ಶೃಂಗೇರಿ: ತಲೆಮಾರುಗಳಿಂದ ಕೃಷಿ ಮಾಡುತ್ತ, ವಾಸದ ಮನೆ ಕಟ್ಟಿಕೊಂಡು ಬದುಕು ಮಾಡುತ್ತ ಬಂದಿರುವ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹತ್ತಾರು ಗ್ರಾಮಗಳ ನಿವಾಸಿಗಳನ್ನು ಜನ ವಿರೋಧಿ ಅರಣ್ಯ ಕಾಯಿದೆಗಳ ಕಾನೂನನ್ನು ಮುಂದಿಟ್ಟುಕೊಂಡು, ಭೂಮಿ ಮತ್ತು ವಾಸದ ಮನೆಗಳಿಗೆ ಹಕ್ಕು ಪತ್ರಗಳನ್ನು ಕೊಡದೆ ಸತಾಯಿಸಿ, ಈಗ ಮನೆ ಮತ್ತು ಹಕ್ಕಿಗೆ ಒಳಪಟ್ಟಂತಹ ಕೃಷಿ ಭೂಮಿಯ ಜಾಗವನ್ನು, ಸೆಕ್ಷನ್ 4(1) ನಿಂದ, ಸೆಕ್ಷನ್ 17ರ ಅಡಿ ಮೀಸಲು ಅರಣ್ಯ ಎಂದು ಘೋಷಿಸಲು ಮುಂದಾಗಿರುವ ಇಲಾಖೆಗಳ ಕ್ರಮವನ್ನು ವಿರೋಧಿಸಿ, ಸಂತ್ರಸ್ತ ರೈತರು, ಕೃಷಿ ಕಾರ್ಮಿಕರು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಈಗಾಗಲೆ ಅರಣ್ಯ ಇಲಾಖೆಯ ಸೆಕ್ಷನ್ 4(1) ನಿಂದ ,ಸೆಕ್ಷನ್ 17ರ ಅಡಿ ಮೀಸಲು ಅರಣ್ಯ ಎಂದು ಘೋಷಿಸಲು ತಕರಾರ್ ಅಕ್ಷೇಪಣೆಯನ್ನು ಸಲ್ಲಿಸಿದ್ದರೂ, ಸಲ್ಲಿಸಿ ಸರಿ ಸುಮಾರು 11 ವರ್ಷಗಳು ಕಳೆದರೂ, ಯಾವುದೇ ಪ್ರಯೋಜನವಾಗದೆ, ಸ್ಥಳ ಪರಿಶೀಲಿಸದೆ, ಗ್ರಾಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಮಾಜೂರು ಮಾಡದೆ, ಕಚೇರಿಯಲ್ಲಿ ಕುಳಿತು ಕೆಲಸವನ್ನು ಮುಂದುವರೆಸಿ ಜನ ವಿರೋಧಿ ಏಕ ಪಕ್ಷೀಯ ನಿರ್ಣಯವನ್ನು ತೆಗೆದುಕೊಂಡಿರುವುದು ಅನ್ಯಾಯದ ಪರಮಾವಧಿ ಎಂಬುದು ಗ್ರಾಮಸ್ಥರ ಆರೋಪ.
ಗ್ರಾಮಸ್ಥರ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರಿಶಾಹಿ ವರ್ಗ ಮತ್ತು ತಾತ್ಸರ ಧೋರಣೆ ತೋರುತ್ತಿರುವ ಸರ್ಕಾರಗಳ ವಿರುದ್ಧ ಅನಿವಾರ್ಯವಾಗಿ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ದಿನಾಂಕ 09.04.2024 ರಂದು ಸಭೆ ಮಾಡಿ, ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ.
ಬೇಡಿಕೆಗಳು ಏನೇನು?
1) 4(1) ಇಂದ ಸೆಕ್ಷನ್ 17 ಉದ್ಘೋಷಣೆ ಮಾಡುವ ಮೊದಲು, ಗ್ರಾಮಸ್ಥರ ಅನೇಕ ದಶಕಗಳಿಂದ ಕೃಷಿ ಮಾಡಿರುವ ಜಮೀನು ಮತ್ತು ವಾಸದ ಮನೆ ಹೊರತುಪಡಿಸಿಕೊಡಬೇಕು.
2) ಫಾರಂ 53, 57, 94/c, ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದು. ಪಾಹಣಿಯಲ್ಲಿ ಸೊಪ್ಪಿನ ಬೆಟ್ಟವೆಂದು ಬಂದಿರುವುದರಿಂದ ಕಾನೂನಿನ ತಿದ್ದುಪಡಿ ತಂದು ಹಕ್ಕು ಪತ್ರ ಕೊಡತಕ್ಕದ್ದು.
ನಿನ್ನೆ ಶೃಂಗೇರಿ ಸಮೀಪದ ಕಿಗ್ಗದ ಯಡದಾಳ್ ಗ್ರಾಮದಲ್ಲಿ ಗ್ರಾಮಸ್ತರು ಇದೇ ಬೇಡಿಕೆಗಳ ಮೇಲೆ ಚುನಾವಣಾ ಭಹಿಷ್ಕಾರಕ್ಕೆ ತೀರ್ಮಾನಿಸಿದ್ದರ ವರದಿಯಾಗಿದ್ದು, ಈ ದಿನ ಶೃಂಗೇರಿಯ ಮತ್ತೊಂದು ಗ್ರಾಮ ಮಸಿಗೆ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಲಾಗಿದೆ.
ಚುನಾವಣಾ ಬಹಿಷ್ಕಾರದ ಕಾವು ಬೇರೆ ಗ್ರಾಮಗಳಿಗೂ ವಿಸ್ತರಿಸುತ್ತಿದ್ದು, ಮುಂಬರುವ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಭಾರಿ ಮತದಾನ ಕ್ಷೀಣಿಸುವ ಸೂಚನೆ ಕಾಣುತ್ತಿದೆ.
ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೆ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ದಶಕಗಳ ಕಾಲದಿಂದ ಬಾಕಿ ಇರುವ ಒತ್ತುವರಿ 53, 57, 94/c, ಮತ್ತು ಅರಣ್ಯ ಕಾಯಿದೆಯ 4(1) ಇಂದ ಸೆಕ್ಷನ್ 17 ಗೆ ಕೃಷಿ ಭೂಮಿ ಮತ್ತು ವಾಸದ ಸ್ಥಳವನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮಕ್ಕೆ ತಕ್ಷಣ ಮುಂದಾಗಬೇಕಿದೆ.
ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
ಭರತ್ ರಾಜ್, ಕೆರೆಮನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