ಶ್ರೀರಾಮ ಕಥಾ ಲೇಖನ ಅಭಿಯಾನ-119: ಆಳ್ವಾರರುಗಳ ದೃಷ್ಟಿಯಲ್ಲಿ ರಾಮಾಯಣ

Upayuktha
0


- ವಿಜಯಕುಮಾರಿ ಬೆಂಗಳೂರು


 ಶ್ರೀ ರಾಮಾನುಜರಿಗಿಂತ ಬಹಳ ಹಿಂದೆ ಶ್ರೀ ವೈಷ್ಣವ ಮತವನ್ನು ಜನರಲ್ಲಿ ಪ್ರಚಾರಮಾಡಿ ಅವರಲ್ಲಿ ಭಕ್ತಿಯ ಆವೇಶವನ್ನು ಕೆರಳಿಸಿದವರೆಂದರೆ ಆಳ್ವಾರರುಗಳು. ಕರ್ನಾಟಕದ ಹರಿದಾಸ ಪರಂಪರೆಯಂತೆ ತಮಿಳುನಾಡಿನ ಆಳ್ವಾರರ ಪರಂಪರೆ. ಇವರು ಕ್ರಿ. ಶ 6 ರಿಂದ 9 ನೇ ಶತಮಾನದ ವರೆಗಿನ ಕಾಲದಲ್ಲಿ ಇದ್ದರೆಂಬುದು ಇತಿಹಾಸಕಾರರ ಅಭಿಪ್ರಾಯ. ತಾಮ್ರಪರ್ಣಿ, ಪಯಸ್ವಿನಿ, ಕಾವೇರಿ ಮುಂತಾದ ನದಿಗಳ ದಡಗಳಲ್ಲಿದ್ದ ಊರುಗಳಲ್ಲಿ ಇವರು ಜನಿಸಿದರು. ಈ ನದಿಗಳಂತೆ ಇವರ ಭಕ್ತಿಯ ಪ್ರವಾಹ ಉಕ್ಕಿ ಹರಿಯಿತು.


ಭಗವಂತನನ್ನು ಸಾಕ್ಷಾತ್ಕರಿಸಿ ಅವನ ದಿವ್ಯ ವಿಗ್ರಹ ರೂಪ ಸೌಂದರ್ಯ ಲಾವಣ್ಯಗಳನ್ನು ಅನುಭವಿಸಿ ಆ ಬ್ರಹ್ಮಾನಂದವನ್ನು ಲೋಕದ ಇತರರಿಗೂ ಹಂಚಲು ಶ್ರೀ ಸೂಕ್ತಿಗಳನ್ನು ರಚಿಸಿದರು. ಉಣ್ಣುವ ಅನ್ನ,ಕುಡಿಯುವ ನೀರು, ಜಗಿಯುವ ವೀಳ್ಯ (ಉಣ್ಣುಮ್ ಶೋರುಂ, ಪರುಗುಂ ನೀರುಮ್, ತಿನ್ನುಮ್ ವೆತ್ತಿಲೈ) ಎಲ್ಲವೂ ಕಣ್ಣನೇ ಎನ್ನುವಷ್ಟು ಆಳವಾದ ಭಕ್ತ್ತಿಯಲ್ಲಿ ಮುಳುಗಿದವರು. ಇವರ ಗಾನಕ್ಕೆ ಭಗವಂತ ಮರುಳಾದ. ಇವರ ಗೆಜ್ಜೆಯ ನಾದಕ್ಕೆ ತಕ್ಕಂತೆ ಭಗವಂತ ಕುಣಿದ. ತಮ್ಮ ರಸಾನುಭವವನ್ನು ಲೋಕಕಲ್ಯಾಣಕ್ಕಾಗಿ ಹಾಡುಗಳ ಮೂಲಕ ಕಟ್ಟಿಕೊಟ್ಟ ಶ್ರೀ ಸೂಕ್ತಿಗಳ ಮಾಲೆಯೇ  ದಿವ್ಯಪ್ರಬಂಧ. ಇವು ಸಂಖ್ಯೆಯಲ್ಲಿ ನಾಲ್ಕು ಸಾವಿರ ಇರುವುದರಿಂದ ಇವುಗಳನ್ನು ನಾಲಾಯಿರ ದಿವ್ಯ ಪ್ರಬಂಧಗಳು ಎನ್ನುತ್ತಾರೆ. 


