ಅಧ್ಯಯನ ಶಿಬಿರ: ಸವಿ ನೆನಪುಗಳಿಗೆ ವರುಷಗಳು ತುಂಬಿದಾಗ

Upayuktha
0


ಳ್ಳಿಯ ಬದುಕೇ ಹಾಗೆ ಅಲ್ಲವೇ, ನೀರ ಮೇಲಿನ ಗುಳ್ಳೆಯಂತೆ ಹಿಂದೆ ಹುಟ್ಟು, ಇಂದು ಬದುಕು, ಮುಂದೆ ಸಾವು ಎಂಬುದು. ಹೀಗೆ ಕಳೆದ ನೆನಪುಗಳಿಗೆ ವರುಷ ತುಂಬಿದಾಗ ಬರವಣಿಗೆಯ ಮೂಲಕ ಸ್ಥೂಲವಾಗಿ ಅಭಿವ್ಯಕ್ತಗೊಳಿಸುವುದು ಸೂಕ್ತವೆನಿಸಿತು. 

ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಅಧ್ಯಯನ ಶಿಬಿರ ಎಂಬುದು ಪಠ್ಯೇತರ ಚಟುವಟಿಕೆಯ  ಒಂದು ಭಾಗವಾಗಿದ್ದರಿಂದ, ನಮಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿಗೆ ಹೋಗುವಂತ ಅವಕಾಶ ದೊರಕಿತು. ದಕ್ಷಿಣ ಕಾಶಿಯಿಂದ ಮುಸ್ಸಂಜೆಯ ವೇಳೆ ಮಂಗಳೂರಿಗೆ ಹೊರಟು ಅಲ್ಲಿಂದ ಮುಂಡಗೋಡಿಗೆ ರಾತ್ರಿಯ ವೇಳೆ ಪ್ರಯಾಣವನ್ನು ಮುಂದುವರಿಸಿದೆವು. ಅಲ್ಲಲ್ಲಿ ಉರಿಯುತ್ತಿರುವ ಬೀದಿ ದೀಪಗಳು, ಸಮುದ್ರದಿಂದ ಬೀಸುವ ತಣ್ಣನೆಯ ಗಾಳಿ ಮನಸ್ಸನ್ನು ಹಗುರಗೊಳಿಸಿ ಪಯಣವನ್ನು ಸುಗಮವಾಗಿಸಿತು.


ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಸರಿಯಾಗಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿಗೆ ನಾವೆಲ್ಲರೂ ತಲುಪಿದೆವು. ನಂತರ ಲೋಯಲ ವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ಅಧ್ಯಯನ ಶಿಬಿರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಒಂದಿಷ್ಟು ಗುಂಪು ಚಟುವಟಿಕೆಗಳನ್ನ ಮಾಡಿ ಅಧ್ಯಯನದ ಬಗ್ಗೆ ಜ್ಞಾನವನ್ನು ತುಂಬಿ ಅಲ್ಲಿರುವ ಹತ್ತಾರು ಹಳ್ಳಿಯ ಬಗ್ಗೆ ವಿಚಾರಧಾರೆಗಳನ್ನು ತಿಳಿಸಿಕೊಟ್ಟು ನಮ್ಮಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಇಬ್ಬಿಬ್ಬರಂತೆ ವಿಂಗಡನೆ ಮಾಡಿ ಹಳ್ಳಿಗಳಿಗೆ  ಕಳುಹಿಸಿದರು. ಅದರಲ್ಲಿಯೂ ನನಗೆ ಸಿಕ್ಕಿದ್ದು ಲಂಬಾಣಿ ಜನಾಂಗದ ಜನರಿರುವ  ಅಗಡಿ ಎಂಬ ಹೆಸರಿನ ಸಣ್ಣ ಹಳ್ಳಿ. ಎಲ್ಲಾ ವಿದ್ಯಾರ್ಥಿಗಳು ಅವರವರ ಬ್ಯಾಗುಗಳನ್ನು ತೆಗೆದುಕೊಂಡು ಹೊರಡಲು ತಯಾರಾದರು. ಒಂದು ಮನೆಯಲ್ಲಿ ಇಬ್ಬರು ಉಳಿದುಕೊಳ್ಳುವಂತೆ ಆಜ್ಞೆಯಾಗಿದ್ದರೂ ಹೇಗಪ್ಪ ಮೂರು ದಿನಗಳನ್ನು ಕಳೆಯುವುದು ಎಂಬುದೇ ನನಗೆ ದೊಡ್ಡ ತಲೆನೋವಿನಂತೆ ಕಾಣಿಸಿತು.


