- ಡಾ. ನೀ.ಕೃ. ರಾಮಶೇಷನ್ ಮೈಸೂರು
ಶ್ರೀ ರಾಮ, ನಾನು ದೇಹ ಭಾವದೊಳಿರುವಾಗ ನೀನು ಪ್ರಭು-ನಾನು ದಾಸ ಎಂಬ ಅರಿವಿನಲ್ಲಿಯೂ, ನಾನು ಜೀವಭಾವದೊಳಿರುವಾಗ ನೀನು ಪೂರ್ಣ-ನಾನು ನಿನ್ನ ಅಂಶವೆನ್ನುವ ಅರಿವಿನಲ್ಲಿಯೂ, ನಾನು ಆತ್ಮ ಭಾವದೊಳಿರುವಾಗ ನಾನೇ ನೀನು-ನೀನೇ ನಾನು ಎಂಬ ತಾದಾತ್ಮದ ಭಾವದೊಳಿರುತ್ತೇನೆ '' ಎಂದು ನುಡಿದ ಹನುಮನರು ಅದ್ಭುತ, ವಿಶಿಷ್ಟ ವ್ಯಕ್ತಿತ್ವ, ರಾಮಾವತಾರದೊಂದಿಗೆ ಪ್ರಾರಂಭವಾಗುವ ಹನುಮನ ಕಥೆ ಕೃಷ್ಣಾವತಾರದಲ್ಲಿಯೂ ಮುಂದುವರೆದಿರುವುದು ಒಂದು ಸೋಜಿಗವೇ ಸರಿ. ವಿಷ್ಣುವಿನ ಅವತಾರವಾದ ಶ್ರೀರಾಮನ ಭಕ್ತ ಹನುಮನು ರುದ್ರನ ಅಂಶದಿಂದ ಜನಿಸಿದವನು ಎಂದು ಪ್ರತೀತಿ ಇದೆ. ಶ್ರೀ ರಾಮನದು ಘನಗಾಂಭೀರ್ಯ ಸ್ವಭಾವ, ಹನುಮನದು ಮುಗ್ಧ ಸ್ವಭಾವ. ಬಾಲ್ಯದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ಹಣ್ಣೆಂದು ತಿಳಿದು ಹಿಡಿಯಲು ಹೋಗಿ ಪೆಟ್ಟು ತಿಂದದ್ದು ಮುಗ್ಧತೆಯ ಕಾರಣ. ಹಿಮಾಲಯಕ್ಕೆ ಹೋಗಿ ಸಂಜೀವಿನಿ ಮೂಲಿಕೆಯನ್ನು ತರಬೇಕೆಂದೊಡನೆ, ಆ ಮೂಲಿಕೆ ನೋಡಲು ಹೇಗಿರುತ್ತದೆ ಎಂದು ಕೇಳಬೇಕೆಂಬ ಬುದ್ದಿ ಇಲ್ಲದೆ ಅತುರದಿಂದ ಹಿಮಾಲಯಕ್ಕೆ ಹಾರಿಹೋಗಿ ಮೂಲಿಕೆಯನ್ನು ಗುರುತಿಸಲಾಗದೆ ಇಡೀ ಪರ್ವತವನ್ನೇ ಹೊತ್ತುತಂದುದು ಅವಸರದ ಬುದ್ದಿಯಿಂದ. ಇನ್ನು ಭೀಮನ ಅಹಂಕಾರ ಮುಂದು ಅವನನ್ನು ಉನ್ನತ ಸ್ಥಿತಿಗೇರಿಸಲು ಬಾಲ ಚಾಚಿ ಮುದುಕನಂತೆ ಕುಳಿತದ್ದು ಹನುಮನ ಗುರುಭಾವಕ್ಕೆ ಒಂದು ಉದಾಹರಣೆ, ಇದಿಷ್ಟೇ ಹನುಮನ ಸ್ವಭಾವ ಎನ್ನುವಂತಿಲ್ಲ ಅವನು ಮೊದಲ ಬಾರಿಗೆ ಶ್ರೀರಾಮನನ್ನು ಕಂಡಾಗ ಅವನ ನಡೆ-ನುಡಿ, ಹಾವ-ಭಾವ ಹೇಗಿತ್ತೆಂಬುದನ್ನು ಶ್ರೀರಾಮನ ನುಡಿಗಳಲ್ಲಿಯೇ ಕೇಳಬೇಕು. ವೇದವಿದನಂತೆ. ಸುಸಂಸ್ಕೃತನಂತೆ, ವಿದ್ವಾಂಸನಂತೆ, ವಿನಯದ ಪರಮಾದರ್ಶ ಮೂರ್ತಿಯಂತೆ ಮೃದುವಚನಗಳಿಂದ ಮಾತನಾಡಿದನಂತೆ.
