ಸುರತ್ಕಲ್: ಬದುಕಿನಲ್ಲಿ ಉನ್ನತ ಗುರಿಯಿದ್ದಾಗ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿ ಯಶಸ್ಸುಗಳಿಸಲು ಸಾಧ್ಯವಿದೆ. ಆತ್ಮವಿಶ್ವಾಸದಿಂದ ಗುರುಗಳು ಮತ್ತು ವಿದ್ಯಾರ್ಥಿಗಳ ಅಪಾರ ಪ್ರೀತಿ ವಿಶ್ವಾಸಗಳಿಂದ ಬದುಕಿನಲ್ಲಿ ಕಾರ್ಯ ಪ್ರವೃತ್ತನಾಗಿ ಸಂತೃಪ್ತಿಯ ಜೀವನ ಕಂಡಿದ್ದೇನೆ ಎಂದು ಹಿರಿಯ ಶಿಕ್ಷಣ ತಜ್ಞ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಪ್ರೊ.ಪಿ.ಕೆ. ಮೊಯ್ಲಿ ನುಡಿದರು.
ಪ್ರೊ.ಪಿ.ಕೆ. ಮೊಯ್ಲಿಯವರ 94 ರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ.ಪಿ.ಕೆ. ಮೊಯ್ಲಿ ಅಭಿನಂದನಾ ಸಮಿತಿ ಸುರತ್ಕಲ್, ಗೋವಿಂದ ದಾಸ ಕಾಲೇಜಿನ ಡಾ.ಸೀ ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗುರು ಹಿರಿಯರ ಸತತ ಮಾರ್ಗದರ್ಶನದಿಂದ ಪ್ರೌಢಾ ಶಾಲಾ ಶಿಕ್ಷಕ ಹಂತದಿಂದ ಕಾಲೇಜು ಪ್ರಾಂಶುಪಾಲ ಹುದ್ದೆಯ ತನಕ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೇ ಗುರುಗಳ ನಿಜವಾದ ಸಂಪತ್ತಾಗಿದ್ದು ತನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿರುವುದು ತನಗೆ ಆತ್ಮ ತೃಪ್ತಿ ತಂದು ಕೊಟ್ಟಿದೆಂದರು.
ಪ್ರೊ.ಪಿ.ಕೆ. ಮೊಯ್ಲಿಯವರ ಆತ್ಮಕಥನ ಹಾಗೂ ಲೇಖನಗಳು ಹಾಗೂ ಪ್ರೊ.ಪಿ.ಕೆ. ಮೊಯ್ಲಿಯವರ ಕುರಿತಾದ ಲೇಖನಗಳನ್ನೊಳಗೊಂಡ ವಿಶಿಷ್ಟ ಕೃತಿ ‘ಗುರುಭ್ಯೋ ನಮಃ’ ಕೃತಿಯನ್ನು ಹಿರಿಯ ವಿದ್ವಾಂಸ ಡಾ.ಎಂ ಪ್ರಭಾಕರ ಜೋಷಿ ಬಿಡುಗಡೆಗೊಳಿಸಿ ಮಾತನಾಡಿ ಗುರು ಪ್ರೊ.ಪಿ.ಕೆ. ಮೊಯ್ಲಿಯವರ ಕುರಿತಾದ ಕೃತಿಯನ್ನು ಶಿಷ್ಯನಾಗಿ ಅನಾವರಣಗೊಳಿಸಿತ್ತಿರುವುದು ಧನ್ಯತೆಯ ಕ್ಷಣವಾಗಿದೆ. ಉತ್ತಮ ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸಹೃದಯಿ ಕಲಾವಿಮರ್ಶಕರಾಗಿ, ಪತ್ರಕರ್ತರಾಗಿ ತನ್ನ ನಯ ವಿನಯ ನಡೆನುಡಿಗಳಿಂದ ಪ್ರೊ.ಪಿ.ಕೆ. ಮೊಯ್ಲಿಯವರು ಆದರ್ಶ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ ಎಂದರು.
ಸಹ ಸಂಪಾದಕ ಡಾ. ದೇವರಾಜ್ ಕೆ ಮಾತನಾಡಿ ಹಿರಿಯರ ಆದರ್ಶಗಳನ್ನು ಕಿರಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯ ಬೇಕಾಗಿದೆ ಎಂದರು.
ಪ್ರೊ.ಪಿ.ಕೆ. ಮೊಯ್ಲಿಯವರ ಪುತ್ರಿ ಡಾ. ವಿನತ ಮಾತನಾಡಿ ಬದುಕು ಕಟ್ಟಿಕೊಳ್ಳುವಲ್ಲಿ ತಮ್ಮ ತಂದೆಯವರ ದಕ್ಷತೆ, ಪ್ರಾಮಾಣಿಕತೆ, ಶಿಕ್ಷಣ ಪ್ರೇಮ ತಮಗೆಲ್ಲ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೆಚ್. ಮಾತನಾಡಿ ಪ್ರೊ.ಪಿ.ಕೆ. ಮೊಯ್ಲಿಯವರ ಮೇರು ಸದೃಶ ವ್ಯಕ್ತಿತ್ವದಿಂದ ಅವರ ಶಿಷ್ಯ ಸಮೂಹ ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೇರಿದ್ದು ಸಂತಸದಾಯಕವಾಗಿದೆ. ಗುರುಗಳನ್ನು ಸಮ್ಮಾನಿಸಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಉತ್ತಮ ಮೌಲ್ಯ ಮತ್ತು ಸುಸಂಸ್ಕೃತ ಹೆಜ್ಜೆಯಾಗಿದೆ ಎಂದರು.
ಪ್ರೊ.ಪಿ.ಕೆ. ಮೊಯ್ಲಿಯವರ ಅಭಿನಂದನಾ ಸಮಿತಿ ಸದಸ್ಯ ಪ್ರೊ.ಪಿ.ಸೋಮಶೇಖರ ರಾವ್ ಮತ್ತು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ಗೋಪಾಲ ಎಂ ಗೋಖಲೆ ಉಪಸ್ಥಿತರಿದ್ದರು.
“ಗುರುಭ್ಯೋ ನಮಃ” ಕೃತಿಯ ಪ್ರಧಾನ ಸಂಪಾದಕ ಹಾಗೂ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡಿ ಗುರು ಪ್ರೊ.ಪಿ.ಕೆ. ಮೊಯ್ಲಿಯವರ ಒಡನಾಟವನ್ನು ಸ್ಮರಿಸಿ ಕೃತಿಯ ಕುರಿತು ಮಾತನಾಡಿದರು.
ಪ್ರೊ.ಪಿ.ಕೆ. ಮೊಯ್ಲಿ ಅಭಿನಂದನಾ ಸಮಿತಿ, ಹಿಂದು ವಿದ್ಯಾದಾಯಿನೀ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕುಟುಂಬ ವರ್ಗ ಮತ್ತು ಅಭಿಮಾನಿ ವರ್ಗ ಪ್ರೊ.ಪಿ.ಕೆ. ಮೊಯ್ಲಿಯವರನ್ನು ಸನ್ಮಾನಿಸಿದರು. ಕು.ಸೌಪರ್ಣಿಕ ಪ್ರಾರ್ಥಿಸಿದರು. ಮಾನವಿಕ ಸಂಘದ ಸಂಯೋಜಕಿ ಡಾ.ವಿಜಯಲಕ್ಷ್ಮೀ ವಂದಿಸಿದರು. ಡಾ. ಸಂತೋಷ ಆಳ್ವ ಕಾರ‍್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