ಮಂಗಳೂರು: "ಹತ್ತೊಂಬತ್ತನೇ ಶತಮಾನ ತುಳುವಿನ ಸಂಧಿಕಾಲ. ಇದುವರೆಗೆ ಮಿಶನರಿಗಳ ಮುದ್ರಿತ ಕೃತಿಗಳ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿದ್ದು ಅಂದಿನ ಅಪ್ರಕಟಿತ ಬರವಣಿಗೆಗಳ ಮೇಲೂ ಸಂಶೋಧಕರು ಗಮನ ಹರಿಸಬೇಕು" ಎಂದು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯ ಪ್ರಾಧ್ಯಾಪಕ, ಯುವಸಂಶೋಧಕ ಡಾ.ದುರ್ಗಾಪ್ರವೀಣ ಅವರು ಕರೆ ನೀಡಿದರು.
ಮಂಗಳೂರಿನಲ್ಲಿ ಇಂದು (ಏ.12)'ಕುರಲ್ ಇಷ್ಟೆರ್', ಕುಡ್ಲ ಅವರು ಆಯೋಜಿಸಿದ್ದ "ಮಿಶನರಿಗಳ ತುಳು ಬರವಣಿಗೆಗಳು: ಸಂಶೋಧನೆಯ ಮುಂದಿನ ಹೆಜ್ಜೆಗಳು" ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
'ಬಾಸೆಲ್ ಮಿಶನರಿಗಳ ಬೆಳಕಿಗೆ ಬಾರದ ಕೃತಿಗಳ ಸರಣಿ'ಯನ್ನು ಬೆನೆಟ್ ಅವರ ಜತೆಗೆ ಹೊರತಂದ ತಮ್ಮ ಕ್ಷೇತ್ರಕಾರ್ಯದ ಅನುಭವಗಳನ್ನು ಹಂಚಿಕೊಂಡರು. ಮುಂದಿನ ಸಂಶೋಧನೆಗಳಿಗೆ ಇವು ಹೊಸ ಆಕರಗಳಾಗುವ ವಿಚಾರವನ್ನು ತೆರೆದಿಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಮಾನಾಥ ಕೋಟೆಕಾರ್ ಅವರು "ಈಗ ಬಂದಿರುವ ಕೋಟಿ ಚನ್ನಯ ಮೂರು ಪಾಡ್ದನಗಳು, ತುಳು ಪಂಚತಂತ್ರ ತೀರಾ ಹೊಸದಾಗಿವೆ. ಈ ನಿಟ್ಟಿನಲ್ಲಿ ಡಾ.ದುರ್ಗಾಪ್ರವೀಣ ಮತ್ತು ಬೆನೆಟ್ ಅಮ್ಮನ್ನ ಅವರ ಸರಣಿಗಳು ಅಮೂಲ್ಯವಾದ ಆಕರಗಳಾಗಿವೆ." ಎಂದು ಅಭಿಪ್ರಾಯಪಟ್ಟರು.
ವಿಶೇಷ ಆಹ್ವಾನಿತರಾದ ಪರ್ಪಲೆಯ ಕ್ರಿಸ್ತಸೇವಕಿ ಆಶ್ರಮದ ಮುಖ್ಯಸ್ಥರಾದ ರೆವೆ.ಬಿ.ಬರ್ಟಿ ಅಮ್ಮನ್ನ ಅವರು ಮಾತನಾಡುತ್ತಾ "ಮಿಶನರಿಗಳ ಸಂಗ್ರಹದ ಅಪ್ರಕಟಿತ ತುಳು ಪಾಡ್ದನಗಳು ನಮಗಿಂದು ಉಪಯುಕ್ತ" ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಬೆನೆಟ್ ಜಿ.ಅಮ್ಮನ್ನ ಅಮ್ಮನ್ನ ಅವರು "ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಯ ಎರಡನೇ ಭಾಗ, ತುಳು ಗಾದೆಗಳು ತೌಲನಿಕ ಅಧ್ಯಯನಕ್ಕೆ ಸಹಾಯಕ. ಒಡಿಪುದ ಕಥೆಯು ಮಧ್ವಾಚಾರ್ಯರ ಮತ್ತು ಉಡುಪಿಯ ಹೊಸ ವಿಚಾರಗಳಿಂದಾಗಿ ಗಮನಸೆಳೆಯುತ್ತವೆ, ನಮ್ಮ ಸಂಶೋಧಕರು ಇವನ್ನು ಅವಶ್ಯ ಗಮನಿಸಬೇಕು" ಎಂದರು. ಶ್ರೀಮತಿ ಶೆರಿಲ್ ಪ್ರೀತಿಕಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