ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಮಾವೇಶದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಿಂದ ಮಾರ್ಗದರ್ಶನ
ಮಂಗಳೂರು: ಸುಭದ್ರ, ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಎಲ್ಲ ಭಾರತೀಯರ ಮನಸ್ಸುಗಳನ್ನು ಒಂದುಗೂಡಿಸಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ದೇಶದ ಬೊಕ್ಕಸದಿಂದ ಒಂದೇ ಒಂದು ರೂ ಕೂಡ ದುರ್ಬಳಕೆ ಆಗದಂತೆ ತಡೆದು ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿದವರು ಪ್ರಧಾನಿ ಮೋದಿ. ಭಾರತದ ಸರ್ವಾಂಗೀಣ ಅಭಿವೃದ್ಧಿಯೇ ಪರಮೋಚ್ಚ ಧ್ಯೇಯವಾಗಿ ಇಟ್ಟುಕೊಂಡು ಕಾರ್ಯಪ್ರವೃತ್ತರಾದವರು ಅವರು. ಭಾರತದ ಭದ್ರತೆಯ ವಿಚಾರದಲ್ಲಿ ಕಿಂಚಿತ್ತೂ ರಾಜಿಯಿಲ್ಲದೆ ದೇಶದ ಶತ್ರುಗಳನ್ನು ಮಟ್ಟಹಾಕಿದವರು ಮೋದಿ. ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚು ಮಾಡಿದವರು ಅವರು. ಇಂತಹ ನಾಯಕನನ್ನು ನಾವು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನ ಧರ್ಮ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿ. ಭಾನುಪ್ರಕಾಶ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಆಯೋಜಿಸಲಾದ ಕೈಗಾರಿಕಾ ಪ್ರಕೋಷ್ಠದ ಸಮಾವೇಶದಲ್ಲಿ ಅವರು ಮಾತನಾಡಿದರು.
2014ರಿಂದ 2024ರ ವರೆಗಿನ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಒಳಗೆ ಹಾಗೂ ಹೊರಗೆ ಆದ ಪರಿವರ್ತನೆಗಳನ್ನು ಗಮನಿಸಿ. ಭಾರತದ ಒಳಗೆ ದೇಶ ಮತ್ತಷ್ಟು ಬಲಿಷ್ಠವಾಗಿದ್ದರೆ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ಹೆಚ್ಚಾಗಿದೆ. ಭಾರತವನ್ನು ಇಂದು ಜಗತ್ತು ನೋಡುವ ದೃಷ್ಟಿ ಬದಲಾಗಿದೆ. ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಕಾಲ ಭಾರತದ ಪಾಲಿಗೆ ಬಂದಿದೆ. ಕೇವಲ ಹತ್ತು ವರ್ಷಗಳ ಮೊದಲು ಇದ್ದ ಭಾರತಕ್ಕೂ ಈಗಿನ ಭಾರತಕ್ಕೂ ಇರುವ ವ್ಯತ್ಯಾಸ ಎಲ್ಲರಿಗೂ ಕಣ್ಣಿಗೆ ಎದ್ದು ಕಾಣುತ್ತದೆ. ಇಂತಹ ಬದಲಾವಣೆ ಸಾಧ್ಯವಾಗಿದ್ದು ನರೇಂದ್ರ ಮೋದಿ ಅವರಂತಹ ಬಲಿಷ್ಠ, ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವದಿಂದ. ಇದನ್ನು ಅಲ್ಲಗಳೆಯಲು ವಿರೋಧ ಪಕ್ಷಗಳಿಗೂ ಸಾಧ್ಯವಿಲ್ಲ ಎಂದು ಭಾನುಪ್ರಕಾಶ್ ಹೇಳಿದರು.
