ಶ್ರೀರಾಮ ಕಥಾ ಲೇಖನ ಅಭಿಯಾನ-97: ಶ್ರೀರಾಮ ಪಟ್ಟಾಭಿಷೇಕ

Upayuktha
0

ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


- ಪರಿಮಳಾ ಬಿ ಜೋಶಿ, ಧಾರವಾಡ


ರಾಮಾಯ ರಾಮಭದ್ರಾಯ

ರಾಮಚಂದ್ರಾಯ ವೇದಸೆ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ||


ರಾಮಾಯಣ ಇದು ಭಕ್ತಿಯ ಸಾಗರ ಅದನ್ನು ದಾಟಿದ ಧೀರ ಭಕ್ತಾಗ್ರೇಸರ ಹನುಮಂತ. ರಾಮಾಯಣದ ಹಂತ ಹಂತಗಳಲ್ಲಿ ಪರಮಾತ್ಮನಲ್ಲಿ ಭಕ್ತಿಯ ಪ್ರವಾಹ ಹರಿದಿದೆ. ಹನುಮಂತ, ಲಕ್ಷ್ಮಣ, ಭರತ, ಶತ್ರುಘ್ನ, ನೀಲ, ಮೈಂದ, ಜಾಂಭವಂತ, ವಿಭೀಷಣ, ಮೊದಲಾದ ಅನೇಕ ಭಕ್ತರ  ಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದು. ಭಗವಂತನಲ್ಲಿ ಒಂದು ಬಾರಿ ನಾನು ನಿನ್ನವ ಎಂದು ಶರಣಾಗತನಾಗಿ ಬಂದ ಭಕ್ತನಿಗೆ ನಾನು ಯಾವಾಗಲೂ ರಕ್ಷಣೆ ಮಾಡುತ್ತೇನೆ ಇದು ನನ್ನ ವ್ರತ  ಎಂದು ರಾಮಾಯಣದಲ್ಲಿ ಶ್ರೀರಾಮಚಂದ್ರ ತೋರಿಸಿದ್ದಾನೆ.


ನಾವು ನಮ್ಮ ಜೀವನದಲ್ಲಿ ಶ್ರೀರಾಮಚಂದ್ರನು ಹಾಕಿಕೊಟ್ಟ ಆದರ್ಶವನ್ನು ಪಾಲಿಸಬೇಕು ಕೋಟಿ ಕೋಟಿ ಜನ್ಮಗಳ ನಂತರ ಬರುವ ಮನುಷ್ಯ ಜನ್ಮ ಹಾಳು ಹರಟೆಯಲ್ಲಿ ಕಳೆಯಬಾರದು. ಶ್ರೀಪುರಂದರದಾಸರು "ಮಾನವ ಜನ್ಮ ದೊಡ್ಡದು ಇದು ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರ" ಎಂದು ಎಚ್ಚರಿಸಿದ್ದಾರೆ. ಈ ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಲು ಒಳ್ಳೆಯ ವಿಚಾರ ಸಜ್ಜನರ ಸಹವಾಸ ದೊರೆತರೆ ಜನ್ಮ ಸಾರ್ಥಕ, ಇನ್ನು ಪ್ರಭು ಶ್ರೀರಾಮಚಂದ್ರನ ಅದ್ಭುತವಾದ ದಿವ್ಯವಾದ ರಾಮಾಯಣದ ಕಥೆ ಕೇಳಿದರೆ ಬದುಕಿದ್ದಕ್ಕೆ ಸಾರ್ಥಕ "ಫಲವಿದು ಬಾಳ್ದುದಕೆ  ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೇ ಫಲವಿದು ಬಾಳ್ದುದಕೆ"

ಶ್ರೀರಾಮ ಸದ್ಗುಣಗಳಲ್ಲಿ ಮೊದಲನೆಯವನು, ಜನನ ಮರಣವಿಲ್ಲದವನು. ಪ್ರಜೆಗಳೆಲ್ಲರಿಗೂ ರಾಮನಲ್ಲಿ ಪರಿಪೂರ್ಣವಾದ ವಿಶ್ವಾಸವಿದ್ದು ಎಲ್ಲೆಲ್ಲಿಯೂ ಎಲ್ಲರೂ ಅವನ ಸದ್ಗುಣಗಳನ್ನು ಕೀರ್ತಿಸುತ್ತಿದ್ದರು. ಪ್ರಜೆಗಳೆಲ್ಲರೂ ರಾಮನು ರಾಜನಾಗಲಿ ಎಂದು ಅಪೇಕ್ಷಿಸಿದರು.


