- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್
ಅದು ತ್ರೇತಾಯುಗದ ಕಾಲ. ಚಿಕ್ಕಮ್ಮ ಕೈಕೇಯಿಗೆ ತಂದೆ ದಶರಥನು ನೀಡಿದ ಮಾತಿನಂತೆ ಆಕೆಯ ಆಶಯವನ್ನು ಈಡೇರಿಸಲು ಅಯೋಧ್ಯಾ ಅರಸನಾಗಲಿದ್ದ ಶ್ರೀರಾಮಚಂದ್ರ ತನ್ನ ಪತ್ನಿ ಸೀತಾದೇವಿ ಮತ್ತು ಸೋದರ ಲಕ್ಷ್ಮಣನೊಂದಿಗೆ ವನವಾಸದಲ್ಲಿ ಇದ್ದ ಸಮಯವದು.
ಒಂದು ದಿನ ಕಾಡಿನಲ್ಲಿ ನಡೆಯುತ್ತಿದ್ದಾಗ ಬಾಯಾರಿಕೆಯಾಯಿತು. ಲಕ್ಷ್ಮಣನು ಹತ್ತಿರದಲ್ಲೆಲ್ಲೂ ಇರಲಿಲ್ಲ. ಆಗ ಅಲ್ಲಿಯೇ ಇದ್ದ ನವಿಲೊಂದನ್ನು ನೀರಿನ ತಾವನ್ನು ಹುಡುಕಿಕೊಡಲು ಪ್ರಭು ಶ್ರೀರಾಮಚಂದ್ರನು ಕೇಳಿಕೊಂಡಾಗ ನವಿಲು ತಾನು ಮುಂದೆ ಹಾರಿ ಹೋಗುತ್ತಿರುವಾಗ ತನ್ನ ಒಂದೊಂದೇ ರೆಕ್ಕೆಗಳನ್ನು ಕಿತ್ತು ಹಾಕುತ್ತಾ ಹೋಗುತ್ತೇನೆ. ಆ ರೆಕ್ಕೆಗಳನ್ನು ನೋಡುತ್ತಾ ನನ್ನನ್ನು ಹಿಂಬಾಲಿಸಬೇಕು ಎಂದು ಶ್ರೀರಾಮನಲ್ಲಿ ಅರಿಕೆ ಮಾಡಿತು. ಅಂತೆಯೇ ಮುಂದೆ ಮುಂದೆ ನವಿಲು ತನ್ನ ಒಂದೊಂದೇ ರೆಕ್ಕೆಗಳನ್ನು ಕಿತ್ತು ಹಾಕುತ್ತಾ ನೀರಿನ ಕೊಳದ ಬಳಿ ಸಾಗುತ್ತಿದ್ದರೆ ಹಿಂದೆ ಶ್ರೀರಾಮಚಂದ್ರ ಮತ್ತು ಸೀತಾಮಾತೆ ಆ ನವಿಲನ್ನು ಹಿಂಬಾಲಿಸಿದರು. ಅಂತಿಮವಾಗಿ ಕೊಳದ ಬಳಿ ಬರುವ ವೇಳೆಗೆ ನವಿಲಿನ ದೇಹಕ್ಕಂಟಿದ ಎಲ್ಲ ರೆಕ್ಕೆಗಳು ಕತ್ತರಿಸಿ ಹೋಗಿದ್ದು ನವಿಲು ರಕ್ತಸಿಕ್ತವಾಗಿ ಅಂತಿಮ ಕ್ಷಣಗಳನ್ನು ಎಣಿಸುತ್ತಿತ್ತು. ನವಿಲುಗಳಿಗೆ ಒಂದು ನಿರ್ದಿಷ್ಟ ಋತುವಿನಲ್ಲಿ ಮಾತ್ರ ರೆಕ್ಕೆಗಳು ತಾನೇ ತಾನಾಗಿ ಉದುರುತ್ತವೆ ಮತ್ತು ತಾನಾಗಿಯೇ ಮೂಡುತ್ತವೆ. ಇದರ ಅರಿವಿದ್ದು ಕೂಡ ಪ್ರಭು ಶ್ರೀ ರಾಮ ಮತ್ತು ಆತನ ಪತ್ನಿಯ ದಾಹ ಇಂಗಿಸಲು ತನ್ನ ಪ್ರಾಣವನ್ನೇ ಲೆಕ್ಕಿಸದೆ ಆ ನವಿಲು ರೆಕ್ಕೆಗಳನ್ನು ಕಿತ್ತು ಹಾಕಿತ್ತು. ನವಿಲಿನ ಈ ಅವಸ್ಥೆಯನ್ನು ಕಂಡು ಪ್ರಭು ಶ್ರೀ ರಾಮನು ಅಪಾರವಾಗಿ ನೊಂದುಕೊಂಡು ನಿನ್ನ ಸಾವಿಗೆ ನಾನೇ ಕಾರಣನಾಗುತ್ತಿರುವೆ. ಆದರೆ ನಿನ್ನ ಈ ತ್ಯಾಗ ಮನೋಭಾವ ಜಗತ್ತಿಗೆ ತಿಳಿಸಿಕೊಡಲು ನನ್ನ ಮುಂದಿನ ಜನ್ಮದಲ್ಲಿ ನನ್ನ ತಲೆಯ ಮೇಲೆ ನಿನ್ನ ಗರಿಯನ್ನು ಇಟ್ಟುಕೊಳ್ಳುವೆ ಎಂದು ನವಿಲಿಗೆ ವಚನ ನೀಡಿದನು. ಅದುವೇ ತ್ರೇತಾಯುಗದಲ್ಲಿನ ಪ್ರಭು ಶ್ರೀ ರಾಮಚಂದ್ರ ಮುಂದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ನವಿಲು ಧರಿಸಲು ಕಾರಣವಾದ ಘಟನೆ.
