ದೊಡ್ಡಬಳ್ಳಾಪುರದಲ್ಲಿ ಲಕ್ಷ್ಮೀನಾರಣಪ್ಪ ಮತ್ತು ಮಹಾಲಕ್ಷ್ಮಮ್ಮನವರ ತೃತೀಯ ಪುತ್ರನಾಗಿ ಕ್ರಿ.ಶ 1848ರಂದು ರಾಮದಾಸರು ಜನಿಸಿದರು. ಬಾಲ್ಯದಲ್ಲಿ, ಎಲ್ಲಾ ಜನರು ಇವರನ್ನು ರಾಮಣ್ಣ ಎಂದೇ ಪ್ರೀತಿಯಿಂದ ಸಂಬೋಧಿಸುತಿದ್ದರು. ಇವರಿಗೆ, ನರಸಿಂಗರಾಯರು, ಬಾಲಕೃಷ್ಣರಾಯರು, ರಾಘವೇಂದ್ರರಾಯರು,ವೆಂಕಟರಾಯರು ಸಹೋದರರು. ರಾಮದಾಸರು ವಿವಾಹ ಮಾಡಿಕೊಂಡು, ಗೌರಿಬಿದನೂರಿನಲ್ಲಿ ವಾಸಿಸುತ್ತಿದ್ದರು. ದುರದೃಷ್ಟವಶಾತ್ ಪತ್ನಿ ಮತ್ತು ತಮ್ಮ ಚಿಕ್ಕ ಮಗುವನ್ನು ಕಳೆದುಕೊಂಡರು! ನಂತರ ತಮ್ಮ ಸಹೋದರನ ಮನೆಯಲ್ಲಿ, ದೊಡ್ಡಬಳ್ಳಾಪುರದಲ್ಲಿ ವಾಸ ಮಾಡಲು ಪ್ರಾರಂಭಿಸಿದರು. ಅಣ್ಣ ತಮ್ಮ, ರಾಮ-ಲಕ್ಷ್ಮಣರಂತೆ ಪ್ರೀತಿಯಿಂದ ಅನ್ಯೋನ್ಯದಿಂದ ಕೂಡಿದ್ದರು.
ಇವರ ಆಧ್ಯಾತ್ಮಿಕ ಆಚಾರ-ವಿಚಾರ ಗಮನಿಸಿ, ಪ್ರೀತಿಯಿಂದ ದೊಡ್ಡಬಳ್ಳಾಪುರದ ಪ್ರಸಿದ್ಧ ಪಂಡಿತರಾದ ಮುದ್ದುಮೋಹನ ವಿಠಲದಾಸರು, ಈ ಎಲ್ಲಾ ಸಹೋದರರಿಗೆ, ಕ್ರಮವಾಗಿ ಬಾಲಕೃಷ್ಣವಿಠಲ, ಕರಿವರದವಿಠಲ, ಕರುಣಾಕರವಿಠಲ, ಜ್ಞಾನದಾಯಕ ವಿಠಲ ಎಂದು ಅಂಕಿತ ನೀಡಿ, ದಾಸಕೂಟಕ್ಕೆ ಸೇರಿಸಿಕೊಂಡು ಸಂತೋಷದಿಂದ ಶಿಷ್ಯರನ್ನಾಗಿ ಮಾಡಿಕೊಂಡರು. ರಾಮದಾಸರ ತಮ್ಮ ವೆಂಕಟರಾಯರು ಅಸ್ವಸ್ಥರಾಗಿರಲು ದೊಡ್ಡಬಳ್ಳಾಪುರದ ಪ್ರಸಿದ್ಧರಾದ ದಾಸರೂ, ಜ್ಞಾನಿಗಳು ಮಹಾಮಹಿಮಾನ್ವಿತರಾದ ಮುದ್ದುಮೋಹನ ವಿಠಲದಾಸರು ಪ್ರತಿ ದಿನ ದೇವರ ನಾಮಗಳನ್ನು ಹೇಳಿ, ಅವರ ದೇಹದಾರ್ಢ್ಯ ಸರಿಯಾಗಿರಲೆಂದು, ಗುಣಹೊಂದಿ ಮೊದಲಿನಂತೆ ಮಾಡಿದ್ದು ಪವಾಡವೆಂದು ಹೇಳಬಹುದು.
