ವ್ಯಾಸ ಪೀಠ- 3: ವಿದ್ವಾನ್ ಡಾ. ಬಂದಗದ್ದೆ ನಾಗರಾಜರವರ ಮೇರುಕೃತಿ ಶ್ರೀಮದಾದಿತ್ಯ ದರ್ಶನಂ

Upayuktha
0

ದಲಾದ ಜಗತ್ತಿನಲ್ಲಿ ಸಾಹಿತ್ಯದ ಪರಿಭಾಷೆ ಬದಲಾಗಿದೆ. ಉದ್ದೇಶ- ಸ್ವರೂಪ- ಸ್ವಭಾವ- ಸಿದ್ದಾಂತ- ಒಲವು- ನಿಲುವು- ಪರಿಣಾಮ ಹೀಗೆ ಎಲ್ಲವೂ ಈಗ ಹಿಂದಿನಂತಿಲ್ಲ. ಹಳೆಯದೆಂಬ ತಾತ್ಸಾರ, ಅರ್ಥವಾಗುವುದಿಲ್ಲವೆನ್ನುವ ಹಳಹಳಿಕೆ, ಛಂದೋಬದ್ಧ ಕಾವ್ಯಗಳ ಉಗಮವೇ ಕ್ಷೀಣಿಸಿದೆ.


ಆಧುನಿಕ ಕಾಲದಲ್ಲಿ ಹಳೆಯ ಮಾದರಿಯ ಬೃಹತ್ ಗಾತ್ರದ ಗ್ರಂಥಗಳನ್ನು ನುಡಿದೇವಿಗೆ ಕಾಣಿಕೆಯಾಗಿ ನೀಡುತ್ತಿರುವ ಮಂಗಳೂರಿನ ವಿದ್ವಾನ್ ಬಂದಗದ್ದೆ ನಾಗರಾಜರು ನಮ್ಮ ನಡುವೆ ಇರುವ ಋಷಿ ಸದೃಶ ವ್ಯಕ್ತಿತ್ವದ ಕವಿಪುಂಗವ.


ನಾಲ್ಕಾರು ಕವಿತೆಗಳನ್ನು, ಒಂದೆರಡು ಪುಸ್ತಕಗಳನ್ನು ಬರೆದು ಕವಿ ಲೇಖಕರೆಂದು ಬೀಗುವ ಮಂದಿಯ ನಡುವೆ ಸಹಸ್ರಾರು ಷಟ್ಪದಿಗಳ ಐದು ಮಹಾಕಾವ್ಯಗಳನ್ನು ರಚಿಸಿ ಸಾರಸ್ವತ ಲೋಕದ ಧ್ರುವತಾರೆ  ಎನಿಸಿದ್ದಾರೆ.


ಪುರಾಣದ ವಸ್ತು ವಿಷಯವನ್ನಾಧರಿಸಿ, ಆತ್ಮಸಮರ್ಪಣಾ ಭಾವದ ದೃಢತೆಯಿಂದ ಕಾವ್ಯ ರಚನೆ ತೊಡಗಿಸಿಕೊಂಡ ಇವರದು ಒಂದು ರೀತಿಯ ತಪಸ್ಸೇನ್ನಬಹುದು.


ಆಚಾರ್ಯ ಶಂಕರರು ಪ್ರವರ್ತಿಸಿದ ಪಂಚಾಯತನ ಪೂಜಾ ಪದ್ಧತಿಯನ್ನು ಅನುಸರಿಸುವ ಕುಟುಂಬದಲ್ಲಿ ಜನಿಸಿ, ತಮ್ಮ ಕವಿತಾ ಶಕ್ತಿಯನ್ನು ಗಣಪತಿ -ಅಂಬಿಕಾ -ಶಿವ- ವಿಷ್ಣು -ಸೂರ್ಯ ಎಂಬ ಪಂಚಾಯತನ ದೇವತೆಗಳ ಬಗೆಗಿನ ಪುರಾಣ ಕಾವ್ಯಗಳನ್ನು ರಚಿಸಲು ವಿನಯೋಗಿಸಿ ಐದು ಮಹಾಕಾವ್ಯಗಳನ್ನು ಬರೆದು ಮುಗಿಸಿದ್ದಾರೆ.

