ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಬೇಕಿದೆ, ಮಾನಸಿಕ ಒತ್ತಡದ ನಿರ್ವಹಣೆ

Upayuktha
0

 


 

ವರ್ಷ ಕಳೆದ ಐದು ತಿಂಗಳಿನಲ್ಲಿ ಹೋದ ವಾರದ್ದೂ ಸೇರಿದಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆಯ ಸಂಖ್ಯೆ ನನ್ನ ಹುಡುಕುವಿಕೆಗೆ ಸಿಕ್ಕಿದ್ದು 18

 

ಐಐಟಿ ದೆಹಲಿ

ಎನ್ ಐಟಿ ಕಾನ್ಪುರ್

ಐಐಟಿ ಬಿ ಎಚ್ ಯು

Bits

VIT

ಎಮ್ಐಟಿ

ಪಿ ಈ ಎಸ್

ಮತ್ತು ಇತರ ಹೆಸರು ಹೊರಗೆ ಬಿಡದಂತೆ ತಡೆ ಹಿಡಿದ ಕಾಲೇಜುಗಳು.

 

ಬಹುತೇಕ ಎಲ್ಲೆಡೆಯೂ ವಿದ್ಯಾರ್ಥಿಗಳ  ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಲೇ ಇವೆ .

 ಇದಕ್ಕೆ ಕಾರಣಗಳು  

ಕಡಿಮೆಯಾದ ಗ್ರೇಡ್ 

ಪರೀಕ್ಷಾ ಭಯ

ಕೆಲಸ ಸಿಗದ ನಿರಾಸೆ

ಫಲಿಸದ ಪ್ರೇಮ

ಕಾಲೇಜಿನ ಬೋಧಕ ಅಥವಾ ಸಿಬ್ಬಂದಿಗಳಿಂದ ಅವಮಾನ ಅಥವಾ ಬೈಗುಳ.

ಪೋಷಕರ ಒತ್ತಡ


ಕಾರಣಗಳು ಹಲವಾರು ಇರಬಹುದು.ಹಾಗೆ ನೋಡಿದರೆ ಈ ಮಕ್ಕಳ ಪೋಷಕರು ಇದಕ್ಕಿಂತ ಹತ್ತು ಹಲವಾರು ಅವಮಾನ, ನೋವು, ನಿರಾಸೆಗಳನ್ನು ನುಂಗಿ ಬಂದವರೇ ಆದರೆ ಈ ಯುವ ಜನರೇಕೆ ಸಣ್ಣ ಸಣ್ಣ ವಿಷಯಕ್ಕೂ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಿದ್ದಾರೆ?


ಇದಕ್ಕೆ ಕಾರಣ ಹುಡುಕಿದರೆ 

ಜನರೇಷನ್ Z (Gen Z), ಹಿಂದಿನ ತಲೆಮಾರುಗಳಿಗಿಂತ ಹೆಚ್ಚು ಸೂಕ್ಷ್ಮ ಮನಸ್ಸಿನವರು ಎಂಬ ಅಭಿಪ್ರಾಯವಿದೆ.

ಯಾರಿದು ಜೆನ್ ಝೀ 

 1997 ಮತ್ತು 2012 ರ ನಡುವೆ ಜನಿಸಿದ ಮಕ್ಕಳು.

ಅದರಲ್ಲೂ 2004ರ ರ ನಂತರದ ಜೆನ್ ಝೀ ಮಕ್ಕಳು ಅಪ್ಪ ಅಮ್ಮನ  ಮುದ್ದಿನ ಮಕ್ಕಳಾಗಿ,  ಕೇಳಿದ್ದು  ಕೂಡಲೇ  ಸಿಗುವಂತಹ  ಸ್ಥಿತಿ, ಯಾವ ಮಾಹಿತಿಯಾದರೂ ಕೈ ಬೆರಳಲ್ಲಿಯೇ  ದೊರಕಿಸಿಕೊಳ್ಳಬಲ್ಲ  ಈ ಕಾಲಕ್ಕೆ, ತಮ್ಮ ಸುತ್ತಲಿನ ಪ್ರಪಂಚವನ್ನೇ ನೈಜ ಪ್ರಪಂಚ  ಎಂದು ಭ್ರಮಿಸಿಕೊಂಡು  ಬೆಳೆದಂತಹವು. ಅವರ, ಮನಸು, ಜೀವನ ಶೈಲಿ, ಅವರ ಆದ್ಯತೆ  ಎಲ್ಲವೂ  ಹಿಂದಿನ  ಜೆನರೇಶನ್ ಗಿಂತ  ಭಿನ್ನ ಮತ್ತು ಸೂಕ್ಷ್ಮ.

