ನೆನಪಿನಾಳದಿಂದ: ಕಲಿಯೋ ಕಾಲ

Upayuktha
0

 



ನು ಮಾಡಲಿ ಸುಮ್ಮನೆ ಕುಳಿತುಕೊಂಡು ಎಂದು ತಲೆಕೆರೆದು ಕೊಳ್ಳುವಾಗ ಕೆಂಧೂಳಿಯಿಂದ ತಣ್ಣನೆಯ ಗಾಳಿಸುತ್ತಿದ್ದುದು ಸ್ಟಾಪ್‌ ಆಗಿ ಮಂಡೆ ಬಿಸಿಯೇರಿತು. ಗುರುವಾರ ಬಂದೇ ಬಿಡುತ್ತಿದೆ. ವಾಚ್‌ ನಿಲ್ಲಿಸಬಹುದು, ಪೆನ್‌ ಮೂಲೆಯಲ್ಲಿಡ ಬಹುದು. ಕೆಂಧೂಳಿಯನ್ನು ತಡೆಯಲಾಗುತ್ತದೆಯೇ! ಏನು ಮಾಡಲಿ ಎಂದು ಯೋಚಿಸುತ್ತಲಿರುವಾಗ ಬಿಸಿಬಿಸಿ ಕಾಫಿ ನೀಡುವ ಕೈಯೇ ಮುಂದೆ ಬಂತು. ಕಾಫಿ ಸ್ವಾದ ಹೇಗಿತ್ತೆಂದರೆ ನಮ್ಮಜ್ಜಿ ಕಾಲದ ಕಥೆಯೊಂದು ನೆನಪಾಯಿತು. ನನ್ನ ಬಾಯಿ ಮುಚ್ಚಿತು. ಕೈಬೆರಳುಗಳು ಲ್ಯಾಪ್‌ಟಾಪ್‌ ಮೇಲೇರಿದವು. 



ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಬರಬೇಕಾದುದು ಸತ್ಯ ವಿಚಾರಗಳು ಮತ್ತು ವಿಶ್ಲೇಷಣೆಗಳು. ಆದರೆ, ಈಗ ಟೆಲಿವಿಶನ್‌, ಮೊಬೈಲ್‌ಗಳ ಸೂರಿಲ್ಲದ ಸುದ್ದಿ ಸಂಭ್ರಮಗಳು ಹೆಚ್ಚಾಗಿ ಬಿಡುತ್ತಿವೆ. ಜೊತೆಗೆ ಯಾವುದು ಸತ್ಯ, ಯಾವುದು ಸುಳ್ಳೂ ಎಂದು ಕೈ ಎತ್ತಿ ಕುಣಿಸಿ ಓದುಗರು- ನೋಡುಗರನ್ನು ಎಚ್ಚರಿಸುವ ಪ್ರಯತ್ನಗಳಾಗುತ್ತಲಿವೆ. ಪತ್ರಿಕೋದ್ಯಮದಲ್ಲಿ ಸೆನ್ಸೇಶನ್‌ ಅಂಕಣವೆಂದರೆ ಹಸಿಬಿಸಿ ರಾಜಕಾರಣ, ಕ್ರಿಕೆಟ್‌ ಮ್ಯಾಚಿನ ಗೌಜು ಗದ್ದಲ, ಹಾಕಿಯಲ್ಲಿ ಯಾರು ಸೋತರು, ಯಾರು ಗೆದ್ದರು ಬೆಟ್ಟಿಂಗ್‌ಗೇ ಸೀಮಿತವಾಗಿರಬೇಕಿಲ್ಲ.  ಹಾಗೆಯೇ ಲೋಕ ಮತ್ತು ವಿಧಾನ ಸಭೆಗಳು ಝೀರೋ ಅವರ್‌ಗಳ ಸುದ್ದಿಯನ್ನು ಮೀರಿ ಓದುಗರೂ ವೈವಿಧ್ಯತೆಯನ್ನು ಬಯಸುತ್ತಾರೆ ಎಂದು ಪತ್ರಕರ್ತರುಗಳೇ ಬಾಯಲ್ಲಿ ಹೇಳುತ್ತಲಿರುತ್ತಾರೆ. ನನ್ನ ಓದುವಿಕೆಗೂ ಲೇಖನಿಗೂ ಅಂತಹ   ಅನುಭವ ಅನುಭವಗಳಾಗಿವೆ.  