ತದನಂತರ ರಾಮದಾಸರ ಜೊತೆಗೆ, ವೆಂಕಟರಾಯರು, ಸಂಚಾರ ಮಾಡಲು ಪ್ರತಿವರ್ಷ, ಕ್ಷೇತ್ರಗಳಾದ, ಮಳಖೇಡ, ಗದ್ವಾಲ, ಆತ್ಮಕೂರು, ರಾಯಚೂರು ಪ್ರದೇಶಗಳಲ್ಲಿ ಜರುಗುತ್ತಿದ್ದ ವಿದ್ವತ್ಸಭೆಯಲ್ಲಿ ಭಾಗವಹಿಸುತ್ತಿದ್ದರು. ಪಂಡಿತ ರಾಮದಾಸರ ಜೊತೆಗೆ ಇವರ ತಮ್ಮ ವೆಂಕಟರಾಯರೂ, ಹರಿಕಥೆಗಳಿಗೆ ಸಹಾಯಕರಾಗಿ, ಸನಾತನದ ಧರ್ಮವನ್ನು ಜನರಿಗೆ ಬೋಧಿಸಿ, ನಂತರ ತೀರ್ಥಯಾತ್ರೆಗೆ ದೇಶಸಂಚಾರವನ್ನು ಮಾಡುತ್ತಿದ್ದರು. ರಾಮದಾಸರು, ವೆಂಕಟರಾಯ ದಾಸರೂ, ತಮ್ಮ ಗುರುಗಳಿಂದ ರಾಘವೇಂದ್ರ ದಾಸರ ಜೊತೆಯಲ್ಲಿ ಮೊದಲಕಲ್ಲು ಶೇಷದಾಸರ ಸೇವೆ, ಭಕ್ತಿಯಿಂದ, ಗೌರವದಿಂದ ಮಾಡಿದರು. ರಾಮದಾಸರು ನಿಸ್ವಾರ್ಥ ಸೇವೆ ಮಾಡುವ ಮಹಿಮಾನ್ವಿತ ದಾಸರು, ಪಂಡಿತರು, ವಿದ್ವಾಂಸರು. ತುಂಬಾ ಉದಾರಿಗಳೂ, ವಿದ್ಯಾಪಕ್ಷಪಾತಿಗಳು, ಆಚಾರವಂತರಾಗಿ, ವಿದ್ವಾಂಸರಿಗೆ ಅನೇಕ ದ್ರವ್ಯಗಳನ್ನು ನೀಡುತ್ತಿದ್ದರು. ಪ್ರತಿ ನಿತ್ಯ, ರಾಮದಾಸರು, ಉದಯರಾಗ ಹೇಳಿದ ನಂತರ ಶ್ರೀ ವಾದಿರಾಜರು ವಿರಚಿತ ದಶಾವತಾರ ನಾಮವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದುದು ವಿಶೇಷ!
