ಶ್ರೀರಾಮ ಕಥಾ ಲೇಖನ ಅಭಿಯಾನ-89: ಸೀತಾ ಅಗ್ನಿಪರೀಕ್ಷೆ- ರಾಮ-ಸೀತೆಯರ ಮನದ ತುಮುಲಗಳು

Upayuktha
0




- ಶ್ರೀಮತಿ ಡಾ. ಅರುಣ ಕೆ.ಆರ್.


ಶ್ರೀರಾಮನು ಸೀತೆಯನ್ನು ಆಗ್ನಿಪರೀಕ್ಷೆಗೊಳಪಡಿಸಿದ ಬಗ್ಗೆ ಇಂದಿಗೂ ಹಲವರಲ್ಲಿ ವಿವಿಧ ರೀತಿಯ ಭಾವನೆಗಳಿವೆ. ಅದನ್ನು `ಕಾಲಾಯ ತಸ್ಮೈ ನಮಃ' ಎಂದು ಕಾಲದ ವಿವೇಚನೆಗೇ ಬಿಡೋಣವೇ? ಅಗ್ನಿದಿವ್ಯದಲ್ಲಿ ಮಿಂದೆದ್ದ ಸೀತೆ ಪಂಚಮಹಾಪತಿವ್ರತೆಯರಲ್ಲಿ ಒಬ್ಬಳೆಂದು ಇಂದಿಗೂ ಸ್ತೋತ್ರಾರ್ಹಳಾಗಿದ್ದಾಳೆ. ಆದರೆ ಆ ಸಂದರ್ಭದಲ್ಲಿ ರಾಮ ಮತ್ತು ಸೀತೆಯರ ಮನದಲ್ಲಾದ ತುಮುಲಗಳು ಹೇಗಿದ್ದಿರಬಹುದು? ಅದನ್ನು ಕುರಿತು ಇಲ್ಲೊಂದು ಚಿಕ್ಕ ಪ್ರಯತ್ನ.


