ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಸರ್ವದೇವತೆಗಳಿಗೆ ಆಶ್ರಯನಾಗಿರುವ ಮಹಾವಿಷ್ಣುವಿನ ಮಾನವರೂಪನಾದ ಶ್ರೀರಾಮನು ಲೋಕಾಚಾರಕ್ಕೆ ಅನುಗುಣವಾಗಿ ಅತ್ರಿಮುನಿಗಳ ಅನುಮತಿಯೊಂದಿಗೆ ಅವರಿಂದ ಬೀಳ್ಕೊಟ್ಟರು. ಮುಂದೆ ಅವರು ಭೀಕರವಾದ ಗೊಂಡಾರಣ್ಯವನ್ನು ಪ್ರವೇಶಿಸಿದರು. ರಾಮನಿಗೆ ಒಳಹೊಕ್ಕ ಕೂಡಲೇ ಅಪಾಯದ ವಾಸನೆಯು ಮೂಗಿಗೆ ಬಡಿಯಿತು. ಧನುರ್ಧಾರಿಯಾಗಿ ತಾನು ಮುಂದಿದ್ದು, ಶಸ್ತ್ರಸಜ್ಜಿತನಾದ ಲಕ್ಷ್ಮಣನು ಹಿಂದಿದ್ದು, ಸೀತೆಯನ್ನು ಮಧ್ಯದಲ್ಲಿರಿಸಿ ನಡೆಯತೊಡಗಿದರು. ಒಂದು ಸುಂದರವಾದ ತಿಳಿನೀರಿನ ಸರೋವರದ ಸಿಹಿನೀರನ್ನು ಕುಡಿದು ವಿಶ್ರಮಿಸುವ ಹೊತ್ತಿಗೆ ಭೀಕರಾಕಾರದ ರಾಕ್ಷಸನೊಬ್ಬನು ತಮ್ಮತ್ತ ಧಾವಿಸಿ ಬರುತ್ತಿರುವುದನ್ನು ಕಂಡರು. ಅದಾಗಲೇ ಅವನ ಭುಜಗಳ ಮೇಲೆ ಮಾನವರ ಶರೀರಗಳಿದ್ದವು. ಇವರನ್ನು ಕಂಡಾಗ, ಅದೂ ಚೆಲುವೆಯಾದ ಯುವತಿಯೊಡನೆ ಕಂಡಾಗ ಅವನಿಗೆ ರಾಮ-ಲಕ್ಷ್ಣರನ್ನು ಓಡಿಸಿ ಅಥವಾ ಕೊಂದು ಸೀತೆಯನ್ನು ಪಡೆಯುವ ಆಸೆಯಾಯಿತು. ರಾಮನಲ್ಲಿ- ನಿಮಗಿಬ್ಬರಿಗೆ ಜೀವಸಹಿತ ಬದುಕಬೇಕೆಂದಿದ್ದರೆ ಇವಳನ್ನು ನನಗೆ ಒಪ್ಪಿಸಿ ಹೋಗಿ, ಇಲ್ಲವಾದರೆ ನನಗೆ ಆಹಾರವಾಗಿ; ಎನ್ನುತ್ತ ಮುಂದೊತ್ತ ತೊಡಗಿದನು. ಆಗ ರಾಮನು ಬಾಣಗಳಿಂದ ಅವನ ಭುಜಗಳನ್ನು ಕತ್ತರಿಸಿದನು. ಮತ್ತೂ ಆಕ್ರಮಿಸಲು ಮುಂದಾದಾಗ ಅವನ ಕಾಲುಗಳನ್ನು ಕಡಿದನು. ಸಾಯಲೆಂಬಂತೆ ತೆವಳುತ್ತಾ ಮುಂದೆ ಬಂದಾಗ ಅವನ ತಲೆಯನ್ನು ಕತ್ತರಿಸಿ ಕೊಂದು ಹಾಕಿದನು. ಮೊದಲಿಗೆ ಹೆದರಿದ್ದ ಸೀತೆ ಇದೇ ಮೊದಲ ಬಾರಿಗೆ ಗಂಡನ ಪರಾಕ್ರಮವನ್ನು ಕಂಡು ಅಭಿಮಾನದಿಂದ ಆಲಂಗಿಸಿ ಹೊಗಳಿದಳು. ದೇವತೆಗಳು ಹೂಮಳೆಗರೆದರು.
