ನೈಋತ್ಯ ಪದವೀಧರರ ಪಟ್ಟಿಯ ಕಡೆಗೆ ಒಮ್ಮೆ ಕಣ್ಣು ಹಾಯಿಸಬೇಕೆಂಬ ಮನಸ್ಸಿನಿಂದ ಮತದಾರರ ಪಟ್ಟಿಯ ಒಂದೊಂದೇ ಪುಟಗಳನ್ನು ತೆರೆದು ನೇೂಡುತ್ತಾ ಹೇೂದೆ. ಪದವೀಧರರ ಹೆಸರು, ಪ್ರಾಯ, ಉದ್ಯೋಗ, ವಿಳಾಸಗಳೆಲ್ಲವೂ ನನ್ನನ್ನು ಹೊಸದೊಂದು ಲೇೂಕದ ಕಡೆಗೆ ಕೊಂಡೊಯ್ಯುತ್ತಿದೆ ಅನ್ನುವ ಅನುಭವವಾಗಲು ಶುರುವಾಯಿತು.
ಹರಿದು ಹಂಚಿಹೇೂಗಿರುವ ಪದವಿಧರರ ಮತದಾರರನ್ನು ಗುರುತಿಸುವುದೆಂದರೆ ಸಮುದ್ರದಲ್ಲಿ ಗಾಳ ಹಾಕಿ ನಮಗೆ ಯಾವ ಜಾತಿ ಮೀನು ಬೇಕೊ ಅದನ್ನು ಮಾತ್ರ ಹಿಡಿಯುವ ಸಾಹಸಕ್ಕೆ ಕೈ ಹಾಕಿದ ಅನುಭವ.ಆದರೆ ಸಾರ್ವತ್ರಿಕ ಚುನಾವಣಾ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಹುಡುಕುವುದು ಸುಲಭ ಸಮುದ್ರಕ್ಕೆ ಬಲೆ ಹಾಕಿ ಮೀನು ಹಿಡಿದ ಹಾಗೆ. ಅಲ್ಲಿ ಎಲ್ಲಾ ಜಾತಿಯ ಮೀನುಗಳು ನಮ್ಮ ಬುಟ್ಟಿಗೆ ಅನಿವಾರ್ಯ. ಆದರೆ ಇಲ್ಲಿ ಹಾಗಲ್ಲ, ಕೇವಲ ಪದವೀಧರ ಮೀನುಗಳು ಬುಟ್ಟಿಗೆ ಹಾಕಿಕೊಳ್ಳಬೇಕು.
ಸಮಗ್ರ ಪದವೀಧರರ ಪಟ್ಟಿಯ ಮೇಲೆ ಕಣ್ಣು ಹಾಯಿಸಿದಾಗ ಕಂಡು ಬಂದ ಇನ್ನೊಂದಿಷ್ಟು ಗಮನ ಸೆಳೆದ ಅಂಶವೆಂದರೆ ಈ ಪದವೀಧರರಲ್ಲಿ ಕೆಲವೊಂದಿಷ್ಟು ಸರಕಾರಿ ಕೆಲಸ ಇನ್ನೊಂದಿಷ್ಟು ಶಿಕ್ಷಕರು ಕಾಲೇಜಿನ ಉಪನ್ಯಾಸಕರು ಹಾಗೆ ಇನ್ನೊಂದಿಷ್ಟುಮಂದಿ ಖಾಸಗಿ ಸಂಸ್ಥೆಯಲ್ಲಿ ದುಡಿಯುವವರು ಬೆರಳೆಣಿಕೆಯಷ್ಟು ವೈದ್ಯರು ಇಂಜಿನಿಯರ್ಸ್, ಅದೆಷ್ಟೋ ಮಂದಿ ಸಣ್ಣಪುಟ್ಟ ಸ್ವಉದ್ಯೋಗಿಗಳು, ಇದರ ನಡುವೆ ಕೃಷಿಯಲ್ಲಿ ಬದುಕನ್ನು ಕಟ್ಟಿ ಕೊಂಡವರು ಇದ್ದಾರೆ. ಅದೆಷ್ಟೋ ಮಂದಿ ಮಹಿಳೆಯರು ಗೃಹಿಣಿಯರಾಗಿ ಮನೆವಾರ್ತೆ ನೇೂಡಿಕೊಳ್ಳುವವರನ್ನು ನೇೂಡಿದ್ದೇನೆ. ಈ ಮಧ್ಯದಲ್ಲಿ ನನ್ನ ಮನಸ್ಸಿಗೆ ಬಹುವಾಗಿ ನಾಟಿದ ಒಂದು ಅಂಶವೆಂದರೆ- ಈ ಪದವೀಧರರ ಪಟ್ಟಿಯಲ್ಲಿ ಒಬ್ಬರು ಸ್ನಾತಕೋತ್ತರ ಪದವಿ ಪಡೆದು ದಿನಕೂಲಿಯಾಗಿ ದುಡಿಯುವರ ಪರಿಚಯವೂ ಆಯಿತು.