ಹೀಗೆ ಸಂಜೆಯ ವೇಳೆ ಮುಂಡಗೋಡಿನ ಬಸ್ ಸ್ಟ್ಯಾಂಡಿನಿಂದ ಹುಬ್ಬಳ್ಳಿಯ ಬಸ್ಸು ಹತ್ತಿದೆವು. ನನಗಂತೂ ಯಾವುದೋ ಆದಿವಾಸಿಗಳ ಜೊತೆ ಪಯಣವನ್ನು ಮುಂದುವರಿಸುತ್ತಿದ್ದಂತೆ ಅನಿಸುತ್ತಿತ್ತು. ಹಳ್ಳಿಯ ಸುತ್ತಲೂ ಕಣ್ಣಾಡಿಸುತ್ತ ಪದೇ ಪದೇ ಮೊಬೈಲ್ ನ ನೆಟ್ ವರ್ಕ್ ಪರಿಶೀಲಿಸುತ್ತಾ ಯಾಣವನ್ನು ಮುಂದುವರಿಸಿದವು. ರಸ್ತೆಯ ಬದಿಯಲ್ಲಿ ಸುತ್ತಲೂ ಎಕರೆ ಗಟ್ಟಲೆ ಗದ್ದೆಗಳು ಅಲ್ಲಲ್ಲಿ ಸಣ್ಣಪುಟ್ಟ ಮನೆಗಳನ್ನು ನೋಡುವಷ್ಟರಲ್ಲಿ ಅಗಡಿ ಹಳ್ಳಿ ಬಂದೆ ಬಿಟ್ಟಿತು. ನಮಗೆ ಲೋಯಲ ಕೇಂದ್ರದಿಂದ ಮಾರ್ಗದರ್ಶಕರಾಗಿ  ಬಂದಿದ್ದ ಲಕ್ಷ್ಮಣ ಸರ್ ಜೊತೆಯಲ್ಲಿದ್ದು ಅಲ್ಲಿರುವ ಕೆಲವೊಂದು ಮನೆಗಳಿಗೆ ಭೇಟಿ ಮಾಡಿಸಿ ಪರಿಚಯ ಮಾಡಿಸಿಕೊಟ್ಟರು. ಬೆಡಗಿನ ತಾಣ ಜಯಪುರದಂತೆ ರಂಗು ರಂಗಿನ ಮನೆಗಳು, ತೀರಾ ಇಕ್ಕಟ್ಟಾಗಿ ಗುಡಿಸಲಿನಂತಿದ್ದು ಸಾಕು ಪ್ರಾಣಿಗಳ ಜೊತೆ ಜೀವನವನ್ನು ಸಾಗಿಸುತ್ತಿದ್ದರು. ರಸ್ತೆಯ ಬದಿಯಲ್ಲಿ ಜೋಳ, ಮೆಣಸುಗಳನ್ನು ಒಣಗಿಸಲು ಹರಡಿದ್ದರೆ, ಇನ್ನೊಂದೆಡೆ ಅದೇ ರಸ್ತೆಯ ಬದಿಯಲ್ಲಿ ಬಟ್ಟೆ ತೊಳೆದು ಸ್ನಾನ ಮಾಡುವ ಜನರನ್ನು ನೋಡಿದಾಗ ನನಗಂತೂ ಎಲ್ಲಿಲ್ಲದ ಕುತೂಹಲ ಉಂಟಾಯಿತು. ಹೀಗೆ ಎಲ್ಲ ಚಿತ್ರಣಗಳನ್ನು ಕಣ್ತುಂಬುತ್ತಾ ನಮಗೆ ವಾಸ ಮಾಡಲು ಸಿಕ್ಕಿರುವ ಸುಶೀಲಮ್ಮನ ಮನೆಗೆ ತಲುಪಿದೆವು. ಮಗ ಮತ್ತು ತಾಯಿ ಇರುವಂತಹ ಒಂದು ಸಣ್ಣ ಕುಟುಂಬವಾಗಿತ್ತದು. ಜೀವನ ಸಾಗಿಸಲು ಒಂದು ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಂದ ಹತ್ತಿಪ್ಪತ್ತು  ಹೆಜ್ಜೆಯನ್ನು ನಡೆದರೆ ಅವರ ಮನೆ ಇತ್ತು. ಹೀಗೆ ಸಂಜೆಯ ವೇಳೆ ಮನೆಯತ್ತ ಬಂದಾಗ ಅಲ್ಲಿ ಒಂದಿಷ್ಟು ಹೆಂಗಸರು ಗುಂಪಾಗಿ ಕುಳಿತು ಏನನೊ ಚರ್ಚಿಸುತ್ತಾ, ನಮ್ಮತ್ತ ನೋಡಲು ಪ್ರಾರಂಭಿಸಿದರು. ಮನಸ್ಸಿನ ಭಾರವನ್ನು ಇಳಿಸಿಕೊಳ್ಳಲು ಸೂಕ್ತ ವಾತಾವರಣವಾದ ಹಳ್ಳಿಯ ಸೊಗಡು ಅದೆಷ್ಟು ಸೋಜಿಗವೆನಿಸಿದ್ದಂತೂ ನಿಜ. ಜೊತೆಗೆ  ಹೋದ ಕಡೆಯೆಲ್ಲಾ ಬಿಸಿ ಬಿಸಿ ಚಹಾ ಕುಡಿದು ನಾಲಿಗೆಗೆ ರುಚಿ ಅನುಭವವಿಲ್ಲದಂತಾಗಿತ್ತು.