ಸೀತಾ (ಅಶೋಕವನದಲ್ಲಿ) : ಓಹ್ ! ತ್ರಿಜಟೆ ಹೇಳಿದ ಆ ಸುದ್ದಿ. . . ಯುದ್ಧಭೂಮಿಯಲ್ಲಿ ರಾವಣನು ಹತನಾಗಿ ನನ್ನ ಶ್ರೀರಾಮನಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ! ಎಂತಹ ಸಂಸತಸದ ಸುದ್ದಿ ತ್ರಿಜಟೆಯಿಂದ? ಹೌದು, ಈ ತ್ರಿಜಟೆಯಿಲ್ಲದಿದ್ದರೆ ನಾನೇನಾಗಿರುತ್ತಿದ್ದೆನೋ ? ಈ ಕಷ್ಟ ಕಾಲದಲ್ಲಿ ನನ್ನ ಮಾತೃ ಸಮಾನಳಾಗೇ ಬಂದಿದ್ದಾಳೆ. ಕೆಟ್ಟ ರಾಕ್ಷಸರೇ ತುಂಬಿರುವ ಇಲ್ಲಿ ಒಳ್ಳೆಯವರೂ ಇದ್ದಾರೆಂಬುದಕ್ಕೆ ಈ ತ್ರಿಜಟೆ, ವಿಭೀಷಣ, ಸರಮೆಯರೇ ಸಾಕ್ಷಿ. ಅಂತೂ ನನ್ನ ರಾಮ ವಿಜಯ ಸಾಧಿಸಿದ. ಆತನನ್ನು ಯಾವಾಗ ಕಾಣುವೆನೋ? ಈ ನನ್ನ ಕಣ್ಗಳಂತೂ ಕಾತರದಿಂದ ಕಾಯುತ್ತಿವೆ. ನನ್ನ ದೇಹದಲ್ಲೇನೋ ಉಲ್ಲಾಸ! ಮನದಲ್ಲಂತೂ ಸಂತೋಷ, ಜೊತೆಗೆ ಏಕೋ ಆತಂಕ ಕಾಡುತ್ತಿದೆಯಲ್ಲ? ಛೇ, ಛೇ, ಆತಂಕವೇಕೆ? ನನ್ನ ರಾಮನು ಖಂಡಿತವಾಗಿಯೂ ನನ್ನನ್ನು ಸಂತೋಷದಿಂದ ಬರಮಾಡುತ್ತಾನೆ. ನನ್ನನ್ನು ನೋಡಿ ಆತನ ಕಂಗಳಲ್ಲಿ ಆನಂದ ಕಾಣುವುದೇ? ಹಾಂ! ಆತನ ಕಂಗಳು. . . ಮರೆಯುವಂತೆಯೇ ಇಲ್ಲ. ಆ ದಿನ, ನನಗದು ಸುದಿನ. ರಾಮಚಂದ್ರನು ಶಿವಧನುಸ್ಸನ್ನು ಲೀಲಾಜಾಲವಾಗಿ ಎತ್ತಿ ಹೆದೆಯೇರಿಸಿದಾಗ ಅದು ಮುರಿದೇಬಿದ್ದದ್ದು! ಆತನ ಕೊರಳಿಗೆ ಹೂಮಾಲೆ ಹಾಕುವಾಗಲಲ್ಲವೇ ನಾನು ಮೆಲ್ಲಗೆ ಆ ಕಂಗಳನ್ನು ದೃಷ್ಟಿಸಿದ್ದು? ಆ ಸುಂದರ ಕಪ್ಪು ಕಣ್ಣುಗಳಲ್ಲಿ ಹೊರಸೂಸಿದ ಪ್ರೀತಿ ಕ್ಷಣಕಾಲ ನನ್ನನ್ನು ಲಜ್ಜೆಗೀಡು ಮಾಡಿತಲ್ಲ! ಏನಾದರೂ, ನನ್ನಂತೆಯೇ, ರಾಮನೂ ಕಾತರಿಸುತ್ತಿರಬಹುದು. ಈ ಕ್ಷಣದವರೆಗೂ ರಾಮನನ್ನೇ ಧ್ಯಾನಿಸುತ್ತಿರುವ ನನಗಂತೂ ರಾಮನ ವಿಜಯವಾರ್ತೆ ಕೇಳಿದಾಗಿನಿಂದ ಯಾವಾಗ ರಾಮನನ್ನು ಸೇರುವೆನೋ ಎಂದೆನಿಸಿಬಿಟ್ಟಿದೆ. ಅಬ್ಬಾ! ಏಕೋ ಕ್ಷಣಕ್ಷಣವೂ ಕಳೆಯುವುದು ದುಸ್ತರವಾಗುತ್ತಿದೆ. ಏಕಿನ್ನೂ ಹನುಮಂತ ಬಂದಿಲ್ಲ? ಶ್ರೀರಾಮನು ವಿಜಯ ಸಾಧಿಸಿದೊಡನೆ ಕರೆದ್ಯೊಯಲು ಬರುವೆನೆಂದಿದ್ದ. ಏಕಿಷ್ಟು ತಡಮಾಡುತ್ತಿದ್ದಾನೆ? ನನಗೇನಾಗುತ್ತಿದೆ? ಹನುಮಂತ ಮಾತಿಗೆ ತಪ್ಪದೇ ಬರುತ್ತಾನೆ. ಆತನಿಂದಲೇ ಅಲ್ಲವೇ, ನಾನು ಲಂಕೆಯ ಈ ವನದಲ್ಲಿ ಬಂಧಿತಳಾಗಿರುವ ವಿಷಯ ಶ್ರೀರಾಮನಿಗೂ, ರಾಮನ ವಿಷಯ ನನಗೂ ತಿಳಿದದ್ದು? ಹನುಮಂತ ನನ್ನನ್ನು ಭೇಟಿಯಾದ ಆ ದಿನ . . . ಎಷ್ಟೊಂದು ಹೆದರಿದ್ದೆ ! ಯಾವ ಮಾಯಾವಿ ರಾಕ್ಷಸನೋ, ರಾವಣನ ಪರವಾಗಿ ನನ್ನ ಮನಸೆಳೆಯಲು ಬಂದಿದ್ದಾನೆಂದೇ ಭಾವಿಸಿದ್ದೆ. ರಾಮನ ಮುದ್ರಿಕೆ ನೋಡಿದ ಮೇಲೆಯೇ ನನಗೆ ಖಚಿತವಾಗಿದ್ದು ಇವನು ರಾಮದೂತನೆಂದು. ಆ ದಿನ ಅವನು ಅಶೋಕವನದಲ್ಲಿ ರಾಕ್ಷಸರನ್ನು ಗೋಳಾಡಿಸಿದ್ದು! ನಿಜಕ್ಕೂ ಮಂಗಾಟವೇ ಅದು (ಸೀತೆಯ ತುಟಿಗಳಲ್ಲಿ ಕಿರುನಗು). ಕೊನೆಗೆ ಇಂದ್ರಜಿತುವಿನಿಂದ ಬಂಧಿಸಲ್ಪಟ್ಟು, ರಾವಣನೆದುರಿಗೆ ಅವನಿಗಿಂತ ಎತ್ತರದಲ್ಲಿ ಬಾಲವನ್ನೇ ಮಹಾ ಆಸನವಾಗಿ ಮಾಡಿ ಕುಳಿತನಂತಲ್ಲ ಈ ಆಂಜನೇಯ! ಈತನ ಬುದ್ಧಿಮಾತುಗಳೆಲ್ಲಾ ತಾಗಲೇ ಇಲ್ಲ ಆ ದುಷ್ಟನಿಗೆ. ಕೊನೆಗೆ ರಾಕ್ಷಸರಿಂದ ಬಾಲಕ್ಕೆ ಬೆಂಕಿ ಬಿದ್ದಾಗ ಇಡೀ ಲಂಕೆಯೇ ದಹಿಸಿತಲ್ಲವೇ ಈ ಹನುಮಂತನಿಂದ? ಯುದ್ಧದಲ್ಲೂ ರಾಮ-ಲಕ್ಷ್ಮಣರಿಗೆ ಅನೇಕ ವಿಧದಲ್ಲಿ ಸಹಾಯ ಮಾಡಿದನಂತೆ ಈ ಮಾರುತಿ. ಛೇ, ಯಾಕಿನ್ನೂ ಬಂದಿಲ್ಲ?


