ಅಧ್ಯಾತ್ಮ ರಾಮಾಯಣ-6: ರಾಮ-ಸೀತಾ-ಲಕ್ಷ್ಮಣರ ವನಾಭಿಗಮನ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ



ಚಿತ್ರ: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ತಾಯಿಯ ಅನುಗ್ರಹ ಸಿಕ್ಕಿತು. ವನವಾಸದ ಬದಲು ವನರಾಜ್ಯ ಎನ್ನುವ ಅತ್ಯಪೂರ್ವ ಪದಪ್ರಯೋಗವನ್ನು ನಾವಿಲ್ಲಿ ಕಾಣಬಹುದು. ಒಂದು ಲೆಕ್ಕದಲ್ಲಿ ಇದು ಸರಿಯಾಗಿಯೇ ಇದೆ. ಏಕೆಂದರೆ ಅಹಲ್ಯೋದ್ಧರಣದಿಂದ ತೊಡಗಿ ಸಾಗರೋಲ್ಲಂಘನೆಯ ತನಕ ರಾಮನು ಮಾಡಿದ ಕೆಲಸ ರಾಮರಾಜ್ಯ-ರಾಮಾಡಳಿತದ ಸ್ಥಾಪನೆ (ಮರುಸ್ಥಾಪನೆ?) ತಾನೇ? ಇನ್ನೊಂದು ಲೆಕ್ಕದಲ್ಲಿ ತಂದೆಯ ಮರ್ಯಾದೆಯನ್ನುಳಿಸಲು ವನವಾಸದ ಬದಲು ವನರಾಜ್ಯ ಪದಪ್ರಯೋಗ ರಾಮನ ವ್ಯಕ್ತಿತ್ವದ ದ್ಯೋತಕವೂ ಹೌದಲ್ಲವೇ?


ಸೀತೆಯನ್ನು ಕಂಡು ವನರಾಜ್ಯದ ವಾಸದ ವಿಷಯ ಹೇಳಲು ರಾಮನು ಹೋದಾಗ ಸೀತೆಗೆ ಅಚ್ಚರಿ! ಅವಳು- ಇದೇನು ಸೈನ್ಯದ ಗೌರವವಿಲ್ಲ? ರಾಜಚಿಹ್ನೆಯಾದ ಶ್ವೇತಚ್ಛತ್ರವೆಲ್ಲಿ? ಒಬ್ಬಂಟಿಯಾಗಿ ಎಲ್ಲಿಗೆ ಹೋಗಿ ಬಂದೆ? ರಾಜೋಚಿತ ಉಡುಗೆ-ತೊಡುಗೆಗಳೆಲ್ಲಿ?... ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದಳು. ಆಗ ಶ್ರೀರಾಮನು ನಸುನಗುತ್ತಾ- ಎಲೈ ಶುಭಳೇ, ಮಹಾರಾಜರಿಂದ ನನಗೆ ದಂಡಕಾರಣ್ಯದ ಸಮಸ್ತ ರಾಜ್ಯವು ಕೊಡಲ್ಪಟ್ಟಿದೆ. ಆದ್ದರಿಂದ ಅದರ ರಕ್ಷಣೆಗಾಗಿ ಮತ್ತು ತಂದೆಯ ಆಜ್ಞೆಯನ್ನು ಪಾಲಿಸುವುದಕ್ಕಾಗಿ ನಾನು ಶೀಘ್ರವಾಗಿ ಇಂದೇ ಹೊರಡಲಿರುವೆನು. ನೀನು ಅತ್ತೆಯ ಸೇವೆ ಮಾಡಿಕೊಂಡು ಇಲ್ಲಿರು ಎಂದನು. ಸೀತೆಗೆ ಮತ್ತೆ ಅಚ್ಚರಿ! ನಿನಗೆ ವನರಾಜ್ಯವನ್ನು ಏಕೆ ಕೊಟ್ಟರು? ಎಂದು ಕೇಳಿದಾಗ ಕೈಕೆಯಮ್ಮನ ವರಗಳ ವಿಚಾರವನ್ನು ರಾಮನು ವಿವರಿಸಿದನು.