ಆರ್ಥಿಕ ರಂಗದಲ್ಲಿ ಭಾರತ ಇಂದು ಜಗತ್ತಿನ ಐದನೇ ಪ್ರಮುಖ ರಾಷ್ಟ್ರವಾಗಿದೆ. ಕೈಗಾರಿಕೆಗಳು, ಸ್ಟಾರ್ಟಪ್ ಉದ್ಯಮಗಳು, ಕೃಷಿ, ಆರೋಗ್ಯ, ತಂತ್ರಜ್ಞಾನ, ವಿಜ್ಞಾನ, ರಕ್ಷಣೆ- ಹೀಗೆ ಯಾವ ರಂಗದಲ್ಲಿ ಗಮನಿಸಿದರೂ ಭಾರತದ ದಾಪುಗಾಲಿನ ಅಭಿವೃದ್ಧಿ ಎದ್ದು ಕಾಣುವಂತಿದೆ. ಇಂತಹ ನಾಯಕತ್ವ ಒದಗಿಸಿದ ಮೋದಿ ಅವರನ್ನು ಭಾರೀ ಬಹುಮತದಿಂದ ಮತ್ತೊಮ್ಮೆ ಪ್ರಧಾನಿ ಅಧಿಕಾರಕ್ಕೆ ತಂದರೆ ಮುಂದಿನ ಐದು ವರ್ಷಗಳಲ್ಲಿ ಆಗುವ ಅಭಿವೃದ್ಧಿ ಮತ್ತು ಜಾಗತಿಕ ಬದಲಾವಣೆಗಳನ್ನು ತಡೆಯಲು ಯಾರಿಂದಲೂ ಆಗದು ಎಂದು ಅವರು ನುಡಿದರು.
ಬಲಿಷ್ಠ ಭಾರತದ ನಿರ್ಮಾಣದಲ್ಲಿ ರೈತ, ಕಾರ್ಮಿಕ ಮತ್ತು ಸೈನಿಕರ ಪಾತ್ರವನ್ನು ಪ್ರಧಾನಿ ಮೋದಿ ಮನಗಂಡಿದ್ದಾರೆ. ಹೀಗಾಗಿಯೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮಾಜಿ ಸೈನಿಕರಾದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ಅವಕಾಶ ನೀಡಿದ್ದಾರೆ. ಅವರನ್ನು ಜನತೆ ಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿ ಕಳಿಸುವ ಮೂಲಕ ಮೋದಿ ಅವರಿಗೆ ಬಲ ತುಂಬಬೇಕಿದೆ. ರಾಷ್ಟ್ರ ರಾಜಧಾನಿ ದೆಹಲಿ ಗಡಿಗಳನ್ನು ಬಂದ್ ಮಾಡಿ, ರೈತರ ಪ್ರತಿಭಟನೆಯ ಸೋಗಿನಲ್ಲಿ ಅಶಾಂತಿ ಸೃಷ್ಟಿಸುವವರು ಯಾರು ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಹೆಜ್ಜೆ ಹೆಜ್ಜೆಗೂ ಅಭಿವೃದ್ಧಿಯ ಯೋಜನೆಗಳಿಗೆ ಅಡ್ಡಗಾಲು ಹಾಕುವ ಶಕ್ತಿಗಳೂ ಯಾರೆಂಬುದು ದೇಶದ ಜನತೆಗೆ ಅರಿವಾಗಿದೆ. ಅಂಥವರಿಗೆ ಮಣೆ ಹಾಕದೆ ಪ್ರಧಾನಿ ಮೋದಿ ಅವರನ್ನು ಬಲಪಡಿಸಿದ್ದೇ ಆದಲ್ಲಿ ಮುಂದಿನ ಐವತ್ತು ವರ್ಷಗಳ ಕಾಲ ಭಾರತದ ತಂಟೆಗೆ ಯಾವ ದೇಶವೂ ಬರಲಾರದು ಎಂದು ಭಾನುಪ್ರಕಾಶ್ ನುಡಿದರು.
ದೇಶ ಕಟ್ಟುವುದಕ್ಕೆ ಸಲಹೆ ಕೊಡಿ ಎಂದು ಪ್ರಧಾನಿ ಮೋದಿ ಕೇಳಿದರೆ, ಅವರವನ್ನೇ ಕೊಲ್ಲುವ ಯೋಜನೆ ಹಾಕಿಕೊಳ್ಳುವವರನ್ನು ಏನೆಂದು ಕರೆಯಬೇಕು?