ಮುಸ್ಸಂಜೆ ಕಳೆದು ಕತ್ತಲಾವರಿಸಿಕೊಂಡಾಗ ನಲ್ಲಿ ನೀರಿಗಾಗಿ ಕಾದು ಜಳಕವನ್ನು ಮುಗಿಸಿ ಸುಶೀಲಮ್ಮನ ಅಂಗಡಿ ಹತ್ತಿರ ಹೋದೆವು. ಆಗಷ್ಟೇ, ಸುಶೀಲಮ್ಮ ಕೋಳಿ ಸಾರು ಮಾಡಲು ತಯಾರಾಗಿದ್ದರು. ನಾವು ಬಂದಾಗ ಅವರ ಅಂಗಡಿಯಲ್ಲಿಯೇ ವ್ಯಾಪಾರಕ್ಕಾಗಿ  ತಯಾರಿಸಿದ್ದ ಗೋಬಿಯನ್ನು ನಮಗೂ ಸವಿಯಲು ಕೊಟ್ಟರು. ಆಹಾ ಎನ್ನುತ್ತಾ, ನಾನು ಮತ್ತು ಜೊತೆಗಾತಿ ಚೇತನ ಟಿವಿ ನೋಡುತ್ತಾ ತಿನ್ನುತ್ತಿರಬೇಕಾದರೆ, ಅತ್ತ ಕಡೆ ಸುಶೀಲಮ್ಮ ಸಾಂಬಾರು ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ತಯಾರು ಮಾಡುವ ರಭಸದಲ್ಲಿ ಮಿಕ್ಸಿ ಜಾರಿನ ಮುಚ್ಚಳವು ಸಡಿಲವಾಗಿದ್ದರಿಂದ ಅರ್ಧ ಮಸಾಲೆಯು ನನ್ನ ತಲೆಯ ಮೇಲೆ ಇತ್ತು. ಉಳಿದುದರಲ್ಲಿ ಸಾರು ಮಾಡಿ ಜೋಳದ ರೊಟ್ಟಿಯ ಸ್ವಾಧವ ಸವಿದು ಒಂದಷ್ಟು ಹರಟೆ ಹೊಡೆಯುತ್ತಾ ನಿದ್ರೆಗೆ ಜಾರಿದೆವು. 