ಆಗ ಸೀತೆಯು- ಹಾಗಾದರೆ ಕಾಡಿಗೆ ನಾನು ಮೊದಲು ಕಾಲಿಡುವೆನು. ನೀನು ನನ್ನನ್ನು ಹಿಂಬಾಲಿಸು. ನನ್ನನ್ನು ಬಿಟ್ಟುಹೋಗಬೇಡ-ಎಂದು ದುಂಬಾಲು ಬಿದ್ದಳು. "ದುಡ್ಡಿಲ್ಲದವ ಮೊದಲು ದೋಣಿ ಹತ್ತಬೇಕಂತೆ" ಎನ್ನುವ ಗಾದೆ ನೆನಪಿಗೆ ಇಲ್ಲಿ ಬರುತ್ತದೆ. ಜಾಣೆ ಸೀತೆಯು ರಾಮನನ್ನು ಬಿಟ್ಚಿರಲಾರದೆ ಅವನ ಯಾವುದೇ ಭಯೋತ್ಪಾದನಾ ವಿಚಾರಗಳಿಗೆ ಹೆದರದೆ, ಪತಿವ್ರತಾಧರ್ಮದ ಪರಿಪಾಲನೆಯ ತವರುಮನೆಯ ಹಿತೋಪದೇಶಕ್ಕೆ ಒತ್ತು ನೀಡಿ; ವನರಾಜ್ಯ ಪಾಲನೆಗೆ ಒಟ್ಟಿಗೆ ಕರೆದುಕೊಂಡು ಹೋಗಲೇಬೇಕು, ಇಲ್ಲವಾದರೆ ನಿನ್ನೆದುರೇ ಪ್ರಾಣ ಬಿಡುತ್ತೇನೆ ಎನ್ನುವ ಹಠಕ್ಕೆ; ರಾಮನು ಮಣಿಯದೆ ಮತ್ತೇನು ಮಾಡಿಯಾನು? ರಾಮನೊಪ್ಪಿದ. ಕಾಡಿಗೆ ಹೊರಡುವ ಮೊದಲು ಅವಳ ಎಲ್ಲ ಆಭರಣಗಳನ್ನು ಅರುಂಧತಿಗೆ ಹಾಗೂ ಧನವನ್ನು ಬ್ರಾಹ್ಮಣರಿಗೆ ಅರ್ಪಿಸಲು ಹೇಳಿದ. ಸೀತೆ ರಾಮಾಜ್ಞೆಯನ್ನು ಪಾಲಿಸಿದಳು. ಇತ್ತ ಲಕ್ಷ್ಮಣನು ತಾಯಿ ಸುಮಿತ್ರೆಯನ್ನು ಕೌಸಲ್ಯೆಯ ವಶಕ್ಕೊಪ್ಪಿಸಿ ಅವಳ ಅನುಗ್ರಹವನ್ನು ಪಡೆದು ಧನುರ್ಧಾರಿಯಾಗಿ ರಾಮನ ಮುಂದೆ ನಿಂತನು. ರಾಮ-ಸೀತೆ- ಲಕ್ಷ್ಮಣರು ದಶರಥ ಮಹಾರಾಜನ ದರ್ಶನಕ್ಕೆ ಹೊರಟರು. ಪೌರರ ಕುತೂಹಲದಿಂದ ಕೂಡಿದ ದೃಷ್ಟಿಗಳ ಮಧ್ಯೆ ಅವರು ದಶರಥನ ಅರಮನೆಯನ್ನು ತಲುಪಿದರು.


ಪೌರರಿಗೆ ಸತ್ಯದರ್ಶನವಾಯಿತು. ದಶರಥನಿಗೆ, ಕೈಕೆಯಿಗೆ ಹಿಡಿಶಾಪ ಹಾಕತೊಡಗಿದರು. ರಾಮ- ಸೀತೆ- ಲಕ್ಷ್ಮಣರಿಗಾಗಿ ಮರುಗಿದರು.

