಯುವುದರ ಜೊತೆಗೆ ಸಮಾಜದ ಘಾತುಕರು ಎಂದು ಬಿಂಬಿತವಾಗುತ್ತಾರೆ. ಇವರು ಎರಡು ಮುಖಗಳ ಹಾವಿನಂತೆ ನಗುವಲ್ಲೇ ಬೆರೆತು ನಗುವಲ್ಲೇ ಕೊಲ್ಲುವ ದುಷ್ಟ ಜಂತುಗಳು.
ಇಂದಿನ ಕಲಿಯುಗದ ಪ್ರತಿ ಕಾಲಘಟ್ಟವನ್ನು ಅವಲೋಕಿಸುತ್ತ ಹೋದರೆ ದ್ರೋಹ ಬಗೆಯುವ ವಿಶ್ವಾಸಕ್ಕೆ ಕೊಳ್ಳೆ ಇಡುವ ಘಾತುಕರು ಇದ್ದೆ ಇದಾರೆ. ಇವರು ತಾವು ಏಳಿಗೆಯನು ಹೊಂದುವುದಿಲ್ಲ. ಏಳಿಗೆಯತ್ತ ಸಾಗುವವರಿಗೂ ಬಿಡುವುದಿಲ್ಲ. ಈ ರೀತಿ ಮನೋಭಾವನೆ ಎಲ್ಲಾ ಕಾಲದಲ್ಲಿ ಯೂ ಕೂಡ ದಟ್ಟವಾಗಿತ್ತು. ಆದರೆ ಮನಸ್ಥಿತಿಯ ಚಿಂತನೆ, ಯೋಚನೆಗಳ ವಾಮ ಮಾರ್ಗವು ಕೂಡ ವ್ಯಕ್ತಿಯನ್ನು ಇಂತಹ ಸ್ಥಿತಿಗೆ ತಳ್ಳುವುದಲ್ಲದೆ ಇತರರಿಗೂ ಕೆಡಕು ಬಯಸುವ ಭಾವನೆ ಒಡಮೂಡಿರುತ್ತದೆ. ಅಲ್ಲದೆ ಮನವು ಕಲ್ಮಶವಾಗಿ ವ್ಯಕ್ತಿತ್ವಕ್ಕೆ ಕಳಂಕ ತರುತ್ತದೆ.
ನಂಬಿಕೆಯೇ ಸಂಪತ್ತಿಗಿಂತ ಮೇಲು ಎಂಬುದನ್ನು ಅರಿತು ಬಾಳಬೇಕು. ಯಾರದೋ ಮನೆ ಹಾಳು ಮಾಡಿ ಮನಸು ನೋಯಿಸಿ. ಜೀವವನ್ನು ತೆಗೆದು ಬದುಕಲಿ ಮುಂದೆ ಬಂದರೆ ಇದು ಬೆಳವಣಿಗೆಯ ಪ್ರತೀಕವಲ್ಲ. ಅವಸಾನದ ದ್ಯೋತಕ. ಒಳ್ಳೆಯ ಮಾರ್ಗವ ಹಿಡಿದು ಜೀವನದಲ್ಲಿ ಏಳಿಗೆಯ ಕಂಡರೆ ಅದು ನಿಜವಾದ ಮನುಜನ ಬೆಳವಣಿಗೆ. ನಿಷ್ಠೆ ಪ್ರಾಮಾಣಿಕತೆ, ಕಾರ್ಯತತ್ಪರತೆಯಿಂದ ಸಾಗಿದರೆ ಹುಟ್ಟಿದ್ದಕ್ಕೂ ಸಾರ್ಥಕತೆ ಇಲ್ಲದಿರೆ ಎಷ್ಟೇ ಮೋಸ, ಹತ್ತಿಕ್ಕಿ ಮೇಲೆ ಬಂದರೆ ಅದು ನಿರರ್ಥಕತೆ.
