ನಾವು - ನಮ್ಮವರು, ನಮ್ಮಂತೆಯೇ ಎಲ್ಲರು : ಇದು ಹೃದಯ ಶ್ರೀಮಂತಿಕೆ

Upayuktha
0

 


ಹೃದಯ ಶ್ರೀಮಂತಿಕೆ ಮನಸ್ಸಿನ ಭಾವನೆಯಾಗಿದೆ. ಈ ಭಾವನೆಯು ವಿಶಾಲವಾದಷ್ಟು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೃದಯ ಶ್ರೀಮಂತಿಕೆಯ ಭಾವನೆ ಸಂಕುಚಿತ ಕೊಂಕುಬುದ್ದಿಯ ಮನಸ್ಸಿನ ಭಾವನೆಗೆ ವಿರುದ್ಧವಾದುದಾಗಿದೆ. ನಾವು - ನಮ್ಮವರು, ನಮ್ಮಂತೆಯೇ ಎಲ್ಲರು, ಜಗದ ಜನರೆಲ್ಲಾ ಬದುಕಲು ಪ್ರಕೃತಿ ಅವಕಾಶ ನೀಡಿದೆ. ಅಂದರೆ ಪ್ರಕೃತಿಯೂ ಹೃದಯ ಶ್ರೀಮಂತಿಕೆಯನ್ನು ಹೊಂದಿದೆ. ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಲೂ ಈ ಸೃಷ್ಟಿ ಅವಕಾಶವನ್ನು ನೀಡಿದೆ. ಹೃದಯ ಶ್ರೀಮಂತಿಕೆ ಎಂದರೆ ಹಣದ ಶ್ರೀಮಂತಿಕೆಯಲ್ಲ, ಬದಲಿಗೆ ಗುಣದ ಶ್ರೀಮಂತಿಕೆಯಾಗಿರುತ್ತದೆ. ಹೃದಯ ಶ್ರೀಮಂತಿಕೆಯಂತಹ ಗುಣ ಸ್ವಭಾವವು ನಮ್ಮನ್ನು ಮೇರು ವ್ಯಕ್ತಿತ್ವಕ್ಕೆ ಒಯ್ಯುತ್ತದೆ. ಈ ಗುಣ ಸ್ವಭಾವವನ್ನೇ ಹೃದಯ ವೈಶಾಲ್ಯತೆ ಎಂದೂ ಹೇಳಲಾಗುತ್ತದೆ. ಹೃದಯ ಶ್ರೀಮಂತಿಕೆಯು ಜಾತಿ, ಮತ, ಧರ್ಮ, ಪಂಥ, ಲಿಂಗ, ವರ್ಣ, ಭಾಷೆ, ದೇಶದ ವಿಚಾರಗಳನ್ನು ಮೀರಿ ವಸುದೈವ ಕುಟುಂಬಕಂ" ಅಂದರೆ ವಿಶ್ವವೆಲ್ಲಾ ಒಂದೇ ಕುಟುಂಬ ಎಂಬ ತತ್ವವನ್ನು ಸಾರುತ್ತದೆ. ರಾಷ್ಟ್ರಕವಿ ರಸ ಋಷಿ ಕುವೆಂಪುರವರ ಹೃದಯ ಶ್ರೀಮಂತಿಕೆ ಈ ವಿಶ್ವಕ್ಕೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಪಂಚ ಮಹಾ ತತ್ವಗಳನ್ನು ನೀಡಿದೆ. ಈ ಸೃಷ್ಟಿಯಲ್ಲಿ ಮನುಷ್ಯನಾಗಿ ಹುಟ್ಟಿದವನ ಮತವು ಮನುಜಮತವಾಗಿರಬೇಕು. ಇದನ್ನು ಪಾಲಿಸುವವರು ಮೌಢ್ಯತೆಯಿಂದ ಹೊರಬಂದು ವಾಸ್ತವಿಕ ಜಗತ್ತನ್ನು ಅನುಭವಿಸಬೇಕು. ವೈಜ್ಞಾನಿಕ ಮನೋಭಾವವು ವಿಶ್ವ ಕಲ್ಯಾಣದ ಮಾರ್ಗವಾಗಿದ್ದು ಅದೇ ವಿಶಾಲ ದೃಷ್ಟಿಕೋನದ ವಿಶ್ವಪಥವಾಗಬೇಕು. ಎಲ್ಲರ ಬಾಳಿನ ದಾರಿ ಒಳಿತಿನ ಕಡೆಗೆ ಸಾಗಲು ಪ್ರಯತ್ನಿಸಬೇಕು. ಸಕಲ ಜನರ ಸರ್ವ ಕ್ಷೇತ್ರಗಳ ಉದ್ಧಾರವೇ ಸರ್ವೋದಯ ತತ್ವವಾಗಿದೆ. ವಿಶ್ವದೇಳಿಗೆ ಸಕಲ ಮನಸ್ಸುಗಳ ಧನಾತ್ಮಕ ಪರಿವರ್ತನೆಯಿಂದ ಮಾತ್ರ ಸಾಧ್ಯವಾದೀತು. ಕೈಲಾದಷ್ಟು ದುಡಿದು ತಿನ್ನಬೇಕು. ಶ್ರದ್ಧೆ ಮತ್ತು ನಿಷ್ಠೆಗಳಲ್ಲಿ ನಂಬಿಕೆಯಿಟ್ಟು ಜಗದೋದ್ಧಾರಕ್ಕೆ ಪರಿಶ್ರಮಿಸಿದರೆ ಸರ್ವೋದಯವು ಅಸಾಧ್ಯವೇನಲ್ಲ. ಎಲ್ಲಾ ತತ್ವಗಳೊಂದಿಗೆ ಕೈಜೋಡಿಸಿ ಸಮಾನತೆಯ ಸಾಧನೆ ಸಮನ್ವಯ ಮಾಡಬೇಕು. ಈ ಎಲ್ಲಾ ತತ್ವಗಳು ಬೇರೆಲ್ಲೂ ಇರುವುದಿಲ್ಲ. ಮನುಷ್ಯನ ಮನಸ್ಸಿನಲ್ಲಿಯೇ ಕೇಂದ್ರಿತವಾಗಿರುತ್ತವೆ. ಇವುಗಳನ್ನು ಜಾಗೃತಗೊಳಿಸಿ ಸಮನ್ವಯಿಸುವ ಮನೋಶಕ್ತಿಯನ್ನು ಬೆಳೆಸಿಕೊಂಡು ಪೂರ್ಣದೃಷ್ಠಿಯತ್ತ ಸಾಗುವುದೇ ಹೃದಯ ಶ್ರೀಮಂತಿಕೆಯಾಗಿದೆ. ಅಲ್ಪದೃಷ್ಠಿ ಮತ್ತು ಸಂಕುಚಿತ ಮನೋಭಾವನೆಯು ನಮ್ಮನ್ನು ಕುಬ್ಜ ವ್ಯಕ್ತಿತ್ವದವರನ್ನಾಗಿ ಮಾಡಿಬಿಡುತ್ತವೆ. ಅಲ್ಪ ಮಾನವರಾಗದಂತೆ ನಾವೇ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂಬ ವಿಶ್ವಮಾನವ ಸಂದೇಶವನ್ನೇ ನೀಡಿದ್ದಾರೆ ನಮ್ಮ ಹೆಮ್ಮೆಯ ಕವಿ ಕುವೆಂಪುರವರು. ಮಹಾತ್ಮಾ ಗಾಂಧೀಜಿಯವರ ಹೃದಯ ಶ್ರೀಮಂತಿಕೆ ಇಂದು ಅವರನ್ನು ವಿಶ್ವಮಾನವರನ್ನಾಗಿಸಿ, ವಿಶ್ವದ ಶಾಂತಿದೂತರನ್ನಾಗಿಸಿದೆ. ಪ್ರಪಂಚದಲ್ಲಿ ಯಾರೂ ಮತ್ತೊಬ್ಬರ ಬಿಗಿಮುಷ್ಠಿಯಲ್ಲಿ ಸಿಲುಕಬಾರದು. ಸ್ಚೇಚ್ಛಾಚಾರ ರಹಿತ ಸ್ವಾತಂತ್ರ್ಯವನ್ನು ಅನುಭವಿಸಲು ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ಅರ್ಹರಾಗಿರುತ್ತಾರೆ ಎಂಬ ಸಂದೇಶದೊಂದಿಗೆ ಗಾಂಧೀಜಿಯವರು ಅಮರರಾಗಿದ್ದಾರೆ. ಹೃದಯ ಶ್ರೀಮಂತಿಕೆಯು ಜಗತ್ತಿನಲ್ಲಿ ಎಲ್ಲಾ ಐಶ್ವರ್ಯಕ್ಕಿಂತಲೂ ಮಿಗಿಲಾದುದು. ಇದು ಎಲ್ಲ ಹೃದಯಗಳ ಮನಸ್ಸಿನಲ್ಲೂ ಸರ್ವಸಿರಿಯೊಂದಿಗೆ ಸಮೃದ್ಧವಾಗಿ ಬೆಳಗಬೇಕು. ಬುದ್ಧಿವಂತಿಕೆಗೂ ಹೃದಯ ಶ್ರೀಮಂತಿಕೆಗೂ ಒಂದು ಉದಾಹರಣೆಯನ್ನು ಹಿರಿಯ ಜೀವನಾನುಭವಿಗಳು ಈ ರೀತಿ ನೀಡುತ್ತಾರೆ.