ಸತ್ತವನು ವಿರಾಧನೆಂಬ ಶಾಪಗ್ರಸ್ತ ವಿದ್ಯಾಧರ ರಾಕ್ಷಸ. ಅವನಿಗೆ ದುರ್ವಾಸರು ರಾಕ್ಷಸನಾಗುವಂತೆ ಶಪಿಸಿದ್ದರು. ಇದೀಗ ರಾಮನಿಂದ ಶಾಪಮುಕ್ತನಾದನು. ರಾಮನನ್ನು ಭಕ್ತಿಯಿಂದ ಸ್ತುತಿಸಿ ಕೊಂಡಾಡಿದನು. ರಾಮನು ಅವನಿಗೆ ಮರಳಿ ತನ್ನ ಲೋಕಕ್ಕೆ ಹೋಗಿ ಮೊದಲಿನಂತೆ ಬದುಕುವ ವರವನ್ನು ಕೊಟ್ಟು ಸ್ವರ್ಗಕ್ಕೆ ಕಳುಹಿಸಿದನು.
ವಿರಾಧನನ್ನು ಬೀಳ್ಕೊಟ್ಟ ರಾಮ-ಸೀತೆ- ಲಕ್ಷ್ಮಣರು ಕಾಡಿನಲ್ಲಿ ಮುಂದುವರೆಯುತ್ತಾ ಶರಭಂಗ ಮಹರ್ಷಿಗಳ ಆಶ್ರಮಕ್ಕೆ ಬಂದರು. ಶರಭಂಗರು ಸಂತೋಷದಿಂದ ಅವರನ್ನು ಸ್ವಾಗತಿಸಿ ಮೂವರಿಗೂ ಆಶ್ರಮೋಚಿತ ಸತ್ಕಾರವನ್ನು ಮಾಡಿದರು. ಶ್ರೀರಾಮನನ್ನು ಸಂದರ್ಶಿಸಿ ಮುಕ್ತಿಯನ್ನು ಪಡೆಯುವ ಇಚ್ಛೆಯಿಂದ ಅವರು ಶ್ರೀರಾಮನ ಆಗಮನವನ್ನು ಕಾಯುತ್ತಿದ್ದರು. ಅವನಿಗೆ ತಮ್ಮ ತಪಸ್ಸಿನಿಂದ ಪ್ರಾಪ್ತವಾದ ಹೆಚ್ಚಿನ ಪುಣ್ಯಫಲವನ್ನು ಧಾರೆಯೆರೆದು (ವಾಲ್ಮೀಕಿ ರಾಮಾಯಣದಲ್ಲಿ ರಾಮನು ಇದನ್ನು ಸ್ವೀಕರಿಸದೆ; ನನಗೆ ಬೇಕಾದುದನ್ನು ನಾನೇ ಸಂಪಾದಿಸುತ್ತೇನೆ ಎಂದು ಶರಭಂಗರಲ್ಲಿ ಹೇಳುತ್ತಾನೆ) ಚಿತೆಯೇರಿದರು. ರಾಮನ ಮಂಗಳಕರ ರೂಪವನ್ನು ನೋಡುತ್ತಾ, ಧ್ಯಾನಿಸುತ್ತಾ ಇಹರೂಪವನ್ನು ಅಗ್ನಿಗೆ ಅರ್ಪಿಸಿ ಬ್ರಹ್ಮಲೋಕವನ್ನು ಸೇರಿದರು.
ದಂಡಕಾರಣ್ಯವಾಸಿಗಳಾದ ಮುನಿಗಳೆಲ್ಲರೂ ರಾಮದರ್ಶನಕ್ಕಾಗಿ ಪವಿತ್ರವಾದ ಶರಭಂಗರ ಆಶ್ರಮಕ್ಕೆ ಬಂದರು. ಶ್ರೀರಾಮ- ಸೀತೆ-ಲಕ್ಷ್ಮಣರು ಅವರಿಗೆ ನೆಲಮುಟ್ಟಿ ನಮಸ್ಕರಿಸಿದರು. ಅವರು ರಾಮನಲ್ಲಿ- ನೀನು ಸಾಕ್ಷಾತ್ ನಾರಾಯಣ, ಸೀತೆಯು ಮಹಾಲಕ್ಷ್ಮಿ, ಲಕ್ಷ್ಮಣನು ಆದಿಶೇಷನು. ಭರತ- ಶತ್ರುಘ್ನರು ನಿನ್ನ ಶಂಖ- ಚಕ್ರಗಳ ಅವತಾರವೆಂದೂ ನಾವು ಬಲ್ಲೆವು. ಹೇ! ರಾಮ, ನಮ್ಮ ತಪೋವನಗಳೆಲ್ಲವನ್ನೂ ನಮ್ಮೊಂದಿಗೆ ಬಂದು, ಒಮ್ಮೆ ನೋಡಿ, ನಮ್ಮನ್ನು ರಾಕ್ಷಸರ ಉಪಟಳದಿಂದ ಪಾರುಮಾಡು. ನಮ್ಮ ತಪಸ್ಸಿಗೆ ಅಡೆತಡೆಗಳಿರದಂತೆ ಮಾಡು- ಎಂದು ಬಿನ್ನವಿಸಿದರು. ರಾಮನು ಸೀತೆ ಲಕ್ಷ್ಮಣರೊಂದಿಗೆ ತಪೋವನಗಳನ್ನು ನೋಡಿದನು. ರಾಕ್ಷಸರು ತಿಂದುಳಿಸಿದ್ದ ಮುನಿಗಳ ಮೂಳೆಗಳ ರಾಶಿಯನ್ನು ನೋಡಿದನು.