-ಜನಮೇಜಯ ಉಮರ್ಜಿ, ಹುಬ್ಬಳ್ಳಿ
ಲೋಕಕ್ಕೆ ಅಭಿರಾಮ
ಶೋಕಕ್ಕೆ ವಿರಾಮ
ಸಾಸಿರಕ್ಕೊಂದು ರಾಮನಾಮ
ರಾಮನೆಂದರೆ ಲೋಕಕ್ಕೆ ಆರಾಮ ನೀಡುವವನು, ಶೋಕಕ್ಕೆ ವಿರಾಮ ನೀಡುವವನು. ರ ಎಂದರೆ ಆನಂದ, ರಾಮ ಎಂದರೆ ಪೂರ್ಣಾನಂದಮಯ. ರಾಮ ಎಂದರೆ ಅಮಿತ, ಅಪರಿಮಿತ. ಯಾವ ಅಳತೆಗೂ ಸಿಗದವ. ಕಾಲದ ಅಳತೆಗೆ ಸಿಗುವುದಿಲ್ಲ ಏಕೆಂದರೆ ಅವನು ಅನಾದಿ ನಿತ್ಯ, ದೇಶದ ಅಳತೆಗೆ ಸಿಗುವುದಿಲ್ಲ ಏಕೆಂದರೆ ಅವನು ಸರ್ವ್ಯವ್ಯಾಪ್ತ, ಗುಣಗಳ ಅಳತೆಗೆ ಸಿಗುವುದಿಲ್ಲ ಏಕೆಂದರೆ ಅವನು ಅನಂತ ಗುಣ ಪರಿಪೂರ್ಣ. ಎಲ್ಲರಿಗೂ ಆನಂದವನ್ನು ಹಂಚಿದವನು ರಾಮ. ಖಗ-ಮೃಗ, ನರ-ವಾನರ, ಪ್ರಾಣಿ- ಪಕ್ಷಿ, ಪ್ರಕೃತಿ ಎಲ್ಲವನ್ನೂ ಪ್ರೀತಿಸಿದವ ರಾಮ.
ನಮ್ಮ ರಾಮ ಜನಿಸುವ ಮೊದಲೇ ರಾಮ ಶಬ್ದವಿತ್ತು. “ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೆ" ಸಾಸಿರಕ್ಕೊಂದು ರಾಮನಾಮ. ಇದು ಪದ್ಮಪುರಾಣದಲ್ಲಿ ಹಿಡಿದಿಡಲಾದ ಉಮಾ-ಮಹೇಶ್ವರ ಸಂವಾದದಲ್ಲಿ ಶಿವ ಹೇಳಿದ ಮಾತು. ಭಾರತೀಯ ಯಾವುದೇ ಪಂಥಗಳಲ್ಲಿ ರಾಮ ಒಂದು ಮೌಲ್ಯವಾಗಿ, ಉಪಾಸನೆಯ ಬೀಜವಾಗಿ ಪ್ರತಿಪಾದಿತನಾಗಿದ್ದಾನೆ.
ರಾಮಾಯಣ ರಾಮನ ಕಥೆ, ಅದು ಇತಿಹಾಸ, ಅದು ವಾಲ್ಮೀಕಿ ರಹಿತ, 24 ಸಾವಿರ ಶ್ಲೋಕ ಉಳ್ಳದ್ದು. ಗಾಯತ್ರಿ ಮಂತ್ರದಲ್ಲಿ 24 ಅಕ್ಷರಗಳಿವೆ, ಗಾಯತ್ರಿ ಛಂದಸ್ಸಿನಲ್ಲಿ 24 ಅಕ್ಷರಗಳಿವೆ. ವಾಲ್ಮೀಕಿ ರಾಮಾಯಣ ಅನುಷ್ಟುಪ್ ಛಂದಸ್ಸಿನಲ್ಲಿದೆ. ಅದರಲ್ಲಿಯೂ 24 ಅಕ್ಷರಗಳಿವೆ. ಲಕ್ಷ್ಮೀದೇವಿಯನ್ನು ಹಿಡಿದುಕೊಂಡು ಒಟ್ಟು 24 ತತ್ವಗಳಿವೆ. ೨೫ನೇಯವ ಭಗವಂತ. ಕೇಶವಾದಿ ರೂಪಗಳೂ 24. ರಾಮಾಯಣವನ್ನು ವಾಲ್ಮೀಕಿಗಳಿಗೆ ಬ್ರಹ್ಮದೇವರು ಹೇಳಿದರು. ರಾಮಾಯಣ ಶತಕೋಟಿ ಪ್ರವಿಸ್ತರವಾಗಿದೆ. ನಮಗೆ ಅನುಕೂಲವಾಗಲು ವಾಲ್ಮಿಕೀಗಳು 24 ಸಾವಿರ ಶ್ಲೋಕಗಳಲ್ಲಿ ಹೆಣೆದಿದ್ದಾರೆ. ಅನೇಕ ಋಷಿಗಳು, ದಾರ್ಶನಿಕರು ರಾಮಾಯಣವನ್ನು ಕಂಡಿದ್ದಾರೆ. ಹಲವು ರಾಮಾಯಣಗಳು ಪ್ರಚಲಿತದಲ್ಲಿವೆ.
