ದಂತ ಚಿಕಿತ್ಸೆಯಲ್ಲಿ ರೋಗ ಮತ್ತು ರೋಗಿಯ ಚರಿತ್ರೆಯ ಮಹತ್ವ

Upayuktha
0


 



ದಂತ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ರೋಗದ ಹಿನ್ನಲೆ ಮತ್ತು ರೋಗಿಯ ಇತರ ಆರೋಗ್ಯದ ಸಮಸ್ಯೆಗಳ ಬಗ್ಗೆ ಕೂಲಂಕುಷವಾದ ವಿಚಾರಣೆ ಅತೀ ಅಗತ್ಯ. ಇತ್ತೀಚಿನ ದಿನಗಳಲ್ಲಿ ರೋಗ ಮತ್ತು ವೈದ್ಯರ ನಡುವಿನ ಬಾಂದವ್ಯ ಮೊದಲಿನಂತೆ ಇಲ್ಲ ಮತ್ತು ಎಲ್ಲವೂ ವ್ಯಾಪಾರೀಕರಣಗೊಂಡು ಈ ದಿನಗಳಲ್ಲಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಬರೀ ವ್ಯಾವಹಾರಿಕ ಸಂಬಂಧವಾಗಿರುವುದು ಒಂದು ದುರಂತ. ಈ ಕಾರಣದಿಂದ ಮತ್ತು ರೋಗಿಗೆ ಚಿಕಿತ್ಸೆಯಿಂದಾಗಿ ಯಾವುದೇ ತೊಂದರೆ ಉಂಟಾಗದಿರಲು ರೋಗಿಯ ರೋಗದ ಹಿನ್ನಲೆ ಮತ್ತು ರೋಗಿಯ ಆರೋಗ್ಯದ ಚರಿತ್ರೆಯ ಹಿನ್ನಲೆಯನ್ನು ಕೇಳಿ ತಿಳಿದು ದಾಖಲೆ ಮಾಡಬೇಕಾಗಿರುತ್ತದೆ ಮತ್ತು ಇದು ಅತೀ ಅವಶ್ಯಕವಾದ ಪ್ರಕ್ರಿಯೆ ಆಗಿರುತ್ತದೆ.


1. ಅಲರ್ಜಿ :- ರೋಗಿಗೆ ಚಿಕಿತ್ಸೆ ನೀಡುವಾಗ ರೋಗಿಗೆ ಔಷಧಿಯ ಅಗತ್ಯವಿದ್ದಲ್ಲಿ ಔಷಧಿಯ ಅಲರ್ಜಿ ಬಗ್ಗೆ ಪ್ರತಿ ರೋಗಿಯಲ್ಲೂ ವಿಚಾರಿಸಲೇಬೇಕು. ಆಂಟಿಬಯಾಟಿಕ್‌ಗಳಾದ ಪೆನಿಸಿಲಿನ್, ಅಲರ್ಜಿ ಎಂಬ ಬಗ್ಗೆ ವಿಚಾರಿಸಲೇಬೇಕು. ಇನ್ನು ನೋವು ನಿವಾರಕ ಔಷಧಿಗಳಾದ ಡೈಕ್ಲೊಫೆನಕ್ ಸೋಡಿಯಂ, ಪಾರಾಸಿಟಮಾಲ್ ಮುಂತಾದ ಔಷಧಿಗೆ ಅಲರ್ಜಿ ಬಗ್ಗೆ ಒಂದು ಮಾತು ಕೆಳಲೇಬೇಕು. ಒಂದು ವೇಳೆ ಅಲರ್ಜಿ, ಇದ್ದಲ್ಲಿ ರೋಗಿಯ ಔಷಧಿ ಪತ್ರದಲ್ಲಿ ಕೆಂಪು ಅಕ್ಷರದಲ್ಲಿ ದೊಡ್ಡದಾಗಿ ನಮೂದಿಸಿ ದಾಖಲಿಸಬೇಕು ಮತ್ತು ಪ್ರತಿ ಬಾರಿ ಯಾವುದೇ ವೈದ್ಯರ ಬಳಿ ಈ ವಿಚಾರ ತಿಳಿಸುವಂತೆ ಎಚ್ಚರಿಕೆ ನೀಡಬೇಕು. ಇಂತಹ ರೋಗಿಗಳಿಗೆ ರ‍್ಯಾಯ ಔಷಧಿ ನೀಡಬೇಕು. ಇಲ್ಲವಾದಲ್ಲಿ ಮಾರಣಾಂತಿಕವಾಗುವ ಸಾಧ್ಯತೆಯೂ ಇರುತ್ತದೆ.