ಶ್ರೀ ಗಣೇಶ ಪುರಾಣಂ, ಶ್ರೀಮದ್ ವಿಷ್ಣುಪುರಾಣಂ, ಶ್ರೀಮದ್ ಭುವನೇಶ್ವರಿ ಕಥಾಮಂಜರಿ, ಶ್ರೀಮದಾತ್ಮಲಿಂಗ ವೈಭವಂ, ಶ್ರೀಮದ್ ಆದಿತ್ಯ ದರ್ಶನಂ ಈ ಐದು ಮಹಾ ಕಾವ್ಯಗಳು ಸುಮಾರು 38,000ಕ್ಕೂ ಅಧಿಕ ಛಂದೋ ಬದ್ಧವಾದ ಅಂತಹ ಷಟ್ಪದಿಗಳಲ್ಲಿ ನೇಯಲ್ಪಟ್ಟಿದೆ. ಇವರ ಸಂಸ್ಕೃತ ಮತ್ತು ಕನ್ನಡ ಪಾಂಡಿತ್ಯ ಹಾಗೂ ಅಧ್ಯಾತ್ಮ ವಿಷಯದಲ್ಲಿರುವ ಅಪಾರ ಆಸಕ್ತಿಯ ಮೇಲಿನ ಎಲ್ಲ ಕಾವ್ಯಗಳಲ್ಲಿಯೂ ಶುದ್ಧ ಸಾಹಿತ್ಯದ ಮೂಲಕವಾಗಿ ಮೂಡಿಬಂದಿದೆ.


ಇದೊಂದು ವಿಶ್ವಕೋಶ ಎನ್ನಬೇಕು. ಕವಿ ತಮ್ಮ ವ್ಯಾಪಕ ಅಧ್ಯಯನದ ಸಾರವನ್ನೆಲ್ಲ ವೇದ- ವೇದಾಂತ- ದರ್ಶನ -ತಂತ್ರ -ಶಾಸ್ತ್ರ -ಪುರಾಣ- ಇತಿಹಾಸ- ವರ್ತಮಾನ -ಭವಿಷ್ಯ, ಖಗೋಲ- ಭೂಗೋಳ- ತಪ್ಪು- ಒಪ್ಪು, ಶಾಪ -ವರ, ಉಪದೇಶ ಹೀಗೆ ಅಸಂಖ್ಯ ವಿಷಯಗಳಿಗೆ ಈ ಕೃತಿ ಎಡೆಯಾಗಿದೆ.


ಗಾಯತ್ರಿ ಮಂತ್ರದ ಉಪಾಸಕರಾದ ಬಂದಗದ್ದೆಯವರು ಸವಿತೃವಿನ ಮಹಿಮೆಯುಳ್ಳ ಈ ಕಾವ್ಯದಲ್ಲಿ ಸೂರ್ಯನ ಅನುಗ್ರಹದಿಂದ ಮಾತ್ರ ಇಹ- ಪರಗಳೆರಡರಲ್ಲೂ ನೆಮ್ಮದಿ ಸಾಧ್ಯವೆಂದು ಹೇಳಿದ್ದಾರೆ.


ಸೂರ್ಯನ ದರ್ಶನಕ್ಕೆ ದಾರಿಯ ತೋರು ನೀ ನನಗೆ ಎಂದು ಅಹಂಕಾರ ಶೂನ್ಯರಾಗಿ ಗುರುವೇ ನುಡಿಸಿದ ಕಾವ್ಯವಿದೆಂದು ಹೇಳುತ್ತಾ ವರದಳ್ಳಿಯ ಶ್ರೀಧರ ಸ್ವಾಮಿಗಳನ್ನು ಮನಸಾರೆ ನೆನೆಸುತ್ತಾರೆ.


'ಪಂಚಮಂ ಕಾರ್ಯಸಿದ್ಧಿ:'ಎಂಬಂತೆ ಐದು ಮಹಾಕಾವ್ಯಗಳ ಕೊನೆಯ ಶ್ರೀಮದ್ ಆದಿತ್ಯ  ದರ್ಶನವನ್ನು 6,220 ಷಟ್ಪದಿಗಳಲ್ಲಿ ಬರೆದಿರುವುದು ಪೂರ್ವಜನ್ಮದ ಪುಣ್ಯವೇ ಸರಿ.


ಪ್ರಪಂಚದ ಆಗು ಹೋಗುಗಳಿಗೆಲ್ಲ ಸೂರ್ಯನಿಗೆ ಸಾಕ್ಷಿ ಎಂಬುದನ್ನು ಕಥೆ ಉಪಕಥೆಗಳ ಮೂಲಕ ಪದ್ಯ ಜೋಡಣೆ ಮಾಡಿ ವಿವರಿಸಿದ್ದಾರೆ. ಸೂರ್ಯೋಪಾಸನೆಯಿಂದ ಎಲ್ಲ ಕ್ಲೇಶಗಳು ಮರೆಯಾಗಬಹುದೆಂಬುದು ಕವಿಗಳ ಅನುಭಾವ ಸಿದ್ಧಿಯೊಂದಿಗೆ ಕಾವ್ಯವನ್ನು ವಿಸ್ತರಿಸಿದ್ದಾರೆ.


ಸಾವಿರ ಗಟ್ಟಲೆ ಛoದೋಬದ್ಧ ಪದ್ಯಗಳನ್ನು ಬರೆಯಬಲ್ಲವರು ನಮ್ಮ ನಡುವೆ ಈಗಲೂ ಇದ್ದಾರೆಂಬದು ಇಂಥ ಕೃತಿಗಳನ್ನು ನೋಡದ ಕನ್ನಡಿಗರಿಗೆ ಆಶ್ಚರ್ಯಕರ ವಿಷಯವೇ ಆಗಬಹುದು.