ವಾಲ್ಮೀಕಿ ರಾಮಾಯಣದಿಂದ ಸ್ಪೂರ್ತಿಗೊಂಡು ಹಲವರು ರಾಮ ಕಥೆ ರಚಿಸಿದ್ದಾರೆ. ವಾಲ್ಮೀಕಿ ರಾಮಾಯಣಕ್ಕೆ ಸಾಕಷ್ಟು ವ್ಯಾಖ್ಯಾನಗಳನ್ನು ಬರೆಯಲಾಗಿದೆ. ನಿತ್ಯ ರಾಮಾಯಣವನ್ನು ಪಠಿಸುವುದು ಅಸಾಧ್ಯ. ರಾಮಾಯಣ ಜೀವನಕ್ಕೇ ಬೇಕೆ ಬೇಕು. ಇಂತಹ ರಾಮಾಯಣವನ್ನು 11 ಶ್ಲೋಕಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ ಗುರುರಾಯರು. “ರಾಮೋ ವಿಗ್ರಹವಾನ್ ಧರ್ಮಃ” ಧರ್ಮವೇ ಮೈದಳೆದ ಮೂರ್ತಿ ರಾಮ. ಅವನು ತನ್ನ ಚಾರಿತ್ರ್ಯದಿಂದ ಶ್ರೇಷ್ಠನಾಗಿದ್ದಾನೆ. ನಡೆದು ತೋರಿಸಿ ಪುರುಷೋತ್ತಮನಾಗಿದ್ದಾನೆ. ನಮ್ಮಲ್ಲಿ ಒಂದು ಮಾತಿದೆ, ರಾಮ ನಡೆದಂತೆ ನಡೆ, ಕೃಷ್ಣ ನುಡಿದಂತೆ ನಡೆ. ಮೌಲ್ಯಗಳ ಗಣಿ ರಾಮ. ಹೀಗಾಗಿ ಅವನು ಎಲ್ಲರಿಂದ ಉಪಾಸ್ಯ. ರಾಮದೇವರ ಉಪಾಸಕರಾದ ರಾಯರು, ರಾಮನ ಹೆಸರಿಟ್ಟುಕೊಂಡವರೇ, ಅವನ ದಾರಿಯಲ್ಲೇ ನಡೆದವರು.
ರಾಮ ಚಾರಿತ್ರ್ಯ ಮಂಜರಿಯಲ್ಲಿ ರಾಮನ ಗುಣಗಾನವಿದೆ. ಇದರಲ್ಲಿ 11 ಶ್ಲೋಕಗಳು ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಒಂದು ಮನಸ್ಸು ಮಾಡುವ ಪಾಪಗಳನ್ನು ಕಳೆದು, ನಮ್ಮನ್ನು ಶುದ್ಧಗೊಳಿಸುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ 11 ನೇ ಮನೆ, ಮನೆಯನ್ನು ಅಂದರೆ ಕುಟುಂಬವನ್ನು ಸೂಚಿಸುತ್ತದೆ. ಈ 11 ಶ್ಲೋಕ ಪಾರಾಯಣ ಮಾಡಿದರೆ ಮನೆ ಶಾಂತಿಯಿಂದ ಇರುತ್ತದೆ, ಅಂದರೆ ಪರಿವಾರದಲ್ಲಿ ಸುಖ ಶಾಂತಿ ತುಂಬಿರುತ್ತದೆ.
