ಉಜಿರೆ ಎಸ್.ಡಿ.ಎಂ ವಾರ್ಷಿಕೋತ್ಸವ
ಉಜಿರೆ: ಯುವಪೀಳಿಗೆ ಸೇರಿದಂತೆ ಜನಸಮುದಾಯದಿಂದ ಭಾರತವು ಮಹತ್ವಾಕಾಂಕ್ಷೆಯೊಂದಿಗೆ ನಿರೀಕ್ಷಿಸುತ್ತಿರುವ ಸೌಹಾರ್ದ, ಸಹಬಾಳ್ವೆಯ ಸಂಸ್ಕೃತಿಯನ್ನು ಮರುಪ್ರತಿಷ್ಠಾಪಿಸುವ ಮೌಲಿಕ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಶ್ರದ್ಧೆಯಿಂದ ನಿರ್ವಹಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಭಿಪ್ರಾಯಪಟ್ಟರು.
ಅವರು ಶನಿವಾರ ಜರುಗಿದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ದೇಶವು ಸಹಬಾಳ್ವೆಯ ಸಂಸ್ಕೃತಿಗಾಗಿ ಹಂಬಲಿಸುತ್ತಿದೆ. ಈ ಸಂಸ್ಕೃತಿಯನ್ನು ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮರುಪ್ರತಿಷ್ಠಾಪಿಸಬೇಕಿದೆ. ಶ್ರೀಕ್ಷೇತ್ರ ಧರ್ಮಸ್ಥಳ, ಇದೇ ನೆಲದಲ್ಲಿ ರೂಪುಗೊಂಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಈ ಮೂಲಕ ಹರಡಿದ ಸಂಸ್ಕೃತಿ ವಿಶಿಷ್ಠ ಮೌಲ್ಯಗಳನ್ನು ಸಾಮಾಜಿಕವಾಗಿ ನೆಲೆಗೊಳಿಸುವ ಬದ್ಧತೆಯನ್ನು ವಿದ್ಯಾರ್ಥಿಗಳು ತೋರಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಜನಸಮುದಾಯಗಳನ್ನು ಒಳಗೊಳ್ಳುವ ಆರ್ಥಿಕತೆಯ ಮಾದರಿಯನ್ನು ಕೊಡುಗೆಯನ್ನಾಗಿ ನೀಡಿದೆ. ಜೊತೆಗೆ ಶೈಕ್ಷಣಿಕ ಸಂಸ್ಥೆಯ ಮೂಲಕ ಬೋಧನೆ ಮತ್ತು ಕಲಿಕೆಗೆ ಸಂಸ್ಕೃತಿ ವಿಶಿಷ್ಠ ರೂಪ ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ. ಈ ದೇಶದ ನಾಯಕತ್ವಕ್ಕೆ ಮತ್ತು ಶೈಕ್ಷಣಿಕ, ಸಾಮಾಜಿಕ ಅಭ್ಯುದಯಕ್ಕೆ ಬೇಕಾದ ಮೌಲಿಕ ಮಾದರಿಗಳನ್ನು ನೀಡುತ್ತಿದೆ. ಈ ಬಗೆಯ ಮಾದರಿಗಳ ವಾತಾವರಣದಲ್ಲಿ ವಿದ್ಯಾರ್ಥಿಗಳು ನಾಳಿನ ಸೌಹಾರ್ದ ಬದುಕಿಗೆ ಬೇಕಾಗುವಂಥ ಸಂಸ್ಕೃತಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ ಆರ್ಥಿಕ ಪಾಠದೊಂದಿಗೆ ಜೀವನದ ಮೌಲ್ಯಗಳ ಪಾಠವನ್ನೂ ಕಲಿಸುತ್ತಿದೆ. ದೇಶಕ್ಕೆ ಬೇಕಾದ ಎಲ್ಲಾ ನಾಯಕರನ್ನು, ಅದ್ಭುತ ಶಿಕ್ಷಕರನ್ನು ಸೃಷ್ಡಿಸುತ್ತಿದೆ. ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಬಂಧಿತ ಪ್ರಯೋಗಗಳ ಜೊತೆಜೊತೆಗೆ ದೇಶಕ್ಕೆ ಬೇಕಾದ ನೆಮ್ಮದಿ, ಸೌಹಾರ್ದತೆಯನ್ನು ನೆಲೆಗೊಳಿಸಬೇಕು. ಇದೇ ಆತ್ಮವಿಶ್ವಾಸದೊಂದಿಗೆ ದೇಶಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದರು. ಯುಜಿಸಿ ಹೊಸದಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನವೇ ಎಸ್.ಡಿ.ಎಂ ಸಂಸ್ಥೆಯಲ್ಲಿ ಮಹತ್ವದ ಪ್ರಯೋಗಗಳನ್ನು ನಡೆಸಿದವರು ಈ ಹಿಂದೆ ಕಾರ್ಯದರ್ಶಿಯಾಗಿದ್ದ ಡಾ.ಡಿ.ಯಶೋವರ್ಮ ಅವರು. ಸ್ವತಃ ಸಸ್ಯಶಾಸ್ತçಜ್ಞರಾಗಿ ತಂತ್ರಜ್ಞಾನ ಹೇಗಿರಬೇಕು ಎಂಬುದನ್ನು ಪ್ರಯೋಗಕ್ಕೊಳಪಡಿಸಿ ಬೋಧನೆ ಮತ್ತು ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದವರು ಅವರು. ಅಂತರಶಿಸ್ತೀಯ ಅಧ್ಯಯನಕ್ಕೆ ಅವರು ಈ ಮೂಲಕ ಪ್ರಾಯೋಗಿಕ ಆಯಾಮ ನೀಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರತೀಕ್ಷಾ, ಕೆ ಕಿರಣ್, ಆದಿತ್ಯ, ಅನುಶ್ರೀ.ಎಸ್, ಸನತ್, ಚಿದ್ವಿಲಾಸ್.ಎ.ಎಸ್ ಉಪಸ್ಥಿತರಿದ್ದರು. ಶೈಕ್ಷಣಿಕ, ಸಂಶೋಧನಾ ಸಾಧನೆಗೈದ ಪ್ರಾಧ್ಯಾಪಕರು, ಸೇವಾ ಕ್ಷೇತ್ರದಲ್ಲಿ ಪ್ರಾಶಸ್ತö್ಯ ಪಡೆದ ಬೋಧಕರು. ರ‍್ಯಾಂಕ್ ಮನ್ನಣೆ ಪಡೆದ ವಿದ್ಯಾರ್ಥಿ ಸಾಧಕರು, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದವರನ್ನು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಪತ್ರಿಕೋದ್ಯಮ ವಿಭಾಗದ ಚಿಗುರು ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಂಶುಪಾಲ ಶಶಿಶೇಖರ ಕಾಕತ್ಕರ್ ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ಟ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿ ಸುಪ್ರಿತಾ, ಶ್ರೀವಿದ್ಯಾ, ಅನನ್ಯ, ಪೂರ್ವಿ, ವೈದೇಹಿ, ಸುಷ್ಮಿತಾ ಪ್ರಾರ್ಥಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