ವೇದಗಳು ಪಾಮರ ಗ್ರಾಹ್ಯವಲ್ಲ. ಆದ್ದರಿಂದ ವೇದ ಸಾರವನ್ನು ಪಾಮರರಿಗೂ ಅರ್ಥವಾಗುವಂತೆ ಆಡು ಭಾಷೆಯಲ್ಲಿಯೇ ಬರೆದು ಸರ್ವರಿಗೂ ವೇದ್ಯವಾಗುವಂತೆ ಮಾಡಿದ ಹಿರಿಮೆ ಈ ಎಲ್ಲಾ ಆಳ್ವಾರರುಗಳಿಗೂ ಸಲ್ಲುತ್ತದೆ. ತಮಿಳು ನಾಡಿನಲ್ಲಿ ಎಲ್ಲಾ ವರ್ಗದ ಜನರೂ ಈ ಸೂಕ್ತಿಗಳನ್ನು ಹಾಡಿ ನಲಿಯುತ್ತಾರೆ. ಇದೊಂದು ಕ್ರಾಂತಿಕಾರಿ ಬದಲಾವಣೆ.


ಇವರು ರಚಿಸಿರುವ ಪ್ರಬಂಧಗಳಲ್ಲಿ ರಾಮಾಯಣವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದೇ ಈ ಲೇಖನದ ವಸ್ತು. 


ಶ್ರೀ ವಿಷ್ಣುಚಿತ್ತರು ರಾಮನನ್ನು ಮೊದಲೇ ನಾರಾಯಣನೆಂದು ಒಪ್ಪಿಕೊಂಡು ಸ್ತುತಿಸಿದ್ದಾರೆ. ಆದರೆ ಸಾಮಾನ್ಯರಂತೆ ಹುಟ್ಟಿ ಅಸಮಾನ್ಯನಾಗಿ ಬೆಳೆದು ಹಾಗೆಯೇ ನಡೆದುಕೊಂಡ ಮಹಾಪ್ರಭು ಎಂದಿದ್ದಾರೆ. ವಿಷ್ಣುಚಿತ್ತರ ರಾಮ “ಎಷ್ಟು ಸವಿದರೂ ತೃಪ್ತಿ ತಾರದ ಅಮೃತ (ಆರಾವಮುದು), ಕೋಟಿ ಸೂರ್ಯ ಸಮಪ್ರಭ, ಸಾಟಿಯಿಲ್ಲದ ಹಿರಿಮೆಯುಳ್ಳವನು”. ಇಂತಹ ರಾಮನ ಕಲ್ಯಾಣ ಗುಣಗಳನ್ನು ಹಾಡಿ ಹೊಗಳಿ ಆನಂದಿಸು ಎಂದು ತಮ್ಮ ಮನಸ್ಸಿಗೆ ಹೇಳುತ್ತಾರೆ 


೩ನೇ ಶತಕದ 10ನೇ ದಶಕದಲ್ಲಿ ಅಂಜನೇಯನು ಸೀತಾ ಮಾತೆಗೆ ರಾಮನಿತ್ತ ಮುದ್ರೆಯುಂಗುರ ಪ್ರದಾನ ಪ್ರಸಂಗವಿದೆ. ಪೆರಿಯಾಳ್ವಾರರು ವಿಶೇಷವಾಗಿ ತಮ್ಮ ಕಲ್ಪನೆಯನ್ನು ಇಲ್ಲಿ ವಿಸ್ತರಿಸಿದ್ದಾರೆ. ಸೀತಾ ರಾಮರು ಏಕಾಂತವಾಗಿ ಕಳೆದ ಅನೇಕ ಮಧುರ ರಾತ್ರಿಗಳಲ್ಲಿ, ಒಂದು ರಾತ್ರಿ ಸೀತಾದೇವಿಯು ರಾಮನನ್ನು ದೊಡ್ಡ ಮಲ್ಲಿಗೆಯ ಮಾಲೆಯಿಂದ ಕಟ್ಟಿಹಾಕಿದ್ದು ಒಂದು ಗುರುತು ಎಂದು ಮಾರುತಿ ಸೀತೆಗೆ ಹೇಳುವ ಪ್ರಸಂಗವಿದೆ. ಇದು ಮೂಲ ರಾಮಾಯಣದಲ್ಲಿಲ್ಲದ ಆಳ್ವಾರರ ಕಲ್ಪನೆಯ ಮಧುರ ಪ್ರಸಂಗ. 


