ಶ್ರೀರಾಮ ಕಥಾ ಲೇಖನ ಅಭಿಯಾನ-100: ರಾಮನ ಕರ್ತವ್ಯನಿಷ್ಠೆ ಮತ್ತು ವಚನ ಪರಿಪಾಲನೆ

Upayuktha
0

ಚಿತ್ರಕೃಪೆ: ಅಯೋಧ್ಯಾ  ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ ಕೃತಿ


- ವಂದಗದ್ದೆ ಗಣೇಶ್


ರಾಮನ ಬಗ್ಗೆ ಬರೆಯುವುದೆಂದರೆ ಅಷ್ಟು ಸುಲಭದ ಮಾತಲ್ಲ, ಏಕೆಂದರೆ ಆತನು ಸರ್ವಾಂತರ್ಯಾಮಿ ಸರ್ವಶಕ್ತಿ ದಾತ, ಸರ್ವರಿಗೂ ಪ್ರಿಯನಾದವನು ಅವನ ಬಗ್ಗೆ ಹೇಳುತ್ತಾ ಹೋದರೆ ಗುಣವಾಚಕಗಳಿಗೆ ಕೊನೆಯೇ ಬರುವುದಿಲ್ಲ.


 ವಾಲ್ಮೀಕಿ ಬರೆಯುವಂತೆ ರಾಮನು ಒಬ್ಬ ಆದರ್ಶ ತಂದೆ, ಆದರ್ಶ ಮಗ, ಆದರ್ಶ ಪತಿ, ಆದರ್ಶ ಪ್ರಜೆ, ಆದರ್ಶ ರಾಜ, ಆದರ್ಶ ಗೆಳೆಯ, ಆದರ್ಶ ಗುರು, ಆದರ್ಶ ಶಿಷ್ಯ ಒಂದೇ ಎರಡೇ ನಮಗೆ ಎಲ್ಲದರಲ್ಲೂ ರಾಮನ ವ್ಯಕ್ತಿತ್ವವೇ ಎಂದು ಕಾಣುತ್ತದೆ. ಹಾಗಾಗಿ ರಾಮ ಎಂಬ ಎರಡು ಅಕ್ಷರದಲ್ಲಿ ಎಲ್ಲವೂ ಅಡಕವಾಗಿದೆ. ಅದಕ್ಕೆ ದಾಸರು ಬರೆಯುತ್ತಾರೆ "ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು"


 ರಾಮನ ಕರ್ತವ್ಯ ನಿಷ್ಠೆ ಬಗ್ಗೆ ಹೇಳಬೇಕೆಂದರೆ ಅದೇ ಒಂದು ಮಹಾ ಕಾವ್ಯವಾದೀತು. ರಾಮಾಯಣದ ಉದ್ದಕ್ಕೂ ರಾಮನು ಅದಕ್ಕಾಗಿ ತನ್ನ ಬದುಕನ್ನೇ ಮೀಸಲಾಗಿಡುತ್ತಾನೆ. ಆತನು ಅದೆಷ್ಟು ತನ್ನ ಕರ್ತವ್ಯ ನಿಷ್ಠೆಯಲ್ಲಿ ಮುಳುಗಿ ಹೋಗಿದ್ದ ಎಂದರೆ ಎಲ್ಲಿಯೂ ಒಂದು ಕ್ಷಣವೂ, ಒಂದು ಇಂಚೂ ತನ್ನ ಕರ್ತವ್ಯ ಪ್ರಜ್ಞೆಯನ್ನು ಮರೆತು ಅತಿಂದಿತ್ತ ಅಲುಗಾಡುತ್ತಿರಲಿಲ್ಲ. ಬಾಲ್ಯದಲ್ಲಿ ದಶರಥ ಪುತ್ರರ ಹಿರಿಯ ಸಹೋದರನಾದ ಅವನು, ತನ್ನ ತಮ್ಮಂದಿರನ್ನು ತುಂಬಾ ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುತ್ತಿದ್ದ. ಅವರೆಲ್ಲರೂ ರಾಮನ ಒಂದು ಅವತಾರವೇ ಆಗಿದ್ದರು. ಹಾಗಾಗಿ ನಾಲ್ಕು ಜನ ಸಹೋದರರು ಭಗವಂತನ ಪೂರ್ಣ ಭಾಗವೇ ಆಗಿದ್ದರು.