ಹೀಗೆ ಮಾರನೆಯ ದಿನ ತಾನು ಏಳುವ ಮೊದಲೇ ಇಡೀ ಊರೇ ಎದ್ದಿತ್ತು. ನಾನು ನಿಧಾನವಾಗಿ ಕಣ್ಣು ಉಜ್ಜುತ್ತಾ ಅಂಗಳಕ್ಕೆ ಬಂದಾಗ ಪ್ರತಿಯೊಂದು ಮನೆಯ ಮುಂದೆ ಶುಚಿಗೊಳಿಸಿ ರಂಗೋಲಿಯ ಸಾರುತಿದ್ದರು. ಇನ್ನು ಕೆಲವರು ಅಲ್ಲಿನ ರೈತರಾಗಿರುವುದರಿಂದ ಎತ್ತುಗಳನ್ನು ಶುಚಿಗೊಳಿಸಿ ಬುತ್ತಿ ಕಟ್ಟಿಕೊಂಡು ಎತ್ತಿನ ಗಾಡಿಯಲ್ಲಿ ಗದ್ದೆ ಕಡೆ ಹೋಗುತ್ತಿದ್ದರು. ನಾನು ಮತ್ತು ಚೇತನ ಅಲ್ಲೇ ಪಕ್ಕದಲ್ಲಿದ್ದ ಸೇವಲಾಲ ದೇವಸ್ಥಾನಕ್ಕೆ ಹೋಗಿ ನಂತರ ಉಪಹಾರ ಮುಗಿಸಿ ಹೊಲಗಳನ್ನು ನೋಡಲು ಅಲ್ಲೇ ಪರಿಚಯವಾಗಿದ್ದ ಅಜ್ಜಿ ಮತ್ತು ಮಕ್ಕಳ ಸಂಘದ ಜೊತೆ ಹೊರಟೆವು.


ಗದ್ದೆಯಲ್ಲಿ ಹೆಚ್ಚಾಗಿ ಶುಂಠಿ, ಕಬ್ಬು, ಮೆಕ್ಕೆಜೋಳ ಮುಂತಾದವುಗಳನ್ನು ಬೆಳೆಯುತ್ತಿದ್ದರು. ಎಕರೆಗಟ್ಟಲೆ ಹೊಲಗಳಿರುವುದರಿಂದ ಬೇಸಿಗೆಯ ಕಡು ಬಿಸಿಲಿಗೆ ಒಣಗಿ ಮೈದಾನದಂತಾಗಿತ್ತು. ಇವುಗಳನೆಲ್ಲ ನೋಡಿ ಬರುವಷ್ಟರಲ್ಲಿ ತಾಸು ಹನ್ನೆರಡು ಕಳೆದಿತ್ತು. ಅದೇ ಊರಿನಲ್ಲಿ ಒಂದು ಮದುವೆ ಇದ್ದ ಕಾರಣ ಅಪರಿಚಿತರಾದರು ನಮಗೂ ಒಂದು ಆಹ್ವಾನವಿತ್ತು. ಮಕ್ಕಳ ಜೊತೆ ನಾವು ಹೊರಟೆವು. ಹೀಗೆ ನಮ್ಮ ಕಡೆ ಮದುವೆಯ ಬಗ್ಗೆ ಹೇಳುವುದಾದರೆ, ಮದುವೆಯ ಮಂಟಪ ಮತ್ತು ಊಟಕ್ಕಾಗಿ ಆಡಂಬರವಾಗಿ ಖರ್ಚು ಮಾಡುವವರು ಜಾಸ್ತಿ ಆದರೆ, ಅತ್ತ ಕಡೆ ನೋಡಿದರೆ ಒಂದು ದೊಡ್ಡ ಮರದ ಕೆಳಗೆ ಒಂದು ಸಣ್ಣ ಮಂಟಪವನ್ನು ನಿರ್ಮಾಣ ಮಾಡಿ ಸರಳತೆಯಿಂದ ವಿಜೃಂಭಿಸುತ್ತಿದ್ದರು. ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಲಂಬಾಣಿ ಜನಾಂಗದ  ಉಡುಗೆಯಲ್ಲಿ ಮಿಂಚುತ್ತಿದ್ದರು. ಹೀಗೆ ಅಲ್ಲಿ ಊಟವನ್ನು ಮುಗಿಸಿ ನಮ್ಮ ನಿತ್ಯದ ಅಧ್ಯಯನ ಕೆಲಸವನ್ನು ಮಾಡಿದೆವು. ಸಂಜೆ ವೇಳೆ ಮಕ್ಕಳ ಜೊತೆ ಆಟವಾಡುತ್ತಾ, ಊರಿನ ಬೀದಿಯುದ್ದಕ್ಕೂ ನಡೆದಾಡಿ, ರಾತ್ರಿ ಆಗುವಾಗ ಸುಶೀಲಮ್ಮನ ಅಂಗಡಿಗೆ ಹೊರಟೆವು.