2. ಅಧಿಕ ರಕ್ತದೊತ್ತಡ :- ಅಧಿಕ ರಕ್ತದೊತ್ತಡ ರೋಗ ಇರುವವರಿಗೆ ರಕ್ತದ ಒತ್ತಡ ಪರೀಕ್ಷಿಸದೇ ಹಲ್ಲು ಕೀಳಲೇಬಾರದು. ಇಲ್ಲವಾದಲ್ಲಿ ಅಧಿಕ ರಕ್ತಸ್ರಾವವಾಗಿ ತೀವ್ರ ತೊಂದರೆ ಉಂಟಾಗಬಹುದು. ಇನ್ನೂ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಔಷಧಿಯ ಬಗ್ಗೆಯ ಜಾಗ್ರತೆ ವಹಿಸಬೇಕು. ಇಂತಹ ರೋಗಿಗಳ ಹಲ್ಲು ಕಿತ್ತ ಬಳಿಕ ಖಡ್ಡಾಯವಾಗಿ ಹೊಲಿಗೆ ಹಾಕಬೇಕು, ಇಲ್ಲವಾದಲ್ಲಿ ಹಲ್ಲುಕಿತ್ತು ಮನೆಗೆ ಹೋದ ಬಳಿಕ ರಕ್ತದೊತ್ತಡ ಹೆಚ್ಚಾಗಿ, ಮಗದೊಮ್ಮೆ ತೀವ್ರ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ.



3. ಮಧುಮೇಹ :- ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಗ್ಲೋಕೋಸ್ ನಿಯಂತ್ರಣಕ್ಕೆ ತಂದ ಬಳಿಕವೇ ದಂತ ಚಿಕಿತ್ಸೆ ಮಾಡತಕ್ಕದ್ದು. ರಕ್ತದಲ್ಲಿನ ಗ್ಲೋಕೋಸ್  ಪ್ರಮಾಣ ಹೆಚ್ಚು ಇದ್ದಲ್ಲಿ ಹಲ್ಲು ಶುಚಿಗೊಳಿಸುವುದು, ಹಲ್ಲು ಕೀಳುವುದು ಅಥವಾ ಇನ್ನಾವುದೇ ಸರ್ಜರಿಗಳನ್ನು ಮಾಡಲೇಬಾರದು. ರಕ್ತ ಒಸರುವ ಸಾಧ್ಯತೆ ಇರುವ ಎಲ್ಲಾ ದಂತ ಚಿಕಿತ್ಸೆಗಳನ್ನು ಆಂಟಿ ಬಯಾಟಿಕ್ ಔಷಧಿ ನೀಡಿದ ಬಳಿಕವೇ ಮಾಡತಕ್ಕದ್ದು. ಮಧುಮೇಹ ರೋಗಿಗಳಿಗೆ ಗಾಯ ಬೇಗನೆ ಒಣಗುವುದಿಲ್ಲ ಮತ್ತು ಬೇಗನೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಅವರ ದೇಹದ ರಕ್ಷಣಾ ವ್ಯವಸ್ಥೆ ಚೆನ್ನಾಗಿ ಇರುವುದಿಲ್ಲ. ಈ ಕಾರಣದಿಂದ ಅತೀ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ.