ತದನಂತರ, ಅನೇಕ ದೇವರನಾಮಗಳನ್ನು ಹಾಡುತ್ತಿದ್ದರು. ಇವರೊಂದಿಗೆ ಪಂಡಿತರಾದ, ಮಹಾ ವಿದ್ವಾಂಸರಾದ ಸ್ನೇಹಿತರು ಮುಳಬಾಗಿಲು ರಾಮಣ್ಣಾಚಾರ್ಯರು, ಗೌಡಗೆರೆ ವೆಂಕಟರಮಣ ಆಚಾರ್ಯ, ಸರೋವರದ ಭೀಮಾಚಾರ್ಯ, ಮೊದಲಾದ ಪಾಠ ಪ್ರವಚನದಲ್ಲಿ ಜಿಜ್ಞಾಸೆ ಮಾಡುತ್ತಿದ್ದರು. ಮನೆಗೆ ಬಂದ ಪಂಡಿತರು ಇವರ ಮನೆಯಲ್ಲಿ ಭೋಜನ ಸ್ವೀಕರಿಸಿ, ಪುನಃ ಗ್ರಂಥಾವಲೋಕನವನ್ನು ಮಾಡುತ್ತಿದ್ದರು. ರಾಮದಾಸರು ತಮ್ಮಿಂದ ರಚಿತವಾದ, ಕೀರ್ತನೆ, ನಿನ್ನ ನಂಬಿದೆನೈಯ್ಯಾ, ನಾರಾಯಣ ಕೃಷ್ಣ, ಎನ್ನ ಕೈಪಿಡಿಯೋ ನಾರಾಯಣ, ಗೋಪಿಗೀತ, ಪಾಲಯಾಚ್ಯುತ ಪಾಲಯಾ, ಶ್ರೀ ವಾದಿರಾಜರು ರಚಿಸಿದ ಮಂಗಳಾಷ್ಟಕವನ್ನೂ ಭಕ್ತಿಯಿಂದ ಹಾಡುತ್ತಿದ್ದರು.
ರಾಮದಾಸರು ಪ್ರತಿ ವರ್ಷ ವಿಜಯದಾಸರ ಆರಾಧನೆ ಕಾತಿ೯ಕ ಶುಧ್ಧ ದಶಮಿಯಂದು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಅನೇಕ ಪಂಡಿತರನ್ನು ಆಹ್ವಾನಿಸಿ, ತೀರ್ಥಪ್ರಸಾದದ ಜೊತೆಗೆ ದಕ್ಷಿಣೆ ಸಹ ನೀಡಿ ಸತ್ಕರಿಸುತ್ತಿದ್ದರು. ಅನೇಕ ಪುರುಷರು, ಸ್ತ್ರೀಯರು ಇವರಿಂದ ಮಂತ್ರೋಪದೇಶ ಪಡೆದರು. ಅನೇಕ ದೇವರನಾಮಗಳನ್ನು, ಕೀರ್ತನೆಗಳನ್ನು ಸುಳಾದಿಗಳನ್ನು ಅರ್ಥಸಹಿತ ಇವರಿಂದ ಹೇಳಿಸಿಕೊಳ್ಳುತ್ತಿದ್ದರು. ವೇಣುಗೋಪಾಲದಾಸರು ರಚಿಸಿದ ನುಡಿಯನ್ನು ತಪ್ಪದೇ, ವಿನಯದಿಂದ ಆಚರಿಸುತ್ತಿದ್ದರು. ಮೈಸೂರು ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಸಮ್ಮುಖದಲ್ಲಿ, ಹರಿಕಥೆ ಮಾಡಿ, ಅವರಿಂದ ಅನೇಕ ರೀತಿಯಲ್ಲಿ ಗೌರವಿಸಲ್ಪಟ್ಟ ಮಹಾನುಭಾವರು. ರಾಮದಾಸರು ಅನೇಕ ಸ್ತೋತ್ರ, ದೇವರನಾಮಗಳನ್ನು ರಚಿಸಿ ಭಕ್ತರಿಗೆ ನೀಡಿದ್ದಾರೆ.