“ಸೃಷ್ಟಿಯ ಹಾದಿಯಲ್ಲಿ ನೀನು ಮೊದಲು ಸೃಷ್ಟಿಸಿದ್ದು ಕಡಲಿನ ನೀರನ್ನು. ರಾಮಾವತಾರ ಕಾಲದಲ್ಲಿ ಕಡಲು ನಿನ್ನ ಮಾತನ್ನು ಲೆಕ್ಕಿಸದಿರಲು ಸೇತುವೆಕಟ್ಟಿ ಕಡಲನ್ನು ಅಡಗಿಸಿದೆ”- ಎನ್ನುತ್ತಾರೆ ತಿರುಮಳಿಶೈ ಆಳ್ವಾರರು ತಮ್ಮ ತಿರುಚ್ಛಂದ ವಿರುತ್ತಂ ಪ್ರಬಂಧದ 31ನೇ ಪಾಶುರದಲ್ಲಿ. 


ತೊಂಡರಡಿಪ್ಪೊಡಿ ಆಳ್ವಾರರಿಗೆ ರಾಮನು ಲಂಕೆಯನ್ನು ನಾಶಮಾಡಿದ ಅಮರರ ವೃಷಭನಾಗಿ ಕಂಡಿದ್ಧಾನೆ. ತಿರುಪ್ಪಾಣಾಳ್ವಾರರಿಗೆ ಶ್ರೀರಂಗದ ರಂಗನಾಥನ ಉಡಿದಾರವು ಲಂಕೆಯ ಸುತ್ತಲೂ ಚಚ್ಚೌಕಾಕಾರವಾಗಿ ಎತ್ತರವಾಗಿ ಕಟ್ಟಿರುವ ಮಹಾ ಬಲವಾದ ಗೋಡೆಗಳಂತೆ ಕಂಡಿದೆ. ಪೊಯ್ಗೈ ಆಳ್ವಾರರಿಗೆ ತಿರುವೇಂಗಡದಲ್ಲಿರುವ ಸ್ವಾಮಿಯ ಶ್ರೀ ಹಸ್ತಗಳು ಸಪ್ತ ಸಾಲಗಳನ್ನು ಭೇದಿಸಿದ ಹಸ್ತಗಳಾಗಿ ಗೋಚರಿಸುತ್ತದೆ. ಪೂದತ್ತಾಳ್ವಾರರು ತಮ್ಮ ‘ಇರಂಡಾಂ ತಿರುವಂದಾದಿ’ಎಂಬ ಪ್ರಬಂಧದಲ್ಲಿ- “ಮನುಜಾವತರ ತಾಳಿದ ರಾಮನು ಅವತಾರ ಕಾಲದಲ್ಲಿ ರಾಜಭೋಗಗಳನ್ನು ತೊರೆದು ನೆಲದ ಮೇಲೆ ಶಯನಿಸಬೇಕಾಯಿತಲ್ಲ”ಎಂದು ವಾತ್ಸಲ್ಯದಿಂದ ಮರುಗಿದ್ದಾರೆ (15ನೇ ಪಾಶುರ). 