ಇದನ್ನು ನೋಡಿ ದಶರಥನು ತಾನು ಬದುಕಿರುವಾಗಲೇ ರಾಮನನ್ನು ರಾಜ್ಯದ ಸಿಂಹಾಸನದಲ್ಲಿರಿಸಬೇಕೆಂಬ ಬಯಕೆ ಉಂಟಾಯಿತು. ಅವನು ಅವನ ಮಂತ್ರಿ ಪುರೋಹಿತರಾದ ಸರ್ವರನ್ನು ಸಭೆ ಸೇರಿಸಿ ರಾಮನಿಗೆ ಪಟ್ಟಗಟ್ಟಬೇಕೆಂದು ತನ್ನ ಬಯಕೆಯನ್ನು ತಿಳಿಸಿದನು ಸಭಿಕರೆಲ್ಲರ ಪರವಾಗಿ ವಸಿಷ್ಠರು ಹೇಳುತ್ತಾರೆ. ಮಹಾಬಾಹು, ರಘುವಂಶದ ವೀರರಲ್ಲಿ ಪ್ರಮುಖನೂ, ಸಂಪೂರ್ಣವಾದ ದೇಹ ಬಲ ಮತ್ತು ಮನೋಬಲ ಉಳ್ಳವನು ಆದ ನಮ್ಮ ರಾಮನು ದೊಡ್ಡ ಆನೆಯ ಮೇಲೆ ಕುಳಿತು ರಾಜ ಚಿನ್ಹೆಯಾದ ಶ್ವೇತ ಛತ್ರವು ನೆತ್ತಿಯ ಮೇಲೆ ಪ್ರಕಾಶಿಸುತ್ತಿರಲು ಬೀದಿಯಲ್ಲಿ ಮೆರವಣಿಗೆ ಬರುವುದನ್ನು ಕಣ್ಣಾರೆ ಕಂಡು ತೃಪ್ತಿ ಹೊಂದಬೇಕೆಂದು ನಮ್ಮೆಲ್ಲರಿಗೂ ಆಸೆ ಇದೆ ಮಹಾರಾಜ, ಆಗ ದಶರಥನು ರಾಮನಿಗೆ ಪಟ್ಟಾಭಿಷೇಕವೆಂದು ಸೂಚಿಸಿದ ಕೂಡಲೇ ಎಲ್ಲರೂ ತಥಾಸ್ತು ಎಂದರು.


ಸರ್ವರೂ ರಾಜ! ನಿನ್ನ ಮಗನು ತನ್ನ ಅಪಾರ ಗುಣಗಳಿಂದ ನಮ್ಮೆಲ್ಲರ ಮನಸ್ಸನ್ನು ಆಕರ್ಷಿಸಿರುವನು ಭೂಮಿಯಲ್ಲಿರುವ ಧೂಳಿನ ಕಣಗಳನ್ನು ಗಣನೆ ಮಾಡಬಲ್ಲ ಬ್ರಹ್ಮದೇವರು ನಿನ್ನ ಮಗ ರಾಮನ ಗುಣಗಳನ್ನೆಲ್ಲ ಪೂರ್ಣವಾಗಿ ಗುಣಿಸಲಾರನು. ವೇದ ಶಾಸ್ತ್ರಗಳಲ್ಲಿ ಹೇಳಿರುವ ಸಕಲ ಗುಣಗಳು ಈ ಶ್ರೀರಾಮನಲ್ಲಿ ಪರಿಪೂರ್ಣವಾಗಿವೆ. ಲೋಭ ಮೊದಲಾದ ಒಂದು ದೋಷವು ಇಲ್ಲ ರಾಜನೇ ಸಮುದ್ರ ರಾಜನಿಗೆ ಅರ್ಘ್ಯವನ್ನು ಸೂರ್ಯನಿಗೆ ದೀಪವನ್ನು ಅರ್ಪಿಸಿದಂತೆ ಪೂರ್ಣಕಾಮನಾದ ರಾಮನಿಗೆ ರಾಜ್ಯವನ್ನು ಅರ್ಪಿಸಿ, ಇಹಪರಗಳಲ್ಲಿ  ಮಹಾಸಂಪತ್ತನ್ನು ಹೊಂದು.


ದಶರಥನು ಗುರುಗಳೇ! ಈಗ ಚೈತ್ರ ಮಾಸ ನಾಳೆ ಪುಷ್ಯ ನಕ್ಷತ್ರ ಆದುದರಿಂದ ನಾಳೆ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸುವೆನು. ಪಟ್ಟಾಭಿಷೇಕಕ್ಕೆ ಬೇಕಾದುದ್ದನ್ನು ಸಿದ್ಧಪಡಿಸುವಂತೆ ಸುಮಂತನಿಗೆ ದಶರಥನು ಹೇಳಿದನು. ರಾಮನನ್ನು ಕರೆತರುವಂತೆ ಸುಮಂತನಿಗೆ ಆಜ್ಞೆ ಮಾಡಿದನು. ಬಂದು ರಾಮನು ತಂದೆಗೆ ನಮಸ್ಕರಿಸಿದನು. ದಶರಥ ಮಗನನ್ನು ಬಿಗಿದಪ್ಪಿ, ಮಗನೇ ನಿನಗೆ ಪಟ್ಟ ಕಟ್ಟುವೆನು ನನ್ನ ಸಂತೋಷಕ್ಕೆ ಒಪ್ಪಿಕೊ ಎಂದನು. ಒಳ್ಳೆಯದು ಎಂದು ಮಾತ್ರ ಹೇಳಿದನು ಶ್ರೀರಾಮ.