ಇಂತಹ ಸಮಯದಲ್ಲಿ  ಅಂಕಗಳಿಕೆ, ಈ ಅಂಕ ಗಳಿಕೆ  ಇಂದ ಮುಂದೆ  ಒಳ್ಳೇ ಕೆಲಸ ಸಿಕ್ಕಿ  ಹಣಗಳಿಕೆ  ಆದರೆ  ಜೀವನ ಸೆಟಲ್  ಎಂಬ ಸುಳ್ಳಿನ  ಹಂದರ ಹೆಣೆದು ಜೇಡದಂತಿರುತ್ತದೆ  ಅವರ ಬದುಕು. 


Gen Z, ಹಳೆಯ ತಲೆಮಾರುಗಳಿಗಿಂತ ಹೆಚ್ಚಾಗಿ ಒತ್ತಡ, ಆತಂಕ ಮತ್ತು ಒಂಟಿತನದಂತಹ ನಕಾರಾತ್ಮಕ ಭಾವನೆಗಳನ್ನು ತೋರ್ಪಡಿಸುವ ಸಾಧ್ಯತೆಯಿದೆ. 

Gen Z ನ ಸೂಕ್ಷ್ಮತೆಗೆ ಕಾರಣ ಅವರು ಬಹಳ ಒತ್ತಡದ ವಿಷಯಗಳಿಗೆ ಒಡ್ಡಿಕೊಳ್ಳುವುದರಿಂದ ಅಂದರೆ ಹೆಚ್ಚಿದ ಪೈಪೋಟಿ ಮತ್ತು ಹೆಚ್ಚಿನ ಹೋಲಿಕೆ,  ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಎಂಬುದೂ ನಿಜ.




Gen Z ಹೆಚ್ಚು ಸೂಕ್ಷ್ಮವಾಗಿರಲು ಕೆಲವು ಕಾರಣಗಳು ಇಲ್ಲಿವೆ:

ಸಾಮಾಜಿಕ ಮಾಧ್ಯಮ: Gen Z ನ 93% ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ, ಇದು ನೇರವಾಗಿ ಅವರ ನಂಬಿಕೆಗಳು ಮತ್ತು ಅರಿವಿನ ಪರಿಣಾಮ ಬೀರುತ್ತದೆ. 

ತಂತ್ರಜ್ಞಾನ: ದೀರ್ಘಕಾಲ ಆನ್ಲೈನ್  ನಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿರತರಾಗಿರುವುದರಿಂದ ಇವುಗಳಿಂದ ಹೊರಗೆ ಹೊರೆ ವಾಸ್ತವದಲ್ಲಿ  ಸುತ್ತುವರೆದಿರುವ ಕಠಿಣ ಜಗತ್ತನ್ನು ನೇರವಾಗಿ ನೋಡಲಾಗುತ್ತಿಲ್ಲ .ಬಹಳ ಜನ ಆನ್ಲೈನ್ ಜಗತ್ತೇ ನಿಜವಾದ ಜಗತ್ತು ಎಂದು ಭಾವಿಸಿರುತ್ತಾರೆ. ಅಲ್ಲಿಂದ ಹೊರಗಡೆ ಬಂದಾಗ ಬದುಕಿನ ಕಟು ವಾಸ್ತವಗಳನ್ನು ಎದುರಿಸುವ ಸಾಮರ್ಥ್ಯ ಕಡಿಮೆಯಾಗಬಹುದು.


ಒತ್ತಡ ( ಸ್ಟ್ರೆಸ್) ವಿಷಯಗಳು: Gen Z ಬಹಳಷ್ಟು ಅನಾರೋಗ್ಯಕರ ಪೈಪೋಟಿ, ಹೋಲಿಕೆ, ಅಸೂಯೆ, ಅತೀ ಎತ್ತರದ ಗುರಿಯಂತಹ ಒತ್ತಡದ ವಿಷಯಗಳಿಗೆ ತೆರೆದುಕೊಳ್ಳುತ್ತದೆ, ಇದು ಅವರಲ್ಲಿ ಆಂಕ್ಸೈಟಿಗೆ  ಕಾರಣವಾಗಬಹುದು.


ಯುವ ಜನ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು?