ಬಹು ಎತ್ತರದ, ವಿಶಾಲ ವಕ್ಷ ಸ್ಥಳದ ವ್ಯಕ್ತಿಯಾಗಿ, ಆಜಾನುಬಾಹುಗಳಾಗಿದ್ದರು. ನಾಲ್ಕೈದು ಗಂಟೆ ನಿಂತೇ ಹರಿಕಥೆ ಮಾಡುತ್ತಿದ್ದರು. ಯಾತ್ರೆಗೆ ಹೊರಟರೇ ತಂಬೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾಲು ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುತ್ತಿದ್ದರು! ಬಹುಕಾಲ ತಿರುಪತಿ ಸೇವೆ ಮಾಡಿದ ಮಹನೀಯರು. 1908ರಲ್ಲಿ, ಬೆಂಗಳೂರಿಗೆ ರಾಮದಾಸರು ದೊಡ್ಡಬಳ್ಳಾಪುರದಿಂದ ಬಂದು, ಚಾಮರಾಜಪೇಟೆಯಲ್ಲಿ ವಾಸ ಮಾಡಿ, ಹರಿಕಥೆ ಮಾಡುತ್ತಿದ್ದರು! ಇವರ ಹರಿಕಥೆ ಕೇಳಲು ಹೆಚ್ ರಾಮಯ್ಯನವರು, ಎಂ.ವಿ ಶ್ಯಾಮರಾಯರು, ಅಪ್ಪೂರಾಯರು ಮತ್ತು ಮೂಲಿಮನೆ ರಾಮರಾಯರು, ಕರ್ಪೂರ ಶ್ರೀನಿವಾಸ ರಾಯರು, ದೇಶಮುಖಿ ಶ್ಯಾಮರಾಯರು, ವೆಂಕಟಪತೈಂಗ್ಯಾರ್ಮೊ ದಲಾದವರು ಅದಲ್ಲದೇ, ಗಣ್ಯವ್ಯಕ್ತಿಗಳು, ಅಧಿಕಾರಿಗಳು, ಪಂಡಿತರೂ ಸಭೆಯನ್ನು ಸಂತೋಷದಿಂದ ಅಲಂಕರಿಸುತ್ತಿದ್ದರು. ಎಲ್ಲರೂ, ರಾಮದಾಸರ ಹರಿಕಥೆ ಕೇಳಿ ಪುಳಕಿತರಾಗಿ ಧನ್ಯರಾಗುತ್ತಿದ್ದರು. ರಾಮದಾಸರು, ಹರಿಸರ್ವೋತ್ತಮತ್ವ, ದ್ವೈತ ಸಿದ್ಧಾಂತ, ಸನಾತನ ಧರ್ಮ ನಿರೂಪಿಸಿ, ತಾವೂ ಆಚರಿಸಿ ಆದರ್ಶಪ್ರಾಯರಾಗಿದ್ದರು.
ಕ್ರಮೇಣ ರಾಮದಾಸರಿಗೆ ದೇಹಾಲಸ್ಯವಾಗಿ, ಉತ್ತರಾಯಣ ಬರುವ ಕಾಲ ಕಾಯುತ್ತಿದ್ದರು. ತಾವು ರಚಿಸಿದ, ನಿನ್ನ ನಂಬಿದೆನೆಯ್ಯಾ, ನಾರಾಯಣ ಕೃಷ್ಣ, ಎಂಬ ದೇವರ ನಾಮ ಹೇಳಿ, ದಾನ ಧರ್ಮಗಳನ್ನು ಮಾಡಿ, ತಮ್ಮ ಅಂಕಿತದಿಂದ ಕೂಡಿದ "ಕರಿವರದ ವಿಠಲನು ನಾರಾಯಣ ಕೃಷ್ಣ ಭರದಿ ಕೈ ಪಿಡಿವನೈ ನಾರಾಯಣ "ನಾರಾಯಣ, ನಾರಾಯಣ, ನಾರಾಯಣ ಕೃಷ್ಣ, ಲಕ್ಷ್ಮೀನಾರಾಯಣ ಎಂದು ಹೇಳುತ್ತಾ ಕ್ರಿ.ಶ. 1919 ರಂದು ಜನವರಿ, ಪುಷ್ಯ, ಬಹುಳ, ಪಾಡ್ಯ, ಇಹಲೋಕ ತ್ಯಾಗ ಮಾಡಿ, ಕೀರ್ತಿಶೇಷರಾದರು.
- ಶ್ರೀಧರ. ರಾಯಸಂ, ಗಿರಿನಗರ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