11 ಮೆದುಳುಗಳಿವೆ, 11 ಪದರಿನ ಚರ್ಮವಿದೆ. ಭೂಮಿಯ ಮೇಲಿರುವ ಸಪ್ತಸಾಗರಗಳಲ್ಲಿ ಹುದುಗಿರುವ ಪರ್ವತಗಳಲ್ಲಿ ಅತಿ ಎತ್ತರದ್ದು 11 ಕಿಲೋಮೀಟರ್, ಆಳ ಎಂದು ಅರ್ಥ ಮಾಡಿಕೊಳ್ಳಬೇಕು. ಕೊನೆಗೆ ಸೂತಕ ಕಳೆದು ಹೊರಬರುವುದು ಹನ್ನೊಂದನೆಯ ದಿನವೇ. ಹರಿಯ ಮರೆತ ಸೂತಕ, ಗುರುವ ಸೇವಿಸದ ಸೂತಕ, ಅನ್ಯರಿಗೆ ಕೇಡು ಬಗೆದ ಸೂತಕ, ಮನಶುದ್ಧಿ ಇಲ್ಲದ ಸೂತಕ ಹೀಗೆ, ಮನಸಿನ ಮೈಲಿಗೆಯನ್ನು ತೊಳೆದು ಮಾಡುವ 11 ಕೊಡಗಳ ಗಂಗಾಜಲವನ್ನು ರಾಘವೇಂದ್ರ ಗುರುಸಾರ್ವಭೌಮರು ರಾಮ ಚಾರಿತ್ರ್ಯ ಮಂಜರಿಯಲ್ಲಿ ತುಂಬಿಸಿಟ್ಟಿದ್ದಾರೆ.
ಒಂದೊಂದು ಶ್ಲೋಕದ ಭಾವಾನುವಾದವನ್ನು ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಜ್ಞಾನ, ಆನಂದಗಳ ಗಣಿಯಾಗಿದ್ದ, ಸಿರಿಯನ್ನು ಹೃದಯದೊಳಗೆ ಹೊತ್ತಿದ್ದ, ಗುಣಗಳಿಗೂ, ಸಂಪತ್ತುಗಳಿಗೂ ಕೊರತೆ ಇರದಿದ್ದ ಶ್ರೀಮಾನ್ ರಾಮಚಂದ್ರನು, ದಶರಥನಿಂದ ಜನಿಸಿದ. ವಿಶ್ವಾಮಿತ್ರನು ರಾಮ-ಲಕ್ಷ್ಮಣರನ್ನು ಕರೆದುಕೊಂಡು ಹೋಗಿ, ಯಜ್ಞಗಳನ್ನು ರಕ್ಷಿಸಲು ತಾಟಕಿ ಮುಂತಾದ ಅನೇಕ ರಕ್ಕಸರನ್ನು ಕೊಲ್ಲಿಸಿದರು. ಅನೇಕ ಮಂತ್ರಗಳನ್ನು ಕಲಿಸಿದರು. ಬ್ರಹ್ಮಾಸ್ತ್ರ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಗಳಿಸಿಕೊಂಡನು ರಾಮ. ಅವನು ಅಹಲ್ಯೆಯನ್ನು ಅವಳ ಶಾಪದಿಂದ ಬಿಡುಗಡೆ ಮಾಡಿದನು , ಶಿವನ ಬಿಲ್ಲನ್ನು ಮುರಿದು ಜಾನಕಿಯನ್ನು ಮದುವೆಯಾದನು. ಈಂತಹ ರಾಮನು ನಮ್ಮ ಮೇಲೆ ತನ್ನ ಕೃಪೆಯನ್ನು ಸುರಿಸಲಿ ! (1)