ಅದೋ, ಬಂದರು ಹನುಮಂತ, ವಿಭೀಷಣ ಹಾಗೂ ಸರಮೆ. ವಿಭೀಷಣನಿಗೂ, ಆತನ ಪತ್ನಿ ಸರಮೆಗೂ ನನ್ನನ್ನು ಕಂಡರೆ ಅದೆಷ್ಟು ಗೌರವ? ಹನುಮಂತ, ವಿಭೀಷಣರು ರಾಮನು ಜಯಶಾಲಿಯಾದುದನ್ನು ಹೇಳುತ್ತಿದ್ದರೆ, ನನ್ನ ತಲೆಯೊಳಗದು ಹೋಗುತ್ತಲೇ ಇಲ್ಲ. ಸದ್ಯ ನನ್ನ ಲಕ್ಷö್ಯವೆಲ್ಲಾ ಒಂದೇ - ಶ್ರೀರಾಮನನ್ನು ಕಾಣುವುದು ಹಾಗೂ ಆತನ ಕ್ಷಮೆ ಕೇಳುವುದು. 


(ದಾರಿಯಲ್ಲಿ) ಹೌದು, ಮೊದಲು ನಾನು ರಾಮನಲ್ಲಿ ಕ್ಷಮೆ ಕೇಳಬೇಕು. ಏಕೆಂದರೆ ನಾನೇ ಅಲ್ಲವೇ ಆ `ಮಾಯಾಮೃಗ' ಬೇಕೆಂದು ಹಠ ಮಾಡಿದ್ದು? ಹೌದು, ಆ ದಿನ ನನ್ನ ಬುದ್ಧಿಯೆಲ್ಲಿ ಹೋಗಿತ್ತು? ಅದು ಯಾವುದೋ ರಾಕ್ಷಸನ ಮಾಯೆಯೆಂದು ರಾಮನು ತಿಳಿಹೇಳಿದರೂ ನನ್ನ ಬುದ್ಧಿಗೆ, ವಿವೇಕಕ್ಕೆ ಮಂಕುಪೊರೆ ಕವಿದಿತ್ತು. ಆ ಪೊರೆಯಿಂದಾಚೆ ಬರಲು ಪ್ರಯತ್ನಿಸಲೇ ಇಲ್ಲ ನಾನು. ಕೊನೆಗೆ ಲಕ್ಷ್ಮಣರೇಖೆಯನ್ನೂ ದಾಟಿದೆ ನಾನು, ಮುಂದಾಗುವ ಅನಾಹುತದ ಅರಿವೇ ಇಲ್ಲದೆ. ಈ ಜಗತ್ತಿನ ಸ್ತ್ರೀಯರೆಲ್ಲಾ ನನ್ನನ್ನು ನೋಡಿ ತಿಳಿಯಬೇಕು, ಬುದ್ಧಿ, ವಿವೇಕವಿಲ್ಲದೇ ಯಾವುದಕ್ಕೂ ಅತಿಯಾಸೆ ಪಡಬಾರದೆಂದು. ನನ್ನನ್ನು ಕದ್ದು ತಂದಿದ್ದಕ್ಕೆ ರಾವಣನೇನೋ ಹತನಾದ. ಆದರೆ ಅದಕ್ಕಾಗಿ ಅಣ್ಣ ತಮ್ಮಂದಿರು ಪಡಬಾರದ ಪಾಡುಪಟ್ಟರಲ್ಲ? ಯುದ್ಧದ ಮೂಲಬೇರು ಶೂರ್ಪನಖಿಯಾದರೂ, ಈ ಮಾಯಾಜಿಂಕೆಯ ಪ್ರಸಂಗದಿಂದಾಗಿ ನಾನೇ ತಪ್ಪು ಮಾಡಿದಂತಾಗಿದೆ. ಮಿಂಚಿ ಹೋದುದಕ್ಕೆ ಚಿಂತಿಸಿ ಫಲವಿಲ್ಲವಾದರೂ, ಪ್ರಾಯಶ್ಚಿತ್ತಕ್ಕೊಂದು ದಾರಿ ಇರುವುದಲ್ಲವೇ? ಹೇ ರಾಮ, ನೀನು ಖಂಡಿತವಾಗಿಯೂ ನನ್ನನ್ನು ಕ್ಷಮಿಸುತ್ತೀಯಲ್ಲವೇ?

- - -

ಈ ಕಡೆ ಶಿಬಿರದಲ್ಲಿ ಎಲ್ಲರೂ ಕಾತರದಿಂದಿದ್ದಾರೆ. ಎಲ್ಲರಿಗೂ ಸೀತೆಯನ್ನು ಕಾಣುವ ತವಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.

ರಾಮ : ಹೇಗಿರಬಹುದು ನನ್ನ ಸೀತೆ? ಹನುಮಂತ ಆ ದಿನ ಹೇಳಿದ್ದ, ನನ್ನದೇ ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾಳೆಂದು. ಆಕೆಯ ಸ್ಥಿತಿಗೆ ನಾನೇ ಕಾರಣ. ಆ ದಿನ `ಮಾಯಾಮೃಗ' ಬೇಕೆಂದು ಆಕೆ ಹಠ ಮಾಡಿದಾಗ, ಆಕೆಯ ಮನ ನೋಯಿಸಲು ಇಷ್ಟವಾಗದೇ ಹೊರಟೆ. ನನ್ನ ಮನದಲ್ಲಿ ಸಂಶಯವಿದ್ದೇ ಇತ್ತು. ಇದು ಮಾಯಾವಿ ರಾಕ್ಷಸನ ರೂಪವೆಂದು. ಸೀತೆಗೆ ಅದನ್ನು ಹೇಳಿದರೂ ಆಕೆ ಅದನ್ನು ಅರಿಯಲಾಗದಷ್ಟು ಮುಗ್ಧೆ. ಪ್ರತ್ಯಕ್ಷ ಕಂಡರೇ ಆಕೆ ಅದನ್ನು ನಂಬಬಹುದೆಂಬ ಭರವಸೆಯಿಂದಲ್ಲವೇ ನಾನು ಆ ಮೃಗದ ಬೆನ್ನಟ್ಟಿದ್ದು? ಆದರೆ ಆ ದುಷ್ಟ ಮಾರೀಚ, ಸಾಯುವಾಗ `ಓ ಸೀತಾ, ಓ ಲಕ್ಷ್ಮಣಾ' ಎಂದು ಕೂಗಿ ನಮ್ಮನ್ನು ಮೋಸಗೊಳಿಸಿಬಿಟ್ಟ. ಲಕ್ಷ್ಮಣ ನನ್ನ ಸಹಾಯಕ್ಕೆ ಬಂದಾಗ, ರಾವಣನ ಕಪಟತನವನ್ನು ಅರಿಯದೇ ಮೋಸಹೋದಳು ಮುಗ್ಧೆ ಸೀತೆ. ನಾನಂತೂ ಪುರಪ್ರವೇಶ ಮಾಡುವ ಹಾಗಿಲ್ಲ. ಇಲ್ಲವಾದರೆ ಶರವೇಗದಲ್ಲಿ ಓಡಿ ವೈದೇಹಿಯನ್ನು ಕಣ್ತುಂಬಾ ನೋಡಿ ಧನ್ಯನಾಗುತ್ತಿದ್ದೆ. ಆಕೆ ಅರೆಗಳಿಗೆ ಕಣ್ಮುಂದೆ ಇರದಿದ್ದರೆ ತಪಿಸುತ್ತಿದ್ದ ನಾನು, ಇಷ್ಟು ದೀರ್ಘಕಾಲ ಆಕೆಯನ್ನು ಕಾಣದೇ ಇದ್ದುದು ಎಷ್ಟು ಸಂಕಟವಾಗಿದೆಯೆಂಬುದು ಅನುಭವಿಸಿದ ನನಗೊಬ್ಬನಿಗೇ ಗೊತ್ತು.