ಶ್ರೀರಾಮನು ಕೌಸಲ್ಯ ಬಳಿಗೆ ಬಂದು ನಮಸ್ಕರಿಸಿದನು. ಕೌಸಲ್ಯದೇವಿ ರಾಮ ನಿನಗೆ ಮಂಗಳವಾಗಲಿ ಇವತ್ತಿನ ನನ್ನ ಸಂತೋಷಕ್ಕೆ ಪಾರವೇ ಇಲ್ಲ ರಾಮದೇವರು ತಾಯಿಯ ಬಳಿಗೆ ಬಂದಾಗ ಕೌಸಲ್ಯಯು ತನ್ನ ಮಗನಿಗೆ ಪುಷ್ಯ ನಕ್ಷತ್ರದಲ್ಲಿ ಯುವರಾಜ್ಯಾಭಿಷೇಕವಾಗುವುದೆಂದು ಕೇಳಿ ಸುಮಿತ್ರಾದಿಗಳಿಂದ ಕೂಡಿದವಳಾಗಿ ಸಂತೋಷ ಭರಿತರಾದರು.


ರಾಮನ ಪಟ್ಟಾಭಿಷೇಕದ ವಿಚಾರದಲ್ಲಿ ದೇಶದ ಸರ್ವರಿಗೂ ಆನಂದವಾಗಿದೆ. ಆದರೆ ಒಬ್ಬಳೇ ಒಬ್ಬಳು ದುಃಖ ಪಟ್ಟವಳು ಮಂಥರೆ. ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವವನ್ನು ನಿಲ್ಲಿಸಬೇಕೆಂದು ಕೈಕೇಯಿಯ ಹತ್ತಿರ ಬಂದಳು, ಅವಳ ಮನಸ್ಸನ್ನು ಕೆಡಿಸಿ ಅವಳಲ್ಲಿ ವಿಷ ಬೀಜ ಬಿತ್ತಿದಳು. ಇದರಿಂದ ಕೈಕೇಯಿ ಸ್ವಾರ್ಥಿಯಾಗಿ ತನ್ನ ಮಗ ಭರತನಿಗೆ ಪಟ್ಟ ಕಟ್ಟಲೆಂದು ಮತ್ತು ರಾಮನಿಗೆ 14 ವರ್ಷ ಕಾಡಿಗೆ ವನವಾಸಕ್ಕೆ ಕಳಿಸಬೇಕು ಎಂದು ಮನದಲ್ಲಿ ನಿರ್ಧರಿಸಿದಳು.


ದಶರಥನು ಪಟ್ಟಾಭಿಷೇಕದ ವಿಷಯವನ್ನು ಕೈಕೇಯ ಮುಂದೆ ಹೇಳಲು ಅವಳ ಅಂತಃಪುರಕ್ಕೆ ಬಂದನು. ಅಲ್ಲಿ ಕೈಕೇಯಿ ತುಂಬಾ ಬೇಸರದಿಂದ ನಿರುತ್ಸಾಹಳಾಗಿ ಕುಳಿತಿದ್ದಳು ಅವಳನ್ನು ನೋಡಿ ದಶರಥನು, ಯಾಕೆ ಏನಾಯಿತು ಹುಷಾರಾಗಿದ್ದೀಯಾ? ಏನು ಸಮಸ್ಯೆ ಎಂದು ಕೇಳಿದನು. ಆಗ ಕೈಕೇಯಿ ನೀವು ನನಗೆ ಮಾತು ಕೊಟ್ಟರೆ ಯಾಕೆ ಬೇಸರ ಅಂತ ಹೇಳುತ್ತೇನೆ ಎಂದಳು. ಆಗ ದಶರಥ ಏನು ಹೇಳು ನೀನು ಹೇಳಿದ್ದನ್ನು ನಡೆಸುತ್ತೇನೆ ಎಂದು ಮಾತು ಕೊಡುತ್ತಾನೆ. ನೀವು ಹಿಂದೆ ದೇವತೆಗಳಿಗೂ ರಾಕ್ಷಸರಿಗೂ ಯುದ್ಧ ನಡೆದಾಗ ನಾನು ನಿಮಗೆ ಸಹಾಯ ಮಾಡಿದ್ದೆ ಆಗ ನೀವು ನನಗೆ ಎರಡು ವರಗಳನ್ನು ಕೊಟ್ಟಿದ್ದೀರಿ ಅವುಗಳನ್ನು ಈಗ ಕೇಳುತ್ತೇನೆ ನೀವು ನಡೆಸಿಕೊಡಬೇಕು, ಅವುಗಳಲ್ಲಿ ಒಂದು ಭರತನಿಗೆ ರಾಜ್ಯದ ಪಟ್ಟವನ್ನು ಕಟ್ಟುವುದು, ಎರಡನೆಯದು ರಾಮನನ್ನು 14 ವರ್ಷ ಕಾಡಿಗೆ ಕಳಿಸುವುದು, ಈ ವರಗಳನ್ನು ಕೊಡು ಎಂದು ಕೇಳಿದಳು.