ಆಗಷ್ಟೇ, ಸುಶೀಲಮ್ಮ ಜೋಳದ ರೊಟ್ಟಿ ತಯಾರು ಮಾಡುತ್ತಿದ್ದರು ಅವರ ಜೊತೆ ನಾವು ಸ್ವಲ್ಪ ಕೈಜೋಡಿಸಿ, ಅನ್ನ ಸಾಂಬಾರು ಮಾಡಿ ರಾತ್ರಿಯ ಭೋಜನವನ್ನು ಪೂರ್ಣಗೊಳಿಸಿದೆವು. ಆ ದಿನದ ಅಧ್ಯಯನ ಕೆಲಸದ ಬಗ್ಗೆ ಚರ್ಚಿಸುತ್ತಾ ಹಳ್ಳಿಯ ಜನರ ಬಗ್ಗೆ ವಿಶ್ಲೇಷಣೆ ಮಾಡುತ್ತಾ, ಮತ್ತು ಲಂಬಾಣಿ ಜನಾಂಗದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಾ ಅಂಗಡಿಯಿಂದ ಮನೆಯತ್ತ ಹೊರಟೆವು. ಆಗ ಗಂಟೆ ಸುಮಾರು 11:30 ಆಗಿತ್ತು. ಮಲಗಲು ಮನಸ್ಸಿಲ್ಲವಾದ್ದರಿಂದ ಮನೆಯ ಹೊರಾಂಗಣದಲ್ಲಿ ಕೂತು ನಾನಂತೂ ನನ್ನ ಹುಟ್ಟೂರು ಮಂಗಳೂರಿನ ಬಗ್ಗೆ ವಿವರಿಸುತ್ತಾ ಇರುವಾಗ ಅವರಿಗೆ ದೈವರಾದನೆ, ಹುಲಿವೇಷ ಮುಂತಾದವುಗಳ ಬಗ್ಗೆ ಕುತೂಹಲ ಉಂಟಾಗಿ ಆಲಿಸ ತೊಡಗಿದರು. ಹೀಗೆ ನಾವು ಸಹ ಲಂಬಾಣಿ ಜನಾಂಗದ ಮೂಲ ದೇವರುಗಳ ಕಥೆಗಳನ್ನು ತಿಳಿಯುತ್ತಾ ಮತ್ತಷ್ಟು ಸಮಯ ಮಾತಿಗಿಳಿದೆವು. ಹೀಗೆ ಎಲ್ಲಿಯೂ, ಯಾವುದೇ ನಂಬಿಕೆಗಳಿಗೆ ಚ್ಯುತಿಯಾಗದಂತೆ ಜ್ಞಾನ ಭಂಡಾರವನ್ನು ಹಂಚಿಕೊಂಡೆವು.


ಮೂರನೆಯ ದಿನ. ಮುಂಜಾನೆ ಬೇಗನೆ ಎದ್ದು ಪಕ್ಕದ ಮನೆಯಿಂದ ರಂಗೋಲಿಯ ಹುಡಿಯ ತಂದು ಆಕಾರವಿಲ್ಲದ ದೋಸೆಯಂತೆ ಒಂದು ಚಿತ್ತಾರವ ಬಿಡಿಸಿ, ನಮ್ಮನ್ನು ನಾವೇ ಹೊಗಳಿಕೊಂಡು, ಸುಶೀಲಮ್ಮನ ಅಂಗಡಿಗೆ ಹೋಗಿ ತಿಂಡಿಯ ಮುಗಿಸಿ ಅಧ್ಯಾಯನಕ್ಕಾಗಿ ಬೇಕಾದ ಮೂಲ ಮಾಹಿತಿಯನ್ನು ಸಂಗ್ರಹಿಸಲು ಮನೆಮನೆಗೆ ಭೇಟಿ ನೀಡಿದೆವು. ಒಂದು ಮನೆಯಲ್ಲಿ ಲಂಬಾಣಿಯ ಉಡುಗೆಯನ್ನು ತೊಡಲು ಕೊಟ್ಟರು, ಅವರ ಲೆಕ್ಕದ ಪ್ರಕಾರ ಸುಮಾರು  50 ಸಾವಿರ ವೆಚ್ಚದ ಉಡುಗೆಯಾಗಿತ್ತು ಎಂದರು. ಇವುಗಳನ್ನು ಕೈಯಾರೆ ಹೆಣೆದು ಕವಡೆ ಹಾಗೂ ಕನ್ನಡಿಗಳನ್ನು ಪೋಣಿಸಿದ್ದರು. ಅವುಗಳನ್ನು ಹಾಕಿ ನನಗೆ ಎದ್ದು ನಿಲ್ಲಲು ಇನ್ನೊಬ್ಬರ ಸಹಾಯವೇ ಬೇಕಾಯಿತು ಅಬ್ಬಾ!!... ನಂತರ ನಾವಿರುವ ಹಳ್ಳಿಗೆ ನಮ್ಮ ಉಪನ್ಯಾಸಕರು ಭೇಟಿ ನೀಡಿದರು. ಊರ ಜನರೆಲ್ಲ ಸೇರಿ ನಮಗೆ ಅಗಡಿ ಹಳ್ಳಿಯ ಸಂಪನ್ಮೂಲ ನಕ್ಷೆಯನ್ನು ಬಿಡಿಸಿ ಹಳ್ಳಿಯ ಪ್ರತಿಯೊಂದು ಮೂಲಗಳನ್ನು ವಿವರಿಸಿ ಕೊಟ್ಟರು. ಆ ಹಳ್ಳಿಯ ಜನರ ಒಗ್ಗಟ್ಟು, ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸಗಳು ಮುಂತಾದವುಗಳನ್ನ ಚರ್ಚಿಸಿ ಹಲವಾರು ಸೂಕ್ತ ವಿಚಾರಗಳನ್ನು ತಿಳಿಸಿಕೊಟ್ಟರು.