4. ಪಾಶ್ವವಾಯು ರೋಗಿಗಳು :- ಪಾಶ್ವವಾಯು ಅಥವಾ ಸ್ಟ್ರೋಕ್ ಅಂದರೆ ಮೆದುಳಿನ ಅಘಾತಕ್ಕೆ ತುತ್ತಾದ ರೋಗಿಗಳಿಗೆ ಅಸ್ಟರಿನ್ ಅಥವಾ ರಕ್ತದ ಸರಾಗ ಚಲನೆಗೆ ಪೂರಕವಾಗುವ ಔಷಧಿ ನೀಡಲಾಗುತ್ತದೆ. ಇಂತಹ ರೋಗಿಗಳಿಗೆ ದಂತ ಸರ್ಜರಿ ಮಾಡಿದಲ್ಲಿ ಅಧಿಕ ರಕ್ತಸ್ರಾವ ಉಂಟಾಗಬಹುದು. ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಇಂತಹಾ ರೋಗಿಗಿಳಿಗೆ ಅವರ ವೈದ್ಯರ ಅನುಮತಿ ಮೇರೆಗೆ ಈ ಔಷಧಿಗಳನ್ನು 5 ದಿನ ಮೊದಲು ನಿಲ್ಲಿಸಲಾಗುತ್ತದೆ. ಆ ಬಳಿಕ ದಂತ ಸರ್ಜರಿ ಮಾಡಲಾಗುತ್ತದೆ. ಮತ್ತು ಸರ್ಜರಿ ಮಾಡಿದ ಮರು ದಿನದಿಂದ ಔಷಧಿ ಮತ್ತೆ ಶುರು ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ರಕ್ತಸ್ರಾವ ಆಗುವುದನ್ನು ಕಡಮೆ ಮಾಡಬಹುದಾಗಿದೆ.



5. ಹೃದಯಾಘಾತ ರೋಗಿಗಳು :- ಹೃದಯಾಘಾತ ಆದ ರೋಗಿಗಳು ಮತ್ತು ಹೃದಯದ ತೆರೆದ ಹೃದಯ ಸರ್ಜರಿ ಮಾಡಿಸಿಕೊಂಡ ರೋಗಿಗಳು ಕೂಡ ರಕ್ತದ ಸರಾಗ ಚಲನೆಗೆ ಬೇಕಾಗಿ ಆಸ್ಟರಿನ್ ಮತ್ತು ಕ್ಲೊಪಿಡೋಗ್ರೀಲ್ ಎಂಬ ಔಷಧಿ ಜೀವಮಾನವಿಡೀ ಸೇವಿಸಬೇಕಾಗುತ್ತದೆ. ಇಂತಹ ರೋಗಿಗಳಲ್ಲಿ ದಂತ ಸರ್ಜರಿ ಅವಶ್ಯವಿದ್ದಲ್ಲಿ ಹೃದಯ ತಜ್ಞರ ಬಳಿ ಸಮಾಲೋಚನೆ ನಡೆಸಿ ಔಷಧಿ ನಿಲ್ಲಿಸಿ ಮೂರು ದಿನಗಳ ಬಳಿಕ ದಂತ ಸರ್ಜರಿ ಮಾಡಲಾಗುತ್ತದೆ.


6. ಸ್ಟೀರಾಯ್ಡು ಸೇವನೆ :- ಕೆಲವೊಂದು ದೀರ್ಘಕಾಲಿಕೆ ಕಾಯಿಲೆಗಳಾದ ಆಥೈರ್‌ಟಿಸ್, ಮಂಡಿನೋವು ಮತ್ತು ದೇಹದ ರಕ್ಷಣ ವ್ಯವಸ್ಥೆ ಕೆರಳಿಸುವ ಆಟೋ ಇಮ್ಯುನ್  ರೋಗಗಳಿಗೆ ನಿರಂತರ ಸ್ಟಿರಾಯ್ಡ್ ಸೇವನೆ ಬೇಕಾಗುತ್ತದೆ. ಇಂತಹ ರೋಗಿಗಳಿಗೆ ದಂತ ಚಿಕಿತ್ಸೆ ಮಾಡುವ ಮೊದಲು ಸ್ಟೀರಾಯ್ಡ ಡೋಸ್ ಜಾಸ್ತಿ ಮಾಡಬೇಕು ಮತ್ತು ಅವರ ವೈದ್ಯರ ಸಲಹೆ ಮತ್ತು ಸೂಚನೆ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.


