ಪುತ್ತೂರು: ಜು.26ರಂದು ಕಾರ್ಗಿಲ್ ವಿಜಯ ದಿವಸದ 25ನೇ ವರ್ಷಾಚರಣೆ

Upayuktha
0

‘ಯೋಧರ ಜತೆಗೆ ನಾವಿದ್ದೇವೆ’ ಎಂಬ ಸಂದೇಶ ರವಾನೆಯ ಉದ್ದೇಶ


ಪುತ್ತೂರು:
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ರೂಪಿಸಿರುವ ಕಿಲ್ಲೆ ಮೈದಾನದ ಮುಂಭಾಗದಲ್ಲಿನ ಅಮರ್ ಜವಾನ್  ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಜುಲೈ 26ರಂದು ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಲಿದೆ.


ದೇಶಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿ ಸಮಾಜವನ್ನು ಕಾಪಾಡುವ ಯೋಧರಿಗಾಗಿ ಪ್ರಾರ್ಥನೆ ಮಾಡುವ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿದೆ. ಕಲವು ದಿನಗಳ ಹಿಂದೆಯಷ್ಟೇ ಕಾರ್ಗಿಲ್ ವಿಜಯದ ಇಪ್ಪತ್ತೈದನೆಯ ವರ್ಷಾಚರಣೆಯನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಿದ್ದಾಗ, ಆ ಕಾರ್ಯಕ್ರಮವದಲ್ಲಿ ಭಾಗವಹಿಸಿದ್ದ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಯೋಧರಿಗಾಗಿ ದೇವರಲ್ಲಿ ನಿತ್ಯ ಪ್ರಾರ್ಥಿಸಿ, ದೀಪ ಬೆಳಗುವಂತೆ ಕರೆನೀಡಿದ್ದರು. 


ಅವರ ಮಾತನ್ನು ಪುರಸ್ಕರಿಸುವ ದ್ಯೋತಕವಾಗಿ ಪುತ್ತೂರಿನ ಸಮಸ್ತ ನಾಗರಿಕರನ್ನೊಳಗೊಂಡಂತೆ ಅಮರ್ ಜವಾನ್ ಜ್ಯೋತಿಯ ಬಳಿ ಹಣತೆ ಬೆಳಗುವ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ನಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಿರುವ ಯೋಧರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಯೋಧರು ನಮ್ಮಿಂದ ಏನನ್ನೂ ಬಯಸುತ್ತಿಲ್ಲ. ಕೇವಲ ನಮ್ಮ ಪ್ರಾರ್ಥನೆ ಹಾರೈಕೆಗಳಷ್ಟೇ ಅವರ ನಿರೀಕ್ಷೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಯೋಧರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಬೇಕಿದೆ. 


ಹಾಗಾಗಿ ಕಾರ್ಗಿಲ್ ವಿಜಯ ದಿವಸದಂದು ನಾಗರಿಕ ಬಂಧುಗಳೆಲ್ಲರೂ ಜತೆಗೂಡಿ ಹಣತೆ ಹಚ್ಚಿ ಯೋಧರಿಗಾಗಿ ಪ್ರಾರ್ಥನೆ ಮಾಡಬೇಕಿದೆ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು. ಹಣತೆ ಹಾಗೂ ಉರಿಸುವ ಬತ್ತಿಗಳನ್ನು ಆಯಾ ವ್ಯಕ್ತಿಗಳೇ ಸಿದ್ಧಪಡಿಸಿ ತರುವಂತೆ ಆಯೋಜಕರು ಮನವಿ ಮಾಡಿದ್ದಾರೆ. 


ಹಣತೆಗೆ ಬೇಕಾದ ಎಣ್ಣೆಯ ವ್ಯವಸ್ಥೆಯನ್ನು ಸ್ಥಳದಲ್ಲಿಯೇ ಉಚಿತವಾಗಿ ಕಲ್ಪಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಯಾವುದೇ ಭಾಷಣ, ಮಾತುಗಳಿರುವುದಿಲ್ಲ ಎಂಬುದು ಗಮನಾರ್ಹ. ಸಭಾ ಕಾರ್ಯಕ್ರಮವೂ ಇರದೆ ಕೇವಲ ಯೋಧರನ್ನು ಗೌರವಿಸುವುದು, ನಮಿಸುವುದಷ್ಟೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. 


ಬೆಳಗ್ಗೆ 8ರಿಂದ 10ರವರೆಗೆ ಹಣತೆ ಬೆಳಗಿ ಸೈನಿಕರಿಗೆ ಗೌರವ ಸಮರ್ಪಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಈಗಾಗಲೇ ಜುಲೈ 19ರಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪುತ್ತೂರಿನಲ್ಲಿ ಆಯೋಜನೆಗೊಂಡಿರುವ ಕಾರ್ಗಿಲ್  ವಿಜಯೋತ್ಸವದ 25ನೆಯ ವರ್ಷಾಚರಣೆ ಪುತ್ತೂರಿನ ಇತಿಹಾಸದಲ್ಲೇ ದಾಖಲೆಯ ಕಾರ್ಯಕ್ರಮವಾಗಿ ಮೂಡಿಬಂದಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕಾರ್ಯಕ್ರಮ ದೀಪ ಬೆಳಗುವ ಮೂಲಕ ಸಾಕಾರಗೊಳ್ಳಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top