ತಿರುಮಂಗೈ ಆಳ್ವಾರರು ಪೆರಿಯತಿರುಮೊಯಿ ಎಂಬ 1084 ಪದ್ಯಗಳುಳ್ಳ ದಿವ್ಯಪ್ರಬಂದವನ್ನು ರಚಿಸಿದ್ದಾರೆ. ಇವರ ರಾಮ “ಸೊಬಗಿನ ಗಣಿ. ಅಕ್ಕಾರಕ್ಕನಿ. ವಾನರನೊಬ್ಬನ ಸೇವೆಯನ್ನು ಸ್ವೀಕರಿಸಿ ಅವನ ಭಕ್ತಿಗೆ ಹಾಗೂ ಸೇವಾ ತತ್ಪರತೆಗೆ ಮೆಚ್ಚಿ ಆದರದಿಂದ ತನ್ನ ಎಲೆಯಲ್ಲೇ ಅವನಿಗೂ ಉಣಿಸಿದ”ಎಂಬ ರಾಮನ ಅದ್ಭುತ ಗುಣವನ್ನು ಸ್ಮರಿಸಿದ್ದಾರೆ. ಮೂಲ ರಾಮಾಯಣದಲ್ಲಿಲ್ಲದ ಈ ಪ್ರಸಂಗ ಆಳ್ವಾರರ ಸುಂದರ ಕಲ್ಪನೆಯಾಗಿದೆ “ಹುತ್ತವನ್ನು ತಲೆಕೆಳಗುಮಾಡಿದಂತೆ”ರಾವಣನ ವಧೆಯಾಯಿತು ಎಂದು ತಿರುಮಂಗೈ ಆಳ್ವಾರರು ಹೇಳುವಾಗ ಹತ್ತಾರು ಬಾಯಿಗಳುಳ್ಳ ಹುತ್ತವನ್ನು ಬಗೆದು ಮಣ್ಣನ್ನು ಎಲ್ಲಾ ಕಡೆಗೂ ಚಲ್ಲಾಡುವಂತೆ, ೧೦ ತಲೆಗಳುಳ್ಳ ರಾವಣನನ ತಲೆಯನ್ನು ನೆಲದಲ್ಲಿ ಇಟ್ಟಾಡುವಂತೆ ಮಾಡಿದ  ಮತ್ತು ರಾವಣನ ಮುಂಡವೇ ಯುದ್ಧಭೂಮಿಯಲ್ಲಿ ಸ್ವೇಚ್ಛೆಯಾಗಿ ಕುಣಿಕುಣಿದಾಡುವಂತೆ ಮಾಡಿದ ಅಸಾಮಾನ್ಯ ಸಾಹಸಿ ಶ್ರೀರಾಮ ಎನ್ನುವಲ್ಲಿನ ಶಬ್ದ ಶಿಲ್ಪ ಮನಸ್ಸಿಗೆ ನಾಟುವಂತಹುದು.


ರಾವಣನ ವಧೆಯ ನಂತರ ಲಂಕೆಯಲ್ಲಿದ್ದ ರಾಕ್ಷಸರ ಭಯವನ್ನು ಮತ್ತು ಅವರು ಶ್ರೀರಾಮನಿಗೆ ಶರಣಾಗಿ ಅಭಯ ಬೇಡುವುದನ್ನು ವಿಶಿಷ್ಠವಾದ ರೀತಿಯಲ್ಲಿ ಆಳ್ವಾರರು ವಿವರಿಸಿದ್ದಾರೆ. ಶ್ರೀರಾಮನಿಗೆ ಜಯವೋ ಜಯ! “ತಡಂ ಪೊಂಗತ್ತೋ ಪೊಂಗೋ” ಅವನ ಹಿರಿಮೆ ಬೆಳೆಯಲಿ ಎಂದು ಹತ್ತು ಪಾಶುರಗಳಲ್ಲಿ (ಪದ್ಯಗಳು) ರಾಕ್ಷಸರ ಬಾಯಿಂದ ಹೇಳಿಸಿದ್ದಾರೆ. “ನಾವು ನಿರಪರಾಧಿಗಳು. ನಮಗೆ ನೀವೇ ದಿಕ್ಕು. ನೀವು ಧರ್ಮಿಷ್ಠರು, ನ್ಯಾಯ ನೀತಿಗಳನ್ನು ಬಿಟ್ಟು ಚಲಿಸುವುದಿಲ್ಲ. ನಿಮ್ಮ ಬಗ್ಗೆ ನಮಗೆ ಅಂಜಿಕೆಯಿದೆ. ರಕ್ಷಣೆ ಬೇಡುತ್ತೇವೆ. ನಿಮ್ಮ ಹಿರಿಮೆ ಹೆಚ್ಚಲಿ” ಎಂದು ರಾಕ್ಷಸರು ಭಯಪಟ್ಟು ರಾಮನನ್ನು ಮೊರೆ ಹೊಕ್ಕಂತೆ ಮಾಡಿ ಬರೆದಿರುವ ಪಾಶುರಗಳು ಬಹಳ ನಾಟಕೀಯವಾಗಿ ಕಣ್ಮುಂದೆ ಬಂದು ನಮ್ಮ ತುಟಿಗಳಲ್ಲಿ ಮೃದುವಾದ ಮಂದಹಾಸ ಮೂಡುತ್ತದೆ. ಇದು ಬಹಳ ಸಹಜವಾದ ಕಲ್ಪನೆ, ವಾಲ್ಮೀಕಿ ರಾಮಾಯಣದಲ್ಲಿಲ್ಲ.