ಏನೂ ತೋಚದಿರುವಾಗ ಕಣ್ಣು ಮುಚ್ಚುತ್ತದೆ. ಕನಸಿನಲ್ಲಿ ಕಥೆಗಳ ಸಾಲೇ ಮೂಡಿ ಬರುತ್ತವೆ. ನಾನು ಅಡಿಕೆ ಮರ, ತೆಂಗಿನ ಮರ ಹತ್ತಿ-ಇಳಿಯುತ್ತಲಿದ್ದ ತೋಟದಿಂದ ಶಾಲೇ ಹೋದವನು. ವಿದ್ಯೆ, ಅನುಭವ, ಕಲಿಕೆಯೆಂದು ಜಗವಿಡೀ ಸುತ್ತಲು ಹಿರಿಯರ ಆಶಿರ್ವಾದ ಪಡೆದವನು. ಅಜ್ಜಿ ಹೇಳಿದ ಕಥೆಗಳಿಂದ ಸುದ್ದಿಸೂರಿನ ಆಕಾಶದವೆರೆಗೆ ಕಣ್ಣುಕಿವಿಯಿಟ್ಟು ಮನಸ್ಸು ಜಾಗ್ರತಗೊಳಿಸುವ ಅವಕಾಶ ಪಡೆದವನು. ಸಮಯ ಸಂದರ್ಭವೆನ್ನದೆ ‍ಕಣ್ಣುಮುಚ್ಚಿ ಕನಸು ನೆಯ್ಯುವ ಉತ್ಸಾಹ ಕಲಿತವನು. ನೆನಪಾಗುವ ಒಂದು ಕಥೆ ಹೀಗಿದೆ. ಒಬ್ಬ ಖರ್ಜೂರದ ಮರವನ್ನೇರಿ ಫಲ ಕೊಯ್ಯಲು ಸಿದ್ಧನಾದನಂತೆ. ಆದರೆ ಮರ ಹತ್ತುವುದು ಸಮಸ್ಯೆಯಾಯಿತು.  ಅಪಾಯಕಾರೀ ಮರ ಹಿಡಿಯಲು ಗೆಲ್ಲುಗಳಿಲ್ಲ. ಏನೇ ಆಧಾರಗಳಿಲ್ಲ. ಅತನಿಗೆ ದೇವರ ನೆನಪಾಯಿತು. "ದೇವಾ ನಾನು ಮರಹತ್ತಿ ಹಣ್ಣು ತೆಗೆದು ಸುರಕ್ಷಿತವಾಗಿ ಇಳಿದಲ್ಲಿ ನಿನ್ನ ಡಬ್ಬಿಗೆ 5 ರೂಪಾಯಿ ಹಾಕುತ್ತೇನೆ" ಎಂದು ಹರಕೆ ಹೊತ್ತನಂತೆ. ತಥಾಸ್ತು ಎಂದನಂತೆ ದೇವರು.


ಮರ ಆರ್ಧ ಹತ್ತುವಾಗ ಆತ ಯೋಚಿಸಿದನಂತೆ. ಕಷ್ಟಪಟ್ಟು ಹತ್ತುವುದು ನಾನು, ಇದರಲ್ಲಿ ದೇವರ ಸಹಾಯ ಏನಿದೆ? ಸರಿ ಕೊಟ್ಟ ಮಾತಿಗಾಗಿ ಎರಡು ರೂಪಾಯಿ ಹಾಕುತ್ತೇನೆ ಎಂದುಕೊಂಡನಂತೆ. ದೇವರೂ ಅದಕ್ಕೊಪ್ಪಿದ.


