ಕ್ರೋಧಿ ನಾಮ ಸಂವತ್ಸರ- ಯುಗಾದಿ ಸಂಭ್ರಮ- ಹೊಸ ವರ್ಷದ ಸಾರ್ಥಕತೆ

Upayuktha
0


ಕಾಲ ಚಕ್ರಗತಿಯಲ್ಲಿ ನಾವೀಗ ಒಂದು ವರ್ಷಾವಧಿ ಮಿಗಿಸಿ ಇನ್ನೊಂದಕ್ಕೆ ಪ್ರವೇಶಿಸುತ್ತಿದ್ದೇವೆ. ಹೊಸ ವರ್ಷ ನಮ್ಮ ಜೀವನ ರೂಪಣೆ ನಿಟ್ಟಿನಲ್ಲಿ ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಹೊಸತನ ನೀಡುವ ವರ್ಷವಾಗಬೇಕು. ಹೊಸ ಹೊಸ ಚಿಂತನೆಗಳು ನಮ್ಮಲ್ಲಿ ಮೂಡುವಂತಾಗಬೇಕು. ನಿರಾಧಾರ ನಂಬಿಕೆಗಳಿಗೆ ಜೋತುಬಿದ್ದು ಸಮಾಜದಲ್ಲಿ ವೈಮನಸ್ಯ ಮೂಡಿಸುವ ಚಿಂತನೆ ಸಲ್ಲದು. ಹೀಗೆ ಪ್ರವೇಶಿಸಲಿರುವ ಹೊಸ ವರ್ಷವನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಧ್ಯಾತ್ಮಿಕ ರೆಸಲೂಷನ್ ಅನ್ನು ಹೊಸ ವರ್ಷದ ಹೊಸ್ತಿಲಲ್ಲಿ ಮನುಕುಲವನ್ನು ಒಗ್ಗೂಡಿಸುವ ಹೊಸ ಚಿಂತನೆಗಳು ಮೂಡಿಬರಲೆಂಬುದೇ ನಮ್ಮ ಆಶಯ.


ಹೊಸ ವರ್ಷವೆಂದರೆ ಸಂಭ್ರಮದ ಹೊನಲು. ಶಾಂತಿ ಸಂದೇಶದ ಕ್ಷಣವಿದು. ಆದರೆ ಶಾಂತಿ ಎಂದರೇನು? ಬಹಳಷ್ಟು ಮಂದಿ ಶಾಂತಿ ಎಂದರೆ ಯುದ್ಧ ನಡೆಯದಿರುವ ಕ್ಷಣ ಎಂದೇ ಭಾವಿಸುತ್ತಾರೆ. ಆದರೆ ಯುದ್ಧ ನಡೆಯದಿರುವುದೇ ಶಾಂತಿಯಲ್ಲ. ಎಲ್ಲರೂ ಕ್ಷೇಮವಾಗಿ ಇರುವುದೇ ಶಾಂತಿಯ ನಿಜವಾದ ಅರ್ಥ. ನಮಗಿಂದು ಶಾಂತಿಯ ಅವಶ್ಯಕತೆಯಿದೆ. ನಮ್ಮ ಸುತ್ತಮುತಲ ಪ್ರಪಂಚದ ಆಗುಹೋಗುಗಳನ್ನು ಗಮನಿಸಿ, ಅದೆಷ್ಟು ಅಶಾಂತತೆ ತಾಂಡವವಾಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. 


