ಶ್ರೀರಾಮ ಕಥಾ ಲೇಖನ ಅಭಿಯಾನ-101: ರಾಮಾಯಣಕ್ಕೆ ಕಾರಣರಾದ ಇಬ್ಬರು ಸ್ತ್ರೀಯರು

Upayuktha
0

ಕುವೆಂಪು ಅವರ 'ಶ್ರೀರಾಮಾಯಣ ದರ್ಶನಂ'ನ ಮಂಥರೆ ಮತ್ತು ಶೂರ್ಪನಖಿ



ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ



-ಶಶಿಕಲಾ ನಾಗರಾಜನ್


ರತಖಂಡದ ಸಾಹಿತ್ಯ ಹಾಗೂ ಧಾರ್ಮಿಕ ಮೇರು ಪರ್ವತದ ಎರಡು ಮಹೋನ್ನತ ಶಿಖರಗಳು ರಾಮಾಯಣ ಮತ್ತು ಮಹಾಭಾರತ. ಈ ಎರಡು ಕೃತಿಗಳು ವಿಶ್ವಸಾಹಿತ್ಯ ಸೌಧದ ಸುಭದ್ರ ಬುನಾದಿಗಳು. ಸತ್ಯಸ್ಯ ಸತ್ಯವಾದ ನಿತ್ಯ ಸತ್ಯವನ್ನು ಪ್ರತಿಮಿಸುವ ಶಾಶ್ವತ ಇತಿಹಾಸಗಳು. ಭಾರತೀಯರ ಸರ್ವತೋಮುಖ ಪ್ರಗತಿಗೆ, ಆತ್ಮೋನ್ನತಿಗೆ, ಆತ್ಮಗೌರವಕ್ಕೆ, ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯತೆಗೆ ಈ ಕೃತಿಗಳು ದಾರಿದೀಪಗಳಾಗಿವೆ. ಇದರಲ್ಲಿ ರಾಮಾಯಣ-ಮಾನವತ್ವದ ಅತ್ಯುಚ್ಛ ಆದರ್ಶವನ್ನು ಬಿಂಬಿಸುವ ಪಾತ್ರಗಳು ಮಹಾಸಂಗಮ. ಇಲ್ಲಿ ನಡೆದಾಡುವ ಬಹುತೇಕ ಪಾತ್ರಗಳು ಆದರ್ಶಗಳ ಪರಾಕಾಷ್ಠೆಯನ್ನು ಮುಟ್ಟಿರುವವರು. ಅವತಾರ ಪುರುಷ, ಮರ್ಯಾದ ಪುರುಷೋತ್ತಮ, ಪಿತೃವಾಕ್ಯಪರಿಪಾಲನಾ ದುರಂಧರನಾದ ರಾಮ, ಭ್ರಾತೃಪ್ರೇಮದ ಸಾಕಾರವಾದ ಭರತ-ಲಕ್ಷ್ಮಣ, ಮಾದರಿಗುರು ವಿಶ್ವಾಮಿತ್ರ, ರಾಜಋಷಿ ಜನಕ, ಮಾತೃಮೂರ್ತಿ ಕೌಸಲ್ಯೆ, ಆದರ್ಶ ಸತಿ ಸೀತೆ, ಆತ್ಮಸಖತ್ವದ ಪ್ರತಿರೂಪರಾದ ಹನುಮ, ಗುಹ, ಧರ್ಮಭೀರು ವಿಭೀಷಣ- ಹೀಗೆ ಹೆಜ್ಜೆಯಿಟ್ಟಲ್ಲೆಲ್ಲಾ ಆದರ್ಶ ಪುರುಷರೇ ತುಂಬಿ ತುಳುಕುವ ಮಹಾ ಇತಿಹಾಸ ರಾಮಾಯಣ, ಇಂತಹವರ ನಡುವೆ ಮಾನವ ಸಹಜ ದ್ವೇಷ, ಮತ್ಸರ, ಕ್ರೋಧ, ಸೇಡು, ಕಾಮಗಳ ಪ್ರತೀಕವಾದ ಕೆಲವು ಪಾತ್ರಗಳೂ ಇವೆ. ಇವು ಇರುವುದರಿಂದಲೇ ರಾಮ-ಲಕ್ಷ್ಮಣರಂತಹ ಪಾತ್ರಗಳು ಮಹನೀಯತೆಗೆ ಏರಲು ಅವಕಾಶ ದೊರೆತಿದೆ. ರಾಮಾಯಣವವನ್ನು ವಸ್ತುವನ್ನಾಗಿಸಿಕೊಂಡ ನೂರಾರು ಕಾವ್ಯಗಳು, ನಾಟಕಗಳೂ, ಪ್ರಸಂಗಾವಧಾನಗಳು ಭಾರತೀಯ ಭಾಷೆಗಳಲ್ಲಿ ಸೃಷ್ಟಿಯಾಗಿವೆ. ಕನ್ನಡದಲ್ಲಿ ಎಣಿಕೆಗೆ ಸಿಗದಷ್ಟು ರಚಿತವಾಗಿದೆ.


