ಈ ಪ್ರಪಂಚದಲ್ಲಿ ಕೆಲವು ಪ್ರದೇಶಗಳು ಮೈ ನವಿರೇಳಿಸುವಂಥ ರಹಸ್ಯಗಳ ಅಕ್ಷಯ ಪಾತ್ರಗಳಾಗಿವೆ. ದಕ್ಷಿಣ ಫೋರಿಡಾದಿಂದ ಬಹಾಮ ಮತ್ತು ಪೋರ್ಟೋರಿಕೋ ದೇಶಗಳನ್ನು ಬಳಸಿ ಬರ್ಮುಡಾ ವರೆಗಿರುವ, ಅಟ್ಲಸಾಗರದಲ್ಲಿನ ತ್ರಿಕೋಣಾಕಾರದ ಜಲಪ್ರದೇಶವೇ 'ಬರ್ಮುಡಾ ಟ್ರ್ಯಾಂಗಲ್'. ಈ ಜಲಪ್ರದೇಶ ಇವತ್ತು ಜಗತ್ತಿನ ಅತ್ಯಂತ ವಿವರಣಾತೀತ ರಹಸ್ಯಗಳ ತವರು ಮನೆಯಾಗಿದೆ. ಇಲ್ಲಿ ಈಚೆಗೆ, ಎಂದರೆ 1945 ರಿಂದ ಈಚೆಗೇ ಕನಿಷ್ಠ ನೂರು ವಿಮಾನಗಳೂ, ಹಡಗುಗಳೂ ಸರ್ಕಾರಿ ದಾಖಲೆಗಳ ಪ್ರಕಾರವೇ, ಯಾವ ಸುಳಿವನ್ನೂ ಉಳಿಸದೆ, ಅಕ್ಷರಶಃ ಅಂತರ್ಧಾನವಾಗಿವೆ. ಈ ಇಪ್ಪತ್ತಾರು ವರ್ಷಗಳ ಕಾಲಾವಧಿಯಲ್ಲಿ ಇವುಗಳಲ್ಲಿ ಯಾನಮಾಡುತ್ತಿದ್ದ ಕನಿಷ್ಠ ಒಂದು ಸಾವಿರ ಜನರು ಮೃತ ದೇಹ ಅಥವಾ ಅಪಘಾತದ ಕುರುಹುಗಳು, ಅಥವಾ ಅಪಾಯದ ಸಂಜ್ಞೆಗಳು ಇತ್ಯಾದಿ ಯಾವುದನ್ನೂ ಉಳಿಸದೆ, ನಾವರಿಯದ ಎಲ್ಲಿಗೋ ನಿರ್ಗಮಿಸಿದ್ದಾರೆ! ಇವರು ಪ್ರಯಾಣ ಮಾಡುತ್ತಿದ್ದ ನೌಕೆಗಳಾಗಲಿ, ವಿಮಾನಗಳಾಗಲಿ ಅಥವಾ ಅವುಗಳ ಅವಶೇಷಗಳಾಗಲಿ ಈವರೆಗೂ ದೊರೆತಿಲ್ಲ. ಈಗ ಅಲ್ಲಿ ವಾಹನಸಂಚಾರ ಹೆಚ್ಚಿದ್ದರೂ, ತನಿಖೆ, ಮುನ್ನೆಚ್ಚರಿಕೆ ಕ್ರಮಗಳು ಅತ್ಯಾಧುನಿಕವಾಗಿದ್ದರೂ ಅಂತರ್ಧಾನಗಳು ಮಾತ್ರ ಮತ್ತೂ ಸಂಭವಿಸುತ್ತಲೇ ಇವೆ.
ಅನೇಕ ವಿಮಾನಗಳು ಹೊರಟ ಅಥವಾ ಇಳಿಯುವ ವಿಮಾನ ನಿಲ್ದಾಣದ ಜೊತೆ ಸಹಜ ಸಂಪರ್ಕವನ್ನು ಇಟ್ಟು ಕೊಂಡಿರುವಾಗಲೇ, ತಾವು ಮಾಯವಾಗುವ ಕೊನೆಯ ಗಳಿಗೆಯವರೆಗೂ ಸಂಭಾಷಿಸುತ್ತಿದ್ದು ಹಠಾತ್ತಾಗಿ ಮಾಯವಾಗಿವೆ! ಹೆಚ್ಚೆಂದರೆ ಕೆಲವು ವೈಮಾನಿಕರು ತಾವು ಮಾಯವಾಗುವ ಮುನ್ನ ತಮ್ಮ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದೋ, ಕಾಂಪಾಸ್ ಮುಳ್ಳು ಗಡಿಯಾರದಂತೆ ಗಿರಿಗಿರಿ ತಿರುಗುತ್ತಿದೆಯೆಂದೋ, ಅಥವಾ ಆಕಾಶ ಹಳದಿಯಾಗುತ್ತಿದೆ ಯೆಂದೋ ಇಲ್ಲವೇ ಸಮುದ್ರ ಹೇಗಿರಬೇಕಿತ್ತೋ ಹಾಗಿಲ್ಲವೆಂದೋ ಅರ್ಥವಾಗದ, ಹೆಚ್ಚಿನ ಯಾವ ವಿವರಣೆಯೂ ಇಲ್ಲದ ವಿಲಕ್ಷಣ ರೇಡಿಯೋ ಸಂಕೇತಗಳನ್ನು ಕಳಿಸಿ ನಾಪತ್ತೆಯಾಗಿದ್ದಾರೆ.
