- ಭಂಡಾರ ಕೇರಿ ಮಠಾಧೀಶರ 70ನೇ ವರ್ಧಂತಿ ಮಹೋತ್ಸವ
- 70 ಜನ ವಿದ್ವಾಂಸರಿಂದ ವಿಷಯ ಮಂಡನೆ, 70 ಪಂಡಿತರಿಗೆ ವಿಶೇಷ ಸನ್ಮಾನ
- ಬೆಂಗಳೂರಿನ ಮಾಗಡಿ ಸಮೀಪದ ಅಡಕಮಾರನಹಳ್ಳಿ ಆನಂದವನ ಗುರುಕುಲಕ್ಕೆ ಶ್ರೀ ವಿದ್ಯೇಶ ತೀರ್ಥರಿಂದ 5 ಲಕ್ಷ ರೂ ನಿಧಿ ಸಮರ್ಪಣೆ
- 2 ಕೃತಿಗಳ ಲೋಕಾರ್ಪಣೆ
ಬೆಂಗಳೂರು: ಶ್ರೀ ಅಚ್ಚುತಪ್ರಜ್ಞ, ಜಗದ್ಗುರು ಶ್ರೀ ಪೂರ್ಣಪಜ್ಞ, ಸತ್ಯ ತೀರ್ಥ ಮಹಾಸಂಸ್ಥಾನ ಶ್ರೀ ಭಂಡಾರ ಕೇರಿ ಮಠ, ಭಾಗವತಾಶ್ರಮ ಪ್ರತಿಷ್ಠಾನ ಹಾಗೂ ಲೋಕ ಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನಗಳು ಸಂಯುಕ್ತವಾಗಿ ಬೆಂಗಳೂರಿನ ಗಿರಿನಗರದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಶ್ರೀ ವಿದ್ಯೇಶ ತೀರ್ಥರ 70 ನೇ ವರ್ಧಂತಿ ಉತ್ಸವವನ್ನು ಮೂರು ದಿನಗಳ ಕಾಲ ಹಮ್ಮಿಕೊಂಡಿವೆ.
ಶ್ರೀ ವಿದ್ಯೇಶ ಸಪ್ತತಿ ವಿಚಾರ ವಿನೋದ ಉತ್ಸವ- ಶೀರ್ಷಿಕೆ ಅಡಿಯಲ್ಲಿ ಜೂ. 13 ರಿಂದ 15 ರವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ 70 ಜನ ಸಾರಂಗ ವಿದ್ವಾಂಸರಿಂದ ಚುಟುಕು ವೈವಿಧ್ಯ ಭರಿತ ಚೇತೋಹಾರಿ ವಿಚಾರ ಮಂಡನೆ ನಡೆಯಲಿದೆ. ಜೂನ್ 13ರ ಸಂಜೆ 5ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಮಹಾಭಾರತದ 18 ಪರ್ವಗಳು, ಭಾಗವತ ದ್ವಾದಶ ಸ್ಕಂದಗಳು ಮತ್ತು ಆರು ಉಪನಿಷತ್ತುಗಳ ಬಗ್ಗೆ 70 ಜನ ವಿದ್ವಾಂಸರಿಂದ ವಿಚಾರ ವಿಮರ್ಶೆ ಮತ್ತು ವಿಚಾರ ಮಂಡನೆ ಆಯೋಜನೆಗೊಂಡಿದೆ.
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠ, ಶ್ರೀ ಪೂರ್ಣ ಪ್ರಜ್ಞ ವಿದ್ಯಾಪೀಠ, ಮೈಸೂರಿನ ವ್ಯಾಸ ತೀರ್ಥ ವಿದ್ಯಾಪೀಠವೂ ಸೇರಿದಂತೆ ಮಂತ್ರಾಲಯ, ಸೋದೆ, ಪಲಿಮಾರು, ತಿರುಪತಿ, ಪುತ್ತಿಗೆ ಮತ್ತಿತರ ಮಹಾ ಸಂಸ್ಥಾನಗಳ ಗುರುಕುಲ ಮತ್ತು ವಿದ್ಯಾಪೀಠದ ವಿದ್ವಾಂಸರು ಭಾಗವಹಿಸಿ 13 ಮತ್ತು 14 ರಂದು ತಮ್ಮ ಪಾಂಡಿತ್ಯವನ್ನು ಅನಾವರಣಗೊಳಿಸಲಿದ್ದಾರೆ ಎಂಬುದು ಬಹು ವಿಶೇಷ.