7. ಕ್ಯಾನ್ಸರ್ ಚಿಕಿತ್ಸೆ :- ದಂತ ಚಿಕಿತ್ಸೆ ಮಾಡುವ ಮೊದಲು ರೋಗಿಗಳು ಈ ಹಿಂದೆ ಯಾವುದಾದರೂ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಫಿ ಮತ್ತು ರೇಡಿಯೇಷನ್ ಥೆರಫಿ (ವಿಕಿರಣ ಚಿಕಿತ್ಸೆ) ಪಡೆಯಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ವಿಕಿರಣ ಚಿಕಿತ್ಸೆ ಪಡೆದ ಬಳಿಕ 6 ತಿಂಗಳ ಕಾಲ ಹಲ್ಲು ಕೀಳುವಂತಿಲ್ಲ. ಮತ್ತು ಕೀಮೋಥೆರಪಿ ಚಿಕಿತ್ಸೆ ಪಡೆದಿದ್ದಲ್ಲಿ ರಕ್ತದಲ್ಲಿನ ಪ್ಲೇಟ್‌ಲೆಟ್ ಅಂದರೆ ರಕ್ತ ತಟ್ಟೆಗಳ ಸಂಖ್ಯೆ ಸರಿಯಾಗಿದೆಯೇ ಎಂಬದನ್ನು ಅರಿತುಕೊಳ್ಳಿ. ರಕ್ತ ತಟ್ಟೆಗಳ ಸಂಖ್ಯೆ ಕಡಮೆ ಇದ್ದಲ್ಲಿದಂತ ಚಿಕಿತ್ಸೆ ಬಳಿಕ ರಕ್ತಸ್ರಾವವಾಗಬಹುದು. ವಿಕಿರಣ ಚಿಕಿತ್ಸೆ ಪಡೆದಿದ್ದಲ್ಲಿ ಹಲ್ಲು ಕಿತ್ತ ಹಾಗದಲ್ಲಿ ಕೀವು ತುಂಬಿ ಗಾಯ ತಿಂಗಳುಗಳ ಕಾಲ ಒಣಗದೇ ಇರಬಹುದು.


8. ಇತರ ಔಷಧಿಗಳ ಸೇವನೆ :- ಹಲ್ಲು ಕೀಳುವ ಮೊದಲು ರೋಗಿಗಳು ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದಾರೆ ಮತ್ತು ಯಾಕೆ ಸೇವಿಸುತ್ತಿದ್ದಾರೆ ಎಂಬುದನ್ನು ಸರಿಯಾಗಿ ವಿಚಾರಿಸಿ ತಿಳಿದುಕೊಳ್ಳಿ. ಉದಾಹರಣೆಗೆ ಅಧಿಕ ರಕ್ತದೊತ್ತಡ ರೋಗಿಗಳಿಗೆ ಕೊಡುವ ಔಷಧಿ ನಿಫೆಪೈನ್‌ಡಿ ಇದರಿಂದ ವಸಡು ಎಗ್ರಾಬರ‍್ರಿಯಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಇನ್ನೂ ಗಾರ್ಡಿನಾಲ್ ಸೋಡಿಯಂ ಮತ್ತು ಫೀನೋಬಾರ್ಬಿಟೋನ್ ಔಷಧಿಯಿಂದ ವಸಡುಗಳ ವಾದಿಕೊಂಡು ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಲವಾರು ವರ್ಷಗಳಿಂದ ಮಧುಮೇಹ ರೋಗ ನಿಯಂತ್ರಣಕ್ಕೆ ಬಾಯಿಯ ಮುಖಾಂತರ ಆಂಟಿ ಡಯಾಬಿಟಿಕ್ ಔಷಧಿ ಸೇವಿಸುತ್ತಿದ್ದಲ್ಲಿ ರಕ್ತದಲ್ಲಿ ಕೆಂಪು ರಕ್ತ ಕಣ ಬಿಳಿ ರಕ್ತ ಕಣ ಮತ್ತು ರಕ್ತ ತಟ್ಟೆಗಳ ಸಂಖ್ಯೆ ಕ್ಷೀಣಿಸುತ್ತದೆ ಇದಕ್ಕೆ ಪಾನ್‌ಸೈಟೋಪೀನಿಯಾ ಎಂದೂ ಕರೆಯುತ್ತಾರೆ. ಈ ಸಂದರ್ಭಗಳಲ್ಲಿ ದಂತ ಸರ್ಜರಿ ಮಾಡಿದಲ್ಲಿ ವಿಪರೀತ ರಕ್ತಸ್ರಾವ ಆಗಬಹುದು. ಬರೀ ಹಲ್ಲು ಶುಚಿಕೊಳಿಸುವುದರಿಂದಲೂ ರಕ್ತಸ್ರಾವ ಆಗುವ ಸಾಧ್ಯತೆ ಇದೆ.