ನಂತರ ನಮಗೆ ನೆಲೆಯಾಗಲು ವಸತಿಯ ವ್ಯವಸ್ಥೆಯನ್ನು ಮಾಡಿಕೊಟ್ಟ ಸುಶೀಲಮ್ಮನ ಮನೆಗೆ ನಮ್ಮ ಉಪನ್ಯಾಸಕಿಯರೇ ಆದ ಶ್ರೀಮತಿ ಸೌಮ್ಯ ಮೇಡಂನವರು ಬಂದರು. ಮನೆ ಮಕ್ಕಳಂತೆ ನೋಡಿಕೊಂಡ ಸುಶೀಲಮ್ಮನ ಗುಣ ಮತ್ತು ವ್ಯಕ್ತಿತ್ವವನ್ನು ಗಮನಿಸಿದ ಸೌಮ್ಯ ಮೇಡಂ ಚಿತ್ತದಿಂದಲೇ ಮುಗುಳ್ನಗೆಯೊಂದನ್ನು ಅರಳಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಧನ್ಯವಾದಗಳನ್ನು ಹೇಳಿದರು. ಆ ದಿನ ಇನ್ನೊಂದು ಮದುವೆಯ ಕಾರ್ಯಕ್ರಮವಿದ್ದರಿಂದ ನಾವೆಲ್ಲರೂ ಅಲ್ಲಿಗೆ ತೆರಳಿದೆವು. ಗಲಿಬಿಲಿಯಾಗಿ ಓಡಾಡುತ್ತಿದ್ದ ಲಂಬಾಣಿಯರ ಜೊತೆ ನಾವು ಸೇರಿ ಊಟ ಮುಗಿಸಿ ಅಲ್ಲಿಂದ ಹೊರಟೆವು. ಹೀಗೆ ಕಲಿಕಾ ಕೆಲಸಗಳನ್ನು ಪೂರ್ಣಗೊಳಿಸಿ ಮುಸ್ಸಂಜೆಯ ವೇಳೆ ಮಕ್ಕಳ ಜೊತೆ ವಿಹಾರಕ್ಕೆ ತೆರಳಿ ಕತ್ತಲಾಗುತ್ತಿದ್ದಂತೆ ನಮ್ಮ ಜೋಪಡಿಗೆ ಸೇರಿಕೊಂಡೆವು. ಜೋರಾಗಿ ಮಳೆ ಬರಲು ಶುರುವಾಯಿತು ಸಿಡಿಲಿನ ಭಯದಿಂದ ಪಕ್ಕದ ಮನೆಯ ಅಜ್ಜಿಯ ಮನೆಗೆ ಹೋದೆವು. ಸಿಡಿಲು ಬಂದಾಗ ಆಕೆಯು ಕತ್ತಿಯನ್ನ ಬಾಗಿಲ ಬಳಿ ಇಟ್ಟು ನಮಗೆ ಧೈರ್ಯ ನೀಡಲು ಮುಂದಾದರು. ನಾವಿನ್ನು ಅಂಗಡಿಗೆ ಬರುವ ಸೂಚನೆಯು ಕಾಣದೆ, ಸುಶೀಲಮ್ಮ ನೇರವಾಗಿ ಮನೆ ಹತ್ತಿರ ಬಂದರು. ನಾನಂತೂ ಪೂರ್ಣವಾಗಿ ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡಿದ್ದ ಕಾರಣ ನನ್ನ ದಿನಚರಿಗಳೇ ಬದಲಾಗಿತ್ತು. ರಾತ್ರಿಯ ಸ್ನಾನವು ಬೆಳಗ್ಗೆ ಮಾಡುವಂತಹ ಪರಿಸ್ಥಿತಿಯು ಒದಗಿ ಬಂತು. ಹೀಗೆ ಮಳೆಯೆಲ್ಲ ನಿಂತ ನಂತರ, ರಾತ್ರಿ ಬೀದಿ ದೀಪದ ಬೆಳಕಿನೊಂದಿಗೆ ಮನೆಗೆ ಸೇರಿದೆವು.