 ರಾಮನಿನ್ನೂ ಬಾಲಕನಾಗಿದ್ದಾಗ ವಿಶ್ವಾಮಿತ್ರ ಮಹರ್ಷಿಗಳು ದಶರಥ ಮಹಾರಾಜನ ಹತ್ತಿರ ಬಂದು, ಯಜ್ಞ ಯಾಗಾದಿಗಳಿಗೆ ತೊಂದರೆ ಕೊಡುತ್ತಿರುವ ರಾಕ್ಷಸರನ್ನು ಸಂಹಾರ ಮಾಡುವುದಕ್ಕಾಗಿ ರಾಮನ ಸಹಾಯವನ್ನು ಅಪೇಕ್ಷಿಸುತ್ತಾರೆ. ಅದಕ್ಕೆ ದಶರಥನು, "ನನ್ನ ಮಗನಿನ್ನೂ ಚಿಕ್ಕ ಬಾಲಕ, ಅವನಿಗೆ ರಾಕ್ಷಸರನ್ನು ಸಂಹಾರ ಮಾಡುವಷ್ಟು ಶಕ್ತಿ ಇಲ್ಲ, ತಾವು ಒಪ್ಪುವುದಾದರೆ ನಾನೇ ಬಂದು ನಿಮಗೆ ಸಹಾಯ ಮಾಡುತ್ತೇನೆ" ಎಂದು ಬೇಡಿಕೊಳ್ಳುತ್ತಾನೆ. ಆದರೆ ರಾಮನ ಮಹಾಶಕ್ತಿಯನ್ನು ಅರಿತಿದ್ದ ವಿಶ್ವಾಮಿತ್ರರಿಗೆ ರಾಮನನ್ನು ಬಿಟ್ಟು ಇನ್ನಾರಿಂದಲೂ ಆ ರಾಕ್ಷಸರನ್ನು ಸಂಹಾರ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಇತ್ತು. ಕೋಪಾವಿಷ್ಠರಾದ ಅವರು ದಶರಥನ ಸಲಹೆಗೆ ಒಪ್ಪಲಿಲ್ಲ. ಕೊನೆಗೆ ಮಧ್ಯಪ್ರವೇಶಿಸಿದ ವಶಿಷ್ಠರು ದಶರಥನನ್ನು ಒಪ್ಪಿಸಿ ರಾಮನನ್ನು ಕಳುಹಿಸಿಕೊಡುತ್ತಾರೆ. ಅಲ್ಲಿ ತಂದೆಯ ಹಾಗೂ ವಿಶ್ವಾಮಿತ್ರರ ಆಜ್ಞೆಗೆ ಅನುಗುಣವಾಗಿ ರಾಮನು ಚಾಚೂ ತಪ್ಪದೇ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿ ತಡೆಯೊಡ್ಡುತ್ತಿದ್ದ ರಾಕ್ಷಸರನ್ನು ಸಂಹರಿಸಿ ಯಜ್ಞ ಯಶಸ್ವಿಯಾಗುವಂತೆ ನೋಡಿ ಕೊಳ್ಳುತ್ತಾನೆ.


 ಅಲ್ಲಿಂದ ಮುಂದೆ ವಿಶ್ರಾಮಿತ್ರರು ಸೀತಾಸ್ವಯಂವರಕ್ಕೆ ರಾಮನನ್ನು ಕರೆದೊಯ್ಯುತ್ತಾರೆ. ಅಲ್ಲೂ ಕೂಡ ಅವರ ನಂಬಿಕೆ ಹುಸಿಯಾಗಲಿಲ್ಲ. ಯಾರಿಂದಲೂ ಬೇಧಿಸಲು ಅಸಾಧ್ಯವಾದ ಆ ಶಿವಧನಸ್ಸನ್ನು ಮುರಿದು, ವಿಶ್ವಾಮಿತ್ರರ ಆದೇಶದಂತೆ ರಾಮನು ಜಾನಕಿಯನ್ನು ವಿವಾಹವಾಗುತ್ತಾನೆ. ಅಯೋಧ್ಯೆಗೆ ತಿರುಗಿ ಬರುತ್ತಿರುವಾಗ ತ್ರಿಲೋಕ ವೀರನಾದ ಪರಶುರಾಮನು ತಡೆ ಒಡ್ಡಿದ. ರಾಮನು ಅವನನ್ನು ಸೋಲಿಸಿದಾಗ, ಪರಶುರಾಮನು ತನ್ನ ಪರ‍್ಣ ಶಕ್ತಿಯನ್ನು ರಾಮನಿಗೆ ಧಾರೆ ಎರೆದು ಕೊಡುತ್ತಾನೆ. ಹೀಗೆ ರಾಮನು ತನ್ನ ರ‍್ತವ್ಯದಲ್ಲಿ ಯಶಸ್ವಿಯಾಗಿ ಜಯದ ಮೇಲೆ ಜಯವನ್ನು ಪಡೆಯುತ್ತಾ ಹೋಗುತ್ತಾನೆ.

 

 ಮುಂದೆ ದಶರಥನ ಕುಟುಂಬದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಅವನು ರಾಮನಿಗೆ ಪಟ್ಟಾಭಿಷೇಕ ಮಾಡಿ ರಾಜ್ಯವನ್ನು ವಹಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತಾನೆ. ಆ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲರ ಒಪ್ಪಿಗೆಯನ್ನು ಪಡೆಯುತ್ತಾನೆ. ಈ ವಿಷಯ ಅವನ ಪ್ರೀತಿಯ ಮಡದಿ ಕೈಕೆಗೆ ಗೊತ್ತಾದಾಗ, ಅವಳು ರಾಮನಿಗೆ ಬದಲಾಗಿ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಹಠ ಹಿಡಿಯುತ್ತಾಳೆ. ಹಿಂದೆ ಯಾವುದೋ ಒಂದು ಸಂರ‍್ಭದಲ್ಲಿ ದಶರಥನನ್ನು ಕಾಪಾಡಿದ್ದಕ್ಕಾಗಿ ಅವಳಿಗೆ ಎರಡು ವರಗಳನ್ನು ಕೊಡುವುದಾಗಿ ದಶರಥ ಮಾತು ಕೊಟ್ಟಿದ್ದ. ತನಗೆ ಅವಶ್ಯಕತೆ ಬಂದಾಗ ಆ ಎರಡು ವರಗಳನ್ನು ತಾನು ಪಡೆಯುತ್ತೇನೆ ಎಂದು ಅವಳು ಹೇಳಿದ್ದಳು. ಈ ಸಂದರ್ಭದಲ್ಲಿ ಅವಳು ಅವುಗಳ ದುರುಪಯೋಗ ಪಡಿಸಿಕೊಳ್ಳುತ್ತಾಳೆ. ಮೊದಲನೇ ವರದಲ್ಲಿ ರಾಮನ ಪಟ್ಟಾಭಿಷೇಕಕ್ಕೆ ಬದಲಾಗಿದೆ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದೂ, ಎರಡನೇ ವರದಲ್ಲಿ ರಾಮನು ತಕ್ಷಣವೇ 14 ವರ್ಷಗಳ ಕಾಲ ವನವಾಸಕ್ಕೆ ಹೋಗಬೇಕೆಂದು ಅಪೇಕ್ಷಿಸುತ್ತಾಳೆ. ಹೃದಯವೇ ಒಡೆದು ಹೋಗುವಂತಹ ತನ್ನ ಪ್ರೀತಿಯ ಮಡದಿಯ ಬಯಕೆಗಳನ್ನು ಕೇಳಿದಾಗ ದಶರಥ ಪ್ರಜ್ಞೆತಪ್ಪಿ ಬಿದ್ದು ವಿಲವಿಲ ಒದ್ದಾಡುತ್ತಾನೆ. ಆಗ ಅಲ್ಲಿಗೆ ಆಗಮಿಸಿದ ರಾಮನು ಆ ತಾಯಿಯ ಬೇಡಿಕೆಯನ್ನು ತುಂಬಾ ಸರಳವಾಗಿ ತೆಗೆದುಕೊಂಡು, "ಆಗಲಿ ತಾಯಿ, ನಿಮ್ಮ ಕೋರಿಕೆಗಳನ್ನು ನಾನು ನೆರವೇರಿಸಿ ಕೊಡುತ್ತೇನೆ, ತಂದೆಯವರು ವಚನಭ್ರಷ್ಟರಾಗುವುದು ಬೇಡ ಅದಕ್ಕಾಗಿ ನಾನು ಎಂತಹ ತ್ಯಾಗವನ್ನು ಬೇಕಾದರೂ ಮಾಡುತ್ತೇನೆ".