ಇಂದು ವಿದೇಶಗಳಲ್ಲಿ ಮೋದಿ ಅವರನ್ನು ಬನ್ನಿ ಎಂದು ಕರೆಯುತ್ತಿದ್ದಾರೆ. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೀಸಾ ನಿರಾಕರಿಸಿದ್ದ ಅದೇ ಅಮೆರಿಕ, ಮೋದಿ ಅವರು ಪ್ರಧಾನಿಯಾದಾಗ ಕೆಂಪು ಹಾಸಿನ ಸ್ವಾಗತ ನೀಡಿ ಕರೆಸಿಕೊಂಡಿತು. ಆಆದರೆ ಅಂದು ವೀಸಾ ನಿರಾಕರಿಸಿದ ಸಂದರ್ಭದಲ್ಲಿ ಕೇಂದ್ರದಲ್ಲಿ ಆಳುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭಾರತದ ಒಂದು ರಾಜ್ಯದ ಮುಖ್ಯಮಂತ್ರಿಗೆ ಆಗುತ್ತಿರುವ ಅವಮಾನದ ಬಗ್ಗೆ ಯಾವ ಪ್ರತಿರೋಧವನ್ನೂ ತೋರಲಿಲ್ಲ. ವಿದೇಶಾಂಗ ನೀತಿಯಲ್ಲಿ ಒಬ್ಬ ಮುಖ್ಯಮಂತ್ರಿಯ ಪರ ನಿಲ್ಲದ ಪಕ್ಷ ಜನರ ಪರವಾಗಿ ನಿಲ್ಲುತ್ತದೆಯೇ...?
ರಷ್ಯಾ-ಯುಕ್ರೇನ್ ಯುದ್ಧ ನಡೆದಾಗ ಎರಡೂ ದೇಶಗಳ ಪ್ರಧಾನಿಗಳ ಜತೆ ಏಕಕಾಲಕ್ಕೆ ಮಾತನಾಡಿ ಭಾರತೀಯರ ಸುರಕ್ಷಿತ ತೆರವಿಗೆ ಅವಕಾಶ ಮಾಡಿಕೊಟ್ಟಿರುವುದು ಪ್ರಧಾನಿ ಮೋದಿ. ಒಂದು ಗಂಟೆ ಯುದ್ಧ ಸ್ಥಗಿತ ಮಾಡಿ ಭಾರತದ ಧ್ವಜ ಹಿಡಿದುಕೊಂಡು ಹೋಗುವವರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಹೇಳಿ ಸುರಕ್ಷಿತವಾಗಿ ತೆರಳಲು ಎಂದು ಎರಡೂ ದೇಶಗಳವರು ಅವಕಾಶ ಮಾಡಿಕೊಟ್ಟರು. ಅಲ್ಲಿ ಪ್ರಧಾನಿ ಮೋದಿ ಅವರ ವರ್‍ಚಸ್ಸು ಕೆಲಸ ಮಾಡಿತ್ತು ಎಂದು ಭಾನುಪ್ರಕಾಶ್ ನೆನಪಿಸಿದರು.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿ ಒಳಗೆ ನುಗ್ಗಿ ಶತ್ರುಗಳನ್ನು ಹೊಡೆದು ಬಂದ ಸೇನೆ ನಮ್ಮದು. ಒಂದೇ ಒಂದು ಸಾವು ನೋವು ಇಲ್ಲದೆ ಈ ಕಾರ್ಯ ಸಾಧಿಸಲಾಗಿತ್ತು. ಅದಕ್ಕೆ ನಾಯಕತ್ವ ಕೊಟ್ಟಿದ್ದು ಮೋದಿ ಸರಕಾರ. ಅಲ್ಲಿಂದ ಬಳಿಕ ಪಾಕಿಸ್ತಾನದ ಕಡೆಯಿಂದ ಯಾವುದೇ ಭಯೋತ್ಪಾದಕ ದಾಳಿಯೂ ನಡೆದಿಲ್ಲ.
ಇನ್ನು ಪ್ರಧಾನಿಯನ್ನು ಏಕವಚನದಲ್ಲಿ ಕರೆಯುವುದು, ಮೂರ್ಖ ಅನ್ನುವುದು, ಏನು ಬೇಕಾದರೂ ಹೇಳುವುದು ನಮ್ಮ ಸಂಸ್ಕೃತಿಯೇ...? ಎಲ್ಲರನ್ನೂ ಬನ್ನಿ ಎಂದು ಕರೆಯುವುದು, ನಿಮ್ಮ ಧರ್ಮವನ್ನು ಪಾಲನೆ ಮಾಡಬಹುದು ಅನ್ನುವ ಸಂಸ್ಕೃತಿ ನಮ್ಮದು. ಏಕದೇವತಾ ಉಪಾಸನೆ ಮಾಡುವವರೆಲ್ಲರೂ ಬಹುದೇವತಾ ಆರಾಧನೆ ಮಾಡುವುದು ಸರಿ ಇಲ್ಲ ಎಂದರೆ ಅದು ಪ್ರಶ್ನಾರ್ಹ.