ಅದೇನೇ ಇರಲಿ ಅಲ್ಲಿ ನಡೆಯುವ ರಹಸ್ಯಮಯ ಅಂತರ್ಧಾನಗಳೆಲ್ಲ ಒಂದಲ್ಲ ಒಂದು ರೀತಿಯಿಂದ ಆ ಭಾಗದ ಸಾಗರಕ್ಕೆ ಸಂಬಂಧ ಪಟ್ಟಿರುವುದಂತೂ ಗಮನೀಯ. ನಾವೀಗ ಬಾಹ್ಯಾಕಾಶದತ್ತ ನಮ್ಮ ಇಣುಕು ನೋಟ ಹರಿಸುವಷ್ಟು ಮುಂದುವರಿದು ಪೃಥ್ವಿಯ ಪೂರ್ಣ ಪರಿಚಯ ನಮಗಿದೆಯೆಂದು ಭಾವಿಸಿದ್ದರೂ, ಸಾಗರ ತಳ ನಮಗಿನ್ನೂ ಬಾಹ್ಯಾಕಾಶದಷ್ಟೇ ಅಪರಿಚಿತವಾಗಿ ಉಳಿದಿದೆ. ತೈಲನಿಕ್ಷೇಪಗಳ ಪರಿಶೋಧನೆ, ಸಾಗರತಳದ ಇತರ ಖನಿಜ ನಿಕ್ಷೇಪಗಳ ಸಂಶೋಧನೆ ಮುಂತಾದವುಗಳಿಗಾಗಿ ಆಳ ಸಮುದ್ರದ ಕ್ಯಾಮರಾಗಳಿಂದ, ಅಲ್ಟ್ರಾಸಾನಿಕ್ ಮಾಪಕಗಳಿಂದ ಸಾಗರತಳದ ನಕ್ಷೆ ಯನ್ನು ಸ್ಥಲವಾಗಿ ಸಿದ್ಧಪಡಿಸಿರುವರಾದರೂ ಅತಿ ಆಳದ ಸಮುದ್ರ ತಳದಬಗ್ಗೆ ನಮ್ಮ ತಿಳುವಳಿಕೆ ಇನ್ನೂ ಸೀಮಿತವಾಗಿಯೇ ಇದೆ. ಬೃಹದ್ ರಾಷ್ಟ್ರಗಳ ಜಲಾಂತರ್ಗಾಮಿ ಚಟುವಟಿಕೆಗಳು ಶೀತಲ ಯುದ್ಧ ಸಂದರ್ಭದಲ್ಲಿ ತುಂಬ ಹೆಚ್ಚಿದ್ದು ಅವುಗಳ ಅನುಭವ, ಅಂಕಿ ಅಂಶ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾದ ಪಕ್ಷದಲ್ಲಿ ಬರ್ಮುಡಾ ಸಮುದ್ರದ ಬಗ್ಗೆ ಹೊಸದೇನಾದರೂ ಬೆಳಕಿಗೆ ಬರಬಹುದು.
ಬರ್ಮುಡಾ ಟ್ರ್ಯಾಂಗಲ್‌ನ ರಹಸ್ಯವನ್ನು ಬೇಧಿಸಲು ಹೊರಟ ಸಾಹಸಿಗೆ ಎದುರಾಗುವುದೆಲ್ಲಾ ಈ ರೀತಿಯ ಮಂಜುಮುಸುಕಿದ ದಾರಿಗಳೇ. ಅವು ಆತನನ್ನು ಕೊಂಡೊಯ್ಯುವುದಾದರೂ ಎಲ್ಲಿಗೆ? ಪ್ರಾಚೀನ ಅಥವಾ ನವೀನ ದಂತಕಥೆಗಳ ಬುಡಕ್ಕೆ, ಇಂದ್ರಿಯಾತೀತವಾದ ಭೌತಶಾಸ್ತ್ರ ಸಿದ್ಧಾಂತಗಳ ಮಾನವ ಪ್ರಜ್ಞೆಗೆ ಗಮ್ಯವಾಗದ ನೈಸರ್ಗಿಕ ನಿಗೂಢಗಳ ಸನಿಹಕ್ಕೆ; ಅಳಿದ ಸಾಮ್ರಾಜ್ಯಗಳಿಗೆ; ಮುಳುಗಿಹೋದ ಭೂಖಂಡಗಳಿಗೆ; ಸಂಪರ್ಕವಿಹೀನ ಅನ್ಯಲೋಕಕ್ಕೆ.
