ಶಾಲೆಯೇ ದೇವಾಲಯ. ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ. ಶಾಲೆ ಆರಂಭವಾಗುತ್ತಿದೆ. ಬನ್ನಿ ಮಕ್ಕಳೆ , ನಿಮ್ಮನ್ನು ಸ್ವಾಗತಿಸಲು ಕಾದಿರುವರು ಗುರುಗಳು. ಮತ್ತೊಮ್ಮೆ ನಿಮ್ಮೆಲ್ಲಾ ಗೆಳೆಯರೊಂದಿಗೆ ಸೇರಿ ಸಂತಸವನ್ನು ಹಂಚಿಕೊಳ್ಳಿರಿ. ನಿಮ್ಮ ಹಿಂದಿನ ತರಗತಿಯ ಕಹಿ ನೆನಪುಗಳನ್ನು ಮರೆತು, ಸವಿಸವಿ ನೆನಪುಗಳೊಂದಿಗೆ ಇಂದಿನ ತರಗತಿಯ ಒಳಗೆ ಕುಳಿತುಕೊಳ್ಳಿರಿ. ಶಾಲಾ ಪ್ರಾರಂಭೋತ್ಸವದ ಮೊದಲ ದಿನವಿದು. ಮನಸ್ಸು ಬದಲಾವಣೆಯ ಸಮಯವನ್ನು ಅನುಭವಿಸುತ್ತದೆ. ತಳಿರು ತೋರಣಗಳಿಂದ ಅಲಂಕೃತಗೊಂಡಿರುವ ಶಾಲಾ ಸ್ವಸ್ಥ ಪರಿಸರ, ಗುರುಗಳ ಪ್ರೀತಿಯ ಹಿತವಾದ ಮಾತುಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಶಾಲೆಯ ಪರಿಸರ ಮಗುವಿನ ಜೀವನದಲ್ಲಿ ಪರಿಣಾಮಕಾರಿ ಮತ್ತು ವೈಶಿಷ್ಟ್ಯ ಪೂರ್ಣ ಅನುಭವವನ್ನು ನೀಡುತ್ತದೆ. ಹೊಸ ಗೆಳೆಯರ ಬಳಗ ಪ್ರಾರಂಭವಾಗುತ್ತದೆ. ಜೊತೆ ಜೊತೆಯಲ್ಲಿ ಶಿಸ್ತು ಬೆಳೆಸಿಕೊಳ್ಳಲು ಮಗು ಅಣಿಯಾಗುತ್ತದೆ. ಕಲಿಕೆಗೆ ತನ್ನನ್ನು ಹೊಂದಿಸಿಕೊಳ್ಳುತ್ತದೆ. ಹೊಸ ಪಠ್ಯ ಪುಸ್ತಕಗಳೊಂದಿಗೆ ಹೊಸ ವಿಚಾರಗಳನ್ನು ಕಲಿಯಲು ತಾನು ಸಿದ್ಧವಾಗುತ್ತದೆ. ಸಮವಸ್ತ್ರವನ್ನು ಧರಿಸುವ ಮೂಲಕ ಸಮಾನತೆ, ಸಹಬಾಳ್ವೆಯ ಸಮನ್ವಯತೆಯನ್ನು ಹಾಗೂ ಸಹೋದರತೆಯನ್ನು ಕಲಿತುಕೊಳ್ಳುತ್ತದೆ. ಇಷ್ಟೆಲ್ಲಾ ಕಲಿಯುವ ಮಗುವಿನ ಆಸಕ್ತಿ ಅದಮ್ಯವಾಗಿರುತ್ತದೆ. ಮಗುವೆಂಬ ಸಸಿಗೆ ಪೋಷಕರು , ಪಾಲಕರು, ಮತ್ತು ಗುರುವೃಂದವು ಸೂಕ್ತ ಮಾರ್ಗದರ್ಶನ ಮತ್ತು ವಿದ್ಯೆಯನ್ನು ನೀಡಬೇಕಾಗುತ್ತದೆ. ಹಾಗಾದರೆ, ವಿದ್ಯೆ ಎಂದರೇನು ? ವಿದ್ಯೆಯನ್ನು ನೀಡುವವರು ಯಾರು? ವಿದ್ಯೆಯನ್ನು ಪಡೆಯುವವರು ಯಾರು ? ವಿದ್ಯಾರ್ಥಿ ಯಾರು ? ವಿದ್ಯಾರ್ಜನೆ ಹೇಗಿರುತ್ತದೆ ? ವಿದ್ಯಾರ್ಜನೆಯ ಮೂಲಕ ಪಡೆದ ಜ್ಞಾನಾರ್ಜನೆಯು ಪ್ರಸ್ತುತ ಸಮಾಜಕ್ಕೆ ಹೊಂದಾಣಿಕೆ ಆಗುತ್ತದೆಯೇ? ಎಂಬೆಲ್ಲಾ ಪ್ರಶ್ನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಮೊದಲು ವಿದ್ಯೆಯ ಬಗ್ಗೆ ತಿಳಿಯುತ್ತು ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳೋಣ.