ತಿಣುಕಿದನು ಫಣಿರಾಯ ರಾಮಾಯಣದ ಕವಿಗಳು ಭಾರದಲಿ'ತಿಂತಿಣಿಯ ರಘುವೀರ ಚರಿತೆಯಲಿ ಕಾಲಿಡಲು ತೆರಪಿಲ್ಲ' ಎಂದು ಕುಮಾರವ್ಯಾಸನೇ ಹೇಳಿದ್ದಾನಲ್ಲವೇ? ರಾಮಾಯಣ ಅವತರಿಸಿದಂದಿನಿಂದ ಈ ದಿನದವರೆಗೂ ಅದು ಅನಂತವಾಗಿ, ವಿಶ್ವವ್ಯಾಪಿಯಾಗಿ ಬೆಳೆದಿದೆ- ಏಕೈಕವಾದ ತತ್ತ್ವದರ್ಶನ ಪ್ರವಹಿಸಿದ ಕನ್ನಡ ಸಾರಸತ್ವ ಲೋಕದ ಮಹಾಸಿದ್ಧಿಗಳಲ್ಲಿ ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಪ್ರಮುಖವಾದದ್ದು. ಅದು ಈ ಯುಗದ ಮಹಾನ್ ಕೃತಿ. ವಾಲ್ಮೀಕಿಯುಲಿದ ಕಥೆ ಕನ್ನಡದಲ್ಲಿ ಮರುವುಟ್ಟು ಪಡೆದಂತೆ ಮೂಡಿದ ಮಹಾಕಾವ್ಯವಿದು 'ಜಗದ್ಭವ್ಯ ರಾಮಾಯಣಂ'. 


ಪ್ರಸ್ತುತ ಲೇಖನದಲ್ಲಿ ಮಹಾಕವಿ ಕುವೆಂಪುರವರ ಮಹಾಕೃತಿ 'ಶ್ರೀರಾಮಾಯಣ ದರ್ಶನಂ'ನಲ್ಲಿ ಚಿತ್ರಿತವಾಗಿರುವ, ರಾಮಾಯಣ ನಡೆಯಲು ಮುಖ್ಯ ಕಾರಣರಾದ ಮಂಥರೆ, ಶೂರ್ಪನಖಿ ಎರಡು ಸ್ತ್ರೀಪಾತ್ರಗಳನ್ನು ಕುರಿತು ಅವಲೋಕಿಸಲಾಗಿದೆ. 


ಕುವೆಂಪು ಅವರದ್ದು ರಾಮಾಯಣ ಕಥೆಯಲ್ಲ 'ರಾಮಾಯಣ' ದರ್ಶನ ಭಗವಂತನ ಇಚ್ಛಾಶಕ್ತಿಯೇ ಮೂರ್ತಿವೆತ್ತಂತೆ, ಸಮಸ್ತ ಪ್ರಪಂಚದ ಸಮಷ್ಟಿ ಪ್ರಜ್ಞೆ ಸಾಕಾರಗೊಂಡಂತೆ ಮಾನವನ ತಪಃ ಪ್ರಭಾವವೇ ಮೈವಡೆತಂತೆ, ಯುಗಶಕ್ತಿ ರೂಪಧರಿಸಿದಂತೆ ಈ ಮೇರುಕೃತಿ ಅವತರಿಸಿದೆ. ಶ್ರೀಕುವೆಂಪುವನ್ನು ಸೃಜಿಸಿದೆ. 

ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಮಂಥರೆಯ ಮೊದಲ ಪ್ರವೇಶವಾಗುವುದು ಅಯೋಧ್ಯಾನಗರಿಯ ಅರಮನೆಯ ಉದ್ಯಾನದಲ್ಲಿ ಪೂರ್ಣೇಂದುಹಾಸದ ರಾತ್ರಿಯಲ್ಲಿ. ಆ ಹುಣ್ಣಿಮೆಯ ಚಂದ್ರ ತನಗೆ ಬೇಕೆಂದು ಮಗು ರಾಮಚಂದ್ರ ರಚ್ಚೆ ಹಿಡದು ಅಳುತ್ತಿದ್ದಾಗ, ಗಗನದ ಚಂದ್ರ ಭೂಮಿಗಿಳಿದು ಬಾರನೆಂದು ಎಷ್ಟು ಸಂತೈಸಿದರೂ ರಾಮ ಅಳು ನಿಲ್ಲಿಸಲಿಲ್ಲ. ಇಳೆಗೆ ಒಡೆಯನಾದರೂ ಕೂಸಿನ ಬಯಕೆ ಈಡೇರಿಸಲಾಗಲಿಲ್ಲವೆಂದು ಮರುಗಿದ ದಶರಥ. ಆಗ ಬಂದವಳು ಗೂನುಬೆನ್ನಿನ, ಸುಕ್ಕು ಚರ್ಮದ, ಬೊಚ್ಚುಬಾಯಿಯ, ಗೂಡುಗಣ್ಣುಗಳ, ಬೋಳುತಲೆಯ, ಮೂಳೆಮೈಯ ವಿಕಾರ ರೂಪದ ವೃದ್ಧೆ, ಮಗು ಭರತನನ್ನು ಕಂಕುಳಲ್ಲಿ ಇಡುಕಿಕೊಂಡು ಬಂದವಳೇ, ತನ್ನ ಮಡಿಲಲ್ಲಿದ್ದ ಕನ್ನಡಿಯನ್ನು ಕೈಕೇಯಿಯ ಕೈಗಿತ್ತು, ರಾಮನಿಗೆ ಕೊಡುವಂತೆ ಹೇಳಿದಳು. ರಾಮನ ಕೈಯ ಕನ್ನಡಿಯಲ್ಲಿ ಪೂರ್ಣೇಂದುವಿನ ಪ್ರತಿಬಿಂಬ. ಚಂದ್ರ ತನ್ನ ಕೈಗೆ ಸಿಕ್ಕನೆಂದು ಕೂಸು ರಾಮ ನಗೆಯ ಬೆಳದಿಂಗಳು ಚೆಲ್ಲಿದ. ಮಂಥರೆ ಪ್ರೀತಿಯಿಂದ ರಾಮನೆಡೆಗೆ ಕೈಚಾಚಿದಳು, ಅಲ್ಲಿಯವರೆಗೂ ರಾಮನ ಅಳುವನ್ನು ನಿಲ್ಲಿಸಲು ತಿಣುಕುತ್ತಿದ್ದ ಕೌಸಲ್ಯೆ, ಮಂಥರೆ ರಾಮನನ್ನು ಮುಟ್ಟಲೀಯದೆ 'ನೀನು ಅಮಂಗಳೆ, ಮಗುವನ್ನು ಮುಟ್ಟಬೇಡ' ಎಂದು ದೂರ ನೂಕಿದಳು, ಮಂಥರೆಯ ಮನಸ್ಸು ಒಡೆಯಿತು. ಮೈತ್ರಿ ಮರೆಯಾಯಿತು. ಅವಮಾನದಿಂದ ಕಣ್ಣಲ್ಲಿ ಜಲಪಾತ ಭೋರ್ಗರೆಯಿತು. ತನ್ನ ಕುರೂಪದಿಂದ ತನ್ನ ಬಗ್ಗೆಯೇ ಹೇಸಿಗೆ ಮೂಡಿರಬೇಕು. ಅವಮಾನದಿಂದ ರೋಷದ ಸರ್ಪ ಫೂತ್ಕರಿಸಿತು. ಭರತನನ್ನು ಮತ್ತಷ್ಟು ಅಪ್ಪಿಕೊಂಡು ಧಡಧಡನೆ ಹೊರನಡೆದಳು. 