 ಎಂದು ಕೈಕೇಯಿಗೆ ಭರವಸೆ ನೀಡುತ್ತಾನೆ. ತಂದೆಯ ಮಾತುಗಳನ್ನು ಉಳಿಸುವುದಕ್ಕೆ ಇಲ್ಲಿ ರಾಮ ತನ್ನ ಬದುಕಿನ ಸುದೀರ್ಘವಾದ ಅವಧಿಯನ್ನು ರಾಜ್ಯಕೋಶಗಳನ್ನೆಲ್ಲ ಬಿಟ್ಟು ಕಾಡಿನಲ್ಲಿ ನೆಲಸಲು ತೀರ್ಮಾನಿಸುತ್ತಾನೆ. ಅದೆಂತಹ ಪಿತೃ ವಾತ್ಸಲ್ಯ! ಅದೆಂತಹ ಕರ್ತವ್ಯ ಪ್ರಜ್ಞೆ! ಅಯೋಧ್ಯೆಯ ಸಮಸ್ತ ಪ್ರಜೆಗಳು ಕಾಡಿಗೆ ಹೋಗಬೇಡಿ ಎಂದು ಬೇಡಿಕೊಂಡರೂ ತಂದೆಯ ವಚನವನ್ನು ಪೂರೈಸುವುದಕ್ಕಾಗಿ ರಾಮನು ವನವಾಸಕ್ಕೆ ಹೊರಟೇಬಿಡುತ್ತಾನೆ.


 ರಾಮನ ವನವಾಸದ ಸಮಯದಲ್ಲಿ ವಾಲಿ ಸುಗ್ರೀವರ ಭೇಟಿಯಾಗುತ್ತದೆ. ತಾನು ವಾಲಿಯನ್ನು ಕೊಂದು ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಮಾಡುತ್ತೇನೆಂದು ವಚನ ನೀಡುತ್ತಾನೆ. ಆದರೆ ರಾವಣನಗಿಂತ ಹತ್ತು ಪಟ್ಟು ಬಲಶಾಲಿಯಾದ ವಾಲಿಯನ್ನು ಕೊಲ್ಲುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದು ರಾಮನಿಗೆ ಚೆನ್ನಾಗಿಯೇ ಗೊತ್ತಿತ್ತು. ಅಷ್ಟಾದರೂ ತನ್ನ ಚಾಣಾಕ್ಷತನ ಹಾಗೂ ಬುದ್ಧಿಶಕ್ತಿಯಿಂದ ವಾಲಿಯನ್ನು ಹತಗೈಯುತ್ತಾನೆ. ಇಲ್ಲಿ ಒಂದು ಪ್ರಶ್ನೆ ಬರುತ್ತದೆ "ಮರೆಯಲ್ಲಿ ನಿಂತು ವಾಲಿಯನ್ನು ರಾಮ ವಧೆ ಮಾಡಿದ್ದು ಸರಿಯೇ?" ಆದರೆ ಸಕಲ ವಿದ್ಯಾಸಂಪನ್ನನಾದ ರಾಮನಿಗೆ ಆ ಬಗ್ಗೆ ಅರಿವಿಲ್ಲದಿರಲು ಸಾಧ್ಯವೇ? ವಾಲಿಯನ್ನು ನೇರವಾಗಿ ಎದುರಿಸಿ ಕೊಲ್ಲಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆತ ಯುದ್ಧ ಮಾಡಲು ನಿಂತರೆ ಶತ್ರುವಿನ ಅರ್ಧ ಶಕ್ತಿ ಅವನಿಗೆ ಬರುತ್ತಿತ್ತು. ಇದನ್ನು ಅರಿತಿದ್ದ ರಾಮನು ಅವನನ್ನು ಮರೆಯಲ್ಲಿ ನಿಂತು ಕೊಲ್ಲಬೇಕಾಗಿತ್ತು. ಅಷ್ಟೇ. ಅಲ್ಲದೆ ವಾಲಿಯು ಪ್ರಾಣಿಗಳ ಗುಂಪಿಗೆ ಸೇರಿರುವುದರಿಂದ ಪ್ರಾಣಿಗಳನ್ನು ಬೇಟೆಯಾಡಲು ನೇರವಾಗಿ ಯುದ್ಧ ಮಾಡಬೇಕೆಂಬ ಯಾವ ನಿಯಮಯೂ ಇಲ್ಲ. ಈ ವಿಷಯವನ್ನು ವಾಲಿಗೆ ಹೇಳಿದಾಗ ಆತನು ತೃಪ್ತಿಯಾಗಿ ಪ್ರಾಣ ಬಿಡುತ್ತಾನೆ. ವಾಲಿಯ ಮಗ ಅಂಗದನನ್ನು ತಾನು ಚೆನ್ನಾಗಿ ನೋಡಿ ಕೊಳ್ಳುವುದಾಗಿ ಭರವಸೆ ನೀಡುತ್ತಾ, ರಾಮ ತುಂಬು ಮನಸ್ಸಿನಿಂದ ಅವನಿಗೆ ಸದ್ಗತಿ ದೊರಕಲೆಂದು ಹರಸುತ್ತಾನೆ. ರಾಮನ ವಿಶಾಲವಾದ ಹೃದಯದಲ್ಲಿ ಯುದ್ಧದಲ್ಲಿ ಮಡಿದವನು ಕೂಡ ಮಿತ್ರನಾಗಿ ಕಾಣಿಸುತ್ತಾನೆ.