ತನ್ನ ಪತ್ನಿ ಮತ್ತು ಸಹೋದರರೊಂದಿಗೆ ಅಯೋಧ್ಯೆಗೆ ಹಿಂದಿರುಗುವಾಗ, ರಾಮನು ಭಾರ್ಗವನ ಬಿಲ್ಲನ್ನು ಹೆದೆಯೇರಿಸಿ, ಅವನಲ್ಲಿ ವಾಸಿಸುತ್ತಿದ್ದ ರಾಕ್ಷಸನನ್ನು ಕೊಂದು ತನ್ನ ಊರಿಗೆ ಮರಳಿದನು. ದಶರಥನು ಋಷಿಮುನಿಗಳನ್ನು ರಾಮನ ಪಟ್ಟಾಭಿಷೇಕದ ಬಗ್ಗೆ ಕೇಳಿದನು. ಅವರು ಆತನು ಯೋಗ್ಯನಾಗಿದ್ದಾನೆ , ಎಲ್ಲಾ ಶುಭ ಗುಣಗಳನ್ನು ಹೊಂದಿದ್ದಾನೆ, ಎಲ್ಲಾ ಜೀವಿಗಳ ಆತ್ಮನಾಗಿದ್ದಾನೆ ಮತ್ತು ಎಲ್ಲಾ ದೋಷಗಳಿಂದ ಮುಕ್ತನಾಗಿದ್ದಾನೆ ಎಂದು ಉತ್ತರಿಸಿದರು . ನಾಗರಿಕರು ಅವನನ್ನು ಗೌರವಿಸಿದರು. ಹೊಗಳಿಕೆಗೆ ಯೋಗ್ಯನಾದ ರಾಮನು ನನ್ನ ವಾಕ್ಯಗಳಿಂದಲೂ ಪೂಜಿತನಾಗಲಿ. (2)
ಕೈಕೇಯಿಯನ್ನು ಮೆಚ್ಚಿಸಲು, ತನ್ನ ಸಹೋದರನೊಂದಿಗೆ ರಾಮನು ನಾರು ಮಡಿಯನ್ನುಟ್ಟು ಧರಿಸಿ ಗಂಗಾ ನದಿಯನ್ನು ದಾಟಿ ಅರಣ್ಯಕ್ಕೆ ಹೋದನು ಮತ್ತು ಗುಹನು ಅವನನ್ನು ಪೂಜಿಸಿದನು. ಆತ ತನ್ನ ಆಕರ್ಷಕವಾಗಿ ಜಟೆಯನ್ನು ಕಟ್ಟಿ ವನವಾಸಿಯಾದನು. ಭಾರದ್ವಾಜರಿಂದ ಗೌರವಿಸಲ್ಪಟ್ಟ ನಂತರ, ಅವನು ಯಮುನಾವನ್ನು ದಾಟಿ ಚಿತ್ರಕೂಟವನ್ನು ತಲುಪಿದನು. ಅವನ ತಾಯಂದಿರು ಮತ್ತು ಮುಗ್ಧ ಸಹೋದರ ಅವನನ್ನು ಭೇಟಿಯಾಗಲು, ಮರಳಿ ಕೆರೆಯಲು ಬಂದರು. ತನ್ನ ತಂದೆಯ ನಿಧನದ ಸುದ್ದಿ ಕೇಳಿ ಆತ ಅವರಿಗೆ ಸಾಂತ್ವನ ಹೇಳಿ ಅಂತಿಮ ವಿಧಿಗಳನ್ನು ನೆರವೇರಿಸಿದನು. ಆ ರಾಮ ನಮ್ಮನ್ನು ರಕ್ಷಿಸಲಿ. (3)
ಭರತನಿಗೆ ತನ್ನ ಪಾದುಕೆಗಳನ್ನು ನೀಡಿ , ರಾಜ್ಯವನ್ನು ನೋಡಿಕೊಳ್ಳಲು ಅವನನ್ನು ಕಳುಹಿಸಿದನು ಮತ್ತು ಕಾಗೆಗಳ ಕಣ್ಣುಗುಡ್ಡೆಯಲ್ಲಿ ಗೂಡುಕಟ್ಟುವ ರಾಕ್ಷಸನನ್ನು ಕೊಂದನು. ಅತ್ರಿಯಿಂದ ಪೂಜಿಸಲ್ಪಟ್ಟ ನಂತರ ಅವನು ದಂಡಕ ಅರಣ್ಯಕ್ಕೆ ತೆರಳಿದನು. ಅವನು ಶರಭಾಂಗನ ಬಯಕೆಯನ್ನು ಪೂರೈಸಿದನು ಮತ್ತು ವಿರಾಧನನ್ನು ಕೊಂದನು. ರಾಕ್ಷಸರನ್ನು ನಿಯಂತ್ರಿಸುವಂತೆ ಕೆಲವು ಪ್ರಮುಖ ಋಷಿಗಳು ವಿನಂತಿಸಿದಾಗ, ಆತ ಅವರಿಗೆ ಧೈರ್ಯ ತುಂಬಿದನು ಮತ್ತು ಅಗಸ್ತ್ಯನಿಂದ ತನ್ನ ಕತ್ತಿ , ಬಿಲ್ಲು ಮತ್ತು ಖಡ್ಗವನ್ನು ಸ್ವೀಕರಿಸಿದನು. ಆ ರಾಮ ನಮ್ಮನ್ನು ರಕ್ಷಿಸಲಿ. (4)
ಪಂಚವಟಿಯಲ್ಲಿ ವಾಸಿಸುತ್ತಿದ್ದಾಗ, ಲಕ್ಷ್ಮಣನು ಶೂರ್ಪನಖೆಯ ಮೂಗು ಕತ್ತರಿಸಿದನು. ನಂತರ ಅವನು ಹದಿನಾಲ್ಕು ಪ್ರಧಾನ ರಾಕ್ಷಸರನ್ನು ಮತ್ತು ಅನೇಕ ಸಂಖ್ಯೆಯ ರಾಕ್ಷಸರನ್ನು ಕೊಂದನು. ಖರಾ, ದೂಷಣ, ತ್ರಿಶಿರ್ಷ ಮತ್ತು ಜಿಂಕೆಯ ಸೋಗಿನಲ್ಲಿ ಬಂದ ಮಾರಿಚನನ್ನು ಸಹ ಕೊಂದನು. ರಾವಣನು ಅಪಹರಿಸಿದ ರೂಪ ಸೀತೆಯನ್ನು ಹುಡುಕುತ್ತಾ ಬಳಲಿದ, ಅವನು ಗಾಯಗೊಂಡ ಜಟಾಯುವನ್ನು ಕಂಡನು ಮತ್ತು ಅವನನ್ನು ನಿಜ ಧಾಮಕ್ಕೆ ಕಳುಹಿಸಿದನು. ಅವನು ಕಬಂದನನ್ನು ಸಹ ಸಂಹರಿಸಿದನು. ಆ ರಾಮ ನಮ್ಮನ್ನು ರಕ್ಷಿಸಲಿ. (5)
ಅವರು ಪಂಪಾ ಸರೋವರದ ತಟಕ್ಕೆ ಹೋಗಿ ಅಲ್ಲಿಯೇ ಉಳಿದುಕೊಂಡರು. ಶಬರಿಯ ಭಕ್ತಿಯಿಂದ ಸಂತೋಷಗೊಂಡ ಆತ ಆಕೆಗೆ ಮೋಕ್ಷವಿತ್ತನು. ಹನುಮಂತನ ಮಾತಿನ ಪ್ರಕಾರ ಅವನು ಸುಗ್ರೀವನೊಂದಿಗೆ ಸ್ನೇಹ ಬೆಳೆಸಿದನು, ಬ್ರಹ್ಮನ ವರದಿಂದ ಬಲವಾಗಿ ಬೆಳೆದ ಏಳು ತಾಳೆ ಮರಗಳನ್ನು ಕಡಿದನು. ಅವನು ವಾಲಿಯನ್ನು ಕೊಂದು ಸುಗ್ರೀವನನ್ನು ಅರಸನನ್ನಾಗಿ ಮಾಡಿದನು. ನಂತರ ಆತ ಮಲಯವತ್ ಪರ್ವತದ ಗುಹೆಯೊಂದರಲ್ಲಿ ವಾಸಿಸುತ್ತಿದ್ದನು. ಆ ರಾಮ ನಮ್ಮನ್ನು ರಕ್ಷಿಸಲಿ. (6).