ವನವಾಸದ ಸಮಯದಲ್ಲಿ ರಾಮನನ್ನು ಕಂಡು ಮೋಹಗೊಂಡ ರಾವಣನ ತಂಗಿ ಶೂರ್ಪನಖಿಯು ತನ್ನನ್ನು ಮದುವೆಯಾಗಲು ವಿನಂತಿಸಿಕೊಂಡಾಗ ಪ್ರಭು ಶ್ರೀರಾಮನು ತಾನು ಏಕಪತ್ನಿವ್ರತಸ್ತನಾಗಿದ್ದು ಬೇಕಾದರೆ ತನ್ನ ಸಹೋದರ ಲಕ್ಷ್ಮಣನನ್ನು ಕೇಳು ಎಂದು ಹೇಳಿದನು. ಆಗ ಶೂರ್ಪನಖಿಯು ಲಕ್ಷ್ಮಣನಿಗೆ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಳು. ಹಲವಾರು ಬಾರಿ ಹೇಳಿದರೂ ಕೇಳದ ಶೂರ್ಪನಖಿಯನ್ನು ದೂರ ಸರಿಸಲು ಲಕ್ಷ್ಮಣನು ಮಾಡಿದ ಪ್ರಯತ್ನದ ಫಲವೇ ಆಕೆಯ ಮೂಗು ಕತ್ತರಿಸಲು ಕಾರಣವಾಯಿತು. ಇದರಿಂದ ಖತಿಗೊಂಡ ಶೂರ್ಪನಖಿಯು ಸ್ವರ್ಣ ಲಂಕೆಗೆ ತೆರಳಿ ತನ್ನ ಸಹೋದರ ರಾವಣನಿಗೆ ರಾಮ ಲಕ್ಷ್ಮಣರ ವಿರುದ್ಧ ದೂರು ಹೇಳಿದಳು. ಕ್ರುದ್ಧನಾದ ರಾವಣನು ತನ್ನ ತಂಗಿ ಶೂರ್ಪನಖಿಗೆ ಆದ ಅವಮಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಮನ ಪತ್ನಿ ಸೀತಾದೇವಿಯನ್ನು ಸ್ವರ್ಣಲಂಕೆಗೆ ಅಪಹರಿಸಿಕೊಂಡೊಯ್ದನು. ಹೀಗೆ ಆತನು ಸೀತೆಯನ್ನು ಅಪಹರಿಸಲು ಸಹಾಯ ಮಾಡಿದ್ದು ಮಾರೀಚನೆಂಬ ರಾಕ್ಷಸನು. ಮಾರೀಚನು ಚಿನ್ನದ ವರ್ಣದ ಮಾಯಾ ಜಿಂಕೆಯ ವೇಷದಲ್ಲಿ ಬಂದು ಸೀತೆಯ ಮನಸೆಳೆಯಿತು. ಅದನ್ನು ಪಡೆಯಲೇಬೇಕೆಂಬ ಆಸೆಯಿಂದ ಸೀತಾಮಾತೆಯು ಶ್ರೀರಾಮಚಂದ್ರನನ್ನು ಆ ಹೊಂಬಣ್ಣದ ಹರಿಣವನ್ನು ತಂದು ಕೊಡು ಎಂದು ದುಂಬಾಲು ಬಿದ್ದಳು. ಪತ್ನಿಯನ್ನು ನಿರಾಸೆಗೊಳಿಸಲು ಇಚ್ಛಿಸದ ಪ್ರಭು ಶ್ರೀರಾಮನು ಜಿಂಕೆಯ ಬೆನ್ನು ಹತ್ತಿದನು. ಮುಂದೆ ಆ ಚಿನ್ನದ ಜಿಂಕೆಯನ್ನು ಹಿಡಿದು ತರಲು ಪ್ರಯತ್ನಿಸಿ, ಅದರ ಮೇಲೆ ಬಾಣಪ್ರಯೋಗ ಮಾಡಿದಾಗ ಆ ಜಿಂಕೆಯು ಸತ್ತು ಮಾರೀಚ ತನ್ನ ನಿಜರೂಪದಲ್ಲಿ ಶವವಾಗಿ ಕಾಣಿಸಿದನು. ಹೀಗೆ ಜಿಂಕೆಯು ಕೂಡ ರಾಮಾಯಣದ ಪಾತ್ರ ಪ್ರಪಂಚದಲ್ಲಿ ಒಂದು ವನ್ಯಜೀವಿಯಾಗಿದೆ.
ಇತ್ತ ಸೀತೆಯನ್ನು ಅಪಹರಿಸಿದ ರಾವಣನು ಆಕೆಯನ್ನು ಬಲವಂತವಾಗಿ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಜಟಾಯು ಎಂಬ ಬೃಹದಾಕಾರದ ಗಿಡುಗವೊಂದು ರಾವಣನ ಮೇಲೆ ದಾಳಿ ಮಾಡಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿತು. ರಾವಣ ಮತ್ತು ಜಟಾಯುವಿನ ಮಧ್ಯದ ಹೋರಾಟದಲ್ಲಿ ಅಂತಿಮವಾಗಿ ರಾವಣನು ಜಟಾಯುವಿನ ರೆಕ್ಕೆಯನ್ನು ಕತ್ತರಿಸಿಬಿಟ್ಟನು. ರೆಕ್ಕೆ ಕತ್ತರಿಸಿಕೊಂಡು ನೆಲಕ್ಕೆ ಬಿದ್ದ ಜಟಾಯು ರಾಮನ ಬರವಿಗಾಗಿ ಕಾಯಲಾರಂಭಿಸಿತು.
ಸೀತಾನ್ವೇಷಣೆಯಲ್ಲಿ ರಾಮ ಆ ಮಾರ್ಗವಾಗಿ ಬಂದಾಗ ಅತಿ ದೊಡ್ಡ ಪರ್ವತದಂತಹ ಪಕ್ಷಿಯನ್ನು ನೋಡಿ ಇದು ಕೂಡ ಮಾರುವೇಷದಲ್ಲಿರುವ ರಾವಣ ಇಲ್ಲವೇ ಆತನ ಅನುಚರನಿರಬೇಕು ಎಂದು ಊಹಿಸಿ ಅದನ್ನು ಕೊಲ್ಲಲು ಪ್ರಯತ್ನಿಸಿದನು. ಆಗ ಜಟಾಯು ಪ್ರಭು ಶ್ರೀ ರಾಮ, ನಾನು ಸೂರ್ಯದೇವ ಮತ್ತು ಶ್ಯೇತೆಯ ಮಗ ಜಟಾಯು ನನ್ನ ಸೋದರ ಸಂಪಾತಿ. ಸ್ವರ್ಣ ಲಂಕೆಯ ರಾಕ್ಷಸ ದೊರೆ ರಾವಣ ಸೀತಾಮಾತೆಯನ್ನು ಅಪಹರಿಸಿಕೊಂಡು ಒಯ್ಯುವಾಗ ನಾನು ಆ ತಾಯಿಯನ್ನು ರಕ್ಷಿಸಲು ಸಾಕಷ್ಟು ಹೋರಾಡಿದೆ ಆದರೆ ವಯೋ ಸಹಜವಾದ ನಿಃಶ್ಯಕ್ತಿಯಿಂದ ರಾವಣನ ಬಲದ ಮುಂದೆ ಸೋತು ಹೋದೆ ಇದರ ಜೊತೆಗೆ ರಾವಣ ನನ್ನ ರೆಕ್ಕೆಗಳನ್ನು ಕತ್ತರಿಸಿ ನಾನು ಹಾರಲು ಬಾರದಂತೆ ತಡೆದು ಬಿಟ್ಟ. ಸೀತಾ ಮಾತೆಯನ್ನು ರಾವಣ ಅಪಹರಿಸಿರುವ ವಿಷಯವನ್ನು ನಿಮಗೆ ತಿಳಿಸುವುದು ನನ್ನ ಅಂತಿಮ ಕರ್ತವ್ಯವಾಗಿತ್ತು. ನನಗೆ ಹೊರಡಲು ಅಪ್ಪಣೆ ಕೊಡಿ ಎಂದು ಕೇಳಿದನು. ಅದಕ್ಕೆ ಪ್ರಭು ಶ್ರೀ ರಾಮನು ಜಟಾಯು ತಂದೆಯೇ ನಿನ್ನ ಹೋರಾಟ ಸೋಲಿನಲ್ಲಿ ಪರ್ಯವಸಾನವಾಯಿತು ಎಂದು ಯೋಚಿಸಬೇಡ... ಅದೆಷ್ಟೇ ಎಣಿಕೆ ಹಾಕಿದರೂ ನೀನು ಹೋರಾಟ ಮಾಡಿ ಸೀತೆಯ ಅಪಹರಣವನ್ನು ತಡೆಯಲು ಪ್ರಯತ್ನಿಸಿದೆ. ನಿನ್ನ ಈ ಋಣಕ್ಕೆ ನಾನು ಕೃತಕೃತ್ಯನು. ಒಬ್ಬ ಮಗನಾಗಿ ನಾನು ನಿನ್ನೆಲ್ಲಾ ಅಂತಿಮ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪೂರೈಸುತ್ತೇನೆ ನಿನ್ನ ಕಥೆ ಇತಿಹಾಸದಲ್ಲಿ ಅಜರಾಮರವಾಗಿರುತ್ತದೆ ಎಂದು ಹೇಳುತ್ತಲೇ ಸಂತೃಪ್ತನಾದ ಜಟಾಯು ಎಂಬ ದೈತ್ಯಾಕಾರದ ಗಿಡುಗ ಪಕ್ಷಿ ಕಣ್ಣು ಮುಚ್ಚಿತು.
