ಎಸ್.ಡಿ.ಎಂ ಸಮಾಜಕಾರ್ಯ ರಾಷ್ಟ್ರೀಯ ವಿಚಾರ ಸಂಕಿರಣ
ಉಜಿರೆ: ಪರಿಸರಸ್ನೇಹಿ ಜೀವನಕ್ರಮ ರೂಢಿಸಿಕೊಳ್ಳುವುದರ ಮೂಲಕ ನಿಸರ್ಗ ಸಹಜ ಗುಣಲಕ್ಷಣಗಳೊಂದಿಗಿನ ಭೌಗೋಳಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್ ಮಂಜುನಾಥ್ ಅಭಿಪ್ರಾಯಪಟ್ಟರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಐಕ್ಯೂಎಸಿಯ ಸಹಭಾಗಿತ್ವದಲ್ಲಿ 'ನೈಸರ್ಗಿಕ ಭೌಗೋಳಿಕ ಸಂರಚನಾ ವ್ಯವಸ್ಥೆಯ ಸುಸ್ಥಿರೀಕರಣ: ಸಾಮುದಾಯಿಕ ಹೆಜ್ಜೆಗಳು' ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ವೈಯಕ್ತಿಕವಾಗಿ ನಿಸರ್ಗಸ್ನೇಹ ಸಾಧ್ಯವಾಗಿಸಿಕೊಳ್ಳಬೇಕು. ನಿಸರ್ಗಸ್ನೇಹಿ ಪ್ರಜ್ಞೆಯೊಂದಿಗೆ ಜೀವನಕ್ರಮದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಈ ಬಗೆಯ ವ್ಯಕ್ತಿಗತ ನಡೆಗಳು ನೈಸರ್ಗಿಕ ವ್ಯವಸ್ಥೆಯನ್ನು ಸುಸ್ಥಿರೀಕರಿಸಲು ನೆರವಾಗುತ್ತವೆ. ಪರಿಸರಪರವಾದ ಚಿಂತನೆಯನ್ನು ಜನರಲ್ಲಿ ನೆಲೆಗೊಳಿಸುತ್ತವೆ ಎಂದರು.
ನಿಸರ್ಗದ ಸಂರಚನಾ ವಿನ್ಯಾಸವು ಜೈವಿಕ ಸಂಸ್ಕೃತಿಯೊAದಿಗೆ ಬೆಸೆದುಕೊಂಡಿದೆ. ಮನುಷ್ಯನ ವರ್ತನೆಗಳನ್ನು ಅದು ಪ್ರಭಾವಿಸುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಈ ಬಂಧವನ್ನು ಕಾಯ್ದುಕೊಳ್ಳಬೇಕು. ಇದಕ್ಕಾಗಿ ನಿಸರ್ಗಸ್ನೇಹಿ ಜೀವನಕ್ರಮ ಅತ್ಯಾವಶ್ಯಕ ಎಂದು ಸ್ಪಷ್ಟಪಡಿಸಿದರು.
ನೈಸರ್ಗಿಕ ಸುಸ್ಥಿರತೆಯು ಉತ್ತಮ ವ್ಯಕ್ತಿತ್ವಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತದೆ. ವ್ಯಕ್ತಿಗತ ಆತ್ಮವಿಶ್ವಾಸ ಹಾಗೂ ಮನೋವೃತ್ತಿಯನ್ನು ಪ್ರಭಾವಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳು ಜನಜೀವನದ ಮೇಲೂ ಪರಿಣಾಮ ಉಂಟುಮಾಡುತ್ತವೆ. ಜನರ ಬದುಕಿನಲ್ಲಿ ಆಗುವ ಪಲ್ಲಟಗಳಿಗೆ ಕಾರಣವಾಗುತ್ತವೆ. ಈ ಸೂಕ್ಷ್ಮತೆಗಳನ್ನು ಗಮನದಲ್ಲಿರಿಸಿಕೊಂಡು ನಿಸರ್ಗದೊಂದಿಗೆ ನಂಟನ್ನು ಮರುಪ್ರತಿಷ್ಠಾಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ. ಮಾತನಾಡಿದರು. ನೈಸರ್ಗಿಕ ಭೌಗೋಳಿಕ ಸಂರಚನಾ ವ್ಯವಸ್ಥೆಯನ್ನು ಸುಸ್ಥಿರೀಕರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ. ಇಂಥ ಪ್ರಯತ್ನಗಳು ಯುವಮನಸ್ಸುಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಅರ್ಥಪೂರ್ಣವಾಗುತ್ತವೆ. ಭವಿಷ್ಯದ ಪೀಳಿಗೆಗಳಲ್ಲೂ ಈ ಕುರಿತ ಪ್ರಜ್ಞೆ ಬಿತ್ತಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್‌ನ ಸಹ ಪ್ರಾಧ್ಯಾಪಕ ಆರ್ ಸಿದ್ದಪ್ಪ ಸೆಟ್ಟಿ ಉಪಸ್ಥಿತರಿದ್ದರು. ಅಮೃತ್ ಸಿ ಟಿ ಹಾಗೂ ಪೂರ್ವಿತ ಕಾರ್ಯಕ್ರಮವನ್ನು ನಿರೂಪಿಸಿದರು.ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಕೆ.ಆರ್ ಸ್ವಾಗತಿಸಿದರು, ವಿಭಾಗದ ಸಹ ಪ್ರಾಧ್ಯಾಪಕಿ ಡಾ.ದಾನೇಶ್ವರಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