ಯಾರದೋ ಪಾಪದ ಫಲವಾಗಿ, ದಟ್ಟಡವಿಯ ಮುಳ್ಳು ಮಣ್ಣುಗಳ ರಾಶಿಯಲ್ಲಿ ಅನಾಥವಾಗಿ ಬಿದ್ದು ರೋಧಿಸುತ್ತಿದ್ದ ವಿರೂಪಿ ಹೆಂಗೂಸು ಸಿಕ್ಕಿದ್ದು ಕೇಕಯ ರಾಜನಿಗೆ. ಕನಿಕರದಿಂದ ಅದನ್ನು ಅರಮನೆಗೆ ತಂದದ್ದು ಮುಂದಣ ಮಹಾದುಃಖಾಗ್ನಿಗೆ ಕಿಡಿಯ ಮುನ್ನುಡಿ ಬರೆದಂತಾಯಿತು. ಅವನನ್ನು ಬಿಟ್ಟರೆ ಅರಮನೆಯಲ್ಲಿ ಈ ಕೂಸಿಗಾಗಿ ಕನಿಕರಿಸಿದವರು ಮತ್ಯಾರೂ ಇರಲಿಲ್ಲ. ಆನರ ಮನಸ್ಸಿನ ಕುರೂಪದ ಪ್ರತಿಬಿಂಬವಾಗಿಯೇ ಮಗು ಬೆಳೆಯಿತು. ಬೆಳೆದು ದೊಡ್ಡದಾಯಿತು. ಮಂಥರೆಯೆಂಬ ಹೆಸರೂ ಆಯಿತು.


ರಾಜಪುತ್ರಿ ಕೈಕೆಯ ಲಾಲನೆ ಪಾಲನೆ ಮಂಥರೆಯ ಪಾಲಿಗೆ ಬಂದಾಗ ಮರುಭೂಮಿಯಲ್ಲಿ ಬಿರುಮಳೆ ಸುರಿದಂತಾಯಿತು. ಅವಳಿ ಬರಡು ಬದುಕಿನಲ್ಲಿ ಒಲವಿನ ಚಿಗುರು ಚಿಮ್ಮಿತು ಮಂಥರೆಯ ಬಹಿರಂಗ ವಿಕಾರದೊಳಗೆ ಸುಪ್ತವಾಗಿದ್ದ ಅಂತರಂಗ ಪ್ರೀತಿ ಪ್ರೇಮಗಳು ಹೊರಚಿಮ್ಮಿದವು. ಸೌಂದರ್ಯದ ಖನಿಯಾಗಿದ್ದ ಕೈಕೇಯಿಯ ಕಣ್ಣಿಗೆ ಮಂಥರೆ ಎಂದೂ ಕುರೂಪಿಯೆನಿಸಲಿಲ್ಲ. ತನ್ನನ್ನು ಮಮತಾ ಮೂರ್ತಿಯಾಗಿ ಸಾಕಿ ಸಲಹಿದ ಅವಳು ಹೆತ್ತ ತಾಯಿಗೂ ಮಿಗಿಲಾಗಿದಳು. ಕೈಕೆ ದಶರಥನ ಮೋಹದ ಮಡದಿಯಾಗಿ ಸಾಕೇತಪುರಿಗೆ ಅಡಿಯಿರಿಸಿದಾಗಲೂ ಮಂಥರೆ ಅವಳ ನೆರಳಾದಳು. ಅಲ್ಲೂ ಅವಳು ಎಲ್ಲರ ಅವಹೇಳನಕ್ಕೆ ತುತ್ತಾದಳು. ಕೌಸಲ್ಯೆ ಸುಮಿತ್ರೆಯ ಪಾಲಿಗಂತು ಅವಳು ಅಪಶಕುನದ ಅವತಾರವೇ ಆಗಿದ್ದಳು. ಕೈಕೆಯ ಬಸಿರಲ್ಲಿ ಭರತೋದ್ಭವವಾದ ನಂತರ ಅವಳ ಮನದೊಳಗಿನ ಮಮತಾ ಸಾಗರದಲೆಗಳು ಮೂರ್ಮಡಿಯಾದವು. ಹೆತ್ತ ತಾಯಿಯೇ ನಾಚುವಂತೆ ಕೈಕೆಯ ಮಗನನ್ನು ಪೊರೆದಳು. 


ಮಗು ರಾಮನ ಹುಣ್ಣಿಮೆಯ ಚಂದ್ರನ ಪ್ರಸಂಗವಾದ ನಂತರ 


ನರರಸ್ಯರಿಲ್ಲಾಯಿತು ಮಂಥರೆಯ ಲೋಕಕ್ಕೆ ಕೈಕೆ ಭರತರಾ ವಿನಾ

ಕೈಕೆ ಭರತರಿಗಾಗಿಯೇ ಕೋಸಲಮಯೋಧ್ಯೆಗಳ್, 

ಕಶಿಸೂಯ$ ತಾರಾಳಿಗಳ್ ಭರತನಾಳ್ವಿಕೆಗಾಗಿ ಈ ಪೃಥವಿ

ಮಂಥರೆಯ ಈ ಮಮತೆಯಾವಕ್ತಿದೊಳ್ ಸಿಲ್ಕ

ಘೂರ್ಣಿಸಿತೈ ತ್ರೇತಾ ಮಹಾಯುಗಂ !