ಹೀಗೆ ಜಟಾಯು ರಾವಣನೊಂದಿಗೆ ಹೋರಾಡಿದ ಮತ್ತು ಪ್ರಭು ಶ್ರೀ ರಾಮನನ್ನು ಭೇಟಿಯಾದ ಸ್ಥಳವೇ ಇಂದಿನ ಆಂಧ್ರಪ್ರದೇಶದ ಲೇಪಾಕ್ಷಿ. ಪ್ರಭು ಶ್ರೀ ರಾಮನು ಜಟಾಯುವನ್ನು ಕುರಿತು ಎದ್ದೇಳು ಎಂದು ಹೇಳಲು ಲೇ.. ಪಕ್ಷಿ ಎಂದು ಸಂಸ್ಕೃತದಲ್ಲಿ ಹೇಳಿದನು, ಅಂದಿನಿಂದ ಆ ಸ್ಥಳವು ಲೇಪಾಕ್ಷಿ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಮುಂದೆ ರಾಮನು ಜಟಾಯುವಿನ ಅಂತಿಮ ವಿಧಿ ವಿಧಾನಗಳನ್ನು ಅತ್ಯಂತ ಶಾಸ್ತ್ರೋಕ್ತವಾಗಿ, ಓರ್ವ ತಂದೆ ತನ್ನ ಮಗನಿಗೆ ಪೂರೈಸುವ ರೀತಿಯಲ್ಲಿ ನೆರವೇರಿಸಿದನು. ಹೀಗೆ ಜಟಾಯುವಿನ ಅಂತಿಮಕರ್ಮ ಪೂರೈಸಿದ ಸ್ಥಳವನ್ನು ರಾಮರ್ಕಲ್ಮೆಟ್ಟು ಎಂದು ಕರೆಯುತ್ತಾರೆ. ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಜಟಾಯುವಿನ ಸ್ಮರಣಾರ್ಥ ಬೃಹತ್ತಾದ ಗುಡ್ಡದ ಮೇಲೆ ಜಟಾಯು ಪಾರ್ಕ್ ನಿರ್ಮಾಣಗೊಂಡಿದ್ದು ಅಲ್ಲಿ ರಾಮಾಯಣದ ಕುರಿತ ವಿವರಗಳನ್ನು ಕಾಣಬಹುದು.
ಜಟಾಯುವಿನ ಸೋದರ ಸಂಪಾತಿ ಎಂಬ ಗಿಡುಗವು ತನ್ನ ಸಹೋದರ ಜಟಾಯುವಿನೊಂದಿಗೆ ತಂದೆ ಸೂರ್ಯದೇವನನ್ನು ಭೇಟಿಯಾಗಲು ಆಕಾಶದತ್ತ ಹಾರಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಸೂರ್ಯನ ಪ್ರಖರ ಶಾಖದಿಂದ ತನ್ನ ಸಹೋದರನನ್ನು ತಪ್ಪಿಸಲು ಆತನ ಮೇಲೆ ತನ್ನ ರೆಕ್ಕೆಗಳನ್ನು ಚಾಚಿ ಸಂಪಾತಿ ಹಾರಲಾರಂಭಿಸಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಜಟಾಯು ಹಾರಲಾಗದೆ ಇಳಿದರೆ, ಅತ್ಯಂತ ಹುಮ್ಮಸ್ಸಿನಿಂದ ಮೇಲೆ ಹಾರುತ್ತಿದ್ದ ಸಂಪಾತಿಯ ಎರಡು ರೆಕ್ಕೆಗಳು ಸೂರ್ಯನ ಪ್ರಖರ ಶಾಖಕ್ಕೆ ಸುಟ್ಟು ಹೋದವು. ಆಗ ಸಂಪಾತಿಯು ವಿಂಧ್ಯ ಪರ್ವತದ ತಪ್ಪಲಲ್ಲಿ ಬಿದ್ದು ಹೋದನು. ಆಗ ಆತನನ್ನು ಸಂರಕ್ಷಿಸಿದ ನಿಶಾಕರ ಎಂಬ ಮುನಿಯು ಆತನನ್ನು ಉಪಚರಿಸಿ ರಾಮನು ತನ್ನ ವಾನರ ಸೇನೆಯೊಂದಿಗೆ ಅಲ್ಲಿಗೆ ಬರುವುದಾಗಿಯೂ ಮುಂದೆ ಸೀತೆಯನ್ನು ಹುಡುಕಲು ಸ್ವರ್ಣ ಲಂಕೆಯ ದಾರಿ ತೋರಿಸಲು ನೀನು ಅವರಿಗೆ ಸಹಾಯಕನಾಗಬೇಕೆಂದು ನಿರ್ದೇಶಿಸಿದನು.