ಈ ಎಲ್ಲಾ ವೈವಿಧ್ಯಮಯವಾದ ಸುಖ ಕಷ್ಟಗಳನಡುವೆ ಪದವೀಧರರೆಂಬ ಪ್ರಬುದ್ಧ ಮತದಾರರ ತನ್ನ ಸುಖ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸ ಬಲ್ಲ. ವಿಧಾನ ಪರಿಷತ್ ಜನಪ್ರತಿನಿಧಿ ಯಾರಾಗಬಹುದೆಂಬ ಹುಡುಕಾಟದಲ್ಲಿರುವುದಂತೂ ಸತ್ಯ.
ಇಡಿ ಮತದಾರರ ಪಟ್ಟಿಯನ್ನು ಅತ್ಯಂತ ಪ್ರೀತಿಯಿಂದ ತೆರೆದು ನೇೂಡಿದಾದ 60 ವರುಷಗಳ ಮೇಲಿನ ಪದವೀಧರರು ತುಂಬಾ ತುಂಬಾ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಹಾಗಾದರೆ ಈ ಅರವತ್ತು ದಾಟಿದ ಪದವೀಧರ ಮತದಾರರು ಯಾವಾಗ ಎಲ್ಲಿ ಮೂಲೆ ಸೇರಿಕೊಂಡರು? ಕೇವಲ ಬಿಸಿ ರಕ್ತದ ಯುವ ಮತದಾರರ ವಯಸ್ಸೆ ಹೆಚ್ಚಿನ ಕಡೆ ಗಮನ ಸೆಳೆಯುತ್ತಿದೆ. ತಕ್ಷಣವೇ ನನಗೆ ನೆನಪಾಯಿತು- ಇದು ಚುನಾವಣಾ ಆಯೇೂಗ ಮಾಡಿದ ಮಹಾ ಪ್ರಾರಬ್ಧ ಎಂದು. ಪ್ರತಿ 5 ವರುಷದ ಚುನಾವಣೆಗಾಗಿ ಪ್ರತಿಬಾರಿ ಹೆಸರು ಮರು ನೊಂದಾಯಿಸಿ ಕೊಳ್ಳಬೇಕು ಅನ್ನುವ ಅವೈಜ್ಞಾನಿಕ ನಿಯಮದಿಂದಾಗಿ ಅದೆಷ್ಟೋ ಮಂದಿ ಈ ಚುನಾವಣೆಯಲ್ಲಿ ನಿರಾಸಕ್ತಿ ಹೊಂದಿರಬೇಕು ಅನ್ನುವುದು ಖಾತ್ರಿಯಾಯಿತು.
