ಲೇಖಾ ಲೋಕ-1: ಕನ್ನಡದ ಶ್ರೇಷ್ಠ ಬರಹಗಾರ ಅ.ರಾ. ಮಿತ್ರ

Upayuktha
0


ರ್ನಾಟಕ ನಾಡಿನ ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ಗುರುತಿಸುವುದಾದರೆ, ಅದ್ಭುತ ಹಾಸ್ಯ ವಿದ್ವಾಂಸರು, ಪ್ರಬಂಧಕಾರರು ಉಪನ್ಯಾಸಕರೂ,  ಅಧ್ಯಾಪಕರು, ವಿಮರ್ಶಕರು ಆದ ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅವರು, 25-2-1935 ರಂದು ರಾಮಣ್ಣ ಮತ್ತು ಮತ್ತು ಜಯಲಕ್ಷ್ಮಮ್ಣ ಅವರ ಪುತ್ರನಾಗಿ, ಬೇಲೂರಿನಲ್ಲಿ ಜನಿಸಿದರು.


ಪ್ರಸಿದ್ಧ ಹಾಸ್ಯೋತ್ಸವ, ವಿಚಾರಸಂಕಿರಣ, ಆಕಾಶವಾಣಿ, ಸಮ್ಮೇಳನ, ದೂರದಶ೯ನದ ವೇದಿಕೆಯಲ್ಲಿ ಇವರ ಉಪನ್ಯಾಸ, ಹಾಸ್ಯ ಭಾಷಣ, ಚಿಂತನೆ, ರಂಜನೆ, ಹರಟೆ ಕೇಳುವುದೇ ಸೊಗಸು! ಪ್ರೊಫೆಸರ್ ಅ.ರಾ.ಮಿತ್ರ ಅವರ ಇತ್ತೀಚಿನ ಕುಮಾರವ್ಯಾಸ ಭಾರತದ ವ್ಯಾಖ್ಯಾನ ಗ್ರಂಥ "ಕಥಾಮಿತ್ರ"  ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು!


ಇವರ ಇನ್ನೊಂದು ಕೃತಿ "ಛಂದೋಮಿತ್ರ" ಜನ ಮೆಚ್ಚುಗೆ ಪಡೆದ ಸೊಗಸಾದ ಕೃತಿ! ಇದು ಅ.ರಾ. ಮಿತ್ರ ಅವರ ಪಾಂಡಿತ್ಯಪೂರ್ಣ, ಹಾಸ್ಯಪ್ರವೃತ್ತಿಯ  ಕೃತಿ. ಛಂದಸ್ಸಿನ ವಿವರಣೆ ಪದ್ಯದಲ್ಲಿ ಹಾಸ್ಯ ರೂಪದಲ್ಲಿ, ಸರಳವಾಗಿ ನಿರೂಪಿಸಿದ ಪುಸ್ತಕ. ಪ್ರಾಚೀನ ಕಾವ್ಯಗಳಲ್ಲಿ ಇರುವ ಸ್ವಾರಸ್ಯಕರ  ಸನ್ನಿವೇಶಗಳನ್ನು ಬರೆದು, ಬಹುಜನರಿಗೆ ಓದಲು ನೀಡಿದ ಸಜ್ಜನರು. ಪೌರಾಣಿಕ  ಗ್ರಂಥಗಳಾದ, ಅಜಿತನ ಪುರಾಣ, ಪಂಪ ಭಾರತ ಸಂಗ್ರಹ, ಮಹಾಭಾರತದ ಪಾತ್ರ ಸಂಗತಿಗಳು ಕೃತಿಗಳನ್ನು ಬರೆದು, ಪ್ರೊ. ಅ ರಾ ಮಿತ್ರ ಅವರು, ಪುರಾಣದ ವ್ಯಕ್ತಿಗಳ ಇತಿಹಾಸ, ಮಹಿಮೆ, ತಮ್ಮ ಸರಣಿ   ಉಪನ್ಯಾಸದ ಸಂಗ್ರಹವನ್ನು ಓದುಗರಿಗೆ ಉಣಬಡಿಸಿದ್ದಾರೆ. ಮಹಾಭಾರತದ ಅಸಂಖ್ಯ ಪಾತ್ರ ಪ್ರಸಂಗಗಳ ಪರಿಚಯ, ಅದರಲ್ಲೂ ಮುಖ್ಯ ಪಾತ್ರಗಳನ್ನು ಘಟನೆಗಳನ್ನು ಪರಿಚಯಿಸುವ ಬದಲು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸ ಮಾಡಿದ್ದಾರೆ. ವ್ಯಾಸ ಭಾರತದ ಸ್ಥೂಲ ವಿವರ, ಪರಿಚಯವನ್ನು ಮಾಡಿದ್ದಾರೆ. ಇವರು ನೀಡಿರುವ ವಿಫುಲ ವಿವರಣೆ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ, ಸಂಸ್ಕೃತಿ ಚಿಂತಕರಿಗೆ ನೆರವಾಗುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಹಾಭಾರತದ ವಿಸ್ತೃತ ಪಾತ್ರಪ್ರಪಂಚದ ವಿಶ್ವಕೋಶವಾಗಿದೆ!  