ವಿದ್ಯೆ ಒಂದು ಸಂಸ್ಕಾರ. ಈ ಸಂಸ್ಕಾರವು ನಮಗೆ ಗುರುವಿನ ಮೂಲಕ ದೊರೆಯುತ್ತದೆ. ನಾವು ತಿಳಿದಿರುವಂತೆ ವಿದ್ಯೆ ಯಾರೊಬ್ಬರೂ ಕದಿಯಲಾಗದ ಆಸ್ತಿ. ನಮ್ಮೊಳಗಿನ ಆತ್ಮದ ಅಸ್ತಿತ್ವ ಇರುವವರೆಗೂ ವಿದ್ಯೆ ಶಾಶ್ವತವಾಗಿರುತ್ತದೆ. ವಿದ್ಯೆಯನ್ನು ನಾವು ಯಾರೊಬ್ಬರ ಸಹಾಯವಿಲ್ಲದೆ ಪಡೆಯುವುದು ಅಸಾಧ್ಯ. ತಂದೆ ತಾಯಿಯ ವಾತ್ಸಲ್ಯಯುತ ತ್ಯಾಗ, ಗುರುವಿನ ಕಠಿಣ ಪರಿಶ್ರಮ ನಮ್ಮ ವಿದ್ಯೆಯಲ್ಲಿ ಇರುತ್ತದೆ. ನಮ್ಮ ಜ್ಞಾನದ ಮಟ್ಟ ಎಷ್ಟೆಷ್ಟಿದೆಯೋ ಅಷ್ಟಷ್ಟು ವಿದ್ಯೆಯನ್ನು ನಾವು ಅರ್ಜಿಸುತ್ತೇವೆ. ಒಂದು ವೇಳೆ ನಮ್ಮ ಜ್ಞಾನದ ಮಟ್ಟ ಹೆಚ್ಚಾಗಿದ್ದರೆ ಹೆಚ್ಚಿನ ವಿದ್ಯೆಯೆನ್ನು, ನಮ್ಮ ಜ್ಞಾನದ ಮಟ್ಟ ಕಡಿಮೆಯಿದ್ದರೆ ಕಡಿಮೆ ಜ್ಞಾನವನ್ನು ಪಡೆಯುತ್ತೇವೆ.
ಇದು ಪ್ರತಿಯೊಬ್ಬರಲ್ಲೂ ಭಿನ್ನತೆಯಿಂದ ಕೂಡಿರುತ್ತದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಮತ್ತು ಗುರುಕುಲ ಇವುಗಳನ್ನು ಬಿಟ್ಟ ಮೇಲೂ ನಮ್ಮಲ್ಲಿ ಉಳಿಯುವ ನಿಜವಾದ ಆಸ್ತಿ ಎಂದರೆ ಅದು ಜ್ಞಾನದಿಂದ ಅರ್ಜಿಸಿದ ವಿದ್ಯೆ ಮಾತ್ರ. ಈ ಜ್ಞಾನ ವಿದ್ಯೆಯು ಒಮ್ಮೆಲೇ ಏಕಾಏಕಿ ಹರಿದು ಬರುವುದಿಲ್ಲ. ಅದು ಹನಿ ಹನಿಯಾಗಿ ಹರಿದು ಬರುತ್ತದೆ ಮತ್ತು ಹಾಗೆಯೇ ಬರಬೇಕು. ಆಗ ಮಾತ್ರ ಜ್ಞಾನದ ವಿದ್ಯೆ ಶಾಶ್ವತತೆಯನ್ನು ಪಡೆಯುತ್ತದೆ. ಅಂತಹ ಜ್ಞಾನದ ವಿದ್ಯೆ ನಮ್ಮಲ್ಲಿ ಆತ್ಮವಿಶ್ವಾಸ, ಪರೋಪಕಾರ, ಸ್ವಾವಲಂಬನೆ, ಪರಿಶ್ರಮ, ಧೈರ್ಯ, ಸಹನೆ, ಸಹಾಯ, ಯೋಗ್ಯತೆ ಮತ್ತು ಉತ್ತಮ ಚಿಂತನೆಗಳನ್ನು ಮೂಡಿಸುತ್ತದೆ.
ವಿದ್ಯೆಯನ್ನು ಕಲಿಯುವವರು ವಿದ್ಯಾರ್ಥಿ ಎನ್ನಿಸಿಕೊಂಡರೆ ವಿದ್ಯೆಯನ್ನು ಕಲಿಸುವವರು ಗುರು ಎನ್ನಿಸಿಕೊಳ್ಳುತ್ತಾರೆ. ವಿದ್ಯೆಯನ್ನು ಕಲಿಯಲು ಪ್ರೋತ್ಸಾಹಿಸುವವರು ಪ್ರೋತ್ಸಾಹಕವರ್ಗಕ್ಕೆ ಸೇರುತ್ತಾರೆ. ವಿದ್ಯೆಯನ್ನು ಕಲಿಯಲು ಅನುಕೂಲಿಸುವವರು ಸುಗಮಕಾರರು ಎಂದೆನಿಸಿಕೊಳ್ಳುತ್ತಾರೆ. ಗುರು ಅಥವಾ ಸುಗಮಕಾರರು ವ್ಯೋಮಾಕಾಶದಲ್ಲಿನ ಸೂರ್ಯನಂತಿದ್ದು ತನ್ನ ಸುತ್ತಲ ವಿದ್ಯಾರ್ಥಿ ಬಳಗವನ್ನು ಗ್ರಹಗಳಂತೆ ಹಿಡಿದಿಟ್ಟು ಕೊಂಡಿರುತ್ತಾರೆ. ಸದಾ ಬೆಳಕನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ವಿದ್ಯಾರ್ಥಿಗಳಿಗೆ ನಾಡು, ನುಡಿ, ನೆಲ- ಜಲ, ಸಂಸ್ಕೃತಿ, ಆಚಾರ, ವಿಚಾರ, ನೀತಿ, ನಿಯಮ, ರೀತಿ- ರಿವಾಜು , ಕಾನೂನು- ಕಟ್ಟಳೆ, ಸಹಕಾರ, ಹೊಂದಾಣಿಕೆ, ಸಹನೆ, ಸಹಬಾಳ್ವೆ, ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗ, ಹೆಣ್ಣಿನ ಬಗ್ಗೆ ಗೌರವ, ಗುರು-ಹಿರಿಯರಲ್ಲಿ ಭಕ್ತಿಯಭಾವ, ನಾವು-ನಮ್ಮವರು ಎಂಬ ಭಾವನೆ ಈ ರೀತಿಯ ಮನೋಭಾವವನ್ನು ವೃದ್ಧಿಸಿ, ಉತ್ತಮ ಶಿಷ್ಟಾಚಾರವನ್ನು ಕಲಿಸುವುದು, ನಮ್ಮದೇ ಆದ ಇತಿಹಾಸ, ಪರಂಪರೆಗಳನ್ನು ಗೌರವಿಸುವಂತೆ ಗುರುದರ್ಶನ ಮಾಡಿಸುವುದು ಗುರುವಿನ ಮತ್ತು ವಿದ್ಯೆಯ ಕರ್ತವ್ಯವಾಗಿರುತ್ತದೆ ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿಯ ಶ್ರಮವು ಬಹಳ ಅಗತ್ಯವಿರುತ್ತದೆ.
