ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ; 70 ವಿದ್ವಾಂಸರಿಗೆ ಸನ್ಮಾನ

Upayuktha
0

 ಬೆಂಗಳೂರಿನ ಗಿರಿನಗರದ ಭಂಡಾರ ಕೇರಿ ಮಠದಲ್ಲಿ ವಿಶೇಷ ಕಾರ್ಯಕ್ರಮ



ಬೆಂಗಳೂರು : ಜ್ಞಾನಕಾರ್ಯಗಳಿಗೆ ಪ್ರೋತ್ಸಾಹಿಸುವುದು ಮತ್ತು ವಿದ್ವಾಂಸರಿಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು  ಮುಳಬಾಗಿಲು ಶ್ರೀಪಾದರಾಜರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ ಹೇಳಿದರು.


ರಾಜಧಾನಿಯ ಗಿರಿನಗರದಲ್ಲಿರುವ ಉಡುಪಿ ಶ್ರೀ ಭಂಡಾರಕೇರಿ ಮಠದಲ್ಲಿ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿಕಾಸ ಪ್ರತಿಷ್ಠಾನಗಳ ಸಂಯುಕ್ತ ಆಶಯದಲ್ಲಿ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 70 ಜನ ವಿದ್ವಾಂಸರ ಚೇತೋಹಾರಿ  ಉಪನ್ಯಾಸ ಕಾರ್ಯಕ್ರಮದ ಸಮಾರೋಪದಲ್ಲಿ 70 ಜನ ವಿದ್ವಾಂಸರಿಗೆ ಸನ್ಮಾನ ಪ್ರದಾನವಾದ ನಂತರ ಅವರು ಆಶೀರ್ವಚನ ನೀಡಿದರು.


ಶ್ರೀ ವಿದ್ಯೇಶ ತೀರ್ಥರು ವಿದ್ಯಾ ಶಿಖರವೇ ಆಗಿದ್ದಾರೆ. ಜ್ಞಾನಕಾರಕ ಚಟುವಟಿಕೆಗಳಿಗೆ ಅನ್ವರ್ಥವಾಗಿದ್ದಾರೆ. ಅವರು ನಡೆಸುವ ಪ್ರತಿ ಚಟುವಟಿಕೆಗಳೂ ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಸಮುದಾಯದ ಪಂಡಿತರನ್ನು ಪ್ರೋತ್ಸಾಹಿಸಿ, ಸಂಸ್ಕೃತಿ ಪಾಲನೆಗೂ ಮಹತ್ವದ ಕೊಡುಗೆ ಕೊಡುವ ಶ್ರೇಷ್ಠ ಮಟ್ಟದಲ್ಲಿರುತ್ತದೆ. ಇಂಥ ಕಾರ್ಯಗಳನ್ನು ಮಠ- ಪೀಠಗಳು ಮಾಡಲೇಬೇಕು ಎಂಬ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿ ಮಾದರಿ ಆಗಿದ್ದಾರೆ ಎಂದು ಶ್ಲಾಘಿಸಿದರು.


ಸಾನ್ನಿಧ್ಯ ವಹಿಸಿ ಅಮೃತೋಪದೇಶ ನೀಡಿದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ವಿದ್ವಾಂಸರ ವಿದ್ವತ್ತು, ಪಂಡಿತರ ಶಾಸ್ತ್ರಜ್ಞಾನವೆಲ್ಲವೂ ಲೋಕಗುರು ಭಗವಾನ್ ಶ್ರೀ ವೇದವ್ಯಾಸರಿಗೆ ಪ್ರಾಮಾಣಿಕವಾಗಿ ಸಮರ್ಪಣೆ ಆದಾಗ ಮಾತ್ರ ಅದು ಮಾನ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಸನಾತನ ಪರಂಪರೆ, ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು ಸದಾ ಕ್ರಿಯಾಶೀಲರಾಗಿರಬೇಕು. ಆ ಮೂಲಕ ಸಮಾಜಕ್ಕೆ ಬೆಳಕಾಗಬೇಕು ಎಂದು ಆಶಿಸಿದರು.


3 ದಿನಗಳ ಕಾಲ 70 ಜನರಿಂದ ನಡೆದ ಉಪನ್ಯಾಸಗಳನ್ನು ಗ್ರಂಥರೂಪದಲ್ಲಿ ತರುವ ಉದ್ದೇಶ ಮಠಕ್ಕೆ ಇದೆ. ಇದಕ್ಕೆ ಪ್ರತಿಯೊಬ್ಬರೂ ಅಕ್ಷರ ಸೇವೆ ಸಮರ್ಪಣೆ ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.  70 ವಿದ್ವಾಂಸರಿಗೆ ಗೌರವ ಸಂಭಾವನೆ ಸಹಿತ ಚಿನ್ನದ ಉಂಗುರ ಪ್ರದಾನ ಮಾಡಿ ಸನ್ಮಾನಿಸಲಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top