 

ಮುಂದೆ ರಾವಣನ ಅನಾಚಾರಕ್ಕೆ ಹಾಗೂ ದುಷ್ಟತನಕ್ಕೆ ಬೇಸತ್ತ ವಿಭೀಷಣನು ಅಣ್ಣನನ್ನು ತ್ಯಜಿಸಿ, ರಾಮನ ಭಕ್ತನಾಗಿ ಆಗಮಿಸುತ್ತಾನೆ. ಆ ಸಮಯದಲ್ಲಿ ರಾಮನು ರಾವಣನನ್ನು ಕೊಂದು ಸುಗ್ರೀವನನ್ನು ಲಂಕಾಧಿಪತಿಯನ್ನಾಗಿ ಮಾಡುತ್ತೇನೆಂದು ಭರವಸೆ ನೀಡುತ್ತಾನೆ. ರಾಮ ರಾವಣರ ಯುದ್ಧ ನಡೆಯುತ್ತಿದ್ದಾಗ ರಾವಣನು ಒಮ್ಮೆ ಒಂದು ಭಯಾನಕವಾದ ಅಸ್ತ್ರವನ್ನು ವಿಭೀಷಣನ ಮೇಲೆ ಪ್ರಯೋಗಿಸುತ್ತಾನೆ ಅದು ಖಂಡಿತವಾಗಿ ವಿಭೀಷಣನನ್ನು ನಾಶ ಮಾಡುವುದರಲ್ಲಿ ಇತ್ತು. ಆದರೆ ಆಗ ರಾಮನು ಆ ಅಸ್ತ್ರಕ್ಕೆ ತನ್ನ ಎದೆ ಕೊಟ್ಟು ಆಗಬಹುದಾದ ಅನಾಹುತದಿಂದ ವಿಭೀಷಣನನ್ನು ಕಾಪಾಡುತ್ತಾನೆ. ಅಕಸ್ಮಾತ್ ವಿಭೀಷಣ ಸಾವನ್ನು ಅಪ್ಪಿದ್ದರೆ, ರಾಮನು ಅವನಿಗೆ ಕೊಟ್ಟ ಮಾತಿನಿಂದ ವಂಚಿತನಾದಂತೆ ಆಗುತ್ತಿತ್ತು. ಹಾಗಾಗಿ ಅಂತ ಕಠಿಣ ಸಂದರ್ಭದಲ್ಲೂ ತನ್ನ ಪ್ರಾಣವನ್ನು ಕೊಡುವುದಕ್ಕೆ ತಯಾರಾದನೇ ವಿನಾ ರಾಮನು ವಚನ ಭ್ರಷ್ಟನಾಗುವುದಿಲ್ಲ.