ರಾಮನಿಲ್ಲದ ಅಯೋಧ್ಯೆಗಿಂತ ರಾಮನಿರುವ ದಂಡಕಾರಣ್ಯವೇ ವಾಸಿಯೆಂದು ಅವನೊಡನೆ ಕಾಡಿಗೆ ಹೋಗುವ ಬಗೆಗೂ ಮಾತನಾಡಿದರು. "ಈತ ಆದಿನಾರಾಯಣನಾದ ಮಹಾವಿಷ್ಣು, ಸೀತೆಯು ಯೋಗಮಾಯೆಯಾದ ಶ್ರೀಲಕ್ಷ್ಮೀ, ಲಕ್ಷ್ಮಣನು ಆದಿಶೇಷ, ಈ ಶ್ರೀರಾಮನು ಹಿಂದೆ ಸೃಷ್ಟಿಕರ್ತ ಬ್ರಹ್ಮ, ಸತ್ತ್ವಗುಣ ಪ್ರತೀಕನಾದ ಮೂರುಲೋಕಗಳ ಪಾಲಕನಾದ ಮಹಾವಿಷ್ಣು, ಪ್ರಳಯಕಾಲದ ತಮೋಗುಣದ ರುದ್ರ, ಭಕ್ತ ವೈವಸ್ವತಮನುವನ್ನು ಕಾಪಾಡಿದ ಮತ್ಸ್ಯಾವತಾರಿ, ಸಮುದ್ರ ಮಥನದ ಕಾಲದಲ್ಲಿ ಕಡೆಗೋಲಾಗಿದ್ದು ಮಂದರಪರ್ವತವು ಮುಳುಗುತ್ತಿದ್ದಾಗ ಬೆಂಬಲವಿತ್ತು ಮುಳುಗದಂತೆ ಮಾಡಿದ ಕೂರ್ಮ, ರಸಾತಳದಲ್ಲಿ ಮುಳುಗಿದ್ದ ಭೂಮಿಯನ್ನು ತನ್ನ ಕೋರೆದಾಡೆಗಳಿಂದ ಮೇಲೆತ್ತಿ ಉಳಿಸಿದ ವರಾಹಸ್ವಾಮಿ, ಹರಿಭಕ್ತ ಬಾಲ ಪ್ರಹ್ಲಾದನನ್ನು ನರಸಿಂಹ ರೂಪಧರಿಸಿ ತಂದೆಯಿಂದ ಉಳಿಸಿದ ಕರುಣಾಳು, ಮಗ ಇಂದ್ರನ ರಾಜ್ಯವನ್ನು ಅಸುರರು ಅಪಹರಿಸಿದಾಗ ಅದಿತಿಯ ಪ್ರಾರ್ಥನೆಯನ್ನು ಮನ್ನಿಸಿ; ವಾಮನನಾಗಿ ಅವತರಿಸಿ ಭೂಮಿಯನ್ನು ಮರಳಿಸಿದವ, ದುಷ್ಟಕ್ಷತ್ರಿಯರ ಹುಟ್ಟಡಗಿಸಿದ ಪರಶುರಾಮ. ಇದೀಗ ರಾವಣನ ವಧೆಗಾಗಿ ಪಿತೃವಾಕ್ಯ ಪರಿಪಾಲನೆಯಾದ ವನವಾಸದ ನೆವಹಿಡಿದು ಹೋಗುತ್ತಿದ್ದಾನೆ. ದಶರಥ, ಕೈಕೆಯಿಯರು ಅಣುಮಾತ್ರದಷ್ಟೂ ಈ ಸ್ಥಿತಿಗೆ ಕಾರಣರಲ್ಲ. ಇದು ಶ್ರೀಹರಿಯ ಇಚ್ಛೆ" ಎಂದು ವಾಮದೇವರು ಪೌರಜನರನ್ನು ಸಮಾಧಾನ ಮಾಡಿದರು. ರಾಮನ ಪರಬ್ರಹ್ಮ ರೂಪವನ್ನು ತಿಳಿದ ಪೌರರು ಶಾಂತರಾಗಿ ಅವನನ್ನು ಧ್ಯಾನಿಸತೊಡಗಿದರು.