ಅವನು ಅಲ್ಲಿ ಕೆಲವು ತಿಂಗಳುಗಳ ಕಾಲ ಇದ್ದನು ಮತ್ತು ವಾನರ ಶ್ರೇಷ್ಠರನ್ನು ಹತ್ತು ದಿಕ್ಕುಗಳಲ್ಲಿ ಕಳುಹಿಸಿದನು. ಸೀತೆಯನ್ನು ಹುಡಿಕಿ ಕಂಡ ನಂತರ ಹಿಂದಿರುಗಿದ ಹನುಮಂತನ ಮಾತನ್ನು ಕೇಳಿದ ಆತ, ಅನೇಕ ವಾನರ ವೀರರು ಮತ್ತು ಸುಗ್ರೀವನೊಂದಿಗೆ ಆ ಕಡೆ ಹೋದನು. ಅವನು ರಾವಣನ ಸಹೋದರನನ್ನು ಗೌರವಿಸಿದನು ಮತ್ತು ಸಮುದ್ರದ ರಾಜನು ಬೇಡಿಕೊಂಡ ರಾಕ್ಷಸರನ್ನು ಕೊಂದನು. ಅವನು ವಾನರ ನಿರ್ಮಿತ ಸೇತುವೆ ದಾಟಿದನು. ತನ್ನ ಲಂಕಾ ಪಟ್ಟಣದ ಮೇಲೆ ದಾಳಿ ಮಾಡಿದನು ಮತ್ತು ಅವುಗಳನ್ನು ತನ್ನ ಪಡೆಗಳಿಂದ ನಾಶಪಡಿಸಿದನು. ಆತನು ನಮ್ಮನ್ನು ರಕ್ಷಿಸಲಿ. ಆ ರಾಮ ನಮ್ಮನ್ನು ರಕ್ಷಿಸಲಿ. (7).
ಅವನು ರಾವಣ ಮತ್ತು ಅವನ ಸಹೋದರ, ದೊಡ್ಡ ದೇಹವುಳ್ಳ ಕುಂಭಕರ್ಣನನ್ನು ಕೊಂದು, ನಾಗಪಾಶದಿಂದ ಬಂಧಿರಾಗಿದ್ದ ಕಪಿವೀರರನ್ನು ಗರುಡನು ಮುಕ್ತಗೊಳಿಸಿ ಶ್ರೀರಾಮನಿಗೆ ನಮಿಸಿದನು. ರಾಮನು ಗರುಡನನ್ನು ಸಂತೋಷಪಡಿಸಿ ಕಳಿಸಿದನು. ಬೆಟ್ಟ ಕಿತ್ತು ತಂದಿಟ್ಟ ಹನುಮಂತನಿಗೆ ಆಶೀರ್ವದಿಸಿದನು. ಶ್ರೀರಾಮನು ವಿಜ್ಞಾನಾಸ್ಪಪ್ರಯೋಗದಿಂದ ಕಪಿವೀರರನ್ನು ರಕ್ಷಿಸಿ, ಲಕ್ಷ್ಮಣನಿಂದ ಇಂದ್ರಜಿತುವನ್ನು ಕೊಲ್ಲಿಸಿದನು. ಆ ರಾಮ ನಮ್ಮನ್ನು ರಕ್ಷಿಸಲಿ.(8).