 

ತಾಯಿಯ ಹೀನ ಕೃತ್ಯದಿಂದ, ಅಣ್ಣನ ವನವಾಸವನ್ನು ಸಹಿಸದ ಭರತನು ಸೈನ್ಯ ಸಮೇತನಾಗಿ ಕಾಡಿಗೆ ಬರುತ್ತಾನೆ. ಅಣ್ಣನ ಪಾದಗಳಿಗೆರಗಿ, "ಅಣ್ಣ, ನೀನು ಬಂದು ರಾಜ್ಯವನ್ನು ಆಳು. ನಾನು ನಿನಗೆ ಬದಲಾಗಿ ಅಪ್ಪನ ಮಾತನ್ನು ಪಾಲಿಸುವುದಕ್ಕಾಗಿ ಹದಿನಾಲ್ಕು ರ‍್ಷಗಳ ಕಾಲ ವನವಾಸ ಮಾಡುತ್ತೇನೆ" ಎಂದು ಬೇಡಿಕೊಳ್ಳುತ್ತಾನೆ. ಆದರೆ ಆತನ ಮಾತಿಗೆ ಒಪ್ಪದ ರಾಮನು ಕರ್ತವ್ಯ ಭ್ರಷ್ಟನಾಗಲು ಇಷ್ಟಪಡುವುದಿಲ್ಲ ತನಗೆ ಬದಲಾಗಿ ತನ್ನ ಪಾದುಕೆಗಳನ್ನು ಬೇಡಿದ ಭರತನಿಗೆ ಪಾದುಕೆ ಕೊಟ್ಟು ಕಳುಹಿಸುತ್ತಾನೆ.


 ಆಗ ಭರತನು, "ಕೇವಲ 14 ವರ್ಷಗಳ ಕಾಲ ಮಾತ್ರ ನಿನ್ನ ಪಾದುಕೆಗಳನ್ನು ಸಿಂಹಾಸನದಲ್ಲಿ ಇಟ್ಟು ಪೂಜೆ ಮಾಡುತ್ತಾ ನಿನ್ನ ಅನುಗ್ರಹದಂತೆ ರಾಜ್ಯವನ್ನು ಆಳುತ್ತೇನೆ. ಆದರೆ ಅದರ ನಂತರ ಒಂದು ದಿನವೂ ನಾನು ಈ ರಾಜ್ಯಭಾರವನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಖಡಾ ಖಂಡಿತವಾಗಿ ಹೇಳುತ್ತಾ ಅಣ್ಣನ ಒಪ್ಪಿಗೆಯನ್ನು ಪಡೆಯುತ್ತಾನೆ.


 ತಮ್ಮನ ಸತ್ಯ, ಧರ್ಮ, ನ್ಯಾಯವನ್ನು ಸ್ಪಷ್ಟವಾಗಿ ಅರಿತಿದ್ದ ರಾಮನು 14 ವರ್ಷ ಕಳೆದ ಮೇಲೆ ತಾನು ಹೋಗುವುದು ಸ್ವಲ್ಪ ತಡವಾಗಬಹುದು ಎಂದು ಅಗ್ನಿ ಪ್ರವೇಶ ಮಾಡಲು ತಯಾರಾಗಿದ್ದ ಭರತನನ್ನು ತಡೆಯಲು ಮುಂದಾಗಿ ಹನುಮಂತನನ್ನು ಕಳಿಸಿ, ಆಗಬಹುದಾದ ಅಪಾಯದಿಂದ ಅವನನ್ನು ಕಾಪಾಡುತ್ತಾನೆ. ನಂತರ ತಾನು ಮಾತುಕೊಟ್ಟಂತೆ ಸಮಯಕ್ಕೆ ಸರಿಯಾಗಿ ಆಗಮಿಸಿ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ.