ನಾವು ಹೊಂದುವ ವಿದ್ಯೆ ಮತ್ತು ಜ್ಞಾನ ಎರಡೂ ಪರಸ್ಪರಾವಲಂಬಿತವಾಗಿರುತ್ತವೆ. ವಿದ್ಯೆಯ ಬಗ್ಗೆ ತಿಳಿದ ನಾವು ಜ್ಞಾನದ ಬಗ್ಗೆಯೂ ತಿಳಿಯೋಣ. ಜ್ಞಾನವು ಅಂಧಕಾರವನ್ನು ಹೊಡೆದೋಡಿಸುವ ಸರ್ವ ಶ್ರೇಷ್ಠ ಸಾಧನವಾಗಿದೆ. ಆದ್ದರಿಂದಲೇ ಜ್ಞಾನವನ್ನು ಬೆಳಕು ಎಂಬ ಅರ್ಥದಲ್ಲಿ ಪರಿಕಲ್ಪಿಸಲಾಗಿದೆ. ಜ್ಞಾನಾರ್ಜನೆಯು ವಿದ್ಯಾರ್ಜನೆಯ ಮೂಲಕ ಲಭ್ಯವಾಗುವುದರಿಂದ ವಿದ್ಯಾರ್ಥಿಯ ಬದುಕಿನಲ್ಲಿ ಗುರು ಸರ್ವ ಶ್ರೇಷ್ಠ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಗುರುವಿನ ಮೂಲಕ ಕಲಿತ ವಿದ್ಯೆ, ಬುದ್ಧಿ, ಜ್ಞಾನವು ಅನಂತ ಕಾಲದವರೆಗೂ ಇದ್ದು ಶಾಶ್ವತತೆಯ ಸ್ಥಾನವನ್ನು ಪಡೆಯುತ್ತದೆ. ಜ್ಞಾನಾರ್ಜನೆ ಮಾಡಿಕೊಂಡವನನ್ನು ಜ್ಞಾನಿ ಎಂದು ಕರೆಯಲಾಗುತ್ತದೆ. ವಿದ್ಯಾರ್ಜನೆ ಮಾಡಿಕೊಂಡವರನ್ನು ವಿದ್ಯಾರ್ಥಿ ಎ೦ದು ಕರೆಯಲಾಗುತ್ತದೆ. ನಿಜವಾದ ಜ್ಞಾನಿಯು ಸ್ಥಿತಪ್ರಜ್ಞತೆಯನ್ನು ಹೊಂದಿದ್ದು, ಕಾಲ ಕಾಲದಲ್ಲಿ ತನಗಾಗುವ ಸನ್ಮಾನ ಅವಮಾನಗಳಿಗೆ ವಿಚಲಿತನಾಗುವುದಿಲ್ಲ. ತುಂಬಿದ ಕೊಡದಂತಿರುತ್ತಾನೆ. ಜ್ಞಾನವನ್ನು ಮಾಹಿತಿಗಳ ಸಂಗ್ರಹಣೆಯ ಮೂಲಕ ಪಡೆಯುವುದಷ್ಟೇ ಅಲ್ಲದೆ, ಅದನ್ನು ಸರಿಯಾದ ಕ್ರಮದಲ್ಲಿ ಮತ್ತು ಸರಿಯಾದ ಸಮಯಕ್ಕೆ ಬಳಸುವುದೂ ಸಹ ಜ್ಞಾನಾರ್ಜನೆಯ ಪ್ರಕ್ರಿಯೆಯಲ್ಲಿ ಒಂದಾಗಿದೆ.
ವಿದ್ಯೆ ಮತ್ತು ಜ್ಞಾನವು ಬುಧ್ಧಿಯ ಬೆಳವಣಿಗೆಗೆ ಇಂಬು ಕೊಡುತ್ತದೆ. ವಿದ್ಯಾರ್ಥಿಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳುವಂತೆ ಪ್ರಭಾವೀಯುತ ಪ್ರೇರಣೆ ನೀಡುವುದು : ವಿದ್ಯೆ ಮತ್ತು ಜ್ಞಾನವನ್ನು ಪಡೆಯುವ ಮೂಲ ಉದ್ದೇಶವೇ ವಿದ್ಯಾರ್ಥಿಯು ಸ್ವಯಂ ತಾನೇ ತನ್ನ ಬದುಕನ್ನು ರೂಪಿಸಿಕೊಳ್ಳುವುದು. ಸ್ವಂತ ದುಡಿಮೆ ಮಾಡಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಹೊರಹೊಮ್ಮುವಂತೆ ಮಾಡವುದು. ಗುರುದರ್ಶನದಲ್ಲಿ ಅಂತಹ ಉತ್ತಮ ಪ್ರಭಾವ ಬೀರುವ ಮಾರ್ಗದರ್ಶನದ ಮೂಲಕ ಉತ್ತಮ ಪ್ರೇರಣೆ ನೀಡುವುದು. ವಿದ್ಯಾರ್ಥಿಗಳು ತಮ್ಮ ಗುರುವಿನಿಂದ ತಾವು ಗಳಿಸಿದ ವಿದ್ಯೆ ಮತ್ತು ಜ್ಞಾನವನ್ನು ಪ್ರಾಯೋಗಿಕ ಜೀವನ ವಿಧಾನಕ್ಕೆ ಅನ್ವಯಿಸುವುದು. ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗವನ್ನು ಗೆದ್ದು ಜೀವನ ಸಾಗಿಸಲು ಅನುಕೂಲವಾಗುವಂತೆ ವಿದ್ಯೆ ಮತ್ತು ಜ್ಞಾನವನ್ನು ಅನುಕೂಲಿಸುವುದು.