ಶ್ರೀರಾಮನ ಗಾಂಭೀರ್ಯ, ರಾಜೋಚಿತ ನಡೆ-ನುಡಿಗಳು ಹಾಗೂ ಹನುಮನ ತುಂಟತನ, ಸಮಯಪ್ರಜ್ಞೆ ಧೈರ್ಯ ಹಾಗೂ ಮುತ್ಸದ್ದಿತನ ಇವುಗಳ ಮೇಳಯಿಕೆಯೇ ಕೃಷ್ಣಾವತಾರವಾಗಿ ಧರೆಗಿಳಿದು ಬಂದಂತೆ ತೋರುವುದು. ನಮ್ಮ ಪರಂಪರೆಯಲ್ಲಿ ಬೇರೆ ಬೇರೆ ಮತಗಳವರಿಗೆ, ಬೇರೆ-ಬೇರೆ ಧಾರ್ಮಿಕ ಸಂಪ್ರದಾಯದವರಿಗೆ ಬೇರೆ-ಬೇರೆ ದೈವಗಳಿರುವುದು ಸರಿಯಷ್ಟೆ ಆದರೆ ಹನುಮ ಮಾತ್ರ ಎಲ್ಲರಿಗೂ ಸಲ್ಲುವ ದೈವ.
ಹನುಮನಿಲ್ಲದ ಊರಿಲ್ಲ, ರಾಮನಿಲ್ಲದ ಭಾರತವು ಇರದು ಎಂದನ್ನಿಸುತ್ತದೆ. ಭಾವುಕ ಭಕ್ತಿಯೊಡಗೂಡಿದ ಮನಸ್ಸಿಗೆ ವಾಲ್ಮೀಕಿ ರಾಮಾಯಣವು ಕಾವ್ಯವೇ, ಇತಿಹಾಸವೇ, ಪುರಾಣವೇ "ಇತಿಹಾಸಂ ಪುರಾ ವಾಲ್ಮೀಕಿನಾ ಕೃತಂ..." ಎನ್ನುವಾಗ ಹೀಗಿತ್ತು. ಇದು ಜರುಗಿದ ಕಥಾನಕ ಎಂದೇ ದೃಢವಾಗುತ್ತದೆ. ಒಂದೆರಡು ಮಾತು ತಿಳಿಸೋಣ:
ಮಾನವ ಸ್ವಭಾವಕ್ಕೆ ವಾಲ್ಮೀಕಿ ಋಷಿ ಪ್ರಾಧಾನ್ಯವಿತ್ತಿರುವುದು: ಆದರೆ, ಅಲ್ಲಲ್ಲಿ ಶ್ರೀರಾಮ ದೇವಮಾನವನಾಗಿ ತನ್ನ ಕಾರ್ಯವನ್ನು ಅತ್ಯದ್ಭುತ ರೀತಿಯಲ್ಲಿ ನಿರ್ವಹಿಸುತ್ತಾನೆ. ಉದಾಹರಣೆಗೆ ಜಟಾಯು ಪಕ್ಷಿಗೆ ರಾಮ ಪಿತೃ ಕಾರ್ಯದಂತೆ ನೆರವೇರಿಸಿ ಮುಕ್ತಿ ಕೊಡುವುದು, ಶಬರಿಯಂತ ಬೇಡತಿಯಲ್ಲಿ ಅಡಕಗೊಂಡಿರುವ ದಿವ್ಯ ವ್ಯಕ್ತಿತ್ವಕ್ಕೆ ಬೆಲೆ ನೀಡಿ, ವತ್ಸಲನಾಗಿ ಮೋಕ್ಷ ಕರುಣಿಸುವುದು, ಯುದ್ಧಕಾಂಡದಲ್ಲಿ ಸ್ವಯಂ ಬ್ರಹ್ಮನೇ ಬಂದು (ಬ್ರಹ್ಮಕೃತ ರಾಮಸ್ತವ) ಸ್ತುತಿಸಿ ಶ್ರೀ ರಾಮನ ದೈವಿ ಅವತಾರವನ್ನು ನೆನಪಿಸುವುದು. ಹೀಗೆ ಹಲವಾರು ನಿದರ್ಶನಗಳು ಮನುಷ್ಯನಾದ ಶ್ರೀರಾಮ ತನ್ನ ಅನೇಕ ಆದರ್ಶಗಳನ್ನು ಇಂದಿನ ಸಮಾಜದವರಿಗೂ ಮಾರ್ಗದಾಯಿ ಆಗುವಂತೆ ಕಾರ್ಯರೂಪಕ್ಕೆ ತಂದಿರುವುದು, ಇನ್ನೂ 'ವಾನರ' (ಕಪಿಗಳ ಎನ್ನುವುದಕ್ಕಿಂತ) ಸ್ವಭಾವವೇ? ವಾನರವೊಂದೇ ಹಾರುವ, ಲಂಘಿಸುವ ಸಾಮರ್ಥ್ಯಕ್ಕೆ ಪ್ರಸಿದ್ಧ ಆದದ್ದು ಹಾಗಾಗಿ ವಾನರಕ್ಕೆ ಪ್ಲವನ, ಪ್ಲವಂಗ, ಪ್ಲವಂನಯ ಎಂಬುವ ಸಾಮರ್ಥ್ಯ ಸೂಚಕ ಹೆಸರುಗಳಿಂದ ತಿಳಿಯಬರುವುದು ವಿಶೇಷವೇ. ವೀರ ಧೀರ ಪರಾಕ್ರಮ ಹನುಮಂತ ನೂರು ಯೋಜನಾ (ಸುಮಾರು 900ರಿಂದ 1000 ಮೈಲಿ ದೂರ) ದೂರವನ್ನು ನಿರಾಯಸವಾಗಿ ದಾಟಬಲ್ಲ. ಇದನ್ನು ಹಿರಿಯನಾದ ಜಾಬವಂತನು ಸಮರ್ಥಿಸಿ, ಉಳಿದೆಲ್ಲ ಕಪಿ ವೀರರಿಗೂ ಮಹೇಂದ್ರ ಪರ್ವತ ತಪ್ಪಲಲ್ಲಿ ಕುಳಿತು ಕಡಲನ್ನೇ ದಿಟ್ಟಿಸುತ್ತಿದ್ದ ಆಂಜನೇಯನನ್ನು ಸಮುದ್ರ ದಾಟಿ ಸೀತಮ್ಮನನ್ನು ದರ್ಶಿಸಿ ಬರಲು ಪ್ರಾರ್ಥಿಸುವಂತೆ ನಿರ್ದೇಶಿಸುತ್ತಾನೆ. ಇದೆ ಶ್ರೀ ರಾಮಾಯಣದಲ್ಲಿ ಆಂಜನೇಯ ಹನುಮಂತನ ವಿಶೇಷ.
'ಯಥಾ ರಾಘವ ನಿರ್ಮುಕ್ತಃ ಶರಃ ಶ್ವಸನ ವಿಕ್ರಮಃ' ಶ್ರೀರಾಮನು ಬಿಟ್ಟ ಮೊದಲ ಶರವೇ ಶ್ರೀಮದ್ ಆಂಜನೇಯ! ಬಾಣದಂತೆ ನಾನು ವಾಯು ವೇಗದಿಂದ ನೇರವಾಗಿ ಲಂಕೆಗೆ ಹೋಗುವೆ ಲಂಕೆಯಲ್ಲಿ ಜನಕ ಸುತೆಯನ್ನು ನಾನು ಕಾಣದಿದ್ದರೆ ಅದೇ ವೇಗದಿಂದ ದೇವಲೋಕಕ್ಕೆ ಹೋಗುವೆ. ಅಲ್ಲಿಯೂ ಸೀತಾದೇವಿ ಲಭಿಸದಿದ್ದರೆ ಪುನಃ ಲಂಕೆಗೆ ಬಂದು, ರಾವಣನನ್ನೆ ಎಡೆಮುರಿ ಕಟ್ಟಿ ಎಳೆದು ತರುತ್ತೇನೆ. ಶತಾಯಗತಾಯ ಬಿಡುವುದಿಲ್ಲ. ಸರ್ವಥಾ ಸೀತಾದೇವಿಯನ್ನು ನಾನು ದರ್ಶಿಸಿಯೇ ಬರುವುದು ಇವೆಲ್ಲ ಇಲ್ಲವೋ ರಾವಣ ಸಹಿತ ಲಂಕೆಯನ್ನೇ ಹೊತ್ತು ತಂದು ಪ್ರಭು ಶ್ರೀ ರಾಮನ ಪಾದಕ್ಕೊಪಿಸುತ್ತೇನೆ. ಈ ಕಾರ್ಯ ಸಾಧಿಸಿಯೇ ಬರುವುದು ನಿಶ್ಚಯ. ಇದು ಹನುಮಂತನ ದೃಢತ್ವ.