ಮೂರನೇ ದಿನ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗುವ ಬೀದಿಯಲ್ಲೇ ನಡೆದುಕೊಂಡು ಹೋಗುವಾಗ ಅಲ್ಲೇ ಕಟ್ಟಿ ಹಾಕಿದ್ದ ಎಮ್ಮೆಯ ಚಿತ್ರಣವನ್ನು ತೆಗೆಯಲು ಅದರತ್ತ ಹೋದೆ, ಎಮ್ಮೆಯ ಕರುವಿನ ಕುತ್ತಿಗೆಗೆ ಮಾತ್ರ ಹಗ್ಗ ಹಾಕದೆ ಇರುವುದು ನಾನು ಗಮನಿಸಿಯೇ ಇರಲಿಲ್ಲ, ಹೀಗೆ ಎಮ್ಮೆಯ ಮರಿಯೂ ನನ್ನನ್ನು ಅಟ್ಟಿಸಿಕೊಂಡು ಸುಮಾರು ದೂರಕ್ಕೆ ಬಂದಾಗ ನಾನಂತೂ "ಬದುಕಿಕೋ ಬಡ ಜೀವವೇ" ಎಂದುಕೊಳ್ಳುತ್ತಾ, ಚಪ್ಪಲಿ ಇಲ್ಲದ ಕಾಲಿನಿಂದ ನೋವು ಸಹಿಸಿಕೊಳ್ಳಲಾಗದೆ ಮಾರ್ಗದ ಉದ್ದಕ್ಕೂ ಓಡತೊಡಗಿದೆ. ಆಗ ಚೇತನಳಂತೂ ಅದರ ಕಣ್ಣಿಂದ ತಪ್ಪಿಸಿಕೊಂಡು ನನ್ನನ್ನು ನೋಡಿ ಕಿಸಿಯತೊಡಗಿದಳು. ಅಲ್ಲಿದ್ದ ಜನರಂತೂ ನನ್ನನ್ನು ನೋಡುತ್ತಾ ಓಡಲು ಪ್ರೋತ್ಸಾಹ ನೀಡುತ್ತಿದ್ದರು. ನನಗಂತೂ ಒಮ್ಮೆ ಎಮ್ಮೆಯ ಕಣ್ಣಿನಿಂದ ತಪ್ಪಿಸಿಕೊಂಡರೆ ಸಾಕೆಂದು ಯಾರದೋ ತಿಳಿಯದ ಮನೆಯೊಳಗೆ ನುಗ್ಗಿಬಿಟ್ಟೆನು. ನಂತರ ಎಮ್ಮೆಯ ಮಾಲೀಕನು ಬಂದು ಹಗ್ಗವನ್ನು ಕುತ್ತಿಗೆಗೆ ಹಾಕಿ ಎಳೆದೊಯ್ದರು. ಓಡಿ ಓಡಿ ದಣಿದು ಜೀವವೇ ಬಾಯಿಗೆ ಬಂದಿದ್ದ ನಾನಂತೂ, ಅಲ್ಲೇ ಮರದ ಬುಡದಲ್ಲಿ ವಿಶ್ರಾಂತಿಯ ತೆಗೆದುಕೊಂಡು ನನ್ನ ಕಾಲನ್ನು ನೋಡಿಕೊಂಡೆ ಅಷ್ಟೇ, ನನಗೆಯೇ ಅನಿಸಿಬಿಟ್ಟಿತ್ತು ಚಪ್ಪಲಿಗಳಿಲ್ಲದೇ, ಬರಿಗಾಲಿನಲ್ಲಿ ಇನ್ನೂ ಸ್ವಲ್ಪ ಹೊತ್ತು ಓಡುತ್ತಿದ್ದರೆ ಚರ್ಮವೇ ತೆಳುವಾಗಿ ರಕ್ತವೇ ಹೊರ ಚಿಮ್ಮುತ್ತಿತ್ತೇನೋ ಎಂದೆನಿಸಿತು.