ಲಕ್ಷಾಂತರ ಕೋಟಿ ರೂ.ಗಳ ವ್ಯವಹಾರದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯೂ ತನ್ನ ಮೈಮೇಲೆ ಬಾರದಂತೆ- ದೇಶದ ಹಣವನ್ನು ಅತ್ಯಂತ ಪಾರದರ್ಶಕವಾಗಿ ಅಭಿವೃದ್ಧಿಗೆ ಬಳಸುತ್ತಿರುವ ಪ್ರಧಾನಿ ನಮ್ಮ ನರೇಂದ್ರ ಮೋದಿ.. ಇಂತಹ ನಾಯಕ ಯಾವಗಲಾದರೂ ಸಿಗುತ್ತಾರಾ? ಇವರನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆ. ಸಮಾಜದ ಮುಂದೆ ಈ ಪ್ರಶ್ನೆಯಿದೆ.
500 ವರ್ಷದ ಹೋರಾಟದ ಬಳಿಕ ಈ ದೇಶದ ಅಸ್ಮಿತೆಯಾಗಿರುವ ರಾಮ ಮಂದಿರ ನಿರ್ಮಾಣ ಸಾಕಾರಗೊಂಡಿತು. ಆ ದಿನ ದೇಶಾದ್ಯಂತ ಎಲ್ಲರೂ ಐದೈದು ದೀಪಗಳನ್ನು ಹಚ್ಚುವಂತೆ ಕರೆ ನೀಡಿದರು. ಅದನ್ನು ಎಲ್ಲ ಭಾರತೀಯರೂ ಅನುಸರಿಸಿದರು. ಕೊರೊನಾ ಸಂದರ್ಭದಲ್ಲಿ ಜಾಗಟೆ ಬಾರಿಸಲು ಪ್ರಧಾನಿ ಮೋದಿ ಕರೆ ಕೊಟ್ಟರು, ಅದನ್ನೂ ಜನರು ಚಾಚೂ ತಪ್ಪದೆ ಪಾಲಿಸಿದರು. ಜಾಗಟೆ ಬಾರಿಸಿದರೆ ಕೊರೊನಾ ಹೋಗುತ್ತಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಎಲ್ಲರೂ ಒಂದೇ ಮನಸಿನಿಂದ ಕೆಲಸ ಮಾಡಿದರೆ ಕೊರೊನಾ ಸವಾಲನ್ನು ಎದುರಿಸಿ ಗೆಲ್ಲಬಹುದು ಎಂಬ ಮಾನಸಿಕತೆಯನ್ನು ಪ್ರಧಾಣಿ ಮೋದಿ ಹುಟ್ಟುಹಾಕಿದರು. ದೇಶದ ಜನರ ಮಾನಸಿಕತೆಯನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರು. ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ಕೊಟ್ಟರು.
ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗುವ ಮೋದಿ ಅವರ ನಾಯಕತ್ವ ಮತ್ತೊಮ್ಮೆ ಬೇಕಾಗಿದೆ. ಅವರನ್ನು ಪ್ರಚಂಡ ಬಹುಮತದೊಂದಿಗೆ ಮರಳಿ ಚುನಾಯಿಸಬೇಕಾಗಿದೆ ಎಂದು ಭಾನುಪ್ರಕಾಶ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಶಿಕಾರಿಪುರ ಕೃಷ್ಣಮೂರ್ತಿ ಪಕ್ಷದ ಕಾರ್ಯಕರ್ತರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದರು.
ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ,ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಭೆ, ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ,, ಕೈಗಾರಿಕಾ ಪ್ರಕೋಷ್ಠದ ಸಂಚಾಲಕರಾದ ಸತೀಶ್ ಕರ್ಕೇರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