ಹದಿಹರೆಯದ ವರ್ಷಗಳು ಒತ್ತಡದ ಸಮಯ. ಈ ಸಮಯದಲ್ಲಿಯೇ ಪ್ರಮುಖ ಬದಲಾವಣೆಗಳಾಗುವುದು. ಇವುಗಳಲ್ಲಿ ದೇಹದ ಬದಲಾವಣೆಗಳು, ಆಲೋಚನೆಗಳಲ್ಲಿನ ಬದಲಾವಣೆಗಳು ಮತ್ತು ಭಾವನೆಗಳಲ್ಲಿನ ಬದಲಾವಣೆಗಳು ಸೇರಿವೆ.


ಒತ್ತಡ, ಗೊಂದಲ, ಭಯ ಮತ್ತು ಸೆಲ್ಫ್ ಡೌಟ್ ( ಆತ್ಮವಿಶ್ವಾಸಜ ಕೊರತೆ ) ಹದಿಹರೆಯದವರ ಒಂದು ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ನಿರ್ಧಾರ ಮಾಡುವಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಜೀವನದಲ್ಲಿ ಯಶಸ್ವೀಯಾಗುವವರೆ ಬದುಕಲು ಅರ್ಹರು ಎಂದು ಅವರ  ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ ಸುತ್ತಲಿನ ಪರಿಸರದಲ್ಲಿ ಎಂಬುದನ್ನು ಸಾರಿ ಸಾರಿ ಹೇಳಿದ್ದಾಗ ಅವರು ವಿಜಯ ಮಾತ್ರ ಬದುಕಿಗೆ ದಾರಿ ಅಂತ ಅರ್ಥ ಮಾಡಿಕೊಂಡಿರುತ್ತಾರೆ. ಹೀಗಾದಾಗ ಯಾವುದೇ ಒಂದು ಸಣ್ಣ ಸಮಸ್ಯೆ ಎದುರಾದರೂ ಅದು ಭೂತಾಕಾರಾವಾಗೀ ಕಂಡು ಅದರಿಂದ ಪಾರಾಗಲು ಆತ್ಮಹತ್ಯೆಯೇ ದಾರಿ ಎಂದು ಭಾವಿಸಿ ಬಿಡುತ್ತಾರೆ.


ಹಾಗೆ ನೋಡಿದರೆ ಸಮಸ್ಯೆ ಎದುರಾದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಕೆಲವರು ಮಾತ್ರ, ಈ ಅಪಾಯವು ವಯಸ್ಸು, ಲಿಂಗ ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಣಾಮಗಳ ಮೇರೆಗೆ ಬದಲಾಗುತ್ತದೆ. 

ಎಲ್ಲಾ ಮಕ್ಕಳ  ಓದಿನ ಸಾಮರ್ಥ್ಯ  ಹೇಗೆ ವಿಭಿನ್ನವೋ  ಹಾಗೆಯೇ  ಅವರು  ಒಂದು ಪರಿಸ್ಥಿತಿಗೆ  ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು   ಬೇರೆ ಬೇರೆ .  ನಮ್ಮ ಮಕ್ಕಳು  ಒಂದು ಸಮಸ್ಯೆಯನ್ನು  ಸಮರ್ಥವಾಗಿ  ಎದುರಿಸಬಲ್ಲರಾದರೆ  ಇತರ ಮಕ್ಕಳೂ  ಹಾಗೇ  ಇರುತ್ತಾರೆ  ಎಂದು ನಮ್ಮ  ಮೂಗಿನ ನೇರಕ್ಕೆ  ಯೋಚಿಸುವುದು  ಸರಿಯಾದ  ಸಮಾಲೋಚನೆ  ಅಲ್ಲ.  ಬಹಳಷ್ಟು  ಚಿಂತಕರ  ಚಿಂತನೆಗಳು  ಅದೇ ನಿಟ್ಟಿನಲ್ಲಿರುವುದು  ಆತಂಕದ  ಸಂಗತಿ. 

ಹುಟ್ಟಿನಿಂದ  50%  ಗುಣಗಳು ಆಗಲೇ  ನಿರ್ಧಾರಿತ. ಇನ್ನು  40% ಅವರು ಕಲಿತು ಅಳವಡಿಸಿಕೊಳ್ಳ ಬಹುದು, 10% ತಮ್ಮ ಜೀವನದ  ಘಟನೆಗಳಿಂದ  ಕಲಿಯಬಹುದು.  ಆದ್ದರಿಂದ  ಪ್ರತಿ ಮಕ್ಕಳೂ  ಅವರ ಆಲೋಚನೆಗಳು,  ಅವರ ಸಾಮರ್ಥ್ಯವೂ  ಬೇರೆ ಬೇರೆಯಾಗಿರುತ್ತದೆ.