ಮುಂದಿನ ದಶಕದ ಪದ್ಯಗಳಲ್ಲಿ ರಾಕ್ಷಸರು ರಾಮನ ಪರಿವಾರವನ್ನು ರಕ್ಷಣೆಗಾಗಿ ಮೊರೆಹೋಗುವಂತೆ ಚಿತ್ರಿಸಲಾಗಿದೆ. ರಾಮಪರಿವಾರದ ಮುಖ್ಯರಾದ ಸುಗ್ರೀವ, ಹನುಮ, ಅಂಗದಾದಿಗಳನ್ನು ಮೊರೆಹೊಕ್ಕ ರಾಕ್ಷಸರು ಪ್ರಾಣಭಿಕ್ಷೆಯನ್ನು ಬೇಡುತ್ತಾರೆ. ತಮ್ಮನ್ನು ಕೊಲ್ಲದೆ ಇರುವಂತೆ ಪ್ರಾರ್ಥಿಸುವ ಈ ೧೦ ಪದ್ಯಗಳಲ್ಲಿ “ಕುಳಮಣಿದೂರಮೆ” ಎಂಬ ಪಲ್ಲವಿಯಿದೆ “ಶ್ರೀ ರಾಮನಾಮವನ್ನು ಬಿಡದೆ ನಾವು ಸ್ತುತಿಸುತ್ತೇವೆ. ನಮ್ಮನ್ನು ಶತೃವೆಂದು ಭಾವಿಸದೆ ಅಭಯನೀಡಿ” ಎಂದು ರಾಕ್ಷಸರು ಕೇಳುವಂತೆ ನೀಡಿರುವ ಚಿತ್ರಣ ಸಹಜವಾಗಿದೆ. ಸ್ವತಃ ರಾಜರಾಗಿದ್ದ ತಿರುಮಂಗೈ ಆಳ್ವಾರರಿಗೆ ಗೆದ್ದ ಎತ್ತಿನ ಬಾಲ ಹಿಡಿಯುವ ಮನುಜ ಸ್ವಭಾವದ ಪರಿಚಯ ಅನುಭವಜನ್ಯವಾದ ಭಾವನೆಯೂ ಆಗಿದ್ದಿರಬಹುದು. ಮನುಜ ಸ್ವಭಾವದ ಸಹಜ ಚಿತ್ರಣ ಆಳ್ವಾರರ ಕಲ್ಪನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಕುಲಶೇಖರಾಳ್ವಾರರು ಚೇರ ದೇಶದ ರಾಜರಾಗಿದ್ದರು. ಶ್ರೀಮನ್ನಾರಾಯಣನ ಅನುಗ್ರಹದಿಂದ ಜನ್ಮ ತಾಳಿದವರು. ರಾಮನ ಪರಮ ಭಕ್ತರು. ತಮ್ಮ ಭಕ್ತಿಯಿಂದ ರಾಮನನ್ನು ಕಟ್ಟಿಹಾಕಿದ ಹಿರಿಮೆ ಕುಲಶೇಖರರದು.  


ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ರಾಮನ ಬಾಲಲೀಲೆಗಳ ವರ್ಣನೆಯಿಲ್ಲ. ಕುಲಶೇಖರರು ತಾವೇ ಕೌಸಲ್ಯೆಯಾಗಿ, ತಿರುಕ್ಕಣ್ಣಪುರದ ಶೌರಿ ರಾಜನನ್ನು ರಾಮನೆಂದು ಭಾವಿಸಿ, ತಮ್ಮ ಮನವೆಂಬ ಮುತ್ತಿನ ತೊಟ್ಟಿಲಲ್ಲಿ ರಾಮನನ್ನು ಮಲಗಿಸಿ ರಾಮಾಯಣ ವಿವಿಧ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾ ರಾಮನಿಗೆ ಲಾಲಿ ಹಾಡಿದ್ದಾರೆ (ಪುರಂದರದಾಸರು ಏಳು ಹನುಮಾ ಎನ್ನುವ ಕೃತಿಯಲ್ಲಿ ಸುಂದರಕಾಂಡವನ್ನು ಕಟ್ಟಿಕೊಟ್ಟಂತೆ). 