ಪಾಪ, ಲಕ್ಷ್ಮಣನಂತೂ ಎಷ್ಟು ಸೊರಗಿದ್ದಾನೆ! ಊರ್ಮಿಳೆಯನ್ನು ಬಿಟ್ಟು ನನ್ನ ಹಿಂದೆ ನೆರಳಿನಂತೆ ಬಂದುಬಿಟ್ಟನಲ್ಲ! ಅತ್ತಿಗೆ ಜಾನಕಿಯನ್ನು ಕುರಿತು ಅವನಿಗೆ ಅದೆಷ್ಟು ಗೌರವ! ಆಕೆಯೆದುರು ತಲೆಯೆತ್ತಿ ನಿಂತುದೇ ಇಲ್ಲ. ಅಂದು ಸುಗ್ರೀವ ಸೀತೆಯ ಆಭರಣಗಳನ್ನು ತೋರಿಸಿದಾಗ ಈತನಂತೂ ಆಕೆಯ ಕಾಲಂದುಗೆಯನ್ನು ಮಾತ್ರ ಗುರುತಿಸಿದನಲ್ಲ! ರಾವಣ ಸೀತೆಯನ್ನು ಕದ್ದೊಯ್ಯೊಲು ತಾನೇ ಕಾರಣನೆಂದು ಆ ದಿನ ಚಿಕ್ಕ ಮಗುವಿನಂತೆ ದುಃಖಿಸಿದನಲ್ಲ. ಈಗಂತೂ ಆತ ಕಾಲು ಸುಟ್ಟ ಬೆಕ್ಕಿನಂತೆ ಆಚೀಚೆ ತಿರುಗುತ್ತಿದ್ದಾನೆ, ಸೀತೆಯನ್ನು ಯಾವಾಗ ಕಂಡು, ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುವೆನೋ ಎಂದು.


ಹನುಮಂತ ಸೀತೆಯನ್ನು ಕರೆತರಲು ಹೋಗಿ ಎಷ್ಟು ಹೊತ್ತಾಯಿತು? ಇನ್ನೂ ಬಂದಿಲ್ಲ. ಇನ್ನೇನು ಬರಬಹುದು ಆದರೆ. ಆದರೆ . . . ನನ್ನ ಮನದಲ್ಲೊಂದು ಕೀಟ ಕೊರೆಯುತ್ತಿದೆ. ಅಕಸ್ಮಾತ್ ಪುರಜನರು ಸೀತೆಯನ್ನು ಶಂಕಿಸಿದರೆ? ರಾವಣ ಮೊದಲೇ ರಾಕ್ಷಸ ಬುದ್ಧಿಯವನು. ಅಂತಹವನು ಕದ್ದೊಯ್ದ ಸೀತೆ ನಿಜವಾಗಿಯೂ ನಮ್ಮ ಹಿಂದಿನ ಸೀತೆಯೇ ಎಂದು ಅನುಮಾನಿಸಿ, ಅವಮಾನಿಸಿ ಮಾತನಾಡಿದರೆ? ಆ ಆಘಾತವನ್ನು ಸೀತೆಯೇನು, ನಾನೂ ತಡೆಯಲಾರೆ. ಸೀತೆಯ ಮನಸ್ಸಿಗೆ ಕಿಂಚಿತ್ತು ನೋವಾದರೂ ನಾನು ಸಹಿಸಲಾರೆ. ಹಾಗೇ ಮಕ್ಕಳಂತಿರುವ ಪ್ರಜೆಗಳ ಶಂಕಿತ ನೋಟದ ಮಧ್ಯೆ ರಾಜ ರಾಣಿಯರಾಗಿ ನಾವಿರುವುದು ಸಾಧ್ಯವೇ? ರಾಜನಾದವನು ಪ್ರಜೆಗಳಿಗೆ ಮಾದರಿಯಾಗಿರಬೇಕಲ್ಲವೇ? ಇದಕ್ಕೊಂದು ಪರಿಹಾರ ಮಾರ್ಗ ಕಂಡುಹಿಡಿಯಲೇಬೇಕು. ನನ್ನ ಸೀತೆ ಮೊದಲಿನ ಸೀತೆಯೇ ಎಂದು ಎಲ್ಲರಿಗೂ ಮನದಟ್ಟಾಗಬೇಕು. ಹೌದು, ಈಗಿರುವುದು ಅದೊಂದೇ ಮಾರ್ಗ....