ಈ ಅಪಾಯ ಹೆಚ್ಚಾಗಿ ಕಂಡು ಬರುವುದು 

ಒಂದು ಅಥವಾ ಹೆಚ್ಚಿನ ಮಾನಸಿಕ ಅಥವಾ ಮಾದಕ ವ್ಯಸನದ ಸಮಸ್ಯೆಗಳು

ರಿಸ್ಕ್ ಅನಾಲೈಸ್ ಮಾಡದೆ ದುಡುಕುವ ವರ್ತನೆ 

ಕೌಟುಂಬಿಕ ಸಮಸ್ಯೆ ಅಥವಾ ಇನ್ನೇನಾದರೂ ಇತ್ತೀಚಿನ ನಷ್ಟಗಳು, ಉದಾಹರಣೆಗೆ ಪೋಷಕರ ಸಾವಿನಂತಹ, ದೂರವಾಗುವಿಕೆ , ಅವರ ಬೈಗುಳ , ಪ್ರೀತೀ ಪ್ರೇಮ ನಷ್ಟ ಇತ್ಯಾದಿ ಒತ್ತಡದ ಜೀವನ ಘಟನೆಗಳು

ಕುಟುಂಬದಲ್ಲಿ ಮಾನಸಿಕ ಅಥವಾ ಮಾದಕ ವ್ಯಸನದ ಸಮಸ್ಯೆಗಳ ಇತಿಹಾಸ ಇದ್ದಾಗ

ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸ

ದೈಹಿಕ, ಲೈಂಗಿಕ, ಅಥವಾ ಬೈಗುಳ ಅಥವಾ ಭಾವನಾತ್ಮಕ ನಿಂದನೆ ಸೇರಿದಂತೆ ಕೌಟುಂಬಿಕ ಹಿಂಸೆ

ಈ ಹಿಂದೆ ಈಗಾಗಲೇ ಆತ್ಮಹತ್ಯಾ ಪ್ರಯತ್ನ

ಕುಟುಂಬ ಅಥವಾ ಗೆಳೆಯರಿಂದ, ಸುದ್ದಿಗಳಲ್ಲಿ ಅಥವಾ ಕಾಲ್ಪನಿಕ ಕಥೆಗಳಲ್ಲಿ ಇತರರ ಆತ್ಮಹತ್ಯೆಯ ವಿಷಯಗಳನ್ನು  ಪದೇ ಪದೇ ಕೇಳುವುದು.



ಯುವಕರ ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳು ಯಾವುವು?

ಆತ್ಮಹತ್ಯೆಯ ಹಲವು ಎಚ್ಚರಿಕೆಯ ಚಿಹ್ನೆಗಳು ಖಿನ್ನತೆಯ ಲಕ್ಷಣಗಳಾಗಿವೆ. ಅವುಗಳೆಂದರೆ:

ಅವರ ತಿನ್ನುವ ಮತ್ತು ಮಲಗುವ ಅಭ್ಯಾಸದಲ್ಲಿ ಬದಲಾವಣೆ

ಸಾಮಾನ್ಯ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವಿಕೆ.

ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ದೂರ ಇರುವುದು 

ಹೆಚ್ಚು ಮಾತಾಡದಿರುವುದು

ಮದ್ಯ ಅಥವಾ ಮಾದಕವಸ್ತು ಬಳಕೆ

ಜೀವನದ ದೈನಂದಿನ ಕೆಲಸಗಳಲ್ಲಿ ಆಸಕ್ತಿ ಇಲ್ಲದೆ ಇರುವುದು

ಅನಗತ್ಯ ಅಪಾಯವನ್ನು ತೆಗೆದುಕೊಳ್ಳುವುದು

ಸಾವಿನ ಬಗ್ಗೆ ಆಗಾಗ ಮಾತಾಡುವುದು

ಹೆಚ್ಚಿನ ದೈಹಿಕ ದೂರುಗಳು ಸಾಮಾನ್ಯವಾಗಿ ಹೊಟ್ಟೆನೋವು, ತಲೆನೋವು ಮತ್ತು ತೀವ್ರ ಆಯಾಸ (ಆಯಾಸ) ನಂತಹ ಭಾವನಾತ್ಮಕ ತೊಂದರೆಗೆ ಸಂಬಂಧಿಸಿವೆ.

