ಸಹಕಾರ ಸಂಘಗಳ ಚಟುವಟಿಕೆಗಳು ಸುತ್ತಲಿನ ಜನರಿಗೂ ಉಪಯೋಗವಾಗಬೇಕು: ಡಾ. ಹೆಚ್.ಸಿ. ನಾಗರಾಜ್

Upayuktha
0


ಬೆಂಗಳೂರು: ಸಹಕಾರ ಸಂಘಗಳ ಉದ್ದೇಶ- ಸ್ವಯಂ ಪಾಲ್ಗೊಳ್ಲುವಿಕೆಯಿಂದ ಇಡೀ ಸಮಾಜವನ್ನು ಒಳಗೊಂಡ ಸ್ವಾಯತ್ತ ಸಂಸ್ಥೆಗಳನ್ನು ಆರ್ಥಿಕ ಸಬಲೀಕರಣಕ್ಕಾಗಿ ಬೆಳೆಸುವುದು. ಇದು ಜನರಿಂದಲೇ ಪ್ರಾರಂಭವಾಗುವ, ಜನರಿಂದಲೇ ವಹಿವಾಟು ನಡೆಸುವ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಒಂದು ಅಪರೂಪ ಆಂದೋಲನ. ಈ ಆಂದೋಲನ ಕೇವಲ ಸಹಕಾರ ಸಂಘಗಳ ಸದಸ್ಯರ ಏಳಿಗೆಗಷ್ಟೇ ಮೀಸಲಾಗಬಾರದು, ಅದು ಸುತ್ತಣ ಪರಿಸರದ ಸಮಸ್ಯೆಗಳಿಗೆ ಕೂಡ ಸೂಕ್ತ ಪರಿಹಾರ ಕಲ್ಪಿಸುವ ಅಂತಃಕರಣವನ್ನೂ ರೂಢಿಸಿಕೊಳ್ಳಬೇಕು ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ನುಡಿದರು.


ಈ ನಿಟ್ಟಿನಲ್ಲಿ ಯಲಹಂಕದ ‘ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’, ನಿಜಕ್ಕೂ ಮಾದರಿಯಾಗಿದೆ. ಹಾರೋಹಳ್ಳಿಯಲ್ಲಿ ಅದು ಸ್ಥಾಪಿಸಿರುವ ಜನೌಷಧಿ ಕೇಂದ್ರ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುತ್ತಮುತ್ತಣ ಕೃಷಿ ಕಾರ್ಮಿಕರು ಮಾತ್ರವಲ್ಲದೆ ಮಧ್ಯಮ ವರ್ಗದವರ ಔಷಧೀಯ ಅಗತ್ಯಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಪೂರೈಸುತ್ತಿದೆ ಮಾತ್ರವಲ್ಲದೆ ಈ ಸಹಕಾರಿ ಸಂಘ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಆಧುನಿಕ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತಿದೆ. ನಿಟ್ಟೆ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಹತ್ತಿರದ ಹಳ್ಳಿಗರನ್ನು ಒಳಗೊಂಡು ಪರಿಸರ ಜಾಗೃತಿ ಮಾಡಿಸುವಲ್ಲಿ ಸಹ ನಿರಂತರವಾಗಿ ಶ್ರಮಿಸುತ್ತಿದೆ. ಇದು ಶ್ಲಾಘನೀಯ ಸಂಗತಿ’ ಎಂದು ಅವರು ಹೇಳಿದರು. 



ಅವರು, ಸಂಸ್ಥೆಯ ಆವರಣದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಗೂ ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ವಿವಿಧೋದ್ದೇಶ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


‘ಈ ಸಂದರ್ಭದಲ್ಲಿ ಸಹಕಾರ ಆಂದೋಲನಕ್ಕೆ ಶುಭ ನಾಂದಿ ಹಾಡಿದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಮುಖಂಡ ಸಿದ್ದನಗೌಡ ಸಣ್ಣರಾಮನ ಗೌಡ ಪಾಟೀಲರನ್ನು ನೆನಪು ಮಾಡಿಕೊಳ್ಳಲೇಬೇಕು. ಅವರು ಅಂದು ಶ್ರದ್ಧಾಪೂರ್ವಕವಾಗಿ ಶುರು ಮಾಡಿದ್ದ ಸಹಕಾರ ಆಂದೋಲನಕ್ಕೆ ಯೋಜಿತ ಹಾಗೂ ಕಾನೂನಾತ್ಮಕ ಸ್ವರೂಪ ನೀಡಿದ್ದು 1959ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ. ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಇಂದು ಅತ್ಯಂತ ಪ್ರಬಲವಾಗಿದೆ. ನಮ್ಮ ನಾಡಿನ ಸಾಧನೆ ಇಡೀ ದೇಶಕ್ಕಲ್ಲದೆ, ಮೂರನೇ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ’ ಎಂದು ವಿವರಿಸಿದರು.


ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಕಾರ್ಯದರ್ಶಿ ಲಕ್ಷೀಪತಯ್ಯ, ರಕ್ತದಾನದಲ್ಲಿ ಗಿನ್ನಿಸ್ ದಾಖಲೆ ಸೃಷ್ಟಿಸಿರುವ ಮಧುರಾ ಅಶೋಕ್ ಕುಮಾರ್ ಹಾಗೂ ಕೌಶಲ್ಯ ತರಬೇತುದಾರ ಸ್ಟಾರ್ ವೆಂಕಟೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಬೆಂಗಳೂರು ನಗರ ಜಿಲ್ಲಾ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂ. ಲಕ್ಷಿ, ವ್ಯವಸ್ಥಾಪಕ ಆರ್. ನಾಗರಾಜ್, ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘದ ಪ್ರಮುಖ ಪದಾಧಿಕಾರಿಗಳಾದ ರಾಜ ಶೆಟ್ಟಿ, ಜಯಕೃಷ್ಣ ಹಾಗೂ ಆಯೇಷಾ ಸಿದ್ದಿಕಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top