ಮುಂದೆ ನಡೆದ ಕತೆ ಸರ್ವವಿದಿತ ವಿಧಿಯು ವಿಕಟಲೀಲೆ ರಾವಣನ ವಿಧಿ ಮಂಥರೆಯ ಮನಸ್ಸಿನ ಫಲಕದಲ್ಲಿ ಲಿಖಿತವಾಗಲಾರಂಭಿಸಿತು. ರಾಮ ಪಟ್ಟಾಭಿಷೇಕದ  ವಾರ್ತೆ ಮಂಥರೆಯ ಕಿವಿಗೆ ಕಾದ ಸೀಸ ಸುರಿದಂತಾಯಿತು. ಭರತ-ಶತ್ರುಘ್ನರನ್ನು ಕೈಕೆಯಕ್ಕೆ ಕಳುಹಿಸಿರುವುದು ದಶರಥ ಕೌಶಲ್ಯೆಯರ ಹುನ್ನಾರವೆಂದೇ ಅವಳಿಗೆ ಭಾಸವಾಯಿತು. ರಾಮ ಅಯೋಧ್ಯೆಯಲ್ಲಿರುವವರೆಗೂ ಭರತನಿಗೆ ಕೋಸಲದ ನೆಲದಕ್ಕದು ಎಂಬ ನಂಬಿಕೆಯಿಂದ ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸ, ಭರತನಿಗೆ ರಾಜ್ಯಾಭಿಷೇಕದ ವರವನ್ನು ದಶರಥನಿಂದ ಪಡೆಯಲು ಕೈಕೆಯನ್ನು ಒಡಂಬಡಿಸಿದಳು. ರಾಮನ ಬಳಿಗೆ ತಾನೇ ನಡೆದು ಕೈಕೆ ದಶರಥನನ್ನು ಬೇಡಿದ ವರಗಳ ಬಗ್ಗೆ ತಿಳಿಸಿದಳು. ರಾಮ ವನವಾಸಕ್ಕೆ ತೆರಳುವುದು ನಿಶ್ಚಯವಾದೊಡನೆ ಮಂಥರೆ ತಾನೇ ಅವನಿಗೆ ನಾರುಡೆಯನ್ನು ಸಂಭ್ರಮದಿಂದ ತಂದಿತ್ತಳು. ಅವಳಿಂದ ಇಷ್ಟೆಲ್ಲಾ ಮಾಡಿಸಿದುದು ಕೈಕೆ ಭರತರ ಮೇಲೆ ಅವಳಿಗಿದ್ದ ಅತಿಶಯ ಪ್ರೀತಿ ಮಮತೆಗಳೇ. ಆದರೆ ಭರತನೇ ಅವಳ ಕೃತ್ಯವನ್ನು ಖಂಡಿಸಿ ಅವಳನ್ನು ತಿರಸ್ಕರಿಸಿದಾಗ ಭರತನ ಪ್ರೀತಿಯೊಂದೇ ನಮ್ಮೊಳಗಿದ್ದ ಕುಬ್ಜೆಯ ಆತ್ಮ ಬುಡಗೆಟ್ಟುರುಳಿತು. ತನ್ನ ಪುರುರ್ಷಾಥ ಸಾಧನೆಗಾಗಿ, ಸಂಪತ್ತಿಗಾಗಿ, ಸ್ವಸುಖಾಪೇಕ್ಷೆಯಿಂದಾಗಲಿ ಅವಳು ಕೈಕೆಗೆ ಉಪದೇಶಗೈದವಳಲ್ಲ, ತನ್ನ ಪ್ರಿಯ ಒಡತಿ, ತಾನು ಮುದ್ದುಗೈದ ಮಗುವಿಗೆ ಒಳಿತನ್ನು ಬಯಸಿದ ಮಂಥರೆಯ ಶುದ್ಧ ಚೇತನದಲ್ಲಿ ಸ್ವಾರ್ಥದೋಷಕ್ಕೆ ಎಡೆಉಂಟೇ?