ಶಾಲೆ ಅಥವಾ ಕಾಲೇಜು ಓದಿನಲ್ಲಿ  ಆಸಕ್ತಿ ಇಲ್ಲದೇ ಇರುವುದು 

ಬೇಸರ, ಒತ್ತಡದ ನಡುವಳಿಕೆ, ಆತಂಕದ ತೋರುವುದು 

ಓದು ಅಥವಾ ಇನ್ನಾವುದೇ ಕೆಲಸದಲ್ಲಿ ಏಕಾಗ್ರತೆಯ ತೊಂದರೆಗಳು


 

ಪರಿಹಾರ?

ಈಗಿನ ಕಾಲಕ್ಕೆ ಲೈಫ್ ಸ್ಕಿಲ್  ಎಂಬುದು ಕೇವಲ  ಮತ್ತೊಂದು ಉರು ಹೊಡೆವ ವಿಷಯವಾಗಿಯೇ  ಉಳಿಯದೆ ಪ್ರಾಕ್ಟಿಕಲ್ ಆಗಿ ಕಲಿಸುವ  ಕಲಿಯುವ  ವಿಷಯವಾಗಬೇಕಿದೆ.  ಮೀಡಿಯಾಗಳು, ಓಟಿಟಿಗಳು, ಸಿನಿಮಾಗಳು  ಮಕ್ಕಳ ಎಳೆಮನಸಿನ ಮೇಲೆ   ಮೂಡಿಸುವ  ಗುರುತುಗಳಲ್ಲಿ  ಸರಿ ಯಾವದು,  ತಪ್ಪು ಯಾವದು ಎಂದು  ಅರ್ಥ ಮಾಡಿಕೊಳ್ಳುವ ಶಕ್ತಿ  ಮಕ್ಕಳಲ್ಲಿ  ಮೂಡಬೇಕಾದರೆ ಲೈಫ್ ಸ್ಕಿಲ್ ಬೇಕೇ  ಬೇಕು.  ಅವರಿಗಿಂತ  ಮೊದಲು ಶಾಲೆಯಲ್ಲಿ  ಅದನ್ನು ಕಲಿಸುವ  ಶಿಕ್ಷಕರಿಗೆ  ಮತ್ತು  ಮನೆಯಲ್ಲಿ  ಮಕ್ಕಳ ಜೊತೆ  ಒಡನಾಡುವ  ಪೋಷಕರಿಗೆಂದೇ  ಒಂದಷ್ಟು ವರ್ಕ್ ಶಾಪ್ ಬೇಕು.  ಪೇರೆಂಟಿಂಗ್  ತರಬೇತಿಯನ್ನೂ ಕೊಡುವ  ವ್ಯವಸ್ಥೆ ಮಾಡಬೇಕು.  

 

 ಹಾಗಾಗಿಯೇ   ಈಗ ಅಂಕ ಕೊಡಿಸುವ ಪಠ್ಯಗಳಿಗಿಂತ , ಉತ್ತಮ  ಭಾವ ನಿರ್ವಹಣೆ , ಸಮಸ್ಯೆಯ  ಬಗೆಹರಿಸುವಿಕೆ,  ಕೋಪ, ನಿರಾಸೆಗಳ  ನಿರ್ವಹಣೆ,  ಸವಾಲುಗಳನ್ನು  ಎದುರಿಸುವ  ಕಲೆ. ಸೋತರೂ ಮತ್ತೆ ಎದ್ದುಬರಬಲ್ಲ  ಚಾಕ ಚಕ್ಯತೆ ಈಗಿನ  ಆದ್ಯತೆ.  ಇವುಗಳನ್ನು  ಶಿಕ್ಷಣ  ವ್ಯವಸ್ಥೆ ಕಲಿಸದಿದ್ದರೇ  ಅಂತಹ ವ್ಯವಸ್ಥೆಯೇ ವ್ಯರ್ಥ. 


ಮಾನಸಿಕ ಒತ್ತಡ ನಿರ್ವಹಣೆಯ ಕಲೆಯನ್ನು ಕಲಿಸಬೇಕು 



ಪೋಷಕರು ಏನು ಮಾಡಬಹುದು?


ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಶ್ರಮದ  ಆನಂದ. 


ಬಹಳ  ಜನ ಪಾಲಕರ,  ಪೋಷಕರ ಏಕೈಕ  ಕನಸು ನನ್ನ  ಮಗುವಿಗೆ  ಬಯಸಿದ್ದೆಲ್ಲಾ  ಸಿಗಬೇಕು, ನೋವು, ನಿರಾಸೆ ಆಗಲಿ ಅವರ  ಅರಿವಿಗೆ ಬರಬಾರದು.  ನಾನು ಪಟ್ಟ ಬಡತನ, ನಿರಾಕರಣೆ ಕಷ್ಟ ಮಗುವಿಗೆ  ಬರಬಾರದು. 