9. ಅಪಸ್ಮಾರ :- ಹಲ್ಲಿನ ಚಿಕಿತ್ಸೆ ನೀಡುವ ಮೊದಲು ರೋಗಿಗಳು ಯಾವುದೇ ಅಪಸ್ವಾರ ರೋಗದಿಂದ ಬಳಲುತ್ತಿಲ್ಲ ಎಂದು ದೃಡೀಕರಿಸಿಕೊಳ್ಳಿ. ಅಪಸ್ವಾರ ರೋಗಿಗಳಗೆ ವಿಶೇಷ ಪರಿಣಿತ ವೈದ್ಯರಿಂದ ನೋವು ರಹಿತ ಚಿಕಿತ್ಸೆ ಅತೀ ಅಗತ್ಯ. ಸಣ್ಣ ನೋವಿದ್ದರೂ ಅಪಸ್ವಾರ ಬರುವ ಸಾಧ್ಯತೆ ಇರುತ್ತದೆ. ದಂತ ಚಿಕಿತ್ಸೆ ನೀಡುವ ಮೊದಲು ಒತ್ತಡ ನಿವಾರಕ ಔಷಧಿ ನೀಡಲಾಗುತ್ತದೆ.


10. ರಕ್ತ ಸಂಬಂಧಿ ಕಾಯಿಲೆ :- ಹಿಮೋಪೀಲಿಯಾ ಅಥವಾ ಕುಸುಮ ರೋಗ ಇರುವ ರೋಗಿಗಳಿಗೆ ಯಾವುದೇ ದಂತ ಚಿಕಿತ್ಸೆ ಮಾಡದಿದ್ದಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅವರ ರಕ್ತದ ಗುಂಪನ್ನು ತಿಳಿದು ರಕ್ತದ ವ್ಯವಸ್ಥೆ ಮಾಡಿದ ಬಳಿಕವೇ ಮಾಡಬೇಕಾಗುತ್ತದೆ. ಹಲ್ಲು ಕೀಳುವುದು, ಹಲ್ಲು ಶುಚಿಗೊಳಿಸುವುದು ಇತ್ಯಾದಿಗಳನ್ನು ಆಸ್ಪತ್ರೆಯಲ್ಲಿ ಬಳಿ ರೋಗಿಯಾಗಿ ದಾಖಲೆ ಮಾಡಿ ಅತೀ ಅನಿವರ‍್ಯವಾದಲ್ಲಿ ಮಾತ್ರ ಮಾಡತಕ್ಕದ್ದು. ಅವರಿಗೆ ಅರಿವಳಿಕೆ ಚುಚ್ಚು ಮದ್ದನ್ನು  ನೀಡುವಾಗ ಬಹಳ ಜಾಗುರೂಕರಾಗಿ ಇರಬೇಕಾಗುತ್ತದೆ.