ಮಾನವರಾದ ನಾವೆಲ್ಲ ಈ ಭೂತಾಯಿಯ ಮಕ್ಕಳು. ತಾಯಿ ಪ್ರತಿಯೊಬ್ಬರಿಗೂ ಜನ್ಮ ನೀಡಿ ತನ್ನೊಡಲಲ್ಲಿ ಪೋಷಿಸುವ ಹೊಣೆ ಹೊಟ್ಟುಕೊಂಡಿದ್ದಾಳೆ. ಜೊತೆಗೆ ಒಬ್ಬಂಟಿಯಾಗಿರಬಾರದೆಂದು ಕೂಡಿ ಬಾಳಲು ಜೀವಿಗಳಿಗೆ ಜನ್ಮನೀಡಿದ್ದಾಳೆ. ಈ ತಾಯಿಯ ಋಣವನ್ನು ನಾವೆಲ್ಲ ತೀರಿಸುವುದು ಸಾಧ್ಯವೇ ಇಲ್ಲ. ಆದರೆ ನಮ್ಮೊಳಗಿನ ಗುಣಗಳು ಒಳ್ಳೆಯದಾಗಿದ್ದರೆ ಭೂತಾಯಿ ಮಡಿಲು ಸದಾ ಶಾಂತಿ ಸಂಯಮದಿಂದ ಇರುತ್ತೆ. ಇದಕ್ಕೆ ನಾವು ನೀವೆಲ್ಲ ಮಾಡಬೇಕಾಗಿರುವುದು ಇಷ್ಟೇ ಪರಸ್ಪರ ಬೆಳೆಯುತ್ತ ಬೆಳೆಸುತ್ತ ಬಾಳಬೇಕು. ಬೆಳೆಯಲು ಸಾಧ್ಯವಾಗದಿದ್ದಾಗ ಬೆಳೆಯುವವರ ಜೊತೆಗೂಡಿ ಅವರ ಬೆಳವಣಿಗೆ ಹೇಗೆ ಸಾಧ್ಯವಾಯಿತು. ಹೇಗೆ ಈ ಹಂತಕ್ಕೆ ಬೆಳೆದಿರಿ ಎಂದು ಅವರಿಂದ ತಿಳಿಯುತ್ತ ಅಳವಡಿಸಿಕೊಂಡರೆ ಖಂಡಿತವಾಗಿ ಬೆಳೆಯುತ್ತಿರಿ. ಆಗ ಮೋಸ, ಕಪಟ, ವಿಶ್ವಾಸದ್ರೋಹ, ನಂಬಿಕೆದ್ರೋಹಕ್ಕೆ ಮನಸ್ಸಿನಲ್ಲಿ ಜಾಗವೇ ಇರುವುದಿಲ್ಲ. ಎಲ್ಲರೂ ನಿಮ್ಮನು ಆದರದಿಂದ ಪ್ರಶಂಸಿಸುತ್ತಾರೆ. ಸಮಾಜವು ಸದಾ ನಿಮ್ಮನ್ನು ಸ್ಮರಿಸುತ್ತದೆ. ಹಾಗಾಗಿ ಬೆನ್ನಿಗೆ ಚೂರಿ ಹಾಕುವುದ ಬಿಟ್ಟು ಬೆನ್ನಿಗೆ ಶಹಬ್ಬಾಸ್ ಎಂಬ ಪ್ರಶಂಸೆ ನೀಡುತ್ತಿರು ಆಗಲೇ ಏಳಿಗೆಯೂ ಸಾಧ್ಯ ಏಳಿಗೆಗೂ ಬದ್ಧ.ಪರಿಶ್ರಮದಿಂದ ಕಾರ್ಯ ಮಾಡುತ ಸಂತೃಪ್ತ ಜೀವನ ಸಾಗಿಸೋಣ ಇತರರಿಗೂ ಒಳ್ಳೆಯದು ಬಯಸಿ ಮಾನವರಾಗೋಣ.
- ಅವಿನಾಶ ಸೆರೆಮನಿ, ಬೈಲಹೊಂಗಲ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