ಮಂಗಳೂರು: ಸುಭದ್ರ ಮತ್ತು ಸಮೃದ್ಧ ದೇಶವನ್ನು ಕಟ್ಟುವಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ವಕೀಲರ ಮಾತಿಗೆ ಸಮಾಜದಲ್ಲಿ ತೂಕ ಹೆಚ್ಚು. ಅವರ ಸಲಹೆಗಳನ್ನು ಮೀರುವ ವ್ಯಕ್ತಿಗಳು ಯಾರೂ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಸಾವಿರಾರು ವಕೀಲರು ದಿಟ್ಟತನದಿಂದ ಕಾರ್ಯನಿರ್ವಹಿಸಿದ್ದರ ಫಲವಾಗಿಯೇ ಸ್ವಾತಂತ್ರ್ಯದ ಕಿಚ್ಚು ಎಲ್ಲೆಡೆ ಹಬ್ಬಿತು. ಆ ಬಳಿಕ ತುರ್ತು ಪರಿಸ್ಥಿತಿಯ ಸಂದದರ್ಭದಲ್ಲಿ ಸಂವಿಧಾನದ ಆಡಳಿತದ ಮರುಸ್ಥಾಪನೆಗೆ ನಡೆದ ಹೋರಾಟದಲ್ಲೂ ವಕೀಲರ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಅಂತೆಯೇ ಈಗ ಸ್ವತಂತ್ರ ಭಾರತ ಇನ್ನೊಂದು ಮಹತ್ವದ ಮಜಲಿನಲ್ಲಿ ಬಂದು ನಿಂತಿದೆ. ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ವಿಕಸಿತ ಭಾರತದ ಕನಸು ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ವಕೀಲರ ಸಮುದಾಯ ತಮ್ಮ ಯೋಗದಾನವನ್ನು ನೀಡಬೇಕಿದೆ ಎಂದು ಸ್ವತಃ ವಕೀಲರೂ ಆಗಿರುವ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆದ ಬದಲಾವಣೆಗಳು ಮತ್ತು ಅಭಿವೃದ್ಧಿಯ ಮಹಾ ಪರ್ವವನ್ನು ನೆನಪಿಸಿದರು. ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿ, ಒಂದು ಕಾಲದಲ್ಲಿ ಹೆಸರು ಕೇಳಿದರೆ ಭಯಪಡುತ್ತಿದ್ದಂತಹ ಕಾಶ್ಮೀರದಲ್ಲಿ ಇಂದು ಪ್ರವಾಸೋದ್ಯಮದ ಮೂಲಕ ಅಭಿವೃದ್ಧಿಯ ಹೊಸ ಅಲೆ ಎದ್ದಿರುವುದನ್ನು ನೆನಪಿಸಿದರು. ಕಲ್ಲು, ಬಾಂಬುಗಳನ್ನು ಎಸೆಯುತ್ತಿದ್ದ ಯುವಕರ ಮನಃ ಪರಿವರ್ತನೆ ಮಾಡಿ, ಅವರ ಕೈಗಳಿಗೆ ಲ್ಯಾಪ್‌ಟಾಪ್ ಕೊಟ್ಟು, ಬದುಕಿನ ಹೊಸ ದಾರಿಗೆ ಅವಕಾಶ ಮಾಡಿಕೊಟ್ಟವರು ಪ್ರಧಾನಿ ಮೋದಿ ಎಂದು ಶ್ಲಾಘಿಸಿದರು.
ಕೊರೊನಾ ಕಾಲದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ಭಾರತೀಯರ ಸುರಕ್ಷಿತ ತೆರವು ಕಾರ್ಯಾಚರಣೆಗಳನ್ನು ಅವರು ಸ್ಮರಿಸಿದರು.
ವಕೀಲರ ಸಮುದಾಯ ತಮ್ಮ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯರಾದ ಮೋನಪ್ಪ ಭಂಡಾರಿ ಅವರು ವಕೀಲರ ಸಮುದಾಯಕ್ಕೆ ಮಾರ್ಗದರ್ಶನ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