11. ಜ್ವರಗಳ ಚರಿತ್ರೆ :- ರೋಗಿಗಳು ಈ ಹಿಂದೆ ಡೆಂಗ್ಯೂ ಜ್ವರ ಮತ್ತು ಚಿಕುನ್‌ಗುನ್ಯಾ ಜ್ವರದಿಂದ ಬಳಲಿದ್ದಲ್ಲಿ, ಅವರ ರಕ್ತದಲ್ಲಿನ ಪ್ಲೇಟ್‌ಲೆಟ್ ಸಂಖ್ಯೆ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ ನಂತರ ಚಿಕಿತ್ಸೆ ನೀಡತಕ್ಕದ್ದು.


12. ಅಪರೂಪದ ಖಾಯಿಲೆಗಳು :- ಏಡ್ಸ್, ಹೆಪಟೈಟಿಸ್ ಮುಂತಾದ ವೈರಾಣುವಿನಿಂದ ಹರಡುವ ರೋಗಗಳ ಬಗ್ಗೆ ರೋಗಿಗಳಲ್ಲಿ ವಿಚಾರಣೆ ಮಾಡಬೇಕು. ಅಂತಹ ರೋಗದಿಂದ ರೋಗದಿಂದ ಬಳಲುತ್ತಿದ್ದಲ್ಲಿ ಯಾವುದೇ ಸೌಂದರ್ಯವರ್ದಕ ದಂತ ಚಿಕಿತ್ಸೆ ನೀಡಬಾರದು. ಅತೀ ಅಗತ್ಯದ ತುರ್ತು ಚಿಕಿತ್ಸೆಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಸಕಲ ಪೂರ್ವ ಸಿದ್ಧತೆಗಳೊಂದಿಗೆ ಮಾತ್ರ ಮಾಡತಕ್ಕದ್ದು.


13. ಮಹಿಳೆಯರ ಖಾಯಿಲೆಗಳು :- ಮಹಿಳೆಯರು ಋತು ಚಕ್ರದ ಸದಂರ್ಭದಲ್ಲಿ ಹೆಚ್ಚು ರಕ್ತಸ್ರಾವವಾಗುವ ದಂತ ಸರ್ಜರಿಗಳನ್ನು ಮಾಡಬಾರದು. ಅತೀ ಅಗತ್ಯದ ಚಿಕಿತ್ಸೆ ಮಾತ್ರ ಮಾಡಬಹುದಾಗಿದೆ. ಅಲ್ಲದೆ ಅವರು ಗರ್ಭವತಿಯಾಗಲು ಔಷಧಿ ತೆಗೆದುಕೊಳ್ಳುತ್ತಿದ್ದಲ್ಲಿ ಹೆರಿಗೆ ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆದೇ ದಂತ ಚಿಕಿತ್ಸೆ ಮಾಡತಕ್ಕದ್ದು. ಹೆಚ್ಚಿನ ಮಹಿಳೆಯರು ಗರ್ಭವತಿಯಾಗುವದನ್ನು ತಡೆಯುವ ಅಧಿಕ ರಸದೂತ ಬಳಸುತ್ತಿದ್ದಲ್ಲಿ ಅದನ್ನೂ ಕೂಡ ಗುರುತಿಸಿ ಪ್ರಸೂತಿ ತಜ್ಞರ ಅನುಮತಿ ಪಡೆದೇ ದಂತ ಚಿಕಿತ್ಸೆ ಮಾಡತಕ್ಕದ್ದು. ಇನ್ನು ಮಹಿಳೆ ಗರ್ಭವತಿಯಾಗಿದ್ದಲ್ಲಿ ಮೊದಲನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಅತೀ ಅಗತ್ಯದ ತುರ್ತು ಚಿಕಿತ್ಸೆ ಮಾಡತಕ್ಕದ್ದು. ಔಷಧಿಗಳನ್ನು ಅತೀ ಅವಶ್ಯಕತೆಯಿದ್ದಲ್ಲಿ ಮಾತ್ರ ಬಳಸತಕ್ಕದ್ದು. ಪಾರಾಸಿಟಮಾಲ್ ನೋವು ನಿವಾರಕ ಮತ್ತು ಅಮೋಕ್ಸಿಸಿಲಿನ್ ಆಂಟಿಬಯೋಟಿಕ್ ಅತೀ ಸೂಕ್ತ ಎಂದು ಚರಿತ್ರೆಗಳಿಂದ ಸಾಬೀತಾಗಿದೆ. ಸೌಂದರ್ಯವರ್ದಕ ಚಿಕಿತ್ಸೆಗಳನ್ನು ಎರಡನೇ ತ್ರೈಮಾಸಿಕದಲ್ಲಿ ಮಾಡಬಹುದಾಗಿದೆ. ದಂತ ಕ್ಷಕಿರಣವನ್ನು ಬಳಸದೇ ಇರುವುದು ಸೂಕ್ತ.