ಭರತ ಶತ್ರುಘ್ನರ ಘಾತದಿಂದ ಇಳೆಗುರುಳಿದ ಮಂಥರೆ ಕಣ್ತೆರೆದಾಗ ಎಲ್ಲವೂ ಶೂನ್ಯ. ಪಾಪಪ್ರಜ್ಞೆಯಿಂದ ದಗ್ಧಳಾದ ಅವಳು ಮತ್ತೆ ರಾಮನಂ ಮನೆಗೆ ಕರೆತಂದೆನಾದೊಡೆ ಕಂದ ಭರತಂಗೆ ಮುದವಪದಪುದು, ಅಂತೆಯೇ ಕೈಕೆಗೆ ಉತ್ಸವಂ ಎಂದು ರಾಮನನ್ನು ಮರಳಿ ತರಲು ಅವನನ್ನು ಹುಡುಕುತ್ತಾ `ರಾಮಯ್ಯ! ದಮ್ಮಯ್ಯ! ಹೇಳೆಲ್ಲಿರುವೆಯಯ್ಯ! ಎಂದು ಹಲುಬುತ್ತಾಳೆ. ಇದು ಮಂಥರೆಯೆಂಬ ಮಮತೆಯ ಸುಳಿಯ ಪರಿವರ್ತನೆಯ ಪುಣ್ಯ ಸಂಕ್ರಾಂತಿ! ರಾಮಯ್ಯನನ್ನರೆಸುವ ಮಂಥರೆ ಆಹುತಿಯಾದದ್ದು ಕಾಡುಗಿಚ್ಚಿಗೆ. ಅಗ್ನಿ ಸಂಸರ್ಗದಿಂ ವಕ್ರರೂಪದ ಶ್ರೀಗಂಧದ ಕೊರಡು ನಾಡೆಲ್ಲಾ ತನ್ನ ಪರಿಮಳವನ್ನು ಪಸರಿಸುವಂತೆ ಮಂಥರೆಯ ಗುಜ್ಜು ಮೈ ಇಳಿದು ಅವಳ ಅಮೃತಮಯ ಪುಣ್ಯ ಸೌಂದರ್ಯ ದಿಗ್ದಿಗಂತಗಳಲ್ಲಿ ಹರಡಿತು. ರಾಮಾಯಣಕ್ಕೆ ಮೊದಲ ಕಾರಣಳಾದ ಮಂಥರೆಯ ಪಾತ್ರಕ್ಕೆ ಕುವೆಂಪು ಕಾಣಿಸಿದ ಅಂತ್ಯ ಮಹೋನ್ನತವಾದದ್ದು. 


ರಾಮಾಯಣಕ್ಕೆ ಮೊದಲ ನಾಂದಿ ಹಾಡಿದವಳು ಮಂಥರೆ, ರಾಮಾವತಾರದ ಮೂಲ ಉದ್ದೇಶ ರಾವಣವಧೆಯೆಂದಾರೆ ಅದಕ್ಕೆ ಕಾರಣಳಾದ ಎರಡನೇ ವ್ಯಕ್ತಿ ಶೂರ್ಪನಖಿಯಾದ ಚಂದ್ರನಖಿ. 

ಅಗಸ್ತ್ರನಾಣತಿಯಂತೆ ರಾಮ ಸೀತೆ ಸೌಮಿತ್ರೆಯರು ನಡೆದರು ಪಂಚವಟಿಗೆ, ಗೋದಾವರಿಯ ತಬಿಗೆ, ಅಲ್ಲಿಗೆ ಕಾಲಿಟ್ಟೊಡನೆಯೇ ಸೀತೆಗೆ ಅಪಶಕುನಗಳ ಅನುಭವ ಆದರೂ ವನರಾಮಣೀಯಕ, ಜಲರಾಮಣೀಯಕ, ಪುಷ್ಪ ಫಲ ಮೂಲ ವಿಫುಲವಾದ ಅಲ್ಲಿಯೇ ಎಲೆ ಮನೆಯ ನಿರ್ಮಾಣ. ವನವಾಸದ ಅವಧಿ ಮುಗಿಯುವ ಸಮಯವೂ ಆಸನ್ನಮಾಗಿತ್ತು. ಅದೊಂದು ಸಂಜೆ. ರಾಮ ಸೀತೆಯರ ಮುಂದೆ ಮಂಜಿನೊಳ್ ಪಸರಿಸಿದ ಮುಗಿಲ ತೇರಿಂದೊಂದು ಮೂಡಿತು ಮಂಜುಮಸ್ತ್ರೀಮೂರ್ತಿ. ನಯ ವಿನಯಗಳು ಒಯ್ಯಾರ ಸಂಸ್ಕೃತಿಗಳು ಮೈವೆತ್ತ ವಿಯಚ್ಚಿರಯೋಷಿತೆ. ಅವಳೇ ಚಂದ್ರನಖಿ-ಲಂಕೇಶ್ವರನ ಭಗಿನಿ, ಲಂಕೇಶ್ವರ ಎಂಬ ಹೆಸರು ಕೇಳಿದೊಡನೆ ಸೀತೆಯ ಮನಸ್ಸಿನಲ್ಲಿ ಅವ್ಯಕ್ತ ಭಯಾನಕ ನಡುಕ ಮುಂಬರಲಿರುವ ಮಹಾಘೋರದ ಸೂಚನೆಯಿಂದ ತನು ತತ್ತರಿಸಿತು.