ಅನೇಕ ರಾಕ್ಷಸರ ಸಮೇತ ರಾವಣನ್ನು ಕೊಂದ ನಂತರ, ಬ್ರಹ್ಮ ಮತ್ತು ಇತರ ದೇವರುಗಳು ಆತನ ಮೇಲೆ ಪುಷ್ಪವೃಷ್ಟಿ ಸುರಿಸಿದರು. ಅವನು ಅಗ್ನಿಪ್ರವೇಶ ಮಾಡಿ ಹೊರಬಂದ ಸೀತೆಯನ್ನು ಸ್ವೀಕರಿಸಿದನು. ತನ್ನ ಭಕ್ತನನ್ನು ಲಂಕೆಯ ರಾಜನನ್ನಾಗಿ ಮಾಡಿದನು. ಅವನು ಇತರರೊಂದಿಗೆ ಪುಷ್ಪಕ ವಿಮಾನದಲ್ಲಿ ನಲ್ಲಿರುವ ತನ್ನ ಪಟ್ಟಣಕ್ಕೆ ಮರಳಿದನು. ಆತನಿಗೆ ಪಟ್ಟಾಭಿಷೇಕವಾಯಿತು. ಆತನು ಎಲ್ಲಾ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡನು. ಆ ರಾಮ ನಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ. (9)
ಸಮೃದ್ಧವಾಗಿ ವಸುಧೆಯನ್ನು ಪರಪಾಲನೆ ಮಾಡಿದ, ಋಷಿಗಳಿಂದ ಪ್ರಶಂಸಿಸಲ್ಪಟ್ಟ, ವಾಯುವಿನ ಮಗನಿಗೆ ಬಹುಮಾನ ನೀಡಿದ, ಸುಗ್ರೀವ ಮತ್ತು ಇತರರನ್ನು ಮರಳಿ ಕಳುಹಿಸಿದ, ಭರತನಿಗೆ ಉತ್ತರಾಧಿಕಾರಿಯಾಗಿ ಕಿರೀಟಧಾರಣೆ ಮಾಡಿದ, ಲಕ್ಷ್ಮಣನನ್ನು ಆಡಳಿತಾತ್ಮಕ ಕೆಲಸಕ್ಕೆ ನೇಮಿಸಿದ, ಬಳಲುತ್ತಿರುವ ನಾಯಿಯ ಮೊರೆ ಆಲಿಸಿದ, ಅದಕ್ಕೆ ನ್ಯಾಯ ದೊರಕಿಸಿಕೊಟ್ಟ. ಲಕ್ಷ್ಮಣನಿಂದ ಲವಣಾಸುರನನ್ನು ಕೊಲ್ಲಿಸಿದ. ರುದ್ರಪದಕ್ಕಾಗಿ ತಲೆಯೂರಿದ ತಪಸ್ವಿಯನ್ನು ಕೊಂದು, ಬ್ರಾಹ್ಮಣನ ಮಗನನ್ನು ರಕ್ಷಿಸಿದನು . ಆತನು ಅಗಸ್ತ್ಯನಿಂದ ಮಾಲೆಯನ್ನು ಸ್ವೀಕರಿಸಿದನು. ಅಂಥ ರಾಮ ನಮ್ಮನ್ನು ರಕ್ಷಿಸಲಿ. (10)
ಅವನು ಯಜ್ಞವನ್ನು ಮಾಡಿದನು, ಮೂರು ಕೋಟಿ ರಾಕ್ಷಸರನ್ನು ಭರತನಿಂದ ಕೊಲ್ಲಿಸಿದನು ಮತ್ತು ರುದ್ರನ ಮನವಿಯನ್ನು ಆಲಿಸಿ ತನ್ನ ಪರಂಧಾಮಕ್ಕೆ ತೆರಳಲು ಸಿದ್ಧನಾಗಿದ್ದನು. ಈ ಮಧ್ಯೆ ಆತನು ತಕ್ಷಣದ ಆಹಾರದ ಮೂಲಕ ದೂರ್ವಾಸರನ್ನು ತೃಪ್ತಿಪಡಿಸಬೇಕಾಯಿತು. ಆತನು ತನ್ನ ಸ್ವಂತ ಪುತ್ರರಿಗೆ ಪಟ್ಟಾಭಿಷೇಕ ಮಾಡಿದನು ಶ್ವೇತದ್ವೀಪದಲ್ಲಿ ಶ್ರೀ, ಹ್ರೀಗಳೆಂಬ ರೂಪವನ್ನು ಧರಿಸಿದ ಸೀತೆಯು ಎರಡು ಪಾರ್ಶ್ವಗಳಲ್ಲಿಯೂ ನಿಂತು ಚಾಮರ ಬೀಸುತ್ತಿರಲು, ಹನುಮಂತದೇವರು ಶ್ವೇತಚ್ಛತ್ರವನ್ನು ಹಿಡಿದಿರಲು, ಬ್ರಹ್ಮರುದ್ರಾದಿದೇವತೆಗಳಿಂದ ಸ್ತುತ್ಯನಾಗಿ ತನ್ನ ನಿಜ ಮಂದಿರದಲ್ಲಿ ಅವನು ಸುಖದಿಂದ ವಾಸಮಾಡಿದನು. ಅಂಥ ರಾಮ ನಮ್ಮನ್ನು ರಕ್ಷಿಸಲಿ. (11)
ಹೀಗೆ ರಾಮನ ಕಥೆಯನ್ನು, ಸಂಕ್ಷಿಪ್ತವಾಗಿ, ರಾಘವೇಂದ್ರತೀರ್ಥ ಗುರುಸಾರ್ವಭೌಮರು ವಿವರಿಸಿದ್ದಾರೆ. ಇದು ಓದುಗರೆಲ್ಲರಿಗೆ ರಾಮಚಂದ್ರನ ಅನುಗ್ರಹವನ್ನು ತರಲಿ.