ಜಟಾಯುವಿನ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ ಶ್ರೀರಾಮಚಂದ್ರನು ಸೋದರನೊಡನೆ ದಕ್ಷಿಣದ ಕಿಷ್ಕಿಂಧಾ ಪರ್ವತದೆಡೆ ಬಂದು ಸೇರಿದನು. ಈಗಾಗಲೇ ತನ್ನ ವಾನರ ಸೇನೆಯೊಡನೆ ಅಲ್ಲಿ ವಾಸವಾಗಿದ್ದ ವಾಲಿಯ ಸೋದರ ಸುಗ್ರೀವನ ಭೇಟಿಯನ್ನು ಮಾಡಿದರು. ಶ್ರೀರಾಮ ಮತ್ತು ಸುಗ್ರೀವರ ಸ್ನೇಹವಾಯಿತು, ಜೊತೆಗೆ ಹನುಮನಿಗೆ ತನ್ನ ಜೀವನದ ಲಕ್ಷ್ಯವಾದ ಪ್ರಭು ಶ್ರೀ ರಾಮನ ಸಖ್ಯ ದೊರೆಯಿತು. ವಾನರರಿಗೆ ಆಕಾಶ ಮಾರ್ಗವಾಗಿ ದೊರೆತ ಕೆಲ ಆಭರಣಗಳನ್ನು ತಂದು ತೋರಿಸಲಾಗಿ ಲಕ್ಷ್ಮಣನು ತನ್ನ ಅತ್ತಿಗೆ ಸೀತಾ ಮಾತೆಯ ಕಾಲಂದುಗೆಗಳನ್ನು ಗುರುತಿಸಿದನು. ಇಲ್ಲಿ ಜಾಂಬವಂತನೆಂಬ ವೃದ್ಧ ಕರಡಿಯು ಕೂಡ ಪ್ರಭು ಶ್ರೀ ರಾಮನ ಜೊತೆಗೂಡಿತು. ಮುಂದೆ ವಾಲಿಯನ್ನು ವಧಿಸಿ ಸುಗ್ರೀವನಿಗೆ ಕಿಷ್ಕಿಂಧೆಯ ರಾಜನನ್ನಾಗಿ ಪಟ್ಟ ಕಟ್ಟಿದ ಪ್ರಭು ಶ್ರೀ ರಾಮನು ಸೀತೆಯ ಅನ್ವೇಷಣೆಯಲ್ಲಿ ಸುಗ್ರೀವ ಮತ್ತು ಆತನ ಬೃಹತ್ ವಾನರ ಸೇನೆಯೊಂದಿಗೆ ದಕ್ಷಿಣದೆಡೆ ಹೊರಟನು. ಹಾಗೆ ಹೊರಟಾಗ ವಿಂಧ್ಯ ಪರ್ವತದ ತಪ್ಪಲಿನಲ್ಲಿ ಅವರಿಗೆ ಸಂಪಾತಿಯ ಭೇಟಿಯಾಯಿತು. ಪ್ರಭು ಶ್ರೀ ರಾಮನಿಂದ ತನ್ನ ಸೋದರ ಜಟಾಯುವಿನ ಕುರಿತು ಮಾಹಿತಿ ಪಡೆದ ಸಂಪಾತಿಯು ತನ್ನ ಸೋದರ ಪ್ರಭು ಶ್ರೀ ರಾಮನ ಪತ್ನಿ ಸೀತಾಮಾತೆಯ ಅನ್ವೇಷಣೆಯ ಮಹಾಮಣಿಹದಲ್ಲಿ ಆತನ ಮೃತ್ಯುವಾದದ್ದಕ್ಕೆ ಹೆಮ್ಮೆ ಪಟ್ಟನು. ಜೊತೆಗೆ ತಾನು ಪ್ರಭು ಶ್ರೀರಾಮನಿಗೆ ಲಂಕೆಯ ದಾರಿ ತೋರಿಸುವಲ್ಲಿ ಸಹಾಯವಾಗುವುದಾಗಿ ಹೇಳಿ ಅವರೊಂದಿಗೆ ಜೊತೆಯಾದನು.
ಇಲ್ಲಿ ರಾಮನಿಗೆ ಜೊತೆಯಾದವರು ಕಪಿಗಳು. ಅದರಲ್ಲೂ ಮುಖ್ಯವಾಗಿ ಹನುಮಂತ. ಎಲ್ಲಿ ರಾಮನಿರುವನೋ ಅಲ್ಲಿ ಹನುಮನು ಎಂಬ ಮಾತಿನಂತೆ ಹನುಮ ರಾಮಾಯಣದಲ್ಲಿ ಒಂದು ಬಹುಮುಖ್ಯ ಪಾತ್ರವಾಗಿ ಪರಿಚಿತನಾಗಿದ್ದಾನೆ. ಪ್ರಭು ಶ್ರೀರಾಮಚಂದ್ರ ಮತ್ತು ಲಕ್ಷ್ಮಣರ ಪರಿಚಯವಾದ ನಂತರ ಹೆಗಲ ಮೇಲೆ ಹೊತ್ತುಕೊಂಡು ಸುಗ್ರೀವನ ಬಳಿ ಸಾರಿದ ಹನುಮಂತ ಕೊನೆಯವರೆಗೂ ರಾಮನ ಪದತಲದಲ್ಲಿಯೇ ಆತನ ಬಂಟನಾಗಿ ಸೇವೆ ಸಲ್ಲಿಸಿದನು.
ಸೀತೆಯನ್ನು ಕಳೆದುಕೊಂಡ ಶ್ರೀರಾಮಚಂದ್ರನು ತನ್ನ ಸಹೋದರ ಲಕ್ಷ್ಮಣನೊಡನೆ ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಯ ವಾನರ ರಾಜ ಸುಗ್ರೀವ ಮತ್ತು ಆತನ ಕಪಿ ಸೈನ್ಯದೊಂದಿಗೆ ಸಮುದ್ರದ ದಡಕ್ಕೆ ಬಂದು ಬೀಡು ಬಿಟ್ಟನು. ಸಮುದ್ರದ ಆಚೆಗೆ ಸಿರಿ ಲಂಕೆ ಮತ್ತು ಸಮುದ್ರದ ಈ ಕಡೆಯ ಭೂ ಭಾಗದಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತು ವಾನರ ಸೇನೆ.