ದಯವೇ ಧರ್ಮದ ಮೂಲ, ದೈವವು ತನ್ನ ಅಂತರಂಗದಲ್ಲಿಯೇ ಇದೆ. ಹೊರಗೆ ಇಲ್ಲ ಎಂದು ನಿಶ್ಚಯಸುವುದೇ ಅಧ್ಯಾತ್ಮವೆನಿಸುವುದು. ಭೌತಿಕ, ದೈವಿಕ ವಿಚಾರ ಪದ್ಧತಿಗಳೆರೆಡೂ ಆಧ್ಯಾತ್ಮದಲ್ಲಿ ಪರ್ಯವಸಾನವನ್ನು ಹೊಂದುವುದು. ಆಧ್ಯಾತ್ಮದ ವಿಕಾಸ ಮಾರ್ಗದಲ್ಲಿ ಕಂಡ ಸಮನ್ವಯ ದೃಷ್ಟಿಯ ಪರಿಪೂರ್ಣವಾದ ಫಲವೇ ಅನುಭಾವ.ಜೀವನದಲ್ಲಿ ವರುಷ-ವರುಷಗಳು ಉರುಳಿದಂತೆ ನಮ್ಮ ಮಾರ್ಗ ಆಧ್ಯಾತ್ಮದೆಡೆಗೆ ಸಾಗಿದರೆ ಬದುಕು ಪರಿಪೂರ್ಣವಾಗುತ್ತದೆ. ಪರಿಪೂರ್ಣವಾಗುತ್ತದೆ. 


ಇದೊಂದು ಕಾರಣವೆಂದರೆ, ಬೆಲೆ ಏರಿಕೆಯ ಕಾರಣ ಜನ ಸಾಮಾನ್ಯರು ಅಸಂತುಷ್ಟರಾಗಿದ್ದಾರೆ. ದಿನ ನಿತ್ಯ ಬಳಕೆಯ ವಸ್ತುಗಳು ಕೈಗೆಟುಕದಷ್ಟು ತುಟ್ಟಿಯಾಗಿವೆ. ಇದೊಂದು ಕಡೆಯಾದರೆ ಅವ್ಯಾಹತವಾಗಿ ನಡೆಯುತ್ತಿರುವ ಕೋಮು ಗಲಭೆ. ವಿವಿಧ ಕೋಮುಗಳ ನಡುವಿನ ವೈಷಮ್ಯವನ್ನು ನಾವು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದೇವೆ. ದೇಶವನ್ನು ಕಾಡುತ್ತಿರುವ ಮತ್ತೊಂದು ಭೂತವೆಂದರೆ ಅತ್ಯಾಚಾರ ಮತ್ತು ಲೈಂಗಿಕ ಹಗರಣ ಪ್ರಕರಣಗಳು. ಕಾಮುಕರ ಕೆಂಗಣ್ಣು ಶಾಲೆಯಲ್ಲಿ ಓದುವ ಸಣ್ಣ ಮಕ್ಕಳನ್ನೂ ಬಿಡುತ್ತಿಲ್ಲ. ಅದರೊಂದಿಗೆ ನಮ್ಮ ನೈತಿಕ ಮೌಲ್ಯ ಕುಸಿದಿದೆ. ಇನ್ನಿಲ್ಲದ ಒತ್ತಡಕ್ಕೆ ಕಾರಣವಾಗಿದೆ. ಅದರೊಂದಿಗೆ ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಅಭದ್ರತೆ, ಅರ್ಥವ್ಯವಸ್ಥೆ ಕುಸಿತ ಮತ್ತಿತರ ಸಂಗತಿಗಳಿಂದಲೂ ನಾವು ಗೊಂದಲಕ್ಕೀಡಾಗಿದ್ದೇವೆ. ಆತ್ಮ ಶಾಂತಿಗಾಗಿ, ಮನಶಾಂತಿಗಾಗಿ ನಾವು ಹಾತೊರೆಯುತ್ತಿದ್ದೇವೆ. ಎಷ್ಟೋ ಮಂದಿ ಶಾಂತಿಯನ್ನು ಅರಸಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ. ಕೆಲವರು ಆರೋಗ್ಯ ತಪಾಸಣೆಗೆಂದು ವೈದ್ಯರ ಬಳಿ ಹೋಗುತ್ತಾರೆ. ಮತ್ತೆ ಕೆಲವರು ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕರಾಗುತ್ತಾರೆ. ನಾವೆಷ್ಟೇ ಪ್ರಯತ್ನಿಸಿದರೂ ಶಾಂತಿಯ ಛಾಯೆ ಎಲ್ಲೂ ಒಡಮೂಡುತ್ತಿಲ್ಲ. ಶಾಂತಿ ಎನ್ನುವುದು ಮಾತುಕತೆಗಳಿಂದ, ಒಪ್ಪಂದಗಳಿಂದ ಬರುವುದಲ್ಲ. ಅದು ಮಾನಸಿಕ ಸ್ಥಿತಿಯ ಪ್ರತಿಬಿಂಬ. ಅಶಾಂತಿಗೆ ಬಾಹ್ಯ ವಸ್ತು, ವಿಷಯಗಳಷ್ಟೇ ಕಾರಣವಲ್ಲ. ಅದು ನಮ್ಮೊಳಗೆ ನಡೆಯುತ್ತಿರುವ ಅಂತಃಕಲಹ. ಹುಲುಮಾನವರಾಗಿ ನಾವೆಂದೂ ಸಮಸ್ಯೆಯ ಆಳಕ್ಕೆ ಹೋಗುವುದಿಲ್ಲ. ಬದಲಿಗೆ ಬಾಹ್ಯ ಶಮನದತ್ತ ಮಾತ್ರವಷ್ಟೇ ಗಮನ ಹರಿಸುತ್ತೇವೆ. ನಮ್ಮೊಳಗಿನ ಅಶಾಂತತೆಗೆ ನಾವು ಮಾಡಿದ ಕರ್ಮಗಳೇ ಕಾರಣ. ಅದನ್ನು ಕಳೆದುಕೊಳ್ಳಲು ದೇವರ ಮೊರೆ ಹೋಗಬೇಕು. 