ಈ ಮಾತುಗಳನ್ನು ಕೇಳಿದ ದಶರಧನು ತತ್ತರಿಸಿ ಹೋದ ಕೋಪದಿಂದ ಕೈಕೇಯನ್ನು ಬೈದನು. ದೈನ್ಯದಿಂದ ಮನಸ್ಸು ಬದಲಾಯಿಸುವಂತೆ ಪರಿಪರಿಯಾಗಿ ಬೇಡಿಕೊಂಡನು. ಆದರೆ ಕೈಕೇಯಿ ಯಾವುದಕ್ಕೂ ಮನಸ್ಸು ಬದಲಾಯಿಸಲಿಲ್ಲ ಮಾತು ಕೊಟ್ಟಿದ್ದೆ ಆಡಿದಂತೆ ನಡೆಸಿಕೊಡು ಎಂದಳು ಹಟ ಹಿಡಿದಿರುವ ಕೈಕೇಯಿ. ಮನಸ್ಸು ಬದಲಾಯಿಸಲಾರದೆ ದಶರಥನು ರಾಮನನ್ನು ಕರೆಸಿದನು, ರಾಮನು ಬಂದವನೇ ತಂದೆಗೂ ಕೈಕೇಯಿಗೂ ನಮಸ್ಕಾರ ಮಾಡಿದನು. ದುಃಖದಿಂದ ದಶರಥನು ಮಾತನಾಡಲಾಗದೆ ಮುಖ ಮುಚ್ಚಿಕೊಂಡು ದುಃಖಿಸುತ್ತಿರುವುದನ್ನು ನೋಡಿ ಶ್ರೀರಾಮನು ಗಾಬರಿಯಿಂದ ಏನಾಯಿತು ತಂದೆಗೆ ಎಂದು ಕೈಕೇಯಿಗೆ ಕೇಳಿದನು. ಕೈಕೇಯಿ ರಾಜನು ಕೊಟ್ಟ ವರಗಳನ್ನು ತಿಳಿಸಿದಳು, ಆಗ ರಾಮನು ತಂದೆ ಮಾತನ್ನು ನಡೆಸುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ ಅವರ ಆಜ್ಞೆಯಂತೆ ನಾನು ಕಾಡಿಗೆ ಹೋಗುವೆನು, ನನ್ನ ಪ್ರೀತಿಯ ತಮ್ಮ ಭರತನಿಗೆ ಪಟ್ಟಾಭಿಷೇಕವಾಗಲಿ ಎಂದು ಹೇಳಿ ಕೈಕೇಯಿಗೂ ತಂದೆಗೂ ನಮಸ್ಕಾರ ಮಾಡಿ  ಹೊರಟನು.


ರಾಮ ಕಾಡಿಗೆ ಹೋಗುವ ಸುದ್ದಿ ಎಲ್ಲರಿಗೂ ಗೊತ್ತಾಯ್ತು ಎಲ್ಲರೂ ದುಃಖಿತರಾದರು. "ಗಂಡನ ಭಾಗ್ಯಕ್ಕೆ ಹೇಗೆ ಹೆಂಡತಿ ಬಾಧ್ಯಳೋ ಹಾಗೆಯೇ ಆತನ ಕಷ್ಟಕ್ಕೂ ಭಾಗಿ" ಎಂದು ಹೇಳಿ ಆತನೊಡನೆ ತಾನು ಕಾಡಿಗೆ ಹೊರಟಳು ಸೀತಾದೇವಿ. ಇನ್ನು ರಾಮನ ಪ್ರಾಣದಂತಿರುವ ಲಕ್ಷ್ಮಣನು ಅಣ್ಣನನ್ನು ಬಿಡದೆ ತಾನು ಹೊರಟನು.

ಶ್ರೀರಾಮಚಂದ್ರನು ನಿರ್ದೋಷಿಯೂ ಸುಖಪೂರ್ಣನು ಆಗಿರುವುದರಿಂದ ವನವಾಸಕ್ಕಾಗಿ ಶೋಕ ಪಡುವವನಲ್ಲ. ಅಷ್ಟೇ ಅಲ್ಲ ವನವಾಸ ಮಾಡಬೇಕೆಂದೇ ರಾಮನಾಗಿ ಅವತರಿಸಿದನು. ಇದು ಶ್ರೀರಾಮನ ಸಂಕಲ್ಪ ಕೈಕೇಯಿಗೆ ಮರ್ಯಾದೆ ಕೊಡಬೇಕೆಂದು ಅವಳ ಮಾತನ್ನು ಮಾನ್ಯ ಮಾಡಿರುವನು. ಲೋಕದಲ್ಲಿ ಹಿರಿಯರು ದುಷ್ಟ ಮಾತನಾಡಿದರು ಅವರಲ್ಲಿ ಕುಪಿತನಾಗದೆ ಗೌರವವನ್ನು ಕೊಡಬೇಕೆಂದು ಶ್ರೀರಾಮನು ತೋರಿಸಿಕೊಟ್ಟನು.