ದಾರಿಯಲ್ಲಿ ಮುಳ್ಳು ಬಿದ್ದಿದ್ದಾಗ ಬದಿಯಲ್ಲಿ ಸರಿದು ಹೋಗುವುದು ಬುದ್ಧಿವಂತಿಕೆ. ಆದರೆ ಬೇರೆಯವರಾರಿಗೂ ಆ ಮುಳ್ಳಿನಿಂದ ತೊಂದರೆ ಆಗಬಾರದು ಎಂದು ಅದನ್ನು ಪಕ್ಕಕ್ಕೆ ತೆಗೆದು ಹಾಕಿ ಹೋಗುವುದು ಹೃದಯವಂತಿಕೆ. ಆದ್ದರಿಂದಲೇ ಬುದ್ಧಿವಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದೆಂದು ಹಿರಿಯರು ಹೇಳಿದ್ದಾರೆ. ಹೃದಯ ಶ್ರೀಮಂತಿಕೆಯ ಸ್ವಭಾವವು ನಿಸ್ವಾರ್ಥ ಸೇವೆಗೆ ಸೇರಿದುದಾಗಿದೆ. ಅಂದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ತಮಗೇನಾದರೂ ಪರವಾಗಿಲ್ಲ, ಆದರೆ ಮುಂದಿನ ಪೀಳಿಗೆ ಬ್ರಿಟೀಷರ ದಾಸ್ಯಕ್ಕೆ ಒಳಗಾಗಬಾರದು, ಸ್ವತಂತ್ರವಾಗಿ ಬದುಕಬೇಕು ಎಂಬ ನಿಸ್ವಾರ್ಥ ಮನೋಭಾವದಿಂದ ಹೋರಾಟ ಮಾಡಿದರು. ಕೆಲವರು ಸೆರೆವಾಸ ಅನುಭವಿಸಿದರು. ಕೆಲವರು ನೇಣಿಗೆ ಬಲಿಯಾದರು. ಮತ್ತೆ ಕೆಲವರು ಅನ್ನ- ನೀರಿಲ್ಲದೆ ಉಪವಾಸದಿಂದ ಸತ್ತರು. ಅಂದು ಆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಮನೋಭಾವದಲ್ಲಿ ಬ್ರಿಟೀಷರಿಂದ ಭಾರತವನ್ನು ಮುಕ್ತಗೊಳಿಸಿ, ಭಾರತೀಯರು ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಮಹದಿಚ್ಛೆಯಲ್ಲಿ ನಾವು ಅವರ ಹೃದಯ ಶ್ರೀಮಂತಿಕೆಯನ್ನು ಕಾಣಬಹುದು. ಭಾರತ ದೇಶಕ್ಕೆ "ಬದುಕು ಮತ್ತು ಬದುಕಲು ಬಿಡು" ಎಂಬ ತತ್ವವೇ ಮೂಲಾಧಾರವಾಗಿದೆ. ಈ ತತ್ವದ ಮುಖ್ಯ ಧ್ಯೇಯವು ಹೃದಯ ಶ್ರೀಮಂತಿಕೆಯೇ ಆಗಿದೆ. 


ಪ್ರಮುಖ ಸಾಮಾಜಿಕ ಧಾರ್ಮಿಕ ಸುಧಾರಕರಾದ ಮತ್ತು ಜಗದೋದ್ಧಾರಕ್ಕಾಗಿ ನಡುರಾತ್ರಿಯಲ್ಲಿ ಎದ್ದ ಸಿದ್ಧಾರ್ಥ ತಪೋನಿರತನಾಗಿ ಗೌತಮ ಬುದ್ಧರೆಂದೆನಿಸಿ, ಹೃದಯ ಶ್ರೀಮಂತಿಕೆಯ ನಡತೆಯಿಂದ ವಿಶ್ವಶಾಂತಿಯನ್ನು ಬಯಸಿ, ಶಾಂತಿ ಸ್ಥಾಪನೆಯ ಪ್ರಯತ್ನದಲ್ಲಿ ಕಾರ್ಯಪ್ರವೃತ್ತ ರಾದರು. ವರ್ಧಮಾನ ಮಹಾವೀರರು ಹೃದಯ ಶ್ರೀಮಂತಿಕೆಯ ಗುಣಭಾವದಿಂದ ಅಹಿಂಸಾ ಮಾರ್ಗವನ್ನು ಒತ್ತಿ ಹೇಳಿದರು ಮತ್ತು ಅದನ್ನೇ ಅನುಸರಿಸಿದರು. ಹೀಗೆಯೇ ಬಸವೇಶ್ವರರು, ಅಲ್ಲಮಪ್ರಭು, ರಾಮಕೃಷ್ಣ ಪರಮಹಂಸ, ಶಾರದಾದೇವಿ, ಸ್ವಾಮಿ ವಿವೇಕಾನಂದ, ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನದ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್, ಇವರೆಲ್ಲರೂ ತಮ್ಮ ಹೃದಯ ಶ್ರೀಮಂತಿಕೆಯ ಭಾವದಿಂದ ನೊಂದವರ ಬಾಳಿಗೆ ಬೆಳಕಾದರು. ಜೀಸಸ್ ಕ್ರೈಸ್ಟ್ ರವರಿಗೆ ಮರಣದಂಡನೆ ನೀಡಿ, ಶಿಲುಬೆಗೇರಿಸಿದಾಗಲೂ ಅವರ ಹೃದಯ ಶ್ರೀಮಂತಿಕೆಯ ಮಾತುಗಳು ಹೇಗಿದ್ದವೆಂದರೆ, " ಪ್ರಭು, ಈ ಪಾಪಿಗಳನ್ನು ಕ್ಷಮಿಸು, ಇವರು ಏನು ಮಾಡುತ್ತಿದ್ದಾರೆಂದು ಇವರೇ ತಿಳಿಯರು." ಎಂದರು. ಜೀಸಸ್ ರ ಅಂದಿನ ಹೃದಯ ಶ್ರೀಮಂತಿಕೆಯ ಮಾತುಗಳು ಅವರನ್ನು ದೇವಮಾನವರನ್ನಾಗಿಸಿತು. ಮಹಮ್ಮದ್ ಪೈಗಂಬರರು ತಮ್ಮ ಹೃದಯ ಶ್ರೀಮಂತಿಕೆಯ ಗುಣ ಮತ್ತು ನಡತೆಯನ್ನು ಕುರ್ ಆನ್ ಎಂಬ ಪವಿತ್ರ ಗ್ರಂಥದಲ್ಲಿ ದಾನ, ಧರ್ಮ, ಪ್ರಾರ್ಥನೆ ಇವುಗಳ ಮೂಲಕ ಸನ್ಮಾರ್ಗವನ್ನು ಬೋಧಿಸಿದ್ದಾರೆ. ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಕ್ರಮವಾಗಿ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರು ತಮ್ಮ ಹೃದಯ ಶ್ರೀಮಂತಿಕೆಯ ಗುಣಗಳನ್ನು ಆದರ್ಶ ಮೂರ್ತಿ ಶ್ರೀರಾಮಚಂದ್ರ ಹಾಗೂ ಶ್ರೀಕೃಷ್ಣರಲ್ಲಿ ತುಂಬಿದ್ದಾರೆ. ಆದ್ದರಿಂದಲೇ ಮನುಕುಲವಿರುವ ತನಕ ಈ ಗ್ರಂಥಗಳು ಅಜರಾಮರವಾಗಿವೆ. ಮದರ್ ತೆರೇಸಾರವರ ಹೃದಯ ಶ್ರೀಮಂತಿಕೆ ಅವರನ್ನು ವಿಶ್ವಮಾತೆಯ ಪಟ್ಟಕ್ಕೇರಿಸಿತು. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ  ಹೃದಯ ಶ್ರೀಮಂತಿಕೆಯು ಅನ್ನ, ಅಕ್ಷರ, ಆಶ್ರಯ ನೀಡುವ ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದೆನಿಸಿತು. ಊಟ, ವಸತಿ, ಶಿಕ್ಷಣ, ಆರೋಗ್ಯ ಒದಗಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ  ಹೃದಯ ಶ್ರೀಮಂತಿಕೆಯು ವಿಶ್ವಕ್ಕೆ ಮಾದರಿಯಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರ ಶಿಕ್ಷಣ ಕ್ರಾಂತಿಯು  ಹೃದಯ ಶ್ರೀಮಂತಿಕೆಯ ಸ್ವಭಾವವನ್ನು ಇಂದಿಗೂ ಬೋಧಿಸುತ್ತಿರುವುದು ಅವಿಸ್ಮರಣೀಯ ವಾಗಿದೆ. ನಾವೂ ಹೃದಯಶ್ರೀಮಂತಿಕೆಯ ಭಾವವನ್ನು ಬೆಳೆಸಿಕೊಳ್ಳೋಣ. ಒಳ್ಳೆಯದನ್ನೆ ಆಲೋಚಿಸೋಣ, ಒಳ್ಳೆಯದನ್ನೆ ಮಾಡೋಣ. ಒಳ್ಳೆಯ ನಾಗರಿಕರಾಗೋಣ. 


-ಕೆ.ಎನ್.ಚಿದಾನಂದ . ಹಾಸನ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top