ರಾಕ್ಷಸರಿಂದ ಶಾಶ್ವತವಾಗಿ ಮುನಿಗಳನ್ನು ಉಳಿಸಿ ನೆಮ್ಮದಿಯ ಬದುಕನ್ನು ನಡೆಸಲು ಅವಕಾಶ ಮಾಡಿಕೊಡಲು ಅವರೊಂದಿಗೆ ಕೆಲವು ವರ್ಷಗಳ ಕಾಲ ಅಲ್ಲಿ ನೆಲೆಸಿದನು. ಸಂತೃಪ್ತಗೊಂಡ ಮುನಿಗಳು ರಾಮನನ್ನು ಪೂಜಿಸಿ ಗೌರವಿಸಿ ಸುತೀಕ್ಷ್ಣ ಮಹರ್ಷಿಗಳ ಆಶ್ರಮಕ್ಕೆ ಬೀಳ್ಕೊಟ್ಟರು.
ತಮ್ಮ ಆಶ್ರಮಕ್ಕೆ ಬಂದ ರಾಮ- ಸೀತೆ- ಲಕ್ಷ್ಮಣರನ್ನು ಸುತೀಕ್ಷ್ಣರು ಹೃತ್ಪೂರ್ವಕವಾಗಿ, ಹರ್ಷಾಶ್ರುಗಳೊಂದಿಗೆ ಸ್ವಾಗತಿಸಿ ಸತ್ಕರಿಸಿದರು. ಸದಾ ರಾಮಸ್ಮರಣೆಯನ್ನು ಮಾತ್ರ ಭಕ್ತಿಯಿಂದ ಮಾಡುತ್ತಿದ್ದ ಅವರಿಗೆ ಮೋಕ್ಷದ ಭರವಸೆಯನ್ನು ನೀಡಿ ಅವರನ್ನೂ ತಮ್ಮ ಜೊತೆಯಲ್ಲಿ ಕರೆದುಕೊಂಡು ಅಗಸ್ತ್ಯರ ತಮ್ಮ ಅಗ್ನಿಜಿಹ್ವರ ಆಶ್ರಮಕ್ಕೆ ಹೋದರು. ಅಲ್ಲಿ ಅವರ ಆತಿಥ್ಯವನ್ನು ಸ್ವೀಕರಿಸಿ ಅಲ್ಲಿಂದ ಅಗಸ್ತ್ಯರ ಆಶ್ರಮಕ್ಕೆ ಮರುದಿನ ಪ್ರಯಾಣ ಮಾಡಿದರು.
ಅಗಸ್ತ್ಯರ ಆಶ್ರಮವು ಭೂಲೋಕದ ಬ್ರಹ್ಮಲೋಕದಂತಿತ್ತು. ಅಗಸ್ತ್ಯರ ಶಿಷ್ಯ ಸುತೀಕ್ಷ್ಣರು ರಾಮಾಗಮನದ ವಾರ್ತೆಯನ್ನು ಅಗಸ್ತ್ಯರಿಗೆ ತಿಳಿಸಿದರು. ಅಗಸ್ತ್ಯರು ತಮ್ಮ ಶಿಷ್ಯರುಗಳಿಗೆ ರಾಮನಾಮದ ಮಹತ್ತ್ವವನ್ನು ವಿವರಿಸುತ್ತಿದ್ದರು. ಸುತೀಕ್ಷ್ಣರಲ್ಲಿಯೇ ರಾಮ- ಸೀತೆ - ಲಕ್ಷ್ಮಣರನ್ನು ಕರೆದುಕೊಂಡು ಬರಲು ಹೇಳಿದರು. ಹಾಗೆ ಹೇಳುತ್ತಾ ಅವರೊಂದಿಗೆ ತಾವೂ ರಾಮನ ಬಳಿಗೆ ಬಂದರು. ಎದುರ್ಗೊಂಡರು. ರಾಮನಲ್ಲಿ- ಹೇ ರಾಮ! ನೀನು ನನ್ನ ಇಂದಿನ ಪ್ರಿಯವಾದ ಅತಿಥಿ. ನೀನು ಬಂದಿದ್ದರಿಂದ ನನ್ನ ಇಂದಿನ ದಿನವು ಸಾರ್ಥಕವಾಯಿತು.- ಎಂದರು. ಮೂವರೂ ಅಗಸ್ತ್ಯರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದರು. ಅಗಸ್ತ್ಯರು ರಾಮಾಲಿಂಗನ ಮಾಡಿ ಹರ್ಷವನ್ನು ವ್ಯಕ್ತಪಡಿಸಿದರು. ಆಶ್ರಮದೊಳಗೆ ಬರಮಾಡಿಕೊಂಡು ಭೋಜನದೊಂದಿಗೆ ಸತ್ಕರಿಸಿದರು.