ಮರದ ತುದಿಗೆ ಏರಿದಾಗ ಪ್ರಯತ್ನ ಎಲ್ಲಾ ನನ್ನದೇ, ಎರಡು ರೂ. ಯಾಕೆ ಕೊಡಬೇಕು! ಎಂದು ಚಿಂತಿಸಿ ದೇವಾ ಕ್ಷಮಿಸು. ಒಂದು ರೂಪಾಯಿ ಕೊಡುತ್ತೇನಪ್ಪಾ! ಎಂದುಕೊಂಡು ಖರ್ಜೂರದ ಗೊಂಚಲಿಗೆ ಕೈ ಹಾಕುವಾಗ ಅದು ಸರಿಯಾಗಿ ಹಣ್ಣಾಗಿರಲಿಲ್ಲ. ಓಹೋ ಇಷ್ಟು ಪ್ರಯತ್ನವೂ ವ್ಯರ್ಥ ಅಯಿತು. ದೇವರಿಗೆ ಎಂಟಾಣೆ ಸಾಕು! ಎಂದು ಕೊಳ್ಳುವಾಗ ಕೈಜಾರಿ ಧೊಪ್ಪನೆ ಕೆಳಗುರುಳಿ ಬಿದ್ದನಂತೆ.


ಆಗ ಹೇ ದೇವಾ- ಇದೇನು ಮಾಡಿದೆ ನೀನು! ನಾನು ಎರಡು ರೂಪಾಯಿ, ಒಂದು ರೂಪಾಯಿ, ಎಂಟಾಣೆ ಎಂದುದು ತಮಾಶೆಗಲ್ಲವೇ! ನಿನಗೆ ಅಷ್ಟೂ ಗೊತ್ತಾಗೋದಿಲ್ಲವಾ? ಯಾಕೆ ಅಷ್ಟು ಅವಸರ ಮಾಡಿದೆ. ನಾನು ಪೂರ್ತಿ 5 ರೂಪಾಯಿನೇ ನಿನಗೆ ಕೊಡುತ್ತಿರಲಿಲ್ಲವೇ? ಎಂದನಂತೆ.


ಇವರೆಲ್ಲಾ ಚೌಕಾಶಿ ಮಾಡುವ ಲಾಭ-ನಷ್ಟದ ಭಕ್ತರು ಎಂದು ನನ್ನಜ್ಜಿ ಇದ್ದಿದ್ದರೆ ಹೇಳುತ್ತಲಿದ್ದರು. ಹೊಸ ಹುಡುಗರಾದರೆ ನಮ್ಮ ರಾಜಕಾರಣಿಗಳು- ಎನ್ನದೆ ಬಿಡುತ್ತಿರಲಿಲ್ಲ. ಒಬೀರಾಯನ ಕಥೆ ಹೀಗಿದೆ. ಹಣ ಸಂಗ್ರಹದಲ್ಲೇ ತೊಡಗಿದ್ದ ವ್ಯಕ್ತಿಯೋರ್ವನು ಯಾವುದೋ ಭಯಂಕರ ರೋಗಕ್ಕೆ ತುತ್ತಾಗಿ ಸಾವು ಸನ್ನಿಹಿತವಾಯಿತಂತೆ. ಎಲ್ಲಾ ಮಕ್ಕಳೂ ಸುತ್ತು ನೆರೆದು "ಶ್ರೀಕೃಷ್ಣ ಗೋವಿಂದ  ಹರೇ ಮುರಾರೇ! ಹೇ ನಾಥ ನಾರಾಯಣಾ ವಾಸುದೇವಾ ಎಂದು ಭಜನೆ ಮಾಡುತ್ತಾ "ಅಪ್ಪಾ ನೀನೂ ಹೇಳು- ನೀನೂ ಹೇಳು ಎನ್ನ ತೊಡಗಿದರಂತೆ. ಮಾತನಾಡಲು ಶಕ್ತಿ ಸಾಲದ ಮುದುಕ ಏನೋ ಹೇಳಲು ಪ್ರಯತ್ನಿಸ ತೊಡಗಿದನಂತೆ. ಮಕ್ಕಳು ಅಪ್ಪ ದೇವರ ನಾಮ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿದರು. ಕೆಲವರು ಬಂಧುಗಳು ಇವನು ಅಪಾರ ಧನಸಂಪತ್ತನ್ನು ಎಲ್ಲೋ ಹುಗಿದಿಟ್ಟಿರಬಹುದು, ಅದನ್ನ ಹೇಳಲು ಪ್ರಯತ್ನಿಸುತ್ತಿರಬಹುದು ಎಂದು ಕೊಂಡರಂತೆ.