14. ಥೈರಾಯಿಡ್ ಸಮಸ್ಯೆಗಳು :- ಹೈಪರ್ಥೈ ರಾಯಿಡ್ ಸಮಸ್ಯೆ ಇದ್ದಲ್ಲಿ ಹಲ್ಲು ಕೀಳಲೇಬಾರದು. ವೈದ್ಯರ ಸಲಹೆಯೇ ಅಗತ್ಯ. ಹೈಪೋಥೈರಾಯಿಡ್ ಸಮಸ್ಯೆ ಇದ್ದಲ್ಲಿ ರಕ್ತದೊತ್ತಡ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಇಂತಹಾ ರೋಗಿಗಳಿಗೆ ಔಷಧಿ ನೀಡುವಾಗ ಬಹಳ ಎಚ್ಚರ ವಹಿಸಬೇಕಾಗುತ್ತದೆ.


15. ಲಿವರ್ ತೊಂದರೆ :- ಲಿವರ್ ಸಮಸ್ಯೆ,ಯಕೃತ್ತಿನ ಕ್ಯಾನ್ಸರ್, ಅಧಿಕ ಮದ್ಯಪಾನ ಮಾಡುವವರಿಗೆ ದಂತ ಚಿಕಿತ್ಸೆ ಮಾಡುವಾಗ ಜಾಗರೂಕರಾಗಿರಬೇಕು. ಅವರಿಗೆ ಬೇಗ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಮತ್ತು ಅವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುತ್ತದೆ. ಈ ಕಾರಣದಿಂದ ಹಲ್ಲು ಕೀಳುವಾಗ ಬಹಳ ಜಾಗರೂಕರಾಗಿರಬೇಕು.

16. ಗ್ಯಾಸ್ಟಿಕ್ ಸಮಸ್ಯೆ :- ಗ್ಯಾಸ್ಟಿಕ್ ಸಮಸ್ಯೆ ಇರುವವರಿಗೆ ಯಾವುದೇ ಅನಗತ್ಯ ಔಷಧಿ ನೀಡುವಂತಿಲ್ಲ.ಕರುಳು ಸ್ನೇಹಿ ನೋವು ನಿವಾರಕ ಔಷಧಿ ನೀಡಬೇಕಾಗುತ್ತದೆ. ಅತೀ ಅಗತ್ಯವಿದ್ದಲ್ಲಿ ಮಾತ್ರ ಆಚಿಟಿಬಯೋಟಿಕ್ ಔಷಧಿ ಮತ್ತು ನೋವು ನಿವಾರಕ ಔಷಧಿ ನೀಡಬೇಕು.

17. ಕಿಡ್ನಿ ಸಮಸ್ಯೆ ಇರುವ ರೋಗಿಗಳು : ನಾವು ಸೇವಿಸುವ ಎಲ್ಲಾ ಔಷಧಿಗಳು ದೇಹದಿಂದ ಕಿಡ್ನಿಗಳ ಮುಖಾಂತರ ಹೊರ ಹಾಕಲ್ಪಡುತ್ತದೆ. ಈ ಕಾರಣದಿಂದ ಆರೋಗ್ಯವಂತ ಕಿಡ್ನಿ ಅತೀ ಅವಶ್ಯಕ. ಕಿಡ್ನಿ ವೈಫಲ್ಯ ಮದುಮೇಹದಿಂದ ಕಿಡ್ನಿ ಕರ‍್ಯ ಕ್ಷಾಮತೆ ಕ್ಷೀಣಿಸಿದ್ದಲ್ಲಿ ಬಹಳಾ ಜಾಗರೂಕರಾಗಿ ನೋವು ನಿವಾರಕ ಮತ್ತು ಇತರ ಔಷಧಿಗಳನ್ನು ಬಳಸಬೇಕು.