ನಾವು ಪಡೆಯುವ ವಿದ್ಯೆ ಮತ್ತು ಜ್ಞಾನವು ನಮ್ಮ ಮೌಢ್ಯತೆಯನ್ನು ತೊಲಗಿಸುವುದು : ವಿದ್ಯಾರ್ಥಿಗಳು ಸಮಾಜದ ವಿವಿಧ ಸ್ತರಗಳಿಂದ ಶಾಲೆಗೆ ಬರುವವರಾಗಿರುತ್ತಾರೆ. ವಿಭಿನ್ನ ಕೌಟುಂಬಿಕ ಜೀವನದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಾಲೆಗೆ ಬರುವವರಾಗಿರುತ್ತಾರೆ. ಇಂತಹ ಹಲವು ವಿದ್ಯಾರ್ಥಿಗಳು ಪೂರ್ವಾಗ್ರಹ ಪೀಡಿತರಾಗಿ ಅಂಧಾನುಕರಣೆ, ಮೌಢ್ಯದ ಆಚರಣೆ ಮಾಡುವ ಮನೋಭಾವದವರೂ ಆಗಿರಬಹುದು. ಇಂತಹ ವಿದ್ಯಾರ್ಥಿಗಳಲ್ಲಿ ವೈಚಾರಿಕ, ವೈಜ್ಞಾನಿಕ, ತಾರ್ಕಿಕ ಮನೋಭಾವ ಮೂಡಿಸುವುದು ಗುರುವಿನ ಮತ್ತು ವಿದ್ಯೆಯ ಮಹತ್ತರ ಕರ್ತವ್ಯವಾಗಿರುತ್ತದೆ. ವಿದ್ಯೆ ಮತ್ತು ಜ್ಞಾನವು ಸಮಾಜದ ಪ್ರಜ್ಞಾವಂತ ಪ್ರಜೆಯನ್ನಾಗಿ ರೂಪಿಸುತ್ತದೆ. ಈ ರೀತಿ ಪಡೆದ ಜ್ಞಾನದ ಮಹೋನ್ನತ ವಿದ್ಯೆಯು ಜನಹಿತಕ್ಕಾಗಿ ಸದ್ಬಳಕೆಯಾದರೆ ಮಾತ್ರ ವಿದ್ಯೆ ಮತ್ತು ಜ್ಞಾನವನ್ನು ಪಡೆದ ವ್ಯಕ್ತಿಯ ಬದುಕು ಸಾರ್ಥಕವಾಗುತ್ತದೆ. ಪ್ರೀತಿಯ ಮಕ್ಕಳೇ ಎಂದಿಗೂ ಯಾವುದೇ ಕಾರಣದಿಂದಲೂ ಶಾಲೆಯನ್ನು ಮಾತ್ರ ಬಿಡಬೇಡಿ. ಅನಕ್ಷರತೆಯ ಅಳಿವಿಗೆ ಸಾಕ್ಷರತೆಯ ಉಳಿವಿಗೆ ವಿದ್ಯೆ ಮತ್ತು ಜ್ಞಾನ ಎರಡೂ ದಾರಿದೀವಿಗೆಯಾಗಿವೆ. ನಮ್ಮ ಜ್ಞಾನದ ವಿದ್ಯೆಯನ್ನು ಸದ್ಬಳಕೆ ಮಾಡೋಣ. ಸಮಾಜದ ಮತ್ತು ರಾಷ್ಟ್ರದ ಏಳ್ಗೆಗೆ ಸಮರ್ಪಿಸೋಣ. ಆಗ ಮಾತ್ರ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಮಾತು ನಿಜವಾಗುತ್ತದೆ.
ಡಾII ಕೆ.ಎನ್. ಚಿದಾನಂದ . ಹಾಸನ,
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