ಪುರಾಣ ಪ್ರಸಿದ್ಧ ಘಟನೆಗಳನ್ನು ವರ್ತಮಾನ ಕಾಲದ ವ್ಯಕ್ತಿಗಳ ಪ್ರಶ್ನೋತ್ತರಗಳ ಮೂಲಕ ವರ್ಣಿಸಿದ ಬಗೆ ಅನ್ಯಾದೃಶ್ಯವಾಗಿದೆ. ಹಳೆ ಬೇರು ಹೊಸ ಚಿಗುರಿನ ಸಮ್ಮಿಳಿತದ ವಿನೂತನ ಕಥಾ ಶೈಲಿ ಇಲ್ಲಿದೆ.


ಆಧುನಿಕ ಕಾಲದ ಭಾರತೀಯರಲ್ಲಿ ಆತ್ಮವಿಸ್ಮೃತಿ, ಕೀಳು ಅಭಿಮಾನದ ಅಂಧಕಾರ, ಲೌಕಿಕವೇ ಪಾರಮಾರ್ಥವೆಂಬ ಭ್ರಾಂತಿ ಇರುವುದನ್ನು ಖೇದದಿಂದ ನಿರೂಪಿಸಿ ಇದಕ್ಕೆಲ್ಲ ರಾಮಬಾಣ ಆದಿತ್ಯ ದರ್ಶನವೆಂದು ಅರಿತು, ಸ್ವಸ್ಥ ಸಮಾಜ ನಿರ್ಮಾಣವಾಗಿ ಭಾರತ ಮತ್ತೊಮ್ಮೆ ಲೋಕಕ್ಕೆ ಬೆಳಕನ್ನು ಜ್ಞಾನವನ್ನು ನೀಡುವ ಸೂರ್ಯನ ಬೆಳಕಿನ ಮಾರ್ಗದಲ್ಲಿ ನಡೆಯಲಿ ಎಂಬುದು ಕವಿ ಆಶಯ: ಸಜ್ಜನರ ಬಯಕೆಯೂ ಹೌದು ಎಂದು ತಿಳಿಸಿರುವ  ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಅವರ ಮಾತು ಈ ಕೃತಿಗೆ ಇಟ್ಟ ಕಳಶದಂತಿದೆ.


ವಿದ್ವಾನ್ ಜಗದೀಶ ಶರ್ಮ ಸಂಪ ರವರ ಮುನ್ನುಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರ ಸನ್ನುಡಿ, ಖ್ಯಾತ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟರ ಪ್ರಾಸ್ತಾವಿಕ  ನುಡಿಗಳಿಂದ ಶೋಭಿತ ಈ ಕೃತಿ ಪ್ರತಿಯೊಬ್ಬ ಕಾವ್ಯಾಸಕ್ತರ ಮನೆಯಲ್ಲಿ ಇರಬೇಕಾದ ಗ್ರಂಥ ರತ್ನ.


ಸಹೃದಯರಾದವರು ಈ ಮಹಾ ಕಾವ್ಯವನ್ನು ಓದಿದರೆ ಅದರ ತಿಳಿವು ಆಗುವುದು ಅಷ್ಟೇ ಅಲ್ಲದೆ ನಮ್ಮ ಸನಾತನ ಸಂಸ್ಕೃತಿಯ ಮತ್ತು ಧರ್ಮದ ನೆಲೆಗಟ್ಟು ಎಷ್ಟು ದೃಢವಾದದ್ದು ಎಂಬುದು ತಿಳಿಯುತ್ತದೆ.


ಖ್ಯಾತ  ಚಿತ್ರ ಕಲಾವಿದ ಮಟ್ಟಿ ರಾಮಚಂದ್ರರಾವ್ ರಚಿಸಿರುವ ಅರ್ಥಪೂರ್ಣ ವರ್ಣ  ಚಿತ್ರಗಳಿಂದ ಈ ಹೆಬ್ಬೊತ್ತಿಗೆಯ ಅಂದ ಮತ್ತಷ್ಟು ಹೆಚ್ಚಿದೆ.


ಕೃತಿಯ ಹೆಸರು: ಶ್ರೀಮದಾದಿತ್ಯ ದರ್ಶನಂ 

ಲೇಖಕರು: ವಿದ್ವಾನ್ ಡಾ.ಬಂದಗದ್ದೆ ನಾಗರಾಜ 

ಪ್ರಕಾಶಕರು: ವಸಂತ ಪ್ರಕಾಶನ, ಪಾಂಡೇಶ್ವರ, ಮಂಗಳೂರು 

ಪುಟಗಳು: 816 

ಬೆಲೆ: ರೂ 2,000/-

ಪ್ರತಿಗಳಿಗೆ ಸಂಪರ್ಕಿಸಿ 94805 32437


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top