ರಾಮ-ಸೀತೆ-ಲಕ್ಷ್ಮಣರು ದಶರಥನ ಅರಮನೆಗೆ ತಲುಪಿ, ಕೈಕೆಯಿಯಲ್ಲಿ ತಾವು ವನವಾಸಕ್ಕೆ ಹೋಗಲು ಸಿದ್ಧರಾಗಿ ಬಂದುದನ್ನು ಹೇಳಿದರು. ಕೈಕೆಯಿಯು ಮೂವರಿಗೂ ವನವಾಸಕ್ಕೆ ಸೂಕ್ತವಾದ ನಾರುಮಡಿಯನ್ನು ತಂದುಕೊಟ್ಟಳು. ರಾಮ- ಲಕ್ಷ್ಮಣರು ನಾರುಮಡಿಯನ್ನುಟ್ಟರು. ಸೀತೆ ಉಡಲರಿಯದೆ ರಾಮನನ್ನು ನೋಡಿದಳು. ರಾಮನು ತಾನೇ ಅವಳುಟ್ಟ ಸೀರೆಯ ಮೇಲೆ ನಾರುಮಡಿಯನ್ನುಡಿಸಿದನು. ಇದನ್ನೆಲ್ಲ ಕಂಡ ಸ್ತ್ರೀಯರು ಅಳಲಾರಂಭಿಸಿದರೆ ಎಂದೂ ಕೋಪಗೊಳ್ಳದ ವಸಿಷ್ಠರು ಕೈಕೆಯಿಯ ಮೇಲೆ ಕೋಪಿಸಿ- ಎಲೈ ದುಷ್ಟಳೆ! ವನವಾಸಕ್ಕಾಗಿ ನೀನು ರಾಮನನ್ನು ಮಾತ್ರ ಕೇಳಿಕೊಂಡಿರುವೆ. ಹಾಗಿರುವಾಗ ಸೀತೆಗೆ ನಾರುಮಡಿಯನ್ನೇಕೆ ಕೊಡುತ್ತಿರುವೆ? ಪತಿವ್ರತೆಯಾದ ಸೀತೆಯು ರಾಮನನ್ನು ಅನುಸರಿಸುವವಳಾದರೆ ದಿವ್ಯವಸ್ತ್ರ, ಸರ್ವಾಲಂಕಾರಳಾಗಿಯೇ ಹೋಗಲಿ. ಅವಳನ್ನು ನೋಡುತ್ತಾ ರಾಮನು ವನವಾಸದ ದುಃಖವನ್ನು ಕಳೆಯಲಿ-ಎಂದರು.


ದಶರಥನು ಸುಮಂತ್ರನಲ್ಲಿ ರಥವನ್ನು ತರಲು ಹೇಳಿದ. ರಥದಲ್ಲಿಯೇ ವನವಾಸಕ್ಕೆ ಹೋಗಲಿ ಎಂದನು. ಹಾಗೆ ಹೇಳುತ್ತಾ, ಅವರನ್ನು ನೋಡುತ್ತಾ ಕಣ್ಣೀರಕೋಡಿಯನ್ನು ಹರಿಸುತ್ತಾ ಬಿಕ್ಕಿಬಿಕ್ಕಿ ಅಳತೊಡಗಿದನು.


ಶ್ರೀರಾಮನು ನೋಡುತ್ತಿದ್ದ ಹಾಗೆಯೇ ಸೀತೆಯು ಮೊದಲು ರಥವೇರಿದಳು. ರಾಮನು ತಂದೆಗೆ ಪ್ರದಕ್ಷಿಣೆ ಬಂದು ರಥವನ್ನೇರಿದನು. ಲಕ್ಷ್ಮಣನು ಒಂದು ಜೊತೆ ಖಡ್ಗ, ಎರಡು ಬತ್ತಳಿಕೆ, ಎರಡು ಬಿಲ್ಲುಗಳೊಂದಿಗೆ ರಥವನ್ನೇರಿ ಸಾರಥಿಗೆ ರಥವನ್ನು ನಡೆಸಲು ಪ್ರೇರೇಪಿಸಿದನು. ಸುಮಂತ್ರನು ರಾಮಾಜ್ಞೆಯ ಮೇರೆಗೆ ರಥವನ್ನು ವೇಗವಾಗಿ ಮುನ್ನಡೆಸಿದನು. ಇತ್ತ ದಶರಥನು ನೆಲದ ಮೇಲೆ ಎಚ್ಚರದಪ್ಪಿ ಬಿದ್ದನು. ವಾಮದೇವರ ಹಿತೋಪದೇಶವನ್ನು ಮರೆತ ಹಿರಿ-ಕಿರಿ ಪುರಜನರು ರಥದ ಹಿಂದೆಯೇ ' ನಿಲ್ಲು ರಾಮಾ ನಿಲ್ಲು' ಎನ್ನುತ್ತಾ ಓಡತೊಡಗಿದರು. ಎಚ್ಚೆತ್ತ ದಶರಥನನ್ನು ಅವನ ಕೇಳಿಕೆಯಂತೆ ಕೌಸಲ್ಯೆಯ ಅರಮನೆಗೆ ಕರೆದುಕೊಂಡು ಹೋದರು.


(ಸಶೇಷ...)

- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top