ನಮ್ಮನ್ನು ನಾವು ತಿದ್ದಿಕೊಳ್ಳಲು, ಹೇಗೆ ಬಾಳಬೇಕೆಂಬುದನ್ನು ಕಲಿಯಲು, ನಮ್ಮ ರೀತಿ, ನೀತಿಗಳನ್ನು ಸರಿಪಡಿಸಿಕೊಳ್ಳಲು ಇತಿಹಾಸವನ್ನು ಓದಬೇಕು. ವೈಜ್ಞಾನಿಕ ಕ್ರಾಂತಿಯಂತೂ ಕಳೆದ 10 ವರ್ಷದಲ್ಲಿ ಅಪಾರ ಆಗಿದೆ. ಆದರೆ ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ಸಂಘರ್ಷಗಳಿಗೆ ವಿಜ್ಞಾನ ಪರಿಹಾರ ನೀಡಿಲ್ಲ. ಇದಕ್ಕಾಗಿ ಪರಸ್ಪರ ಮೈತ್ರಿ, ಪ್ರೀತಿ, ವಿಶ್ವಾಸದಿಂದ ಬಾಳುವ ವಿಷಯಕ್ಕೆ ಒತ್ತು ನೀಡಬೇಕಿದೆ. ಮಾಧ್ಯಮಗಳು ಜಗತ್ತನ್ನು ಹತ್ತಿರಕ್ಕೆ ಕರೆತಂದಿವೆ. ನಮ್ಮನ್ನು ನಿತ್ಯವೂ ಎಚ್ಚರಿಸುತ್ತಿವೆ. ಪ್ರಪಂಚವನ್ನು ಹತ್ತಿರದಿಂದ ನೋಡುವ ಈ ಅವಕಾಶ ದೊರೆತಿರುವಾಗ ನಾವು ಹೇಗಿರಬೇಕೆಂಬುದನ್ನು ಅರಿತುಕೊಳ್ಳಬೇಕಿದೆ. ರಾಷ್ಟ್ರಗಳ ನಡುವೆ ಸಂಪರ್ಕ ಸಾಧಿಸುವ, ಉಪಗ್ರಹಯಾನ ಮಾಡುತ್ತಿರುವ ಇಂತಹ ಸಂಧರ್ಭದಲ್ಲಿ ಮಾನವರೆಲ್ಲರೂ ಒಂದಾಗಿ ಬಾಳಬೇಕು. ರಾಗ, ದ್ವೇಷಗಳನ್ನು ದೂರಮಾಡಿ ಹೃದಯ ವೈಶಾಲ್ಯತೆಯಿಂದ ಶಾಂತಿ, ನೆಮ್ಮದಿಯ ಬಾಳು ಎಲ್ಲರದ್ದಾಗುವಂತೆ ನಡೆದುಕೊಳ್ಳುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಇಂದಿನ ಯುವ ಪೀಳಿಗೆ ರಾಷ್ಟ್ರ ನಿರ್ಮಾಣದತ್ತ ಚಿಂತನೆ ಮಾಡಬೇಕು. ಭಾರತ ಪ್ರಗತಿಯಲ್ಲಿದೆ ಎಂಬುದನ್ನು ಸಾಬೀತು ಮಾಡಬೇಕು. ರಾಷ್ಟ್ರದ ಪ್ರಗತಿಗೆ ಸರಕಾರಗಳ ಯೋಜನೆಗಳಿಗೆ ಸ್ವಂದಿಸುವ ಮೂಲಕ ಅದರಲ್ಲಿ ನಾವೂ ಭಾಗಿಗಳಾಗಿಬೇಕು. ಅನವಶ್ಯಕ ವಿಷಯಗಳ ಬಗ್ಗೆಯೇ ಚರ್ಚೆ ಮಾಡುತ್ತಾ ಕಾಲಹರಣ ಮಾಡುವ ಬದಲು ಭಾರತೀಯ ಸಂಸ್ಕೃತಿ, ಪಾಶ್ಚಾತ್ಯರ ವಿಜ್ಞಾನವನ್ನು ಮೇಳೈಸಿಕೊಂಡ ಪ್ರಗತಿಯನ್ನು ಕಾಣುವಂತಾಗಬೇಕು. 