ಚಂದ್ರನಖಿ ರಾಮನಿಗೆ ನಮ್ಮ ಪ್ರೇಮಮಂ ತಣಿಯುಣದೆ ನೀಂ

ಪಿಂತಿರುಗಿ ಪೋಪುದಸದಳಂ ಎಂಬ ಆಗ್ರಹ 

ನಾಢನಿಲ್ಲದ ತರುಣಿಯಾಂ ತನ್ನ ಗಂಡ ವಿದ್ಯುಜ್ಜುಹ್ವ ತನ್ನಣ್ಣನಿಂದಲೇ ಹತನಾಗಿದಂದಿನಿಂದ ನೀರ್ಗಾಣದ ಬಂಜರು ನೆಲದಂತಾಗಿರುವೆ. ನನ್ನದೇಯ ನೀರಸದಿಳೆಗೆ ನೀಂ ಮಳೆಯಾಗಿ ಕರೆಯಯ್ಯಾ, ಹೊಳೆಯಾಗಿ ಹರಿಯಯ್ಯಾ, ಎಂದು ರಾಮನ ಸಂಗವನ್ನೇ ಬಯಸಿದಳು `ನಿಮ್ಮುತ್ತರದ ರತಿಯ ಸಾತ್ವಿಕ ರಸದೊಡನೆ ನಮ್ಮ ದಕ್ಷಿಣ ರತಿಯ ರಾಜಸವನನುಭವಿಸು' ಎಂದು ನೇರವಾಗಿಯೇ ಆಹ್ವಾನಿಸಿದಳು. ಅಲ್ಲಿಯವರೆಗೂ ನಸು ಪರಿಹಾಸದಿಂದಲೇ ಸಂಭಾಷಿಸುತ್ತಿದ್ದ ರಾಮನು-ಹೆಣ್ಣಿಗಿರಲೇಬೇಕಾದ ಸಹಜ ನಾಚಿಕೆಯನ್ನೂ ತೊರೆದು ಚಂದ್ರನಖಿಯಾಡಿದ ಮಾತುಗಳಿಗೆ ಅಸಹ್ಯಿಸಿಕೊಂಡು "ಸಾಲ್ಗುಮಿ ಪಾಣ್ಬೆ, ಸೀತೆಗೆ ಲಕ್ಷ್ಮಣಂ ಬರ್ಪನಿತರೋಳ್ ಬಂದೊಡಪ್ಪುದು ನಿನಗೆ ತಕ್ಕ ಮದುವೆ" ಎಂದು ಎಚ್ಚರಿಸಿದ ಅದಾಗಲೇ ವರ್ಣಮಯ ಮೇಘವೊಂದು ಜನಾಸ್ಥಾನದೆಡೆಗೆ ಇಳಿದಿದ್ದನ್ನು ಕಂಡಿದ್ದ ಲಕ್ಷ್ಮಣ, ಯಾವುದೋ ಅನಾಹುತವನ್ನು ಶಂಕಿಸಿ ಧಾವಿಸಿದ. ಪರ್ಣಕುಟಿಗೆ, ಲಕ್ಷ್ಮಣನನ್ನು ಕಂಡ ಚಂದ್ರನಖಿಗೆ ಪುಳಕಿಸಿತು ತನು. ರಾಜಸಗುಣದ ತನಗೆಣೆ ದೊರೆತಂತೆ, ಮೇಣ್ ಸತಿಯಿಲ್ಲದಾತರಿಗೆ ರತಿಯಾಗುವಾಸೆಯಿಂದ ಅಣ್ಣನಿಂದ ವಿಷಯ ತಿಳಿದ ರಾಮಾನುಜ ತನ್ನ ಶೀಘ್ರಕೋಪಿ ಸಹಜಗುಣದಿಂದ ಕಿಚ್ಚುರಿದೆದ್ದು `ತೊಲಗೆಲೆ ನಿಶಾಚರಿಯೇ' ಎಂದು ತೋಳನ್ನು ಬಾಣಸಹಿತ ಬೀಸಿದ. ಅವಳನ್ನು ಘಾತಿಸುವ ಕಲ್ಪನೆಯೂ ಇಲ್ಲದ ಲಕ್ಷ್ಮಣನ ಬೀಸಿದ ತೋಳು ಪ್ರಮಾದದಿಂದ ಚಂದ್ರನಖಿಯ ಮೋರೆಯನ್ನು ಕೆತ್ತಿತು. ನೆತ್ತರು ಸೋರಿತು. ತಕ್ಷಣ ಲಲಿತ ಲತಾಂಗಿಯಾಗಿದ್ದ ಚಂದ್ರನಖಿ ಶೂರ್ಪನಖಿಯಾದಳು. ಅವಳ ಭೀಷಣಾಕೃತಿಯಿಂದ ಭೀತಿ ಜೋಂಪಿಸಿತು. ಸೀತೆಯಂ ಕಾಮರೂಪಿಣಿ ಭೀಮ ಭೀಕರಾಕಾರವನ್ನು ತಾಳೀದುದೇ ತಡಂ, ಕೆತ್ತಿದುದು ಲಕ್ಷ್ಮಣನ ಕೈಯ ಕತ್ತಿ ಮಾಯಾವಿನಿಯಂ ಮೂಗರಿಯುವಂತೆ. ರಾಮಾಯಣದ ಮುಂದಿನ ಘಟನೆಗೆ ಮತ್ತೊಂದು ಮುನ್ನುಡಿ ಬರೆದಳು ಶೂರ್ಪನಖಿ