ಆದರೆ  ಮಕ್ಕಳ ಅರಿವಿಗೆ  ಯಾವ  ನೋವು , ನಿರಾಸೆ  ನಮ್ಮ  ಕಷ್ಟಗಳೂ ತಿಳಿಯಬಾರದೆಂದು  ಬೆಳೆಸಿದರೆ ಆ  ಮಕ್ಕಳು  ನಿಂತು ಒಂದು ಸಣ್ಣ ಸೋಲು, ತಿರಸ್ಕಾರ, ನೋವನ್ನೂ ಸಹಿಸಲಾರದಂತೆ ಬೆಳೆಯುತ್ತಾರೆ     


ಯಾವದೋ  ನಿರಾಸೆ,  ನಿರಾಕರಣೆ, ನೋವು  ಅವರನ್ನು ಕಾಡಿದಾಗ, ಅದನ್ನು ನಿಭಾಯಿಸಲಾಗದೇ  ಸಾವಿನ ಮೊರೆ ಹೋಗಬಹುದು.  

ಬೀಳದೆ  ನಡಿಗೆ  ಕಲಿಯಲಾರೆವು.  ಕಷ್ಟದ ದಾರಿಯಲ್ಲಿ  ಡ್ರೈವ್ ಮಾಡದಿದ್ದರೆ  ಎಂದಿಗೂ ಮೇನ್  ರೋಡಿನಲ್ಲಿ  ಡ್ರೈವ್  ಮಾಡಲಾರೆವು . ಹಾಗೆಯೇ  ಮಕ್ಕಳಿಗೆ  ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿ  ಅವರನ್ನು  ಬದುಕಲ್ಲಿ  ಸವಾಲುಗಳನ್ನು  ಎದುರಿಸುವಂತೆ  ಮಾಡಲಾಗುವದಿಲ್ಲ.  ಆದ್ದರಿಂದ ಚಿಕ್ಕಂದಿನಿಂದಲೇ ಅವರಿಗೂ ನೋವು ನಲಿವು, ಕಾದು ಪಡೆಯುವದರ ಆನಂದ, ಸೋತು ಗೆಲ್ಲುವುದರ ಸಾರ್ಥಕತೆ ಎಲ್ಲವನ್ನೂ ಕಲಿಸಿ.



ಅದು ಬಿಟ್ಟು ಮೇಲೆ ಹೇಳಿದ ತರಹದ ವಾರ್ನಿಂಗ್ ಸೈನ್  ಕಂಡುಬಂದಾಗ ಪೋಷಕರು 

ತಮ್ಮನ್ನು ತಾವು ಹರ್ಟ್ ಮಾಡಿಕೊಳ್ಳುವೆವು   ಅಥವಾ ಕೊಂದುಕೊಳ್ಳುವೆವು  ಎಂದು ಹೇಳುವ ಮಕ್ಕಳು "ಕೇವಲ ಅಟೆನ್ಷನ್ ಗಾಗಿ ಮಾಡುತ್ತಿದ್ದಾರೆ" ಎಂದು ಕೆಲವು ಪೋಷಕರು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಅಟೆನ್ಷನ್ ಅನ್ನು ಕೇಳಲಾರಂಭಿಸಿದರೆ ಅದರ ಅರ್ಥ ನನಗೆ ನಿನ್ನ ಸಹಾಯಬೇಕಿದೆ ಎಂದು,  ಸಮಯದಲ್ಲಿ   ಈ ನಡುವಳಿಕೆಯನ್ನ ನಿರ್ಲಕ್ಷಿಸಿದರೆ, ಅವರು ತಮ್ಮನ್ನು ತಾವು ಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಬಹುದು.

ಮೇಲೆ ಹೇಳಿದ ಲಕ್ಷಣಗಳು ಕಂಡುಬಂದೊಡನೆ ಮಕ್ಕಳ ಬಳಿ ಮಾತನಾಡಿ, ಅವರು ಮಾತನಾಡದಿದ್ದಲ್ಲಿ ಕೂಡಲೇ ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗಿ.

ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಗಂಭೀರ ಸಮಯದಲ್ಲಿ  ಮಕ್ಕಳಿಗೆ ಓದಲು ಪ್ರೇರೇಪಿಸಿ ಆದರೆ  ಒತ್ತಡ ಹಾಕಬೇಡಿ.

ಅವರ ನಡುವಳಿಕೆಗಳನ್ನ ಗಮನವಿಟ್ಟು  ನೋಡಿ  ಮತ್ತು  ಅವರ ಮಾತುಗಳಿಗೆ ಕಿವಿಯಾಗಿರಿ. 