ಮನುಷ್ಯನು ತನ್ನ ನಡವಳಿಕೆಯನ್ನು ಪ್ರತಿದಿನವೂ ಇಂತಹ ವಿಮರ್ಶೆಗೆ ಒಳಪಡಿಸಿ ಪಶುಸಮಾನವಾದ ನಡವಳಿಕೆ ಇದ್ದರೆ ಅದನ್ನು ಬಿಟ್ಟು ಸತ್ಪುರಷನಾಗಬಹುದು. ಈ ಮೂಲಕ ಗುರಿಯನ್ನು ತಲುಪಬಹುದು. ಈ ಸಂದರ್ಭದಲ್ಲಿ ನಾವು ಒಂದಂಶವನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಸತ್ಪುರುಷರ ನಡವಳಿಕೆ ಕೇವಲ ಮಾತಿನಿಂದಲ್ಲ; ಶರೀರ, ಮಾತು ಮತ್ತು ಮನಸ್ಸು ಈ ಮೂರರಿಂದಲೂ ಸತ್ಪುರುಷರಂತೆ ನಡೆದುಕೊಳ್ಳಬೇಕು. ಅಂದರೆ ತ್ರಿಕರಣಗಳಿಂದಲೂ ಸತ್ಪುರುಷರಂತೆ ನಡವಳಿಕೆ ಇರಬೇಕು. ಇಲ್ಲವಾದಲ್ಲಿ ಗುರಿ ತಲುಪಲು ಸಾಧ್ಯವಿಲ್ಲ.


ಶ್ರೀ ಶಂಕರಭಗವತ್ಪಾದರು ವಿವೇಕಚೂಡಾಮಣಿಯಲ್ಲಿ 'ಮನುಷ್ಯ ಜನ್ಮ ಪಡೆದೂ ತನ್ನ ಗರಿಯನ್ನು ಹೊಂದುವುದರಲ್ಲಿ ಯಾವನು ಜಾರುತ್ತಾನೋ ಆತನು ಮೂರ್ಖನೇ ಸರಿ. ಇವನಿಗಿಂತ ಇನ್ನೊಬ್ಬ ಮೂರ್ಖನಿರಲು ಸಾಧ್ಯವಿಲ್ಲ' ಎಂದು ಹೇಳುತ್ತಾರೆ. ತನ್ನ ಗುರಿಯನ್ನು ಹೊಂದುವ ವಿಷಯದಲ್ಲಿ ಜಾರಬೇಕಾದರೆ ನಿತ್ಯವೂ ತನ್ನ ನಡವಳಿಕೆಯನ್ನು ಅವಲೋಕಿಸಿ ತಿದ್ದಿಕೊಳ್ಳದಿರುವುದೇ ಕಾರಣವಾಗಿರುತ್ತದೆ. 


ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಸಂಪತ್ತು. ಯುವಕರು ಆದರ್ಶವಾದಿಗಳಾಗಿ ಕ್ರಿಯಾಶೀಲರಾಗಿ ಬಾಳಿದರೆ ಈ ನಾಡು ನುಡಿಗಳು ಶ್ರೀಮಂತಗೊಳ್ಳುವುದರಲ್ಲಿ ಅನುಮಾನವಿಲ್ಲ, ಯೌವನ, ಧನಸಂಪತ್ತು, ಪ್ರಭುತ್ವ ಮತ್ತು ಅವಿವೇಕ ಈ ನಾಲ್ಕರಲ್ಲಿ ಒಂದಿದ್ದರೆ ಸಾಕು, ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತವೆ. ಈ ನಾಲ್ಕು ಒಬ್ಬನಲ್ಲಿ ಏನಾದರೂ ಕೂಡಿದರೆ ಜೀವನ ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲ. ಇಂದು ಯುವ ಜನಾಂಗ ಹಣ ಮತ್ತು ಅಧಿಕಾರದ ಬೆನ್ನು ಹತ್ತಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. 


ಜೀವನ ಎಂದರೆ ಭೋಗದ ವಸ್ತು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಚಂಚಲವಾದ ಮನಸ್ಸೇ ಎಲ್ಲದಕ್ಕೂ ಕಾರಣ. ಬದುಕು ಕರೆದುಕೊಂಡು ಹೋದ ಕಡೆ ಯುವಕರು ಹೋಗುವುದು ಜಾಣತನ. ತಪ್ಪು ದಾರಿಯಲ್ಲಿ ನಡೆಯುವ ಗುಂಪಿನೊಂದಿಗೆ ಗುರುತಿಸಿಕೊಳ್ಳುವುದಕ್ಕಿಂತ ಸರಿದಾರಿಯಲ್ಲಿ ಒಬ್ಬಂಟಿಗನಾಗಿ ನಡೆಯುವುದೇ ಒಳ್ಳೆಯದು. ಸಂಪತ್ತು ಮತ್ತು ಕಾಮನೆಗಳಿಗೆ ಧರ್ಮ ಮತ್ತು ಆಧ್ಯಾತ್ಮ ಸುರಕ್ಷತೆಗೆ ದಾರಿ ಮಾಡಿ ಕೊಡುತ್ತದೆ. ಗುರು ಹಿರಿಯರು, ಹೆತ್ತ ತಾಯ್ತಂದೆಯವರ ಸಮಾಜ ಚಿಂತಕರ ಭಾವನೆಗಳಿಗೆ ಯುವ ಜನಾಂಗ ಸ್ಪಂದಿಸಿ ಕಾರ್ಯ ಪ್ರವೃತ್ತರಾದರೆ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹುಟ್ಟು ಮತ್ತು ಸಾವು ನಿನ್ನ ಕೈಯಲ್ಲಿದೆ. ಜೀವನ ನಂದನವನ ಮಾಡಿಕೊಳ್ಳಬೇಕಾದುದು ಅವರವರ ಜವಾಬ್ದಾರಿ. ಹುಟ್ಟು ಸಾವು ಮಧ್ಯೆ ಇರುವ ಬದುಕು ಸದೃಢಗೊಳಿಸಬೇಕಾದುದು ಅವಶ್ಯಕ. ಯುವ ಜನಾಂಗ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಂಡರೆ ಬಾಳು ದುರ್ಬಲಗೊಳ್ಳುವುದು. ಅಧ್ಯಾತ್ಮದ ಅರಿವು, ಕ್ರಿಯಾಶೀಲ ಬದುಕು, ರಾಷ್ಟ್ರಾಭಿಮಾನವನ್ನು ಯುವ ಜನಾಂಗ ಅಳವಡಿಸಿಕೊಂಡು ಬಾಳಿದರೆ ಬಾಳು ಬಂಗಾರವಾಗುವುದು. ಜೀವನ ಸಾರ್ಥಕಗೊಳ್ಳುವುದು. 