ಮಾನವ ಇವೆಲ್ಲವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾನೆ. ಇಂದಿನ ವಿಜ್ಞಾನದ ಪರಿಧಿ ಎಷ್ಟೊಂದು ವಿಸ್ತರಿಸಿದೆ ಎಂದರೆ ಹಿಂದೊಮ್ಮೆ ಪವಾಡಗಳಲ್ಲಿ ಮಾತ್ರ ಸಾಧ್ಯವಿದ್ದ ಕಾರ್ ಗಳನ್ನು ವಿಜ್ಞಾನಿಗಳು ಇಂದು ಸರಾಸಗಟು ಸಾಧಿಸಿದ್ದಾರೆ. ಜೀವವನ್ನು ಸೃಷ್ಟಿಸುವ, ಮಾನವರನ್ನು ಅಮರರನ್ನಾಗಿಸುವ ಪ್ರಯತ್ನದಲ್ಲಿದ್ದಾರೆ. ಯಕ್ಷಿಣಿಗೂ ವಿಜ್ಞಾನಕ್ಕೂ ಮಧ್ಯೆ ಇರುವ ಗೆರೆ ಅಳಿಸಿಹೋಗುತ್ತಾ ಇದೆ. ನಮ್ಮ ಅನುಭವದ ಗಟ್ಟಿ ನೆಲವನ್ನೇ ಅಲ್ಲಾಡಿಸಿರುವ ಕಾಂತಕ್ಷೇತ್ರದ ಹೊಸ ಸಂಶೋಧನೆಗಳು, ಕಾಲ-ದೇಶದ ಸಿದ್ಧಾಂತಗಳು, ಕುಗ್ಗುತ್ತಿರುವ ಸೂರ್ಯ, ನಾಶವಾಗುತ್ತಿರುವ ನಕ್ಷತ್ರಗಳು, ವಸ್ತು-ಪ್ರತಿವಸ್ತುಗಳು, ಸೂಜಿ ಗಾತ್ರವಿದ್ದರೂ ಭೂಮಿಗಿಂತ ಭಾರವಿರುವ ಕೃಷ್ಣಕಾಯಗಳು, ಕ್ವಾಸಾರ್‌ಗಳು ನಮ್ಮ ಜ್ಞಾನವನ್ನು ಅನವರತ ವಿಸ್ತರಿಸುತ್ತಿವೆ.
ವಿಜ್ಞಾನದ ಈ ಮುನ್ನಡೆಯಿಂದಾಗಿ ನಮಗೆ ವಿವರಿಸಲಾಗದ ವಿಷಯವೇ ಇಲ್ಲವೇನೋ ಎಂಬ ಭಾವನೆ ಹುಟ್ಟುತ್ತಿದೆ. ಇಷ್ಟೆಲ್ಲಾ ಇದ್ದರೂ ವಿಜ್ಞಾನದ ಇಂದಿನ ಸ್ಥಿತಿಯನ್ನು ದೂರದಿಗಂತದ ಬೆಳಕಿಗೆ ಅಭಿಮುಖವಾಗಿ ಕುಳಿತಿರುವ ವಿದ್ಯಾರ್ಥಿಗೆ ಹೋಲಿಸಬಹುದು. ತನ್ನ ಇಂದ್ರಿಯಗಳ ಅನುಭವಕ್ಕೆ ಬರುವ ವಿಚಾರಗಳಲ್ಲಿ ನಿಷ್ಣಾತನಾಗಿರುವ ಈ ವಿದ್ಯಾರ್ಥಿ ಬೆಳಕಿನ ಮೂಲದ ಬಗ್ಗೆಯಾಗಲಿ, ಆ ಬೆಳಕಿನ ಪರಿಧಿ ದಾಟಿ ಇರುವ ಕತ್ತಲೆಯ ವಿಶ್ವವನ್ನಾಗಲಿ ಇನ್ನೂ ಅರ್ಥ ಮಾಡಿಕೊಂಡೇ ಇಲ್ಲ. ಆತ ತನ್ನ ಪಂಚೇಂದ್ರಿಯಗಳನ್ನು ಮೀರುವ ಪ್ರಯತ್ನ ತೀರಾ ಈಚೆಗೆ ಅಂದರೆ, ಐನ್‌ಸ್ಟೀನ್ ಆಗಮನದೊಂದಿಗೆ ಆಗಿದೆ ಎನ್ನಬಹುದು. ಎಂದರೆ ಈ ವಿಶಾಲ ವಿಶ್ವವೂ ಅದರ ಅನಂತ ಸತ್ಯವೂ ಇನ್ನೂ ನಮ್ಮ ಪಾಲಿಗೆ 'ನಿಗೂಢ'ವಾಗೇ ಉಳಿದಿದೆ.
- ಧೀರಜ್ ಕೃಷ್ಣ
ವಿವೇಕಾನಂದ ಕಾಲೇಜು, ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