- - -

ಸೀತೆಯು ಹನುಮಂತ, ವಿಭೀಷಣ, ಸರಮೆಯೊಡನೆ ಬಂದೊಡನೆ ವಾನರರ ಗುಂಪಿನಲ್ಲಿ ಉತ್ಸಾಹದ ಕೋಲಾಹಲ. ಎಲ್ಲರಿಗೂ ಸೀತೆ ಹೇಗಿದ್ದಾಳೆಂದು ನೋಡುವ ತವಕ. ಎಲ್ಲರೂ ಜಿಗಿಜಿಗಿದು ಕುಣಿದಾಡುತ್ತಿದ್ದಾರೆ. ಲಕ್ಷ್ಮಣನಂತೂ ಸೀತೆಯನ್ನು ಕಂಡೊಡನೆ ಓಡೋಡಿ ಆಕೆಯ ಕಾಲ್ಗಳಿಗೆ ನಮಿಸಿ, ಕಣ್ಣೀರು ಹರಿಸಿದ. ತಾನು ಸೀತೆಯನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಅಪರಾಧಕ್ಕಾಗಿ ಕ್ಷಮೆ ಯಾಚಿಸಿದ. ಸೀತೆಗೆ ಆತನನ್ನು ಸಮಾಧಾನ ಪಡಿಸಲು ಸಾಕು ಸಾಕಾಯಿತು. ಕೊನೆಗೆ ಆ ಗಳಿಗೆ. . . ರಾಮ ಸೀತೆಯರ ಮಿಲನದ ಘಳಿಗೆ. . . ಇಬ್ಬರ ಕಣ್ಣಲ್ಲೂ ಆನಂದಬಾಷ್ಪ. . . ಸೀತೆ ರಾಮನ ಕಾಲಿಗೆ ನಮಸ್ಕರಿಸಿ, ಆತನ ಕ್ಷಮೆ ಯಾಚಿಸಿದಳು. ತನ್ನಿಂದಾದ ಅನಾಹುತ, ಯುದ್ಧಗಳಿಂದ ರಾಮ-ಲಕ್ಷ್ಮಣ ಹಾಗೂ ಇತರರು ಪಟ್ಟ ಕಷ್ಟಕ್ಕಾಗಿ ಶ್ರೀರಾಮ ಹಾಗೂ ಇತರರ ಕ್ಷಮೆ ಕೋರಿದಳು. ರಾಮನು ಆಕೆಯನ್ನು ಹಿಡಿದೆತ್ತಿ, ಆಕೆಯನ್ನು ಸಮಾಧಾನಿಸಿದ. ನಂತರ ಸುಗ್ರೀವಾದಿ ಗಣ್ಯರು ರಾಮ-ಸೀತೆಯರ ಪುನರ್‌ಮಿಲನದ ಸಂತೋಷಕ್ಕಾಗಿ ಉತ್ಸವ ಮಾಡುವೆವೆಂದು ಸೂಚಿಸಿದರು. ವಾನರರಿಗೆಲ್ಲಾ ಆನಂದವೋ ಆನಂದ. ಆದರೆ ವಿಜಯೋತ್ಸವದ ಸುದ್ದಿ ಕೇಳಿದೊಡನೆ ರಾಮನು ಹೇಳಿದ್ದೇನು? 


ಸೀತಾ : ಇದೇನಿದು ?! ನನ್ನ ರಾಮ ಹೇಳುತ್ತಿರುವ ಮಾತೇ ಇದು? ಈಗ. . ., ಇದೀಗ ತಾನೇ ನನ್ನನ್ನು ಸಂತೈಸಿದ ರಾಮಭದ್ರನೇನು ಇವನು? ಇದು ಬೇರೆ ಯಾರಾದರೂ ಹೇಳಿದ್ದೇ? ಇಲ್ಲ. . . ಆತನೇ. . . ನನ್ನ ಪ್ರೀತಿಯ ರಾಮಚಂದ್ರನೇ ಈ ಮಾತನ್ನಾಡಿದ್ದು. ಏನೆಂದು ಹೇಳಿದ್ದು ನನ್ನ ರಾಮನು? ಇಷ್ಟು ದಿನ ರಾವಣನ ಅಶೋಕವನದಲ್ಲಿದ್ದ ಸೀತೆ, ಅಂದರೆ, ನಾನು ಪವಿತ್ರಳಾಗಿರಲು ಸಾಧ್ಯವೇ? ಇದರ ಪರೀಕ್ಷೆಯಾಗಬೇಕು. ಇಲ್ಲವೇ ನಾವಿಬ್ಬರೂ ಬೇರೆಯಾಗಬೇಕು. ಎಂತಹ ಮಾತುಗಳನ್ನಾಡಿದ ನನ್ನ ಪ್ರೀತಿಯ ಪತಿ?! ನನ್ನ ಹೊಟ್ಟೆಯಲ್ಲಿ ತಾಳಲಾರದ ಸಂಕಟವಾಗುತ್ತಿದೆ. ತಲೆ ತಿರುಗುತ್ತಿದೆ. ಭೂತಾಯಿಯಾದರೂ ಬಂದು ನನ್ನನ್ನು ಕರೆದುಕೊಂಡು ಹೋಗಬಾರದೇ? ಇಷ್ಟೆಲ್ಲಾ ಮಂದಿಯ ಮುಂದೆ, ಅದೂ ನನ್ನ ಬಗ್ಗೆ ಗೌರವ ಇಟ್ಟುಕೊಂಡವರ ಮುಂದೆ ಹೀಗೆ ಮಾತನಾಡಬಹುದೇ ನನ್ನ ಸ್ವಾಮಿ? ಹಿಂದುಮುಂದು ಆಲೋಚಿಸದೆ, ನನ್ನ ಮನಸ್ಥಿತಿಯ ಅರಿವಿಲ್ಲದಂತೆ ಅಷ್ಟು ಕಠಿಣವಾಗಿ ಹೇಗೆ ಹೇಳಬಲ್ಲ ನನ್ನ ಈ ರಾಮ? ಇಲ್ಲ, ಇದು ನಾನೆಣಿಸಿದ ಮರ್ಯಾದಾ ಪುರುಷೋತ್ತಮನ ಧ್ವನಿಯಲ್ಲ. ಇದೆಲ್ಲಾದರೂ ಪುನಃ ಮಾಯಾವಿ ರಾಕ್ಷಸರ ಮಾಯೆಯೋ ಅಥವಾ ನನ್ನ ಕನಸೋ? (ಸೀತೆ ಅಲ್ಲಿಯೇ ಇದ್ದ ಮರವನ್ನಾಧರಿಸಿ ನಿಂತು ರಾಮನೆಡೆಗೆ ಆರ್ತಳಾಗಿ ನೋಡುತ್ತಾಳೆ).


