ಮಾನ್ವಿ ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯ: ಡಾ. ವಾಸುದೇವ ಅಗ್ನಿ ಹೋತ್ರಿ

Upayuktha
0

 ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿ



ಕಲ್ಬುರ್ಗಿ: ಹರಿದಾಸ ಸಾಹಿತ್ಯಕ್ಕೆ ಗಟ್ಟಿಯಾದ ಕಾಯಕಲ್ಪ ಕೊಡಲು ಸರಕಾರದ ವತಿಯಿಂದ ವಿಶೇಷವಾಗಿ ಮಾನ್ವಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಹಿರಿಯ ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ಹೇಳಿದರು. 


ಕಲ್ಬುರ್ಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ವತಿಯಿಂದ ಜುಲೈ ಎರಡರಂದು ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ ಮಾನ್ವಿ ಸುತ್ತುಮುತ್ತಲಿನ ಲಿಂಗಸುಗೂರು, ಮಾನ್ವಿ, ಕಲ್ಲೂರು, ಪಂಚಮುಖಿ, ಮೊಸರಕಲ್ ಉತ್ತನೂರು ಮೊದಲಕಲ್, ಗೊರೆಬಾಳ ಮೊದಲಾದ ಸ್ಥಳಗಳಲ್ಲಿ ದಾಸರು ಮತ್ತು ದಾಸ ಸಾಹಿತ್ಯದ ಮಹತ್ವದ ಅಂಶಗಳಿದ್ದು ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಾಗೂ ಅಧ್ಯಯನ ಸಂಶೋಧನೆಗೆ ಪೂರಕವಾಗಿ ಮಾನವೀಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗುವುದು ಉತ್ತಮ. ರಾಯಚೂರು ವಿಶ್ವವಿದ್ಯಾ ಲಯವೆಂದು ನಾಮಕರಣ ಮಾಡಿ ಬೇರೆಲ್ಲ ಪೀಠಗಳಂತೆ ದಾಸ ಸಾಹಿತ್ಯ ಅಧ್ಯಯನ ಪೀಠ ವನ್ನು ಅನುದಾನ ನೀಡುವುದರೊಂದಿಗೆ ಆರಂಭಿಸಬೇಕು ಸಿಬಿಎಸ್ಇ, ಐಸಿಎಸ್‌ಸಿಇ ಪಠ್ಯಕ್ರಮಗಳಲ್ಲಿ ಹರಿದಾಸರ ವಿಷಯ ಅಳವಡಿಸಬೇಕು ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯಮಟ್ಟದಲ್ಲಿ ವಿಜಯದಾಸ ಪ್ರಶಸ್ತಿಯನ್ನು ಪ್ರಾರಂಭಿಸುವಂತೆ ಅಗ್ನಿಹೋತ್ರಿ ಒತ್ತಾಯಿಸಿದರು.


ದಾಸ ಸಾಹಿತ್ಯವು ದೇಸಿ ಸಾಹಿತ್ಯವಾಗಿದ್ದು ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದು. ಭಕ್ತಿ ಜ್ಞಾನ ಸಾಮಾಜಿಕ ಸ್ಪಂದನೆ ಹರಿದಾಸ ಸಾಹಿತ್ಯದ ಮೂಲ ಉದ್ದೇಶವಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಸ ಸಾಹಿತ್ಯವು ಹುಲಸಾಗಿ ಬೆಳೆದಿದೆ. ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಸಾಹಿತ್ಯ ಕ್ಷೇತ್ರದ ಎರಡು ಕಣ್ಣುಗಳಂತಿದ್ದು ಶರಣರ ಕಾಯಕ ದಾಸೋಹ ಸಂಸ್ಕೃತಿಯ ಮುಂದುವರೆದ ರೂಪವೇ ದಾಸ ಸಾಹಿತ್ಯವಾಗಿದೆ. ಈ ದೇಶದ ಮೂಲ ಸಂಸ್ಕೃತಿಯನ್ನು ಕನ್ನಡದಲ್ಲಿ ಬಿತ್ತಿದ ನಿಜಾಮರ ಕಾಲದ ನಿಜವಾದ ವಾರಸುದಾರರು ಹರಿದಾಸರಾಗಿದ್ದರು.


ಭಾರತೀಯ ಪರಂಪರೆಯಲ್ಲಿ ದೇಸಿ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಹಾಡಿ ಜನರನ್ನು ಕುಣಿಸಿದ ಕೀರ್ತಿ ಕನ್ನಡದ್ದು. ವ್ಯಾಸರಾಯರು, ಶ್ರೀಪಾದರಾಜರು, ವಿಜಯದಾಸರು, ಶ್ರೀ ವಾದಿರಾಜರು, ಜಗನ್ನಾಥದಾಸರು, ಕನಕ, ಪುರಂದರ ಸೇರಿದಂತೆ ಅನೇಕ ದಾಸವರೇಣ್ಯರು ಕೀರ್ತನೆ ಸುಳಾದಿ, ಉಗಾಭೋಗ ರೂಪಗಳಲ್ಲಿ ಕಟ್ಟಿಕೊಟ್ಟ ಹಾಡುಗಳು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹಾದಿ ಮಾಡಿತು. ಜನರಲ್ಲಿ ವೈಜ್ಞಾನಿಕತೆ ವೈಚಾರಿಕತೆ ಮತ್ತು ವ್ಯವಹಾರಿಕತೆಯ ಮನೋಧರ್ಮವನ್ನು ರೂಢಿಸಿದ ದಾಸರ ಹಾಡುಗಳು ಅತ್ಯಂತ ಮಹತ್ವಪೂರ್ಣವಾದದ್ದು ಸಂಕಟ ಬಂದರೆ ವೆಂಕಟರಮಣ, ಈಸಬೇಕು ಇದ್ದು ಜೈಸಬೇಕು, ಚಾಡಿ ಹೇಳಲು ಬೇಡ, ನಾಲಿಗೆ ರೊಕ್ಕ ಎರಡಕ್ಕೂ ದುಃಖ, ತಲ್ಲಣಿಸದಿರು, ಕಂಡ್ಯ ತಾಳು ಮನವೇ, ತಾಳುವಿಕೆಗಿಂತ ಅನ್ಯ ತಪವಿಲ್ಲ, ಪವಮಾನ ಜಗದಾ ಪ್ರಾಣ ಹೀಗೆ ಹರಿದಾಸ ಸಾಹಿತ್ಯ ಜನರಿಂದ ಜನರಿಗಾಗಿ ಎನ್ನುವ ಮಾತು ನಿಜವಾಗುತ್ತಿದೆ. ಇಂತಹ ಅಪೂರ್ವ ಮತ್ತು ಗಟ್ಟಿ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಮ್ಮೇಳನಗಳು ಹೆಚ್ಚು ಸಹಕಾರಿಯಾಗಲಿದೆ ಎಂದು ಅಗ್ನಿಹೋತ್ರಿ ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top