ರಾಮನ ವನವಾಸದ ಸಮಯದಲ್ಲಿ ದಶರಥನು ಅನುಭವಿಸಿದ ದುಃಖವನ್ನು ತಾವೇ ದಶರಥನಂತೆ ಅನುಭವಿಸಿ ಹಾಡಿದ್ದಾರೆ. ವಾಲ್ಮೀಕಿಗಳ ದಶರಥನ ಹಲುಬುವಿಕೆಗೂ ಕುಲಶೇಖರಾಳ್ವರರ ದಶರಥನ ಹಲುಬುವಿಕೆಗೂ ಕಿಂಚಿತ್ತೂ ವ್ಯತ್ಯಾಸವಿಲ್ಲ. “ನನಗೆ ಏಳೇಳು ಜನ್ಮಗಳು ಸಂಭವಿಸಿದರೂ ನಿನ್ನನೇ ಮಗನನ್ನಾಗಿ ಪಡೆಯುವ ಭಾಗ್ಯವನ್ನು ಕರುಣಿಸು” ಎಂದು ದಶರಥನು ಕೇಳಿದಂತೆ ಆಳ್ವಾರರು ಹಾಡಿದ್ದಾರೆ. 


ದಕ್ಷಿಣ ಭಾರತದ ಚಿದಂಬರಂ ಕ್ಷೇತ್ರವನ್ನು ತಿಲ್ಲೈ ಚಿತ್ರಕೂಟಂ ಎನ್ನುತ್ತಾರೆ. ಈ ಕ್ಷೇತ್ರದ ಗೋವಿಂದರಾಜನನ್ನು ರಾಮನೆಂದು ಭಾವಿಸಿ ರಾಮಾಯಣದ ಏಳೂ ಕಾಂಡದ ಕಥೆಯನ್ನು ಕೇವಲ 11 ಪದ್ಯಗಳಲ್ಲಿ ಛಂದೋಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ರಾಮ ಜನನದಿಂದ ಪ್ರಾರಂಭಿಸಿ, ಶಂಭೂಕ ವಧಾ ಪ್ರಸಂಗ, ಅವತಾರ ಸಮಾಪ್ತಿ ಕಾಲದಲ್ಲಿ ಸಕಲ ಚರಾಚರಗಳಿಗೂ ವೈಕುಂಠ ಪ್ರಾಪ್ತಿಯವರೆಗೂ ನಮ್ಮ ಕಣ್ಣಮುಂದೆ ನಿಚ್ಚಳ ಗೋಚರವಾಗಿಸಿದ್ದಾರೆ. 


ಹೀಗೆ ಭಕ್ತಿ ಭಾವದಿಂದ 12 ಆಳ್ವಾರರುಗಳು ತಮ್ಮ ಕೃತಿಗಳಲ್ಲಿ ರಾಮನ ದಿವ್ಯ ರೂಪವನ್ನು ತಮ್ಮ ಶಬ್ದ ಶಿಲ್ಪದಿಂದ ಕಡೆದು ನಿಲ್ಲಿಸಿದ್ದಾರೆ. ಪೆರಿಯವಾಚ್ಚಾನ್ ಪಿಳ್ಳೈ ಎಂಬ ಮಹಾನುಭಾವರು ಈ ಆಳ್ವಾರರುಗಳ ಪ್ರಬಂಧಗಳಲ್ಲಿ ಬರುವ ಸೂಕ್ತಿಗಳನ್ನೇ ಕೂಡಿಸಿ ಇಡೀ ರಾಮಾಯಣದ ಕಥೆಯನ್ನೇ ರಚಿಸಿದ್ದಾರೆ ಅದು “ಪಾಶುರಪ್ಪಡಿ ರಾಮಾಯಣಂ” ಎಂದು ಪ್ರಸಿದ್ಧವಾಗಿದೆ. 


ಭಕ್ತಿ ಭಾವದಿಂದ ಭಗವಂತನನ್ನು ಹಾಡಿ ಕೃತಾರ್ಥರಾದ ಆಳ್ವಾರರುಗಳ ಪ್ರಬಂಧಗಳನ್ನು ನಾವೂ ಅರ್ಥಸಹಿತ ಅನುಸಂಧಾನ ಮಾಡಿ ಕೃತಾರ್ಥರಾಗೋಣ. 

 


- ವಿಜಯಕುಮಾರಿ ಬೆಂಗಳೂರು, 

- 9986017403 

ಬೆಸ್ಕಾಂ ನಿವೃತ್ತ ಸಹಾಯಕಿ, ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ 


  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top