ರಾಮನ ಅನಾದಿತ್ವ, ಮೂಲಪ್ರಕೃತಿ, ಮಹತ್ತತ್ತ್ವ, ತ್ರಿಗುಣಗಳು, ತಾಮಸಾಹಂಕಾರದಿಂದ ಸೂಕ್ಷ್ಮ ತನ್ಮಾತ್ರೆಗಳಾದ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಉತ್ಪತ್ತಿ, ಇವುಗಳಿಂದುಂಟಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಎಂಬ ಪಂಚಭೂತಗಳ ಸೃಷ್ಟಿ, ರಾಜಸಾಹಂಕಾರದಿಂದ ಹತ್ತು ಇಂದ್ರಿಯಗಳ ಸೃಷ್ಟಿ ಮತ್ತು ಸಾತ್ತ್ವಿಕಾಹಂಕಾದರದಿಂದ ಇಂದ್ರಿಯಗಳ ಅಧಿಷ್ಠಾತೃ ದೇವತೆ ಹಾಗೂ ಮನಸ್ಸಿನ ಉತ್ಪನ್ನವಾದುದನ್ನು ರಾಮನಿಗೆ ಹೇಳಿದರು. ಇನ್ನಷ್ಟು ವೇದ- ವೇದಾಂತಗಳ ವಿಚಾರವನ್ನು ವಿವರಿಸಿದರು. (ಇಲ್ಲಿ ನಾವು ಭಾಗವತದಲ್ಲಿ ಕಂಡುಬರುವ ವಿಸ್ತೃತವಾದ ಆಧ್ಯಾತ್ಮಿಕ ವಿಚಾರಗಳ ಛಾಯೆಯನ್ನು ಕಾಣಬಹುದು). ಹೀಗೇ ಮಾತುಗಳನ್ನಾಡುತ್ತಾ, ವಿಚಾರಧಾರೆಯನ್ನು ಹರಿಸುತ್ತಾ ತಮ್ಮ ತಪಸ್ಸಿನ ಫಲವಾಗಿಯೇ ರಾಮಾಗಮನ ಮತ್ತು ರಾಮದರ್ಶನವಾಯಿತೆಂಬುದನ್ನು ಧನ್ಯತೆಯ ಭಾವದಿಂದ ರಾಮನಿಗೆ ಹೇಳಿದರು. ರಾಮನ ಸ್ತುತಿಯನ್ನು ಮಾಡಿದರು. ರಾಮನಿಗೆ ರಾಕ್ಷಸರ ನಿಗ್ರಹಕ್ಕಾಗಿ ಮಹೇಂದ್ರನಿತ್ತ ಬಿಲ್ಲನ್ನೂ, ಎರಡು ಅಕ್ಷಯ ಬತ್ತಳಿಕೆಗಳನ್ನೂ ಮತ್ತು ರತ್ನಾಲಂಕೃತ ಖಡ್ಗವನ್ನೂ ಅರ್ಪಿಸಿದರು. ರಾಮಾವತಾರದ ಉದ್ದೇಶವನ್ನು ಈಡೇರಿಸುವಂತೆ ಹೇಳಿ ಗೌತಮೀ ನದಿಯ ತಟದಲ್ಲಿರುವ ಪಂಚವಟೀ ಆಶ್ರಮದಲ್ಲಿ ವನವಾಸದ ಉಳಿದ ಕಾಲವನ್ನು ಕಳೆಯಲು ಹೇಳಿದರು. ಮರುದಿನ ಬೆಳಗಿನ ಹೊತ್ತಿನಲ್ಲಿ ಅಗಸ್ತ್ಯರ ಅನುಮತಿಯೊಂದಿಗೆ ಪಂಚವಟಿಯತ್ತ ರಾಮ- ಸೀತೆ- ಲಕ್ಷ್ಮಣರು ಪಯಣಿಸಿದರು.
(ಸಶೇಷ...)
- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