- ಜನಮೇಜಯ ಉಮರ್ಜಿ, ಹುಬ್ಬಳ್ಳಿ
9986741858
ಲೇಖಕರ ಸಂಕ್ಷಿಪ್ತ ಪರಿಚಯ:
ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾಡಗಿ ಗ್ರಾಮದವರು. ವೃತ್ತಿಯಿಂದ ಬಹುರಾಷ್ಟ್ರೀಯ ಸಾಫ್ಟವೇರ್ ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಲ್ಲಿಯವರೆಗೆ ಗಣಕ ವಿಜ್ಞಾನಕ್ಕೆ ಸಂಬಂಧಿಸಿದ ಆರು ಪುಸ್ತಕಗಳನ್ನು ಬರೆದಿದ್ದಾರೆ. ಅವು ಕರ್ನಾಟಕ ವಿದ್ಯಾಲಯದ ಬಿಸಿಎ ಕೋರ್ಸಿಗೆ ಮತ್ತು ಕರ್ನಾಟಕ ರಾಜ್ಯ ಡಿಪ್ಲೋಮಾ ಕೋರ್ಸಿಗೆ ಪಠ್ಯಪುಸ್ತಕಗಳಾಗಿ ಉಪಯುಕ್ತವಾಗಿವೆ.ಕನ್ನಡದಲ್ಲಿ ಎರಡು ಸ್ವತಂತ್ರ ಕೃತಿ ಮತ್ತು ಮೂರು ಅನುವಾದಿತ ಕೃತಿಗಳು, ನಾಲ್ಕು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಅವರ ತಂದೆಯವರಾದ ಪರೀಕ್ಷಿತ ಆಚಾರ್ಯ ಉಮರ್ಜಿ ಅವರು ಕಿಸೆಯಲ್ಲಿ ಬಿಡಿಗಾಸು ಇಲ್ಲದೆ, ಬರಿ ಗಾಲಿನಿಂದ ಕೃಷ್ಣಾ ನದಿಯನ್ನು ಪ್ರದಕ್ಷಿಣೆ ಮಾಡಿದ್ದಾರೆ. ಅವರ ತಂದೆಯವರ ಅನುಭವಗಳನ್ನು "ಕೃಷ್ಣ ಪರಿಕ್ರಮ" ಎಂಬ ಪುಸ್ತಕದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಭಾರತೀಯ ಆಧ್ಯಾತ್ಮ ಪರಂಪರೆಯ ವಿವಿಧ ವಿಷಯಗಳ ಮೇಲೆ ಸಾಕಷ್ಟು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಊರು ತಿರುಗಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ಪ್ರವಚನಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಯ್ಯುಟ್ಯೂಬಿನಲ್ಲಿ ಗಿಳಿಪಾಠ ಎಂಬ ಭಾಗವತ ಸರಣಿಯನ್ನು ಮಾಡಿದ್ದಾರೆ. ಪರಮ ವೀರ ಚಕ್ರ ಪಡೆದ ಸೈನಿಕರ ಕುರಿತಾದ ಲೇಖನ ಸಂಯುಕ್ತ ಕರ್ನಾಟಕದಲ್ಲಿ ಜನಪ್ರಿಯವಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