 ಯುದ್ಧ ಮುಗಿದು ರಾವಣ ಹತನಾದ ಮೇಲೆ ಆಂಜನೇಯನು ಸೀತಾದೇವಿಯನ್ನು ಅಶೋಕ ವನದಿಂದ ಕರೆತರುತ್ತಾನೆ. ಆದರೆ ರಾಮನು ಅವಳನ್ನು ಅಗ್ನಿ ಪ್ರವೇಶ ಮಾಡುವಂತೆ ಪ್ರಚೋದಿಸಿ ಅದರಲ್ಲಿ ಅವಳ ಪಾವಿತ್ರತೆಯನ್ನು ಪರೀಕ್ಷಿಸಿದ ಮೇಲೆಯೇ ಸ್ವೀಕರಿಸುತ್ತಾನೆ. ಇಲ್ಲೂ ಕೂಡ ಒಬ್ಬ ರಾಜನಲ್ಲಿ ಇರಬೇಕಾದ ರ‍್ತವ್ಯ ನಿಷ್ಠೆ, ಪ್ರಜ್ಞೆ ಅವನಲ್ಲಿ ಎದ್ದು ಕಾಣಿಸುತ್ತದೆ. ಮುಂದೆಯೂ ಕೂಡ ಒಬ್ಬ ಅಗಸರವನು ತನ್ನ ಹೆಂಡತಿಯ ಮೇಲೆ ಶಂಕಿಸಿ, ಒಂದು ರ‍್ಷದ ಕಾಲ ರಾವಣನ ಜೊತೆ ಇದ್ದು ಬಂದ ಸೀತೆಯನ್ನು ಸ್ವೀಕರಿಸಿದ ರಾಮನಂತೆ ತಾನಲ್ಲ ಎನ್ನುತ್ತಾ ಅವಳನ್ನು ಮನೆಯಿಂದ ಹೊರಕ್ಕೆ ಹಾಕುತ್ತಾನೆ. ಇದರಿಂದ ಮನನೊಂದ ರಾಮನು ತುಂಬು ರ‍್ಭಿಣಿಯಾದ ಸೀತೆಯನ್ನು ಕಾಡಿಗೆ ಬಿಟ್ಟು ಬರಲು ಲಕ್ಷ್ಮಣನಿಗೆ ಆದೇಶಿಸುತ್ತಾನೆ.


 ತನ್ನ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಆಗಮಿಸಿದ ರಾಮನು, ತಾಯಿ ಕೌಸಲ್ಯೆಯಂತೆ ಕೈಕೇಯಿಯ ಬಳಿಗೂ ಹೋಗಿ ನಮಸ್ಕರಿಸಿ ಅವಳ ಆಶರ‍್ವಾದವನ್ನು ಪಡೆಯುತ್ತಾನೆ. ತಾನು ಮಾಡಿದ ಕೃತ್ಯಕ್ಕಾಗಿ ಕೈಕೇಯಿ ನೊಂದು ಬೆಂದು ಹೋಗಿರುವ ಅವಳ ಹೃದಯ ರಾಮ ತೋರಿಸಿದ ಪ್ರೀತಿ ವಾತ್ಸಲ್ಯದಿಂದ ತಂಪಾಗುತ್ತದೆ. ಅವಳು ಪ್ರೀತಿಯಿಂದ ರಾಮನನ್ನು ಹರಸುತ್ತಾಳೆ.


 ಕೊನೆಯಲ್ಲಿ ಲವಕುಶಲರ ಜೊತೆ ನಡೆದ ಕದನದ ನಂತರ ಆ ಮಕ್ಕಳು ಸೀತಾ ದೇವಿಯ ಉದರದಲ್ಲಿ ಜನಿಸಿದ ತನ್ನ ಮಕ್ಕಳು ಎಂದು ಗೊತ್ತಾದ ಮೇಲೂ ಮಕ್ಕಳನ್ನು ಸ್ವೀಕರಿಸುತ್ತಾನೆಯೇ ವಿನಾ ಹೆಂಡತಿಯನ್ನು ಅಯೋಧ್ಯೆಗೆ ಆಹ್ವಾನಿಸುವುದಿಲ್ಲ. ಹಾಗಾಗಿ ಮುಂದೆ ರಾಮನ ಕರ್ತವ್ಯ ಹಾಗೂ ಆದರ್ಶ ಪಾಲನೆಗೆ ತಾನು ಅಡ್ಡ ಬರಬಾರದು ಎಂದು ತರ‍್ಮಾನಿಸಿದ ಅವನ ಪತ್ನಿ ಆದರ್ಶಮಣಿ ಸೀತೆಯು ಭೂತಾಯಿಯ ಮಡಿಲನ್ನು ಸೇರುತ್ತಾಳೆಯೇ ವಿನಾ ಅಯೋಧ್ಯೆಗೆ ಮರಳಲು ಇಷ್ಟಪಡುವುದಿಲ್ಲ. ಈ ರೀತಿಯಲ್ಲಿ ತನ್ನ ಬದುಕಿನುದ್ದಕ್ಕೂ ಆರ್ಥ ವ್ಯಕ್ತಿಯಾಗಿ ಬಾಳಲು ರಾಮನಿಗೆ, ಸೀತೆ ನೀಡಿದ ಅದ್ಬುತ ಸಹಕಾರವನ್ನು ಕೂಡಾ ನಾವು ಮರೆಯುವಂತಿಲ್ಲ.