ಜೂನ್ 15ರ ಸಂಜೆ ಐದು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಹಾಗೂ 70 ಜನ ವಿದ್ವತ್ ಸಾರಂಗರಿಗೆ ಸನ್ಮಾನ ಆಯೋಜನೆಗೊಂಡಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭೀಮನ ಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಮಠದ ಅಂಗಸಂಸ್ಥೆಯಾದ ಐತರೇಯ ಶೋಧ ಪ್ರಕಾಶನದ ವತಿಯಿಂದ ಪ್ರಣತಿ ದರ್ಪಣ ಎಂಬ ಗ್ರಂಥ (ಸಂಗ್ರಹ, ಅನುವಾದ- ಪಂಡಿತ ರಘೋತ್ತಮ ನಾಗಸಂಪಿಗೆ, ಪರಿಶೋಧನೆ ಹಾಗೂ ಪರಿಷ್ಕರಣೆ ಡಾ. ಎಚ್. ಸತ್ಯನಾರಾಯಣ ಆಚಾರ್ಯ) ಮತ್ತು "ವಿದ್ಯೇಶ ವಿಚಾರ ಸಪ್ತತಿ" (ವಿವಿಧೆಡೆ ಶ್ರೀ ಭಂಡಾರ ಕೇರಿ ಗುರುಗಳು ಮಾಡಿದ ಉಪನ್ಯಾಸ, ಪ್ರವಚನ ಮತ್ತು ಅಮೃತೋಪದೇಶಗಳ ಸಾರ ಸಂಗ್ರಹ- ಉಡುಪಿಯ ಪಂಡಿತ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ ಸಂಪಾದಿತ ಕೃತಿ) ಇವುಗಳ ಲೋಕಾರ್ಪಣೆ ನೆರವೇರಲಿದೆ. ಹಿರಿಯ ಪಂಡಿತರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಮತ್ತು ಪೇಜಾವರ ವಿದ್ಯಾ ಪೀಠದ ಪ್ರಾಚಾರ್ಯ ಸತ್ಯನಾರಾಯಣ ಅವರು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ.
ತಮ್ಮ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ 70 ಜನ ವಿದ್ವಾಂಸರಿಗೆ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು 70 ಜನ ಪಂಡಿತರಿಗೆ ರಜತ ಪಾತ್ರಾ ಸಹಿತ ಸನ್ಮಾನ ಮಾಡಲಿರುವುದು ಹೊಸ ಇತಿಹಾಸವನ್ನೇ ಬರೆಯಲಿದೆ.
ಗುರುಕುಲಕ್ಕೆ ನಿಧಿ ಸಮರ್ಪಣೆ: ಬೆಂಗಳೂರಿನ ಮಾಗಡಿ ಸಮೀಪದ ಅಡಕಮಾರನಹಳ್ಳಿ ಯಲ್ಲಿರುವ ಆನಂದವನ ಗುರುಕುಲಕ್ಕೆ ಭಂಡಾರ ಕೇರಿ ಮಠದ ವತಿಯಿಂದ 5 ಲಕ್ಷ ರೂಪಾಯಿ ವಿಶೇಷ ಅನುದಾನ ಪೂರ್ವಕ ಅನುಗ್ರಹ ನಿಧಿ ಸಮರ್ಪಣೆ ಆಗಲಿದೆ.
,.......
ಗುರುಕುಲದ ಪರಿಚಯ:
ಆನಂದವನ ಗುರುಕುಲವು 2016 ರಿಂದ ಸೇವಾ ಚಟುವಟಿಕೆಯನ್ನು ಆರಂಭಿಸಿದ್ದು ಸನಾತನ ವೇದ ಪರಂಪರೆಗೆ ಮಹತ್ತರ ಕೊಡುಗೆ ನೀಡುವಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಸಮಾಜದಿಂದ ಸಂಗ್ರಹವಾದ ದೇಣಿಗೆ ಹಣದಲ್ಲಿ ವಿದ್ಯಾರ್ಥಿಗಳಿಗೆ ವೇದ ವಿದ್ಯೆಯನ್ನು ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಕಾರ್ಯವನ್ನು ಮಾಡುತ್ತಿದೆ. ಪರಮಪೂಜ್ಯ ಶ್ರೀ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮೊದಲ ಮೃತ್ತಿಕಾ ಬೃಂದಾವನವನ್ನು ಹೊಂದಿರುವ ಆನಂದವನ ಗುರುಕುಲದಲ್ಲಿ (ಅಡಕಮಾರನಹಳ್ಳಿ ಕೃಷಿ ಭೂಮಿಯಲ್ಲಿ ಗುರುಕುಲ ಹಾಗೂ ಸಾವಯವ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.)
ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ಸ್ವಾಮೀಜಿಯವರು ಈ ಸಂಸ್ಥೆಗೆ ಗೌರವಾಧ್ಯಕ್ಷರಾಗಿದ್ದು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಹಿರಿಯ ಪಂಡಿತರಾದ ಶ್ರೀ ಸತ್ಯನಾರಾಯಣ ಆಚಾರ್ಯ, ಶ್ರೀ ಶ್ರೀನಿವಾಸ ಗುತ್ತಲ (7259040606), ಡಾ. ಶ್ರೀನಿಧಿ ಮತ್ತು ಡಾ. ಶ್ರೀಧರ್ ಅವರ ಮುಂದಾಳತ್ವದಲ್ಲಿ (ಟ್ರಸ್ಟಿಗಳು) 38 ವಿದ್ಯಾರ್ಥಿಗಳಿಗೆ ವೇದ ಶಿಕ್ಷಣವನ್ನು ನೀಡಲಾಗುತ್ತಿದೆ. ಭಾರತೀಯ ದೇಸಿ ತಳಿಯ 12 ಗೋವುಗಳನ್ನು ಈ ಕೇಂದ್ರದಲ್ಲಿ ಪಾಲನೆ ಮಾಡಲಾಗುತ್ತಿದೆ ಎಂಬುದು ಶ್ಲಾಘನೀಯ.
ಸನಾತನ ಭಾರತೀಯ ಪರಂಪರೆಯ ಶೈಲಿಯಲ್ಲಿ ಮಕ್ಕಳಿಗೆ ವಿದ್ಯಾರ್ಜನೆ ಸಂಪನ್ನಗೊಳ್ಳುತ್ತಿದೆ. ಇದರೊಂದಿಗೆ ಎನ್ ಐ ಓ ಎಸ್ ಮೂಲಕ ಲೌಕಿಕ ಶಿಕ್ಷಣವನ್ನೂ ದೊರಕಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ, ಪಿಯುಸಿ ಮತ್ತು ಪದವಿ ಹಂತದ ಲೌಕಿಕ ಶಿಕ್ಷಣಗಳು ಇಲ್ಲಿ ಲಭ್ಯವಿರುವುದು ಗಮನಾರ್ಹ ಸಂಗತಿಯಾಗಿದೆ.
ಇಲ್ಲಿ ದೊರಕುವ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು, ಈವರೆಗೆ 8 ವಿದ್ಯಾರ್ಥಿಗಳು ಗುರುಕುಲ ವಾಸ ಶಿಕ್ಷಣವನ್ನ ಮುಗಿಸಿ ಹೊರಬಂದು ವಿವಿಧ ರೀತಿಯ ಉನ್ನತ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀ ಸತ್ಯ ತೀರ್ಥ ಫೌಂಡೇಶನ್ ವತಿಯಿಂದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು ಪ್ರತಿ ತಿಂಗಳು ವಿದ್ಯಾರ್ಥಿಗಳ ಊಟೋಪಚಾರಗಳಿಗೆ ಆಹಾರ ಧಾನ್ಯವನ್ನು ಸಮರ್ಪಣೆ ಮಾಡುತ್ತಿರುವುದು ಮಹತ್ತರ ಕಾರ್ಯವಾಗಿದೆ.
ಇಂತಹ ಆನಂದವನ್ನ ಗುರುಕುಲಕ್ಕೆ ಒಂದು ಶಾಶ್ವತ ನಿಧಿಯನ್ನು ಸ್ಥಾಪಿಸಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಂಡಾರ ಕೇರಿ ಗುರುಗಳು ದಿಟ್ಟ ಸಂಕಲ್ಪವನ್ನು ಮಾಡಿದ್ದಾರೆ. ಇದರ ಮೊದಲ ಹಂತವಾಗಿ ಗುರುಕುಲಕ್ಕೆ 5 ಲಕ್ಷ ರೂ ಮೊತ್ತದ ನಿಧಿಯನ್ನು ಜೂನ್ 15ರಂದು ಸಮರ್ಪಿಸಿ ಧನ್ಯತೆ ಮರೆಯಲಿದ್ದಾರೆ.
ಈ ಸಂದರ್ಭಕ್ಕೆ ನೂರಾರು ವಿದ್ವಾಂಸರು ಮತ್ತು ಪಂಡಿತರು ಸಾಕ್ಷಿ ಆಗಲಿರುವುದು ವಿಶೇಷ (ಆನಂದವನ ಗುರುಕುಲಕ್ಕೆ ದತ್ತಿ ದೇಣಿಗೆ ಮತ್ತು ದಾನ ನೀಡುವ ಆಸಕ್ತರು 7259040 610 ಸಂಖ್ಯೆಗೆ ಸಂಪರ್ಕಿಸಬಹುದು).
- ಕೌಸಲ್ಯಾ ರಾಮ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