ಶ್ರೀರಾಮನು  ಭರದ್ವಾಜರ ಆಶ್ರಮಕ್ಕೆ 14 ವರ್ಷ ವನವಾಸ ಪೂರ್ಣವಾಗಿ ಪಂಚಮಿ ದಿನ ಬಂದನು. ಶ್ರೀರಾಮನು ಚೈತ್ರ ಶುದ್ಧ ಪಂಚಮಿಯ ದಿನವೇ ಕಾಡಿಗೆ ಹೊರಟ್ಟಿದ್ದು, ಇದರ ವಿವರ ಗಣಿತ ರಾಮಾಯಣವು ಹೀಗೆ ಹೇಳುತ್ತಿದೆ: ಅಮಾವಾಸ್ಯೆಯಾಂ ರೇವತ್ಯಾಂ ರಾಮೇಣ ರಾವಣವಧ| ಚೈತ್ರ ಶುಕ್ಲ ಪ್ರಥಮಾಯಾಂ ರಾವಣಸ್ಯ ಸಂಸ್ಕಾರಃ| ದ್ವಿತೀಯಾ ಶಿಷ್ಟಾಶ್ವಿನ್ಯಾಂ ವಿಭೀಷಣ ಪಟ್ಟಾಭಿಷೇಕಃ| ತೃತೀಯಾಂ ದೇವಿ ಸಮಾಗಮಃ| ಶಿಷ್ಟ ತೃತೀಯಾಂ ಯುಕ್ತ ಚತುರ್ಥ್ಯಾಂ ಪ್ರತಿಪ್ರಯಾಣಂ| ಶಿಷ್ಟ ಚತುರ್ಥ್ಯಾಂ

ಯುಕ್ತ ಪಂಚಮ್ಯಾಂ ಮೃಗಶೀರ್ಷಾ ನಕ್ಷತ್ರೇ ಭಾರದ್ವಾಜಾಶ್ರಮ ಪ್ರಾಪ್ತಿ| ಅಸ್ಯ ಪಂಚಮ್ಯಾಂ ಚತುರ್ದಶವರ್ಷಂ ಸಂಪೂರ್ಣಂ| ಬಾರ್ಹಸ್ವತ್ಯಮಾನಕ್ಕೆ 14 ವರ್ಷ ಪೂರ್ತಿಯಾಯಿತು. ಶಿಷ್ಟ ಪಂಚಮ್ಯಾಂ ಯುಕ್ತ ಷಷ್ಠಾಂ ಆರಿದ್ರಾಯಾಂ ನಂದೀಗ್ರಾಮ ಪ್ರವೇಶಃ| ಚಾಂದ್ರಮಾನದಂತೆ 14 ವರ್ಷ ಪೂರ್ತಿಯಾಯಿತು.


ಶ್ರೀರಾಮನು ಭಾರದ್ವಾಜರಿಗೆ ನಮ್ಮ ಅಯೋಧ್ಯಾನಗರವೂ ಸುಭಿಕ್ಷವಾಗಿ ಆರೋಗ್ಯವಾಗಿಯೂ ಇರುವ ವೃತ್ತಾಂತವನ್ನು ಹೇಳಿರಿ ಮತ್ತು ಭರತನು ಪ್ರಜಾ ಪಾಲನೆ ಹೇಗೆ ಮಾಡುತ್ತಿದ್ದಾನೆ ತಿಳಿಸಿರಿ ಎಂದನು. ಭಾರದ್ವಾಜರು ಅಯೋಧ್ಯೆಯಲ್ಲಿ ಸರ್ವರೂ ಕ್ಷೇಮದಿಂದ ಇರುವರು ಭರತನು ನಿನ್ನನ್ನೇ ನಿರೀಕ್ಷಿಸುತ್ತಿರುವನು ನಿನ್ನ ವನವಾಸ ಕಾಲದಲ್ಲಿ ನಿನಗುಂಟಾದ ಸುಖ-ದುಃಖಗಳೆಲ್ಲವನ್ನು ಜ್ಞಾನದೃಷ್ಟಯಿಂದ ನಾನು ತಿಳಿದಿರುವೆನು ಬೇಕಾದ ವರವನ್ನು ಕೇಳು! ಕೊಡುವೆನು ನೀನು ನನ್ನ ಸತ್ಕಾರವನ್ನು ಸ್ವೀಕರಿಸಿ ನಾಳೆ ಅಯೋಧ್ಯೆಗೆ ಹೊರಡು. ರಾಮನು ಆಗಲಿ ನಾವು ಅಯೋದ್ಯೆಗೆ ಹೋಗುವ ಮಾರ್ಗದಲ್ಲಿ ವೃಕ್ಷಗಳು ಅಮೃತದಂತೆ ರುಚಿಯುಳ್ಳ ನಾನಾ ಫಲಗಳಿಂದ ಸಮೃದ್ಧವಾಗಿರುವಂತೆ ಅನುಗ್ರಹಿಸಬೇಕು ಎಂದನು. ಭಾರದ್ವಾಜರ ಅನುಗ್ರಹದಿಂದ ಸಮೃದ್ಧವಾದ ಫಲಗಳನ್ನು ವಾನರರು ತಿಂದು ಸಂತೋಷಭರಿತರಾದರು.


ಶ್ರೀರಾಮಚಂದ್ರ ಅಯೋಧ್ಯೆಗೆ ಬರುವ ಸಮಾಚಾರ ಕೇಳಿ ಭರತ ತುಂಬಾ ಸಂತೋಷದಿಂದ, ಶತ್ರುಘ್ನ ನಮ್ಮ ದೇವರು ಬರುವರು ಪಟ್ಟಣವೆಲ್ಲ ಅಲಂಕಾರವಾಗಲಿ, ಎಲ್ಲಾ ಜನರು ಶ್ರೀ ರಾಮನ ದರ್ಶನಕ್ಕೆ ಸಿದ್ಧರಾಗಲಿ. ರಾಮನು ಬರುವನೆಂದು ಕೌಸಲ್ಯ ಸುಮಿತ್ರೆ ಕೈಕೇಯಿ ಅಯೋಧ್ಯವಾಸಿಗಳೆಲ್ಲರೂ ನಂದೀಗ್ರಾಮಕ್ಕೆ ಬಂದು ಸೇರಿದರು. ಪುಷ್ಪಕ ವಿಮಾನವು ಹತ್ತಿರ ಬಂದಿತು ಎಲ್ಲರೂ ಶ್ರೀರಾಮಚಂದ್ರನನ್ನು ನೋಡಿದರೂ ಆಗ ಭರತ ರಾಮನ ಪಾದಗಳಿಗೆ ಪಾದುಕೆಗಳನ್ನು ತೊಡಿಸಿ ಕೈಮುಗಿದನು. ಅಣ್ಣ ನೀನು ವನವಾಸವನ್ನು ಮಾಡಿರುವುದರಿಂದ ನಮ್ಮ ತಾಯಿಯನ್ನು ಸಂತೋಷಪಡಿಸಿದಂತಾಯ್ತು. ಇದುವರೆಗೆ ರಾಜ್ಯವಾಳಿದುದರಿಂದ ನಾನು ನಿನ್ನ ಆಜ್ಞೆಯನ್ನು ನಡೆಸಿದಂತಾಯಿತು. ನೀನು ಇನ್ನು ರಾಜ್ಯವನ್ನು ಆಳಬೇಕು ಸ್ವಾಮಿ ನಿನ್ನ ಹಾಗೆ ರಾಜ್ಯವನ್ನ ಅಳಲು ನನಗೆ ಎಂದಿಗೂ ಸಾಧ್ಯವಿಲ್ಲ.


ನಂತರ ಎಲ್ಲರಿಗೂ ದೀಕ್ಷಾ ವಿಸರ್ಜನೆ ಆಯಿತು. ರಾಮನು ಸೀತೆಯೊಡನೆ ರಥದಲ್ಲಿ ಕುಳಿತು ಅಯೋಧ್ಯೆಗೆ ಹೊರಟನು. ಭರತ ಸಾರಥಿ ಆದ ಶತ್ರುಘ್ನ ಛತ್ರವನ್ನು ಹಿಡಿದನು ಲಕ್ಷ್ಮಣ ಮತ್ತು ವಿಭೀಷಣ ಚಾಮರವನ್ನು ಹಾಕುತ್ತಿದ್ದರು. ಪ್ರಜೆಗಳಿಗೆ ದರ್ಶನವನ್ನು ಕೊಟ್ಟು ಉದ್ಧರಿಸಿದನು ಶ್ರೀರಾಮ, ಅರಮನೆಗೆ ಬಂದನು.