ತ್ರಿವಿಕ್ರಮನಂತೆ ಹನುಮ ತನ್ನ ಶರೀರ ಸಂಕುಚಿತ ಮಾಡಿಕೊಂಡು ಹಾರಿದನು. ಕಾಂಚನಾದ್ರಿ ಕಮನಿಯ ವಿಗ್ರಹಂ ಅಂದರೆ ಆತ ಚಿನ್ನದ ಬಣ್ಣದ ಬೆಟ್ಟದಂತೆ ಯೌಗಿಕ ತೇಜಸ್ಸಿನಿಂದ ಹೊಳೆ ಹೊಳೆಯುತ್ತಿದ್ದ 'ಶ್ರೀಮದ್ರಾಮಾಯಣ ಮಹಾಮಾಲಾರತ್ನಂ ವಂದೇ ಅನಿಲಾತ್ಮಜಂ' ಶ್ರೀ ರಾಮಾಯಣವೆಂಬ ಮಹಾ ಮಾಲೆಯ ರತ್ನ ಶ್ರೀ ಆಂಜನೇಯ ಸ್ವಾಮಿ.
ಇಡೀ ಜಗತ್ತಿನಲ್ಲಿ ಲಕ್ಷಾಂತರ ವರ್ಷಗಳಿಂದ ಜನಮನದಲ್ಲಿ ಪ್ರಚಲಿತ ಆಗಿರುವ ಮಾನವೀಯ ಮೌಲ್ಯ ಭಾವನೆ ಧರ್ಮ ಕರ್ತವ್ಯ ನಿಷ್ಠೆ ಈ ಬಲ್ಲ ವಿಶೇಷದ ನೆಲೆ ಆಗಿರುವ ವಾಲ್ಮೀಕಿ ರಾಮಾಯಣದಲ್ಲಿ ಎದ್ದು ತೋರುವ ಚಿರಂಜೀವಿ ಆಂಜನೇಯ ಹನುಮಂತ ಪ್ರಾಣ ದೇವರೆಂದೇ ವಿರಾಜಿಸುವ ಅನಿಲನಂದನ ಎಂದರೆ ಉತ್ಪೇಕ್ಷೆಯಲ್ಲ ಮೇಲ್ಕಾಣಿಸಿರುವ ಶ್ಲೋಕ ಸಾಲುಗಳಲ್ಲಿ ಆಂಜನೇಯನ ದಿವ್ಯ ವೈಭವವೇ 'ಸುಂದರ ಕಾಂಡ'ವೆಂದು ಪ್ರಸಿದ್ಧ ಆಗಿರುವ 68 ಸರ್ಗಗಳ ವಾಯುಸುತನ ಕಥನ. ಇದರಲ್ಲಿ ಬೀಜಾಕ್ಷರಗಳು ಸಮೃದ್ಧವಾಗಿವೆ ಎಲ್ಲಾ ಕಷ್ಟ ನಿವಾರಕ ನೆಮ್ಮದಿ ಶಾಂತಿ ನೀಡುತ್ತಾ ಇಂದಿನ ಈ ದಾವಂತ ಯುಗದಲ್ಲಿ ಮಾನಸಿಕ ಸಮತೋಲನವನ್ನು ನೀಡುವ ಶಕ್ತಿಯುಳ್ಳದ್ದು ಎಂಬುವುದು ಈ ಕಾಂಡದ ದಿನನಿತ್ಯ ಪಾರಾಯಣದಿಂದ ಅನುಭವ ಆಗುತ್ತದೆ.
ರಾಮಾಯಣದ ಹನುಮಂತ ಯಾರಿಗೆ ಗೊತ್ತಿಲ್ಲ ಮಕ್ಕಳಿಂದ ವಯಸ್ಸು ಸಂದವರಿಗೂ ಸಂತೋಷ ನೀಡುವ ಶಕ್ತಿ ಅವನು ವಿನಯದ ಮೂರ್ತಿ ಎಷ್ಟೆಷ್ಟು ಸಾಹಸ ಕಾರ್ಯ ಮಾಡಿದ್ದರು 'ದಾಸೋಹಂ ಕೋಸಲೇಂದ್ರಸ್ಯ' - ಶ್ರೀರಾಮದೂತ ನಾನು ಎಂಬುವ ವಿನಯ ಸಂಪನ್ನನವನು. ಇದನ್ನು ನಾವು ಶ್ರೀ ರಾಮಾಯಣ ಅಧ್ಯಯನ ಮಾಡುವಾಗಲೇ ತಿಳಿದಾತು ಹಾಗೂ ಆಂಜನೇಯ ಜಗತ್ತಿನಲ್ಲಿಡೆ ಪ್ರಸಿದ್ಧ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ ತನ್ನ ಆಫೀಸಿನ ಅಂತರಂಗ ಪರಿಸರದಲ್ಲಿ ಪ್ರತಿನಿತ್ಯ ಹನುಮನನ್ನು ನಮಿಸುತ್ತಿದ್ದರಂತೆ.