ಅಲ್ಲಿಂದ ಸುಶೀಲಮ್ಮನ ಅಂಗಡಿಗೆ ಹೋಗಿ ನಡೆದ ವಿಚಾರ ತಿಳಿಸಿ ಬೆಳಗಿನ ಉಪಹಾರವನ್ನು ಪೂರ್ಣಗೊಳಿಸಿ ಅಲ್ಲೇ ಹಳ್ಳಿಯ ಅಕ್ಕಪಕ್ಕ ಸುತ್ತಾಡಿಕೊಂಡು ಹಳ್ಳಿ ಬಗ್ಗೆ ತಿಳಿಸಿಕೊಟ್ಟವರಿಗೆ ಮತ್ತು ಸಹಕರಿಸಿದವರೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿ, ನಮ್ಮನ್ನು ನೋಡಿಕೊಂಡು ಆಶ್ರಯ ನೀಡಿದ ಸುಶೀಲಮ್ಮನಿಗೆ ನಮಸ್ಕರಿಸಿ ಅಲ್ಲಿಂದ ಮುಂಡಗೋಡಿಗೆ ಸರ್ಕಾರಿ ಬಸ್ಸು ಹತ್ತಿಕೊಂಡು ಲೋಯಲ ಕೇಂದ್ರಕ್ಕೆ ಬಂದೆವು.. ಕೊನೆಯ ದಿನ, ಕಳೆದ ಎಲ್ಲಾ ದಿನಗಳ ಕಲಿಕಾ ವಿಚಾರಗಳನ್ನು ಪ್ರಸ್ತುತಿಯಾಗಿ ವಿವರಿಸಿ, ಅಲ್ಲೇ ಇರುವಂತಹ ಟಿಬೆಟಿಯನ್ ಕ್ಯಾಂಪ್ಗೆ  ಭೇಟಿ ನೀಡಿ, ಹಿಂತಿರುಗಿ ನಾವು ತಂಗಿದ್ದ ನಿಲಯಕ್ಕೆ ಬಂದೆವು, ಉದರ ಪೂಜೆಯ ಜೊತೆ-ಜೊತೆಗೆ ಸ್ನಾನಾದಿಗಳನ್ನು ಮುಗಿಸಿ, ಒಳ್ಳೆಯ ಅನುಭವಗಳನ್ನು ಬೆನ್ನಿಗೇರಿಸಿಕೊಂಡು, ತುಂಬು ಮನದಿ ಧನ್ಯವಾದಗಳನ್ನು ಸಮರ್ಪಿಸುತ್ತಾ, ರಾತ್ರಿಯ ವೇಳೆ ಲೋಯಲಾ ವಿಕಾಸ ಕೇಂದ್ರದಿಂದ ನಮ್ಮ ಪ್ರೀತಿಯ ಜ್ಯೋತಿ ಮೇಡಂ ಹಾಗೂ ಸೌಮ್ಯ ಮೇಡಂರವರೊಂದಿಗೆ, ನಮ್ಮ ಸಹಪಾಟಿಗಳನ್ನು ಕೂಡಿಕೊಂಡು ನೆಮ್ಮದಿಯ ಭಾವದೊಂದಿಗೆ ಮಂಗಳೂರಿನ ಬಸ್ಸು ಹತ್ತಿ ಅಧ್ಯಯನ ಶಿಬಿರಕ್ಕೆ ಪೂರ್ಣವಿರಾಮವನ್ನು ನೀಡಿದೆವು.


- ಯಶೋದ

ದ್ವಿತೀಯ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ 

ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top