ಸಮುದ್ರದ ದಡವನ್ನೇನೋ ತಲುಪಿದರು. ಆದರೆ ಸೀತೆ ಸ್ವರ್ಣ ಲಂಕೆಯಲ್ಲಿ ಇರುವ ಕುರಿತು ನಿಖರವಾದ ಮಾಹಿತಿ ಪಡೆಯಬೇಕಷ್ಟೇ. ಹಾಗಾದರೆ ಅಗಾಧ ಸಮುದ್ರವನ್ನು ಯಾರು ದಾಟಬೇಕು ಎಂದು ಅವರವರಲ್ಲಿ ಚರ್ಚೆಯಾಗತೊಡಗಿತು. ಆಗ ಎಲ್ಲರ ದೃಷ್ಟಿ ಹನುಮನೆಡೆ. ಆದರೆ ಹನುಮನಿಗೆ ತನ್ನ ಅಪಾರ ಶಕ್ತಿಯ ಕುರಿತು ಉಂಟಾದ ವಿಸ್ಮರಣೆಯಿಂದಾಗಿ ಆತನು ಹಿಂಜರಿದನು. ಆಗ ಆತನನ್ನು ಹುರಿದುಂಬಿಸಿ ಆತನ ಕಪಿಚೇಷ್ಟೆಯಿಂದ ಶಾಪಗ್ರಸ್ತನಾಗಿ ತನಗಿರುವ ಅಷ್ಟಸಿದ್ದಿಗಳನ್ನು ಮರೆತು ಹೋಗಿದ್ದ ಹನುಮನಿಗೆ ಅವಶ್ಯಕ ಸಮಯದಲ್ಲಿ ಅವುಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಸಹಾಯ ಮಾಡಿದ್ದು ಜಾಂಬವಂತನೆಂಬ ಕರಡಿ.
ಮುಂದೆ ಆಂಜನೇಯನು ತನ್ನ ಅಷ್ಟಸಿದ್ದಿಗಳಲ್ಲಿ ಒಂದಾದ ಗರಿಮಾ ಶಕ್ತಿಯನ್ನು ಉಪಯೋಗಿಸಿ ದೇಹದ ಗಾತ್ರವನ್ನು ಅತಿ ದೊಡ್ಡದಾಗಿಸಿಕೊಂಡು ಒಂದು ದೊಡ್ಡ ನೆಗೆತದಲ್ಲಿ ಸಮುದ್ರವನ್ನು ಲಂಘಿಸಿ ಲಂಕೆಯನ್ನು ತಲುಪಿದನು.ಅಲ್ಲಿ ತನ್ನ ದೇಹವನ್ನು ಕಿರಿದಾಗಿಸಿಕೊಂಡು ಇಡೀ ಲಂಕೆಯನ್ನು ಸುತ್ತಿ ಕೊನೆಗೆ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿದ್ದ ಸೀತೆಯನ್ನು ಗುರುತಿಸಿದನು. ಆಕೆ ತನ್ನನ್ನು ಗುರುತಿಸಲು ಸಾಧ್ಯವಿಲ್ಲವೆಂದು ರಾಮನ ಕುರಿತು ಚಿಕ್ಕದಾಗಿ ಹೇಳಲಾರಂಬಿಸಿದನು. ರಾವಣನ ಸಾಮ್ರಾಜ್ಯದಲ್ಲಿ ರಾಮನ ಗುಣಗಾಯನವನ್ನು ಕೇಳಿದ ಸೀತೆ ಅವನಾರೆಂದು ಕೇಳಲು ರಾಮನು ಕೊಟ್ಟ ಗುರುತಿನ ಕಾಣಿಕೆಯನ್ನು ಆಕೆಗೆ ನೀಡಿದನು. ಈಗಾಗಲೇ ರಾಮನು ಸಮುದ್ರದ ಆಚೆ ದಡದಲ್ಲಿ ವಾನರ ಸೈನ್ಯದೊಂದಿಗೆ ಕಾಯುತ್ತಿದ್ದು ತಾನು ಮರಳಿದ ಕೂಡಲೇ ಲಂಕೆಯ ಮೇಲೆ ದಾಳಿ ಮಾಡುವುದಾಗಿಯೂ, ಸೀತೆಯನ್ನು ರಾವಣನ ಹಿಡಿತದಿಂದ ಬಿಡಿಸಿಕೊಂಡು ಹೋಗುವುದಾಗಿಯೂ ಹೇಳಿ ಆಕೆಯಲ್ಲಿ ಧೈರ್ಯ ತುಂಬಿದನು. ಮುಂದೆ ರಾವಣನನ್ನು ಗಮನ ಸೆಳೆಯಲು ಅಶೋಕ ವನವನ್ನು ಹಾಳು ಮಾಡಿ ರಾವಣನ ಅರಮನೆಯ ಸಭಾಭವನದಲ್ಲಿ ಆತನನ್ನು ಭೇಟಿಯಾಗುವಂತಹ ಸನ್ನಿವೇಶವನ್ನು ಸೃಷ್ಟಿಸಿ ರಾವಣನ ಸೈನ್ಯದ ಬಲಾಬಲಗಳನ್ನು ಅರಿತನು. ಸುವರ್ಣ ಲಂಕೆಗೆ ಬೆಂಕಿ ಹಚ್ಚಿ ಸಮುದ್ರದ ಆಚೆ ದಡದಲ್ಲಿ ಕಾಯುತ್ತಿರುವ ಪ್ರಭು ಶ್ರೀರಾಮ ಮತ್ತು ವಾನರ ಸೇನೆಗೆ ಸ್ವರ್ಣ ಲಂಕೆಯ ಕುರಿತಾದ ವಿಷಯಗಳನ್ನು ಹೇಳಿ ಸೀತಾಮಾತೆಯಿಂದ ಪಡೆದು ತಂದ ಆಭರಣವನ್ನು ಶ್ರೀರಾಮನಿಗೆ ಒಪ್ಪಿಸಿದನು.
ಮುಂದೆ ರಾಮ ರಾವಣರ ನಡುವಿನ ಘೋರ ಕದನದಲ್ಲಿ ರಾವಣನ ಮಗ ಇಂದ್ರಜಿತ್ ಬಾಣಕ್ಕೆ ಲಕ್ಷ್ಮಣನು ಮೂರ್ಚೆ ಹೋಗಿ ಬದುಕುಳಿಯುವ ಲಕ್ಷಣಗಳು ಕಾಣದೆ ಹೋದಾಗ, ಆತನ ಉಳಿವಿಗಾಗಿ ಸಂಜೀವಿನಿ ಮೂಲಿಕೆಯನ್ನು ತರಲು ಗೊತ್ತಾಗದೆ ಇಡೀ ಪರ್ವತವನ್ನೇ ಹೊತ್ತು ತಂದನು. ಹೀಗೆ ರಾಮಾಯಣದ ಚರಿತ್ರೆಯಲ್ಲಿ ಹನುಮನ ಕುರಿತಾದ ಸುಂದರ ಕಾಂಡ ಎಂಬ ಒಂದಿಡೀ ಅಧ್ಯಾಯವೇ ಇದ್ದು ಆತನ ಮಹಿಮೆಯನ್ನು ಹೇಳುತ್ತದೆ.