ಅ ರಾ ಮಿತ್ರ ಅವರು, ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ ವ್ಯಾಸಂಗ ಪೂರ್ಣಗೊಳಿಸಿದ ನಂತರ ಬೆಂಗಳೂರಿನ  ಸೇಂಟ್ ಜೋಸೆಫ್ ಕಾಲೇಜಿನಲ್ಲಿ 1955 ರಂದು ಕನ್ನಡ ಅಧ್ಯಾಪಕರಾಗಿ ಉದ್ಯೋಗ ಪ್ರಾರಂಭಿಸಿದರು. 1973ರ ತನಕ ಸೇವೆಸಲ್ಲಿಸಿ, ನಂತರ, ಸರಕಾರಿ  ಕಾಲೇಜು ಶಿಕ್ಷಣ ಇಲಾಖೆಯಲ್ಲಿ ರೀಡರ್ ಆಗಿ ನೇಮಕಗೊಂಡರು. ಮಡಿಕೇರಿ, ತುಮಕೂರು, ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕೆಲಸ ಮಾಡಿ ಅಧ್ಯಾಪಕರಾದರು. ಅಮೇರಿಕನ್ ಪೀಸ್ ಕೋರ್ ನಲ್ಲಿ ಸಹ ಕನ್ನಡ ಶಿಕ್ಷಕರಾಗಿದ್ದುದು ವಿಶೇಷ! ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅ.ರಾ.ಮಿತ್ರ  ಅವರು ಪ್ರಾಂಶುಪಾಲರಾಗಿ ನಿವೃತ್ತರಾದರು. ತಮ್ಮ ಕಾರ್ಯಕ್ಷೇತ್ರವನ್ನು ಆತ್ಮೀಯವಾಗಿ ಕಂಡು, ಪರಿಸರ ಮೆಚ್ಚಿ, ಸೌಹಾರ್ದತೆ ಕಂಡುಕೊಂಡ  ವಿದ್ವಾಂಸರು.


ಇವರ ಮಾತುಗಾರಿಕೆ ಜನರನ್ನು ಮೋಡಿ ಮಾಡುತ್ತದೆ. ನಿರರ್ಗಳವಾಗಿ ಹಳಗನ್ನಡ, ನಡುಗನ್ನಡ, ನವೋದಯ, ನವ್ಯ, ನವ್ಯೋತ್ತರ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ತಿಳಿಸಿ ಹೇಳುವ ಚಿಂತನೆಗೆ ಚಾಲನೆ ನೀಡಬಲ್ಲ ಚಾಕಚಕ್ಯತೆ ಪಡೆದ ಮಹನೀಯರು.


ಅನೇಕ ಶಾಲಾ ಕಾಲೇಜಿನಲ್ಲಿ, ಇವರ ಹಾಸ್ಯ ಭರಿತ ಭಾಷಣ, ಚಿಂತನಶೀಲ ಮಾತುಗಳನ್ನು ಕೇಳುವುದೇ ಸೊಗಸು! ಅನೇಕ ಹಾಸ್ಯ ಗೋಷ್ಠಿಯನ್ನು ನಿಯೋಜಿಸಿ ಪ್ರಖ್ಯಾತರಾದವರು. ಕುಮಾರವ್ಯಾಸ, ಲಕ್ಷ್ಮೀಶ, ಡಿವಿಜಿ ಮೊದಲಾದವರ ಬಗ್ಗೆ ಅನೇಕ ಉಪನ್ಯಾಸ ಮಾಡಿ, ಜನರನ್ನು ರಂಜಿಸಿದ ಮಹಾನುಭಾವರು. ಗಮಕ ವಾಚನಕ್ಕೆ ಇವರು ವ್ಯಾಖ್ಯಾನ ಮಾಡಿ ವಿಕ್ರಮ ಸಾಧಿಸಿದ ಪಂಡಿತರು.


ಶಾಸ್ತ್ರ ಸಾಹಿತ್ಯ, ನಾಲ್ಕು ಪ್ರಬಂಧ ಸಂಕಲನಗಳು, ಕೈಲಾಸಂ ಬದುಕು ಬರಹ, ವಚನಕಾರರು ಮತ್ತು ಶಬ್ಧಕಲ್ಪ ವಿಮರ್ಶೆ, ಎರಡು ಸಂಪಾದಿತ ಗ್ರಂಥಗಳು, ಇತರರೊಡನೆ ಸಂಪಾದಿತ ಎರಡು ಗ್ರಂಥಗಳು, ಆರು ಅನುವಾದ ಕೃತಿಗಳನ್ನು ಬರೆದು ಕನ್ನಡ ಓದುಗರಿಗೆ, ಶಿಷ್ಯರಿಗೆ ಉಣಬಡಿಸಿದ್ದಾರೆ.  

ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಗೋರೂರು ಸಾಹಿತ್ಯ ಪ್ರಶಸ್ತಿ, ಧರ್ಮಶ್ರೀ ನಗೆರಾಜ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಅನಕೃ ಪ್ರಶಸ್ತಿ ನೀಡಿ ಅ ರಾ ಮಿತ್ರರನ್ನು ಅನೇಕ ಸಂಘಸಂಸ್ಥೆಗಳು ಗೌರವಿಸಿವೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top