ಆದರೆ. . . ಆದರೆ. . . ಆತನ ಕಣ್ಣುಗಳಲ್ಲಿ ಏನೋ ನಿಶ್ಚಲತೆ, ನಿರ್ಧಾರ ಕಂಡುಬರುತ್ತಿದೆ. ಆಕಾರಣವಾಗಿ ನನ್ನ ಮೇಲೆ ಈ ಆರೋಪವನ್ನು ಖಂಡಿತಾ ಹೊರಿಸಲಾರ. ಸರಿ, ನಾನೂ ಈಗ ಒಂದು ನಿರ್ಧಾರಕ್ಕೆ ಬರಲೇಬೇಕಾಗಿದೆ. ಏಕೆಂದರೆ ಲಕ್ಷ್ಮಣ, ಹನುಮಂತ, ಸುಗ್ರೀವ ಇವರಾರ ಮಾತುಗಳೂ ಶ್ರೀರಾಮನ ಕಿವಿಗೆ ತಾಗುತ್ತಲೇ ಇಲ್ಲವಲ್ಲ?! ಜಗತ್ತಿನ ಯಾವ ಪವಿತ್ರ ಹೆಣ್ಣಿಗೂ ಇಂತಹದೊಂದು ಸ್ಥಿತಿ ಎದುರಾಗದಿರಲಿ. ರಾಮನಲ್ಲೇ ನಂಬಿಕೆಯಿಟ್ಟು ರಾಮಧ್ಯಾನದಲ್ಲೇ ಕಾಲ ಕಳೆದ ನನ್ನ ಪಾವಿತ್ರ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬ ಸತ್ಯ ಎಲ್ಲರಿಗೂ ಮನದಟ್ಟಾಗಬೇಕು. ಈಗ ನಾನು ಅಸಹಾಯಕಳಾದರೂ, ನನ್ನ ಪವಿತ್ರ ಸ್ತ್ರೀ ಶಕ್ತಿ ನನ್ನನ್ನು ಕಾಪಾಡುತ್ತದೆ ಎಂಬ ಭರವಸೆ ನನಗಿದೆ, ಹಾಂ, ನಾನೀಗ ಇಡುತ್ತಿರುವ ಹೆಜ್ಜೆಯೇ ಸರಿಯಾದುದು. ಲಕ್ಷ್ಮಣನಿಗೆ ನಾನು ಅಗ್ನಿಪ್ರವೇಶ ಮಾಡಲು ಸಿದ್ಧಮಾಡೆಂದು ಹೇಳುತ್ತೇನೆ. ಅಗ್ನಿ ದೇವನೇ, ನನ್ನ ಪಾವಿತ್ರ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲವೆಂದೂ, ನನ್ನ ತನು, ಮನ ಕೇವಲ ಶ್ರೀರಾಮನಿಗೇ ಮೀಸಲು ಎಂದು ನಿರೂಪಿಸಲು ನನಗೆ ಸಹಕರಿಸು.