ಆಂಜನೇಯ ಕಾಣಿಸಿಕೊಳ್ಳುವುದು ರಾಮಾಯಣದ ಕಿಸ್ಕಿಂದ ಕಾಂಡದಲ್ಲಿ ವಾನರ ವೀರ ಸುಗ್ರೀವನ ಆಪ್ತ ಸಚಿವನಾಗಿ ಇಲ್ಲೇ ಋಷ್ಯಮೂಕ ಪರ್ವತದ ಹಾದಿಯಲ್ಲಿ ಬರುತ್ತಿದ್ದ ಶ್ರೀರಾಮ ಲಕ್ಷ್ಮಣರ ದರ್ಶನವಾದದ್ದು, ಈ ಭೇಟಿ ಅನಂತವಾಗಿ ಮುಂದುವರೆದ ಕಾರಣ ಹನುಮಂತ, ಚಿರಂಜೀವಿ- ಮುಂದೆ ಬ್ರಹ್ಮ ಪದವಿವಿಗೆ ಈತ ಬರುವೆನೆಂಬುದು ಪ್ರಾಜ್ಞರ ಅಭಿಮತ. ಹನುಮಂತ ಎಷ್ಟು ಸುಗುಣಭರಿತನೆಂದು ಈ ಶ್ಲೋಕ ಉದ್ಧರಿಸಿದೆ: 'ಬುದ್ದಿರ್ಬಲಮ್ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಂ| ಅಜಾಢ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಾದ್ಭವೇತ್|| ಇದೇ ರೀತಿಯಲ್ಲಿ ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯ ತವಕಿಂವದ ರಾಮದೂತ ದಯಾಸಿಂಧೋ ಮತ್ಕಾರ್ಯ ಸಾಧಯ ಪ್ರಭೋ|| ನಿನಗೆ ಯಾವ ಕಾರ್ಯವು ಅಸಾಧ್ಯವಲ್ಲ ಸಾಧಕ ನೀನು ದಯಮಾಡಿ ನನ್ನ ಕೆಲಸವನ್ನು ಆಗೋ ಮಾಡಿಸು ಮಾರುತಿ ಎಂಬುವ ಪ್ರಾರ್ಥನೆ. ಇಂಥ ಆಂಜನೇಯನನ್ನು ಎಷ್ಟು ಬಣ್ಣಿಸಿದರೂ ಅದು ಕಡಿಮೆಯೇ. ಸಮುದ್ರ ಲಂಘಿಸಿ, ಸೀತಾದೇವಿಯನ್ನು ಅಶೋಕವನದಲ್ಲಿ ಕಂಡು ಪ್ರಭು ರಾಮಚಂದ್ರ ನೀಡಿದ್ದ ಮುದ್ರಿಕೆಯುಗುರವನ್ನು ಮಾತೆಗೆ ಕೊಟ್ಟು ಆ ತಾಯಿ ನೀಡಿದ ಕುರುಹುಗಳನ್ನು ರಾಮನಿಗೆ ಅರುಹಿ ಉಳಿದ ಎರಡು ತಿಂಗಳ ಒಳಗೆ ಶ್ರೀರಘುವರನು ದಾಳಿ ಇಟ್ಟು ರಾವಣಾದಿಗಳನ್ನು ವಧಿಸದಿದ್ದರೆ ತಾನು ರಾವಣನ ಬೆಳಗಿನ ಉಪಹಾರಕ್ಕೆ ತುತ್ತಾಗುವೆನೆಂದು ಸೀತೆ ತಿಳಿಸಿದ್ದನ್ನು ವೀರ ಮಾರುತಿಯು ಆ ತಾಯಿ ಚಿಂತಿಸಬೇಡವೆಂದು ಆಶ್ವಾಸನೆ ನೀಡಿ, ಆನಂತರ ಶತ್ರುವಿನ ಬಲಾಬಲ ತಿಳಿದುಕೊಳ್ಳಲು ಯುದ್ಧ ಮಾಡಿ ಅಕ್ಷ ಕುಮಾರನನ್ನು ಸಂಹರಿಸಿ ಬ್ರಹ್ಮದೇವನಿಗೆ ಗೌರವ ನೀಡಲು ಇಂದ್ರಜಿತ್ತವು ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ಕಟ್ಟು ಬಿದ್ದಂತೆ ನಟಿಸಿ ರಾವಣನನ್ನು ಕಂಡು ಮಾತಾಡಿ ಮತ್ತೆ ಇಡೀ ಲಂಕೆಯನ್ನು ತನ್ನ ಬಾಲದಿಂದ ಅಗ್ನಿ ದೇವನಿಗೆ ಆಹುತಿ ನೀಡಿದನಲ್ಲ ಎಂತ ಪರಾಕ್ರಮಿ ಹನುಮಂತ.