-ವಂದಗದ್ದೆ ಗಣೇಶ್

 ***

ಲೇಖಕರ ಸಂಕ್ಷಿಪ್ತ ಪರಿಚಯ:


38 ವರ್ಷಗಳ ವೃತ್ತಿ ಜೀವನ, ಬಳಿಕ ಸಾಹಿತ್ಯಮಂಥನ, 20 ವರ್ಷದಲ್ಲಿ 85ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಇಂಗ್ಲಿಷ್ ಓದುಗರಿಗೆ ಅರ್ಪಿಸಿದ ದೈತ್ಯ ಬರಹಗಾರ ವಂದಗದ್ದೆ ಗಣೇಶ್. ಹೊಸನಗರ ತಾಲ್ಲೂಕು ವಂದಗದ್ದೆ ಗ್ರಾಮದಲ್ಲಿ ಅಕ್ಟೋಬರ್ 7,  1947 ರಲ್ಲಿ ಜನಿಸಿದರು. ಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದು ಶಿಕಾರಿಪುರ ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮುಂಬಡ್ತಿ ಪಡೆದರು. ಸಾಗರ ಪಿಯು ಕಾಲೇಜು ಪ್ರಾಂಶುಪಾಲರಾಗಿದ್ದು 2005ರಲ್ಲಿ ನಿವ್ಥತ್ತರಾದರು.


56ನೇ ವಯಸ್ಸಿನಲ್ಲಿ ಬರವಣೆಗೆಗೆ ಇಳಿದ ವಿ. ಗಣೇಶ್ ಅವರಿಗೆ ತಾವೊಬ್ಬ ಉತ್ತಮ ಓದುಗ, ಭೋಧಕ ಆಗಿದ್ದುದು, ಹಲವಾರು ಸಾಹಿತಿಗಳ ಒಡನಾಟ ಪಡೆದದ್ದು ಪ್ರೇರಣೆಯಾಗಿತ್ತು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರಂತರ ಬರವಣಿಗೆ ಪರಿಣಾಮ ಇದುವರೆಗೆ 40 ಕಥಾ ಸಂಕಲನ, 6 ಕವನ ಸಂಕಲನ, 7 ಕಾದಂಬರಿ, ಒಂದು ನಾಟಕ ಪ್ರಕಟವಾಗಿವೆ. ಅನುವಾದ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿದ್ದು, ಮೂರು ಕಥಾ ಸಂಕಲನ, ಮೂರು ಕಾದಂಬರಿ ಪ್ರಕಡಿಸಿದ್ದಾರೆ. ಬಹಳಷ್ಟು ಕೃತಿಗಳು ಮಕ್ಕಳ ವಿಷಯ ಕೇಂದ್ರೀಕರಿಸಿವೆ. ಪ್ರಸಕ್ತ ವಿದ್ಯಮಾನದ ಜತೆಗೆ ವಿಜ್ಞಾನ. ರಾಮಾಯಣ, ಮಹಾಭಾರತ, ಆಧ್ಯಾತ್ಮಿಕ ವಸ್ತುವಿಷಯ ಒಳಗೊಂಡಿವೆ, ವಿಮರ್ಶಾ ಕಾರಂಜಿಗಳು, ಅಂತರಂಗ ಬಹಿರಂಗ ಮುಂತಾದ 7 ವಿಮರ್ಶಾ ಕೃತಿಗಳು. ಮರೆಯಲಾಗದ ಮಹಾಶಿಕ್ಷಕರು, ಪ್ರಸಿದ್ಧ ವಿಜ್ಙಾನಿಗಳು ಮುಂತಾದ ಜೀವನ ಚರಿತ್ರೆ ಆಧಾರಿತ ಕೃತಿಗಳನ್ನು ರಚಿಸಿದ್ದಾರೆ.


ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಥಾನದ ರಾಷ್ಟ್ರೀಯ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಸುಮಾ ಪ್ರಶಸ್ತಿ, ಸಾಗರ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top