ರಾಮನು ಸಮುದ್ರದ ನೀರನ್ನು ಹಿಂತೆಗೆದುಕೊಂಡು ಸಮುದ್ರದ ಮಧ್ಯದಲ್ಲಿ ದಾರಿ ಕೊಡಲು ಸಮುದ್ರರಾಜನನ್ನು ಪ್ರಾರ್ಥಿಸಿ ಬಾಣ ಹೂಡಿದನು. ಕ್ಷಣಮಾತ್ರದಲ್ಲಿ ಸಮುದ್ರರಾಜನು ಪ್ರತ್ಯಕ್ಷನಾಗಿ ಪ್ರಭು ಶ್ರೀರಾಮನಿಗೆ ವಂದಿಸಿ ಬೆಟ್ಟದ ಕಲ್ಲುಗಳನ್ನು ಸಮುದ್ರದ ಮೇಲೆ ಹಾಕಿದರೆ ಅವು ತೇಲುವಂತೆ ಮಾಡುವ ಜವಾಬ್ದಾರಿ ನನ್ನದು. ಆ ರೀತಿ ಅಗಾಧ ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಕೆಲಸ ವಾನರ ಸೈನ್ಯ ನಿರ್ವಹಿಸಲಿ ಎಂದು ಹೇಳಿದನು. ಇದಕ್ಕೆ ವಾನರ ರಾಜ ಸುಗ್ರೀವನು ರಾಮನ ಅಪ್ಪಣೆಯ ಮೇರೆಗೆ ತನ್ನ ಕಪಿ ಸೈನ್ಯದೊಡನೆ ಸುತ್ತಲಿರುವ ಬೆಟ್ಟದ ಅಗಾಧ ಕಲ್ಲುಗಳನ್ನು ತಂದು ಅವುಗಳನ್ನು ಸಮತಟ್ಟಾಗಿಸಿ ಅವುಗಳ ಮೇಲೆ ಶ್ರೀ ರಾಮ ಎಂದು ಬರೆದು ನೀರಿನಲ್ಲಿ ಎಸೆದನು. ಆಶ್ಚರ್ಯ ಎಂದರೆ ಪ್ರಭು ಶ್ರೀ ರಾಮನ ಹೆಸರನ್ನು ಹೊತ್ತ ಕಲ್ಲುಗಳು ಸಮುದ್ರದ ಮೇಲೆ ತೇಲುತ್ತಾ ಒಂದಕ್ಕೊಂದು ಅಂಟಿಕೊಂಡು ಸೇತುವೆಯ ಸ್ವರೂಪವನ್ನು ಪಡೆಯಲಾರಂಭಿಸಿದವು. ಎಲ್ಲಾ ಕಪಿಗಳ ಸಾಂಘಿಕ ಪ್ರಯತ್ನದಿಂದ ಬೃಹತ್ ಸಾಗರಕ್ಕೆ ಸೇತುವೆಯನ್ನು ಕಟ್ಟಲಾಯಿತು.
ಅಳಿಲು ಸೇವೆ ಸಲ್ಲಿಸಬೇಕು ಅನ್ನೋ ಪದವನ್ನು ನಾವು ಅಲ್ಲಲ್ಲಿ ಕೇಳುತ್ತಿರುತ್ತೇವೆ. ನೀವು ಮಾಡುತ್ತಿರುವ ಮಹತ್ತರವಾದ ಕೆಲಸ ಕಾರ್ಯದಲ್ಲಿ ನನ್ನದೂ ಒಂದು ಪುಟ್ಟ ಪಾಲು ಇರಲಿ ಎಂಬ ಅರ್ಥವನ್ನು ಕೊಡುವ ಈ ಪದದ ಹಿಂದೆ ಒಂದು ದೊಡ್ಡ ಕಥೆಯೇ ಇದೆ.
ವಾನರಸೇನೆ ಸೇತುವೆಯನ್ನು ಕಟ್ಟುತ್ತಿರುವುದನ್ನು ಗಮನಿಸುತ್ತಿದ್ದ ಪುಟ್ಟ ಅಳಿಲಿನ ಮರಿಯೊಂದು ನಾನು ಕೂಡ ಶ್ರೀರಾಮನ ಸೇವೆ ಮಾಡಬೇಕು ಆತನ ಕಾರ್ಯದಲ್ಲಿ ಸಹಕಾರಿಯಾಗಿ ನಿಲ್ಲಬೇಕು ಎಂದು ಆಶಿಸಿತು. ಆದರೆ ಆಕಾರದಲ್ಲಿ ಅತ್ಯಂತ ಚಿಕ್ಕದಾಗಿದ್ದ ಅಳಿಲು ಏನು ತಾನೆ ಸಹಾಯ ಮಾಡಲು ಸಾಧ್ಯ!! ಕಲ್ಲನ್ನಂತು ಹೊರಲು ಸಾಧ್ಯವಿಲ್ಲ ನಿಜ. ತಕ್ಷಣ ಪುಟ್ಟ ಅಳಿಲು ಮರಿಗೆ ಒಂದು ಉಪಾಯ ಹೊಳೆಯಿತು. ಸೇತುವೆಯ ಗಾರೆಗೆ ಬೇಕಾದ ಉಸುಕನ್ನು ತರಲು ಯೋಚಿಸಿದ ಪುಟ್ಟ ಅಳಿಲ ಮರಿ ತನ್ನಿಡೀ ದೇಹವನ್ನು ನೀರಿನಲ್ಲಿ ತೋಯಿಸಿಕೊಂಡು ಸಮುದ್ರದ ದಡಕ್ಕೆ ಬಂದು ಉಸುಕಿನಲ್ಲಿ ಹೊರಳಾಡಿ ತನ್ನ ಮೈ ಮೇಲೆ ಉಸುಕಿನ ಕಣಗಳು ಅಂಟುವಂತೆ ಮಾಡುತ್ತಿತ್ತು. ನಂತರ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಬಂದು ತನ್ನ ಮೈಯನ್ನು ಒದರಿ ತನ್ನ ದೇಹಕ್ಕೆ ಅಂಟಿದ ಎಲ್ಲ ಉಸುಕನ್ನು ತೊಡೆದು ಹಾಕುತ್ತಿತ್ತು. ಇದೇ ರೀತಿ ನಿರಂತರವಾಗಿ ತನ್ನ ಸೇವೆ ಮುಂದುವರೆಸಿತು ಪುಟ್ಟ ಅಳಿಲ ಮರಿ.