ಅಬ್ಬಾ! ದಿಟಕ್ಕೂ ಹನುಮಂತ ಮುಖ್ಯಪ್ರಾಣ- ಪ್ರಾಣದೇವನೇ! ಪುನಃ ಸೀತಾಮ್ಮನ ದರ್ಶನ ತನ್ನ ಧೈರ್ಯ ಸಫಲವಾಯಿತು ಎಂದೆಣಿಸಿ ಶ್ರೀರಾಮ ಪ್ರಭುವೆಡೆ ಹೊರಡುತ್ತಾನೆ ವೀರಾಂಜನೇಯ! ಸೀತಾದೇವಿ, ಆಂಜನೇಯ ಕಂಡ ಹನುಮ ಎಂದು ಆಶೀರ್ವದಿಸುತ್ತಾ ನೀನು ಮಹಾ ಪರಾಕ್ರಮಿ, ಸಮರ್ಥ ಬುದ್ಧಿವಂತನೆಂದರೆ ನೀನೇ ರಾಕ್ಷಸರ ನಗರಕ್ಕೆ ಒಬ್ಬನೇ ಬಂದು ಲಂಕೆ ಸುಡುವ ತನಕ ನಿನ್ನ ಶೌರ್ಯ ಮರೆದಿದ್ದೀಯಲ್ಲ ಮರಳಿ ಬಂದ ವಿಜಯ ಹನುಮನಿಗೆ ಶ್ರೀರಾಮ ತನ್ನ ಆಲಿಂಗನ ಸೌಖ್ಯ ನೀಡಿದನಲ್ಲ, ಎಂಥ ಅಮೃತ ಕ್ಷಣ ಅದು! ಅಲ್ಲದೆ ಆಗಾಗ್ಗೆ ಈ ಮಾತು ಕೇಳಿ ಬರುತ್ತಿದೆ.
ಹನುಮನಲ್ಲಿ ಕಾರ್ಯಸಾಧಕ ಸಾಮರ್ಥ್ಯ ಅದಕ್ಕೆ ತಕ್ಕ ಶ್ರದ್ಧಾ ಭಕ್ತಿ ಸುಮಧುರವಾಗಿ ಮಾತನಾಡಬಲ್ಲ ಅರಿವು- ವಿದ್ಯೆ ಎಲ್ಲವೂ ನೆಲೆಸಿವೆ. ಜಾಂಬವಂತ, ಅಂಗದ, ಹನುಮ ಈ ಮೂವರು ಒಗ್ಗೂಡಿದಲ್ಲಿ ಆ ಕಾರ್ಯವು ಫಲಿಸುವುದು ಶತಸಿದ್ಧ! ವಿಫಲ ಎಂಬುವುದೇ ಇರದು! ಇದು ನಾವು ಈ ಹೊತ್ತು ಗಮನಿಸಬೇಕಾದ ಅನುಸರಣೆಯ ಅಂಶಗಳು. ವಿಶೇಷತಃ ತರುಣರಿಗೆ, ವಿದ್ಯಾರ್ಥಿಗಳಿಗೆ, ಕಾರ್ಯಸಾಧಕರಿಗೆ ಒದಗುವ ವಿಘ್ನಗಳನ್ನು ಹನುಮ ನಿವಾರಿಸಬಲ್ಲ ಭವರೋಗ ವೈದ್ಯ ಕೂಡ!
