ಕಸಾಪ ಗೋವಾ ರಾಜ್ಯ ಘಟಕ ಸಾಮಾನ್ಯ ಸಭೆ
ಪಣಜಿ: ಕನ್ನಡ ಸಾಹಿತ್ಯ ಪರಿಷತ್ತು ಇದು ಒಂದು ದೊಡ್ಡ ಕುಟುಂಬವಾಗಿದೆ. ಇಲ್ಲಿ ನಾವೆಲ್ಲರೂ ಈ ಕುಟುಂಬದ ನಿಯಮಾವಳಿಗಳಿಗೆ ಬದ್ಧರಾಗಿರಬೇಕು ಮತ್ತು ನಮಗೂ ಹಾಗೂ ಸಾಹಿತ್ಯ ಪರಿಷತ್ತಿಗೂ ಗೌರವ ತರುವಂತೆ ನಡೆದುಕೊಳ್ಳಬೇಕು. ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ಬದ್ಧರಾಗಿರದಿದ್ದರೆ ಅಂತವರು ಸಾಹಿತ್ಯ ಪರಿಷತ್ ಬಿಟ್ಟು ದೂರ ಸರಿಯಬಹುದು. ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ಗೆ ಸದಸ್ಯರನ್ನು ಹೆಚ್ಚಿಸಲು ಎಲ್ಲರೂ ಕೂಡ ಪ್ರಯತ್ನಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕದ ವತಿಯಿಂದ ಮಡಗಾಂದನ ಶ್ರೀ ದುರ್ಗಾ ಮಾತಾ ಮಂದಿರದ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಕಸಾಪ ಗೋವಾ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹೊರನಾಡ ಗೋವಾದಲ್ಲಿ ನಾವು ಕಸಾಪ ಮೂಲಕ ಕನ್ನಡದ ಕಂಪನ್ನು ಪಸರಿಸುವುದು ಮಾತ್ರವಲ್ಲದೆಯೇ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ಪ್ರತಿ ವಾರವೂ ಪ್ರತಿಯೊಬ್ಬ ಸದಸ್ಯರೂ ಕೂಡ ಒಬ್ಬರನ್ನಾದರೂ ಹೊಸ ಸದಸ್ಯರನ್ನು ಸಾಹಿತ್ಯ ಪರಿಷತ್ತಿಗೆ ಸೇರ್ಪಡೆ ಮಾಡಬೇಕು. ಕಳೆದ ನವೆಂಬರ್ 1 ರಂದು ಪಣಜಿಯಲ್ಲಿ ಕಸಾಪ ರಾಜ್ಯ ಘಟಕ ಮತ್ತು ಪಣಜಿ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ಅಂತೆಯೇ ಮುಂದೆಯೂ ಕೂಡ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಡಾ.ಸಿದ್ಧಣ್ಣ ಮೇಟಿ ನುಡಿದರು.
ಕೇಂದ್ರ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಮುಂದಿನ ಸಭೆಯನ್ನು ಗೋವಾದಲ್ಲಿ ಆಯೋಜಿಸುವ ಕುರಿತು ಇತ್ತೀಚೆಗೆ ನಡೆದ ಕೇಂದ್ರ ಸಾಹಿತ್ಯ ಪರಿಷತ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಇದು 2 ದಿನಗಳ ಕಾರ್ಯಕ್ರಮವಾಗಲಿದ್ದು ಈ ಸಭೆ ಆಯೋಜನೆ ಕುರಿತು ನಾವೆಲ್ಲ ಸೇರೆ ಮತ್ತೊಮ್ಮೆ ಚರ್ಚಿಸಿ ಕಾರ್ಯಕ್ರಮ ಆಯೋಜನೆಯ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳೋಣ ಎಂದು ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನುಡಿದರು.
ಕಸಾಪ ಗೋವಾ ರಾಜ್ಯ ಘಟಕದ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್ ಸ್ವಾಗತ ಕೋರಿದರು. ಗೌ.ಕಾರ್ಯದರ್ಶಿ ಪ್ರಕಾಶ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕಸಾಪ ರಾಜ್ಯ ಘಟಕದ ಸಂಘ ಸಂಸ್ಥೆಗಳ ಪ್ರತಿನಿಧಿ ಪಡದಯ್ಯ ಹಿರೇಮಠ, ದಕ್ಷಿಣ ಗೋವಾ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ್ ತಾಲೂಕಾ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಉತ್ತರ ಗೋವಾ ಜಿಲ್ಲಾ ಘಟಕದ ಅಧ್ಯಕ್ಷ ಮಡಿವಾಳಯ್ಯ ಗಣಾಚಾರಿ, ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್, ಪಣಜಿ ತಾಲೂಕಾ ಘಟಕದ ಕಾರ್ಯದರ್ಶಿ ಸುರೇಶ್ ಹರಿಶೇಟ್, ಬಿಚೋಲಿ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ್ ಅಬ್ಬಿಗೇರಿ, ನಿಂಗಪ್ಪ ಹೆಗಡೆಣ್ಣವರ್, ಬಾಬಾಸಾಬ ಕುದಾವಂದ್, ತಮ್ಮ ಅಭಿಪ್ರಾಯ ಮಂಡಿಸಿದರು. ಗೋವಾದ ಕಸಾಪ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