ಪದೇ ಪದೇ ಅಳಿಲು ಮಾಡುವ ಕೆಲಸವನ್ನು ಗಮನಿಸಿದ ಪ್ರಭು ಶ್ರೀರಾಮಚಂದ್ರನು ತನ್ನ ಸಹಚರರೊಂದಿಗೆ ಈ ವಿಷಯದ ಕುರಿತು ಪ್ರಸ್ತಾಪಿಸಿದಾಗ ಅಳಿಲಿನ ಸೇವೆಯ ಕುರಿತು ಅವರು ವಿವರಣೆ ನೀಡಿದರು. ಪುಟ್ಟದಾದರೂ ಸೇವೆ ಮಾಡಬೇಕೆಂಬ ಅಳಿಲಿನ ಮಹತ್ವಾಕಾಂಕ್ಷೆಯನ್ನು ಅರಿತ ಪ್ರಭು ಶ್ರೀ ರಾಮಚಂದ್ರನು ಅತ್ಯಂತ ಮಮತೆಯಿಂದ ಅಳಿಲಿನ ದೇಹದ ಮೇಲೆ ಸವರಿದನು. ರಾಮನ ಮೂರು ಕೈ ಬೆರಳುಗಳ ಗುರುತು ಸೇವೆಯ ದ್ಯೋತಕವಾಗಿ ಕಾರ್ಯ ನಿರ್ವಹಿಸಿದ ಅಳಿಲಿನ ಮೈ ಮೇಲೆ ಇಂದಿಗೂ ಕೂಡ ಕಾಣಬಹುದು. ಅಂದಿನಿಂದ ಯಾವುದೇ ಕೆಲಸ ಕಾರ್ಯಗಳಲ್ಲಿ ಕಿಂಚಿತ್ತು ಸಹಾಯ ಮಾಡುವುದನ್ನು ಅಳಿಲು ಸೇವೆ ಎಂದು ಅಳಿಲಿನ ಸೇವೆಯ ಸ್ಮರಣಾರ್ಥವಾಗಿ ಹೇಳಲು ಆರಂಭಿಸಿದರು.
ಹೀಗೆ ರಾಮಾಯಣದಲ್ಲಿ ಹಲವಾರು ವನ್ಯಜೀವಿಗಳು ಗಾತ್ರದಲ್ಲಿ ಅದೆಷ್ಟೇ ಹಿರಿ ಕಿರಿದಾಗಿದ್ದರೂ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದವು.
ಇನ್ನು ಪ್ರಭು ಶ್ರೀ ರಾಮನ ಕುರಿತು ಮಾತನಾಡುವುದಾದರೆ ರಾಮ ಅಯೋಧ್ಯೆಯ ಓರ್ವ ರಾಜನೆಂದು ಪ್ರಸಿದ್ಧನಾಗುತ್ತಿದ್ದ ಮಾತ್ರ. ಆದರೆ ರಾಮ ಆದರ್ಶ ವ್ಯಕ್ತಿ ಎನಿಸಿದ, ದೈವ ರೂಪವೆನಿಸಿದ ಮುಂದೆ ದೇವರೇ ಆದ. ಹಲವಾರು ದೈವೀ ಗುಣಗಳನ್ನು ಹೊಂದಿದ್ದರೂ ಕೂಡ ಮನುಷ್ಯ ಮಾತ್ರನಾಗಿ ಜೀವಿಸಿದ. ಮಾನವ ಸಹಜವಾದ ಸುಖ- ದುಃಖ, ನೋವು-ನಲಿವುಗಳನ್ನು ನಿರ್ಲಿಪ್ತ ಭಾವದಿಂದ ಸ್ವೀಕರಿಸಿ ಮಾನವ ಜನ್ಮದ ಹಿರಿಮೆಯನ್ನು ಜಗತ್ತಿಗೆ ಸಾರಿದ.
*ರಾಮನು ಅಖಂಡ ಭೋಗ ಭಾಗ್ಯದಲ್ಲಿ ಇರುವ ವಯಸ್ಸಿನಲ್ಲಿ ಗುರುಹಿರಿಯರಿಗೆ ವಿಧೇಯನಾಗಿ ಗುರುಕುಲದ ನಿಯಮಗಳಿಗೆ ಬದ್ಧನಾಗಿ ತನ್ನ ಸೋದರರೊಂದಿಗೆ ಗುರುಕುಲದಲ್ಲಿ ಇದ್ದು ವಿದ್ಯೆ ಕಲಿತನು.
*ನವ ವಿವಾಹಿತನಾಗಿ ಅಯೋಧ್ಯೆಗೆ ಮರಳಿದ ರಾಮನು ತನ್ನ ಚಿಕ್ಕಮ್ಮನಿಗೆ ತಂದೆ ನೀಡಿದ ವಚನಕ್ಕೆ ಬದ್ಧನಾಗಿ ಅರಮನೆಯ ಭೋಗ ಭಾಗ್ಯಗಳನ್ನು ತ್ಯಜಿಸಿ ನಾರು ಮಡಿಯನ್ನುಟ್ಟು ಕಾಡಿಗೆ ತೆರಳಿ ಪರ್ಣಕುಟಿಯಲ್ಲಿ ವಾಸವಿದ್ದು ಗೆಡ್ಡೆ ಗಣಸುಗಳನ್ನು ತಿಂದು ಜೀವನ ನಡೆಸಿದನು.
*ತನ್ನ ವನವಾಸಕ್ಕೆ ಕಾರಣಳಾದ ತಾಯಿ ಕೈಕೇಯಿಯನ್ನು ದ್ವೇಷಿಸದೆ, ಆಕೆಯ ಪುತ್ರ ಭರತನು ರಾಜ್ಯಕ್ಕೆ ಮರಳುವಂತೆ ಮಾಡಿದ ಆಗ್ರಹಕ್ಕೂ ಬಗ್ಗದೆ ಕಾಡಿನಲ್ಲಿಯೇ ಉಳಿದುಕೊಂಡನು.
*ಧರ್ಮ ಕಾರ್ಯಗಳಿಗೆ ಯಾಗಾದಿಗಳಿಗೆ ಅಡ್ಡಿ ಮಾಡಿದ ರಾಕ್ಷಸರನ್ನು ಸದೆಬಡಿದನು. ತಾನು ವಿಷ್ಣುವಿನ ದಶಾವತಾರಗಳಲ್ಲಿ ಒಂದೆಂಬ ಅರಿವನ್ನು ಹೊಂದಿದ್ದರು ಕೂಡ ಎಂದು ತನ್ನ ದೈವತ್ವವನ್ನು ಮಾನವನಾದ ರಾಮನ ಮೇಲೆ ಹೇರಲಿಲ್ಲ. ಸದಾ ಧರ್ಮ ರಕ್ಷಕನಾಗಿ ಧರ್ಮ ಪಾಲಕನಾಗಿದ್ದನು.
*ಪತ್ನಿಯನ್ನು ಕಳೆದುಕೊಂಡಿದ್ದರೂ ಕೇವಲ ವಾನರ ಸೈನ್ಯದ ಸಹಾಯದಿಂದ ಯುದ್ಧ ಮಾಡಿ ಗೆದ್ದನು. ರಾಕ್ಷಸೇಂದ್ರನಾದ ರಾವಣನು ತನ್ನ ಕಡುವೈರಿಯಾಗಿದ್ದರೂ ಆತನ ಶಿವ ಭಕ್ತಿಗೆ ಮಾರುಹೋಗಿದ್ದ ರಾಮನು ಆತನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದನು.