ಕನ್ನಡ ನಾಡಿನ ಹಿರಿಯ ಹರಿದಾಸರಾದ ಹರಿದಾಸ ಸಾಹಿತ್ಯ ಆದ್ಯ ಪ್ರವರ್ತಕರಾಗಿರುವ ಮುಳಬಾಗಿಲು ಶ್ರೀಪಾದರಾಜರು(ಕ್ರಿ.ಶ.1404-1502) ಸೊಗಸಾದ ಒಂದು ಉಗಭೋಗದಲ್ಲಿ ಆಂಜನೇಯನನ್ನು ಹೀಗೆ ಪ್ರಶಂಸಿಸುತ್ತಾರೆ. 'ಬರುವುದು ಬುದ್ಧಿಯು ಬಲವು ಕೀರುತಿಯು| ನಿರುತದಿ ಧೈರ್ಯವು ನಿರ್ಭಯತ್ವವು| ಅರೋಗಾನಂದ ಅಜಾಡ್ಯ ವಾಕ್ಪಟುತ್ವವು| ಹರೇ ರಂಗ ವಿಠಲ ಹನುಮ ಎನಲು|| ಇದು ನಿತ್ಯಪಠಣೀಯ ಕೂಡ ಅಲ್ಲವೇ?
ಶ್ರೀ ರಾಮನೆ ಹುದ್ಗರಿಸುತ್ತಾನೆ ನಾನೇ ನೀನು ಹನುಮ ಇದು ಭಕ್ತ ಭಗವಂತರ ಅವಿಭಾಜ್ಯ ನಂಟು. ಮುಂದೆ ಶ್ರೀರಾಮ ಪಟ್ಟಾಭಿಷೇಕದ ಉತ್ಸವವು ನಡೆಯುವಾಗಲು ಆಂಜನೇಯ ಶ್ರೀ ರಾಮನ ಎದುರಲ್ಲೇ ವೀರಾಸನ ಸುಸ್ಥಿರನಾಗಿದ್ದು ಇಡೀ ಶ್ರೀ ರಾಮಾಯಣದಲ್ಲಿ ಹನುಮಂತ ಪಾತ್ರ ಬಹು ಕಿರಿಮೆ ಮಹತ್ವವುಳ್ಳದ್ದು ಹಾಗೂ ಸದಾ ನೆನಪಿನಲ್ಲಿ ಇರುವಂತದ್ದು ಅಲ್ಲವೇ ಸುಂದರನೆ ಆಗಿರುವ ವೀರ ಮಾರುತಿಯ ಸುಂದರಕಾಂಡ ಸರ್ವತಃ ವಿಜಯ ಪ್ರಸಾದಿಸುತ್ತದೆ. ಈ ಬರುವ ಜನವರಿ 22ರಂದು ಶ್ರೀ ಅಯೋಧ್ಯಾ ರಾಮಾಲಯದ ಬಾಗಿಲು ಎಲ್ಲ ಭಕ್ತರಿಗೂ ತೆರೆಯುವ ಸರ್ವ ಮಂಗಳಕಾರಕ ಉತ್ಸವ, ಅಲ್ಲವೇ? ಅಗೋ, ಅಲ್ಲಿ ರಾರಾಜಿಸುತ್ತಿದ್ದಾನೆ ವೀರಧೀರ ಆಂಜನೇಯ ಸ್ವಾಮಿ!
- ಡಾ. ಎನ್.ಕೆ. ರಾಮಶೇಷನ್
ಲೇಖಕರ ಸಂಕ್ಷಿಪ್ತ ಪರಿಚಯ:
1946 ಏಪ್ರಿಲ್ 09 ರಂದು ಶ್ರೀ ನೀಲತ್ತಹಳ್ಳಿ ಕೃಷ್ಣ ಅಯ್ಯಂಗಾರ್ ಮತ್ತು ಶ್ರೀಮತಿ ಶ್ರೀರಂಗಮ್ಮ ದಂಪತಿಗಳ ಏಕಮಾತ್ರ ಪುತ್ರರಾಗಿ ತುಮಕೂರಿನಲ್ಲಿ ಜನನ.
'ಪ್ರಜ್ಞಾನ ಘನ ಬೋಧಾಯ' ಎನ್ನುವಂತೆ ವಂಶಪರಂಪರೆಯಿಂದ ಬಂದ ದೈವದತ್ತವಾದ ಪ್ರತಿಭೆ, ನಿರಂತರವಾದ ಅಧ್ಯಯನಶೀಲತೆ, ಪರಿಪಕ್ವವಾದ ಶಾಸ್ತ್ರ ಸಂಸ್ಕಾರದಿಂದ ವಿಜ್ಞಾನ (ಬಿ.ಎಸ್ಸಿ) - ಕಾನೂನು (ಬಿ.ಎಲ್) ಪದವಿಧರರಾಗಿ, ಸಂಸ್ಕೃತ ರತ್ನ, ಶಾಸನಶಾಸ್ತ್ರ ಡಿಪ್ಲೋಮಾ, ಪ್ರಥಮ ಶ್ರೇಣಿಯಲ್ಲಿ ಕನ್ನಡ ಎಂ.ಎ., ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ 1986ರಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪ ಹಾಗೂ ಡಾ.ಎಂ.ಚಿದಾನಂದಮೂರ್ತಿ ಮಾರ್ಗದರ್ಶನದಲ್ಲಿ 'ಹರಿದಾಸ ಆಂದೋಲನ - ಒಂದು ಅಧ್ಯಯನ' ಕುರಿತ ಡಾಕ್ಟರೇಟ್ ಪಡೆದು ವೃತ್ತಿಯಿಂದ ಜೀವ ವಿಮಾ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.
