ನೆನಪಿನಾಳದಿಂದ: ಸಾಹಿತಿಗಳಿಗಾಗದ ಆಟ

Upayuktha
0


ನಮ್ಮ ಉಡುಪಿಯ ಅನಂತಮೂರ್ತಿ ಡಾಕ್ಟ್ರ ನೇತೃತ್ವದಲ್ಲಿ ಒಂದು ವಾರ ಕಾಲ ಬೆಂಗಳೂರು ನಗರದಲ್ಲಿ ಸಾಹಿತ್ಯೋತ್ಸವದ ಗೌಜಿಯೋ ಗೌಜಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿತರಣ ಸಮಾರಂಭದೊಂದಿಗೆ ಅಕಾಡೆಮಿ-95 ಪ್ರದರ್ಶನ, ಲೇಖಕರ ಗೊಟ್ಟಿ, ಒಂದೆರಡು ಸಂವತ್ಸರ ಉಪನ್ಯಾಸಗಳು, 'ಆಧುನಿಕ ಭಾರತೀಯ ಸಾಹಿತ್ಯ-ವಿಭಿನ್ನ ಕವಲುಗಳು' ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಎಂದು ಗಮ್ಮತ್ತಾಂಡೋ ಗಮ್ಮತ್ತಾಂಡು. ಭಾಷಣ, ಸಂವಾದ ಕಾರ್ಯಕ್ರಮಗಳಂತೆಯೇ ತಿಂಡಿ ತೀರ್ಥಕ್ಕೂ ಚೊಕ್ಕ ವ್ಯವಸ್ಥೆಯಾಗಿತ್ತು.


ಮಹಾಶ್ವೇತಾದೇವಿ, ನಿರ್ಮಲ್ ವರ್ಮ, ಕಾರಂತ, ಪಣಿಕ್ಕರ್, ಭಿಷ್ಮ ಸಹಾನಿ, ಮಹಾಪಾತ್ರ, ಅಲೋಕ್ ರಾಯ್, ಮುಲ್ಕರಾಜ್ ಎಂಬ ವಿಶೆಷ ಅತಿಥಿಗಳ ಪಟ್ಟಿಯ ನಡುವೆ ಎಂಟೀವಿ ಹೆಸರೂ ಮೆರೆದಿತ್ತು. (ಜ್ಞಾನಪೀಠ ಪ್ರಶಸ್ತಿ ವಿಜೇತ ಎಂಟಿವಿ; ವಿಡಿಯೋ ಜಾತಿಗಳ ಎಂಟಿವಿ ಅಲ್ಲ.) ಸಾಹಿತ್ಯ, ಶಿಕ್ಷಣಾರ್ಥಿಗಳಿಗೆ ಮೈನವಿರೇಳಲು ಇನ್ನೇನು ಬೇಕು?

ಕನ್ನಡಕ್ಕೆ ಹೆಸರು ತಂದಿರುವ ಮೂರ್ತಿ ಡಾಕ್ಟ್ರು, 1995ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ವಿವಿಧ ಭಾರತೀಯ ಭಾಷೆಗಳ ಸಾಹಿತಿಗಳನ್ನು ಕರ್ನಾಟಕಕ್ಕೆ ಕರೆತಂದದ್ದು ಮತ್ತಷ್ಟು ಸಂತೋಷದ ವಿಚಾರ.


(ಪ್ರಶಸ್ತಿ ವಿಜೇತ 20 ಭಾಷೆಗಳಲ್ಲಿ ನೆರೆಯ ನೇಪಾಲಿ ಭಾಷೆ, ಹಾಗೆಯೇ ಆಡುಭಾಷೆಗಳಾದ ಕೊಂಕಣಿ, ಮೈಥಿಲಿಗಳ ಹೆಸರೂ ಪಟ್ಟಿಯಲ್ಲಿದ್ದುದನ್ನು ಕಂಡು ನಮ್ಮ ತುಳುವಪ್ಪೆಗೂ 'ಒಂಜಿಯತ್ತ್ ಒಂಜಿ ದಿನ ಇಂದುವೇ ಮರ್ಯಾದಿ ಬರೊಡು ಪಂಡ್‌ದ್ ಕನ ಕಟ್ಟುನಯಿಟ್ಟು ವಾ ತಪ್ಪ್‌ಲಾ ಇಜ್ಜಿಯತ್ತೆಯೇ..! ಡಾಕ್‌ಟ್ರೆ)


ಈ ಸಾಹಿತ್ಯ ಹಬ್ಬದ ಗೌಜಿಯಲ್ಲಿ ಖುಶಿಕೊಡುವಂತಹ ಮತ್ತೊಂದು ಕಾರ್ಯಕ್ರಮವೂ ಸೇರಿಕೊಂಡಿತ್ತು. ಅದೇನೆಂದರೆ ಅಖಿಲ ಭಾರತ ಪ್ರವಾಸದಲ್ಲಿರುವ ಸ್ವೀಡಿಶ್ ಸಾಹಿತಿಗಳೊಂದಿಗೆ ಸ್ಥಳೀಯ ಸಾಹಿತಿಗಳ ಸರಸ- ಸಂವಾದ ಪ್ರಕ್ರಿಯೆ.