ಶ್ರೀರಾಮಚಂದ್ರನ ಸಾಮ್ರಾಜ್ಯದ ಮಹಾಪಟ್ಟಾಭಿಷೇಕ ಮಹೋತ್ಸವಕ್ಕೆ ಸುಗ್ರೀವಾಜ್ಞೆಯಂತೆ ಸುಷೇಣನು ಪೂರ್ವ ಸಮುದ್ರದಿಂದಲೂ, ಋಷಭನು ದಕ್ಷಿಣ ಸಮುದ್ರದಿಂದಲೂ, ಗವಾಯನು ಪಶ್ಚಿಮ ಸಮುದ್ರದಿಂದಲೂ, ನಳನು ಉತ್ತರ ಸಮುದ್ರದಿಂದಲೂ, ಅಭಿಷೇಕಕ್ಕಾಗಿ ಬಂಗಾರದ ಬಿಂದಿಗೆಗಳಲ್ಲಿ ನೀರನ್ನು ತಂದರು. ಜಾಂಬುವಂತನು, ಹನುಮಂತ ದೇವರು, ಋಷಭನು, 500 ನದಿಗಳ ಜಲವನ್ನು ತಂದರು, ವಶಿಷ್ಠರು ಪಟ್ಟಾಭಿಷೇಕಕ್ಕೆ ಪರಿಮಳ ದ್ರವ್ಯಗಳು ಸಂಭಾರಗಳನ್ನು ಸಿದ್ಧಪಡಿಸಿದರು, ಬಿಳಿ ಬತ್ತ, ಕೆಂಪು ಬತ್ತ,ನವಣೆ, ಯವಧಾನ್ಯ, ಸಂಪಿಗೆ ಮಧು ತುಪ್ಪ ಇತ್ಯಾದಿಗಳನ್ನು ತರಿಸಿದರು, ಬಳಿಕ ವಶಿಷ್ಠರು ಬ್ರಾಹ್ಮಣರ ಒಡಗೂಡಿ ಬಂದರು.


ಶ್ರೀರಾಮಚಂದ್ರನಿಗೆ 39 ವರ್ಷ ಸೀತೆಗೆ 33 ವರ್ಷ 28ನೆಯ ತ್ರೇತಾಯುಗ  ರುಧಿರೋದ್ಗರಿ ಸಂವತ್ಸರ  ಚೈತ್ರಮಾಸ ಶುಕ್ಲಪಕ್ಷ ಸಪ್ತಮಿತಿಥಿ ಪುಷ್ಯನಕ್ಷತ್ರ ಈ ಶುಭ ದಿವಸದಲ್ಲಿ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಹೋತ್ಸವವನ್ನು ಮಾಡಿದರು.


ವಸಿಷ್ಠರು ಶ್ರೀರಾಮನನ್ನು ಸೀತೆಯೊಡನೆ ರತ್ನಮಯವಾದ ಪೀಠದಲ್ಲಿ ಕೂಡಿಸಿದರು, ನಂತರ ವಸಿಷ್ಠರು ವಾಮದೇವರು ಜಾಬಲ್ಲಿ ದೇವೇಂದ್ರನನ್ನು ಸ್ವರ್ಗಾಧಿಪತ್ಯಕ್ಕಾಗಿ ಅಭಿಷೇಕ ಮಾಡಿದಂತೆ ಸ್ವಚ್ಛವಾಗಿಯೂ ಸುಗಂಧ ವಿಶಿಷ್ಟವಾಗಿಯೂ ಇರುವ ಸಮುದ್ರ ಮತ್ತು ನದಿ ತೀರ್ಥರಿಂದ ಶ್ರೀರಾಮನನ್ನು ಅಭಿಷೇಕ ಮಾಡಿದರು ದೇವತೆಗಳು ಪುರಜನರು ಅಭಿಷೇಕ ಮಾಡಿದರು, ರತ್ನ ಖಚಿತವಾದ ದಿವ್ಯ ಕಿರೀಟವು ಪೂರ್ವದಲ್ಲಿ ಬ್ರಹ್ಮದೇವರಿಂದ ನಿರ್ಮಿಸಲ್ಪಟ್ಟ ಮನುಪ್ರಜಾಪತಿಯು ಹಿಂದೆ ಯಾವ ಕಿರೀಟದಿಂದಲೇ ಅಭಿಷೇಕ ಮಾಡಿಸಿಕೊಂಡಿದ್ದಾನೋ ಆ ಕಿರೀಟವನ್ನು ತಂದು ವಶಿಷ್ಠರು ವಿದ್ಯುಕ್ತವಾಗಿ ಪೂಜಿಸಿದ ಮೇಲೆ ಶ್ರೀರಾಮಚಂದ್ರನ ಶಿರಸ್ಸಿನಲ್ಲಿಟ್ಟು ಪಟ್ಟಾಭಿಷೇಕ ಮಹೋತ್ಸವವನ್ನು ಮಾಡಿದರು.


ಆಗ ಶತ್ರುಘ್ನನು ಶ್ವೇತಛತ್ರವನ್ನು ಶ್ರೀರಾಮನಿಗೆ ಹಿಡಿದನು, ಉಭಯ ಪಾರ್ಶ್ವದಲ್ಲಿ ನಿಂತು ಸುಗ್ರೀವ ವಿಭೀಷಣರು ಚಾಮರಗಳನ್ನು ಹಾಕಿದರು.