- - -

ಸೀತೆಯ ನುಡಿಗಳನ್ನು ಕೇಳಿದ ಲಕ್ಷ್ಮಣನಿಗೆ ಕಾಲಿನ ಕೆಳಗೆ ನೆಲವು ಕುಸಿದ ಅನುಭವ. ಅಲ್ಲಿದ್ದವರೆಲ್ಲಾ ದಿಗ್ಭ್ರಾಂತರಾದರು. ಲಕ್ಷ್ಮಣನು ಸೀತೆಯ ಅಗ್ನಿಪ್ರವೇಶಕ್ಕೆ ಸಿದ್ಧತೆ ಮಾಡಿದ. ಸೀತೆಯು ರಾಮನಿಗೆ ನಮಿಸಿ ಚಿತೆಯೇರಿದಳು. ಆದರೆ ಆಶ್ಚರ್ಯ! ಆಕೆಯ ಶರೀರದ ಯಾವ ಭಾಗವೂ ಸುಡದಂತೆ ಅಗ್ನಿದೇವನು ತಣ್ಣಗಾಗಿ ಆಕೆಯನ್ನು ರಾಮನಿಗೆ ಒಪ್ಪಿಸಿ, ಸೀತೆಯ ಪಾವಿತ್ರ್ಯವನ್ನು ಕೊಂಡಾಡಿದನು. ರಾಮನ ಕಂಗಳಲ್ಲೂ ಆನಂದಬಾಷ್ಪ! ತನ್ನ ಕಾಲಿಗೆ ನಮಿಸಿದ ಸೀತೆಯನ್ನು ಪ್ರೀತಿಯಿಂದ ಹಿಡಿದೆತ್ತಿದನು ಜಾನಕೀರಾಮನು. ಅಲ್ಲಿದ್ದವರಿಂದ ಸೀತಾ-ರಾಮರ ಜಯಕಾರ. ನಂತರ ಎಲ್ಲರೂ ಪುಷ್ಪಕವಿಮಾನವನ್ನೇರಿ ಭವ್ಯಭವಿಷ್ಯವನ್ನು ನಿರ್ಮಿಸಲು ಅಯೋಧ್ಯೆಯತ್ತ ತೆರಳಿದರು.




ವಿಳಾಸ :

ಶ್ರೀಮತಿ ಡಾ. ಅರುಣ ಕೆ.ಆರ್

ನಂ.1972, 'ನಕ್ಷತ್ರ'

20-ಡಿ ಅಡ್ಡರಸ್ತೆ, ಸಿ-ಬ್ಲಾಕ್,

ಸಹಕಾರನಗರ, ಬೆಂಗಳೂರು-92.

ಫೋನ್ ನಂ. : 9480223229

e-mail ID: soumya.arunk1991@gmail.com

 

ಲೇಖಕಿಯ ಕಿರುಪರಿಚಯ :

ಡಾ. ಅರುಣ ಕೆ.ಆರ್. ಇವರು ಮೂಲತಃ ಶೃಂಗೇರಿಯವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕನ್ನಡ ಎಂ.ಎ. ಪದವಿಯ ನಂತರ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ (NIPSAR) ವತಿಯಿಂದ ಪ್ರಾಕೃತ ಡಿಪ್ಲೊಮ (ಸ್ವರ್ಣ ಪದಕ) ಪಡೆದಿದ್ದಾರೆ. ಜೈನಶಾಸ್ತ್ರದಲ್ಲಿ ಕುತೂಹಲ, ಆಸಕ್ತಿ ಬೆಳೆಸಿಕೊಂಡ ಇವರು ಕನ್ನಡದ ಆದಿಕವಿ ಪಂಪ ಮತ್ತು ಅಪಭ್ರಂಶ ಭಾಷಾ ಕವಿ ಪುಷ್ಪದಂತ-ವಿರಚಿತ `ಆದಿಪುರಾಣಂ' ಕಾವ್ಯಗಳ ತೌಲನಿಕ ಸಂಶೋಧನಾ ಅಧ್ಯಯನದ ಮಹಾಪ್ರಬಂಧಕ್ಕಾಗಿ ಜೈನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿರುವುದಲ್ಲದೆ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರ ಸಂಶೋಧನಾ ಪ್ರಬಂಧಗಳು ಕೂಡ ಪ್ರಕಟವಾಗಿವೆ. ಪುಣೆಯ ಜೈನ್ ಮ್ಯೂಸಿಯಮ್ ಹಾಗೂ ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯ ಕುರಿತ ಪುಸ್ತಕ ಯೋಜನೆಗಳಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಲೇಖನಗಳು, ಕವನಗಳು ಕನ್ನಡ ನಿಯತಕಾಲಿಕೆಗಳಲ್ಲಿ, ಸಂಕಲನಗಳಲ್ಲಿ ಪ್ರಕಟವಾಗಿವೆ. ಸುಮ್ಮಾನಿ, ನೆನಪಿನಂಗಳ, ನನ್ನೊಳಗಿನ ಮಲೆನಾಡು ಪುಸ್ತಕಗಳ ಪ್ರಧಾನ ಸಂಪಾದಕಿಯಾಗಿದ್ದು, `ಸುಕುಮಾರ ಚರಿತಂ' ಎಂಬ ಕೃತಿ ಪ್ರಕಟವಾಗಿದೆ. ಪ್ರಸ್ತುತ ಆನ್‌ಲೈನ್‌ನಲ್ಲಿ ಭಗವದ್ಗೀತೆಯನ್ನು ಕಲಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top