ಅದು ನಡೆದದ್ದು ಊರಾಚೆ ಕ್ಯಾಲಿಫೋರ್ನಿಯಾ ರಿಸಾರ್ಟ್‌ನಲ್ಲಿ. 90 ನಿಮಿಷಗಳ ಸಾಹಿತಿಕ ಮಾತುಕತೆಗಳ ನಂತರ ಷಡಕ್ಷರಿ ದಂಪತಿಗಳು ಏರ್ಪಡಿಸಿದ ವಿಹಾರೋತ್ಸವದೌತಣ ಇತ್ತು.


ತೆಂಗಿನ ಮರದೆಡೆಗಳಿಂದ ಬೀಸುವ ತಂಗಾಳಿ

ತಿಳಿ ನೀಲ ಈಜುಕೊಳದಿಂದ ಚಿಮ್ಮುವ ನೀರು

ಯುವ ಸಂವತ್ಸರದ ಉತ್ತರಾಯಣದ

ಶಿಶಿರ ಋತುವಿನ ಕುಂಭ ಮಾಸದ ಬಿಸಿಲು

ಕ್ಯಾಲಿಫೋರ್ನಿಯಾ ರಿಸಾರ್ಟ್ನ ಸಂಡೇ

ಕಾರ್ನಿವಲ್ ನಲ್ಲಿದ್ದ ನವ ಬೆಂಗಳೂರಿಗರ

ಇಂಗ್ಲೀಷಿಂದಿ ತಮಿಳು, ಪಂಜಾಬಿ, ಮಲೆಯಾಳಿ,

ಗುಜರಾಥಿ, ಭಾರತೀಯ ಭಾಷೆಗಳ ಮಾತುಗಳ

ಸಿಂಪಡಿಕೆ ನಡುವೆ ಸಾಹಿತಿಗಳ ಸಮೂಹದೌತಣ


ಪಲಾವ್, ರೋಟಿ, ಚಿಕನ್ ಮಸಾಲಾ, ಮೀನು ಕೊಳಂಬು, ಚೋರ್ ಉಂಡು ಐಸ್‌ಕ್ರೀಂ, ಫ್ರುಟ್‌ ಸಲಾಡ್‌ ರುಚಿ ನೋಡಿ ಸಂತೃಪ್ತಿಗೊಂಡಾಗ ಬಂತು ಸಾಹಿತಿಗಳಿಗಾಗಿ ವಿಶೇಷ 'ಮ್ಯೂಸಿಕಲ್ ಚೆಯರ್' ಆಟದ ಆಹ್ವಾನ. ಸಂಗೀತ ಕುರ್ಚಿ ಸ್ಪರ್ಧೆ ಸಾಹಿತಿಗಳಾರಿಗೂ ಪಸಂದ್ ಎನಿಸಲಿಲ್ಲ.


ಸ್ವೀಡಿಶ್ ಸಾಹಿತಿಯೊಬ್ಬರು ಕನ್ನಡ ಬರಹಗಾರರೊಬ್ಬರನ್ನು ಕೇಳಿಯೇಬಿಟ್ಟರು. 'ಏನಿದು ವಿಶೇಷ ನಿಮ್ಮಲ್ಲಿ ಸಾಹಿತಿಗಳು ಮ್ಯೂಸಿಕಲ್ ಚೆಯರ್ ಆಡುತ್ತಾರೆಯೇ' ಎಂದು.


ಅದರಲ್ಲಿ ತುಂಟತನವಿತ್ತೋ ಗೊತ್ತಾಗಲಿಲ್ಲ.


ಯಾಕೆ ಮ್ಯೂಸಿಕಲ್ ಚೆಯರ್ ಆಡೋದಿಲ್ವೇ' ಅಂತ ನೇರವಾಗಿ ಡಾಕ್‌ಟ್ರನ್ನೇ ಕೇಳಿದಾಗ 'ಏಯ್ ಎಲ್ಲಪ್ಪ ಟೈಮೆಲ್ಲಿದೆ, ಇನ್ನೊಂದು ಮೀಟಿಂಗ್‌ಗೆ ಹೋಗ್ಬೇಕು' ಎಂದು ನಸುನಗುತ್ತ ಉತ್ತರ ಬಂತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top