ಶ್ರೀರಾಮಚಂದ್ರನನ್ನು ನೋಡಿ ಅಲ್ಲಿದ್ದವರೆಲ್ಲರೂ "ಇವನು ಕೇವಲ ಕೋಸಲಪಾಲಕನಷ್ಟೇ ಅಲ್ಲ 14 ಲೋಕಗಳಿಗೂನಾಥನು" ಎಂದು ಸಂತೋಷದಿಂದ ಕಣ್ತುಂಬಿ ಕೊಂಡರು. ಗಂಧರ್ವರು ಗಾನ ಮಾಡಿದರು, ಅಪ್ಸರ ಸ್ತ್ರೀಯರು ನರ್ತನ ಮಾಡಿದರು, ಭೂಮಿಯು ಸಸ್ಯ ಸಮೃದ್ಧವಾಯಿತು. ಪುರುಷೋತ್ತಮನಾದ ಶ್ರೀರಾಮಚಂದ್ರನು ತನ್ನ ಪಟ್ಟಾಭಿಷೇಕ ಕಾಲದಲ್ಲಿ ಬ್ರಾಹ್ಮಣರಿಗೆ ಒಂದು ಲಕ್ಷ ಸುಲಕ್ಷಣವುಳ್ಳ ಗೋವುಗಳನ್ನು ದಾನ ಮಾಡಿದನು, ಹಾಗೂ 30 ಕೋಟಿ ಸುವರ್ಣ ನಾಣ್ಯಗಳನ್ನು ಬಗೆ ಬಗೆಯ ವಸ್ತ್ರಗಳನ್ನು ದಾನ ಮಾಡಿದನು.


(ಹನುಮಂತ ಕಂದ ಪದ್ಯ: ನೀವೊಲಿದಡೆ ತೃಣ ಮೇರುವು|ನಾವನಚರನಾಗಿ ಪುಟ್ಟಿ ಯಜನಾದೆನು, ರಾ | ಜೀವಾಕ್ಷ ನಿನ್ನಯ ದಯ ಸಂಜೀವನ ಬ್ರಹ್ಮಾದಿಗಳಿಗೆ ರಘುನಾಥ||)


ಶ್ರೀರಾಮನು ಲಕ್ಷ್ಮಣನನ್ನು ಯುವರಾಜನಾಗೆಂದು ಹೇಳಲು ಅವನು ಒಪ್ಪಲಿಲ್ಲ, ಭರತನಿಗೆ ಯುವರಾಜ್ಯಾಭಿಷೇಕ ವನ್ನು ಮಾಡಿದನು. ರಾಜಲಲಾಮನಾದ ಶ್ರೀರಾಮನು ಆಗಾಗ ಅನೇಕ ಬಾರಿ ಪೌಂಡರೀಕ, ಅಶ್ವಮೇಧ, ವಾಜಪೇಯ, ಯಾಗಗಳನ್ನು ಮಾಡಿದನು.


||"ರಾಜ್ಯಂ ದಶಸಹಸ್ರಾಣಿ ಪ್ರಾಪ್ಯ ವರ್ಷಾಣಿ ರಾಘವ"||

ಸೌರಮಾನದ ರೀತ್ಯ ಹತ್ತು ಸಾವಿರ ವರ್ಷಗಳವರೆಗೆ ಶ್ರೀರಾಮಚಂದ್ರನು ಧರ್ಮದಿಂದ ರಾಜ್ಯವನ್ನು ಅಳಿದನು.

"ರಾಮ ರಾಮ ರಾಮ ಎನ್ನಿರೋ ಇಂಥಾ ಸ್ವಾಮಿಯ ನಾಮವ ಮರೆಯದಿರೋ|| ಪುರಂದರ ವಿಠಲನ ಚರಣವ ಭಜಿಸಿರೋ| ದುರಿತ ಭಯಗಳಿಂದ ದೂರಾಗಿರೋ"||

   ಜೈ ಶ್ರೀರಾಮ

      || ಶ್ರೀಕೃಷ್ಣಾರ್ಪಣಮಸ್ತು ||




-  ಪರಿಮಳಾ ಬಿ ಜೋಶಿ,  ಧಾರವಾಡ

97317 79333


ಲೇಖಕರ ಸಂಕ್ಷಿಪ್ತ ಪರಿಚಯ:

ಸೌರಭ ದಾಸ ಸಾಹಿತ್ಯ ವಿದ್ಯಾಲಯದಲ್ಲಿ ದಾಸಸಾಗರ ವರ್ಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮತ್ತು  ದಾಸಚಿಂತನಮಣಿಯಲ್ಲಿ ಉನ್ನತ ಅಧ್ಯಯನ ಮಾಡುತ್ತಿದ್ದಾರೆ. ಗುರುಗಳ ದಾಸರ ಅನುಗ್ರಹದಿಂದ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top