ಪ್ರಾತಃಸ್ಮರಣೀಯ ಪುತಿನ, ಸಿದ್ಧವನಹಳ್ಳಿ ಕೃಷ್ಣಶರ್ಮ, ಜಿ.ಪಿ.ರಾಜರತ್ನಂ, ನೀಲತ್ತಹಳ್ಳಿ ಕಸ್ತೂರಿ ಮುಂತಾದ ಸಾಹಿತ್ಯದಿಗ್ಗಜಗಳ ಒಡನಾಟ ನಿಮ್ಮ ಸಾಹಿತ್ಯ ಕೃಷಿಗೆ ರಕ್ಷಾಕವಚವಾಗಿ ಗಮಕ ಕಲೆ - ವಾಚನ ಹಾಗೂ ವಾಖ್ಯಾನ ಪಂಪನಿಂದ ಕುವೆಂಪುವರೆಗೆ ಹಾಗೂ ಇತ್ತೀಚಿನ ವೀರಪ್ಪ ಮೊಯ್ಲಿ ಅವರ ಶ್ರೀ ರಾಮಾಯಣ ಕುರಿತ ಕಾವ್ಯ - 'ಶ್ರೀ ರಾಮಾಯಣ ಮಹಾನ್ವೇಷಣಂ' ವಾಚನಾನುಭವ - ಪು.ತಿ.ನ. ಅವರ 'ಶ್ರೀ ಹರಿಚರಿತೆ', ವಿ.ಕೃ. ಗೋಕಾಕರ 'ಭಾರತ ಸಿಂಧು ರಶ್ಮಿ' ವರೆಗಿನ ನಿಮ್ಮ ಆಸಕ್ತಿ - ವೈದುಷ್ಯದ ದ್ಯೋತಕ.
ಸಾಂಸ್ಕೃತಿಕ ಇತಿಹಾಸ, ಶಾಸನಗಳ ಅಧ್ಯಯನ, ಹಳಗನ್ನಡ ಸಾಹಿತ್ಯ ಪ್ರಕಾರ - ಷಟ್ಪದಿ ಕಾವ್ಯಗಳವೆರಗೆ, ಕಾವ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ನೂರಾರು ವಿದ್ವತ್ಪೂರ್ಣ ಲೇಖನಗಳು - ಅರವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ - ಅನೇಕ ಕಾರ್ಯಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ನೀವು ಸದ್ಯ ಮುಳಬಾಗಿಲು ಶ್ರೀಪಾದರಾಜ ಮಠದ ಅಂಗಸಂಸ್ಥೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾ, ನಿಮ್ಮ ಸಾರಸ್ವತ ಅನುಭವಕ್ಕೆ ಕಳಶವಿಟ್ಟಂತೆ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸಮ್ಮೇಳನದಲ್ಲಿ ಸನ್ಮಾನ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ "ಶ್ರೀ ವಿಜಯೇಂದ್ರ ಪ್ರಶಸ್ತಿ" ಹೊರನಾಡಿನ ಶ್ರೀಕ್ಷೇತ್ರದಿಂದ "ಗಮಕ ಶ್ರೀ", ಕೂಡಲಿ ಶೃಂಗೇರಿಶ್ರೀಯವರಿಂದ "ಗಮಕ ಕಲಾನಿಧಿ" ಮೊದಲಾದ ಉಪಾಧಿಗಳಿಂದ ಪುರಸ್ಕೃತರಾಗಿರುವ ಜ್ಞಾನ ಮೇರು.
ಮನೆ, ಮನ ತುಂಬಿದ ಮಡದಿ ಶ್ರೀಮತಿ ಭಾರತಿ, ಪುತ್ರಿ ಶ್ರೀಮತಿ ಮಾನಸ, ಅಳಿಯ ಅನಂತಪದ್ಮನಾಭನ್ ಹಾಗೂ ಮೊಮ್ಮಗ ಸಂಹಿತ್‌ರಿಂದ ಕೂಡಿದ ಸಂತೃಪ್ತ - ಸುಶಿಕ್ಷಿತ ಕುಟುಂಬ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