18. ಮಾನಸಿಕ ರೋಗಿಗಳು : ರೋಗಿಗಳು ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅದಕ್ಕಾಗಿ ಒತ್ತಡನಿವಾರಕ ಔಷಧಿ ಸೇವಿಸುವ ರೋಗಿಗಳ ಬಗ್ಗೆ ವಿಶೇಷ ನಿಗಾ ಮತ್ತು ಕಾಳಜಿ ವಹಿಸಬೇಕು. ಇಂತಹ ರೋಗಿಗಳಿಗೆ ಔಷಧಿ ನೀಡುವಾಗ ಬಹಳ ಹುಷಾರಾಗಿರಬೇಕು. ನಾವು ನೀಡುವ ಔಷಧಿಗಳ ಜೊತೆಗೆ ಅವರು ಸೇವಿಸುವ ಔಷಧಿಗಳು ಒಂದಕ್ಕೊಂದು ವಿರುದ್ದವಾಗಿ ವರ್ತಿಸಿ ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಅದೇ ರೀತಿ ಇಂತಹ ರೋಗಿಗಳಿಗೆ ಅಡ್ರಸಲೀನ್ ಇರುವ ಅರಿವಳಿಕೆ ಔಷಧಿ ನೀಡುವ ಮೊದಲು ಮನೋವೈದ್ಯರ ಅನುಮತಿ ಮತ್ತು ಆಪ್ತ ಸಮಾಲೋಚನೆ ಅತೀ ಅಗತ್ಯವಾಗಿರುತ್ತದೆ.


ಕೊನೆ ಮಾತು


ರೋಗಿಗಳಿಗೆ ಚಿಕಿತ್ಸೆ ನೀಡುವಾಗ ರೋಗಿಗಳ ರೋಗದ ಚರಿತ್ರೆ ಮತ್ತು ರೋಗದ ಹಿನ್ನಲೆಯನ್ನು ಕೂಲಂಕುಷವಾಗಿ ಅರಿಯಬೇಕು. ಅಭ್ಯಸಿಸಬೇಕು ಮತ್ತು ಅಧ್ಯಯನ ಮಾಡಬೇಕು ಹಾಗಾದಲ್ಲಿ ಮಾತ್ರ ರೋಗಿಗಳಿಗೆ ಉತ್ಕೃಷ್ಟ ಮಟ್ಟದ ಪರಿಪೂರ್ಣ ಚಿಕಿತ್ಸೆಯನ್ನು ವೈದ್ಯರು ನೀಡಲು ಸಾಧ್ಯವಿದೆ. ಈ ಕಾರಣದಿಂದಾಗಿ ರೋಗಿಗೆ ಚಿಕಿತ್ಸೆ ನೀಡುವ ಮೊದಲು ಕನಿಷ್ಠ ಹತ್ತು ನಿಮಿಷ ರೋಗಿಗಳ ಜೊತೆ ಮಾತಾನಾಡಿ ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕಿತ್ಸೆ ನೀಡಿದ್ದಲ್ಲಿ ಮಾತ್ರ ವೈದ್ಯರು ತಮ್ಮ ವೃತ್ತಿಗೆ ಪರಿಪೂರ್ಣ ನ್ಯಾಯ ಒದಗಿಸಲು ಸಾಧ್ಯವಿದೆ ಮತ್ತು ಅದರಲ್ಲಿಯೇ ರೋಗಿಗಳ ಹಿತ ಅಡಗಿದೆ.


- ಡಾ|| ಮುರಳಿ ಮೋಹನ್‌ ಚೂಂತಾರು

ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top