ಈ ಎಲ್ಲದರ ನಡುವೆ ನೈರುತ್ಯ ಪದವಿಧರ ಕ್ಷೇತ್ರದಲ್ಲಿ ಸರಿಯಾಗಿ 2024 ಮತದಾರರ ಪಟ್ಟಿಯಂತೆ 85095 ಮಂದಿ ಮತದಾರರು ಉಡುಪಿ, ದಕ್ಷಿಣ ಕನ್ನಡ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಒಂದಿಷ್ಟು ದಾವಣಗೆರೆಯ ಭಾಗದಲ್ಲಿ ಹರಿದು ಹಂಚಿ ಹೇೂಗಿದ್ದಾರೆ. ಇವರಿಗೆ ಬಲೆ ಬೀಸುವ ಹಾಗೆ ಇಲ್ಲ..ಗಾಳ ಹಾಕುವ ಪರಿಸ್ಥಿತಿ ಅಭ್ಯರ್ಥಿಗಳು ಇಲ್ಲ. ಪಕ್ಷಗಳು ಇಲ್ಲ. ಅನ್ನುವುದು ವಾಸ್ತವಿಕ. ಹಾಗಾಗಿ ಇಂಥವರನ್ನು ತಯಾರಿ ಮಾಡಿ ಕಳುಹಿಸಿದ ಶಿಕ್ಷಣ ಸಂಸ್ಥೆಗಳ ದರ್ಶನ ಮಾಡಿ ಪುಣ್ಯ ಕಟ್ಟಿಕೊಳ್ಳುವ ಕೆಲಸದಲ್ಲಿ ಅಭ್ಯರ್ಥಿಗಳು ಮಗ್ನರಾಗಿರುವುದನ್ನು ದಿನ ನಿತ್ಯವೂ ನೇೂಡುತ್ತಿದ್ದೇವೆ. ಇನ್ನೂ ಕೆಲವರು ಗಣ್ಯಮಾನ್ಯರನ್ನು ನೇೂಡಿ ಆಶೀರ್ವಾದ ಪಡೆದುಕೊಳ್ಳುವುದರಲ್ಲಿಯೇ ಮಗ್ನರಾಗಿದ್ದಾರೆ.
ಆದರೆ ನಿಜವಾದ ಮತದಾರ ದೇವರು ಪವಡಿಸಿರುವುದು ಹಳ್ಳಿಗಳ ಸಣ್ಣಪುಟ್ಟ ಗುಡಿಸಲುಗಳಲ್ಲಿ ಚಿಕ್ಕ ಪುಟ್ಟ ಉದ್ಯೋಗಗಳಲ್ಲಿ. ಆದರೆ ಈ ಎಲ್ಲಾ ದೇವರುಗಳನ್ನು ನೋಡಿ ಮತ ಬಿಕ್ಷೆ ಬೇಡುವುದು ಕಷ್ಟಸಾಧ್ಯವಾದ ಕಾರಣ ವೃೆವಿಧ್ಯಮಯವಾದ ಮಾಧ್ಯಮಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಅಭ್ಯರ್ಥಿಗಳ ಪಾಲಿಗೆ ಬಂದಿದೆ ಅನ್ನುವುದು ಸ್ವಷ್ಟ. ಆದರೂ ನಮ್ಮದೊಂದು ನಿವೇದನೆ- ನಿಮ್ಮನ್ನು ಆಯ್ಕೆ ಮಾಡಿದ ಮೇಲಾದರೂ ನಮ್ಮನ್ನು ಮರೆಯ ಬೇಡಿ. ನಿಮ್ಮ ಪಕ್ಷದ ಹಿತಕ್ಕಿಂತ ಪದವೀಧರರ ಬದುಕಿನ ಸುಖ ಕಷ್ಟಗಳು ಮೊದಲ ಆದ್ಯತೆ ಪರಿಗಣಿಸಿ ಕೆಲಸ ಮಾಡಿ ಅನ್ನುವುದರೊಂದಿಗೆ ಪ್ರತಿಯೊಬ್ಬ ಪದವೀಧರ ಮತದಾರರಾದ ನಾವು ನಮ್ಮ ಮತದಾನದ ಹಕ್ಕನ್ನು ಜೂನ್ 3ರಂದು ತಪ್ಪದೆ ಚಲಾಯಿಸೇೂಣ. "ಮತದಾನದಲ್ಲಿ ಬದುಕಿನ ಹಕ್ಕು ಅಡಗಿದೆ ಅನ್ನುವುದನ್ನುಮರೆಯಬಾರದು".
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