ಲೌಕಿಕ ಚರಿತ್ರೆಯಲ್ತಿದು. ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ

ಕಥನಂ ಕಣಾ, ಶ್ರೀ ಕುವೆಂಪುವ ಸೃಜಿಸಿದೇ ಮಹಾಛಂದಸಿನ ಮೇರುಕೃತಿ, 

ಮೇಣ್ ಜಗದ್ಭವ್ಯ ರಾಮಾಯಣಂ.




-ಶಶಿಕಲಾ ನಾಗರಾಜನ್ 


945, 8ನೇ ಕ್ರಾಸ್, 13ನೇ ಮೈನ್ ಶ್ರೀನಿವಾಸನಗರ,

ಬೆಂಗಳೂರು 560050 ,

ಮೊಬೈಲ್- 9986191812

ಇ ಮೇಲ್ :shashikalanagarajan@Yahoo co.in  



ಲೇಖಕರ ಸಂಕ್ಷಿಪ್ತ ಪರಿಚಯ:

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಬೆಂಗಳೂರಿನ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ತಾಂತ್ರಿಕ ವಿಭಾಗದಲ್ಲಿ ಮೂರೂವರೆ ದಶಕಗಳಲ್ಲಿನ ಹೆಚ್ಚಿನ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಶಶಿಕಲಾ ನಾಗರಾಜನ್ ಅವರು ಸಾಹಿತ್ಯ ಹಾಗೂ ಲಲಿತ ಕಲೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವವರು. ರಂಗದಲ್ಲಿ ಅವರಿಗೆ ಒಲಿದು ಬಂದ ಅದ್ಭುತ ಕಲೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕಲೆಯಲ್ಲಿ ಹೆಸರುಗಳಿಸಿದ್ದಾರೆ. ಕಾರ್ಯಕ್ರಮ ನಿರೂಪಣೆ ಅವರ ಮತ್ತೊಂದು ಹವ್ಯಾಸ ನೂರಾರು ಕಾರ್ಯಕ್ರಮಗಳ ನಿರೂಪಣೆಯ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಕೀರ್ತಿ ಅವರದ್ದು, ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಅವರು ಸಂಗೀತದಲ್ಲಿ ಪರಿಶ್ರಮ ಹೊಂದಿರುವವರು. ಚೈತನ್ಯಶೀಲತೆ ಅವರ ವಿಶೇಷ ಗುಣ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top