ಯಾವನೇ ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಔನ್ನತ್ಯ ಹೊಂದಲು ವಿವಿಧ ಮಜಲುಗಳಿದ್ದು ಆತನ ಆಸಕ್ತಿಯ ಹಿನ್ನೆಲೆಯಲ್ಲಿ ದಾರಿ ತೆರೆದುಕೊಳ್ಳುತ್ತದೆ. ಧ್ಯಾನದಲ್ಲಿ ಹೆಚ್ಚು ಆಸಕ್ತಿಯಿದ್ದರೆ ಆತ ಆಧ್ಯಾತ್ಮಿಕ ಬೆಳವಣಿಗೆ ಸಾಧಿಸಿಕೊಳ್ಳಬಹುದು. ದೇವರಲ್ಲಿ ಅಂತರ್ಮುಖ ಭಾವ, ಪೂಜೆ, ಹೋಮ, ಹವನ ಮಾತ್ರವಲ್ಲ ಬಡವರು, ರೋಗಿಗಳ ಶುಶ್ರೂಷೆ ಮೂಲಕ ಅವರಲ್ಲಿರುವ ಭಗವಂತನನ್ನು ಒಲಿಸಿ ಬದುಕಿನ ಎತ್ತರಕ್ಕೇರಲು ಸಾಧ್ಯ. ವ್ಯಕ್ತಿಯೊಬ್ಬ ಧಾರ್ಮಿಕವಾಗಿ ಸಾಧನೆ ಮಾಡಲು ದಾರಿಗಳು ಹಲವು. ತಂದೆ, ತಾಯಿಯ ಸೇವೆ ಯೋಗ್ಯತೆಗನುಗುಣವಾಗಿ ಮಾಡುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಗುರು ಹಿರಿಯರನ್ನು ಗೌರವಿಸುವುದು ಒಬ್ಬ ಧಾರ್ಮಿಕ ವ್ಯಕ್ತಿಯ ಬದ್ಧತೆ. ಜಾತಿ, ಮತ, ವರ್ಗಗಳ ತಾರತಮ್ಯವಿಲ್ಲದೆ ಧರ್ಮ ಶ್ರದ್ಧೆ, ನಂಬಿಕೆ ಉಳ್ಳವರನ್ನು ಗೌರವದಿಂದ ಕಾಣುವುದು ಧಾರ್ಮಿಕ ಚಿಂತಕನ ಉತ್ತಮ ಲಕ್ಷಣ. 


ಸಂಕುಚಿತ ಭಾವನೆ ತೊಡೆದುಹಾಕಿ, ಮತಾಂಧನಾಗದೆ, ಯಾವುದೇ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಬರಿಯ ತನ್ನ ಏಳಿಗೆಯ ಸ್ವಾರ್ಥವಿಲ್ಲದೆ ಲೋಕಾಃ ಸಮಸ್ತಃ ಸುಖಿನೋ ಭವಂತು (ಲೋಕದ ಸಮಸ್ತ ಜನರು ಸುಖ, ಶಾಂತಿ, ನೆಮ್ಮದಿ ಕಾಣಲಿ) ಎನ್ನುವ ಪ್ರಾರ್ಥನೆ ಮಾಡುವ ಮನೋಭಾವ ಗಳಿಸಿಕೊಳ್ಳಬೇಕು. ಇದು ಸಮಾಜದ ಒಗ್ಗಟ್ಟು ಪರಸ್ಪರ ಪ್ರೀತಿ, ಸೌಹಾರ್ದ, ವಿಶ್ವಾಸ ಶಾಂತಿಗೆ ಪೂರಕವಾಗಿರಲಿ.



- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು

ಇ-ಮೇಲ್ : padmapranava@yahoo.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top