*ಇಂದ್ರನ ಅಮರಾವತಿಯನ್ನು ನಾಚಿಸುವಂತಹ ಸ್ವರ್ಣ ಲಂಕೆಯನ್ನು ಗೆದ್ದರೂ ರಾವಣನ ಸಹೋದರ ವಿಭೇಷಣನಿಗೆ ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡಿದನು.
*ಪುರಜನರ ಮಾತುಗಳಿಗೆ ಪತ್ನಿ ಸೀತಾದೇವಿ ಬಲಿಯಾಗಬಾರದೆಂದು ಆಕೆಯ ಅಗ್ನಿ ಪ್ರವೇಶಕ್ಕೆ ಮೌನ ಸಮ್ಮತಿಯನ್ನು ನೀಡಿದನು.
*ಮರಳಿ ಅಯೋಧ್ಯೆಗೆ ಬಂದ ನಂತರ ತನ್ನ ತಾಯಿ ಕೌಸಲ್ಯೆಗೆ ನೀಡಿದಷ್ಟೇ ಗೌರವವನ್ನು ಉಳಿದಿಬ್ಬರು ತಾಯಂದಿರಾದ ಸುಮಿತ್ರ ಮತ್ತು ಕೈಕೇಯಿಯರಿಗೆ ನೀಡಿದನಲ್ಲದೆ, ಕೈಕೇಯಿಯು ತನ್ನ ಅಕೃತ್ಯಕ್ಕಾಗಿ ಸದಾ ಮರುಗದಿರುವಂತೆ ಕೇಳಿಕೊಂಡನು.
ಇತಿಹಾಸದ ಪ್ರಕಾರ ಸುಮಾರು 10000 ವರ್ಷ ರಾಮನು ರಾಜ್ಯವಾಳಿದನು ಎಂದು ಹೇಳುತ್ತಾರೆ. ಈ ಸಮಯ ಭಾರತ ದೇಶದ ಉತ್ತರ ಭಾಗದ ಅಯೋಧ್ಯೆ ರಾಮರಾಜ್ಯವಾಗಿತ್ತು. ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಎಲ್ಲವೂ ನೆಲೆಸಿತ್ತು. ಭವ ಬಂಧನದಲ್ಲಿ ಇದ್ದುಕೊಂಡೇ ಶ್ರೀರಾಮನು ಸದ್ಗುಣಗಳ ಆಗರವಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಒಳ್ಳೆಯ ಸಹೋದರನಾಗಿ ಮರ್ಯಾದಾ ಪುರುಷನಾಗಿ, ಏಕ ಪತ್ನಿ ವ್ರತಸ್ಥನಾಗಿ, ದಕ್ಷ ರಾಜನಾಗಿ ಬಾಳಿ ಬದುಕಿದ. ಅಂತೆಯೇ ಇತಿಹಾಸದಲ್ಲಿ ಆತ ಅಜರಾಮರನಾದ, ಮಾನವತೆಯಿಂದ ದೇವತ್ವದೆಡೆಗೆ ನಡೆದ. ಕೊನೆಗೆ ಪ್ರಭು ಶ್ರೀರಾಮ ದೇವರೇ ಆದನು. ಅಂತೆಯೇ ಪ್ರಭು ಶ್ರೀ ರಾಮನು ಹುಟ್ಟಿದ ಚೈತ್ರ ಮಾಸದ ನವಮಿ ತಿಥಿಯನ್ನು ರಾಮನವಮಿ ಎಂದು ದೇಶದೆಲ್ಲೆಡೆ ಸಂತಸ ಸಡಗರದಿಂದ ಆಚರಿಸುತ್ತಾರೆ. ಎಲ್ಲರೂ ಪ್ರಭು ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.
ಲೇಖಕರ ಸಂಕ್ಷಿಪ್ತ ಪರಿಚಯ:
ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ ಗದಗ್ ಜಿಲ್ಲೆಯ ಮುಂಡರಗಿಯ ವಾಸಿಯಾಗಿದ್ದು ಮನಶಾಸ್ತ್ರ ಮತ್ತು ಮಾನವ ಉಗಮ ಶಾಸ್ತ್ರಗಳಲ್ಲಿ ಪದವಿ ಪಡೆದಿದ್ದಾರೆ. ಚೈತನ್ಯ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅಬಾಕಸ್, ವೇದಗಣಿತ ಮತ್ತು ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. 18ಕ್ಕೂ ಹೆಚ್ಚು ವರ್ಷಗಳಿಂದ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳ ತರಬೇತಿ ನೀಡುತ್ತಿದ್ದಾರೆ. ಬಹುಮುಖ ಪ್ರತಿಭೆಯ ವೀಣಾ ಪಾಟೀಲ್ ಅವರು ಸಾಹಿತ್ಯ, ಸಂಗೀತ, ನೃತ್ಯ, ಯೋಗ, ವೇದಗಣಿತ ಅಬ್ಯಾಕಸ್ ಹೀಗೆ ಹತ್ತು ಹಲವು ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಬಾಕಸ್ ಸಂಸ್ಥೆಯವರು ನಡೆಸುವ ಹಲವಾರು ವಲಯ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಇವರ ಸಂಸ್ಥೆಯ ಮಕ್ಕಳು ಪ್ರಶಸ್ತಿಯನ್ನು ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ನೇತೃತ್ವದ ಚೈತನ್ಯ ಡ್ಯಾನ್ಸ್ ಅಕಾಡೆಮಿ ಜಾನಪದ ನೃತ್ಯದಲ್ಲಿ ರಾಷ್ಟ್ರಮಟ್ಟದಲ್ಲಿ 3 ಬಾರಿ ಪ್ರಶಸ್ತಿ ಗಳಿಸಿದೆ. ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿರುವ ಇವರು ಬರೆದ ಐದಾರು ನೂರಕ್ಕೂ ಹೆಚ್ಚು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಪತಿ ಹೇಮಂತ್ ಗೌಡ ಪಾಟೀಲ್ ಉದ್ಯಮಿಯಾಗಿದ್ದು, ಅಂಕಿತ್ ಮತ್ತು ನಿಶಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕಲಾಚೇತನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಸಾಧಕ ಪ್ರಶಸ್ತಿ, ಜಿಲ್ಲಾಮಟ್ಟದ ಸಾಧಕ ಪ್ರಶಸ್ತಿ, ಮಹಿಳಾ ಸಾಧಕ ಪ್ರಶಸ್ತಿ ಎಂದು ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು ತಮ್ಮ ಮೊದಲ ಲೇಖನಗಳ ಸಂಕಲನ 'ವೀಣಾಂತರಂಗ'ವನ್ನು, ನಾಡೋಜ ಪ್ರಶಸ್ತಿ ಪುರಸ್ಕೃತ ಶ್ರೀಮ.ನಿ. ಪ್ರ. ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳ ಒತ್ತಾಸೆಯ ಮೇರೆಗೆ ಕಳೆದ ವರ್ಷ ಲೋಕಾರ್ಪಣೆಗೊಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