ಅಕಸ್ಮಾತ್ ನಿಮ್ಮ ಮಕ್ಕಳು ಖಿನ್ನತೆಯ ಲಕ್ಷಣಗಳನ್ನ ಹೊಂದಿದ್ದರೆ ಅವರ  ಮೇಲೆ ನಿಗಾ ಇರಿಸಿ.

  ಈ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಆಂಕ್ಸೈಟಿ, ಮತ್ತು ಮಾನಸಿಕ ಒತ್ತಡ ನಿರ್ವಹಣೆಯ ಬಗ್ಗೆ ಒಂದು ಕಾರ್ಯಾಗಾರ ವ್ಯವಸ್ಥೆ ಮಾಡಿಸುವುದೂ ಕೂಡ ಸಹಾಯವಾಗಬಹುದು.

ಮಕ್ಕಳೊಡನೆ ಮುಕ್ತ ಸಂವಹನದ ಮಾಡಿ.ನಿಮಗೆ ಸಾಧ್ಯವಾಗದಿದ್ದಲ್ಲಿ ಆಪ್ತಸಲಹೆಗಾರರನ್ನ ಭೇಟಿ ಮಾಡಿಸಿ

ಯಾವುದೇ ಕೋರ್ಸ್ ಮಾಡಿಸುವ ಮುನ್ನ ವೃತ್ತಿ ಮಾರ್ಗದರ್ಶನ ನೀಡುವ ಕೆರಿಯರ್ ಕೌನ್ಸೆಲಿಂಗ್ ಅನ್ನು ಸಂಪರ್ಕಿಸಿ , ಅವರು ನಿಮ್ಮ ಮಕ್ಕಳು ಸ್ವಭಾವ ಮತ್ತು ಅವರ ನಡುವಳಿಕೆಗಳ ಆಧಾರಿತವಾಗಿ ಕೋರ್ಸ್ ಅನ್ನು ಸೂಚಿಸುತ್ತಾರೆ.

  

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಶೈಕ್ಷಣಿಕ ಸಂಸ್ಥೆಗಳು ಏನು ಮಾಡಬೇಕು?

ಈಗಿರುವ ಶೈಕ್ಷಣಿಕ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಆತಂಕವನ್ನು ನಿರ್ವಹಿಸುವುದು, ವೈಫಲ್ಯವನ್ನು ಎದುರಿಸುವುದು, ನಿಭಾಯಿಸುವ ಕೌಶಲ್ಯಗಳು ಮತ್ತು ಜೀವನದ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುವ ಇತರ ಜೀವನ ಕೌಶಲ್ಯಗಳ ಬಗ್ಗೆ ಆಳವಾಗಿ ಕಲಿಸುತ್ತಿಲ್ಲ

ಪಠ್ಯಕ್ರಮದಲ್ಲಿ ಮಾನಸಿಕ ಆರೋಗ್ಯವನ್ನು ಸೇರಿಸುವುದು, ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳು, ಶಾಲಾ ಸಲಹೆಗಾರರನ್ನು ಒದಗಿಸುವುದು, ಶಿಕ್ಷಕರ ಬೆಂಬಲ ಮತ್ತು ಮುಂತಾದವುಗಳ ಮೂಲಕ ಇದನ್ನು ಮಾಡಬಹುದು.

ತಮ್ಮ ಕಾಲೇಜುಗಳಲ್ಲಿ ಮೆಂಟಲ್ ಹೆಲ್ತ್ ಪ್ರಮೋಟರ್  ನಂತಹ ಕಾರ್ಯಕ್ರಮ, ಮಾನಸಿಕ ಒತ್ತಡ ನಿರ್ವಹಣೆಯ ತರಬೇತಿ ಇವುಗಳನ್ನು ಆಯೋಜಿಸುವುದು

ತಮ್ಮಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಅನ್ನು ಆಯೋಜಿಸುವುದು ಇತ್ಯಾದಿ

ಲೆಕ್ಚರರ್, ಪ್ರಾಧ್ಯಾಪಕರು ಮತ್ತು ಶಿಕ್ಷಕರಿಗೆ ಮಾನಸಿಕ ಒತ್ತಡ ನಿರ್ವಹಣೆ , ಮುಖ್ಯವಾಗಿ ಒತ್ತಡ ಹಾಕುವುದಕ್ಕೂ ಮತ್ತು ಓದಲು ಪ್ರೇರೇಪಿಸುವುದಕ್ಕೂ ಇರುವ ವ್ಯತ್ಯಾಸ ಹೇಳಿಕೊಡಬೇಕು, ಬೈಯ್ಯುವುದಕ್ಕೂ, ವಿಷಯವನ್ನು ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ಅದನ್ನೂ ಶಿಕ್ಷಕರು ಕಲಿಯಲೇಬೇಕು.

ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ಕೊಂಚ ಗಮನ ಹರಿಸಿದರೆ ಆಗಲಿರುವ ಆತ್ಮಹತ್ಯೆಯನ್ನು ತಡೆಗಟ್ಟಬಹುದು.


ಯುವ ಜನತೆಗೆ ಕಿವಿಮಾತು

ಬದುಕು ಅವಕಾಶಗಳ ಆಗರ, ಒಂದು ಅವಕಾಶ ಹೋದರೂ ಮತ್ತೊಂದು ಅವಕಾಶ ಇದೆ ಆದರೆ ಜೀವ ಹಾಗೂ ಜೀವನ ಒಂದೇ, ಬದುಕು ಎನ್ನುವುದು ಇದ್ದರೆ ಮಾತ್ರ ಎಲ್ಲವೂ , ಬದುಕೇ ಇಲ್ಲದಿದ್ದರೇ  ಏನಿದ್ದರೂ ವ್ಯರ್ಥ.

ಬದುಕೆನ್ನುವುದರಲ್ಲಿ ಓದು, ಅಂಕ ಗಳಿಕೆ, ಸೀಟ್ ಇವೆಲ್ಲವೂ ಒಂದು ಭಾಗವಷ್ಟೇ ಆದರೆ ಇಡೀ ಬದುಕೇ ಇವುಗಳಲ್ಲ. ಅಥವಾ ಇವುಗಳ ಮೇಲೆಯೇ ನಿಂತಿರುವುದಲ್ಲ.   

ಬದುಕು ಅವಕಾಶ ಕೊಡುವುದು ಇಂಜಿನಿಯರಿಂಗ್, ಡಾಕ್ಟರ್ ಮಾಡಿದವರಿಗೆ ಮಾತ್ರವಲ್ಲ,  ಒಮ್ಮೆ ಸುತ್ತಾ ಕಣ್ಣು ಹಾಯಿಸಿ , ಅದೆಷ್ಟು ಅವಕಾಶಗಳು ಎಲ್ಲೆಡೆ ಇವೆ.  ಒಂದು ಕಡೆಯ ಸೋಲು ಎಲ್ಲಾ ಕಡೆಯಲ್ಲಿಯೂ ಸೋಲಲ್ಲ. 

ಈ ಬದುಕು ಒಂದು ಪಯಣದಂತೆ, ಈ ಪಯಣದಲ್ಲಿ ನಿಮ್ಮ ಪ್ರಯತ್ನ ನೀವು ಮಾಡಿ. ಆದರೆ ಕೆಲವು ಸಲ ಎಲ್ಲರೂ ತಾವಂದುಕೊಂಡ  ಗುರಿಯನ್ನ ಮುಟ್ಟಲಾಗುವುದಿಲ್ಲ. ಮುಟ್ಟಿದರೂ ತಡವಾಗಿರಬಹುದು, ಆದರೆ ಆ ಪಯಣದ ಅನುಭವವನ್ನ ನಿಮ್ಮದಾಗಿಸಿಕೊಳ್ಳಬಹುದು

ಸಾವು ಪಲಾಯನವಷ್ಟೇ ಪರಿಹಾರವಲ್ಲ

ನಿಮಗೆ ಹತಾಶೆಯ ಭಾವನೆಗಳು ಬರುತ್ತಿವೆ ಎಂದಾದಲ್ಲಿ ಕೂಡಲೇ ತಂದೆತಾಯಿಯ ಬಳಿ ಇಲ್ಲ ನಿಮ್ಮ ನೆಚ್ಚಿನ ಶಿಕ್ಷಕರ ಬಳಿ ಮಾತಾಡಿ ಇಲ್ಲವಾದಲ್ಲಿ ಮಾನಸಿಕ ಆರೋಗ್ಯ ಸಹಾಯವಾಣಿಗಳ ಸಂಖ್ಯೆಗಳಿಗೆ ಕರೆಮಾಡಿ.

ನಿಮ್ಮ ಒಂದೇ ಒಂದು ನಿರ್ಧಾರ ನಿಮ್ಮ ಬದುಕನ್ನ ಬದುಕಿಸಬಹುದು.


-ಡಾ. ರೂಪಾ ರಾವ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top