       


ಎಲ್ಲರೂ ಡಾಕ್ಟರ ಬಳಿ ಓಡಿ ಅವರು ಒಂದೆರಡು  ಮಾತಾಡುವಂತೆ ಶಕ್ತಿ ಬರಲು ಏನಾದರೂ ಇಂಜೆಕ್ಷನ್‌ ಕೊಡಿರಿ, ಎಂದಾಗ ಡಾಕ್ಟರ್‌ ಮಾತನಾಡಿಸಬಹುದು, ಆದರೆ ಆ ಇಂಜೆಕ್ಷನ್‌ಗೆ ಸಾವಿರ ರೂಪಾಯಿ ಬೆಲೆಯೆಂದು ಹೇಳಿಬಿಟ್ಟರು. ಅಪಾರ ಸಂಪತ್ತು  ಎಲ್ಲಿದೆ ಎಂದು ತಿಳಿಯುವಾಗ ಸಾವಿರ ರೂಪಾಯಿ ಏನು ಮಹಾ! ಎಂದು ಇಂಜೆಕ್ಷನ್‌ ಕೊಡಿಸಿಯೇ  ಬಿಟ್ಟರು. ಮುದುಕನಿಗೆ ಸ್ವಲ್ಪ ಶಕ್ತಿ ಬಂತು. ಎಲ್ಲರಿಗೂ ಕುತೂಹಲ ಏರಿತು. ಮುದುಕ ತಡ ಮಾಡದೆ ಹೇಳಿದನಂತೆ- ಎಲ್ಲರೂ ನನ್ನನ್ನೇನು ನೀಡುತ್ತೀರಿ! 


ಆ ಕಡೆ ನೋಡಿ ಅವಾಗಿನಿಂದ ಹಸು ಪೊರಕೆ ಹುಲ್ಲು ತಿನ್ನುತ್ತಾ ಇದೆ. ಏನು ನಿಮಗೆ ಕಣ್ಣು ಕಾಣೋದಿಲ್ಲವೇನು! ಎನ್ನುತ್ತಾ ಮುದುಕ ಗೊಟಕ್‌ ಅಂದೇ ಬಿಟ್ಟ. ಸುತ್ತಲಿದ್ದವರು ಕಣ್ಣುಕಣ್ಣು ಬಿಟ್ಟರು. ಕಪಾಟು ಖಾಲಿ. ಡಾಕ್ಟರರು ಸಾವಿರ ರೂಪಾಯಿ ತೆಗೆದುಕೊಂಡು  ಜಾಗ ಖಾಲಿ ಮಾಡಿಯೇ ಬಿಟ್ಟರು. ಸಂತ ಭದ್ರಗಿರಿ ಅಚ್ಯುತದಾಸರು ವೇದೋಪನಿಷತ್ತು, ಪುರಾಣೇತಿಹಾಸದಿಂದ ಉದಾತ್ತ ಜೀವನ ಕೌಶಲ್ಯವನ್ನು  ಹೇಳುವ ರೀತಿ ಇದಾಗಿತ್ತು ಎಂದು ಅವರಿಗೆ ನಮನ ಹೇಳಬಯಸುತ್ತೇನೆ.


- ಡಾ. ಈಶ್ವರ ದೈತೋಟ, ಎಂ.ಎ. ಡಿ.ಲಿಟ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top